-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 100

ನಿಷ್ಪಾಪಿ ಸಸ್ಯಗಳು : ಸಂಚಿಕೆ - 100

ನಿಷ್ಪಾಪಿ ಸಸ್ಯಗಳು : ಸಂಚಿಕೆ - 100
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
     

ಪ್ರೀತಿಯ ಮಕ್ಕಳೇ... ಹೇಗಿದ್ದೀರಿ? ಮಳೆ, ಮೋಡ, ಬಿಸಿಲುಗಳ ಕಣ್ಣಾಮುಚ್ಚಾಲೆಯಲ್ಲಿ ಈ ವಾರವಿಡೀ ಅಹ್ಲಾದಕರ ವಾತಾವರಣವಿದೆ. ಪ್ರಕೃತಿ ರಮಣೀಯವಾಗಿದೆ. ಇದನ್ನು ಕಂಡು ಡಿ.ವಿ.ಜಿ ಯವರು...
ಅರಣ್ಯದ ಪುಷ್ಪಗಳ ಮೂಸುವವರಾರು?
ಆರಿಹರು ಪತಗದುಡುಪನ್ನು ಹುಡುಕಿ ಮೆಚ್ಚಲ್?
ಬೇರೊಬ್ಬರೆಣಿಕೆಯಿಲ್ಲದೆ ಪ್ರಕೃತಿ ತನಗೆಂದೆ|
ಸ್ವಾರಸ್ಯವೆಸಗುವಳೊ_ಮಂಕುತಿಮ್ಮ||
ಎಂದಿದ್ದಾರೆ. 

ನಿತ್ಯವೂ ಈ ದಿವ್ಯ ಚಿತ್ರದಲ್ಲಿ ಮನವಿರಿಸಿ ಕಣ್ಮುಚ್ಚುವುದೆ ಧ್ಯಾನವೂ, ಧರ್ಮವೂ, ಸಚ್ಚಿದಾನಂದವೂ ಆಗಿದೆಯಲ್ಲವೇ!

ಮಕ್ಕಳೇ, ಈ ನಿಷ್ಪಾಪಿ ಸಸ್ಯಗಳ ಪರಿಚಯ ಲಹರಿಯು ಪುಟ್ಟ ಪುಟ್ಟ ಹೆಜ್ಜೆಗಳ ಗುರುತು ಮೂಡಿಸುತ್ತಾ ನಡೆದು ಇಂದು ಶತಕ ಸಂಭ್ರಮದಲ್ಲಿದೆ ಎನ್ನುವುದೇ ಒಂದು ಸಂತಸವಲ್ಲವೇ!

