-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 154

ಸ್ಫೂರ್ತಿಯ ಮಾತುಗಳು : ಸಂಚಿಕೆ - 154

ಸ್ಫೂರ್ತಿಯ ಮಾತುಗಳು : ಸಂಚಿಕೆ - 154
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
                      

ಮನಸ್ಸು ಎಂಬ ಪದಕ್ಕೆ ವ್ಯಾಪಕ ಅರ್ಥಗಳಿವೆ. ಚಿತ್ತ, ಗಮನ, ಆತ್ಮ, ಅಂತರಂಗ, ಭಾವನೆ… ಇವೆಲ್ಲವೂ ಮನಸ್ಸಿಗೆ ಪೂರಕವಾದ ಸಂಗತಿಗಳು. ಚಂಚಲ ಮನಸ್ಸು, ನಿರಾಳ ಮನಸ್ಸು, ಶುದ್ಧ ಮನಸ್ಸು, ಮಲಿನ ಮನಸ್ಸು, ಕುತ್ಸಿತ ಮನಸ್ಸು, ಕೊಳಕು ಮನಸ್ಸು, ಕ್ರೂರ ಮನಸ್ಸು, ಮೃದು ಮನಸ್ಸು, ಶ್ರೀಮಂತ ಮನಸ್ಸು, ಕಳ್ಳಮನಸ್ಸು ಹೀಗೆ ಮನೋಧರ್ಮವನ್ನನುಸರಿಸಿ ಮನಸ್ಸನ್ನು ವಿಶ್ಲೇಷಿಸುತ್ತೇವೆ. ಮುಖವನ್ನು ಮನಸ್ಸಿನ ಕನ್ನಡಿಯೆಂದು ಹೇಳುವುದರಿಂದ ಮುಖವೂ ಮನಸ್ಸಿನ ಪುಟವೇ ಆಗುತ್ತದೆ. ದೇಹದ ಹೃದಯಭಾಗವನ್ನು ಮನಸ್ಸಿನ ಸ್ಥಾನ ಎಂದು ಹೇಳುತ್ತೇವೆ. ಇದರಿಂದಲೇ ಮನಸ್ಸಿನ ಪ್ರಾಮುಖ್ಯತೆ ಅತ್ಯಂತ ಗುರುತರವಾದುದು ಎಂದು ತಿಳಿಯುತ್ತದೆ.

ಮನಸ್ಸನ್ನು ಗಾಡಿಗೆ ಹೋಲಿಸುತ್ತೇವೆ. ಮನಸ್ಸಿನ ವೇಗಕ್ಕೆ ಸಮನಾದ ವೇಗವಿಲ್ಲ. ಅದುವೇ ಮನೋವೇಗ. ಕ್ಷಣ ಮಾತ್ರದಲ್ಲಿ ಸ್ವರ್ಗ, ನರಕ, ಪಾತಾಳ.. ಎಲ್ಲ‌ ಲೋಕಗಳನ್ನು ಸುತ್ತಿ ಬರುವ ಅಗಾಧ ಶಕ್ತಿ ಮನಸ್ಸಿಗಿದೆ. ವೇಗದ ಗಾಡಿಯು ನಿಧಾನದ ಗಾಡಿಗಿಂತ ಹೆಚ್ಚು ಅಪಾಯಕಾರಿ. ಗಾಡಿಯ ವೇಗ ಅಪಾಯ ತರದಂತೆ ರಕ್ಷಣೆ ಪಡೆಯಲು ಗಾಡಿಯಲ್ಲಿ ವೇಗ ನಿಯಂತ್ರಕವಿದೆ. ಅದುವೇ ಬ್ರೇಕ್.‌ ಮನಸ್ಸಿನ ಓಟದ ವೇಗ ಅತಿಯಾದರೂ ಅಪಘಾತ ಖಂಡಿತ. ಅದಕ್ಕೂ ಬ್ರೇಕ್‌ ಬೇಕು. ಆ ವೇಗ ನಿಯಂತ್ರಕವೇ ವಿವೇಚನೆ. ಸರಿ ಯಾವುದು? ತಪ್ಪು ಯಾವುದು? ಶುದ್ಧ ಯಾವುದು? ಅಶುದ್ಧ ಯಾವುದು ಎಂದು ನಿರ್ಣಯಿಸುವ ಶಕ್ತಿಯನ್ನು ವಿವೇಚನೆ ಎನ್ನುವೆವು.
ಮನಸ್ಸು ಉನ್ನತವಾಗದೇ ಇದ್ದರೆ ವ್ಯಕ್ತಿತ್ವವು ಅರಳದು. ವ್ಯಕ್ತಿತ್ವವು ಅರಳದೇ ಮನುಷ್ಯನು ಉನ್ನತ ಸ್ಥಾನಕ್ಕೇರಲು ಸಾಧ್ಯವೇ ಇಲ್ಲ. ಮನಸ್ಸಿನ ಬಿಗಿ ಹಿಡಿತದೊಳಗೆ ಮನುಷ್ಯನು ಸದಾ ಬಂಧಿತನು. “ಮನಸ್ಸು ಮಾಡು” ಎಂಬ ಮಾತನ್ನು ಎಲ್ಲರೂ ಉಪದೇಶಿಸುವರು. ಮನಸ್ಸು ಮಾಡುವುದೆಂದರೇನು? ಮನಸ್ಸು ಮಾಡುವುದೆಂದರೆ ಬಂಧಿತ ಮನಸ್ಸನ್ನು ಬಿಡುಗಡೆಗೊಳಿಸಿ ನೂತನ ಮತ್ತು ಉನ್ನತ ಕಾರ್ಯಗಳಲ್ಲಿ ತೊಡಗಿಸುವುದೆಂದರ್ಥ. ಸಾಧಕನಾದವನು ಮನಸ್ಸನ್ನು ಎಂದಿಗೂ ಕಟ್ಟಿ ಹಾಕುವುದಿಲ್ಲ. ಮನಸ್ಸನ್ನು ನಿರಾಳವಾಗಿರಿಸಿ ಮುಕ್ತನಾಗಿರುತ್ತಾನೆ.

