-->
ಜಗಲಿ ಕಟ್ಟೆ : ಸಂಚಿಕೆ - 70

ಜಗಲಿ ಕಟ್ಟೆ : ಸಂಚಿಕೆ - 70

ಜಗಲಿ ಕಟ್ಟೆ : ಸಂಚಿಕೆ - 70
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 


ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ


ಮಕ್ಕಳ ಜಗಲಿಯ ಎಲ್ಲರಿಗೂ ಆತ್ಮೀಯ ನಮಸ್ಕಾರ... 
    ಇತ್ತೀಚೆಗೆ ಜಗಲಿಯನ್ನು ಸೇರಿಕೊಂಡ ಹಿರಿಯರೊಬ್ಬರು, "ಮಕ್ಕಳ ಜಗಲಿ - ಡಿಜಿಟಲ್ ಪತ್ರಿಕೆ ಎನ್ನುವ ಪರಿಕಲ್ಪನೆ ಇರಲಿಲ್ಲ. ಇಂತಹದೊಂದು ವೇದಿಕೆ ಇರುವುದು ಬಹಳ ಖುಷಿಯಾಯಿತು." ಎನ್ನುತ್ತಾ ನುಡಿಯುವಾಗ ಜಗಲಿಯು ಎಲ್ಲರ ಮನೆ - ಮನ ತಲುಪುತ್ತಿರುವುದು ಹೆಮ್ಮೆ ಎನಿಸುತ್ತದೆ. ಬಹಳಷ್ಟು ವೈವಿಧ್ಯ ಅಂಕಣಗಳು ಇಲ್ಲಿ ಸಿಗುತ್ತಿರುವುದು ಹಾಗೂ ಎಲ್ಲಾ ವೈವಿಧ್ಯ ಪ್ರಕಾರಗಳಲ್ಲಿಯೂ ಕೂಡ ಮಕ್ಕಳು ಭಾಗವಹಿಸುತ್ತಿರುವುದು ಆರೋಗ್ಯಕರ ಸಮಾಜದ ಬೆಳವಣಿಗೆಯಲ್ಲಿ ಮಕ್ಕಳ ಜಗಲಿಯ ಪಾತ್ರ ಮಹತ್ವವೆನಿಸುತ್ತದೆ.  
      ಈಗಾಗಲೇ ಮಕ್ಕಳ ಜಗಲಿಯಲ್ಲಿ 'ಪ್ರೀತಿಯ ಪುಸ್ತಕ' - ಎನ್ನುವ ಅಂಕಣದಲ್ಲಿ ವಾಣಿ ಪೆರಿಯೋಡಿಯವರು ಕಳೆದ ಮೂರು ವರುಷಗಳಿಂದ ಮಕ್ಕಳ ಪುಸ್ತಕಗಳನ್ನು ಪರಿಚಯಿಸುತ್ತಾ ಬಂದಿದ್ದಾರೆ. ಇವರು ಮಕ್ಕಳ ಪುಸ್ತಕಗಳನ್ನು ಓದಿ ಬಹಳಷ್ಟು ಸಂಗ್ರಹಕ್ಕೆ ಯೋಗ್ಯವಾದ ಉತ್ತಮ ಪುಸ್ತಕಗಳ ಪರಿಚಯ ಈ ಅಂಕಣದಲ್ಲಿ ಸಾಗುತ್ತಾ ಬಂದಿದೆ. ಶಾಲೆಗಳಲ್ಲಿ ಕೂಡ ಪುಸ್ತಕ ಪರಿಚಯ ಎನ್ನುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾ ಬರುತ್ತಿರುವುದು ಸಂತಸ. ಅದು ಕೆಲವೊಮ್ಮೆ ಯಾಂತ್ರಿಕವಾಗಿರುತ್ತದೆ , ಒತ್ತಾಯಕ್ಕೆ ಮಾತ್ರವಾಗುತ್ತದೆನ್ನುವ ಅಪವಾದ ಇದ್ದರೂ ಶೇಕಡಾ ಭಾಗವಾದರೂ ಮಕ್ಕಳು ಪುಸ್ತಕ ಓದುವ ಅಭಿರುಚಿಯನ್ನು ಬೆಳೆಸಿಕೊಂಡರೆ ಸ್ವಸ್ಥ ಸಮಾಜವನ್ನು ಸ್ಥಾಪಿಸಬಹುದು. 
