ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 78
Tuesday, April 29, 2025
Edit
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 78
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
ಪ್ರೀತಿಯ ಮಕ್ಕಳೇ... ಎಲೆಗಳ ಬಣ್ಣ ಏಕಿದೆ ಎನ್ನುವುದು ಹಿಂದಿನ ಸಂಚಿಕೆಯಲ್ಲಿ ಓದಿ ತಿಳಿದಿದ್ದೀರಿ. ಹೌದು. ಎಲೆಯಲ್ಲಿರುವ ಪತ್ರ ಹರಿತ್ತು ಸೂರ್ಯನ ಬೆಳಕಿನಲ್ಲಿನ ಉಳಿದೆಲ್ಲಾ ಬಣ್ಣಗಳನ್ನು ಹೀರಿಕೊಂಡು ಕೇವಲ ಹಸಿರು ತರಂಗಾಂತರವನ್ನು ಪ್ರತಿಫಲಿಸುತ್ತವೆ. ಹೀಗೆ ಸೂರ್ಯನ ವಿಕಿರಣದ ಉಳಿದ ತರಂಗಾಂತರದಲ್ಲಿನ ಶಕ್ತಿಯನ್ನು ಬಳಸಿಕೊಂಡು ನೀರು ಮತ್ತು ಇಂಗಾಲದ ಡೈಆಕ್ಸೈಡ್ ಅನ್ನು ಗ್ಲುಕೋಸ್ ಆಗಿ ಪರಿವರ್ತಿಸುತ್ತದೆ. ಈ ಪ್ರಕ್ರಿಯೆಯನ್ನು ನಾವು ದ್ಯುತಿಸಂಶ್ಲೇಷಣೆ (photosynthesis) ಎನ್ನುತ್ತೇವೆ. ಇದು ಬೆಳಕಿನ ತಯಾರಿಕೆ ಅಲ್ಲ ಬದಲಾಗಿ ಬೆಳಕಿನ ಬಳಕೆಯಿಂದ ಆಹಾರದ ತಯಾರಿಕೆ. ಇಲ್ಲಿ ತಯಾರಾಗುವ ಗ್ಲುಕೋಸ್ ನಲ್ಲಿ 6 ಇಂಗಾಲ 12 ಜಲಜನಕ ಮತ್ತು 6 ಆಮ್ಲಜನಕದ ಪರಮಾಣುಗಳಿವೆ. ಅದೇ ನೀರಿನಲ್ಲಿ ಆಮ್ಲಜನಕವಿದೆ ಮತ್ತು ಇಂಗಾಲದ ಡೈಆಕ್ಸೈಡ್ ನಲ್ಲಿಯೂ ಆಮ್ಲಜನಕದ ಪರಮಾಣುಗಳಿವೆ. ಈ ಬಿಡುಗಡೆಯಾಗುವ ಆಮ್ಲಜನಕದ ಮೂಲ ಯಾವುದು ಎಂಬುದು ಪ್ರಶ್ನೆ. ಇಂಗಾಲದ ಡೈಆಕ್ಸೈಡ್ ನ ಒಂದು ಅಣುವಿನಲ್ಲಿ ಎರಡು ಆಮ್ಲಜನಕದ ಪರಮಾಣುಗಳಿದ್ದು ನೀರಿನಲ್ಲಿ ಕೇವಲ ಒಂದೇ ಇರುವುದರಿಂದ ಬಿಡುಗಡೆಯಾಗುವ ಆಮ್ಲಜನಕದ ಮೂಲ ಇಂಗಾಲದ ಡೈಆಕ್ಸೈಡ್ ಎಂದು ನಂಬಲಾಗಿತ್ತು. ಆದರೆ ನಂತರದ ದಿನಗಳಲ್ಲಿ ಇದು ನೀರಿನಿಂದ ಬರುತ್ತದೆ ಎಂದು ತಿಳಿದು ಬಂತು. ಪತ್ರ ಹರಿತ್ತು ಹೀರಿಕೊಂಡ ಸೂರ್ಯನ ಬಿಸಿಲನ್ನು ಬಳಸಿಕೊಂಡು ನೀರನ್ನು ಆಮ್ಲಜನಕ ಮತ್ತು ಜಲಜನಕದ ಅಣುಗಳನ್ನಾಗಿ ಒಡೆಯುತ್ತವೆ. ಇದು ದ್ಯುತಿ ವಿಭಜನೆ (photolysis). ಒಂದು ನೀರಿನ ಅಣು ಈ ಎರಡು ಜಲಜನಕದ ಪರಮಾಣು ಮತ್ತು ಅರ್ಧ ಆಮ್ಲಜನಕದ ಅಣುವನ್ನಾಗಿ ಒಡೆಯುತ್ತದೆ. (ನಾನು ಇಲ್ಲಿ ಜಲಜನಕದ ಪರಮಾಣು ಮತ್ತು ಆಮ್ಲಜನಕದ ಅಣು ಎಂದು ಬಳಸುತ್ತಿರುವುದು ಆಕಸ್ಮಿಕ ಅಲ್ಲ ಉದ್ದೇಶಪೂರ್ವಕ.) ಈ ಆಮ್ಲಜನಕದ ಅರ್ಧ ಅಣು ಸಸ್ಯಕ್ಕೆ ಅಗತ್ಯವಿಲ್ಲ. ಈ ಆಮ್ಲಜನಕದ ಅರ್ಧ ಅಣು ಇನ್ನೊಂದು ನೀರಿನ ಅಣುವಿನ ದ್ಯುತಿ ವಿಭಜನೆಯಿಂದ ಬರುವ ಆಮ್ಲಜನಕದ ಅರ್ಧ ಅಣುವಿನೊಂದಿಗೆ ವರ್ತಿಸಿ ಪೂರ್ಣವಾಗಿ ಎಲೆಯಿಂದ ತಪ್ಪಿಸಿಕೊಂಡು ಹೊರ ಹೋಗುತ್ತದೆ. ಆದ್ದರಿಂದ ಆಮ್ಲಜನಕದ ಮೂಲವೇ ನೀರು.
ಹಾಗಾದರೆ ಸಸ್ಯಗಳು ನೀರನ್ನೇ ಏಕೆ ಆಮ್ಲಜನಕದ ಮೂಲವನ್ನಾಗಿ ಬಳಸುತ್ತವೆ...? ನೀರನ್ನು ಒಡೆದಾಗ ಅದು ಆಮ್ಲಜನಕ ಬಿಡುಗಡೆ ಒಂದು ಕಡೆಯಾದರೆ ಜಲಜನಕ ಇನ್ನೊಂದು ಕಡೆ ಸಿಗುತ್ತದೆ. ಈ ಜಲಜನಕದ ಬಳಿ ಇಲೆಕ್ಟ್ರಾನ್ ಗಳೇ ಇರುವುದಿಲ್ಲ. ಅಂದರೆ ಅದು ಒಂದು ನಗ್ನ ಪ್ರೋಟಾನ್ ಅಷ್ಟೇ. ಅದರೊಂದಿಗೆ ಬಿಡಿಯಾಗಿ ಇಲೆಕ್ಟ್ರಾನ್ ಗಳು ದೊರೆಯುತ್ತವೆ. ಇವು ಶಕ್ತಿಯ ಲಕೋಟೆಗಳಾದ ATP ಮತ್ತು NADPH ಗಳ ತಯಾರಿಕೆಗೆ ಮುಖ್ಯ. ಇಲ್ಲಿ ಒಂದು ಪ್ರೋಟಾನ್ - ಇಲೆಕ್ಟ್ರಾನ್ ಸರಪಣಿ ಉಂಟಾಗುತ್ತದೆ. ನೀವು ಇಂಗಾಲದ ಡೈಆಕ್ಸೈಡ್ ಅನ್ನು ವಿಭಜಿಸಿದರೆ ನಿಮಗೆ ಸ್ವತಂತ್ರ ಪ್ರೋಟಾನ್ ಗಳು ಸಿಗುವುದಿಲ್ಲ. ಆದ್ದರಿಂದ ನೀರೇ ವಿಭಜಿಸಲ್ಪಡುತ್ತದೆ. ಪ್ರಕೃತಿಗೆ ಯಾರಿಂದ ಏನು ವಸೂಲಿ ಮಾಡಬೇಕು ಎಂಬುದು ಚೆನ್ನಾಗಿ ಗೊತ್ತು.
ಈಗಲಾದರೂ ಒಪ್ಪಿಕೊಳ್ಳುತ್ತೀರಾ ಪ್ರಕೃತಿ ಅತಿದೊಡ್ಡ ವಿನ್ಯಾಸಕಾರ ಮತ್ತು ತಂತ್ರಜ್ಞ ಎಂದು.
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
********************************************