ಮದ್ಯ ವ್ಯಸನಿ ಪಾಲಕರ ಮಕ್ಕಳ ಜಾಗೃತಿ ಲೇಖನ : ಖುಷಿ
Tuesday, February 4, 2025
Edit
ಮಕ್ಕಳ ಜಗಲಿಯಲ್ಲಿ
ವಿಶೇಷ ಲೇಖನ : ಖುಷಿ
ಲೇಖಕರು : ಗಿರೀಶ್ ಎಂ ಎನ್
ಕೌನ್ಸೆಲಿಂಗ್ ಮನಶಾಸ್ತ್ರಜ್ಞರು
ಮಡಿಲು ಕೌನ್ಸಿಲಿಂಗ್ ಪಾಯಿಂಟ್ ಅಚ್ಲಾಡಿ
ಉಡುಪಿ ಜಿಲ್ಲೆ
Mob : 8722715472
ಮದ್ಯ ವ್ಯಸನಿ ಪಾಲಕರ ಮಕ್ಕಳ ಜಾಗೃತಿ ಸಪ್ತಾಹದ ಅಂಗವಾಗಿ ಈ ಲೇಖನ
ಖುಷಿ 4 ವರ್ಷ ಪ್ರಾಯದ ಹುಡುಗಿ. ಬಹಳ ಪ್ರಬುದ್ಧಳು ಹಾಗೂ ಚೂಟಿ. ಆಕೆಗೆ ತಂದೆ ಎಂದರೆ ಪಂಚಪ್ರಾಣ ಸಂಜೆಯಾದರೆ ಸಾಕು ತನ್ನರಮನೆಯ ಮರದ ಗೇಟಿನ ಮುಂದೆ ರಾಮನ ಭೇಟಿಗೆ ಶಬರಿ ಕಾಯುವಂತೆ ಕಾಯುತ್ತಿದ್ದಳು. ತಂದೆ ಬಂದಾಕ್ಷಣ ಅದೇ ಉತ್ಸಾಹ ಹರ್ಷ ತಂದೆ ತಾನು ತಂದಿರುವ ತಿಂಡಿಯನ್ನು ಆಕೆಯ ಕೈಗೆ ಕೊಟ್ಟು ಅವಳನ್ನು ಎತ್ತಿಕೊಂಡು ಮನೆಯೊಳಗೆ ಹೋಗುವುದು ಆತನ ದಿನಚರಿಯಲ್ಲಿ ಒಂದಾಗಿತ್ತು.
ಅಪರೂಪಕ್ಕೆ ಗೆಳೆಯರೊಂದಿಗೆ ಮಧ್ಯಪಾನ ಮಾಡುತ್ತಿದ್ದ ಖುಷಿಯ ತಂದೆಗೆ ವಾರಕ್ಕೊಮ್ಮೆ ಕುಡಿಯುವ ಅಭ್ಯಾಸವಾಗಿತ್ತು. ವಾರದ ಏಳು ದಿನಗಳಲ್ಲಿ ಭಾನುವಾರ ಮಾತ್ರ ಆತ ಖುಷಿಯನ್ನು ಎತ್ತಿಕೊಂಡು ಒಳಗೆ ಹೋಗುತ್ತಿರಲಿಲ್ಲ, ಹೆಚ್ಚು ಮಾತನಾಡುತ್ತಿರಲಿಲ್ಲ. ಖುಷಿಗೆ ಭಾನುವಾರ ಬಂತೆಂದರೆ ಮುಖ ಬಾಡುತ್ತಿತ್ತು.
