-->
ಜಗಲಿ ಕಟ್ಟೆ : ಸಂಚಿಕೆ - 71

ಜಗಲಿ ಕಟ್ಟೆ : ಸಂಚಿಕೆ - 71

ಜಗಲಿ ಕಟ್ಟೆ : ಸಂಚಿಕೆ - 71
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 


ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ


ಮಕ್ಕಳ ಜಗಲಿಯ ಎಲ್ಲರಿಗೂ ನಮಸ್ಕಾರಗಳು...
     ಎಲ್ಲರೂ ಈಗ ಪರೀಕ್ಷೆಯ ಒತ್ತಡ ಕಳೆದು ನಿರಾಳರಾಗಿದ್ದೀರಿ. ಕೆಲವೇ ದಿನದಲ್ಲಿ ಬೇಸಿಗೆ ರಜೆ ಆರಂಭವಾಗುತ್ತದೆ. ಖುಷಿಯೇ ಖುಷಿ. ಏನೇನೋ ಪ್ಲಾನ್ ಗಳು ತಲೆಯಲ್ಲಿ ಇದ್ದಿರಬಹುದು. ರಜೆಯನ್ನು ಸುಂದರವಾಗಿ ಕಳೆಯಬಹುದಾದ ಅನೇಕ ಆಲೋಚನೆಗಳು ನಿಮ್ಮ ತಲೆಯಲ್ಲಿ ಇದ್ದಿರಬಹುದು...
    ಶೈಕ್ಷಣಿಕ ಅವಧಿಯ ಸಾಲುಗಳು ಹೇಗೆ ಕಳೆಯುತ್ತವೆಂಬುದೇ ತಿಳಿಯಲಾರದಷ್ಟು ವೇಗವಾಗಿ ಚಲಿಸುತ್ತಾ ಇವೆ. ಪ್ರಾಥಮಿಕ ತರಗತಿಯಲ್ಲಿದ್ದವರು ಹೈಸ್ಕೂಲು, ಹೈಸ್ಕೂಲಲ್ಲಿ ಇದ್ದವರು ಕಾಲೇಜು... ವರ್ಷಗಳು ಎಷ್ಟೊಂದು ಬೇಗ ಬೇಗ ಸಾಗುತ್ತವೆ ಎಂದು ಕೆಲವೊಮ್ಮೆ ಅನಿಸುವುದಿದೆ. ಬಹುಶಃ ಇದಕ್ಕೆಲ್ಲ ಕಾರಣ ಚಟುವಟಿಕೆಗಳಲ್ಲಿ ಇದ್ದೇವೆ ಎಂಬುವುದನ್ನು ತೋರಿಸುತ್ತದೆ.  
        ಹೌದು ಚಟುವಟಿಕೆಗಳು ಬೇಕೇ ಬೇಕು. ಆದರೆ ಚಟುವಟಿಕೆಗಳು ಲಾಭದಾಯಕ ವಾಗಿರಬೇಕು. ಅದರಿಂದ ಕಲಿಕೆಯಾಗಿರಬೇಕು ಎನ್ನುವುದು ಮುಖ್ಯ. ಮೈದಾನದಲ್ಲಿ ಕ್ರಿಕೆಟ್, ವಾಲಿಬಾಲ್ ಆಟ ಆಡುವ ಮಕ್ಕಳು ಉತ್ತಮವಾದ ಕೌಶಲ್ಯವನ್ನು ಪಡೆದುಕೊಳ್ಳುವವರಾಗಿದ್ದರೆ ಅಲ್ಲಿ ಕಲಿಕೆಯಾಗುವುದು ಸಹಜ. ಏನನ್ನೂ ಅರಗಿಸಿಕೊಳ್ಳದ ಚಟುವಟಿಕೆಗಳು ಅವು ಸಮಯ ವ್ಯರ್ಥವನ್ನು ಮಾತ್ರ ಸೂಚಿಸುತ್ತದೆ. 
     ಕೆಲವು ಪೋಷಕರು ದಿನಾ ಟಿವಿ ನೋಡುವ ತಮ್ಮ ಮಕ್ಕಳ ಬಗ್ಗೆ ದೂರುವುದಿದೆ. ಆದರೆ ಆ ಮಕ್ಕಳು ಕಾರ್ಟೂನ್ ಚಾನಲ್ ನೋಡುತ್ತಾ ಒಂದು ಭಾಷೆಯನ್ನೇ ಕಲಿತಿರುತ್ತಾರೆ. ಹತ್ತು ವರ್ಷ ಪೂರ್ತಿ ಶಾಲೆಗೆ ಹೋದರೂ ಹಿಂದಿ ಮಾತನಾಡಲರಿಯದ ಮಕ್ಕಳು ಕಾರ್ಟೂನ್ ನೋಡಿ ಹಿಂದಿ ಇಂಗ್ಲಿಷ್ ಮಾತನಾಡುವುದನ್ನು ನಾವು ಕಾಣುತ್ತೇವೆ. ಇಲ್ಲಿ ಕಲಿಕೆ ಮಾತ್ರ ಪ್ರಾಮುಖ್ಯ ವಹಿಸುತ್ತದೆ. 
