-->
ಜೀವನ ಸಂಭ್ರಮ : ಸಂಚಿಕೆ - 185

ಜೀವನ ಸಂಭ್ರಮ : ಸಂಚಿಕೆ - 185

ಜೀವನ ಸಂಭ್ರಮ : ಸಂಚಿಕೆ - 185
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
                                           
 
ಮಕ್ಕಳೇ... ಇಂದು ರಾಮಾಯಣದ ಘಟನೆ ಹೇಳುತ್ತೇನೆ. ರಾಮ, ಸೀತೆಯನ್ನು ವಿವಾಹವಾಗುತ್ತಾನೆ. ಜನಕ ಮಹಾರಾಜನಿಗೆ, ಸೀತೆ ಅಂದರೆ ಅಷ್ಟೊಂದು ಇಷ್ಟ. ಅವಳಿಗೆ ಯಾವ ರೀತಿ ನೋವು ಆಗದಂತೆ ನೋಡಿಕೊಂಡಿದ್ದನು. ಆಕೆಗೆ ಕಷ್ಟ, ನೋವು ಅನ್ನುವುದು ಗೊತ್ತಿರಲಿಲ್ಲ. ರಾಮನನ್ನು ವಿವಾಹವಾದಾಗ ಅಯೋಧ್ಯೆಯ ರಾಣಿ ಆಗುತ್ತೇನೆ ಎನ್ನುವ ಕನಸನ್ನು ಕಂಡಿದ್ದಳು. ಕೈಕೇಯಿ ಮತ್ತು ಮಂಥರೆಯ ಕುತಂತ್ರದಿಂದ ಕಾಡಿಗೆ ಹೋಗಬೇಕಾಗುತ್ತದೆ. ರಾಮ, ಸೀತೆಗೆ "ನೀನು ಇಲ್ಲೇ ಇರು, ನೀನು ಬರುವುದು ಬೇಡ" ಎಂದು ಹೇಳುತ್ತಾನೆ. ಆಗ ಆಕೆ ಹೇಳುತ್ತಾಳೆ, "ಎಲ್ಲಿ ರಾಮನೋ, ಅದೇ ಅಯೋಧ್ಯ, ಹಾಗಾಗಿ ನಿನ್ನ ಬಿಟ್ಟು ನಾನು ಇರುವುದಿಲ್ಲ. ನಾನು ನಿನ್ನ ಜೊತೆ ಬರುತ್ತೇನೆ" ಎಂದು ಹಠ ಮಾಡಿ ಹೋದಳು. ಇವರಿಗೆ ರಕ್ಷಕನಾಗಿ ಲಕ್ಷ್ಮಣನು ಕಾಡಿಗೆ ಹೋಗುತ್ತಾನೆ. 