ನಿರಂತರ ವ್ಯವಹಾರದಲ್ಲಿ ನಷ್ಟ ಕಾಣುತ್ತಿದ್ದ ಖುಷಿಯ ತಂದೆಗೆ ಒತ್ತಡ ಹೆಚ್ಚಿ ವಾರದಲ್ಲಿ ಆಗಾಗ ಕುಡಿತ ಪ್ರಾರಂಭವಾಯಿತು. ಮನೆಯಲ್ಲಿ ಹೆಂಡತಿಯ ಜೊತೆಗಿನ ಸಣ್ಣಪುಟ್ಟ ಕಲಹ ಖುಷಿಗೆ ಅಭದ್ರತೆ ಭಯ ಉಂಟು ಮಾಡುತ್ತಿತ್ತು. ಆತಂಕದಲ್ಲಿ ಆಕೆ ಜೋರಾಗಿ ಅತ್ತಾಗ ಅಪ್ಪ ಅಮ್ಮನ ಜಗಳ ನಿಲ್ಲುತ್ತಿತ್ತು. ನೋಡ ನೋಡುತ್ತಿದ್ದಂತೆ ಖುಷಿಯ ತಂದೆ ಮದ್ಯ ವ್ಯಸನಿಯಾಗಿಬಿಟ್ಟಿದ್ದ. ತಾಯಿ ಅಂಗನವಾಡಿ ಕೆಲಸಕ್ಕೆ ಸೇರಿಕೊಂಡಳು. ಸಂಪೂರ್ಣ ಮನೆಯ ವಾತಾವರಣವೇ ಬದಲಾಗಿತ್ತು.
ಖುಷಿಗೆ ಈಗ ಪ್ರಾಯ 10. ತಂದೆಯ ಪ್ರೀತಿ ಸಿಗುತ್ತಿಲ್ಲ, ತಾಯಿಯ ಮಮತೆ ಕಾಣುತ್ತಿಲ್ಲ. ತನ್ನ ತಂದೆ ತನಗೊಬ್ಬ ಗಂಡು ಮಗನಿದ್ದಿದ್ದರೆ ಎಂದು ಮಾತನಾಡುವಾಗೆಲ್ಲ ಖುಷಿಗೆ ತನ್ನ ತಂದೆಯ ಕುಡಿತಕ್ಕೆ ತಾನೇ ಕಾರಣವೇನೋ ಎಂದು ಭಾಸವಾಗುತ್ತಿತ್ತು. ತನ್ನ ತಂದೆ ಕುಡಿದು ಮನೆಗೆ ಬರುವಾಗ ವಿಶೇಷ ಕಾಳಜಿ ತೋರುವುದು, ಆತನಿಗೆ ಅಗತ್ಯವಿರುವುದನ್ನು ಒದಗಿಸುವುದನ್ನು ಮಾಡುತ್ತಾ ತನ್ನ ಪ್ರೀತಿಯ ಮಾತುಗಳಿಂದ ತಂದೆಯ ಕುಡಿತ ನಿಯಂತ್ರಣಕ್ಕೆ ಬರಬಹುದು ಎಂಬ ನಿರೀಕ್ಷೆ ಆಕೆಯ ಮನಸ್ಸಲ್ಲಿ ಮನೆ ಮಾಡಿತ್ತು.
ಖುಷಿ ಶಾಲೆಗೆ ಹೋಗುವ ದಾರಿಯಲ್ಲಿ ಒಂದು ದೇವಸ್ಥಾನ ಇತ್ತು. ತಂದೆಯ ವ್ಯಸನ ತನ್ನಿಂದಲೇ ಗುಣವಾಗಬೇಕು ಎಂದು ಪ್ರತಿದಿನ ತಾನು ಶಾಲೆಗೆ ಹೋಗುವ ಮುನ್ನ ದೇವಸ್ಥಾನಕ್ಕೆ ಹೋಗಿ ಕೈ ಮುಗಿದು ಪ್ರಾರ್ಥಿಸಿಕೊಳ್ಳುತ್ತಿದ್ದಳು. ಸಂಜೆ ತಂದೆಯ ಯಥಾ ಸ್ಥಿತಿಯನ್ನು ಕಂಡು ತನ್ನ ಪ್ರಾರ್ಥನೆ ದೇವರಿಗೆ ಕೇಳಲಿಲ್ಲ ಎಂದು ದುಃಖಿಸುತ್ತಿದ್ದಳು.