       ಸುಮ್ಮನೆ ಮನರಂಜನೆಗಾಗಿ ಸಮಯ ವ್ಯರ್ಥ ಮಾಡುವ ಯಾವುದೇ ಚಟುವಟಿಕೆಗಳಿಂದ ಮಕ್ಕಳನ್ನು ಮುಕ್ತ ಮಾಡುವ ಜವಾಬ್ದಾರಿ ಹಿರಿಯರಲ್ಲಿದೆ. ಮೊಬೈಲ್, ಟಿವಿ, ಕಂಪ್ಯೂಟರ್, ಜಾಲತಾಣಗಳನ್ನು ದುರ್ಬಳಕೆ ಮಾಡುವ ವಿದ್ಯಾರ್ಥಿಗಳ ನಡೆಯನ್ನು ಗಮನಿಸಿ ಕಲಿಕೆಯನ್ನು ಆನಂದಿಸುವ, ಸಂಭ್ರಮ ಪಡುವ ಚಟುವಟಿಕೆಯತ್ತ ವಿದ್ಯಾರ್ಥಿಗಳಲ್ಲಿ ಒಲವು ಮೂಡಿಸುವುದು ಅನಿವಾರ್ಯ.
       ರಜಾ ದಿನಗಳಲ್ಲಿ ಬೇಸಿಗೆ ಶಿಬಿರಗಳು ಆರಂಭವಾಗುತ್ತವೆ. ಶಾಲೆಯ ವಾತಾವರಣವನ್ನು ಮೀರಿ ಹೊಸ ಕಲ್ಪನೆಯ ಕಲಿಕೆಯನ್ನು ಒದಗಿಸುವ ಅನೇಕ ಶಿಬಿರಗಳು ನಿಮ್ಮೂರಲ್ಲೂ ಜರಗಬಹುದು. ಅಂತಹ ಶಿಬಿರಗಳಲ್ಲಿ ಭಾಗವಹಿಸುವಂತೆ ಪ್ರೇರಣೆ ನೀಡಿ. ಮಕ್ಕಳಲ್ಲಿ ಮೂಡಿರುವ ನಿಷ್ಕ್ರಿಯತಾ ಭಾವನೆಯನ್ನು ಹೊರದೂಡಲು ಇಂತಹ ಶಿಬಿರಗಳು ಅವಶ್ಯಕವಾಗಿದೆ. ಒತ್ತಡಯುಕ್ತ ಪಠ್ಯ ಚಟುವಟಿಕೆಗಳು ಮಕ್ಕಳನ್ನು ನಿಷ್ಕ್ರಿಯತೆಯತ್ತ ಸಾಗಿಸುತ್ತಿದೆ. ಮಕ್ಕಳಲ್ಲಿ ಸಂಭ್ರಮ ಮೂಡಿಸುವ ಕಲಿಕೆಯು ಕಡಿಮೆ ಇರುವುದರಿಂದ ಕಲಿಕೆಯಲ್ಲಿ ಒಲವು ತೋರಿಸುವ ಚಿಂತನೆಯನ್ನು ಹೆಚ್ಚಿಸುವ ಕಾರ್ಯವಾಗಬೇಕು.
         ಸ್ಪರ್ಧಾತ್ಮಕ ಈ ಕಾಲಘಟ್ಟದಲ್ಲಿ ಮಕ್ಕಳ ಬೇಸಿಗೆ ಶಿಬಿರಗಳು ವಾಣಿಜ್ಯ ವ್ಯವಹಾರವಾಗದಂತೆ ಆಯೋಜಕರು ಗಮನಿಸಬೇಕು. ಶಿಬಿರಗಳಲ್ಲಿ ಶಾಲೆಗಿಂತಲೂ ಬಿಗುವಾದ ವಾತಾವರಣ ವಿರದಂತೆ ಎಚ್ಚರ ವಹಿಸಬೇಕು. ಮಕ್ಕಳ ಮನಸ್ಸನ್ನು ಅರಳಿಸುವ, ಸಂಭ್ರಮ, ಸಂತಸ ಮೂಡಿಸುವ, ಸೃಜನಶೀಲ ಶಕ್ತಿಯನ್ನು ಬೆಳೆಸುವ ಶಿಬಿರಗಳು ಮಕ್ಕಳಲ್ಲಿ ಹೊಸ ಚಿಂತನಾ ಶೈಲಿಯನ್ನು ಮೂಡಿಸುತ್ತದೆ. ಇಂತಹ ಶಿಬಿರಗಳು ಪ್ರತಿ ಶಾಲೆಗಳಲ್ಲಿ, ಪ್ರತಿ ಗ್ರಾಮದಲ್ಲಿ, ಪ್ರತಿ ನಗರಗಳಲ್ಲೂ ಆಯೋಜನೆಯಾದರೆ ಪ್ರತಿಯೊಬ್ಬ ಮಕ್ಕಳೂ ಕೂಡ ಕ್ರಿಯಾಶೀಲ, ಸೃಜನಶೀಲ ವ್ಯಕ್ತಿತ್ವ ಮೈಗೂಡಿಸಿಕೊಳ್ಳಲು ಸಾಧ್ಯ.   
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************


