ನಿಷ್ಪಾಪಿ ಸಸ್ಯಗಳು : ಸಂಚಿಕೆ - 101
Wednesday, May 7, 2025
Edit
ನಿಷ್ಪಾಪಿ ಸಸ್ಯಗಳು : ಸಂಚಿಕೆ - 101
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ... ಹೇಗಿದ್ದೀರಿ? ರಜಾ ದಿನಗಳು ಅರಿವಿಗೇ ಬಾರದೆ ಸರಿದು ಹೋಗುತ್ತಿವೆಯಲ್ಲವೇ? ಹೌದು.. ಸಂತಸವೆಂದರೆ ಹಾಗೇ!
ನಮ್ಮ ಮನಸಿಗೆ ಉಲ್ಲಾಸ ನೀಡುವ, ಹಿತ ನೀಡುವ ಚಟುವಟಿಕೆಗಳ ನಡುವೆ ನಾವಿದ್ದಾಗ ವಾತಾವರಣವೇ ಆಹ್ಲಾದಕರವಾಗಿದೆ ಎಂದನಿಸುತ್ತದೆ. ಇಂತಹ ಮನಸ್ಥಿತಿ ಉಂಟಾಗಲು ಕೆಲವೊಮ್ಮೆ ಕೆಲವು ಸಸ್ಯಗಳೂ ಕಾರಣವಾಗುವುದಿದೆ ಬಲ್ಲಿರಾ? ಇದಕ್ಕೊಂದು ಉದಾಹರಣೆ ಅಂಥೋರಿಯಂ! ಹೆಸರು ಕೇಳಿದ ತಕ್ಷಣ ನಿಮ್ಮ ಮನಸ್ಸಿನಲ್ಲಿ ಗಾಢ ಕೆಂಪು ವರ್ಣದ ಅಂಥೋರಿಯಂ ಪುಷ್ಪದ ಚಿತ್ರ ಖಂಡಿತ ಮೂಡುತ್ತದೆ. ಆ ಹೂವಿನ ಬಣ್ಣ, ಅದರ ಹೊಳಪಿನ ಹಸುರು ಎಲೆಗಳು, ಹೂವಿನ ಮತ್ತು ಎಲೆಗಳ ಹೃದಯದಾಕಾರಗಳು ಇದನ್ನು ವಿಶೇಷ ಮತ್ತು ವಿಶಿಷ್ಟ ವಾಗುವಂತೆ ಮಾಡಿವೆ.
ಏರೇಸಿ (Araceae) ಕುಟುಂಬದ ಜನಪ್ರಿಯ ಅಲಂಕಾರಿಕ ಸಸ್ಯ ಅಂಥೋರಿಯಂ (Anthurium plant). 2ಮೀಟರ್ ನಷ್ಟೆತ್ತರ ಬೆಳೆಯಬಹುದಾದ ಈ ಸಸ್ಯಜಾತಿಯಲ್ಲಿ 500 ಕ್ಕೂ ಹೆಚ್ಚು ಪ್ರಭೇದಗಳಿವೆ. ದಟ್ಟವಾದ ಕಾಡಿನಲ್ಲಿ ಎತ್ತರವಾದ ಮರಗಳಡಿ ಅರೆಬಿಸಿಲಲ್ಲಿ ಬೆಳೆಯುತ್ತಿದ್ದ ಆರ್ಕಿಡ್, ಅಂಥೋರಿಯಂ ನಂತಹ ಸಸ್ಯಗಳ ಸೌಂದರ್ಯಕ್ಕೆ ಮನಸೋತ ಮಾನವ ತನ್ನಂಗಳಕ್ಕೆ ತಂದು ಜಾಗ ನೀಡಿದ. ಕಾಲ ಕಳೆದಂತೆ ಮನೆಯೊಳಗೂ, ಕಛೇರಿಯೊಳಗೂ ಸ್ಥಾನ ಗಿಟ್ಟಿಸಿ ಹೂಗಳ ರಾಣಿಯೆಂದೇ ಖ್ಯಾತಿ ಗಳಿಸಿದ್ದ ಗುಲಾಬಿಯನ್ನು ನೋಡಿ ಅಂಥೋರಿಯಂ ನಸುನಕ್ಕಿತು !.