ಹೀಗೆ ದಿನ ತಳ್ಳುತ್ತಾ ಕತ್ತಲೆಯ ದಾರಿಯಲ್ಲಿ ಪ್ರೀತಿಯ ಬೆಳಕನ್ನು ಹುಡುಕುತ್ತಿದ್ದ ಆಕೆಯ ಕಣ್ಣಿಗೆ ಕಂಡದ್ದು ಹತ್ತಿರದಲ್ಲೇ ಮಿಠಾಯಿ ಅಂಗಡಿ ಇಟ್ಟುಕೊಂಡಿದ್ದ ವೀರಪ್ಪ. ಖುಷಿಯ ತಾತನ ವಯಸ್ಸು ಈತನದ್ದು. ಪ್ರತಿದಿನ ಶಾಲೆ ಬಿಟ್ಟು ಅಂಗಡಿಯ ಹತ್ತಿರ ಬರುತ್ತಿದ್ದ ಖುಷಿಯನ್ನು ಮೊಮ್ಮಗಳಂತೆ ಮುದ್ದಿಸುತ್ತಿದ್ದ. ಕಾಸು ಕೊಳ್ಳದೆ ಮಿಠಾಯಿಯನ್ನು ಕೊಡುತ್ತಿದ್ದ. ಆತನ ಪ್ರೀತಿಯಲ್ಲಿ ತಂದೆಯ ಮಮತೆಯನ್ನು ಕಂಡ ಖುಷಿಯ ನಿಷ್ಕಲ್ಮಶ ಮನಸ್ಸು ಆತನೊಂದಿಗೆ ಸಲಿಗೆ ಬೆಳೆಸಿಕೊಳ್ಳಲು ಕಾರಣವಾಗುತ್ತದೆ.
ವೀರಪ್ಪ ಖುಷಿಯ ಜೊತೆಗೆ ಮಾತನಾಡುತ್ತಾ ಯಾವಾಗಲೂ ಆಕೆಯ ತಂದೆಯನ್ನು ದೂರುತ್ತಿದ್ದ. ತಾಯಿಯಾದವಳು ತನ್ನ ಮಗಳಿಗೆ ಏನೆಲ್ಲ ಮಾಡಬೇಕು ಎಂಬುದನ್ನು ಹೇಳುವಾಗ ಖುಷಿಯ ಮನಸ್ಸಿಗೆ ನೋವಾಗುತ್ತಿತ್ತು. ತಾನು ತನ್ನ ತಂದೆ ತಾಯಿ ಹೆತ್ತ ಮಗಳು ಅಲ್ಲವೇನೋ, ಅವರಿಗೆ ತಾನು ಬೇಡವಾಗಿರುವೆನೇನೋ ಎಂಬ ಗೊಂದಲ ಆರಂಭವಾಯಿತು. ಶಾಲೆಗೆ ರಜೆ ಇದ್ದಾಗ ಹೆಚ್ಚು ಸಮಯ ಆಕೆ ಆತನ ಅಂಗಡಿಯಲ್ಲೇ ಕಳೆಯುತ್ತಿದ್ದಳು. ಅಪ್ಪನ ಅಮಲಿನಲ್ಲಿ, ಅಮ್ಮನ ಚಿಂತೆಯಲ್ಲಿ, ಮಗಳು ಮನೆಗೆ ತಡವಾಗಿ ಬರುವುದು ಕಾಣುತ್ತಲೇ ಇರಲಿಲ್ಲ.
ಒಂದು ದಿನ ರಾತ್ರಿ ಮಲಗಿರುವ ವೇಳೆ ಖುಷಿ ಚಿಟಾರನೆ ಕೂಗಿಕೊಂಡಳು. ಆಕೆಯ ಕೂಗಿನ ಸದ್ದಿಗೆ ಅಪ್ಪನ ಅಮಲು ಇಳಿದಿತ್ತು. ಅಮ್ಮ ಹೊಟ್ಟೆ ನೋವು ಎಂದು ಕೂಗಿಡುವಾಗ ತಾಯಿ ತನ್ನೆರಡು ತೋಳುಗಳಿಂದ ಖುಷಿಯನ್ನು ಬಾಚಿಕೊಂಡು ಸಮಾಧಾನ ಮಾಡಲು ಪ್ರಯತ್ನಿಸುತ್ತಾಳೆ. ನೋವು ವಿಪರೀತವಾಗಿ ಖುಷಿ ಜ್ಞಾನ ತಪ್ಪಿದ ಕಾರಣ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ.