ಕಳೆದ ಸಂಚಿಕೆಯ ಜಗಲಿಕಟ್ಟೆ - 70 ಅಂಕಣದಲ್ಲಿ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ.... ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಕಳೆದ ಕೆಲವು ವಾರಗಳಿಂದ ಪ್ರಕಟವಾದ ಜಗಲಿಯ ಬರಹಗಳ ಕುರಿತಾದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....


ಎಲ್ಲರಿಗೂ ನಮಸ್ಕಾರಗಳು,
      ಹೃದಯ ಶ್ರೀಮಂತಿಕೆಯು ಎಲ್ಲಾ ಶ್ರೀಮಂತಿಕೆಗಿಂತ ಮೇಲು ಎಂಬುದನ್ನು ಉದಾಹರಣೆಗಳೊಂದಿಗೆ ಶಿಕ್ಷಣಾಧಿಕಾರಿಯವರಾದ ಶ್ರೀ ಜ್ಞಾನೇಶ್ ಸರ್ ಅವರು ಸೊಗಸಾಗಿ ತಿಳಿಸಿದ್ದಾರೆ.
      ಬದಲಾವಣೆ ಸಹಜ ಮತ್ತು ಅಗತ್ಯ. ಅದು ಅತಿಯಾದರೆ ಮನುಷ್ಯನ ಆರೋಗ್ಯಕ್ಕೆ ಹಾನಿ. ಮಾನವನ ಆಶೆಗಳಿಗೆ ಮಿತಿ ಇದ್ದಾಗ ಮಾತ್ರ ಜೀವನ ಸೊಗಸು. ಅತಿ ಶ್ರೀಮಂತಿಕೆಗಿಂತ ಹೃದಯವಂತಿಕೆ, ಉತ್ತಮ ನಡೆ ನುಡಿ ನಮ್ಮಲ್ಲಿರಬೇಕೆಂಬ ಸಂದೇಶದ ರಮೇಶ್ ಸರ್ ರವರ ಲೇಖನ ಉತ್ತಮವಾಗಿತ್ತು.
     ದೃಗ್ಗೋಚರ ಬೆಳಕು ಹಾಗೂ ಅವುಗಳಲ್ಲಿರುವ ವಿವಿಧ ಬಣ್ಣಗಳು ಹಾಗೂ ಅವುಗಳು ಸಂಶೋಧನೆಯ ಕುರಿತು ಸುಂದರವಾಗಿ ದಿವಾಕರ ಸರ್ ಅವರು ತಮ್ಮ ವೈಜ್ಞಾನಿಕ ಸಂಚಿಕೆಯಲ್ಲಿ ತಿಳಿಸಿದ್ದಾರೆ.
      ವಿಜಯಾ ಮೇಡಂರವರಿಂದ ಅತಿ ಉಪಯುಕ್ತ ಸಸ್ಯ ಅಮೃತ ಬಳ್ಳಿಯ ಪರಿಚಯ ಸಂಭಾಷಣೆ ಶೈಲಿಯಲ್ಲಿ ಉತ್ತಮವಾಗಿ ಮೂಡಿ ಬಂದಿದೆ.
     ರಮೇಶ್ ರವರ ಪ್ರವಾಸ ಕಥನದ ಪಯಣ ಸಂಚಿಕೆಯಲ್ಲಿ ಶಿವನ ಸಮುದ್ರ (ಶಿಂಷಾ) ದ ಕುರಿತಾದ ಮಾಹಿತಿ ಉತ್ತಮವಾಗಿತ್ತು.
      ಮಕ್ಕಳೊಂದಿಗೆ ವ್ಯವಹರಿಸುವಾಗ ಯಾಕೆ ಎಚ್ಚರಿಕೆಯಿಂದಿರಬೇಕು ಎನ್ನುವುದರ ಕುರಿತಾದ ತಮ್ಮ ಅನುಭವವನ್ನು ಸುಂದರವಾಗಿ ತಿಳಿಸಿದ್ದಾರೆ ರಮ್ಯ ಮೇಡಂ ರವರು ತಮ್ಮ ಶಿಕ್ಷಕರ ಡೈರಿ ಸಂಚಿಕೆಯಲ್ಲಿ. 
     ತಂ ತಂ ತಥಾಸ್ತು ಪುಸ್ತಕದ ಪರಿಚಯ ಸೊಗಸಾಗಿತ್ತು ವಾಣಿಯಕ್ಕಾ.
     ರಮೇಶ್ ರವರ ಪದದಂಗಳ ಸಂಚಿಕೆ ಚೆನ್ನಾಗಿ ಮೂಡಿ ಬಂದಿದೆ.
   ಎಲ್ಲರಿಗೂ ವಂದನೆಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************



