-->
ಪಯಣ : ಸಂಚಿಕೆ - 42 (ಬನ್ನಿ ಪ್ರವಾಸ ಹೋಗೋಣ)

ಪಯಣ : ಸಂಚಿಕೆ - 42 (ಬನ್ನಿ ಪ್ರವಾಸ ಹೋಗೋಣ)

ಪಯಣ : ಸಂಚಿಕೆ - 42 (ಬನ್ನಿ ಪ್ರವಾಸ ಹೋಗೋಣ) 
ಲೇಖನ : ರಮೇಶ ನಾಯ್ಕ, ಉಪ್ಪುಂದ 
ಕನ್ನಡ ಭಾಷಾ ಶಿಕ್ಷಕರು 
ನೇತಾಜಿ ಸುಭಾಶ್ಚಂದ್ರ ಬೋಸ್ 
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713


      ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದು ಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ

ಇಂದಿನ ಪ್ರವಾಸದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪವಿತ್ರ ಯಾತ್ರಾ ಸ್ಥಳವಾದ ಒಡಿಯೂರಿಗೆ ಪಯಣ ಮಾಡೋಣ ಬನ್ನಿ....

                                          
ದಕ್ಷಿಣ ಕನ್ನಡ ಜಿಲ್ಲೆಯ ಕರೋಪಾಡಿ ಗ್ರಾಮದ ಗ್ರಾಮೀಣ ಪ್ರದೇಶವೇ ಒಡಿಯೂರು. ಕರ್ನಾಟಕದ ದಕ್ಷಿಣ ಭಾಗದ ಕೊನೆಯಲ್ಲಿದ್ದು ಸಮೀಪದಲ್ಲೇ ಕೇರಳ ಗಡಿ ಭಾಗವಿದೆ. ಒಡಿಯೂರು 1986ರಿಂದ ಧಾರ್ಮಿಕ ಕ್ಷೇತ್ರವಾಗಿ ಪರಿವರ್ತನೆಗೊಂಡಿದ್ದು, ದತ್ತಾಂಜನೇಯ ದೇವರನ್ನು ಇಲ್ಲಿ ಸ್ಥಾಪಿಸಲ್ಪಟ್ಟು ಆರಾಧಿಸತೊಡಗಿದರು. ಈ ಕ್ಷೇತ್ರ ಅಂದಿನಿಂದ ದಕ್ಷಿಣದ ಗಾಣಗಾಪುರ ಎಂದು ಪ್ರಸಿದ್ಧಿಯಾಯಿತು. 

