-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 90

ನಿಷ್ಪಾಪಿ ಸಸ್ಯಗಳು : ಸಂಚಿಕೆ - 90

ನಿಷ್ಪಾಪಿ ಸಸ್ಯಗಳು : ಸಂಚಿಕೆ - 90
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
    

ಪ್ರೀತಿಯ ಮಕ್ಕಳೇ... ಹೇಗಿದ್ದೀರಿ? ಪಾಠಗಳು ನಾಗಾಲೋಟದಲ್ಲಿ ಪರೀಕ್ಷೆಗಳ ಇದಿರು ಓಡುತ್ತಿರುವ ಈ ಕಾಲಘಟ್ಟದಲ್ಲಿ ಆಗಾಗ ಹಸಿರು ಗಿಡಗಳನ್ನು ಮಾತನಾಡಿಸುವುದಕ್ಕೆ ಮರೆಯದಿರಿ. ನಿಷ್ಪಾಪಿ ಸಸ್ಯಗಳ ಜೊತೆಗಿನ ಮಾತೇ.. ಕಥೆಗಾಗಿ ಒಂದಿಷ್ಟು ಸಮಯ ಖಂಡಿತ ತಮ್ಮಲ್ಲಿರಲಿ. ಮನಸಿಗೂ ಹಿತ.. ಕಣ್ಣಿಗೂ ತಂಪು!
   ರಾಜೀವ: ಹೌದು ಟೀಚರ್.. ನಮಗೂ ಅದಿಷ್ಟ. ಶಿಕ್ಷಕಿ: ಮಕ್ಕಳೇ, ನಾನಿಂದು ನಿಮ್ಮನ್ನು ಒಂದು ವಿಶೇಷವಾದ ಬಳ್ಳಿಯ ಜೊತೆ ಮಾತನಾಡಿಸುತ್ತೇನೆ, ಹೀಗೆ ಬನ್ನಿ. ಇದು ಬೆಂಗಳೂರಿನಲ್ಲಿರುವ ಶ್ರೀ ರವಿಶಂಕರ್ ಗುರೂಜಿಯವರ ಆಶ್ರಮ. ಹಲವಾರು ಎಕ್ರೆಗಳಲ್ಲಿ ಹಬ್ಬಿರುವ ಈ ಆಶ್ರಮವು ಎಷ್ಟೇ‌ ಬೆಳವಣಿಗೆ‌ ಕಂಡಿದ್ದರೂ ಅಲ್ಲಲ್ಲಿ ಇದ್ದ ಗಿಡಮರಗಳನ್ನು ಅಲ್ಲಿಗೇ ಬಿಟ್ಟಿದೆ. ಸ್ವಾಭಾವಿಕವಾಗಿ ಬೆಳೆದ ಸಸ್ಯಗಳ ಜೊತೆಗೆ ನೂರಾರು ಗಿಡಗಳನ್ನು ನೆಟ್ಟು ಬೆಳೆಸಿದ್ದಾರೆ. 
ಲಕ್ಷ್ಮಿ: ಟೀಚರ್.... ಅಲ್ಲಿ ನೋಡಿ... ಗಿಡಗಳ ಬುಡದಲ್ಲೇಕೆ ಲೈಟಿಂಗ್ಸ್ ಇದೆ!
ಶಿಕ್ಷಕಿ: ಆಶ್ರಮದೊಳಗಿನ ಕಾಲು ಹಾದಿಗಳ ಇಕ್ಕೆಲಗಳಲ್ಲಿ ಸಣ್ಣಪುಟ್ಟ ಮರಗಿಡಗಳ ಕಾಲಬುಡಗಳು ವಿದ್ಯದ್ದೀಪಗಳಿಂದ ಅಲಂಕರಿಸಲ್ಪಟ್ಟು ಇರುಳಲ್ಲಿ ಗಂಧರ್ವಲೋಕವೇನೋ ಎಂಬಂತಿರುತ್ತದೆ.. ಗೊತ್ತಾ! ನೀವು ಸಂಜೆಯ ವೇಳೆ ಅದನ್ನೂ ನೋಡಲಿದ್ದೀರಿ.
 ರಾಜೀವ: ಹೋ.. ಹೌದಾ ಟೀಚರ್!