ನಮಸ್ತೇ,
      'ಹಾಸಿಗೆ ಇದ್ದಷ್ಟು ಕಾಲು ಚಾಚು' ಎನ್ನುವ ಗಾದೆ ಮಾತಿನಂತೆ ಮಾನವನ ಬಯಕೆಗೆ ಇತಿ ಮಿತಿಗಳಿರಬೇಕು. ಬಯಕೆ ಅತಿಯಾಗಬಾರದು ಎನ್ನುವ ಸಂದೇಶವನ್ನು ಶಿಕ್ಷಣಾಧಿಕಾರಿಯವರಾದ ಶ್ರೀಯುತ ಜ್ಞಾನೇಶ್ ಸರ್ ರವರು ಬಹಳ ಸುಂದರವಾಗಿ ತಮ್ಮ ಸಂಚಿಕೆಯಲ್ಲಿ ಸಾರಿದ್ದಾರೆ. ಧನ್ಯವಾದಗಳು ಸರ್.
      ಸಮಯಕ್ಕೆ ಸರಿಯಾಗಿ ನಮ್ಮನ್ನು ಬೇರೆ ಬೇರೆ ಊರಿಗೆ ವಾಹನಗಳಲ್ಲಿ ಕೊಂಡೊಯ್ಯುವ ಚಾಲಕರು ತಮ್ಮ ಕರ್ತವ್ಯವನ್ನು ಚ್ಯುತಿ ಬರದ ರೀತಿಯಲ್ಲಿ ನಿರ್ವಹಿಸುತ್ತಾರೆ. ಚಾಲಕರ ಕರ್ತವ್ಯದ ಕುರಿತಾಗಿ ಉತ್ತಮವಾದ ಲೇಖನ ರಮೇಶ್ ಬಾಯಾರ್ ರವರಿಂದ.
     ಕಣ್ಣು ಬೆಳಕಿನಿಂದ ಪ್ರಚೋದನೆ ಹೊಂದುವುದಾದರೂ ಆ ಮೂಲಕ ಉಂಟಾಗುವ ಪ್ರತಿ ಬಿಂಬದ ಅರ್ಥ ಕಲ್ಪನೆ ಮೂಡುವುದು ಮೆದುಳಿನಲ್ಲಿ ಎನ್ನುವುದನ್ನು ವಿವರವಾಗಿ ತಿಳಿಸಿದ್ದಾರೆ ದಿವಾಕರ ಸರ್ ರವರು ತಮ್ಮ ವೈಜ್ಞಾನಿಕ ಸಂಚಿಕೆಯಲ್ಲಿ.
      ರಾಸಾಯನಿಕ ಗೊಬ್ಬರ ಬಳಸದೆ ಬರೇ ಗ್ಲೆರಿಸೀಡಿಯಾ (ಈಟಿನ ಗಿಡ) ವನ್ನೇ ಬಳಸಿ ಸಾವಯವ ಕೃಷಿ ನಡೆಸಬಹುದು ಎನ್ನುವುದನ್ನು ಸುಂದರವಾಗಿ ಆ ಸಸ್ಯದ ಪರಿಚಯ ಹಾಗು ಉಪಯುಕ್ತತೆ ಕುರಿತು ವಿಜಯಾ ಮೇಡಂರವರ ಸಂಚಿಕೆ ತುಂಬಾನೇ ಸೊಗಸಾಗಿತ್ತು. ಧನ್ಯವಾದಗಳು ಮೇಡಂ.
      ಪರೀಕ್ಷೆಗಳು ಇನ್ನೇನು ಆರಂಭವಾಗುತ್ತಿವೆ. ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಲು ಉತ್ತಮ ಅಂಕಗಳನ್ನು ಪಡೆಯುವ ನಿಟ್ಟಿನಲ್ಲಿ ಪೂರ್ಣಿಮಾ ಕಾಮತ್ ರವರ ಪರೀಕ್ಷಾ ಭಯ ನಿವಾರಣೆ ಕುರಿತ ಸಕಾಲಿಕ ಲೇಖನ.
      ಪ್ರಸಿದ್ಧ ಕ್ಷೇತ್ರ ಮುರ್ಡೇಶ್ವರದ ಕುರಿತ ಸಂಪೂರ್ಣ ಮಾಹಿತಿ ರಮೇಶ್ ಸರ್ ರವರಿಂದ ಪಯಣ ಸಂಚಿಕೆಯಲ್ಲಿ.
      ವಾಣಿಯಕ್ಕನವರ ಡಾ. ಇಲಿ ಮತ್ತು ಬೆಕ್ಕಿನ ಗಾಯ ಎನ್ನುವ ಕುತೂಹಲಕಾರಿ ಪುಸ್ತಕದ ಪರಿಚಯ ಚೆನ್ನಾಗಿತ್ತು.
      ಲಾವಣ್ಯರವರ ಮತ್ತು ಯಶ್ ದೀಪ್ ರವರ ಚಿತ್ರ ಸಂಚಿಕೆ, ದಿವ್ಯಜ್ಯೋತಿ ರವರ ಶಿವರಾತ್ರಿ ಹಬ್ಬದ ಕುರಿತಾದ ಲೇಖನ ಹಾಗೂ ಮಕ್ಕಳ ಕವನಗಳಲ್ಲಿ ಎಲ್ಲ ಮಕ್ಕಳ ಕವನಗಳು ಎಲ್ಲವೂ ಸೊಗಸಾಗಿ ಮೂಡಿ ಬಂದಿವೆ. ಎಲ್ಲಾ ಮಕ್ಕಳಿಗೆ ಅಭಿನಂದನೆಗಳು.
      ರಮೇಶ ಉಪ್ಪುಂದ ರವರ ಪದದಂಗಳ ಸಂಚಿಕೆ ಸೊಗಸಾಗಿ ಮುಂದುವರಿಯುತ್ತಿದೆ. ಧನ್ಯವಾದಗಳು ಸರ್.
  ಕೊನೆಯದಾಗಿ ಎಲ್ಲರಿಗೂ ಹೃತ್ಪೂರ್ವಕ ವಂದನೆಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************