ಸುತ್ತಮುತ್ತ ಬೆಟ್ಟ ಗುಡ್ಡಗಳಿಂದ ಕೂಡಿರುವ ಈ ಪ್ರದೇಶದಲ್ಲಿ ನಿಂತರೆ ಹರಿದ್ವರ್ಣದ ರಮಣೀಯ ದೃಶ್ಯ ಕಣ್ಣಿಗೆ ಮುದ ನೀಡುತ್ತದೆ. ದೇಗುಲವನ್ನು ಪ್ರವೇಶಿಸುವಾಗ ಎದುರಾಗುವ ರಾಜಗೋಪುರ ನಲ್ವತ್ತು ಅಡಿ ಎತ್ತರವಿದೆ. ದೇಗುಲವು ವೇಸರ ಶಿಲ್ಪಶೈಲಿಯಲ್ಲಿದ್ದು, ಅಷ್ಟಪಟ್ಟಿಯಾಕಾರದಲ್ಲಿ ರಚನೆಯಾಗಿದೆ. ಮೂವತ್ತಾರುವರೆ ಅಡಿ ಎತ್ತರದ ಗರ್ಭಗುಡಿ ಸಂಪೂರ್ಣ ಶಿಲಾಮಯವಾಗಿದ್ದು, ಇದರ ನಾಲೆಸೆಗಳಲ್ಲಿ ಚತುರ್ವೇದಗಳನ್ನು ಚಿತ್ರಿಸಲಾಗಿದೆ. ಪೂರ್ವದಲ್ಲಿ ಹನುಮತ್ ವಿಲಾಸ ಕಥಾನಕವಿದ್ದರೆ, ದಕ್ಷಿಣ ಭಾಗದಲ್ಲಿ ಶಿವಲೀಲೆಯ ಕಥೆಗಳ ಚಿತ್ರ ಮಾಲಿಕೆಯಿದೆ. ಪಶ್ಚಿಮ ದಿಸೆಯಲ್ಲಿ ಗುರುದತ್ತಾತ್ರೇಯರ ಮಹಿಮೆಯನ್ನು ಸಾರುವ ಕಲಾಕೃತಿಗಳಿದ್ದರೆ, ಉತ್ತರದಲ್ಲಿ ಶ್ರೀಮನ್ನಾರಾಯಣನ ಮೂರ್ತಿ ಕಲಾ ವೈಭವವಿದ್ದು, ದೇಗುಲ ಪ್ರದಕ್ಷಿಣೆಯಲ್ಲಿ ನಮ್ಮನ್ನು ಪೌರಾಣಿಕ ಲೋಕಕ್ಕೆ ಕರೆದೊಯ್ಯುತ್ತದೆ. ಗರ್ಭಗುಡಿಯ ಶಿಲೆಗಳನ್ನು ಹೊರ ರಾಜ್ಯಗಳಿಂದ ತರಿಸಿದ್ದು, ಗರ್ಭಗುಡಿಯ ಶಿಖರದ ಮೇಲೆ ಪ್ರತಿಷ್ಠಾಪಿಸಿದ ಐದು ಕಲಶಗಳು ಪಂಚಭೂತ ಪಂಚತತ್ವಗಳನ್ನು ಸಾರುತ್ತವೆ.

ಗುರುಶ್ರೀ ದತ್ತಾತ್ರೇಯ ಪ್ರಭು ಮತ್ತು ಆಂಜನೇಯ ಸ್ವಾಮಿ ದೇವರುಗಳಾಗಿದ್ದು, ವಿಷ್ಣು ಸಾನ್ನಿಧ್ಯದ ದತ್ತ ಮಹಾಪ್ರಭು, ಶಿವಾಂಶ ಸಂಭೂತನಾದ ಅಂಜನಾಪುತ್ರ - ಮಾರುತಿ ಒಂದೆಡೆ ಜೊತೆಗೂಡಿರುವುದು ಈ ಕ್ಷೇತ್ರದ ವಿಶೇಷ. ಗರ್ಭಗುಡಿಯಲ್ಲಿ ದತ್ತಾತ್ರೇಯರ ಸ್ಪಟಿಕ ವಿಗ್ರಹ ಮತ್ತು ಕೃಷ್ಣ ಶಿಲೆಯಲ್ಲಿ ಕೆತ್ತಲ್ಪಟ್ಟ ಗಂಭೀರ ಮುಖ ಮುದ್ರೆಯಿಂದ ಕೂಡಿರುವ ಕೃಪಣಧಾರಿ ಆಂಜನೇಯಸ್ವಾಮಿ ಮೂರ್ತಿ ಪೂಜಿಸಲ್ಪಡುತ್ತಾರೆ. ಸ್ವರ್ಣ ಪ್ರಶ್ನೆಯ ಆಧಾರದಲ್ಲಿ ತಿಳಿದಿರುವ ವಿಚಾರದಲ್ಲಿ ಈ ಭೂಭಾಗದಲ್ಲಿ ಸ್ವಯಂ ಭೂ ದಕ್ಷಿಣಾಮೂರ್ತಿ ನೆಲೆಯಿದ್ದಿತೆಂಬ ಕಾರಣದಿಂದ ಇಲ್ಲಿ ನಡೆಯುವ ನಾಗಾರಾಧನೆಗೆ ವಿಶೇಷ ಮಹತ್ವ ಪಡೆದಿದೆ. ಪರಿವಾರ ದೇವತೆಗಳಾಗಿ ವಿಘ್ನನಾಶಕ ಬಲಮುರಿ ಗಣಪತಿ, ಸಂದಾನುಗ್ರಹಕಾರಕ ಸುಬ್ರಹ್ಮಣ್ಯ, ವಜ್ರಮಾತೆ, ಮೂಲರಾಮ, ಶಕ್ತಿ ಸ್ವರೂಪಿಣಿ ಭದ್ರಕಾಳಿ ಇಲ್ಲಿ ಆರಾಧಿಸಲ್ಪಡುತ್ತಾರೆ. 