 ಶಿಕ್ಷಕಿ: ಹ್ಹಾಂ. ಇದೀಗ ಪೂರ್ವದಲ್ಲಿ ರವಿಯು ಮೇಲೇರುತ್ತಿರುವ ಹೊತ್ತು. ನಿಧಾನಕ್ಕೆ ಬಿಸಿಲ ಝಳ ತನ್ನ ಚಾದರ ಹರಡಿಸುತ್ತಿದೆ. ಹಸಿರ ತಂಪಿನೊಳಗೆ ಕಾಲ್ನಡಿಗೆಯ ಮೂಲಕ ಆಶ್ರಮದ ಮುಖ್ಯದ್ವಾರದಿಂದ ನಿಮ್ಮನ್ನು ಧ್ಯಾನ ಮಂದಿರದತ್ತ ಕರೆದೊಯ್ಯುತ್ತೇನೆ ಬನ್ನಿ. ತರಹಾವರಿ ಗಿಡ ಮರಗಳ ನಡುವೆ ಸಾಗುವ ನಡಿಗೆಯೇ ಸುಂದರ ಕ್ಷಣಗಳಾಗಿ ನೆನಪಿನ ಜೋಳಿಗೆ ಸೇರಲಿವೆ. ಅತ್ತಿತ್ತ ನೋಡಿಕೊಂಡು ನಡೆಯಿರಿ.
ರಾಜೀವ: ತುಂಬಾ ತಂಪಾಗಿದೆ ಇಲ್ಲಿ ಅಲ್ವಾ ಲಕ್ಷ್ಮೀ...
ಲಕ್ಷ್ಮೀ: ಹೌದು ಹೌದು... ದಟ್ಟವಾದ ನೆರಳಿದೆ. ಎಡ ಬದಿ ನೋಡಿರಿ.. ಉತ್ತರಾಣಿ ಗಿಡಗಳಿವೆ... ಗುರುತೇ ಇರದ ಹಲವಾರು ಗಿಡಗಳೂ ಇವೆ!
ಲಲಿತ: ರಾಜೀವ.. ಅತ್ತ ನೋಡು..ಮೇಲಿನಿಂದ ಬಿಳಲುಗಳು ಇಳಿಬಿದ್ದುದು ಕಾಣಿಸುತ್ತಿದೆಯೇ?
ರಾಜೀವ: ಅದೇನದು? ಇಲ್ಲಿ ಆಲದ ಮರವಿಲ್ಲವಲ್ಲ.. ಬಿಳಲುಗಳು ಎಲ್ಲಿಂದ? ನಾನು ಹೋಗಿ ಬಿಳಲುಗಳನ್ನು ಹಿಡಿದು ಜೋಕಾಲಿಯಂತೆ ಸ್ವಲ್ಪ ಆಟವಾಡಿ ಬರುವೆ.
ಲಕ್ಷ್ಮೀ: ನಾನೂ ಬರುವೆ.. ಲಲಿತಾ ನೀನೂ ಬಾ
ಶಿಕ್ಷಕಿ: ಮಕ್ಕಳೇ, ಅದು ಗಟ್ಟಿಯಾದ ಬಿಳಲುಗಳಲ್ಲ.. ತುಂಡಾಗಬಹುದು.. ಆಟವಾಡಲಾಗದು
ರಾಜೀವ: ನಾನಂತೂ ಕೈಗಳಲ್ಲಿ ಬಿಳಲುಗಳನ್ನು ಹಿಡಿದೆ. ಆದರೆ ಅದು ತುಂಡಾಯ್ತು!
ಅಮೃತಬಳ್ಳಿ: ಮಕ್ಕಳೇ, ದಾರಿಯಲ್ಲಿ ಹೋಗುತ್ತಿದ್ದ ನೀವು ನನ್ನನ್ನು ಸುಮ್ಮನೇ ನೋಯಿಸಿದಿರಿ... ಹೀಗೆ ಮಾಡದಿದ್ದರೆ ಚೆನ್ನಾಗಿತ್ತು.
ರಾಜೀವ: ಕ್ಷಮಿಸು ಬಿಳಲೇ... ನಿನ್ನ ಪರಿಚಯವಾಗದೆ ಆಟಕ್ಕೆಂದು ಹೀಗೆ ಮಾಡಿದೆ.. ನೀನು ಯಾರು? ನೀನು ಬಳ್ಳಿಯೋ ಮರವೋ ಅರ್ಥವಾಗುತ್ತಾ ಇಲ್ಲವಲ್ಲ..