ಹೊಳೆಯುವ ಹಸಿರ ಮೆತ್ತಿದ ಹೃದಯದಾಕಾರದ ಎಲೆಗಳು ಕಣ್ಣಿಗೆ ತಂಪು ನೀಡಿದರೆ ಅವುಗಳ ನಡುವೆ ಅರಳಿದರೆ ಎರಡು ಮೂರು ತಿಂಗಳ ಕಾಲ ಹಾಳಾಗದಿರುವ ದಪ್ಪನೆಯ ಗಾಢವರ್ಣದ ಅಂಥೋರಿಯಂ ಪುಷ್ಪವು ಮಾನವನಿಗೆ ಪ್ರೀತಿಯ ಸಂಕೇತವಾಗಿ ಕಾಣಿಸಿತು. ವಾಸದ ಕೋಣೆಯಲ್ಲಿರಿಸಿ ಆರೈಕೆ ಮಾಡಿದರೆ ಅದೃಷ್ಟ, ಸಮೃದ್ಧಿ, ಸಂತಸ ಹೆಚ್ಚುವುದೆಂಬ ನಂಬಿಕೆಯಿಂದ ಮಾನವನ ಜೊತೆ ಸಾಕುಪ್ರಾಣಿಯಂತೆ ಬೆಸೆದುಕೊಂಡಿತು. ಸಂಬಂಧಗಳಿಗೆ ಬೆಸುಗೆಯಾಗಿ, ಅದೃಷ್ಟದ ಗಣಿಯಾಗಿ, ಸೌಂದರ್ಯದ ಪ್ರತಿನಿಧಿಯಾಗಿ ಕಾಣಿಸಿದ ಪರಿಣಾಮ ವಿಶ್ವದೆಲ್ಲೆಡೆ ಹರಡುವಂತಾಗಿದೆ. ಸಣ್ಣ ಬೇರುಗಳ ಮೂಲಕ ಸಂತಾನ ಮುಂದುವರಿಸುವ ಅಂಥೋರಿಯಂ ತನ್ನ ಬೀಜಗಳಿಂದ ಪ್ರಸಾರವಾದರೂ ಮಾತೃ ಸಸ್ಯಕ್ಕೆ ಸಮಾನವಾದ ಉತ್ಪನ್ನ ನೀಡಲಾರದು. ಉತ್ತಮ ಒಳಾಂಗಣ ಸಸ್ಯವಾದ ಅಂಥೋರಿಯಂ 60'F ಗಿಂತ ಕಡಿಮೆ ತಾಪಮಾನ ಬಯಸುತ್ತದೆ. ಕಡಿಮೆ ಅಥವಾ ಮಧ್ಯಮ ಬೆಳಕಿಗೆ ಚೆನ್ನಾಗಿ ಬೆಳೆಯುತ್ತದೆ. ಒಂದು ಸಸ್ಯವು ಎರಡು ಮೂರು ವರ್ಷ ಇಳುವರಿ ನೀಡಬಲ್ಲದು. ಚೆನ್ನಾಗಿ ನಿರ್ವಹಣೆ ಮಾಡಿದರೆ ವರ್ಷಕ್ಕೆ ಒಂದು ಗಿಡದಿಂದ ಐದಾರು ಹೂವುಗಳನ್ನ ಪಡೆಯಬಹುದು. ಅಂಥೋರಿಯಂನ್ನು ಗ್ವಾಟೆಮಾಲಾದ ಮೂಲವಾಸಿ ಎನ್ನಲಾಗುತ್ತದೆಯಾದರೂ ಇದರ ಹಲವು ಪ್ರಭೇದಗಳಿಗೆ ಹಲವು ಕಡೆ ಮೂಲಸ್ಥಳಗಳಿವೆ. ಹವಾಯಿಯನ್ ಸಂಸ್ಕೃತಿಯಲ್ಲಿ ಅಂಥೋರಿಯಂ ನ್ನು ಫ್ಲೆಮಿಂಗೋ ಹೂವೆನ್ನುವರು. ಅಲ್ಲಿಯೂ ಅದೃಷ್ಟವನ್ನು ತರುತ್ತದೆ, ಹಾನಿಯಿಂದ ರಕ್ಷಣೆ ನೀಡುತ್ತದೆಯೆಂದು ನಂಬಲಾಗುತ್ತದೆ. ಇದಲ್ಲದೆ ಪಿಗ್ ಟೇಲ್, ಲೇಸ್ ಲೀಫ್, ಟೈಲ್ ಫ್ಲವರ್, ಎಣ್ಣೆ ಬಟ್ಟೆ ಹೂವು, ಫ್ಲೆಮಿಂಗೋ, ಪೇಂಟರ್ಸ್ ಪ್ಯಾಲೆಟ್ ಎಂದೂ ಹೆಸರುಗಳಿವೆ. ಮಧ್ಯ ಅಮೆರಿಕದ ಮೂಲನಿವಾಸಿಗಳು ಬಹಳ ಹಿಂದೆಯೆ ಇದನ್ನು ಕೈತೋಟ ಹಾಗೂ ಮನೆ ಅಲಂಕಾರದಲ್ಲಿ ಬಳಸುತ್ತಿದ್ದರು.
