ನಾನು ಓದಿದ ಪುಸ್ತಕ : ಸಂಚಿಕೆ - 05
Thursday, April 24, 2025
Edit
ನಾನು ಓದಿದ ಪುಸ್ತಕ : ಸಂಚಿಕೆ - 05
ಪುಸ್ತಕ : ಕೊಳ್ಳ
ಓದು ಮತ್ತು ಬರಹ : ಸುಭಾಷ್ ಹೇಮಣ್ಣಾ ಚವ್ಹಾಣ
ಶಿಕ್ಷಕರು,
ಸ.ಹಿ.ಪ್ರಾ.ಶಾಲೆ. ಮಂಜುನಾಥ ನಗರ,
ಹುಬ್ಬಳ್ಳಿ ಶಹರ, ಧಾರವಾಡ ಜಿಲ್ಲೆ.
Mob : +91 79750 26724
೨೦೨೫ರ ಎಪ್ರಿಲ್ ೨೩ ರಂದು ಆಚರಿಸುವ ವಿಶ್ವ ಪುಸ್ತಕ ದಿನ ಮತ್ತು ಕೃತಿಸ್ವಾಮ್ಯ ದಿನದ ನಿಮಿತ್ತ ಡಾ. ಕೆ.ಬಿ.ಪವಾರ ಅವರು ಬರೆದಿರುವ ಕೊಳ್ಳ ಎಂಬ ಕಾದಂಬರಿ ಕೃತಿಯ ಅವಲೋಕನ ಲೇಖನ
ಬಂಜಾರಾ ಜನಾಂಗದ ಆಳ - ಅಗಲ - ಎತ್ತರದ ಗಮ್ಯ ತಿಳಿದಿರುವ ಅದೇ ಜನಾಂಗದಲ್ಲಿ ಪ್ರತ್ಯಕ್ಷ ಸಾಕ್ಷಿ ಭೂತವಾಗಿ ಬದುಕಿ ತನ್ನ ಜನಾಂಗದ ಶ್ರಮ ಸಂಸ್ಕೃತಿಯ ವಿಶಿಷ್ಟತೆಯನ್ನು ಪದ್ಯ ಮತ್ತು ಗದ್ಯ ಮಿಶ್ರಿತ ಶಿಷ್ಟ ಹಾಗೂ ದೇಶಿ ಭಾಷಾ ಸೊಗಡು ಎರಡನ್ನು ಸಮ್ಮಿಶ್ರ ಮಾಡಿ ಬರೆಯಲಾದ 'ಕೊಳ್ಳ' ವಿಶಿಷ್ಟ ಕಾದಂಬರಿಗಳಲ್ಲಿ ಡಾ. ಕೆ.ಬಿ.ಪವಾರ ಇವರು ಬರೆದಿರುವ ಕಾದಂಬರಿಯು ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸ ಸಂಚಲನವನ್ನು ಉಂಟುಮಾಡಿದೆ. ಉತ್ತಮ ಗುಣಮಟ್ಟದ ೭೦ ಜಿಎಂ ಮ್ಯಾಪಲಿಥೋ ಕಾಗದವನ್ನು ಬಳಸಿ ೫೭೩ ಪುಟಗಳಲ್ಲಿ, ಬಂಜಾರಾ ಜನಾಂಗದ ಮೂಲ ಕುಲಕಸುಬು ಪಶು ಸಂಗೋಪನೆ ಮತ್ತು ಕಾಡು - ಮೇಡಿನ ಅಲೆದಾಟದ ಮೂಲ ನಿವಾಸದ ಹಸಿರು ಪರಿಸರದ ಮುಖಪುಟ ಆಕರ್ಷಣೀಯ ಚಿತ್ರದೊಂದಿಗೆ ಓದುಗರನ್ನು ಕೈಬೀಸಿ ಕರೆಯುತ್ತಿರುವ ಮಹಾ ಕಾದಂಬರಿ ಕೊಳ್ಳ ಸದಾ ಸಂಚಲನವನ್ನು ಉಂಟುಮಾಡಬಲ್ಲದು.