ಕಾಡು ಅಂದರೆ ದಟ್ಟವಾದ ಕಾಡು, ಮೃಗಗಳು ಇದ್ದವು. ಅಲ್ಲೇ ಒಂದು ಗುಡಿಸಲು ಹಾಕಿಕೊಂಡು, ಹಣ್ಣು ಹಂಪಲು ಸಂಗ್ರಹಿಸಿಕೊಂಡು ವಾಸವಾಗಿದ್ದರು. ಆ ಕಾಡಿನ ಸೌಂದರ್ಯದಲ್ಲಿ ಮುಳುಗಿ ಹೋದರು. ಅವರಿಗೆ ಅರಮನೆಯ ನೆನಪಿರಲಿಲ್ಲ. ರಾಮನ ಮನಸ್ಸಿನಲ್ಲಿ ಸೀತೆ, ಸೀತೆಯ ಮನಸ್ಸಿನಲ್ಲಿ ರಾಮ. ಹೊಸ ಮದುವೆ. ಬರಿ ಸಂತೋಷವೇ ಸಂತೋಷ. ಹೀಗೆ 13 ವರ್ಷ ಸಂತೋಷವಾಗಿ ಕಳೆದಿದ್ದರು. ಕಡೆಯ ಒಂದು ವರ್ಷದಲ್ಲಿ ಶೋಕ ಶುರುವಾಗುತ್ತದೆ. ರಾವಣ ಸನ್ಯಾಸಿ ವೇಷದಲ್ಲಿ ಬಂದು, ಸೀತೆಯ ಸೌಂದರ್ಯಕ್ಕೆ ಮರುಳಾಗಿ, ಸೀತೆಯನ್ನೇ ಅಪಹರಣ ಮಾಡುತ್ತಾನೆ. ರಾವಣ ಮನಸ್ಸು ಮಾಡಿದರೆ ಏನು ಬೇಕಾದರೂ ಆಗುತ್ತಿತ್ತು. ಆತ ಆಕೆಯನ್ನು ಒಲಿಸಿಕೊಳ್ಳಲು ಪ್ರಯತ್ನಿಸುತ್ತಿದ್ದನು. ಆಕೆಯನ್ನು ಅಶೋಕವನದಲ್ಲಿ ಇರಿಸಿದ್ದನು. ಆಕೆಯ ಮನಸ್ಸಿನಲ್ಲಿ ರಾಮ ಬಿಟ್ಟು, ಬೇರೆ ಏನು ಇರಲಿಲ್ಲ. ಆಕೆ ಪತಿವೃತೆಯಾಗೆ ಇದ್ದಳು. ರಾಮ ಕಪಿ ಸೈನ್ಯದೊಂದಿಗೆ ಸಮುದ್ರ ದಾಟಿ ಬಂದು, ರಾವಣನನ್ನು ಸಂಹರಿಸಿ, ಸೀತೆಯನ್ನು ಅಯೋಧ್ಯೆಗೆ ಕರೆದೊಯ್ದನು. 

ಸೀತೆ ಇನ್ನೇನು ಕಷ್ಟ ಪರಿಹಾರ ಆಯ್ತು ಎಂದು ಭಾವಿಸಿದ್ದಳು. ಆದರೆ ರಾಮನಲ್ಲಿ ಸೀತೆಯ ಮೇಲೆ ಸ್ವಲ್ಪ ಸಂಶಯ ಇತ್ತು. ಆ ಸಂಶಯ ಪರಿಹಾರಕ್ಕಾಗಿ ಅಗ್ನಿ ಪ್ರವೇಶ ಮಾಡಿದಾಗ, ಅಗ್ನಿಯೇ ರಾಮನಿಗೆ ಹೇಳುತ್ತಾನೆ, ಸೀತೆ ಪವಿತ್ರಳು ಎಂದು. ಹೀಗೆ ಇರಬೇಕಾದರೆ ಒಮ್ಮೆ ಅಗಸ ತನ್ನ ಹೆಂಡತಿಯನ್ನು ಮನೆಯಿಂದ ಹೊರ ಹಾಕಿರುತ್ತಾನೆ. ರಾಮ ಅದೇ ದಾರಿಯಲ್ಲಿ ಹೋಗುವಾಗ ಅಗಸ ಹೇಳುತ್ತಾನೆ, "ನಾನೇನು ಶ್ರೀರಾಮಚಂದ್ರನೇ, ಬಿಟ್ಟ ಹೆಂಡತಿಯನ್ನು ಮನೆ ಒಳಗೆ ಕರೆದುಕೊಳ್ಳಲು" ಅಂದನು. ಈ ಮಾತು ರಾಮನಿಗೆ ಕೇಳಿಸಿತು. ಇದರ ಅರ್ಥ ನಾನು ರಾಮನಿಗಿಂತ ಶ್ರೇಷ್ಠ ಅಂತ. ಮೊದಲೇ ಸಂಶಯ ಇದ್ದ ರಾಮ, ಲಕ್ಷ್ಮಣನನ್ನು ಕರೆದು ವನವಿಹಾರದ ನೆಪದಲ್ಲಿ ಸೀತೆಯನ್ನು ಕಾಡಿಗೆ ಬಿಡುವಂತೆ ತಿಳಿಸಿದನು. ಆಗ ಸೀತೆ ತುಂಬ ಗರ್ಭಿಣಿ. ಆಕೆಯೂ ಸಂತೋಷದಿಂದ ವನ ಸುತ್ತಾಡಿ ಬರಬಹುದಲ್ಲ ಅಂದುಕೊಂಡು ಹೋದಳು. ಸೀತೆಯನ್ನು ವಾಲ್ಮೀಕಿ ಆಶ್ರಮದಲ್ಲಿ ಬಿಟ್ಟು ಲಕ್ಷ್ಮಣ ಹೇಳಿದ, ನಿಮ್ಮನ್ನು ಇಲ್ಲೇ ಬಿಟ್ಟು ಬರಲು ಅಣ್ಣ ಹೇಳಿದ್ದಾನೆ, ಎಂದು ಹೇಳಿ ಹೊರಟು ಹೋದನು. 

