-->
ಎಸ್ ಎಸ್ ಎಲ್ ಸಿ ಪರೀಕ್ಷಾ ಸಿದ್ಧತೆ : ವಿಶೇಷ ಲೇಖನ ಸಂಚಿಕೆ - 02

ಎಸ್ ಎಸ್ ಎಲ್ ಸಿ ಪರೀಕ್ಷಾ ಸಿದ್ಧತೆ : ವಿಶೇಷ ಲೇಖನ ಸಂಚಿಕೆ - 02

ಎಸ್ ಎಸ್ ಎಲ್ ಸಿ ಪರೀಕ್ಷಾ ಸಿದ್ಧತೆ : ವಿಶೇಷ ಲೇಖನ ಸಂಚಿಕೆ - 02
ಲೇಖನ : ಪರೀಕ್ಷಾ ಪರಿಕಲ್ಪನೆಗಳು
ಲೇಖಕಿ : ಶುಭ 
ಅತಿಥಿ ಶಿಕ್ಷಕಿ 
ದ. ಕ. ಜಿ. ಪಂ. ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ತಾಳಿತ್ತನೂಜಿ.
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
       

'ಪರೀಕ್ಷೆ' ಎಂದಾಕ್ಷಣ ಮಕ್ಕಳಲ್ಲಿ ಭಯ. ಇದು ಎಲ್ಲಾ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಆತಂಕ ಭಯವನ್ನುಂಟು ಮಾಡುತ್ತದೆ. ವಿದ್ಯಾರ್ಥಿಗಳಿಗೆ ಓದು ಅನಿವಾರ್ಯ ಹಾಗೂ ಅತ್ಯಗತ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಇಂದಿನ ಬಹುತೇಕ ವಿದ್ಯಾರ್ಥಿಗಳಲ್ಲಿ ಓದುವುದೆಂದರೆ 'ನಿರುತ್ಸಾಹ. 'ಯಾರದೋ ಒತ್ತಾಯಕ್ಕೆ ಮಣಿದು, ಹೆತ್ತವರಿಗೋಸ್ಕರನೋ, ಶಿಕ್ಷಕರ ಒತ್ತಾಯಕ್ಕೆ ಅಥವಾ ಫಲಿತಾಂಶಕ್ಕೋಸ್ಕರ ಓದಬೇಕಲ್ಲ' ಎನ್ನುವ ಭಾವನೆಯಿಂದ ಪುಸ್ತಕವನ್ನು ಕೈಗೆತ್ತಿಕೊಳ್ಳುವವರೇ ಬಹಳ ಜನ.

ಒಂದೆರಡು ದಶಕಗಳ ಹಿಂದೆ ಹೆತ್ತವರು ಮಕ್ಕಳ ಓದಿನ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿರಲಿಲ್ಲ, ಆದರೆ ಇಂದಿನ ಹೆತ್ತವರು ತಮ್ಮ ಮಕ್ಕಳು ಪರೀಕ್ಷೆಯಲ್ಲಿ ಹೇಗೆ ಬರೆಯುತ್ತಾರೋ, ಪಾಸಾಗುತ್ತಾರಾ, ಫೇಲಾಗುತ್ತಾರ, ಪಾಸಾದರೆ ಸಾಲದು ಅತ್ಯಧಿಕ ಅಂಕಗಳನ್ನು ಪಡೆಯುವರೇ ಎನ್ನುವ ಚಿಂತೆ. ಕೆಲ ತಂದೆ - ತಾಯಿಯಂದಿರು ಯಾವಾಗ ನೋಡಿದರೂ "ಪಕ್ಕದ್ಮನೆ ಚಿನ್ನಿನ ನೋಡು ಎಷ್ಟು ಬುದ್ಧಿವಂತೆ! ನಿನಗಿಂತ ಜಾಸ್ತಿ ಅಂಕಗಳನ್ನು ತೆಗೆದಿದ್ದಾಳೆ" ಹೀಗೆ ತಮ್ಮ ಮಕ್ಕಳನ್ನು ಹೋಲಿಸಿ ಹೀಯಾಳಿಸುತ್ತಿರುತ್ತಾರೆ. ಇಂತಹ ಅವಮಾನಕರ ಮಾತುಗಳಿಂದ ಮಕ್ಕಳಲ್ಲಿ ಕೀಳರಿಮೆ ಉಂಟಾಗುತ್ತದೆ. 