ಎಲ್ಲರಿಗೂ ನಮಸ್ಕಾರಗಳು,
     ಕಷ್ಟದಲ್ಲಿರುವವರಿಗೆ ಅಶಕ್ತರಿಗೆ ಸಹಾಯ ಮಾಡಿದಾಗ ಉಂಟಾಗುವ ಅನುಭೂತಿ ಯಾವುದರಿಂದಲೂ ಸಿಗಲಾರದು ಎಂಬುದನ್ನು ಶಿಕ್ಷಣಾಧಿಕಾರಿಯವರಾದ ಶ್ರೀ ಜ್ಞಾನೇಶ್ ಸರ್ ರವರು ತಮ್ಮ ಸ್ವ ಅನುಭವದೊಂದಿಗೆ ಬಹಳ ಸುಂದರವಾಗಿ ನಿರೂಪಿಸಿದ್ದಾರೆ.
      ಸಮಯದ ಸದ್ವಿನಿಯೋಗ ಮಾಡಿಕೊಂಡು ನಿರಂತರ ಪ್ರಯತ್ನಿಸಿದಾಗ ವಿದ್ಯಾರ್ಥಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ. ಶುಭ ಅವರಿಂದ ಪರೀಕ್ಷೆ ತಯಾರಿಯ ಕುರಿತು ಉತ್ತಮ ಲೇಖನ.
      ವಿವೇಚನೆಯನ್ನು ಬಳಸಿ ಚಂಚಲ ಮನಸ್ಸನ್ನು ನಿಯಂತ್ರಿಸಿದಾಗ ಮಾತ್ರ ಮಾನವನ ಉನ್ನತಿ ಸಾಧ್ಯ ಎಂಬುದನ್ನು ಉದಾಹರಣೆಗಳೊಂದಿಗೆ ಮನ ಮುಟ್ಟುವಂತಿತ್ತು ರಮೇಶ್ ಸರ್ ರವರ ಮನಸ್ಸಿನ ಕುರಿತ ಲೇಖನ.
      ಪ್ರಾಣಿಗಳ ಕಣ್ಣಿನಲ್ಲಿ ದೃಷ್ಟಿ ಮೂಡಿಸುವಲ್ಲಿ ಮಿದುಳಿನ ಪಾತ್ರವನ್ನು ಬಹಳ ಅದ್ಭುತವಾಗಿ ಅಷ್ಟೇ ಸೊಗಸಾಗಿ ವಿವರಿಸಿದ್ದಾರೆ ದಿವಾಕರ್ ಸರ್ ವರು. ಧನ್ಯವಾದಗಳು ಸರ್.
     ನಮ್ಮ ಮಂಚಿ ಪ್ರೌಢಶಾಲೆಯಲ್ಲಿ ನಾನಿರುವಾಗ ಈ ನೋನಿ ಗಿಡವನ್ನು ಬೆಳೆಸಿದ್ದೆ. ಔಷಧೀಯ ಗುಣದ ಈ ಗಿಡದಲ್ಲಿ ನಾನು ಕಂಡ ವಿಶೇಷತೆ ಎಂದರೆ ಮೊದಲು ಬೀಜ ನಂತರ ಬೀಜದ ಮೇಲ್ಮೈಯಲ್ಲಿ ಹೂಗಳು ಅರಳುತ್ತವೆ. ಅತ್ಯುಪಯುಕ್ತ ನೋನಿ ಗಿಡದ ಪರಿಚಯಕ್ಕಾಗಿ ಧನ್ಯವಾದಗಳು ವಿಜಯಾ ಮೇಡಂ.
       ಕಮ್ಮಸಂದ್ರದ ಕೋಟಿಲಿಂಗೇಶ್ವರ ದೇವಸ್ಥಾನದ ಸೊಗಸಾದ ಪರಿಚಯವನ್ನು ರಮೇಶ್ ಅವರು ತಮ್ಮ ಪಯಣ ಸಂಚಿಕೆಯಲ್ಲಿ ನೀಡಿದ್ದಾರೆ. ಧನ್ಯವಾದಗಳು ಸರ್.
      ಶಿಕ್ಷಕರ ಡೈರಿಯಲ್ಲಿ ಸುಮನರವರಿಂದ ತರಗತಿಯಲ್ಲಿ ವಿಧೇಯ ವಿಧ್ಯಾರ್ಥಿಯ ಕುರಿತಾದ ಅನುಭವದ ಮಾತು ತುಂಬಾ ಉತ್ತಮವಾಗಿತ್ತು.
      ಮಕ್ಕಳು ಓದಲೇಬೇಕಾದ ಸುಂದರ ಪುಸ್ತಕ "ನವಿಲಿನ ಜಂಭ" ಪುಸ್ತಕದ ಸುಂದರ ಪರಿಚಯ ವಾಣಿಯಕ್ಕನವರಿಂದ.
      ಪ್ರೇಮಾ ಆರ್ ರವರಿಂದ ಶ್ರೀ ಕ್ಷೇತ್ರ ಬಪ್ಪನಾಡು ದೇವಸ್ಥಾನದ ಕುರಿತಾದ ಪುಸ್ತಕ ವಿಮರ್ಶೆ ಬಹಳ ಸೊಗಸಾಗಿ ಮೂಡಿ ಬಂದಿದೆ.
      ರಮೇಶ ಉಪ್ಪುಂದರವರ ಪದದಂಗಳ ಸಂಚಿಕೆ ಉತ್ತಮವಾಗಿ ಮೂಡಿ ಬರುತ್ತಿದೆ.
     ಮಕ್ಕಳ ಚಿತ್ರ ಸಂಚಿಕೆಗಳಲ್ಲಿ ರೇವಂತ್ ಹಾಗೂ ಹಾರ್ಧಿಕರವರ ಚಿತ್ರಗಳು ಅದ್ಭುತವಾಗಿ ಮಾಡಿಬಂದಿವೆ. ಚಿತ್ರ ರಚಿಸಿದ ಮಕ್ಕಳಿಗೆ ಅಭಿನಂದನೆಗಳು.
     ಮುಖ್ಯವಾಗಿ ಈ ವಾರ ಲವಿತ್ ಆರ್ ಪೂಜಾರಿ ಎನ್ನುವ ವಿಶೇಷ ಚೇತನ ಮಗುವಿನ ಚಿತ್ರ ಸಂಚಿಕೆಯಲ್ಲಿ ಎಲ್ಲ ಚಿತ್ರಗಳು ಸುಂದರವಾಗಿದ್ದುವು. ಇಂತಹ ಪ್ರತಿಭೆಗಳು ಜಗಲಿಯಲ್ಲಿ ಇನ್ನಷ್ಟು ಬೆಳಗಲಿ ಎನ್ನುವ ಹಾರೈಕೆಯೊಂದಿಗೆ ಲವಿತ್ ರವರಿಗೆ ಅಭಿನಂದನೆಗಳು.
     ಕೊನೆಯದಾಗಿ ಎಲ್ಲರಿಗೂ ಮನದಾಳದ ಕೃತಜ್ಞತೆಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************