ಒಬ್ಬನಲ್ಲಿ ಸಂವಹನ ಮಾಡುವಾಗ ವಿನಯ ಅಗತ್ಯ. ವಿನಯದಿಂದಲೇ ಮಾತನಾಡುವಂತೆ ಮಾಡುವುದು ಮನಸ್ಸು. ದಾನ ಮಾಡುವಾಗ ಮೌಲ್ಯಯುತವಾದುದನ್ನು ದಾನ ಮಾಡಬೇಕೇ. ಕಳಪೆ ಮೌಲ್ಯದವುಗಳನ್ನು ದಾನ ಮಾಡಬೇಕೇ ಎಂಬುದನ್ನು ನಿರ್ಧರಿಸುವುದೂ ಮನಸ್ಸೇ. ಪರೀಕ್ಷಾರ್ಥಿಯು ಮನಸ್ಸಿಟ್ಟು ಓದಲು ಆರಂಭಿಸಲು ಮತ್ತು ಮನನ ಮಾಡಿ ಗಟ್ಟಿಗನಾಗಲು ಕಾರಣೀಭೂತವಾಗುವುದೂ ಮನಸ್ಸೇ ಆಗಿದೆ. ಕಚೇರಿಯಲ್ಲಿ ಅಧಿಕಾರಿ ಲಂಚ ಪಡೆಯುವನೆಂದಾದರೆ ಅವನ ಮನೋಗುಣ ಅಥವಾ ಭ್ರಷ್ಠ ಮನೋಸ್ಥಿತಿಯು ಅನಾವರಣಗೊಳ್ಳುವುದು. ಆದುದರಿಂದ ಮನಸ್ಸನ್ನು ಬದಿಗೊತ್ತಿ ನಮ್ಮ ಯಾವ ಕೆಲಸ ಕಾರ್ಯಗಳೂ ನಡೆಯುವುದಿಲ್ಲ. ಮನಸನ್ನು ಬದಿಗೊತ್ತದೆ ನಿಯಂತ್ರಿಸುವ ವಿವೇಕ ನಮಗೆ ಬೇಕು.