ಈ ಜಗತ್ತು ಡೊಂಕು, ನೇರ ಹಾಗೂ ಅವುಗಳ ಮಿಶ್ರಣದಿಂದಾಗಿದೆ. ಹಲವಾರು ಮೀಟರ್ ಗಳಷ್ಟು ಎತ್ತರ ಬೃಹದಾಕಾರವಾಗಿ ಬೆಳೆದು ನಿಂತ ಮರವನ್ನು ನೋಡುವುದೇ ಕಣ್ಣಿಗೆ ಹಬ್ಬ!. ಕೇವಲ ಮರವೊಂದು ಭೂಮಿಯಿಂದ ಹಾಗೆ ಏಕಾಂಗಿಯಾಗಿ ಎದ್ದು ನಿಂತರೆ ಭವ್ಯತೆ ಕಾಣಬಹುದೇ ಹೊರತು ಆಕರ್ಷಕವೆಂದೆನಿಸದು. ಆ ಮರವನ್ನು ಆಧರಿಸಿ ನಿಧಾನವಾಗಿ ಲಾಸ್ಯದಿಂದ ಮೇಲೇರುವ ಬಳ್ಳಿಗಳೂ, ಸುತ್ತಲೂ ಸಣ್ಣ ಪುಟ್ಟ ಮರಗಿಡಗಳೂ ಜೊತೆಗಿದ್ದಾಗ ಕಾಣುವ ಸೊಬಗೇ ಅನನ್ಯ!. ಹೀಗೆ ಮರ, ಗಿಡ, ಕಲ್ಲುಬಂಡೆ, ಇಳಿಜಾರು, ಗೋಡೆ ಹೀಗೆ ಎಲ್ಲೆಂದರಲ್ಲಿ ಅಂಬೆಗಾಲಿಡುತ್ತಾ ಮುಗ್ಧ ವಾಗಿ ಮೇಲೇರುವ ಬಳ್ಳಿಗಳಲ್ಲಿ ಅಡಿಕೆ ಬೀಳು ಕೂಡ ಒಂದು. ನೀವದರ ನಡಿಗೆಯನ್ನು ಗಮನಿಸಬೇಕು. ತಮ್ಮ ಕುಡಿಗಳನ್ನು ಮೇಲೆತ್ತಿ ರೆಕ್ಕೆಗಳಂತಿರುವ ತೊಟ್ಟಿನಲ್ಲಿ ಈಟಿಯಂತೆ ತುದಿ ಚೂಪಾದ ಅಂಡಾಕಾರದ ಹೊಳಪಿನ ಹಸಿರು ಎಲೆಗಳನ್ನು ಅತ್ತಿತ್ತ ಹರಡಿ ಅಲ್ಲೇ ಬೇರುಗಳಿಂದ ಆಧಾರವನ್ನು ಅವಚಿಹಿಡಿದು, ಅಲ್ಲೇ ಕಂಕುಳಲ್ಲಿ ಅಕ್ಟೋಬರ್ ನವೆಂಬರ್ ಗಳಲ್ಲಿ ಪುಷ್ಪಗುಚ್ಛವರಳಿಸಿ ಕೆಂಪಾದ ಗುಲಗುಂಜಿಯಂತಹ ಹಣ್ಣುಗಳನ್ನು ಪಕ್ಷಿಗಳಿಗೆ ಉಣಿಸಿ ಸಾರ್ಥಕತೆ ಪಡೆವ ವಿಶಿಷ್ಟ ಸಸ್ಯ!
ನಮ್ಮ ಬಾಲ್ಯದಲ್ಲಿ ದನಗಳಿಗೆ, ಉಳುವ ಎತ್ತು ಕೋಣಗಳಿಗೆ ಇದು ಆರೋಗ್ಯಕರವಾದ ಶ್ರೇಷ್ಠ ಆಹಾರವಾಗಿತ್ತು. ಹಸಿರು ಹುಲ್ಲಿನ ಅಭಾವಕ್ಕೆ ಪರ್ಯಾಯ ಪೌಷ್ಟಿಕ ಆಹಾರವಾಗಿತ್ತು. ನೆಲದ ಮೇಲೆ ಹರಿದು ಹೋದ ಅಡಿಕೆ ಬೀಳನ್ನು ತಂದು ಸಿಗಿದು ಎರಡು ಭಾಗ ಮಾಡಿ ಬಿಸಿಲಲ್ಲಿ ಒಣಗಿಸಿ ಬೇಲಿ ಕಟ್ಟಿದರೆ ಎರಡು ವರ್ಷವಾದರೂ ಬಾಳಿಕೆ ಬರುತ್ತಿತ್ತು. ದೂರದಿಂದ ಒಲೆಗಿಡಲು ಕಟ್ಟಿಗೆ, ಹಟ್ಟಿಗೆ ತರಗೆಲೆ ತರಲೂ ಈ ಬಳ್ಳಿ ಇದ್ದರಾಯ್ತು, ಮೃದುವಾಗಿ ಗಟ್ಟಿಯಾಗಿ ಕಟ್ಟಲು ಒದಗುತ್ತಿತ್ತು.

