ಓ ಮುದ್ದು ಮನಸೇ ...…...! ಸಂಚಿಕೆ - 35
Thursday, March 20, 2025
Edit
ಓ ಮುದ್ದು ಮನಸೇ ...…...! ಸಂಚಿಕೆ - 35
ಲೇಖಕರು : ಡಾ. ಗುರುರಾಜ್ ಇಟಗಿ
ಸಂಶೋಧಕರು ಮತ್ತು ಆಪ್ತ-ಸಮಾಲೋಚಕರು
ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳು, ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
Mob : 63610 07190
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಬಾಗವಹಿಸಲು ಗೆಳೆಯನ ಹಳ್ಳಿಗೆ ಹೋಗಿದ್ದೆ. ಹಳ್ಳಿಗಳಿಂದ ಬಹುದೂರ, ಪಟ್ಟಣದಲ್ಲಿ ಬದುಕು ಕಟ್ಟಿಕೊಂಡಿರುವ ನಮಗೆ ಅಪರೂಪದ ಈ ಭೇಟಿ ಮನಸ್ಸಿಗೆ ತುಂಬ ಮುದನೀಡಿತ್ತು. ಕಾರ್ಯಕ್ರಮ ಮುಗಿದು ಊಟ ಮಾಡುವಷ್ಟರಲ್ಲಿ ಸಂಜೆ ನಾಲ್ಕು ಗಂಟೆ! ಒಮ್ಮೆ ಊರನ್ನೆಲ್ಲಾ ನೋಡಿ ಬರೋಣವೆಂದು, ನಾಲ್ಕಡಿ ಅಗಲದ ಕಾಲುದಾರಿಗೆ ಸಿಮೆಂಟ್ ಮೆತ್ತಿ ಭ್ರಷ್ಟಾಚಾರದ ಬಣ್ಣ ಬಳಿದಂತಿದ್ದ ರಸ್ತೆಯಲ್ಲಿ ಹೆಜ್ಜೆ ಹಾಕಿದೆವು. ಸ್ವಲ್ಪ ಮುಂದೆ ಸಾಗುತ್ತಲೆ ನೂರಾರು ವರ್ಷಗಳ ಹಿಂದೆಯೇ ನಿರ್ಮಾಣಗೊಂಡಂತೆ ತೋರುತ್ತಿದ್ದ ಪುಟ್ಟದೊಂದು ಗುಡಿ ಗೋಚರಿಸಿತು. ಅದರ ಎದುರಲ್ಲೇ ಸೊಂಪಾಗಿ ಬೆಳೆದು ತನ್ನ ರೆಂಬೆಗಳನ್ನು ಉದ್ದುದ್ದ ಚಾಚಿ ಥೇಟ್ ಹಸಿರು ಹಾಸಿನ ಮನೆಯಂತೆ ಕಂಗೊಳಿಸುತ್ತಿದ್ದ ಅರಳಿ ಮರದ ಕಟ್ಟೆಯ ಮೇಲೆ ಕುಳಿತು ಹರಟುತ್ತಿದ್ದ ಇಬ್ಬರು ಅಜ್ಜಂದಿರನ್ನು ಪ್ರೀತಿಯಿಂದ ನಮಸ್ಕರಿಸಿ ಪರಿಚಯ ಮಾಡಿಕೊಂಡೆವು. ಅರ್ಧ ತುಂಡಾಗಿದ್ದ ಹಳೇ ಕನ್ನಡಕಕ್ಕೆ ದಾರ ಸುತ್ತಿ ಕಿವಿಗೆ ಸಿಕ್ಕಿಸಿಕೊಂಡು, ಲೆಕ್ಕಕ್ಕೂ ಸಿಗದಷ್ಟು ತೂತು ಬಿದ್ದಿರುವ ಬಿಳಿ ಬಣ್ಣದ ಅಂಗಿ, ತೊಡೆ ಮಟ್ಟಕ್ಕೆ ಎಳೆದು ಕಟ್ಟಿಕೊಂಡಿರುವ ಪಂಚೆ, ಹೆಗಲ ಮೇಲೊಂದು ಶಾಲು, ಕೈಯ್ಯಲ್ಲಿ ಕೋಲು ಇವೇ ಅಜ್ಜಂದಿರ ಗುರುತು. ಅವರಿಬ್ಬರನ್ನು ನೋಡುತ್ತಲೇ ಸಾವಿರ ಪುಟಗಳ ಅವರ ಬದುಕಿನ ಕಹಾನಿ ನನ್ನ ಕಣ್ಣಮುಂದೆ ಬಂತು.