ಶಿಕ್ಷಕರು ತನ್ನ ಪಾಠ ವಿಷಯದಲ್ಲಿ ನೂರಕ್ಕೆ ನೂರು ಫಲಿತಾಂಶ ಬರಬೇಕು ಎನ್ನುವ ಆಸೆ, ವಿದ್ಯಾರ್ಥಿಗಳು ಸಾಧನೆಗೈಯಬೇಕು ಎನ್ನುವ ಕಾಳಜಿ. ಶೈಕ್ಷಣಿಕ ರಂಗದಲ್ಲಿ ಪೈಪೋಟಿ ಇರುವ ಇಂದಿನ ಕಾಲದಲ್ಲಿ ಎಲ್ಲಾ ವಿದ್ಯಾರ್ಥಿಗಳು ಒಂದು ಕ್ರಮ ಪದ್ಧತಿಯ ಪ್ರಕಾರ, ನಿಯಮಿತವಾಗಿ ಅಭ್ಯಾಸ ಮಾಡಬೇಕಿರುವುದು ಅನಿವಾರ್ಯ. 

ಈ ಬದುಕೇ ಒಂದು ಪರೀಕ್ಷೆ, ಒಂದು ಸ್ಪರ್ಧೆ. ಸ್ಪರ್ಧೆ ಎಂದ ಮೇಲೆ ಪೈಪೋಟಿ ಇದ್ದೇ ಇರುತ್ತದೆ. ವಿದ್ಯಾರ್ಥಿಯಾಗಿರುವವರಿಗೆ ಪ್ರತಿಯೊಂದು ಹಂತದಲ್ಲಿ ಪರೀಕ್ಷೆ ಎದುರಾಗುತ್ತದೆ. ವಿದ್ಯಾರ್ಥಿ ಹಂತದಲ್ಲಿ ಗೆದ್ದು ಪದವಿ ಪಡೆದ ನಂತರ ಮತ್ತೆ ನೌಕರಿಗಾಗಿ ಪೈಪೋಟಿ. ನೌಕರಿ ದೊರೆತ ನಂತರ
ಇನ್ಯಾವುದೋ ಉದ್ದೇಶಕ್ಕಾಗಿ ಪೈಪೋಟಿ ಹೀಗೆ ಜೀವನದಲ್ಲಿ ಪರೀಕ್ಷೆ ತಪ್ಪಿದ್ದಲ್ಲ. 

'ಹೊತ್ತು ಕಳೆದರೆ ಹೋಯಿತು - ಮುತ್ತು ಒಡೆದರೆ ಹೋಯಿತು' ಎನ್ನುವಂತೆ ದೊರಕದ ಭಾಗ್ಯ, ಸಮಯವನ್ನು ಸದ್ವಿನಿಯೋಗ
ಮಾಡಿಕೊಳ್ಳಬೇಕಿರುವುದು ಅತ್ಯಗತ್ಯ. ಯಾವ ರೀತಿಯಾಗಿ ಸಮಯವನ್ನು ವಿನಿಯೋಗಿಸುತ್ತಾರೋ ಅದರ ಮೇಲೆ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರವಾಗುತ್ತದೆ. ಬದುಕಿನ ಯಶಸ್ಸಿಗೆ ಗುರಿಯು ಪ್ರಮುಖ ಪಾತ್ರ ವಹಿಸುತ್ತದೆ. 