ಇಳೆಗೆ ಎಳೆತಂದು ಬೆಳೆಸಿದ ಬಾಳೆನೆಳೆಗೆ ಎಂಬ ಅರ್ಪಣಾ ನುಡಿಯೊಂದಿಗೆ ಓದುಗನ ಕೈ ಸೇರಿರುವ ಈ ಕಾದಂಬರಿಯನ್ನು ಸಾಮರಸ್ಯ ತತ್ವದ ಕಣ್ವ ಪ್ರಕಾಶನದ ಎಂ. ಆರ್. ಗಿರಿರಾಜು ಪ್ರಕಟಿಸಿರುವುದು ಅಭಿನಂದನಾರ್ಹ. ೨೦೨೩ರಲ್ಲಿ ಜನಾರ್ಪಣೆಗೊಂಡಿರುವ, ಗೋರಮಾಟಿ ಜನಾಂಗದ ಬಹುಮುಖ ದರ್ಶನ ತೆರೆದಿಡುವ ಕಾದಂಬರಿಯ ಬೆಲೆ ೫೮೨ರೂಗಳು. ಬಂಜಾರ ಜನರೆಲ್ಲರು ಕೊಂಡೋದು ಕೃತಿ ಮಾತ್ರವಲ್ಲ ಆ ಜನಾಂಗದ ಮಹಿಮೆ - ಮಹತ್ವ ತಿಳಿಯಲು ಬಹು ದಿನದಿಂದ ಹಂಬಲಿಸುತ್ತಿರುವ ಪ್ರತಿಯೊಬ್ಬ ಕನ್ನಡಿಗರಾದಿಯಾಗಿ ಓದಲೇಬೇಕಾದ ಕೃತಿಯಾಗಿದೆ. ಹಿರಿಯ ಸಂಸ್ಕೃತಿ ಚಿಂತಕ ಡಾ. ಬಾಳಾಸಾಹೇಬ ಲೋಕಾಪುರರ ಮುನ್ನುಡಿಯಾದ 'ಶುಭ ನುಡಿಯೆ ಶಕುನದ ಹಕ್ಕಿ', ಪ್ರಾಧ್ಯಾಪಕ ಸಾಹಿತಿಗಳಾದ ಡಾ. ಶಾಂತನಾಯಕರ ಬೆನ್ನುಡಿ, ಹಿರಿಯ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಸಣ್ಣರಾಮರ 'ಚಲನೆಯ ಸಂಕಥನ'! ಎಂಬ ಆಶಯ ನುಡಿ ಹಾಗೂ ವಿಶ್ರಾಂತ ಕುಲಪತಿಗಳಾದ ಪ್ರೊ. ಡಿ. ಬಿ. ನಾಯಕರವರು ಬರೆದಿರುವ ಹಿನ್ನುಡಿ - ಕನ್ನಡಿಗಳು ಕೊಳ್ಳದ ಹಿರಿಮೆ - ಗರಿಮೆಯನ್ನು ಎತ್ತಿ ಹಿಡಿದು ಕನ್ನಡ ನಾಡಲ್ಲಿ ಕನ್ನಡಿಸುತ್ತಿದೆ. ಮರೆತು ಹೋಗದೆ ಮಮತೆಯಿಂದ ಓದಿ ಸಂತೃಪ್ತಿ ಭಾವದಿಂದ ತಮ್ಮ ೮೩ ರ ಇಳಿವಯಸ್ಸಿನಲ್ಲೂ ಹಿರಿದಾದ ಕೃತಿರತ್ನವನ್ನು ನೀಡಿದ ಲೇಖಕರಿಗೆ ಕೃತಜ್ಞತೆಯನ್ನು ಸಲ್ಲಿಸಲು ಮನವು ಹಿನ್ನಡೆ ಹಾಕದು.
ಬಿಟ್ಟಂದೀವಿಯೆ ನಮ್ಮ ಹುಟ್ಟೂರನ
ಜನ್ಮ ಕೊಟ್ಟೂರನ | ಧನ್ಯವಿದ್ದೂರನ ।
ಆ ನಾಡಿನ ಮಣ್ಣು | ಹೊನ್ನ ಹುಡಿಯಾಗಿತ್ತು |
ಧೈರ್ಯ ನೀಡಿದ ಮುತ್ತು । ಗೆಲುವ ಪಡೆದಿಹ ಗತ್ತು |
ಮಕ್ಕೊಳಗ ಮಣಿಯೆಣಿಸಿ । ಕಣೋಳಗ ಕನಸುಣಿಸಿ । ಎಣೆಯಿಲ್ಲದಾ ಜಯ ಗಳಿಸಿದ್ದೆವು । ರಾಜ್ಯಾ ಬಯಸಿದ್ದೆವು ।
ನಮ್ಮವರೆ ನಮಗಿರದೆ | ಜಯವು ಬೆನ್ನಿಗೆ ಬರದೆ | ವೈರಿಯನೆದರಿಸದೆ ಬಂದೇವಿಯೆ । ಮುಖದಿರುವಿ ಬಂದೇವಿಯೆ ।
ಅಡವಿ ಹಿಡಿದೇವಿಯೆ ಹೀಂಗ ಹೊಂಟೇವಿಯೆ ।