ನಮಸ್ತೇ, 
     ನಮ್ಮಲ್ಲಿ ಇರುವ ಬೆಲೆ ಬಾಳುವ ವಸ್ತುಗಳಿಂದ ಬರುವ ಶ್ರೀಮಂತಿಕೆಗಿಂತ ನಮ್ಮ ಮನೋ ಶ್ರೀಮಂತಿಕೆ ಅತೀ ಉತ್ತಮ ಎನ್ನುವುದನ್ನು ಸೊಗಸಾಗಿ ಉದಾಹರಣೆಗಳೊಂದಿಗೆ ವಿವರವಾಗಿ ಶಿಕ್ಷಣಾಧಿಕಾರಿಯವರಾದ ಜ್ಞಾನೇಶ್ ಸರ್ ರವರು ತಮ್ಮ ಸಂಚಿಕೆಯಲ್ಲಿ ತಿಳಿಸಿದ್ದಾರೆ ಉತ್ತಮ ಸಂಚಿಕೆ ಧನ್ಯವಾದಗಳು ಸರ್.
     ಯಾವುದೇ ಸೌಲಭ್ಯಗಳಿಲ್ಲದ ಸಮಯದಲ್ಲಿ ಶಂಕರ ಭಗವತ್ಪಾದರು ಅನೇಕ ಸಾಧನೆಗಳನ್ನು ಮಾಡಿ ಆದರ್ಶ ಗುರುಗಳಾಗಿ ಇಂದಿಗೂ ಸ್ಮರಣೀಯರು. ಸೌಲಭ್ಯವಿರುವ ಇಂದಿನ ಯುಗದಲ್ಲಿ ಸಾಧನೆ ಮಾಡುವ ಮಂದಿ ಬಹಳ ಕಡಿಮೆ. ಆದಿ ಶಂಕರರ ಕುರಿತಾದ ಸುಂದರ ಲೇಖನ ರಮೇಶ್ ಬಾಯಾರ್ ಸರ್ ರವರಿಂದ.
     ಆಟಗಳಲ್ಲಿ ಯಾವ ರೀತಿ ಅತಿ ಉತ್ಸಾಹದಿಂದ ಭಾಗವಹಿಸುತ್ತೀರೋ ಅದೇ ರೀತಿ ಪರೀಕ್ಷೆ ಎಂಬ ಮೆದುಳಿನ ಆಟದಲ್ಲಿ ಭಾಗವಹಿಸಿದಾಗ ಯಶಸ್ಸು ಖಂಡಿತ. ಪರೀಕ್ಷಾ ತಯಾರಿಯ ಕುರಿತು ಗೀತಾ ಶ್ಯಾನುಭಾಗ್ ಮೇಡಂ ಅವರಿಂದ ಉತ್ತಮ ಲೇಖನ.
     ದೃಷ್ಟಿ ನಿಖರತೆಗೆ ದ್ವಿನೇತ್ರ ದೃಷ್ಟಿ ಹೇಗೆ ಸಹಾಯಕ ಎನ್ನುವುದನ್ನು ವಿವರವಾಗಿ ಮನಮುಟ್ಟುವಂತೆ ತಿಳಿಸಿದ್ದಾರೆ ದಿವಾಕರ ಸರ್ ರವರು.
     ಸಂಭಾಷಣಾ ಶೈಲಿಯಲ್ಲಿ ಗಾಂಧಾರಿ ಮೆಣಸಿನ ಗಿಡದ ಪರಿಚಯ ಪರಿಣಾಮಕಾರಿಯಾಗಿ ಸೊಗಸಾಗಿ ಮೂಡಿ ಬಂದಿದೆ. ಧನ್ಯವಾದಗಳು ವಿಜಯಾ ಮೇಡಂ.
      ಪರೀಕ್ಷಾ ಭಯವನ್ನು ನಿವಾರಿಸುವ ನಿಟ್ಟಿನಲ್ಲಿ ಗೀತಾ ಮೇಡಂರವರ ಪತ್ರ ಮಕ್ಕಳಲ್ಲಿ ಸಕಾರತ್ಮಕ ಪರಿಣಾಮವನ್ನು ಉಂಟುಮಾಡುವಲ್ಲಿ ಖಂಡಿತಾ ಸಹಾಯಕ. ಉತ್ತಮ ಲೇಖನ.
     ಕಾವೇರಿ ನದಿಯ ಉಗಮ ಸ್ಥಾನ ಭಾಗಮಂಡಲದ ತಲಕಾವೇರಿಯ ಕುರಿತಾದ ಮಾಹಿತಿ ಇಂದಿನ ಪಯಣ ಸಂಚಿಕೆಯಲ್ಲಿ ರಮೇಶ್ ಸರ್ ರವರಿಂದ.
     ಊಸರವಳ್ಳಿ ತನ್ನ ಬಣ್ಣವನ್ನು ಬದಲಾಯಿಸುವ ಕುರಿತ ಬಣ್ಣದ ಉಸಿರು ಪುಸ್ತಕದ ಪರಿಚಯ ಚುಟುಕಾಗಿ ಸೊಗಸಾಗಿತ್ತು ವಾಣಿಯಕ್ಕ.
     'ಬಾವಲಿ ಗುಹೆ' ಪುಸ್ತಕದ ಕುರಿತಾದ ವಿಮರ್ಶೆ ಹೊಸ ಶೈಲಿಯಲ್ಲಿ ಮುಂದೆ ಪುಸ್ತಕ ಕೊಂಡು ಓದುವಂತಿದೆ. ಧನ್ಯವಾದಗಳು ಸುವರ್ಣ ಮೇಡಂ.
     ರಮೇಶ್ ಉಪ್ಪುಂದರವರ ಪದದಂಗಳ ಸಂಚಿಕೆ ಚೆನ್ನಾಗಿ ಮಾಡಿಬರುತ್ತಿದೆ.
      ಮಕ್ಕಳ ಭರಪೂರ ಲೇಖನಗಳು ಚಿತ್ರಗಳು ಹಾಗೂ ಕವನಗಳು ಈ ವಾರದ ಜಗಲಿಯಲ್ಲಿ ಕಂಡು ತುಂಬಾ ಖುಷಿಯಾಯಿತು. ಅಂಕಿತ ರವರ ಪುಟ್ಟ ಲೇಖನ SSLC ಮಕ್ಕಳಿಗೆ ದಾರಿದೀಪದಂತಿದೆ. ಧನ್ಯವಾದಗಳು ಅಂಕಿತ. ಮಕ್ಕಳ ಚಿತ್ರ ಸಂಚಿಕೆಯಲ್ಲಿ ಎಲ್ಲಾ ಮಕ್ಕಳ ಚಿತ್ರಗಳು ಸೊಗಸಾಗಿವೆ. ಅಭಿನಂದನೆಗಳು ಮಕ್ಕಳಿಗೆ. ಮಕ್ಕಳ ಕವನಗಳಲ್ಲಿ ಎಲ್ಲಾ ಮಕ್ಕಳು ಸೊಗಸಾದ ಕವನಗಳನ್ನು ರಚಿಸಿದ್ದಾರೆ. ಮಕ್ಕಳೆಲ್ಲರಿಗೂ ನನ್ನ ಪ್ರೀತಿಯ ಅಭಿನಂದನೆಗಳು.
      ಕೊನೆಯದಾಗಿ ಎಲ್ಲರಿಗೂ ಮನದಾಳದ ಕೃತಜ್ಞತೆಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************