ಆಗ ಸಮಯ ಮಧ್ಯರಾತ್ರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯರು ಖುಷಿಯ ಸ್ಥಿತಿಯನ್ನು ಪೂರ್ಣವಾಗಿ ಪರಿಶೀಲಿಸಿ ತಕ್ಷಣವೇ ಸ್ತ್ರೀ ರೋಗ ತಜ್ಞರನ್ನು ಕರೆಸುತ್ತಾರೆ. ಅವರ ಜೊತೆ ಜೊತೆಗೆ ಪೊಲೀಸರು ಬರುವುದನ್ನು ಕಂಡು ಗಾಬರಿಗೊಂಡ ಖುಷಿಯ ತಂದೆ, ತಾಯಿ ತನ್ನ ಮಗಳಿಗೆ ಏನಾಗಿದೆ ಎಂದು ಕೇಳಿದರು? ಕರ್ತವ್ಯ ನಿರತ ಸ್ತ್ರೀ ವೈದ್ಯರು ಖುಷಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದಾಗಿ ತಿಳಿಸಿದರು. ಈ ವಿಚಾರ ತಿಳಿಯುತ್ತಿದ್ದಂತೆ ಅಪ್ಪ-ಅಮ್ಮ ಇಬ್ಬರು ಎದೆಗೆ ಬಡಿದುಕೊಳ್ಳುತ್ತಾ ನೆಲದ ಮೇಲೆ ಕುಸಿದು ಬಿದ್ದರು. ದಿಕ್ಕೇ ತೋಚದ ಇವರಿಗೆ ಶಾಲೆಯವರ ಮೇಲೆ, ಸಂಬಂಧಿಕರ ಮೇಲೆ ಹಾಗೂ ಮನೆಯ ಹತ್ತಿರದವರ ಮೇಲೆ ಸಂಶಯ ಬರಲು ಶುರುವಾಯಿತು. ಪೋಕ್ಸೋ ಕಾಯ್ದೆ ಅಡಿ ದಾವೆ ಹೂಡಿ ವಿಚಾರಣೆ ನಡೆಸಿದಾಗ ಅಂಗಡಿಯ ಮಾಲಕ ವೀರಪ್ಪ ಈ ಕೃತ್ಯ ನಡೆಸಿದ್ದಾಗಿ ತಿಳಿದು ಬಂದಿತ್ತು. ಈ ವಯಸ್ಸಿನ ವ್ಯಕ್ತಿ ಈ ರೀತಿಯಾಗಿ ಮಾಡುತ್ತಾನೆ ಎಂಬುದನ್ನು ಖುಷಿಯ ತಂದೆ ತಾಯಿಗೆ ನಂಬಲಾಗಲಿಲ್ಲ. ಪೊಲೀಸರು ತಕ್ಷಣವೇ ಆತನನ್ನು ಹುಡುಕಿ ಬಂಧಿಸುತ್ತಾರೆ. ನ್ಯಾಯಾಲಯ ಆತನಿಗೆ ಶಿಕ್ಷೆಯನ್ನು ನೀಡುತ್ತದೆ.
ದುರಂತ ಎಂದರೆ ಇಲ್ಲಿ ಆತ ಮೊದಲ ಅಪರಾಧಿಯಷ್ಟೆ. ಆತನ ಜೊತೆ ಇದಕ್ಕೆ ಪರೋಕ್ಷವಾಗಿ ಕಾರಣವಾದ ಇನ್ನೊಬ್ಬ ಅಪರಾಧಿಯೂ ಇದ್ದಾನೆ ಆದರೆ ಆತನ ವಿರುದ್ದ ಸಾಕ್ಷಿಗಳಿಲ್ಲ!
ಮನೋವಿಜ್ಞಾನದ ಪ್ರಕಾರ, ಹೆಣ್ಣು ಮಕ್ಕಳು ಹೆಚ್ಚಾಗಿ ತನ್ನ ತಂದೆಯೊಂದಿಗೆ ಬಲವಾದ ಬಾಂಧವ್ಯವನ್ನು ಹೊಂದಿರುತ್ತಾರೆ. ಏಕೆಂದರೆ ತಂದೆ ಭದ್ರತೆಯ ಭಾವನೆಯನ್ನು ಒದಗಿಸುತ್ತಾನೆ, ಅವಳ ಸ್ವಾಭಿಮಾನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತಾನೆ ಮತ್ತು ಪುರುಷರೊಂದಿಗಿನ ಭವಿಷ್ಯದ ಸಂಬಂಧಗಳಿಗೆ ಮಾದರಿಯಾಗಿರುತ್ತಾನೆ. ಈ ಎಲ್ಲವನ್ನು ಖುಷಿ ಹಂತಹಂತವಾಗಿ ಕಳೆದುಕೊಳ್ಳುತ್ತಾಳೆ.