ಅಜ್ಜ ಹೇಗಿದ್ದೀರಿ? ಅಂದ ನನಗೆ ಅವರ ಉತ್ತರ ಕೇಳಿ ಮರುಕ ಉಂಟಾಯಿತು. "ಹೆಂಗಿದ್ದೀರಿ ಅಂತ ಕೇಳ್ತೀಯಲ್ಲೋ ಮಾರಾಯ. ನಾಡು ಹೋಗು ಅಂತದೆ, ಕಾಡು ಬಾ ಅಂತದೆ. ನಮ್ಮ ಸರದಿ ಯಾವಾಗ ಬಂದದೋ ಅಂತ ದಾರಿ ನೋಡ್ತಾ ಕುಂತೀವಿ" ಅಂದರು ಅವರು. ನಮ್ಮ ಬದುಕಿಗೆ ವ್ಯಾಲಿಡಿಟಿ ಇಲ್ಲಾ ಅನ್ನುವ ಸತ್ಯ ಗೊತ್ತಿದ್ದೂ ನೂರಾರು ವರುಷಗಳ ಕನಸು ಕಟ್ಟಿಕೊಂಡು ಜೀವನ ಪರ್ಯಂತ ಅವುಗಳ ಸಾಕಾರಕ್ಕಾಗಿ ಹೋರಾಡುವ ನಾವು ವಯಸ್ಸಾದಾಗ ಅದೇಕೆ ಅಷ್ಟು ನಿರುತ್ಸಾಹಿಗಳಾಗಿಬಿಡುತ್ತೇವೆ? ಈ ಅಜ್ಜಂದಿರ ಬಾಯಲ್ಲಿ ಬಂದ ಆ ಮಾತುಗಳು ಅವರ ಮಾತುಗಳಾಗಿರಲಿಕ್ಕೆ ಸಾಧ್ಯವೇ ಇಲ್ಲ. ಇವತ್ತಿನ ಸಮಾಜದಲ್ಲಿ ನಾವು ಹಿರಿಯರನ್ನು ನೋಡಿಕೊಳ್ಳುವ ವಿಧಾನ, ಅವರಿಗೆ ಕೊಡುವ ಗೌರವ ಮಾಯವಾಗಿದೆ. ಅವರ ಮೇಲಿನ ನಮ್ಮ ತಾತ್ಸಾರ ಮನೋಭಾವನೆ ಅವರ ಮನಸ್ಸನ್ನು ಕದಡಿದೆ. ತಮ್ಮ ಎರಡನೇ ಬಾಲ್ಯದಲ್ಲಿ ಮೊಮ್ಮಕ್ಕಳ ಜೊತೆ ಮಕ್ಕಳಾಗಿ ಕಿಂಚಿತ್ ಪ್ರೀತಿ, ಆಸರೆಯನ್ನು ಬಯಸುವ ಹಿರಿ ಮನಸ್ಸುಗಳು ವಿಚಲಿತಗೊಂಡಿವೆ. ತಮ್ಮ ಬದುಕಿನ ಕೊನೆಗಾಲದಲ್ಲಿ ಒಂದಿಡೀ ಜೀವನದ ಪಯಣದಲ್ಲಿ ಒಟ್ಟೊಟ್ಟಿಗೆ ನಡೆದ ಪ್ರೀತಿಯ ಸಂಗಾತಿಯನ್ನು ಕಳೆದುಕೊಂಡಾಗಂತೂ ತೋಡಿಕೊಳ್ಳಲಾಗದ ದುಖಃ ಅವರನ್ನು ಇನ್ನಷ್ಟು ಜರ್ಜರಿತಗೊಳ್ಳುವಂತೆ ಮಾಡುತ್ತದೆ.
ಇವತ್ತಿನ 'ಸೋ ಕಾಲ್ಡ್ ಸಿವಿಲೈಜ್ದ್ ಸೊಸೈಟಿಯಲ್ಲಿ' ಬೆಳೆಯುವ ಎಷ್ಟೋ ಮಕ್ಕಳಿಗೆ ಅಜ್ಜ-ಅಜ್ಜಿಯರ ಇರುವಿಕೆಯೇ ಗೊತ್ತಿರಲಿಕ್ಕಿಲ್ಲ. ನಮ್ಮ ಮಕ್ಕಳಲ್ಲಿ ಹಿರಿಯರ ಬಗ್ಗೆ ಎಂತಹ ಅಭಿಪ್ರಾಯಗಳನ್ನು ನಾವು ಮೂಡಿಸುತ್ತಿದ್ದೇವೆ ಅನ್ನೋದನ್ನು ಒಮ್ಮೆ ನಾವೇ ಯೋಚಿಸಬೇಕಿದೆ. ಕೆಲವೊಮ್ಮೆ ಮಕ್ಕಳು ಅಜ್ಜ-ಅಜ್ಜಿಯರನ್ನು ಆಳವಾಗಿ ಪ್ರಿತಿಸೋದನ್ನ ಕಂಡಾಗ ಸಂತೋಷವಾಗುತ್ತದೆ. ಅಜ್ಜ - ಅಜ್ಜಿಯರನ್ನು ಕಳೆದುಕೊಂಡಾಗ ಮಕ್ಕಳು ಚಡಪಡಿಸೋದನ್ನು ನೋಡಿ ದುಖಃವೂ ಉಮ್ಮಳಿಸುತ್ತದೆ. ಮಕ್ಕಳು ಮತ್ತು ಹಿರಿಯರ ನಡುವಿನ ಅಂತಹದ್ದೊಂದು ಭಾಂದವ್ಯದ ಕೊಂಡಿ ಇತ್ತೀಚೆಗೆ ಕಳಚುತ್ತಿರುವುದು ಖೇದದ ಸಂಗತಿ.
ಹಿರಿಯರ ಕಾಲು ಮುಟ್ಟಿ ನಮಸ್ಕರಿಸುವ ಸಂಸ್ಕಾರವನ್ನು ನಾನು ನನ್ನಜ್ಜಿಯಿಂದ ಕಲಿತವನು. ಹಾಗೆ ಮಾಡುವಾಗ ಹಿರಿಯರ ಕಣ್ಣುಗಳಲ್ಲಿ ಉಕ್ಕಿ ಬರುವ ಪ್ರೀತಿ, ಸಂತೋಷ ಮತ್ತು ಅವರು ಮನದುಂಬಿ ನಮ್ಮನ್ನು ಹರಸೋದನ್ನು ಅನುಭವಿಸೋದೆ ನನಗೊಂತರ ಸಂಭ್ರಮ. ಆ ಸಂಭ್ರಮವನ್ನು ನಾನು ಇವತ್ತಿಗೂ ಆಚರಿಸುತ್ತೇನೆ.
ಸಂಶೋಧಕರು ಮತ್ತು ಆಪ್ತ-ಸಮಾಲೋಚಕರು
ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳು, ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
mob : 63610 07190
********************************************