ನಮಸ್ತೇ,
      ನಿಜಗುಣ ಶಿವಯೋಗಿ ಶರಣರ ವಚನವನ್ನು ವಿಶ್ಲೇಷಿಸಿ ಜ್ಞಾನ ಸಂಪಾದನೆ ಹೇಗೆ ಪಡೆಯಬಹುದು ಎನ್ನುವುದನ್ನು ಶಿಕ್ಷಣಾಧಿಕಾರಿಯವರಾದ ಶ್ರೀ ಜ್ಞಾನೇಶ್ ಸರ್ ರವರು ಬಹಳ ಸೊಗಸಾಗಿ ವಿವರಿಸಿದ್ದಾರೆ. ಧನ್ಯವಾದಗಳು ಸರ್.
      ಆಂಗ್ಲ ಭಾಷೆಯಲ್ಲಿ ಉತ್ತಮ ಅಂಕಗಳಿಸುವ ಬಗ್ಗೆ ಪ್ರೇಮಾ ಮೇಡಂ ರವರ ಲೇಖನ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಿದೆ.
      ತಮ್ಮ ಮಕ್ಕಳನ್ನು ಸಂಸ್ಕಾರವಂತರಾಗಿ ಬೆಳೆಸುವಲ್ಲಿ ಹೆತ್ತವರ ಕರ್ತವ್ಯದ ಕುರಿತಾಗಿ ಸುಂದರ ಲೇಖನ ರಮೇಶ್ ಬಾಯಾರ್ ರವರಿಂದ.
      ಗಣಿತ ವಿಷಯದಲ್ಲಿ ಉತ್ತೀರ್ಣರಾಗಲು ಓದಬೇಕಾದ ಮುಖ್ಯಾಂಶಗಳ ಕುರಿತು ವಿವರವಾದ ಮಾಹಿತಿಯನ್ನು SSLC ವಿದ್ಯಾಥಿಗಳಿಗೆ ನೀಡಿದ್ದಾರೆ ತಮ್ಮ ಲೇಖನದಲ್ಲಿ ಯಾಕೂಬ್ ಸರ್ ರವರು.
     ಕಾಗೆ ಪಾರಿವಾಳದಂತಹ ಪಕ್ಷಿಗಳಲ್ಲಿ ತಲೆಬುರುಡೆಯ ಎರಡು ಬದಿಗಳಲ್ಲಿ ಕಣ್ಣುಗಳಿರುವುದರಿಂದ ಆಗುವ ಪ್ರಯೋಜನಗಳನ್ನು ಬಹಳ ಸೊಗಸಾಗಿ ದಿವಾಕರ್ ಅವರು ತಮ್ಮ ವೈಜ್ಞಾನಿಕ ಲೇಖನದಲ್ಲಿ ವಿವರಿಸಿದ್ದಾರೆ.
     ಬಿಂಬುಳಿ ಗಿಡದ ಸೊಗಸಾದ ಪರಿಚಯ ವಿಜಯಾ ಮೇಡಂರವರಿಂದ ತಮ್ಮ ನಿಷ್ಪಾಪಿ ಸಸ್ಯಗಳು ಸಂಚಿಕೆಯಲ್ಲಿ.
      ವಿಶ್ವ ಗುಬ್ಬಚ್ಚಿಗಳ ದಿನ ಪ್ರಯುಕ್ತ ಗುಬ್ಬಚ್ಚಿಗಳು ಕಣ್ಮರೆಯಾಗುತ್ತಿರುವ ಕಾಲಘಟ್ಟದಲ್ಲಿ ಉತ್ತಮ ಲೇಖನ ಅಶ್ವಿನ್ ರಾವ್ ರವರಿಂದ.
      ಹಲವಾರು ದಿನಗಳ ನಂತರ ಮತ್ತೆ ಗುರುರಾಜ ಸರ್ ರವರ ಲೇಖನ ಜಗಲಿಯಲ್ಲಿ. ನಮ್ಮ ಹಿರಿಯ ಅಜ್ಜ, ಅಜ್ಜಿಯರನ್ನು ಪ್ರೀತಿಯಿಂದ ನೋಡುವ ಪರಿಸ್ಥಿತಿ ಕ್ಷೀಣಿಸುತ್ತಿರುವ ಸಮಯದಲ್ಲಿ ಸರ್ ರವರಿಂದ ಸಕಾಲಿಕ ಲೇಖನ. ಧನ್ಯವಾದಗಳು ಸರ್.
      ಪಕ್ಷಿಧಾಮ ಕೊಕ್ಕರೆ ಬೆಳ್ಳೂರಿನ ಸಂಕ್ಷಿಪ್ತ ಹಾಗೂ ಅಗತ್ಯ ಮಾಹಿತಿ ಈ ಸಲದ ಪಯಣ ಸಂಚಿಕೆಯಲ್ಲಿ ಸಿಕ್ಕಿತು ಧನ್ಯವಾದಗಳು ರಮೇಶ್ ಸರ್.
      ಹುಡುಗನೊಬ್ಬನ ಪರಿಸರ ಪ್ರೇಮದ ಕುರಿತಾದ ರಾಜ ಮತ್ತು ಮರ ಪುಸ್ತಕದ ಪರಿಚಯ ಸೊಗಸಾಗಿ ಮೂಡಿ ಬಂದಿದೆ. ಧನ್ಯವಾದಗಳು ವಾಣಿಯಕ್ಕ.
      ಈ ವಾರ ಜಗಲಿಯಲ್ಲರಳಿದ ಪ್ರತೀಕ್ಷಾ ರವರ ಕವನಗಳು ತುಂಬಾ ಸೊಗಸಾಗಿದ್ದವು. ಅಭಿನಂದನೆಗಳು ಪ್ರತೀಕ್ಷಾ. ಪುಟಾಣಿ ಅನ್ವಿಯವರ ಚಿತ್ರ ಸಂಚಿಕೆಯಲ್ಲಿ ಎಲ್ಲಾ ಚಿತ್ರಗಳು ಸೊಗಸಾಗಿದ್ದುವು. ಅಭಿನಂದನೆಗಳು ಅನ್ವಿ.
      ಈ ವಾರದ ಪದದಂಗಳ ಸಂಚಿಕೆ ಸ್ವಲ್ಪ ಸರಳ ಅಂತ ಕಂಡಿತು. ಧನ್ಯವಾದಗಳು ರಮೇಶ ಸರ್.
           ಎಲ್ಲರಿಗೂ ವಂದನೆಗಳು.
...................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************