ಗಿರಿಕಂದರಗಳ ಆ ನಿಟ್ಟಿನಿಂದ ಇಂಪಾದ ಗುಂಜನವು ಆ ಬಂಜಾರರ ತಂಡದಿಂದ ಹೊರಟು ಅಲೆ-ಅಲೆಗಳಾಗಿ ಇಡೀ ಪರಿಸರವನ್ನು ತುಂಬಿತ್ತು. ಬಂಜಾರರ ತಂಡವು ತನ್ನ ದನಕರುಗಳ ಸಂಪತ್ತಿನೊಂದಿಗೆ ಆ ಪರ್ವತ ಪ್ರದೇಶದ ಇಳಿಜಾರಿನ ಜಾಡಿನಲ್ಲಿ, ಹಸಿರು ವನರಾಜಿಯ ಮಧ್ಯೆ ಮೆಲ್ಲ ಮೆಲ್ಲನೆ ಇಳಿದು ಬರುತ್ತಿತ್ತು. ಹೋರಿಗಳ ಕೊರಳ ಗಂಟೆಗಳ ನಿನಾದವಲ್ಲದೆ ಮುಂದೆ ಹೊರಟವನ ಕೊಳಲ ಶೃತಿಯು ಹೆಂಗಳೆಯರ ಹಾಡಿನೊಂದಿಗೆ ಮಿಳಿತವಾಗಿ ಆ ಪರಿಸರದಲ್ಲಿ ಕರ್ಣಾನಂದವನ್ನುಂಟು ಮಾಡುತ್ತಿತ್ತು. ಆ ಕೊಳಲಿಗೆ ದನಿಗೊಡಲಿಕ್ಕಾಗಿಯೋ, ಪೈಪೋಟಿಗಾಗಿಯೋ ಕೋಗಿಲೆಗಳೂ ಕೂಗುತ್ತಿದ್ದವು. ತಾವೇನು ಕಡಿಮೆಯೆನ್ನುವಂತೆ ಗಿಳಿ, ಗೊರವಂಕ, ಕೆಂಬೂತ, ಮೈನಾ ಮೊದಲಾದ ಹಕ್ಕಿ-ಪಿಕ್ಕಿಗಳೂ ದನಿಗೂಡಿಸುತ್ತಿದ್ದವು. ಆ ತಂಡದ ಮುಂದೆ ಮಧ್ಯ ಮತ್ತು ಆಜೂಬಾಜೂ ಐದಾರು ಧಾಂಡಿಗರು ತಮ್ಮ ಕೋಲುಗಳನ್ನು ಹೆಗಕ ಮೇಲೆ ಹಾಕಿಕೊಂಡು ದನಗಳನ್ನು ನಿಭಾಯಿಸುತ್ತ ನಡೆದಿದ್ದರು...... ಹೀಗೆ ಕೊಳ್ಳದ ಪ್ರಾರಂಭವು ಓದುಗನಲ್ಲಿ ಆಸಕ್ತಿ ಕೆರಳಿಸಿ, ಕುತೂಹಲ ಹುಟ್ಟಿಸಿ ಆ ಬಂಜಾರ ಬುಡಕಟ್ಟು ಜನಾಂಗದ ಮಹೋನ್ನತಿಯನ್ನು ಏಳು - ಬೀಳುಗಳ ನಡುವೆ ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳಲು ಶ್ರಮಿಸುತ್ತ ನಾಲ್ಕೈದು ತಲೆಮಾರುಗಳ ಜೀವನ ಚಿತ್ರಣವನ್ನು ಬಿಚ್ಚಿಡುತ್ತಾ ಪಾತ್ರಗಳ ಹರಿವನ್ನು ವಿಶಾಲಗೊಳಿಸುತ್ತಾ ಸಾಗುವ ಕೊಳ್ಳವು....... 'ಗೋ ಧನ್ ನಂಬಿ ಸಾಕಿಕೊಂತ ಕೊಳ್ಳಾ ಕೊಳ್ಳಾ ತಿರುಗಾಡಿಕೊಂತ ಬಂದಂತಾ ಈ ಗೋರಮಾಟಿಗಳಿಗೆ ಈ ಕೊಳ್ಳದಾಗ ನೌಕರೀ ಮಾಡೂ ಬಾಗ್ಯಾ ಕೊಟ್ಟಿಯವ್ವಾ ಮರ್ಯಾಮಾ. ಇದು ನಿನ್ನ ದೇಣ (ಕೊಡುಗೆ). ಗೋರಮಾಟಿಗಳ ರಕ್ಷಣಾ ಮಾಡತೀನೆಂತ ಹೇಳಿದ್ದಿ ಸೇವಾಭಾಯಾ ಇದು ನಿನ್ನ ಕರುಣಾ. ಜೈ ಮರ್ಯಾಮಾ, ಜೈ ಸೇವಾಲಾಲ್' ಎಂದನು ಹೇಮಲಾ. ಎಂಬ ಅಂತ್ಯೋಕ್ತಿಯೊಂದಿಗೆ ಕಾದಂಬರಿಗೆ ಪೂರ್ಣವಿರಾಮ ಇಟ್ಟು. ಭಾರತೀಯ ವಿಶಿಷ್ಟ ಪರಂಪರೆಯಲ್ಲಿ ಒಂದು ಬಹು ಮೂಲ್ಯ ಜನಪದ ಸಂಸ್ಕೃತಿಯ ಜನಾಂಗವಾದ ಬಂಜಾರ (ಗೋರಮಾಟಿ) ಗಳ ಜೀವನ ಯಶೋಗಾಥೆಯ ತಿರುವು - ಅರಿವುಗಳ ಚಿತ್ರಣವನ್ನು ತೆರೆದಿಡುತ್ತಾ ಬಹುಮೂಲ್ಯ ಕಾದಂಬರಿಯಾಗಿ ಕನ್ನಡ ಸಾರಸ್ವತ ಲೋಕದಲ್ಲಿ ಕಣ್ಸೆಳೆದಿದೆ.
ಡಾ.ಕೆ.ಬಿ.ಪವಾರ ಅವರು ತಮ್ಮ ಕಾದಂಬರಿಗೆ 'ಕೊಳ್ಳ' ಎಂಬ ಶಿರೋನಾಮೆಯನ್ನು ಕೊಟ್ಟಿದ್ದಾರೆ. ಕೊಳ್ಳವೆಂದರೆ ನೀವು ನಾವು ಬಲ್ಲಂತೆ ತಗ್ಗಾದ ಪ್ರದೇಶ ಎಂಬ ಅರ್ಥವನ್ನು ಕೊಡುತ್ತದೆ. ನಿಜಕ್ಕೂ ಈ ಕಾದಂಬರಿಯನ್ನು ಓದಿದವರಿಗೆ ಈ ಶಿರೋನಾಮೆಯು ಧ್ವನಿಪೂರ್ವಕವಾಗಿದೆ ಎಂದೆನಿಸದಿರದು. ಕೊಳ್ಳವೆಂಬುದು ಬಂಜಾರ ಸಮುದಾಯವನ್ನೂ ಧ್ವನಿಸುತ್ತದೆ. ನೀರು ಎತ್ತರದ ಪ್ರದೇಶದಿಂದ ತಗ್ಗಾದ ಪ್ರದೇಶಕ್ಕೆ ಹರಿಯುತ್ತದೆ. ತಗ್ಗ ಎಂಬುದು ವಿನಯವಂತಿಕೆಯ ಸೂಚಕವೂ ಹೌದು. ಉತ್ತರ ಭಾರತದಿಂದ ಎತ್ತುಗಳ ಮೇಲೆ ದವಸ ಧಾನ್ಯಗಳನ್ನು ಹೇರಿಕೊಂಡು ದಕ್ಷಿಣ ಭಾರತದ ಕಡೆಗೆ ವ್ಯಾಪಾರ ಮಾಡುತ್ತ ಬಂದ ಬಂಜಾರರು ತಾವು ಹೋದ ಕಡೆಯ ಅನುಭವವನ್ನು ಪಡೆದು ತಮ್ಮ ಸಾಂಸ್ಕೃತಿಕ ಆಚಾರ-ವಿಚಾರಗಳನ್ನು ಸಂರಕ್ಷಿಸಿಕೊಳ್ಳುತ್ತ ಬಂದದ್ದನ್ನು 'ಕೊಳ್ಳ' ಪದವು ತನ್ನೊಳಗೆ ಗರ್ಭೀಕರಿಸಿಕೊಂಡಿದೆ. ಅಷ್ಟೇ ಅಲ್ಲದೆ ನಿರಂತರ ಸಂಗ್ರಹಣೆ, ಫಲವತ್ತತೆಯ ಸೂಚಕವಾಗಿ 'ಕೊಳ್ಳ' ಪದವು ಸಂಕೇತಿಸಿಕೊಳ್ಳುತ್ತದೆ. ಬಂಜಾರ ಸಮುದಾಯವು ನಿರಂತರ ಚಲನಶೀಲವಾದುದು. ಅದು ಎಂದೂ ನಿಂತಲ್ಲೇ ನಿಲ್ಲದೆ ಕಾಲದ ಬದಲಾವಣೆಗೆ ಹೊಂದಿಕೊಳ್ಳುತ್ತ ಅನುಭವಗಳನ್ನು ವಿಸ್ತರಿಸಿಕೊಳ್ಳುತ್ತ ಬಂದಿರುವುದನ್ನು ಹತ್ತಿರದಿಂದ ಕಂಡವರು ಗಮನಿಸಿರುತ್ತಾರೆ. ಎಂಬುದನ್ನು ಡಾ. ಸಣ್ಣರಾಮರವರು ತಮ್ಮ ಆಶಯ ನುಡಿ ಚಲನೆಯ ಸಂಕಥನ ಎಂದು ವಿವರಿಸಿರುವುದು ಕೃತಿಯ ಚೆಲುವನ್ನು ಮತ್ತಷ್ಟು ಹೆಚ್ಚಿಸಿದೆ. ಬಂಜಾರ ಜನಪದ ಸಿರಿ ಸಂಸ್ಕೃತಿಯ ಮಹದುಪಕೃತಿಯನ್ನು ಒತ್ತಿ ಹೇಳಿದಂತಿದೆ.
'ಕೊಳ್ಳ' ಕಾದಂಬರಿಯು ಬಂಜಾರರ ಬದುಕನ್ನು ಅನಾವರಣಗೊಳಿಸುವ ಸಂಕಥನವಾಗಿರುತ್ತದೆ. ರಾಜಸ್ಥಾನ ಮೂಲದವರಾದ ಇವರು ಬೇರೆ ಬೇರೆ ಕಾರಣಗಳಿಂದಾಗಿ ಕಾಡು ಮೇಡುಗಳನ್ನು ಆಶ್ರಯಿಸುತ್ತ ಉತ್ತರದ ಕಡೆಯಿಂದ ದಕ್ಷಿಣಕ್ಕೆ ಬಂದಿರಬಹುದಾದ ಹಿನ್ನೆಲೆ ಹೊಂದಿರುವ ಈ ಕಾದಂಬರಿಯು ಲಂಬಾಣಿ ಸಂಭಾಷಣೆ, ಕಸೂತಿ, ನಾಜ್, ವಾಜಾ ಮುಂತಾದ ಸಂಸ್ಕೃತಿಯನ್ನು ನವಿರಾಗಿ ಅನಾವರಣಗೊಳಿಸುತ್ತಾ ಹೋಗುತ್ತದೆ. ಕಾಲ ಬದಲಾದಂತೆ ಬದಲಾವಣೆಯಾಗುತ್ತಿರುವ ಬದುಕಿನ ಆಯಾಮಗಳ ಒಳಸುಳಿಗಳನ್ನು ಹೊರಹಾಕುತ್ತದೆ. ಮಧ್ಯಪ್ರದೇಶದಲ್ಲಿ ಆರಂಭವಾಗುವ ಈ ಕಾದಂಬರಿಯಲ್ಲಿ ವಿದೇಶೀಯ ಮೊಘಲರ ಆಡಳಿತ ಮುಗಿದ ಮೇಲೆ ಬ್ರಿಟಿಷರು ಭಾರತವನ್ನು ಆಕ್ರಮಿಸಿದ ನಂತರದ ಕಾಲಘಟ್ಟದ ಚರಿತ್ರೆಯನ್ನು ಹಿಡಿದಿಡುವ ಪ್ರಯತ್ನ ಮಾಡಲಾಗಿದೆ, ವಸಾಹತುಶಾಹಿ ಆಡಳಿತ ಕಾಲದ ಕತೆ ಮುಂದುವರೆಯುತ್ತಾ ಬಂಜಾರರು ಮತ್ತು ಬ್ರಿಟಿಷರು ಮುಖಾ-ಮುಖಿಯಾಗುವ ಪರಿಸ್ಥಿತಿಯನ್ನು, ಮತ್ತು ವಲಸೆಗಾರರನ್ನಾಗಿಸುವ ಪರಿಯನ್ನು ಕಾದಂಬರಿ ಸಮರ್ಥವಾಗಿ ಬಿಚ್ಚಿಡುತ್ತದೆ.
