ನಿಷ್ಪಾಪಿ ಸಸ್ಯಗಳು : ಸಂಚಿಕೆ - 99
Thursday, April 24, 2025
Edit
ನಿಷ್ಪಾಪಿ ಸಸ್ಯಗಳು : ಸಂಚಿಕೆ - 99
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ... ಹೇಗಿದ್ದೀರಿ? ಬೇಸಿಗೆಯ ಬಿಸಿಯ ನಡುವೆ ಬಿದ್ದ ನಾಲ್ಕು ಮಳೆಯ ಹನಿಗಳು ಅಲ್ಲಲ್ಲಿ ಮೊಳಕೆಯುಕ್ಕಿಸಿವೆ, ಹಸಿರ ಹಣತೆ ಹಚ್ಚಿ ಉಸಿರತೊಡಗಿವೆ. ಈ ವೇಳೆಗೆ ಸಾಕಷ್ಟು ಗಿಡ ಮರ ಬಳ್ಳಿಗಳು ಸಂತಸದಿಂದ ಕುಣಿಯುತ್ತಿರುವಂತೆ ನಿಮಗನಿಸದಿರದು. ಇಂತಹ ಕಾಲಘಟ್ಟದಲ್ಲಿ ಕೆಂಪೆಲೆಗಳಿಂದ ತುಂಬಿದ ಹಲವಾರು ಗಿಡ ಮರಗಳನ್ನು ನೀವು ಗಮನಿಸಿರಬಹುದು. ಅವುಗಳಲ್ಲಿ ಒಂದು ಕೊರೆಜ್ಜಿ.
ಪಶ್ಚಿಮಘಟ್ಟಕ್ಕೇ ಸ್ಥಳೀಯವಾಗಿರುವ ಕೊರೆಜ್ಜಿ ಎಂಬ ಅಪರೂಪದ ಪುಟಾಣಿ ಮರಗಳು ಭಾರತ ಮತ್ತು ಶ್ರೀಲಂಕಾ ದಲ್ಲಿ ಹರಡಿವೆ. ಕೊರೆಜ್ಜಿ ವಸಂತಕಾಲದಲ್ಲಿ ಕೆಂಪು ಕೆಂಪಾದ ಎಳೆ ಚಿಗುರುಗಳ ಹರಡಿ ನವಿಲಿನಂತೆ ನಲಿಯುತ್ತಿರುವುದನ್ನು ಕಾಣಬಹುದು. ಕನ್ನಡದಲ್ಲಿ ಕೊರಾಜಿ ಕೊಂಕಣಿಯಲ್ಲಿ ಕುರಟಿ, ಸ್ಥಳೀಯವಾಗಿ ಕೊರೆಜ್ಜಿ ಎಂದು ಕರೆಯಲ್ಪಡುವ ಈ ಸಸ್ಯವು ಕುಲನಾಮವಾಗಿ ಇಕ್ಸೋರಾ ಬ್ರಾಚಿಯಾಟಾ (Ixora brachiata) ಎಂಬ ಹೆಸರು ಪಡೆದಿದ್ದು ರುಬೇಸಿ (Rubiaceae) ಕುಟುಂಬದ ಸದಸ್ಯ.
ಕೊರೆಜ್ಜಿ ರೈತರ ತೋಟ, ಗುಡ್ಡ, ನೀರ ಹರಿವಿನ ಬಳಿ, ಬೆಟ್ಟದ ಇಳಿಜಾರು, ತೇವವುಳ್ಳ ನೆರಳಿನ ಸ್ಥಳ ಹೀಗೆ ದಕ್ಷಿಣಭಾರತದ ನಿತ್ಯ ಹರಿದ್ವರ್ಣದ ಕಾಡು, ಅರೆ ನಿತ್ಯಹರಿದ್ವರ್ಣ, ಕೆಲವು ಕಡೆ ಕುರುಚಲು ಕಾಡಲ್ಲೂ ಈ ಕೊರೆಜ್ಜಿ ಬೆಳೆಯಬಲ್ಲದು. ರೈತರ ಸಂಪರ್ಕದ ಭೂಮಿಯಲ್ಲಿ ಬೆಳೆದಿದ್ದರೆ ವರ್ಷ ವರ್ಷವೂ ಸೊಪ್ಪು ಸವರಲ್ಪಟ್ಟು ಏಳಿಗೆಯಾಗುವುದೇ ಇಲ್ಲವೆಂದರೂ ತಪ್ಪಲ್ಲ. ಎಣ್ಣೆಯ ಆಂಶವಿರುವ ಈ ಗಿಡಗಳು ಗಟ್ಟಿಯಾಗಿಯೂ ನಾರಿನಂತೆಯೂ ಇದ್ದು ಇದರ ಸಲಕರಣೆಗಳು ನೀರು ಬಿದ್ದರೂ ಬೇಗನೆ ಹಾಳಾಗುವುದಿಲ್ಲ.ರೈತರು ವೀಳ್ಯದೆಲೆ ಬಳ್ಳಿಯನ್ನು ನೆಟ್ಟಾಗ ಆಸರೆಗಾಗಿ ಇದರ ಗೆಲ್ಲುಗಳನ್ನು ಬಳಸುವರು. ಬಳ್ಳಿಯು ಬೇರೂರಿ ಮೇಲೇರಲು ಇದರ ತೊಗಟೆಯು ಸಹಾಯಕವಾಗಿದೆ. ಹತ್ತು ಮೀಟರ್ ಗಳ ವರೆಗೂ ಬೆಳೆಯಬಹುದಾದ ಈ ಗಿಡದಲ್ಲಿ ಅಂಡಾಕಾರದ ವಿರುದ್ಧ ಎಲೆಗಳ ಜೋಡಣೆಯಿದೆ. ಎಲೆ ತುದಿ ಮೊಂಡಾಗಿದ್ದು ಚೂಪಾದ ತಳ ಹೊಂದಿದೆ. ಎಳೆಯ ಚಿಗುರನ್ನು ಇತರ ಕೆಲವು ಜಾತಿಯ ಸಸ್ಯಗಳ ಚಿಗುರುಗಳ ಜೊತೆಗೆ ಚಟ್ನಿ, ಸಾರು ಮಾಡಿ ಒಗ್ಗರಣೆ ಹಾಕಿದರೆ ಹಸಿವಿರದಿದ್ದರೂ ಎರಡು ತುತ್ತು ಬಾಯಿಗಿಡಬೇಕು!.