ನೀವೆಲ್ಲ ಒಮ್ಮೆ ಯೋಚಿಸಿ ಖುಷಿಯನ್ನು ವೀರಪ್ಪನ ಬಳಿ ಹೋಗುವಂತೆ ಮಾಡಿದ್ದು ಯಾರು? ಅಪ್ಪನ ಪ್ರೀತಿ ಕಳೆದುಕೊಳ್ಳುವಂತೆ ಮಾಡಿದ್ದು ಯಾರು? ಅಮ್ಮನ ಮಮತೆ ಕಾಣದಂತೆ ಮಾಡಿದ್ದು ಯಾರು? ಇದೆಲ್ಲದಕ್ಕೂ ಉತ್ತರ ಒಂದೇ "ಅಪ್ಪನ ಅಮಲು" ಹಾಲನ್ನು ಹುಡುಕುತ್ತಾ ಹೋದ ಮುಗ್ಧ ಖುಷಿಗೆ ಸಿಕ್ಕಿದ್ದು ಹಾಲಾಹಲ.
ಖುಷಿ ಸ್ಥಾನದಲ್ಲಿದ್ದ ಅದೆಷ್ಟೋ ಮಕ್ಕಳಿದ್ದಾರೆ. ಇದರಲ್ಲಿ ಗಂಡು ಹೆಣ್ಣು ಎಂಬ ಭೇದವಿಲ್ಲ. ಇಂತಹ ಮಕ್ಕಳು ಹೇಗೆ ಈ ಪರಿಸ್ಥಿತಿಯನ್ನು ನಿಭಾಯಿಸಿಕ್ಕೊಳ್ಳಬಹುದು.
ತನ್ನ ತಂದೆಯ ಕುಡಿತಕ್ಕೆ ಆತನ ಆಲೋಚನೆ ಹಾಗೂ ಮನಸ್ಥಿತಿ ಕಾರಣವೇ ಹೊರತು ತಾನಲ್ಲ ಎಂಬ ಸತ್ಯವನ್ನು ಅರಿಯಬೇಕು.
ಮದ್ಯ ವ್ಯಸನ ಮನೋವೈದ್ಯಕೀಯ ಕಾಯಿಲೆ ಹಾಗಾಗಿ ಚಿಕಿತ್ಸೆ ಅದನ್ನು ನಿಯಂತ್ರಿಸುತ್ತದೆಯೇ ಹೊರತು ತಾನಲ್ಲ ಎಂಬುದು ತಿಳಿದಿರಬೇಕು
ತಂದೆ ಅಥವಾ ತಾಯಿಯ ವ್ಯಸನ ಗುಣಪಡಿಸಲು ಮನೋವೈದ್ಯಕೀಯ ಚಿಕಿತ್ಸೆಯ ಜೊತೆಗೆ ವ್ಯಸನಕ್ಕೆ ಒಳಪಟ್ಟಂತಹ ವ್ಯಕ್ತಿಯ ಇಚ್ಚಾ ಶಕ್ತಿ ಬೇಕೇ ಹೊರತು ತನ್ನ ಪಾತ್ರವಲ್ಲ ಎಂಬುದು ತಿಳಿದಿರಲಿ.
ಇಲ್ಲಿ ಖುಷಿ ತನ್ನನ್ನು ತಾನು ಪ್ರೀತಿಸುವ ಮೂಲಕ ಕಾಳಜಿಯಿಂದ ಸರಿಯಾದ ಸಮಯಕ್ಕೆ ಆಹಾರ ಸೇವಿಸುವುದು, ವೈಯಕ್ತಿಕ ಸ್ವಚ್ಛತೆಯ ಕಡೆಗೆ ಗಮನವಿಟ್ಟು ನೋಡಿಕೊಳ್ಳಬೇಕು.
ತನ್ನ ಭಾವನೆಗಳನ್ನು ಸ್ನೇಹಿತರೊಂದಿಗೊ, ಸಂಬಂಧಿಕರೊಂದಿಗೊ ಅಥವಾ ಶಿಕ್ಷಕರೊಂದಿಗೊ ವ್ಯಕ್ತಪಡಿಸುವ ಮೂಲಕ ಮನಸ್ಸನ್ನು ಹಗುರಾಗಿಸಿಕೊಳ್ಳಬೇಕು.
