-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 160

ಸ್ಫೂರ್ತಿಯ ಮಾತುಗಳು : ಸಂಚಿಕೆ - 160

ಸ್ಫೂರ್ತಿಯ ಮಾತುಗಳು : ಸಂಚಿಕೆ - 160
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
                                 

ಮಕ್ಕಳೇ... ಶಿಶುನಾಳ ಶೆರೀಫರ “ಕೋಡಗನ ಕೋಳಿ ನುಂಗಿತ್ತಾ” ಹಾಡಿನ ಕುರಿತಾದ ವ್ಯಾಖ್ಯಾನವನ್ನು ಕಳೆದೆರಡು ಸಂಚಿಕೆಗಳಿಂದ ಓದುತ್ತಿದ್ದೀರಿ. ನೀವು ಅರ್ಥೈಸಿ ಆಸ್ವಾದಿಸಿ ಸಂತಸ ಪಟ್ಟಿರುವಿರಿ ಎಂಬ ಭಾವನೆಯಿಂದ ಮುಂದಿನ ಸಾಲುಗಳನ್ನು ವಿವರಿಸುವೆ
ಎತ್ತು ಜತ್ತಗಿ ನುಂಗಿ
ಬತ್ತ ಬಾನವ ನುಂಗಿ
ಕುಂಟಿ ಹೊಡೆಯೋ ಅಣ್ಣನನ್ನೆ ಮೇಳಿ ನುಂಗಿತ್ತ!

ಗುಡ್ಡ ಗವಿಯನ್ನು ನುಂಗಿ
ಗವಿಯು ಇರುವೆಯ ನುಂಗಿ
ಗೋವಿಂದ ಗುರುವಿನ ಪಾದ ನನ್ನನೇ ನುಂಗಿತ್ತ – 

ಹಳ್ಳಿಯ ಬದುಕಿಗೆ ಎತ್ತುಗಳು, ಜತ್ತಗಿ, ಮೇಳಿ, ಕುಂಟಿ ಮೊದಲಾದುವು ಅಪರಿಚಿತವೇನಲ್ಲ. ಜತ್ತಗಿ ಎಂದರೆ ಉಳುಮೆಯ ವೇಳೆ ಎರಡು ಎತ್ತುಗಳ ಕುತ್ತಿಗೆಗಳ ಮೇಲೆ ಇರಿಸುವ ನೊಗ. ಉಳುವಾಗ ಎತ್ತುಗಳು ಯರ್ರಾ ಬಿರ್ರಿಯಾಗಿ ಓಡದಂತೆ ಅವುಗಳಿಗೆ ನೊಗವು ಲಗಾಮು ಹಾಕುವುದು. ಈ ಲಗಾಮಿನಿಂದ ಪಾರಾದರೆ ಎತ್ತಿಗೆ (ಕರ್ಮಿಗೆ) ಮುಕ್ತಿ ಅಥವಾ ಸ್ವಾತಂತ್ರ್ಯ. ಎತ್ತುಗಳು ಪಾರಾದರೆ (ನಿಯಂತ್ರಣದ ಅಗತ್ಯವಿಲ್ಲದೇ ಆದರೆ) ಎತ್ತು ನೊಗವನ್ನು ನುಂಗಿದಂತಾಯಿತು. ಒಟ್ಟು ಭಾವನೆಯನ್ನು ವ್ಯಾಖ್ಯಾನಿಸುವುದಾದರೆ ಮನುಷ್ಯನು ತನ್ನ ಕರ್ಮವನ್ನು ಧರ್ಮದ ನೆರಳು ಮತ್ತು ನಿಯಂತ್ರಣದಲ್ಲಿ ನಡೆಸಿದಾಗ ಜೀವನವೆಂಬ ಬಂಧನ ಕಳಚಿ (ಜತ್ತಗಿಯಿಂದ ಪಾರಾಗಿ) ಮೋಕ್ಷಪಡೆಯ ಬಹುದು. ಬದುಕಿನ ಎಲ್ಲ ಬಂಧನಗಳು ನಾಶವಾಗಿ ಮೋಕ್ಷ ಸಾಧನೆಯಾಗುತ್ತದೆ.