ಆಗ ಸೀತೆಗೆ ಕ್ಷಣ ಹೊತ್ತು ದುಃಖವಾಯಿತು. ನಂತರ ಚಿಂತಿಸಿದಳು. ಇದುವರೆಗೂ ಏನು ರಾಮ ರಾಮ ಅನ್ನುತ್ತಿದ್ದಳೋ ಅದನ್ನು ಮರೆತು, ತನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಕ್ಕಳಿಗಾಗಿ ಬದುಕಬೇಕು. ಅವರನ್ನು ಶ್ರೇಷ್ಠರನ್ನಾಗಿ ಬೆಳೆಸಬೇಕು. ಅವರನ್ನು ಯಾರು ಸೋಲಿಸದಂತೆ ಶಿಕ್ಷಣ ನೀಡಬೇಕು, ಎಂದು ವಿಚಾರ ಮಾಡಿದಳು. ಆಕೆಯ ಮನಸ್ಸಿನಲ್ಲಿ ಅರಮನೆಯಾಗಲಿ, ರಾಮನಾಗಲಿ, ಹಿಂದೆ ಆದ ಸುಖದ ಕಹಿಯ ಘಟನೆ ಯಾವುದನ್ನು ಇಟ್ಟುಕೊಳ್ಳಲಿಲ್ಲ. ಅದನ್ನೆಲ್ಲ ಮರೆತು, ಮಕ್ಕಳ ಲಾಲನೆ ಪಾಲನೆ, ಶಿಕ್ಷಣ ಇದರಲ್ಲಿ ಮಗ್ನಳಾದಳು. ಮಕ್ಕಳ ಆಟದಲ್ಲಿ ತನ್ಮಯ, ಶಿಕ್ಷಣದಲ್ಲಿ ತನ್ಮಯ, ಆಕೆಗೆ ಹೊರಗೆ ಏನು ಇದೆ ಅಂತ ಗೊತ್ತೇ ಆಗಲಿಲ್ಲ. ಅಷ್ಟು ತನ್ಮಯವಾಗಿದ್ದಳು. ತಾನೇ ಮಕ್ಕಳಿಗೆ ಬಿಲ್ಲು ವಿದ್ಯೆ ಕಲಿಸಿದಳು. ಸೀತೆಗೆ ಅವಳಿ ಗಂಡು ಮಕ್ಕಳು. ಹೆಸರು ಲವಕುಶ. ಸುಮಾರು ಹತ್ತು ವರ್ಷದ ಅಂದಾಜು. ರಾಮ, ಅಶ್ವಮೇಧ ಯಾಗ ಮಾಡಿದನು. ಆಶ್ವಕ್ಕೆ ಒಂದು ನಾಮಪಲಕ ಹಾಕಿದ್ದರು. ಇದನ್ನು ಯಾರಾದರೂ ಕಟ್ಟಿ ಹಾಕಿದರೆ ನಮ್ಮ ಜೊತೆ ಯುದ್ಧ ಮಾಡಬೇಕು. ಇಲ್ಲಾ ಅದು ಹೋದ ಜಾಗ ಎಲ್ಲಾ ನಮ್ಮ ರಾಜ್ಯಕ್ಕೆ ಸೇರುತ್ತದೆ, ಎಂದು ಬರೆದಿತ್ತು. ಆಗ ಈ ಬಾಲಕರು ಆ ಅಶ್ವಮೇಧದ ಕುದುರೆಯನ್ನು ಕಟ್ಟು ಹಾಕಿದರು.