ಡಾ. ಪವಾರ ಅವರು ತಮ್ಮ ಕಾದಂಬರಿಯಲ್ಲಿ ಬಂಜಾರರ ಹಾಡುಗಳನ್ನು ಯಥಾವತ್ತಾಗಿ ದಾಖಲಿಸುವುದರ ಜೊತೆಗೆ ಅವುಗಳನ್ನು ಕನ್ನಡಕ್ಕೆ ಅನುವಾದ ಮಾಡಿ ಇಟ್ಟಿರುವದು ಒಂದು ವಿಶೇಷವಾಗಿದೆ. 'ಕೊಳ್ಳ' ಕಾದಂಬರಿಯು ಮೂರು ತಲೆಮಾರಿನ ಕತೆಯಾಗಿದೆ. ತಾಂಡಾದಲ್ಲಿ ನಡೆಯುವ ಅನೇಕ ಘಟನೆಗಳನ್ನು ಹೆಣೆಯುತ್ತ ಹೋಗುವುದರ ಜೊತೆಗೆ ಬಂಜಾರ ಭಾಷೆ, ಸಂಸ್ಕೃತಿ, ರೀತಿ, ಸಂಪ್ರದಾಯ, ಮದುವೆ, ಮರಣ, ಜನನ ಮತ್ತು ಹಬ್ಬ ಮುಂತಾದವುಗಳನ್ನು ಬಿಚ್ಚಿಡುವ ಈ ಕಾದಂಬರಿಯು ಬಂಜಾರಾ ಸಮುದಾಯದ ಅಧ್ಯಯನಕ್ಕೆ ಮತ್ತೊಂದು ಆಯಾಮವನ್ನು ಒದಗಿಸುತ್ತದೆ. ಎಂಬುದನ್ನು ಪೂರ್ಣ ಖಚಿತತೆಯಿಂದ ತಮ್ಮ ಬೆನ್ನುಡಿಯಲ್ಲಿ ಹೇಳಿರುವ ಡಾ. ಶಾಂತನಾಯಕರವರ ನುಡಿ ಗುಚ್ಛ ಲಂಬಾಣಿ ಜನಾಂಗದ ಅಸ್ಮಿತೆಯ ಪ್ರತೀಕವಾಗಿದೆ ಎನ್ನಬಹುದು.
ಕಾದಂಬರಿಯಲ್ಲಿ ಬರುವ ಮುಖ್ಯ ಪಾತ್ರಗಳಾದ ಆಮಗೋತ ಕುಟುಂಬದವರು, ಧಂಜ್ಯಾ ನಾಯಕ್ ಕುಟುಂಬದವರು, ಸೋಮಲಾ ನಾಯಕ್, ಭೋಜ್ಯಾ ನಾಯಕ, ಕುಂವರ ನಾಯಕ ಕುಟುಂಬದವರು, ಮಂಗಳಿ, ಪೀರು, ರಾಮ್ ಭಟ್ ಗ್ರಾಮಪುರೋಹಿತ ಮುಖ್ಯ ಅತ್ರಗಳೊಂದಿಗೆ ಗದಗ ಡಂಬಳ ಸಂಸ್ಥಾನಮಠ ಹೀಗೆ ಬರುವ ನೂರಾರು ಸಣ್ಣ ಪುಟ್ಟ ಪಾತ್ರ ವರ್ಗದ ಪರಿಚಯವನ್ನು ಕಾದಂಬರಿಯ ಪ್ರವೇಶಿಕೆಯ ಮುನ್ನವೆ ಚಿತ್ರಿಸಿರುವುದು ಮಹಾ ಕಾದಂಬರಿ ಓದುವಾಗ ಆಗುವ ಗೊಂದಲಗಳಿಗೆ ಪರಿಹಾರವನ್ನು ಒದಗಿಸಿರುವುದು ಲೇಖಕರ ದೂರದೃಷ್ಟಿ ಫಲಗಾಣ್ಕೆ ಎಂದು ಪ್ರಶಂಸಿಸಬಹುದು. ಇದು ಮಾತ್ರವಲ್ಲದೆ ಕಾದಂಬರಿಯ ಕೊನೆಗೆ ಇಲ್ಲಿ ಬರುವ ಬಂಜಾರಾ ಭಾಷೆಯ ಪದಗಳ ಅರ್ಥಸೂಚಿಯನ್ನು ಕನ್ನಡದಲ್ಲಿ ಬರೆದಿರುವುದು ಸಹ ಓದುಗನಿಗೆ ಆಗುವ ಕ್ಲಿಷ್ಟಕರವಾದ ಶಬ್ಧಗಳಿಗೆ ಪರಿಹಾರ ಒದಗಿಸಿದೆ.