ಗುರುದೇವ ಧ್ಯಾನ ಮಂದಿರದಲ್ಲಿ ನಿತ್ಯ ಸುಪ್ರಭಾತ, ಭಜನೆ, ಸತ್ಸಂಗ, ಸ್ತೋತ್ರ ಪಠಣಕ್ಕೆ ಅವಕಾಶವಿದೆ. ಶೇಷ ಸಾಧನೆಗೆ ಏಕಾಂತ ಧ್ಯಾನಕ್ಕೆ ಅನುಕೂಲವಾಗುವಂತೆ ನಿತ್ಯಾನಂದ ಗುಹೆ ಇದ್ದು, ಇದರ ಕೆಳಭಾಗದಲ್ಲಿ ಕಿವಿಕೊಟ್ಟು ಕೇಳಿದರೆ ಓಂಕಾರ ಪ್ರತಿಧ್ವನಿಸುತ್ತದೆ.
ಗುಹೆಯಲ್ಲಿರುವ ಕವಲುಗಳಲ್ಲಿ ಧ್ಯಾನಪೀಠಗಳನ್ನು ನಿರ್ಮಿಸಿದ್ದು, ಒಂದು ಕವಲಿನಲ್ಲಿ ಸಣ್ಣದಾದ ಜಲಾಶಯವಿದ್ದು, ಒಳಗೆ ಭೇಟಿ ಕೊಟ್ಟವನನ್ನು ಬೇರೆಯೇ ಲೋಕಕ್ಕೆ ಕರೆದೊಯ್ಯುತ್ತದೆ.

ಮಂಗಳೂರಿನಿಂದ ಒಡಿಯೂರಿಗೆ 48 ಕಿಲೋ ಮೀಟರ್, ವಿಟ್ಲದಿಂದ 14 ಕಿಲೋ ಮೀಟರ್ ಇದೆ. "ದಕ್ಷಿಣದ ಗಾಣಗಾಪುರ, ಕರ್ನಾಟಕ - ಕೇರಳದ ಗಡಿ, ದತ್ತಾತ್ರೇಯ ಮತ್ತು ಆಂಜನೇಯ : ಅನೇಕ ದೇವರುಗಳ ಸನ್ನಿಧಿ - ಪ್ರಕೃತಿಯ ಮಡಿಲೊಳಗೆ ದೈವತ್ವದ ಕಳೆಯ ನೆಲೆ ಒಡಿಯೂರು" ಬನ್ನಿ ಒಮ್ಮೆ..     
     ಮತ್ತೆ ಮುಂದಿನ 'ಪಯಣ' ಸಂಚಿಕೆಯಲ್ಲಿ ಸಿಗೋಣವೇ, ನಮಸ್ಕಾರ.
 (ಚಿತ್ರಗಳು : ಅಂತರ್ಜಾಲ ಕೃಪೆ)
......................... ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು 
ನೇತಾಜಿ ಸುಭಾಶ್ಚಂದ್ರ ಬೋಸ್ 
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
****************************************


Ads on article

Advertise in articles 1

advertising articles 2

Advertise under the article