ಅಮೃತ ಬಳ್ಳಿ: ಮಗೂ ನನ್ನನ್ನು ಅಮೃತ ಬಳ್ಳಿ ಎಂದೆನ್ನುವರು. ನಾನು ಬಳ್ಳಿ. ಈ ಮರಗಳ ಮೇಲಿನಿಂದ ನನ್ನ ಬಿಳಲುಗಳ ಮೂಲಕ ಭೂಮಿಯನ್ನು ಸಂಪರ್ಕಿಸುತ್ತಾ ವಿಸ್ತಾರವಾಗಿ ಹರಡಲು ಹವಣಿಸುತ್ತಿದ್ದೇನೆ.
ಲಕ್ಷ್ಮೀ: ಹೋ ಅಮೃತ ಬಳ್ಳಿ ಅಂದ್ರೆ ನೀನೇನಾ! ಎಷ್ಟು ಸುಂದರವಾದ ಹಸಿರು ಎಲೆಗಳಿವೆ ಅಲ್ವಾ? ಹೃದಯದಾಕಾರ. ನನ್ನ ಅಜ್ಜನ ಮನೆ ಬಾಗಿಲಲ್ಲಿ ನಿನ್ನ ಚಪ್ಪರವೇ ಇದೆ. ಅದರಡಿಯಲ್ಲಿ ಯಾವುದೇ ತೊಂದರೆಗಳು ಅಪಘಾತಗಳು ಆಗೋದಿಲ್ಲಂತೆ...ಅಜ್ಜಿ ಹೇಳ್ತಿದ್ರು!
ಆದರೆ ಹೀಗೆ ದಾರಗಳಂತೆ ಬಿಳಲುಗಳು ಇಳಿಯುತ್ತಿದ್ದುದನ್ನು ನೋಡಲೇ ಇಲ್ಲ!
ಅಮೃತಬಳ್ಳಿ: ಅಲ್ಲಿ ಬಿಳಲುಗಳನ್ನು ಕೆಳಗೆ ಬೀಳದಂತೆ ಉಪಾಯವೇನಾದರೂ ಮಾಡಿರಬಹುದು ಮಗು. ನನ್ನ ಮೇಲಿಂದ ಬೀಸುವ ಗಾಳಿ ಅಮೃತ ಸಮಾನವಂತೆ. ನಾನು ಆಸರೆಯ ಮೇಲೆ ಎಲ್ಲಿಯೂ ಹಬ್ಬಬಲ್ಲೆ. ಆಸರೆಗಾಗಿ ಬಿಳಲುಗಳು. ಕೆಲವೊಮ್ಮೆ ಕಳೆಯೆಂದು ನನ್ನನ್ನು ಪೂರ್ತಿಯಾಗಿ ಕಡಿದು ಬಿಸಾಡುವವರಿರುತ್ತಾರೆ. ಆಗ ಒಂದು ತುಂಡಿನಷ್ಟಾದರೂ ಮರದಲ್ಲಿ ಉಳಿದರೆ ಅಲ್ಲಿಂದಲೇ ಬಿಳಲುಗಳನ್ನು ಬೆಳೆಸಿ ನಾನು ಬದುಕಿ ಉಳಿಯಲು ಪ್ರಯತ್ನಿಸುತ್ತೇನೆ. ನಾನು ಸುಲಭದಲ್ಲಿ ಸೋಲೊಪ್ಪಲ್ಲ, ಅದಕ್ಕೇ ನಾನು ಅ..ಮೃತ!
ರಾಜೀವ: ಟೀಚರ್.. ಈ ಬಳ್ಳಿ ಎಷ್ಡು ಸೊಗಸಾಗಿ ತನ್ಕತೆ ಹೇಳತ್ತಲ್ವಾ?