ಶುಭ ನುಡಿಯೆ ಶಕುನವ ಹಕ್ಕಿ
ಕನ್ನಡದಲ್ಲಿ ಅಲೆಮಾರಿ ಜನಾಂಗದ ಪೂರ್ಣ ಪ್ರಮಾಣದ ಕಾದಂಬರಿಗಳು ಬಹಳ ಕಡಿಮೆ. ನಾಗರಿಕ ಜಗತ್ತಿನ ಕಣ್ಣಿಗೆ ಕಾಣದ ಒಂದು ಅಲೆಮಾರಿ ಜನಾಂಗವಾದ ಬಂಜಾರರ ನಿತ್ಯದ ಬದುಕು, ಬದುಕಿನ ಬವಣೆಗಳು. ಅವರ ಸಂಸ್ಕೃತಿ, ಆಚಾರ ವಿಚಾರಗಳು, ಜೀವನ ವಿಧಾನ ಇವೆಲ್ಲವುಗಳನ್ನು ಕೇಂದ್ರವಸ್ತುವನ್ನಾಗಿಸಿಕೊಂಡು ಅಮೂಲಾಗ್ರವಾಗಿ ಕಟ್ಟಿಕೊಡಲು ಈ 'ಕೊಳ್ಳ' ಕಾದಂಬರಿಯು ಪ್ರಯತ್ನಿಸುತ್ತದೆ. 'ಕೊಳ್ಳ' ಕಾದಂಬರಿಯು ಬಂಜಾರಾ ಜನಾಂಗದ ಜೀವನ ವಿಧಾನವನ್ನು ಸಂಪೂರ್ಣವಾಗಿ ಕಟ್ಟಿಕೊಡುವ ಕಾದಂಬರಿಯಾಗಿದೆ. ಕಾದಂಬರಿಕಾರರಾದ ಡಾ. ಕೆ.ಬಿ. ಪವಾರ ಅವರು ನನಗೆ ಮುಖತಃ ಪರಿಚಿತರಲ್ಲ. ಕವಿ ಮಿತ್ರರಾದ ಡಾ.ಧರಣೇಂದ್ರ ಕುರಕರಿಯವರು ಈ ಕಾದಂಬರಿಯ ಹಸ್ತ ಪ್ರತಿಯನ್ನು ಕಳಿಸಿದರು. ಲೇಖಕರು ವೈದ್ಯರೆಂತಲೂ ಅವರು ಈಗಾಗಲೇ ಹತ್ತಾರು ಕೃತಿಗಳನ್ನು ಪ್ರಕಟಿಸಿದ್ದಾರೆಂತಲೂ ಹೇಳಿದರು. ಈ ಕಾದಂಬರಿಯನ್ನು ಓದಿದ ಮೇಲೆ ಲೇಖಕರು ಬಹುಶಃ ಬಂಜಾರ ಸಮುದಾಯಕ್ಕೆ ಸೇರಿದವರಾಗಿರಬಹುದೆಂದು ನನಗನ್ನಿಸಿತು. ಏಕೆಂದರೆ ಇಷ್ಟೊಂದು ಚೆಲುವಾಗಿ ಅಲೆಮಾರಿ ಸಮುದಾಯದ ರೀತಿ-ನೀತಿಗಳನ್ನು ಕಟ್ಟಿಕೊಡಬಹುದಾದರೆ ಆ ಸಮುದಾಯದ ನಿಕಟ ಪರಿಚಯ ಇರಬೇಕಾಗುತ್ತದೆ. ಈ ಕಾದಂಬರಿಯಲ್ಲಿ ಮತ್ತೆ ಮತ್ತೆ ವಿವರಣೆಗೆ ಸಿಕ್ಕುವ ಬಂಜಾರ ಜನಾಂಗದ ವಿಧಿ ವಿಧಾನಗಳು, ಜೀವನ ಶೈಲಿಗಳು ಇಲ್ಲಿ ಢಾಳಾಗಿ ಬಂದಿವೆ. ಓದುಗರ ಅರಿವಿನ ವಿಸ್ತಾರದೊಂದಿಗೆ ಹೊಸ ಜಗತ್ತನ್ನು ನೋಡುವ ಖುಷಿಯನ್ನು ಓದುಗರಿಗೆ ಕಟ್ಟಿಕೊಡುವಲ್ಲಿ ಈ ಕಾದಂಬರಿಯು ಸಫಲವಾಗಿದೆ.
ಕನ್ನಡದಲ್ಲಿ ಬಂಜಾರಾ ಜನಾಂಗದ ಕುರಿತಾಗಿ ಹಲವಾರು ಕಾದಂಬರಿಗಳು, ಕತೆಗಳು ಬಂದಿವೆ. ಅವೆಲ್ಲ ಗಮನ ಸೆಳೆಯುವ ಕೃತಿಗಳೇ ಆಗಿವೆ. ಶಾಂತನಾಯಕ ಶಿರಿಗಾನಹಳ್ಳಿ ಅವರ 'ತಾಂಡಾ' 'ಗೋರಮಾಟಿ' ಮತ್ತು 'ಮಲಾಣ' ಎಂಬ ಮೂರು ಕಾದಂಬರಿಗಳು, ಕೃಷ್ಣಾ ನಾಯಕ ಅವರ 'ಲದೇಣಿಯಾ' ಕಥಾ ಸಂಕಲನ, ಬಿ.ಟಿ.ಲಲಿತಾ ನಾಯಕ ಅವರ 'ನಮ್ ರೂಪ್ಲಿ', ಇಂದುಮತಿ ಲಮಾಣಿ ಅವರ 'ಗೋರ', ಮಲ್ಲಿಕಾರ್ಜುನ ಹಿರೇಮಠ ಅವರ 'ಹವನ' ಕಾದಂಬರಿ ಮತ್ತು ಇದೇ ಲೇಖಕರ 'ಮಳಾವ್-ನಸಾಬ-ಪಂಚಾತ್' ಕಾದಂಬರಿ ಕೃತಿಗಳು ಬಂದಿವೆ. ಇಷ್ಟಾಗಿಯೂ ಕೂಡಾ 'ಈ ಜನಾಂಗದ ಬಗ್ಗೆ ನನಗೆ ಇನ್ನೂ ಹೇಳುವದಿದೆ' ಎನ್ನುವ ಹಾಗೆ 'ಕೊಳ್ಳ' ಕಾದಂಬರಿಯಲ್ಲಿ ಉತ್ಸಾಹದಿಂದ ಲೇಖಕರು ಕತೆ ಹೇಳಿದ್ದಾರೆ.