ಮನೆ, ಕಛೇರಿ, ಉದ್ಯಾನಗಳಲ್ಲಿ ಸೌಂದರ್ಯದ ಸ್ಪರ್ಶ ನೀಡಿ ಮೆಚ್ಚುಗೆ ಗಳಿಸಿರುವ ಅಡಕೆ ಬಳ್ಳಿ ಕನ್ನಡದಲ್ಲಿ ಅಡ್ಕೆ ಬಳ್ಳಿ, ಅಕ್ಕಿ ಬಳ್ಳಿಯೆಂದೂ, ತುಳು ಭಾಷೆಯಲ್ಲಿ ಅರ್ಕೆದ ಬೂರು, ಅರಿಪಜಿರೆಂದೂ, ಇಂಗ್ಲೀಷ್ ಭಾಷೆಯಲ್ಲಿ ಕ್ಲೈಂಬಿಂಗ್ ಆರಾಯ್ಡ್ ಎಂಬ ಹೆಸರಿಂದ ಜನಪ್ರಿಯವಾಗಿದೆ. ಮಾತ್ರವಲ್ಲದೆ ಪೋಥೋಸ್ ಸ್ಕ್ಯಾಂಡೆನ್ಸ್ (Pothos scandens) ಎಂಬ ಸಸ್ಯ ಶಾಸ್ತ್ರೀಯ ಹೆಸರಿದ್ದು ಅರೇಸಿ (Araceae) ಕುಟುಂಬಕ್ಕೆ ಸೇರಿದೆ. ವೃಕ್ಷಾದನಿ ಎಂಬ ಸಸ್ಯದ ಮೂಲವಾಗಿ ಆಯುರ್ವೇದ ಗ್ರಂಥದಲ್ಲಿ ಇದನ್ನು ಗುರುತಿಸಲಾಗಿದೆ. ಬಾಂಧವ್ಯದ ಬೆಸುಗೆ ಹಬ್ಬಲು ಅಡಿಕೆ ಬೀಳನ್ನು ಉಡುಗೊರೆಯಾಗಿ ಕೊಡುವ ಸಂಪ್ರದಾಯವೂ ಇದೆಯಂತೆ. ತೆಂಗು, ಅಡಿಕೆ, ಮಾವು, ಬೇವೆಂದು ನೋಡದೆ ಏರಿ ಹಬ್ಬಿ ಮಾತೃ ಸಸ್ಯದ ಉಣಿಸಲ್ಲಿ ಪರಾವಲಂಬಿಯಾಗಿ ಬದುಕಲೆತ್ನಿಸುವ ಅಡಿಕೆಬಳ್ಳಿ ಕೆಲವೊಮ್ಮೆ ಕಳೆಸಸ್ಯವಾಗಿಯೂ ರೈತನನ್ನು ಕಾಡುತ್ತದೆ.
ಮಳೆಗಾಲದ ಆರಂಭಕ್ಕೆ ಭೇಟಿ ನೀಡುವ ಶೀತ, ಕಫ, ಜ್ವರಕ್ಕೆ ಈ ಬಳ್ಳಿಯ ಚಿಗುರು, ಓಮ, ಕಾಳುಮೆಣಸಿನ ಜೊತೆ ಶಮನ ನೀಡುತ್ತದೆ. ಏಷ್ಯಾ, ಆಫ್ರಿಕಾ, ಚೀನಾ, ಶ್ರೀಲಂಕಾ, ಇಂಡೋನೇಷ್ಯಾ, ವಿಯೆಟ್ನಾಂ, ಕಾಂಬೋಡಿಯ ಹೀಗೆ ಉಷ್ಣವಲಯದ ಅರಣ್ಯ ಸಸ್ಯವಾಗಿ ಬೆಳೆಯುವ ಅಡಿಕೆ ಬೀಳು ನರ್ಸರಿಯಲ್ಲಿ 250.. 