1860 ರಲ್ಲಿ ಅಂಥೋರಿಯಂ ನಲ್ಲಿ 183 ಜಾತಿಗಳನ್ನು ಗುರುತಿಸಿ 28 ವಿಭಾಗದಲ್ಲಿ ವ್ಯಾಖ್ಯಾನಿಸಲ್ಪಟ್ಟರೆ, 1905 ರಲ್ಲಿ 18 ವಿಭಾಗಗಳನ್ನಾಗಿ ಪರಿಷ್ಕರಣೆ ಮಾಡಿದ್ದಾರೆ. 1983ರಲ್ಲಿ 19 ವಿಭಾಗ ಮಾಡಿ ವಿಂಗಡಣೆ ಮಾಡಿದ್ದರೆ. ಸ್ವಾತಿ ಫಿಲಮ್ ಇದೇ ಕುಟುಂಬದ ಸಸ್ಯವಾದರೂ ಇದನ್ನು ಪೀಸ್ ಲಿಲ್ಲಿ ಎನ್ನುತ್ತಾರೆ. ಅಂಥೋರಿಯಂ ಆ್ಯಂಡ್ರಸಿನಮ್ ಪ್ರಭೇದ ಕೊಲಂಬಿಯ ದೇಶದ್ದಾಗಿದ್ದು 1876 ರಲ್ಲಿ ಎಡ್ಮಂಡ್ ಆ್ಯಂಡ್ರೆ ಎಂಬವರು ಮೊದಲು ವಿವರಿಸಿದ ಕಾರಣ ಹೆಸರಿನ ಜೊತೆ ಆ್ಯಂಡ್ರ ಸೇರಿಕೊಂಡಿದೆ. ಅಂಥೋರಿಯಂ ವಾರೆಕ್ಯೂಯೆಸಮ್ ಎಂಬ ಇನ್ನೊಂದು ಪ್ರಭೇದ ಮೂಲತ: ಮೆಕ್ಸಿಕೊ ದೇಶದ್ದಾಗಿದ್ದು ಇದಕ್ಕೆ ವಾರೆಕ್ಯೂ ಎಂಬ ಪ್ರಸಿದ್ಧ ಅಂಥೋರಿಯಂ ಬೇಸಾಯಗಾರನ ಹೆಸರನ್ನೇ ಇಡಲಾಗಿದೆ. ಅಂಥೋರಿಯಂ ವಿಚ್ಚ್ ಎಂಬ ಪ್ರಭೇದವು ಹೆಸರಿನ ಜೊತೆ ಸಸ್ಯ ಮಾರಾಟಗಾರನ ಜ್ಞಾಪಕಾರ್ಥದ ಹೆಸರು ಸೇರಿಸಿದೆ!.
ಒಟ್ಟಾರೆಯಾಗಿ ಗ್ರೀಕ್ ಪದಗಳಾದ ಆಂಥೋಸ್ ಅಂದರೆ ಹೂವು ಹಾಗೂ ಔರಾ ಅಂದರೆ ಬಾಲ. ಈಗ ಇವುಗಳ ಹಲವಾರು ಮಿಶ್ರತಳಿಗಳು ಹರಡಿದ್ದು ಬಿಳಿ, ಹಳದಿ, ಹಸಿರು, ನೇರಳೆ, ನೀಲಿ, ಮಿಶ್ರ ಬಣ್ಣಗಳೇ ಅಲ್ಲದೆ ಕೆಂಪು, ಕೇಸರಿಗಳು ನಾನಾ ಸಂವೇದನೆಗಳಿಗೆ ಇಂಬುಗೊಟ್ಟಿವೆ. ಸಹಾನುಭೂತಿಯಿಂದ ಹಿಡಿದು ಯಾವುದೇ ಸಂದರ್ಭಕ್ಕೂ ಅಂಥೋರಿಯಂ ಉತ್ತಮ ಅರ್ಥಪೂರ್ಣ ಉಡುಗೊರೆ ಎಂದೆನಿಸಿದೆ. ಕೆಂಪು ಬಣ್ಣವು ಗಮನ ಸೆಳೆತ, ಗುಲಾಬಿ ವರ್ಣ ಹರ್ಷಚಿತ್ತ, ನೇರಳೆ ಬಣ್ಣವು ವಿಶಿಷ್ಟ ವಿಲಕ್ಷಣ, ಕಿತ್ತಳೆಯು ಉತ್ಸಾಹಭರಿತ ಸ್ಥಿತಿಗಳನ್ನು ನಿರ್ಮಿಸುವ ಅಂಥೋರಿಯಂನ್ನು ಕೊಯ್ದು