'ಕೊಳ್ಳ' ಕಾದಂಬರಿಯು ಥೀಮಾಟಿಕ್ ಆಗಿರುವದರಿಂದ ಸಹಜವಾಗಿಯೇ ಇಲ್ಲಿಯ ವಿವರಗಳು ಹೆಚ್ಚು ಅಥೆಂಟಿಕ್ ಎನ್ನಿಸುತ್ತವೆ. ಬಂಜಾರಾ ಸಮುದಾಯದ ಅದರಲ್ಲೂ ಕಾಡು ಮೇಡುಗಳಲ್ಲಿ ತಮ್ಮ ಜನ ಮತ್ತು ಜಾನುವಾರುಗಳು ಹಾಗೂ ಸರಕು ಸರಂಜಾಮುಗಳನ್ನು ಕಟ್ಟಿಕೊಂಡು ಅಲೆಮಾರಿಗಳಾಗಿ ಸಾಗುವ ಜನಾಂಗದ ಕತೆ ಇದಾಗಿದ್ದುದರಿಂದ ಕಾದಂಬರಿಗೆ ನಿಘಡತೆ ಮತ್ತು ರೋಚಕತೆ ಬಂದು ಓದನ್ನು ಕುತೂಹಲಕ್ಕೆ ದೂಡುತ್ತದೆ. ಈ ಬಂಜಾರ ಜನಾಂಗವು ವೀರತ್ವವನ್ನು ಮೈದುಂಬಿಕೊಂಡ ಜನಾಂಗವಾಗಿತ್ತು. ಸ್ವಾತಂತ್ರ್ಯಪೂರ್ವದಲ್ಲಿ.. ಡಾ ಬಾಳಾಸಾಹೇಬ ಲೋಕಾಪುರ ರವರವರು ನ್ಯಾಯೋಚಿತ ಮುನ್ನುಡಿ ಬರೆದಿದ್ದಾರೆ.
ಡಾ.ಕೆ.ಬಿ.ಪವಾರ ಅವರು ವೃತ್ತಿಯಿಂದ ವೈದ್ಯರು, ಪ್ರವೃತ್ತಿಯಿಂದ ಲೇಖಕರು. ಅವರ ಸಾಹಿತ್ಯಕ ಆಸಕ್ತಿಯು ಯಾರನ್ನಾದರೂ ಬೆರಗುಗೊಳಿಸುತ್ತದೆ. ಎಂಭತ್ತರ ನಂತರದ ಇಳಿ ವಯೋಮಾನದಲ್ಲಿಯೂ ಕಾದಂಬರಿಯನ್ನು ರಚಿಸುವಷ್ಟು ಸಮರ್ಥರಿರುವುದು ನಿಜಕ್ಕೂ ಆಶ್ಚರ್ಯ ಮೂಡಿಸುತ್ತದೆ. ಲಂಬಾಣಿಗಳ ಮಾತೃಭಾಷೆ ಕನ್ನಡವಲ್ಲ. ಕನ್ನಡವನ್ನು ಕುರಿತು ಬರೆದು ಪ್ರೌಢಿಮೆಯನ್ನು ಸಾಧಿಸುವದು ಲಂಬಾಣಿಗಳಿಗೆ ತುಂಬಾ ಕಷ್ಟನೇ ಸರಿ. ಡಾ.ಕೆ.ಬಿ.ಪವಾರ ಅವರು ಕನ್ನಡ ಭಾಷೆಯಲ್ಲಿ ಸಾಹಿತ್ಯವನ್ನು ರಚಿಸಿ ಬಹು ಸಮುದಾಯಗಳ ಮೆಚ್ಚಿಗೆಗೆ ಪಾತ್ರರಾಗಿರುವದು ಆಶ್ಚರ್ಯಕರವಾಗಿದೆ. ಅವರ ಸಾಹಿತ್ಯಕ ಸಾಧನೆಗೆ ಕಿರೀಟಪ್ರಾಯದಂತೆ 'ಕೊಳ್ಳ' ಕಾದಂಬರಿಯನ್ನು ರಚಿಸಿ, ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿ, ಕನ್ನಡ ಸಾಹಿತ್ಯವಲಯದಲ್ಲಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದ್ದಾರೆ.
ಭಾರತವು ಸಾಸ್ಕೃತಿಕವಾಗಿ ಜಗತ್ತಿನಲ್ಲಿಯೇ ಅತಿ ಹೆಚ್ಚು ವೈವಿಧ್ಯತೆಗಳನ್ನು ಹೊಂದಿದ ದೇಶ. ಇಲ್ಲಿರುವ ಸಾವಿರಾರು ಬುಡಕಟ್ಟುಗಳ ಆಚರಣೆಗಳು ಮತ್ತು ಸಂಪ್ರದಾಯಗಳೇ ಇದಕ್ಕೆ ಮೂಲ ಕಾರಣಗಳು. ಈ ವೈವಿಧ್ಯಮಯ ಸಾಂಸ್ಕೃತಿಗೆ ಬಂಜಾರಾ ಸಮುದಾಯವು ತನ್ನದೇ ಆದ ಕೊಡುಗೆಯನ್ನಿತ್ತಿದೆ. ಸುದೀರ್ಘವಾದ ಐತಿಹಾಸಿಕ ಪರಂಪರೆ ಮತ್ತು ಬೇರೆ ಬೇರೆ ಸಮುದಾಯಗಳ ಸಾಂಸ್ಕೃತಿಕ ಸಂಪರ್ಕದಿಂದ ಬಂಜಾರಾ ಸಮುದಾಯವು ವೈವಿಧ್ಯಮಯ ಸಾಂಸ್ಕೃತಿಕ ವಿನ್ಯಾಸವನ್ನು ಹೊಂದುವಂತಾಯಿತು. ಆದರೆ ಈ ಬಂಜಾರಾ ಸಮುದಾಯವು ಎಲ್ಲಿ ಹುಟ್ಟಿತು? ಹೇಗೆ ಬಂದಿತು ಎಂಬುದರ ಬಗ್ಗೆ ವಿದ್ವಾಂಸರಲ್ಲಿ ಒಮ್ಮತವಿಲ್ಲ. ಅವರ ಮೌಖಿಕ ಪರಂಪರೆಯಲ್ಲಿ ಅವರು ಮೂಲತಃ ದೊಂಬರಾಟ ಪ್ರದರ್ಶಕರು, ಕಾಲ ಕ್ರಮೇಣ ಅಲೆಮಾರಿ ವ್ಯಾಪಾರಿಗಳಾದರೆಂದು ಹೇಳಲಾಗುತ್ತಿದೆ. ಆಧುನಿಕತೆಯ ಪ್ರಭಾವದಿಂದ ಒಂದು ಕಡೆ ನೆಲೆ ನಿಲ್ಲುವಂತಾಗಿ ಶಿಕ್ಷಣ, ಕೃಷಿ ಕ್ಷೇತ್ರದ ಕಡೆಗೆ ಮುಖ ಮಾಡಿರುವದನ್ನು ಈ ಚಿತ್ರಿಸುವ ಪ್ರಯತ್ನ ಯಶಸ್ವಿಯಾಗಿವೆ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಸಣ್ಣರಾಮ ಹೇಳಿರುವ ಮಾತು ಧ್ವನಿಪೂರ್ಣವಾಗಿದೆ.