ಬತ್ತವೆಂದರೆ ಉಳುಮೆಯಿಂದ ದೊರೆಯುವ ಫಲ. ಬಾನವೆಂದರೆ ಭತ್ತವನ್ನು ಧಾರಣೆ ಮಾಡುವ ಪಾತ್ರೆ ಅಥವಾ ಬಾಣಲೆ. ಈ ಸಾಲಿನಲ್ಲಿ ಶಿಶುನಾಳ ಶೆರೀಪರು ಬಾನವೆಂದು ಮಾನವನ ದೇಹವನ್ನು ಸಂಕಲ್ಪಿಸಿರುವರು. ದೇಹದೊಳಗಿರುವ ಭಗವದ್ರೂಪಿಯಾದ ಭಗವಂತನೇ ಫಲರೂಪದ ಭತ್ತ. ಬಾನವು (ದೇಹವು) ಭಗವಂತನಿಂದಾಗಿ ಚೈತನ್ಯಶಾಲಿಯಾಗಿರುತ್ತದೆ. ಬಾನ (ದೇಹ) ದೊಳಗೆ ಫಲ (ಭಗವಂತ) ಇಲ್ಲದೇ ಇದ್ದರೆ ಆತ ಹೆಣ, ದೇಹದ ಚೈತನ್ಯವು ಭಗವದನುಗ್ರಹ ಎಂದು ಅರಿವಾದಾಗ ಬತ್ತ ಬಾನವನ್ನು (ದೇಹ) ನುಂಗುತ್ತದೆ, ದೇಹವನ್ನೇ ಭಗವಂತ ಆವರಿಸಿದಂತಾಗುತ್ತದೆ ಎಂದು ಅಭಿಪ್ರಾಯಪಡಬೇಕು. 

ಕುಂಟಿ ಹೊಡೆಯುವುದೆಂದರೆ ಗದ್ದೆಯ (ಮನಸ್ಸು) ಉಳುಮೆ ಮಾಡುವುದೆಂದರ್ಥ. ಉಳುಮೆಗೆ ನೇಗಿಲು ಬೇಕು. ನೇಗಿಲಿನ ತುದಿಗೆ ಕಬ್ಬಿಣದ ಮೊನಚಾದ ಶಲಾಕೆಯನ್ನು ಜೋಡಿಸಿರುತ್ತಾರೆ. ಮೇಳಿಯೆಂದರೆ ನೇಗಿಲು ನಡೆಸುವ ಅಣ್ಣನು ಕೈಯಲ್ಲಿ ಹಿಡಿಯುವ ಆಧಾರದ ಗೂಟ (ಏಕಾಗ್ರತೆ). ಈ ಆಧಾರದ ಗೂಟ ಗಟ್ಟಿಯಾಗಿ ಹಿಡಿದು ಕೊಳ್ಳದೇ ಇದ್ದರೆ ನೇಗಿಲು ಯದ್ವಾ ತದ್ವಾ ಹರಿದು ಓರೆಕೋರೆಯಾಗಿ ಸಾಗುವುದು. ಇದರಿಂದಾಗಿ ಕುಂಟಿ (ನೆಲ, ಮಣ್ಣಿನ ಹೆಂಟೆ) ಹದವಾಗಿ ಹುಡಿಯಾಗಿದು; ಎಂದರೆ ಮನಸ್ಸು ಪಕ್ವವಾಗದು. ಮೇಳಿಯೆಂಬ ನಿಯಂತ್ರಕನಿಲ್ಲದೇ ಇದ್ದಾಗ ನೆಲ (ಮನಸ್ಸು) ಮೂರಾ ಬಟ್ಟೆಯಾಗುತ್ತದೆ, ಬದುಕಿನ ಮೇಳಿಯೇ ಬಗವಂತ. ಬದುಕು ಭಗವಂತನ ಆಶಯದಂತೆ ಸಾಗಲು ಮನಸ್ಸು ಭಗವಂತನಲ್ಲಿ ಏಕಾಗ್ರವಾಗಿರಬೇಕು. ಆಗ ದೇವರ ಪಾದವು ಸುಲಭವಾಗಿ ಪ್ರಾಪ್ತಿಯಾಗುತ್ತದೆ; ಅರ್ಥಾತ್‌ ಮೋಕ್ಷ ಪ್ರಾಪ್ತಿಯು ಸುಲಲಿತವಾಗುತ್ತದೆ.