ಕೊರೆಜ್ಜಿ ಎಂಬ ಈ ನಿಷ್ಪಾಪಿ ಸಸ್ಯದ ಶಾಖೆಗಳ ತುದಿಗಳಲ್ಲಿ ಮೂಡುವ ಕೆಂಪು ಕಡ್ಡಿಗಳಲ್ಲಿ ಗುಂಪು ಗುಂಪಾಗಿ ಬಿಳಿ ಬಣ್ಣದಲ್ಲಿ ಅರಳುವ ನಾಲ್ಕು ಕಿರಿದಳಗಳ ಹೂಗಳಿಗೆ ಹಿತವಾದ ಸುವಾಸನೆಯಿದೆ. ಆಗ ಹಾವುಗಳೂ ಬರುತ್ತವೆ ಎಂಬ ನಂಬಿಕೆಯಿದೆ.. ಹೂ ಬಿಡುವ ಕಾಲದಲ್ಲಿ ಕೆಲವರಿಗೆ ಶೀತ, ತಲೆನೋವೂ ಕಾಣಿಸುವುದಿದೆ. ಹೂವಿನ ಕಾಲ ಮುಗಿದ ಬಳಿಕ ಪುಟಾಣಿ ಕಾಯಿಗಳು ಕಾಣಿಸಿಕೊಳ್ಳುತ್ತವೆ. ಗೋಳಾಕಾರದ ಕಾಯಿಗಳು ಮಾಗಿದಾಗ ಕಪ್ಪಾಗಿ ಕ್ರಿಮಿ ಕೀಟಗಳಿಗೆ, ಪಕ್ಷಿಗಳಿಗೆ ಉಣಿಸು ನೀಡಿ ಒಂದೆರಡು ಬೀಜಗಳನ್ನು ಭೂಮಿಗೆ ಚೆಲ್ಲಿದರೂ ಗಿಡವಾಗುಳಿಯುವುದು ಬಲು ಅಪರೂಪ. ಮಧುಮೇಹ, ಉರಿಯೂತ, ಸೂಕ್ಷ್ಮ ಜೀವಿಗಳ ಸೋಂಕು, ಖಿನ್ನತೆ, ಮೂತ್ರವರ್ಧಕ, ಚರ್ಮರೋಗ, ಕ್ಯಾನ್ಸರ್ ಮೊದಲಾದ ಚಿಕಿತ್ಸೆಯಲ್ಲಿ ಬಳಕೆಯಲ್ಲಿದೆ.
ಇಂದು ಈ ಕೊರೆಜ್ಜಿ ಎಂಬ ಸಸ್ಯ ಅಳಿವಿನಂಚಿನಲ್ಲಿದೆ. ಇದರ ಬಗ್ಗೆ ಹೆಚ್ಚಿನ ಅಧ್ಯಯನಗಳಾಗಿಲ್ಲ. ಪೊದೆಯಂತೆ ಬೆಳೆವ ಕೊರೆಜ್ಜಿ ಸಸ್ಯಾವರಣದಲ್ಲಿ ಸೇಂದ್ರೀಯ ಮಣ್ಣಿಗೆ ಕಾರಣವಾಗುತ್ತದೆ. ಹೆಚ್ಚಿನ ತೇವಾಂಶ, ಹಿತವಾದ ಸೂರ್ಯಕಿರಣ, ಉತ್ತಮ ನೆಲದ ಸಾರದಿಂದ ಸಮೃದ್ಧವಾದ ಸಸ್ಯ ಸಂಪತ್ತನ್ನು ನಿರೀಕ್ಷಿಸಬಹುದು. ಇದು ಮಾನವನ ಸ್ವಾರ್ಥಕ್ಕೆ ಬಲಿಯಾಗದಿದ್ದರೆ ಮಾತ್ರ ಸಾಧ್ಯ. ಮಕ್ಕಳೇ, ನಾವು ಈ ದಿಕ್ಕಿನತ್ತ ಹೆಜ್ಜೆ ಇರಿಸೋಣ,
ಸರಿ ಮಕ್ಕಳೇ... ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗುತ್ತೇನೆ.. ನಮಸ್ಕಾರ.
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************