ನಾಲ್ಕೈದು ತಲೆಮಾರುಗಳ ಜಾಡು ಹಿಡಿದು ಹೊರಟು ಪರಿಸರ ಪ್ರೇಮಿಗಳಗಾಗಿ ಹಸಿರುಟ್ಟ ಕಾಡುಗಳಲ್ಲಿ ದನಕರು ಮೇಯಿಸುತ್ತಾ, ಅಂದರೆ ಪಶುಸಂಗೋಪನೆ ಮಾಡುತ್ತ ಪರಿಸರದ ಋತುಗಳಿಗನುಗುಣವಾಗಿ ಜೀವನ ಸಾಗಿಸುತ್ತ ಭಾರತ ಸ್ವಾತಂತ್ರ್ಯ ಪಡೆದು ಡಾ. ಬಿ.ಆರ್. ಅಂಬೇಡ್ಕರ್ ರವರ ಸಂವಿಧಾನ ಆಶಯದಡಿ ಶಿಕ್ಷಣ ಪಡೆದು ಉದ್ಯೋಗ ನಿರತರಾಗಿ ಒಂದೆಡೆ ನೆಲೆ ನಿಂತು ತಮ್ಮ ವಿಶಿಷ್ಟ ಸಂಸ್ಕೃತಿಯ ಆಚರಣೆಗೆ ತಂದಿದ್ದಾರೆ. ಜಗತ್ತಿನಲ್ಲಿ ತಮ್ಮ ಹೆಗ್ಗುರುತುಗಳು ಅಚ್ಚೊತ್ತಲು ಸದಾ ಶ್ರಮಿಸುವ ಶ್ರಮ ಸಂಸ್ಕೃತಿಯೊಂದಿಗೆ ಬಾಳಿನಲ್ಲಿ ಸಂಸ್ಕಾರವನ್ನು ಕಲಿತು ನಾಗರಿಕತೆಯಲ್ಲಿ ನಾಗರಿಕ ಬದುಕು ಬಾಳುತ್ತಿದ್ದಾರೆಂಬುದನ್ನು ಬಹು ಧ್ವನಿ ಪೂರ್ಣವಾಗಿ, ಹಾಡು, ಗದ್ಯ ಮೂಲಕ ಸಾಬೀತು ಪಡಿಸಿದ್ದಾರೆ. ಈ ಮಹಾ ಕಾದಂಬರಿಯು ಒಂದು ಮಹತ್ವಪೂರ್ಣ ಸಂಶೋಧನಾ ಗ್ರಂಥದಂತೆಯೂ, ಪತ್ತದಾರಿ ಮಹಾಕಥಾನಕದಂತೆಯೂ ಓದುಗರನ್ನು ಹಿಡಿದಿಡುವಲ್ಲಿ ಸಫಲವಾಗಿದೆ. ಬಂಜಾರ ಜನಾಂಗದ ಆಚಾರ - ವಿಚಾರ, ಏಳು - ಬೀಳು ಮುಂತಾದ ಮಾಹಿತಿ ಕಲೆ ಹಾಕುವ ಲೇಖಕರಿಗೆ, ಸಂಶೋಧನಾ ವಿದ್ಯಾರ್ಥಿಗಳಿಗೆ, ಭಾಷಣಕಾರರಿಗೆ ಇದೊಂದು ಉತ್ತಮ ಆಕರ ಗ್ರಂಥವಾಗಿ ಸದಾ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬಲ್ಲದು. ಈ ಕೃತಿಗೆ ಸಲ್ಲಬೇಕಾದ ಕರ್ನಾಟಕ ಸಾಹಿತ್ಯ ಅಕಾಡಮಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಆದಿಯಾಗಿ ಮುಂತಾದ ಗೌರವಗಳು ಒಲಿದು ಬರಲೆಂದು ಶುಭ ಮನದಿ ಹಾರೈಸುವನು ಶುಭನಂದೀಶ.
ಶಿಕ್ಷಕರು
ಸ.ಹಿ.ಪ್ರಾ.ಶಾಲೆ. ಮಂಜುನಾಥ ನಗರ,
ಹುಬ್ಬಳ್ಳಿ ಶಹರ, ಧಾರವಾಡ ಜಿಲ್ಲೆ.
Mob : +91 79750 26724
********************************************