ಒಬ್ಬನಿಗೆ ಹೊಸ ಮನೆಯೊಂದನ್ನು ಕಟ್ಟಿಸಲು ಮನಸ್ಸಾಯಿತು. ಆತನು ಮನೆ ಕಟ್ಟುವ ತನ್ನ ವಿಚಾರವನ್ನು ಆತ್ಮೀಯ ಸ್ನೇಹಿತನಿಗೆ ಹೇಳುತ್ತಾನೆ. ಆಗ ಮಿತ್ರ ಸಲಹೆ ಕೊಡಲು ಆರಂಭಿಸುತ್ತಾನೆ, “ನೋಡು, ನೀನು ಹೇಳುವ ರೀತಿಯ ಮನೆ ಕಟ್ಟಲು ಒಂದು ಕೋಟಿ ರೂ ಬೇಕು. ಈ ಹಣವನ್ನು ಬ್ಯಾಂಕಿನಲ್ಲಿ ಇಟ್ಟರೆ ತಿಂಗಳಿಗೆ ಬ್ಯಾಂಕಿನಿಂದ ರೂ ಎಪ್ಪತ್ತೈದು ಸಾವಿರ ಬಡ್ಡಿ ಬರುತ್ತದೆ, ಅದರಲ್ಲಿ ಇಪ್ಪತೈದುಸಾವಿರ ರೂಪಾಯಿಗಳನ್ನು ಬಾಡಿಗೆ ಕೊಟ್ಟು ಪೇಟೆಯ ನಡುವೆ ಒಂದು ಮನೆ ಮಾಡಿದರೆ ತಿಂಗಳಿಗೆ ಐವತ್ತು ಸಾವಿರ ರೂಪಾಯಿ ಉಳಿತಾಯ ಅಲ್ಲವೇ?” ಎಂದನು. ಚಂಚಲ ಮನಸ್ಸು ಅವನ ಮಾತಿಗೆ ಬಲಿಯಾಯಿತು. ಅವನ ಸಲಹೆ ಸರಿಯೋ ತಪ್ಪೋ ಎಂಬುದು ಇಲ್ಲಿ ಮುಖ್ಯವಲ್ಲ. ಮನಸ್ಸು ದೃಢವಾಗಿರುವುದಿಲ್ಲ. ಚಂಚಲತೆಯಿಂದ ಕೂಡಿರುತ್ತದೆ ಎಂಬುದನ್ನು ಈ ಘಟನೆ ವಿವರಿಸುತ್ತದೆ.

ಇದೇ ವ್ಯಕ್ತಿಗೆ ಇನ್ನೊಬ್ಬ ಮಿತ್ರನು ಹೀಗೂ ಹೇಳಬಹುದು. “ಹೌದು ನಿನ್ನ ಯೋಚನೆ ಒಳ್ಳೆಯದೇ. ಅಂತಸ್ತಿನ ಮನೆಯನ್ನೇ ಮಾಡು, ಮೇಲಂತಸ್ತಿನಲ್ಲಿ ಸಣ್ಣ ಸಣ್ಣ ಮನೆ ಮಾಡು. ನೆಲಭಾಗದಲ್ಲಿ ನೀನು ವಾಸಿಸಿ, ಮೇಲಿನವುಗಳನ್ನು ಬಾಡಿಗೆಗೆ ಕೊಡು. ತಿಂಗಳಿಗೆ ನಲುವತ್ತು ಸಾವಿರ ಬಾಡಿಗೆ ಬರುತ್ತದೆ. ನೀನು ಕೊಡುವ ಬಾಡಿಗೆ ಉಳಿತಾಯವಾಗಿ ಸ್ವಂತ ಮನೆಯಾಗುತ್ತದೆ, ಬೇಡವೆಂದು ಕಂಡಾಗ ಮನೆ ಮಾರಿದರೂ ಮೂಲ ಬಂಡವಾಳಕ್ಕಿಂತ ಹೆಚ್ಚೇ ಸಿಗುತ್ತದೆ. ಮನೆಕಟ್ಟಲು ಹೊರಟವನ ಮನಸ್ಸು ಈಗ ಪುನ: ಬದಲಾಗುತ್ತದೆ. ಚಂಚಲ ಮನಸ್ಸಿನವರಿಂದ ಯಾವುದೇ ಉದ್ದೇಶವನ್ನೂ ಈಡೇರಿಸಲಾಗದು. ಒಂದೊಮ್ಮೆ ಒಂದು ಕೆಲಸ ಈಡೇರಿದರೂ ಬೇರೆ ಬೇರೆಯವರ ಮಾತು ಆಲಿಸಿ ಚಂಚಲಿತನಾಗಿ ತೃಪ್ತಿಯನ್ನು ಕಾಣನು. ನಮ್ಮ ಮನಸ್ಸು ನಮ್ಮ ಕೈಯೊಳಗಿರಬೇಕು. ಅದು ದೃಢವಾಗಿರಬೇಕು. ಸಮಚಿತ್ತವೆಂದರೆ ಇದೇ ತಾನೇ?
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** 


Ads on article

Advertise in articles 1

advertising articles 2

Advertise under the article