ಶಿಕ್ಷಕಿ: ಹೌದು.. ರಾಜೀವ. ಸಸ್ಯಗಳಿಗೂ ತಮ್ಮದೇ ಆದ ಹಿನ್ನೆಲೆಗಳಿವೆ. ಅಮೃತ ಬಳ್ಳಿ ಯನ್ನು ಅಮರತ್ವದ ಮೂಲವೆಂದು ಕೆಲವೆಡೆ ಭಾವಿಸಲಾಗುತ್ತದೆ. ಸಮುದ್ರ ಮಥನವಾಗಿ ಗರುಡನು ಅಮೃತದ ಗಡಿಗೆಯನ್ನೊಯ್ಯುವಾಗ ಈ ಬಳ್ಳಿಗೆ ಅಮೃತ ಸಿಂಚನವಾಯ್ತು.. ಆದ್ದರಿಂದಲೇ ಈ ಸಸ್ಯದ ಒಡಲೆಲ್ಲ ಔಷಧಿ ಎನ್ನುವ ಕತೆಗಳೂ ಇವೆ.
ಲಲಿತ : ಓ ಅಮೃತ ಬಳ್ಳಿಯೇ.. ನಿನ್ನ ನಿಜವಾದ ಹೆಸರೇನು? ಯಾವ ಕುಲ ನಿನ್ನದು? 
ಅಮೃತ ಬಳ್ಳಿ: ಮಕ್ಕಳೇ ನನ್ನ ಸಸ್ಯ ಶಾಸ್ತ್ರೀಯ ಹೆಸರು ಟಿನೋಸ್ಪೋರ ಕಾರ್ಡಿಪೋಲಿಯ(Tinospora cordifolia). ಮೆನಸ್ಪರ್ಮೇಸಿಯೆ(Menispermaceae) ಕುಟುಂಬ ನನ್ನದು. ಇಂಡಿಯನ್ ಕ್ವಿನೈನ್ ಎಂದೂ ಹೇಳುತ್ತಾರೆ. ಜನಿವಾರದ ಬಳ್ಳಿ, ಕೋತೀಬಾಲದ ಬಳ್ಳಿ, ಗುಡುಚಿ, ಚಕ್ರಾಣಿ ಎಂದೂ ಕರೆಯುವರು.
ರಾಜೀವ: ಓ.. ಚಂದ ಚಂದದ ಹೆಸರುಗಳು! ನಿನ್ನನ್ನು ನೋಡಿಯೇ ಇಟ್ಟಿರಬೇಕು.
ಶಿಕ್ಷಕಿ: ಅದು ನಿಜ. ವಿವಿಧ ರೀತಿಯ ಗುರುತಿಸುವಿಕೆಯೆ ವಿವಿಧ ಹೆಸರುಗಳಿಗೆ ಕಾರಣ. ಹಾವಾಡಿಗರು ಹಾವಿನ ಮುಖದೆದುರು ಇದರ ತುಂಡುಗಳನ್ನು ಹಿಡಿಯುವಾಗ ಹಾವು ಹಿಂದೆ ಸರಿಯುತ್ತದೆಯಂತೆ. ಅಂದರೆ ಹಾವಿನ ವಿಷಕ್ಕೆ ಇದು ಮದ್ದೆನ್ನುತ್ತಾರೆ.
ಲಕ್ಷ್ಮೀ: ಹೇ ರಾಜೀವ.. ನಿನಗೊತ್ತಾ? ನಮ್ಮಜ್ಜ ಇದನ್ನು ಯಾವುದೋ ಕಾಯಿಲೆಗೆಂದು ಕಷಾಯ ಮಾಡಿ ಕುಡೀತಿದ್ರು..!
ಅಮೃತಬಳ್ಳಿ: ಮಕ್ಕಳೇ ನನ್ನ ಎಲೆ, ಬಳ್ಳಿ ಬೇರುಗಳು ಔಷಧವನ್ನು ತುಂಬಿಕೊಂಡಿವೆ. ಇತ್ತೀಚೆಗೆ ಕೊರೋನಾ ಎಂಬ ಸಾಂಕ್ರಾಮಿಕ ರೋಗ ಹರಡಿತ್ತಲ್ಲ... ಆಗ ನನಗೆ ಭಾರೀ ಬೇಡಿಕೆ ಇತ್ತು.. ಗೊತ್ತಾ?
ಶಿಕ್ಷಕಿ: ಹೌದು ಹೌದು ನೆನಪಿದೆ ಅಲ್ಲವೇ ಮಕ್ಕಳೇ... ಈ ಬಳ್ಳಿ ಯ ಕಾಂಡ, ಎಲೆ, ಬೇರು ಎಲ್ಲವೂ ಔಷಧಿಯೇ..! ಇದು ವಾತ , ಪಿತ್ತ , ಕಫ ಎಲ್ಲದಕ್ಕೂ ಸಮಾಧಾನ ನೀಡುತ್ತದೆ.