ಗುಡ್ಡವಂದರೆ ಶರೀರ. ಗವಿಯೆಂದರೆ ನಮ್ಮೊಳಗಿನ ಆತ್ಮ ಶಕ್ತಿ ಅಥವಾ ಅಂತಃಶಕ್ತಿ. ಅಂತಃಶಕ್ತಿಯು ದೇಹವನ್ನು ನಿಯಂತ್ರಿಸುತ್ತದೆ. ಇರುವೆಯೆಂದರೆ ಜ್ಞಾನ. ದೇಹದ ಆತ್ಮಶಕ್ತಿಯು ಜ್ಞಾನದಿಂದ ಇನ್ನೂ ಹರಿತ ಅಥವಾ ಪಕ್ವಗೊಳ್ಳುತ್ತದೆ. ಅಂತಃಶಕ್ತಿ ಮತ್ತು ಜ್ಞಾನಗಳ ಸಿದ್ಧಿಯೇ ನಾನು ಎಂಬುದನ್ನು ಅರಿಯಲು ಕಾರಣವಾಗುತ್ತದೆ. ನಾನು ಎಂಬ ಅಹಂ ನಾಶವಾದರೆ ಗುರುಗೋವಿಂದ ಪಾದ ಎಂದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಶಿಶುನಾಳ ಶೆರೀಫರು ಸೂಚ್ಯವಾಗಿ ತಿಳಿಸಿದ್ದಾರೆ. ನುಂಗುವುದು ಎಂಬುದಕ್ಕೆ ಎಲ್ಲಾ ಕಡೆ ಕ್ಷಯಿಸುವುದು ಅಥವಾ ನಾಶವಾಗುವುದು ಎಂದು ಅರ್ಥಮಾಡಬೇಕು. 

ಗುರುಗೋವಿಂದನ ಅನುಗ್ರಹ ಒದಗಲು “ನಾನು” ಅಥವಾ “ನನ್ನ” ಎಂಬ ಅಹಂಕಾರ ನಾಶವಾಗಬೇಕು. ಉನ್ನತ ಪದ ಅಥವಾ ಪದವಿ ಪ್ರಾಪ್ತಿಯಾಗಲು ಅವನತ ಪದ ಅಥವಾ ಪದವಿಯನ್ನು ಕಳೆದುಕೊಳ್ಳಲೇ ಬೇಕು ತಾನೇ? ನನ್ನದು ಎಂಬುದು ಶೂನ್ಯ. ಭಗವಂತನೆಂಬುದೇ ಮಾನ್ಯ ಎಂಬ ಸತ್ಯ ಮತ್ತು ತತ್ವವನ್ನು ಶಿಶುನಾಳ ಶೆರೀಫರು ಕೋಡಗನಕೋಳಿನುಂಗಿತ್ತಾ ಹಾಡಿನೊಳಗೆ ಹಾಸು ಹೊಕ್ಕಾಗಿ ನಿರೂಪಿಸಿದ್ದಾರೆ.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** 


Ads on article

Advertise in articles 1

advertising articles 2

Advertise under the article