ಚಿಕ್ಕಂದಿನಲ್ಲಿ ಮಕ್ಕಳಿಗೆ ತಮ್ಮ ಮುಂದಿನ ಗುರಿ ಏನು ಅನ್ನುವುದನ್ನು ನಿಶ್ಚಯಿಸಿಕೊಳ್ಳುವ ಸಾಮರ್ಥ್ಯವಿರದು. ಇಲ್ಲಿ ತಂದೆ-ತಾಯಿಗಳ ಜವಾಬ್ದಾರಿ ಮಹತ್ತರವಾದುದು. 'ತಮ್ಮ ಮಕ್ಕಳಿಗೆ ಯಾವ ವಿಷಯದ ಬಗೆಗೆ ಒಳ್ಳೆಯ ಅಭಿರುಚಿ ಇದೆ, ಯಾವುದರಲ್ಲಿ ಸಾಧನೆ ಮಾಡಬಹುದು' ಎನ್ನುವುದನ್ನು ಪರಿಶೀಲಿಸಿ ತಮ್ಮ ಮಕ್ಕಳ ಅಭಿರುಚಿಗನುಗುಣವಾಗಿ ಶಿಕ್ಷಣ ಕೊಡಿಸುವುದು ಉತ್ತಮ. ವಿದ್ಯೆ ಎಂದರೆ ಕೇವಲ ಡಾಕ್ಟರ್ ಅಥವಾ ಇಂಜಿನಿಯರಿಂಗ್ ಓದುವುದೊಂದೇ ಅಲ್ಲ, ಇನ್ನೂ ಅನೇಕ ಕ್ಷೇತ್ರಗಳಿವೆ ಅದನ್ನು ಮನಗಂಡು ಮಕ್ಕಳ ಆಸಕ್ತಿಗೆ ಅನುಗುಣವಾಗಿ ಅವರಿಗೆ ಬೆನ್ನೆಲುಬಾಗಿ ನಿಂತುಕೊಳ್ಳುವುದು ಹೆತ್ತವರ ಕರ್ತವ್ಯ.

ಶಿಲ್ಪಿಯೊಬ್ಬನ ಶ್ರಮದಿಂದ ಶಿಲೆಯೊಂದು ಶಿಲ್ಪವಾಗುವಂತೆ ಶಿಕ್ಷಕರ ಮಾರ್ಗದರ್ಶನ, ಅವರ ಶ್ರಮ ಮತ್ತು ಪ್ರೋತ್ಸಾಹ ವಿದ್ಯಾರ್ಥಿಗಳನ್ನು ಒಂದು ಸಮಾಜಕ್ಕೆ ಮಾದರಿ ವ್ಯಕ್ತಿಯನ್ನಾಗಿ ರೂಪಿಸಿಕೊಡುತ್ತದೆ. ಶಿಕ್ಷಕರು ವಿದ್ಯಾರ್ಥಿಗಳನ್ನು ಒತ್ತಡಕ್ಕೆ ಸಿಲುಕಿಸದೆ ಅವರ ಆಸಕ್ತಿಗಳತ್ತ ಗಮನಹರಿಸಿ, ಸಮಾಜಕ್ಕೆ ಯಾವ ರೀತಿಯಾಗಿ ನೀಡಬಹುದು ಎನ್ನುವುದನ್ನು ಆಲೋಚಿಸಿದರಿಂದಾಗಿಯೇ ನಾವು ಇವತ್ತು ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಕಾಣುತ್ತೇವೆ. ಯಾವ ರಂಗದಲ್ಲಿಯೇ ಆಗಲಿ ರಾತ್ರೋರಾತ್ರಿ ಯಶಸ್ಸು ಲಭಿಸುವುದಿಲ್ಲ. ಅದಕ್ಕೆ ತಾಳ್ಮೆ, ನಿರಂತರ ಪರಿಶ್ರಮ, ಸಹನೆ, ಆಸಕ್ತಿ, ಒಳ್ಳೆಯ ವಾತಾವರಣ, ಉತ್ತಮ ಆಹಾರ ಮತ್ತು ಆರೋಗ್ಯ, ಒಳ್ಳೆಯ ಆಲೋಚನೆಗಳು ಅನಿವಾರ್ಯ. ದಿಢೀರ್ ಓದು ಬರಹಗಳಿಂದ ಯಶಸ್ಸು ಲಭ್ಯವಾಗದು. 'ತಾಳ್ಮೆ, ಸಹನೆ' ಕೃಷಿ ಎನ್ನುವ ಬೀಜ ಮಂತ್ರಗಳೇ ವಿದ್ಯಾರ್ಥಿಯ ಯಶಸ್ವಿಗೆ ಕಾರಣವಾಗಬಲ್ಲವು.
.................................................. ಶುಭ 
ಅತಿಥಿ ಶಿಕ್ಷಕಿ 
ದ. ಕ. ಜಿ. ಪಂ. ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ತಾಳಿತ್ತನೂಜಿ.
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************


Ads on article

Advertise in articles 1

advertising articles 2

Advertise under the article