ಅಮೃತ ಬಳ್ಳಿ: ಅಷ್ಟು ಮಾತ್ರವಲ್ಲ... ಮಾನವನಿಗೆ ಬರುವ ಪಿತ್ತ ವಿಕಾರ, ಬುದ್ಧಿಮಾಂದ್ಯ, ಚಿಕ್ಕ ಮಕ್ಕಳ ದೃಷ್ಟಿ ದೋಷ, ದೃಷ್ಟಿ ಮಾಂದ್ಯ, ವಾತ ಜ್ವರ, ಡೆಂಗ್ಯೂ , ಹಂದಿಜ್ವರ, ಚಿಕನ್ ಗುನ್ಯಾ, ಮಲೇರಿಯಾ, ಉರಿಮೂತ್ರ, ಬೊಜ್ಜು ಕೊಬ್ಬು ಕರಗಿಸಲು, ಮೂಲವ್ಯಾಧಿ, ಬುದ್ದಿ ಭ್ರಮಣೆ, ಹೊಟ್ಟೆ ಉರಿ, ಸ್ಮರಣಶಕ್ತಿ ಹೆಚ್ಚಿಸುವೆ ಹಾಗೂ ಮೂತ್ರನಾಳದ ಕಲ್ಲು ನಿವಾರಿಸಲು ಸಹಾಯಮಾಡುತ್ತೇನೆ. ಬಾಯಾರಿಕೆ, ವಾಂತಿ, ವಾಕರಿಕೆಗೂ ಔಷಧಿಯಾಗುತ್ತಿರುವೆ ನಿಮಗೆ ತಿಳಿದಿದೆಯೇ?
ಲಕ್ಷ್ಮೀ: ಓ.. ಮಾನವನಿಗೆ ಅಗಾಧವಾಗಿ ಸಹಕರಿಸುತ್ತಿರುವ ನೀನೊಂದು ನಿಷ್ಪಾಪಿ ಸಸ್ಯ! ಅಜ್ಜ ಹೇಳ್ತಾರೆ.. ಮಧುಮೇಹ ಕಾಯಿಲೆಗೆ ನೀನು ರಾಮ ಬಾಣವಂತೆ! ನಿನ್ನ ಎಲೆಗಳ ಜ್ಯೂಸ್ ಮಾಡಿ ವಾರಕ್ಕೊಮ್ಮೊಯಾದರೂ ನಮಗೆ ಕೊಡ್ತಿದ್ರು. ಕಹಿ ಕಹಿ ಎಂದು ನಾವೆಲ್ಲರೂ ಬೊಬ್ಬಿಟ್ಟರೆ "ಇದು ಇಮ್ಯುನಿಟಿ ಬೂಸ್ಟರ್" ಎನ್ನುತ್ತಿದ್ದರು!.
ರಾಜೀವ: ಇದರ ಅತಿ ಸೇವನೆ ಒಳಿತಲ್ಲವಂತೆ ಲಕ್ಷ್ಮೀ. ಯಕೃತ್ತಿನ ಸಮಸ್ಯೆಗಳು ಹುಟ್ಟಬಹುದಂತೆ...
ಶಿಕ್ಷಕಿ: ಹ್ಹಾಂ...ಮಿತವಾಗಿ ಬಳಸಿದರೆ ಅಮೃತ!ಇದರ ಚೂರ್ಣ, ಕಷಾಯ, ಸತ್ವದ ನಾನಾ ಔಷಧಿಗಳಿವೆ. ವಿಷಕಾರಿ ಕೀಟ, ಹಾವಿನ ಕಡಿತದ ನಂಜಿನ ಉಪಶಮನಕ್ಕಾಗಿ ಬಳಸುವರು. ಜೀವ‌ಕೋಶದ ಹಾನಿಯ ವಿರುದ್ಧ, ಕೆಮ್ಮು ಶೀತ ಉಸಿರಾಟದ‌ ಸಮಸ್ಯೆಯ ವಿರುದ್ಧ , ಉರಿಯೂತ, ಸಂಧಿವಾತ ವಿರೋಧಿ ಗುಣ ಹೊಂದಿದೆ. ಎಲೆಗಳಲ್ಲಿ ಪ್ರೊಟೀನ್ ,ಕ್ಯಾಲ್ಸಿಯಮ್, ಫಾಸ್ಪರಸ್ ಇರುವುದರಿಂದ ಜಾನುವಾರುಗಳಿಗೆ ಉತ್ತಮ ಮೇವಾಗಿದೆ.