ಈ ವಿಷಯ ರಾಮನಿಗೆ ತಿಳಿಯಿತು. ಸೈನ್ಯ ಸಮೇತನಾಗಿ ಯುದ್ಧಕ್ಕೆ ಬಂದನು. ಇಲ್ಲಿ ನೋಡಿದರೆ ಈ ಇಬ್ಬರು ಬಾಲಕರು ಕಟ್ಟಿ ಹಾಕಿರುವುದು. ರಾಮ ಹೇಳಿದ, ಬಿಟ್ಟುಬಿಡು ಎಂದ. ಇದು ಬಿಡಬೇಕಾದರೆ ನಮ್ಮ ಜೊತೆ ಯುದ್ಧ ಮಾಡಬೇಕು ಎಂದರು ಬಾಲಕರು. ಏನು ಹೇಳಿದರೂ ಬಿಡದೆ ಇದ್ದಾಗ, ಯುದ್ಧ ಅನಿವಾರ್ಯವಾಗಿತ್ತು. ಆ ಯುದ್ಧದಲ್ಲಿ ಲವಕುಶ ಗೆದ್ದಿದ್ದರು.

ಮಕ್ಕಳೇ ಕೃತಿಯನ್ನು ಯಾಕೆ ಹೇಳಿದೆ ಅಂದರೆ, ಹಳೆಯದನ್ನು, ಕಹಿ ಘಟನೆಯನ್ನು ಮರೆಯಬೇಕು. ಯಾವ ಮಾತು, ಘಟನೆ, ವಸ್ತು ಮತ್ತು ವ್ಯಕ್ತಿಯಿಂದ ನಮಗೆ ನೋವಾಗಿರುತ್ತದೆಯೋ ಅದನ್ನು ಮರೆಯಬೇಕು. ಸೀತೆಯಷ್ಟು ಕಷ್ಟ ನಮಗೆ ಬರುವುದಿಲ್ಲ. ಆಕೆ ಏನಾದರೂ ಹಳೆಯದನ್ನು, ಕಹಿ ಘಟನೆಯನ್ನೇ ನೆನೆಯುತ್ತ ಇದ್ದಿದ್ದರೆ, ಆಕೆಯ ಜೀವನವು ನರಕವಾಗುತ್ತಿತ್ತು. ಮಕ್ಕಳ ಬದುಕು ದುಖಮಯವಾಗುತ್ತಿತ್ತು. ಆದರೆ ಆಕೆ ಹಳೆಯದನ್ನು ನೆನೆಯದೇ, ಹೇಗೆ ವಿಚಾರ ಮಾಡಿದರೆ ಸಂತೋಷವಾಗುತ್ತೋ ಹಾಗೆ ಆಕೆ ಆಲೋಚನೆ ಮಾಡಿದ್ದಳು. ಹಾಗೆ ನಾವು ಅವುಗಳನ್ನು ನೆನೆಯದೆ, ಸುಂದರ ವಿಚಾರ ಕುರಿತು ಆಲೋಚಿಸಿದರೆ, ದುಃಖದಿಂದ, ನೋವಿನಿಂದ ಪಾರಾಗಬಹುದು ಅಲ್ಲವೇ ಮಕ್ಕಳೇ...
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
*******************************************


Ads on article

Advertise in articles 1

advertising articles 2

Advertise under the article