ಹೂದಾನಿಯಲ್ಲಿಟ್ಟರೂ 5 - 6 ವಾರಗಳ ದೀರ್ಘಬಾಳಿಕೆ ಬರುವ ಹೂವಾಗಿ ಮೆಚ್ಚುಗೆ ಗಳಿಸಿದೆ. ದಿನವಿಡೀ ಇಂಗಾಲದ ಡೈಆಕ್ಸೈಡ್ ಹೀರಿಕೊಂಡು ಆಮ್ಲಜನಕವನ್ನು ನೀಡುವ ನಿಷ್ಪಾಪಿ ಸಸ್ಯದಲ್ಲಿ ಅಂಥೋರಿಯಂ ಕಿಂಗ್ ಆಫ್ ಸ್ಪೇಡ್ಸ್ ಎಂಬ ಪ್ರಭೇದದ ಹೂವು 110 ರಿಂದ 150 ಡಾಲರ್ ಗೆ ಮಾರಾಟವಾಗುತ್ತದೆ! ಹೂಗುಚ್ಛ ತಯಾರಿಯಲ್ಲಿ ಅಂಥೋರಿಯಂ ಪ್ರಮುಖ ಪಾತ್ರವಹಿಸುತ್ತದೆ.
ಕಣ್ಣಿಗೆ, ಮನಸ್ಸಿಗೆ ಈ ಹೂವು ಎಷ್ಟೇ ಆಕರ್ಷಕವೆಂದೆನಿಸಿದರೂ ಅಂಥೋರಿಯಂನ ಬೇರು, ಕಾಂಡ, ಎಲೆ, ಹೂವು, ಬೀಜ ವಿಷತ್ವದ ಅಪಾಯ ಹೊಂದಿದೆ ಎಂದು ಮರೆಯಬಾರದು. ಮಾನವನನ್ನೂ ಸೇರಿದಂತೆ ಎಲ್ಲಾ ಸಸ್ತನಿಗಳಿಗೂ ಇದು ಹಾನಿಕಾರಕ. ವಿಷಕಾರಿ ರಸ ಚರ್ಮ, ಕಣ್ಣುಗಳಿಗೆ ಕಿರಿಕಿರಿ ಉಂಟುಮಾಡುತ್ತದೆ. ಈ ಸಸ್ಯವು ಕರಗದ ಕ್ಯಾಲ್ಸಿಯಂ ಆಕ್ಸಲೇಟ್ ಹರಳು ಹೊಂದಿದ್ದು ಬಾಯಿಯ ಕಿರಿಕಿರಿ, ವಾಂತಿ, ನುಂಗಲು ತೊಂದರೆ, ನೋವು, ಊತ, ಅತಿಯಾದ ಜೊಲ್ಲು ಮೊದಲಾದ ರೋಗ ಲಕ್ಷಣ ತೋರಬಹುದು.
ಏಕ ಶಿಖೆಯ ಅಂಥೋರಿಯಂ ಪುಷ್ಪವು ಇಂದು ಜಾಗತಿಕವಾಗಿ ಆರ್ಥಿಕ ಬೆಳೆಯಾಗಿದೆ. ಮಿಶ್ರತಳಿಗಳು ತೋಟಗಾರಿಕೆಯ ಮೂಲಕ ನೈಸರ್ಗಿಕಗೊಳ್ಳುತ್ತಿದೆ. ಈ ಸಸ್ಯವನ್ನು ನೇರವಾದ ಬಿಸಿಲಿಗೊಡ್ಡದೆ ಒಂದಿಷ್ಟು ನೆರಳು, ಸ್ಪ್ರೇ ಮಾಡಿದಂತೆ ನೀರು, ಸಾರಜನಕ ಗೊಬ್ಬರ ನೀಡಿ ಬೆಳೆಸಿದರೆ ತಕ್ಕ ಪ್ರತಿಫಲಪಡೆಯಬಹುದು. ನೀವೂ ಪ್ರಯತ್ನಿಸಬಹುದು!
ಸರಿ ಮಕ್ಕಳೇ... ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗುತ್ತೇನೆ.. ನಮಸ್ಕಾರ.
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************