ಪಯಣ : ಸಂಚಿಕೆ - 35 (ಬನ್ನಿ ಪ್ರವಾಸ ಹೋಗೋಣ)
Friday, March 21, 2025
Edit
ಪಯಣ : ಸಂಚಿಕೆ - 35 (ಬನ್ನಿ ಪ್ರವಾಸ ಹೋಗೋಣ)
ಲೇಖನ : ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದು ಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ
ಇಂದಿನ ಪ್ರವಾಸದಲ್ಲಿ ಪ್ರಸಿದ್ಧ ಪಕ್ಷಿಧಾಮವಾದ ಕೊಕ್ಕರೆ ಬೆಳ್ಳೂರಿಗೆ ಪಯಣ ಮಾಡೋಣ ಬನ್ನಿ....
ಮದ್ದೂರು ಹತ್ತಿರದ ಬೆಳ್ಳೂರಿಗೆ ಕೊಕ್ಕರೆ ಬೆಳ್ಳೂರೆಂಬ ಹೆಸರು ಬಂದಿದೆ. ವರ್ಷಕ್ಕೊಮ್ಮೆ ದೇಶ ವಿದೇಶಗಳಿಂದ ಸಂತಾನವೃದ್ಧಿಗೆ ಬರುವ ಅಸಂಖ್ಯ ಕೊಕ್ಕರೆಗಳಿಂದ, ಬೆಳ್ಳೂರಿನ ಹೊಲದ ಮರಗಳಲ್ಲಿ ಗೂಡುಕಟ್ಟಿ ಮೊಟ್ಟೆ ಇಟ್ಟು ಮರಿ ಮಾಡಿ ಸಲಹಿ ತಮ್ಮ ಸ್ಥಾನಕ್ಕೆ ತಮ್ಮೊಡನೆ ಕರೆದೊಯ್ಯುವ ಕ್ರಿಯೆ ನಿರಂತರವಾಗಿ ನಡೆಯುತ್ತಿದೆ.
ಪೆಲಿಕಾನಾ, ಪೆಯಿಂಟೆಡ್ ಸ್ಟಾರ್ಕ್ ಕೊಕ್ಕರೆಗಳೂ ಸೇರಿದಂತೆ ಹಲವಾರು ಜಾತಿಯ ಹಕ್ಕಿಗಳು ಗ್ರಾಮಸ್ಥರ ಅತಿಥಿಗಳು, ಹಕ್ಕಿಗಳಿಗೆ ತೊಂದರೆಯಾಗದಂತೆ ಕಾಪಾಡುವುದು ಅವರ ಹೊಣೆ, ಸಾಮಾನ್ಯವಾಗಿ ಡಿಸೆಂಬರ್ ನಿಂದ ಏಪ್ರಿಲ್ ವರೆಗೆ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಚನ್ನಪಟ್ಟಣ ಮತ್ತು ಮದ್ದೂರಿನ ನಡುವೆ ಸಿಗುವ ರುದ್ರಾಕ್ಷಿಪುರ ಊರಿನ ಹತ್ತಿರ ಬಂದಂತೆ ಕೊಕ್ಕರೆ ಬೆಳ್ಳೂರಿಗೆ ದಾರಿ ಎಂಬ ನಾಮಫಲಕ ಹೇಗೆ ಹೋಗಬೇಕೆಂದು ಸೂಚಿಸುತ್ತದೆ.
ಊರಿಗೆ ಬರುತ್ತಿದ್ದಂತೆಯೇ ಮರಗಳ ಮೇಲೆ ಪುಟ್ಟ ಪುಟ್ಟ ಗೂಡು ಕಟ್ಟಿ ಹಾರಾಡುವ ಪಕ್ಷಿಗಳೇ ಬೆಳ್ಳೂರನ್ನು ನಮಗೆ ಪರಿಚಯಿಸುತ್ತವೆ.
ಜನವರಿಯಿಂದ ಕೊಕ್ಕರೆಗಳು ಬರುವುದಕ್ಕೆ ಪ್ರಾರಂಭಿಸುತ್ತವೆ. ಜುಲೈ ನಂತರ ಮತ್ತೆ ಬೇರೆ ಕಡೆ ಹೋಗುತ್ತವೆ. ಪೆಂಟೆಡ್‌ಸ್ಟಾರ್ಕ್ ( ರಂಗುಕೊಕ್ಕರೆ ) ಪೆಲಿಕನ್ (ಹೆಜ್ಜಾರ್ಲೆ) ಎಂಬ ಎರಡು ವಿಧದ ನೀರು ಹಕ್ಕಿಗಳು ಇಲ್ಲಿ ಹೆಚ್ಚಾಗಿವೆ.
ರಾತ್ರಿಬಕ, ಕೊಳದ ಬಕ, ಕಾಮ ಕಾಗೆ, ಬೆಳ್ಳಕ್ಕಿ, ನೀರುಕಾಗೆ ಮೊದಲಾದ 6,000ಕ್ಕೂ ಹೆಚ್ಚು ಕೊಕ್ಕರೆಗಳು ಊರಿನ ಮನೆಗಳ ಮುಂದೆ ಇರುವ ಮರಗಳಲ್ಲಿ, ಅಕ್ಕಪಕ್ಕದ ಹೊಲಗದ್ದೆಗಳಿಂದ ತಂದ ಒಣ ಹುಲ್ಲು, ಕಡ್ಡಿಗಳಿಂದ ಗೂಡು ಕಟ್ಟಿ ಮೊಟ್ಟೆ ಇಟ್ಟು 18 ರಿಂದ 22 ದಿನಗಳ ನಂತರ ಕಾವು ಕೊಟ್ಟು ಮರಿ ಮಾಡಿ ಪಾಲನೆ ಪೋಷಣೆ ಮಾಡಿದ ಮೇಲೆ ಬೇರೆ ಕಡೆ ಹೋಗುತ್ತವೆ. ಈ ಕೊಕ್ಕರೆಗಳ ಜೀವಿತಾವಧಿ 18 ರಿಂದ 20 ವರ್ಷ.
ರುದ್ರಾಕ್ಷಿಪುರ ಗೇಟ್‌ನಿಂದ 12 ಕಿ.ಮೀ. ಕ್ರಮಿಸಿದರೆ ಕೊಕ್ಕರೆ ಬೆಳ್ಳೂರು ಸಿಗುತ್ತದೆ. ಬೆಂಗಳೂರು ಕಡೆಯಿಂದ 87 ಕಿ.ಮೀ, ಮೈಸೂರಿನಿಂದ 77 ಕಿ.ಮೀ. ಬೆಂಗಳೂರಿನಿಂದ 82, ಮೈಸೂರಿನಿಂದ 44 ಹಾಗೂ ಮಂಡ್ಯದಿಂದ 12 ಕಿ.ಮೀ. ದೂರದಲ್ಲಿದೆ ಈ ಕೊಕ್ಕರೆ ಬೆಳ್ಳೂರು.
"ಪಕ್ಷಿಗಳ ಲೋಕದಲ್ಲಿ ಕೊಕ್ಕರೆ ಆಶ್ರಯ ತಾಣ, ದೇಶ ವಿದೇಶಗಳ ನಾನಾ ಜಾತಿಯ ಕೊಕ್ಕರೆಯ ಸಂತಾನೋತ್ಪತ್ತಿ ಅತಿ ಅದ್ಭುತ ಪ್ರಕೃತಿಯ ಒಡಲು - ಈ ಪಕ್ಷಿಧಾಮ ಕೊಕ್ಕರೆ ಬೆಳ್ಳೂರು." ಬನ್ನಿ , ನೋಡಿ : ಆನಂದಿಸಿ ಕೊಕ್ಕರೆಯ ಜೀವ ಜಗತ್ತನ್ನ ......
ಮತ್ತೆ ಮುಂದಿನ 'ಪಯಣ' ಸಂಚಿಕೆಯಲ್ಲಿ ಸಿಗೋಣವೇ, ನಮಸ್ಕಾರ.
(ಚಿತ್ರಗಳು : ಅಂತರ್ಜಾಲ ಕೃಪೆ)
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
********************************************