ಅಮೃತಬಳ್ಳಿ: ಹೌದು. ಭಾರತ ಮತ್ತು ಶ್ರೀಲಂಕಾದ ಉಷ್ಣ ಪ್ರದೇಶಗಳಲ್ಲಿ ನಾನು ಸಹಜವಾಗಿಯೇ ಬೆಳೆಯುತ್ತೇನೆ. ನೀರು ಮತ್ತು ಗೊಬ್ಬರ ಕೊಟ್ಟು ನನ್ನನ್ನು ಬೆಳೆಸುವ ರೈತರಿಗೆ ಹಣದ ಸಹಾಯವನ್ನೂ ಮಾಡಬಲ್ಲೆ.
ರಾಜೀವ: ಅಬ್ಬಬ್ಬ! ಈ ಅಮೃತ ಬಳ್ಳಿಯೆಂದರೆ ಮಾನವನಿಗೆ ದೇವರು ನೀಡಿದ ವರವೇ ಸರಿ..! ಸಾವನ್ನೇ ಗೆಲ್ಲುವ ಶಕ್ತಿ ತುಂಬಿದಂತಿದೆ!
ಅಮೃತ ಬಳ್ಳಿ: ಮಗೂ, ನನ್ನನ್ನು ಸರಿಯಾಗಿ ಅರ್ಥೈಸಿಕೊಂಡೆ. ಮಾನವನು ನಮ್ಮ ಮೇಲೆ ಕರುಣೆದೋರಬೇಕು ಅಷ್ಟೇ. ಮುಳ್ಳಿನ ಗಿಡಗಳ ಮೇಲೆ ಅಥವಾ ಯಾವುದೇ ಗಿಡ ಮರಗಳ ಮೇಲೆ ನನ್ನ ಒಂದೊಂದು ತುಂಡು ಕಾಂಡವನ್ನಿಟ್ಟರೂ ನಾನು ನಾನಾಗಿ ಬೆಳೆಯಬಲ್ಲೆ.
ಶಿಕ್ಷಕಿ: ಹೌದು ಮಕ್ಕಳೇ, ಅಮೃತ ಬಳ್ಳಿಯ ಮಾತು ನಾವು ನಡೆಸಿ ಕೊಡಬೇಕಾಗಿದೆ. ನಮ್ಮ ಆರೋಗ್ಯಕ್ಕೆ ಅಂಗಳದೊಳಗೆ ಅಮೃತ ಬಳ್ಳಿಯ ಅಗತ್ಯವಿದೆ.
ಲಕ್ಷ್ಮೀ: ಧನ್ಯವಾದಗಳು ಅಮೃತ ಬಳ್ಳಿ., ನಾವೂ ಹಾಗೆಯೇ ಮಾಡುತ್ತೇವೆ. ನಿನ್ನ ಉಪಕಾರವನ್ನು ಎಂದಿಗೂ ಮರೆಯಲಾರೆವು.
ಶಿಕ್ಷಕಿ: ಸರಿ ಮಕ್ಕಳೇ, ನಾವು ಹೊರಡೋಣ. ಹೊತ್ತು ನೆತ್ತಿಗೇರಿದೆ. ಬೇಗ ಬೇಗ ಧ್ಯಾನಮಂದಿರಕ್ಕೆ ತೆರಳಿ ಅಲ್ಲಿನ ಸೌಂದರ್ಯ ಸವಿದು ಮತ್ತೆ ಆಶ್ರಮದ ಅನ್ನಪೂರ್ಣೇಶ್ವರಿ ಹಾಲ್ ಗೆ ಊಟಕ್ಕೆ ಹೋಗೋಣ. 
      ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗುತ್ತೇನೆ.. ನಮಸ್ಕಾರ.
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************


Ads on article

Advertise in articles 1

advertising articles 2

Advertise under the article