 ನಮಸ್ಕಾರಗಳು,
      ದ್ವೇಷ ತಿರಸ್ಕಾರವನ್ನು ಪ್ರೇಮದಿಂದ ಮಾತ್ರ ಗೆಲ್ಲಲು ಸಾಧ್ಯ ಎನ್ನುವುದನ್ನು ಸುಂದರವಾದ ಎರಡು ಕಥೆಗಳ ಮೂಲಕ ನಿರೂಪಿಸಿದ್ದಿರಿ ಸರ್. ಧನ್ಯವಾದಗಳು ಜ್ಞಾನೇಶ್ ಸರ್.
      ಸಂತ ಶಿಶುನಾಳ ಶರೀಫರವರ ಸುಂದರ ಕವನ 'ಕೋಡಗನ ಕೋಳಿ ನುಂಗಿತ್ತ' ಕವನದ ಸುಂದರ ಸಾರಾಂಶವನ್ನು ತಿಳಿಸಿದ ರಮೇಶ್ ಸರ್ ಅವರಿಗೆ ಧನ್ಯವಾದಗಳು.
      ಕಣ್ಣಿನಲ್ಲಿ ದೃಷ್ಟಿ ಮೂಡುವ ವಿಧಾನ ವಿವಿಧ ಬಣ್ಣಗಳನ್ನು ಗುರುತಿಸುವಿಕೆಯ ಕುರಿತ ವಿವರಣಾತ್ಮಕವಾದ ಲೇಖನ ಈ ಸಲ ವೈಜ್ಞಾನಿಕ ಸಂಚಿಕೆಯಲ್ಲಿ ದಿವಾಕರ ಸರ್ ರವರಿಂದ ಉತ್ತಮವಾಗಿತ್ತು.
      ನಾನು ಮಂಚಿ ಪ್ರೌಢಶಾಲೆಯಲ್ಲಿದ್ದಾಗ ಔಷಧೀಯ ಸಸ್ಯಗಳ ಪರಿಚಯಕ್ಕಾಗಿ ಕೈಯೂರು ನಾರಾಯಣ ಭಟ್ ರವರ ಸಹಕಾರದಿಂದ ಕೆಲವೊಂದು ಔಷಧೀಯ ಗಿಡಗಳನ್ನು ಬೆಳಸಿದ್ದೆ ಆಗ ಒಳ್ಳೆ ಕೊಡಿ ಗಿಡವನ್ನೂ ಬೆಳಸಿದ್ದೆ. ಈ ಗಿಡದ ಸೊಗಸಾದ ಪರಿಚಯಕ್ಕಾಗಿ ಧನ್ಯನಾದಗಳು ಮೇಡಂ.
      ಬೌದ್ಧ ಧರ್ಮವು ಅನಾವರಣಗೊಂಡಿರುವ ಟಿಬೇಟಿಯನ್ನರು ಹೆಚ್ಚಾಗಿ ವಾಸ ಮಾಡುವ ಮುಂಡಗೋಡದ ಕುರಿತಾದ ಮಾಹಿತಿ ಈ ಸಲದ ಪಯಣ ಸಂಚಿಕೆಯಲ್ಲಿ ರಮೇಶ್ ಸರ್ ಅವರಿಂದ ಉತ್ತಮವಾಗಿತ್ತು.
       ಶಶಾಂಕ್ ನ ಅಳಿಲು ಮರಿ ಎನ್ನುವ ಸುಂದರವಾದ ಪುಸ್ತಕದ ಪರಿಚಯ ಈ ಸಲ ವಾಣಿಯಕ್ಕನವರಿಂದ.
      ರಮೇಶ ಉಪ್ಪುಂದ ರವರ ಪದದಂಗಳ ಸಂಚಿಕೆ ಚೆನ್ನಾಗಿತ್ತು.
     ಧರಿತ್ರಿ ಭಟ್ ಹಾಗೂ ಅಶ್ವಿತಾ 
ರವರ ಕುಂಚದಲ್ಲಿ ಅರಳಿದ ಚಿತ್ರಗಳು ಅದ್ಭುತವಾಗಿದ್ದವು. ಅಭಿನಂದನೆಗಳು ಧರಿತ್ರಿ ಭಟ್ ಹಾಗೂ ಅಶ್ವಿತಾರವರಿಗೆ. ಯುಗಾದಿಯ ಕುರಿತಾದ ಕಾವ್ಯ ಹಾಗೂ ಭೂಮಿಕಾರವರ ಕವನಗಳು ಸೊಗಸಾಗಿದ್ದುವು. ಕಾವ್ಯ & ಭೂಮಿಕಾ ರವರಿಗೆ ಅಭಿನಂದನೆಗಳು.
     ಎಲ್ಲರಿಗೂ ಮನದಾಳದ ಕೃತಜ್ಞತೆಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************


ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು, ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ.. ಇವರಿಗೆ ಧನ್ಯವಾದಗಳು. 
       ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************


Ads on article

Advertise in articles 1

advertising articles 2

Advertise under the article