ಆರೋಗ್ಯಕರ ಆಯ್ಕೆಗಳಾದ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಪ್ರತಿದಿನ, ಪ್ರತಿ ಸಮಯವನ್ನು ಸಂಭ್ರಮಿಸುವ ಮೂಲಕ ಕಳೆಯಬೇಕು.
ಯಾರೋ ಅಪರಿಚಿತರು ಬಹಳ ಕಾಳಜಿಯಿಂದ ನಿಮ್ಮನ್ನು ಮಾತನಾಡಿಸುತ್ತಿದ್ದರೆ, ವಸ್ತುಗಳನ್ನು ನೀಡುವ ಮೂಲಕ ಆಮಿಷ ಓಡ್ಡುತ್ತಿದ್ದರೆ, ನಿಮ್ಮ ತಂದೆ ಅಥವಾ ತಾಯಿಯ ಕುರಿತು ದೂರುತ್ತಿದ್ದರೆ ದಯವಿಟ್ಟು ಅದನ್ನು ನಿಮ್ಮ ತಂದೆ ತಾಯಿಗೆ ಅಥವಾ ಶಿಕ್ಷಕರಿಗೆ ತಿಳಿಸಿ.
ನಿಮ್ಮನ್ನು ಮಾತನಾಡಿಸುವ ನೆಪದಲ್ಲಿ ದೇಹದ ವೈಯಕ್ತಿಕ ಭಾಗಗಳಾದ ತುಟಿ, ಎದೆ, ತೊಡೆಯ ಸಂಧಿ ಹಾಗೂ ಪೃಷ್ಠದ ಭಾಗವನ್ನು ಮುಟ್ಟಲು ಪ್ರಯತ್ನಿಸಿದರೆ ಮುಲಾಜಿಲ್ಲದೆ ನಿರಾಕರಿಸಿ.
ಸುಮಾರು 9 ವರ್ಷಗಳಿಂದ ನಿರಂತರವಾಗಿ ಮಧ್ಯವ್ಯಸನಿಗಳ ಮಕ್ಕಳಿಗೆ ವಿಶೇಷ ಕಾಳಜಿ ನೀಡುತ್ತಾ, ಪ್ರತಿ ವರ್ಷ ಫೆಬ್ರವರಿ ತಿಂಗಳಲ್ಲಿ ಅವರಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿರುವ ಡಾ. ಎ. ವಿ ಬಾಳಿಗಾ ಸ್ಮಾರಕ ಆಸ್ಪತ್ರೆ ದೊಡ್ಡಣ ಗುಡ್ಡೆ ಉಡುಪಿ. ಇಲ್ಲಿಯ ಮನೋವೈದ್ಯರುಗಳಾದ ಡಾ. ಪಿ.ವಿ ಭಂಡಾರಿ ಹಾಗೂ ಡಾ. ವಿರೂಪಾಕ್ಷ ದೇವರಮನೆ (Baliga Hospital Phone:9242821215) ಇವರುಗಳನ್ನು ಸಂಪರ್ಕಿಸುವ ಮೂಲಕ ಪರಿಹಾರ ಪಡೆಯಬಹುದು.
ಯಾರೊಂದಿಗೂ ಚರ್ಚಿಸಲು ಸಾಧ್ಯವಾಗುತ್ತಿಲ್ಲ, ಆತಂಕ ಹೆಚ್ಚಿ ಅಸಹಾಯಕರಾಗಿದ್ದೀರಿ ಎಂಬ ಚಿಂತೆಯನ್ನು ಬಿಟ್ಟು ಮಕ್ಕಳ ಸಹಾಯವಾಣಿ 1098 ಕ್ಕೆ ಕರೆ ಮಾಡಿ. (ಟೆಲಿ ಮನಸ್ 14416) ಪರಿಹಾರ ಪಡೆದುಕೊಳ್ಳಿ.
ಕೌನ್ಸೆಲಿಂಗ್ ಮನಶಾಸ್ತ್ರಜ್ಞರು
ಮಡಿಲು ಕೌನ್ಸಿಲಿಂಗ್ ಪಾಯಿಂಟ್ ಅಚ್ಲಾಡಿ
ಉಡುಪಿ ಜಿಲ್ಲೆ
Mob : 8722715472
********************************************