300 ರುಪಾಯಿಗಳಿಗೆ ಮಾರಲ್ಪಡುತ್ತದೆ! ನಾಟಿ ವೈದ್ಯರು, ಗುಡ್ಡಗಾಡಿನ ಮೂಲ ನಿವಾಸಿಗಳು, ಆದಿವಾಸಿಗಳು ಇದರ ಔಷಧೀಯ ಉಪಯೋಗಗಳನ್ನು ಪಡೆಯುತ್ತಿರುವುದಲ್ಲದೆ ಶ್ರೀಲಂಕಾ ಹಾಗೂ ಕೇರಳದಲ್ಲಿ ಬಹಳಷ್ಟು ಸಂಶೋಧನೆಗಳನ್ನು ನಡೆಸಿದ್ದಾರೆ. ಸುಟ್ಟಗಾಯ ಗುಣಪಡಿಸಲು, ಅತಿಸಾರ, ಭೇದಿ, ಕ್ಯಾನ್ಸರ್, ಸ್ನಾಯುಸೆಳೆತ, ಉಳುಕು, ಮೂಳೆಮುರಿತ, ಅಪಸ್ಮಾರ, ಕಿಡ್ನಿ ಕಲ್ಲು, ಅಸ್ತಮಾ ಹಾವಿನ ಕಡಿತ, ಗಂಟುನೋವು, ಸುಡುವ ಸಂವೇದನೆ, ಚರ್ಮರೋಗ, ಊತ ಇತ್ಯಾದಿಗಳಲ್ಲಿ ಇದನ್ನು ಪರಿಣಾಮಕಾರಿಯಾಗಿ ಬಳಸುತ್ತಾರೆಂದರೆ ಆಶ್ಚರ್ಯವಾಗುತ್ತಿದೆಯೇ? ನಿಜ.. ನಿಸರ್ಗದಲ್ಲಿ ಅದಕ್ಕೆ ಮೌಲ್ಯವಿದೆ..! ಗಜಪಿಪ್ಪಲಿ ಎಂಬ ದ್ರವ್ಯದ‌ ಬದಲಿಗೂ ಔಷಧ ತಯಾರಿಯಲ್ಲಿ ಇದನ್ನು ಬಳಸುವರಂತೆ. ನಮಗಿಂತಹ ನಿಷ್ಪಾಪಿ ಸಸ್ಯಗಳ ಬಗೆಗಿನ ತಾತ್ಸಾರ ಭಾವವು ಇಂಗ್ಲೀಷ್ ಔಷಧಿ ನೀಡುವ ವೈದ್ಯರೆದುರು ಸರತಿಯಲ್ಲಿ ಗಂಟೆಗಟ್ಟಲೆ ನಿಲ್ಲುವಂತೆ ಮಾಡುತ್ತದೆ. ನೀವೀ ಬಳ್ಳಿ ಯನ್ನು ಖಂಡಿತವಾಗಿಯೂ ನೋಡಿರುತ್ತೀರಿ. ಮತ್ತೊಮ್ಮೆ ಅದರ ಬಳಿಸಾರಿ ಅತ್ಯಂತ ಆಪ್ತತೆಯಿಂದ ಪರಿಚಯ ಮಾಡಿಕೊಳ್ಳಿರಿ. ಇಂತಹ ವನಸಿರಿಯನ್ನು, ವೈವಿಧ್ಯಮಯ ಸಸ್ಯ ಸಂಕುಲಗಳನ್ನು ಗುರುತಿಸುವ ಜೊತೆಗೆ ಪ್ರೀತಿಸಲು ಕಲಿಯಿರಿ. ಭಗವಂತನ ಅಸ್ತಿತ್ವವನ್ನು ನಿಸರ್ಗದಲ್ಲಿ ಗುರುತಿಸುವ ದೃಷ್ಟಿ ಬೆಳೆಸಿಕೊಳ್ಳೋಣ ಆಗದೇ...

ಸರಿ ಮಕ್ಕಳೇ... ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗುತ್ತೇನೆ.. ನಮಸ್ಕಾರ.
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************


Related Posts

Ads on article

Advertise in articles 1

advertising articles 2

Advertise under the article