    ಇತ್ತೀಚಿಗೆ ವಿದ್ಯಾ ಕಾರ್ಕಳ ಇವರು ಹೊಸ ಸಲಹೆ ನೀಡುತ್ತಾ... "ನಾನು ಓದಿದ ಪುಸ್ತಕ ಎಂಬ ಅಂಕಣ ಸೂಕ್ತ ಆಗಬಹುದಲ್ವೇ.. ನಾನು ಓದಿದ ಪುಸ್ತಕ ಎನ್ನುವ ಟಾಪಿಕ್ ಶುರು ಮಾಡಿದರೆ ಮುಂದೆ ಮಕ್ಕಳೂ, ಶಿಕ್ಷಕರೂ ಬರೆಯಬಹುದು.
ಅಸೆಂಬ್ಲಿಯಲ್ಲಿ ಪುಸ್ತಕ ಪರಿಚಯ ಎಂದು ಮಕ್ಕಳು ಓದುತ್ತಾರೆ. ಆದರೆ ನಿಜವಾಗಿ ಓದಿರುವುದಿಲ್ಲ. ನಿಜವಾಗಿ ಓದಿದ ಪುಸ್ತಕಗಳು ಯಾಕೆ ಇಷ್ಟವಾಯಿತು ಎಂದು ಬರೆದರೆ ಚೆನ್ನಾಗಿರುತ್ತಲ್ವ.." ಅಂದಾಗ ಹೊಸ ಅಂಕಣವನ್ನೇ ಆರಂಭ ಮಾಡಿದೆವು. ಪ್ರಜ್ವಲಾ ಶೆಣೈಯವರು ಮೊದಲ ಅಂಕಣವನ್ನು ಬರೆದಿದ್ದಾರೆ. ಮಕ್ಕಳ ಜಗಲಿ ಯಾವತ್ತೂ ಕೂಡ ಸೃಜನಾತ್ಮಕ ಹೊಸ ಆಲೋಚನೆಗಳನ್ನು ಬಯಸುತ್ತದೆ ಮತ್ತು ಒಪ್ಪುತ್ತದೆ.
       ಜಗಲಿಯಲ್ಲಿ ನಡೆದ ಕಥೆ ಕವನ ಸ್ಪರ್ಧೆ ಮತ್ತು ಚಿತ್ರಕಲಾ ಸ್ಪರ್ಧೆಯ ಎಲ್ಲಾ ವಿಜೇತರಿಗೆ ಪ್ರಶಸ್ತಿ ಪತ್ರಗಳನ್ನು ಕಳುಹಿಸಿಕೊಡಲಿದ್ದೇವೆ... ಪ್ರಶಸ್ತಿ ವಿಜೇತರನ್ನು ಸಂಪರ್ಕಿಸಿ ಮಾಹಿತಿಗಳನ್ನು ಸಂಗ್ರಹಿಸುವ ಬಹಳಷ್ಟು ಕೆಲಸ ಕಾರ್ಯಗಳಿದ್ದು ಅದರದೇ ಆದ ಹಂತದಲ್ಲಿ ಸಾಗಬೇಕಾಗಿರುವುದರಿಂದ ಎಲ್ಲರೂ ಸಹಕರಿಸಬೇಕಾಗಿ ಕೇಳಿಕೊಳ್ಳುತ್ತೇವೆ.
      ಫೆಬ್ರವರಿ - ಮಾರ್ಚ್ ತಿಂಗಳೆಂದರೆ ವಾರ್ಷಿಕ ಪರೀಕ್ಷೆಯ ಸಮಯ. ಜಗಲಿಯ ಮಕ್ಕಳೆಲ್ಲ ಓದು, ಬರಹಗಳಲ್ಲಿ ಹೆಚ್ಚು ಮಗ್ನರಾಗಿದ್ದೀರಿ. ಕೆಲವು ಶಾಲೆಯಲ್ಲಿ ಪಠ್ಯಗಳನ್ನು ಪೂರ್ಣಗೊಳಿಸುವ ವೇಗದಲ್ಲಿ ಇದ್ದರೆ ಇನ್ನು ಕೆಲವು ಶಾಲೆಗಳಲ್ಲಿ ಪುನರಾವರ್ತನೆಯ ಕಾರ್ಯ ಆರಂಭವಾಗಿರಬಹುದು. ಅಂತೂ ಶಾಲೆಯಲ್ಲಿ ನಿತ್ಯ ಓದಿನ ಭರಾಟೆ ಜೋರಾಗಿಯೇ ನಡೆದಿರುತ್ತದೆ.
        ಮನೆಯಲ್ಲಿಯೂ ಬಾಕಿ ಚಟುವಟಿಕೆಗಳಿಗೆ ಪೂರ್ಣ ವಿರಾಮ ಬಿದ್ದಿರುತ್ತದೆ. ಬಾಕಿ ಉಳಿದ ಪ್ರಶ್ನೋತ್ತರಗಳನ್ನು ಬರೆಯುವುದು, ಪಠ್ಯ, ನೋಟ್ಸ್ ಗಳನ್ನು ಓದುವ ಬಿಡುವಿಲ್ಲದ ಕಾರ್ಯಗಳಲ್ಲಿ ಆಡುವುದಕ್ಕೂ ಪುರುಸೊತ್ತಿಲ್ಲದಷ್ಟು ಸಮಯವೇ ಕಾಣೆಯಾಗಿರುತ್ತದೆ. ಮಕ್ಕಳು ದೊಡ್ಡ ಅಂಕಿ ಗಳಿಸಬೇಕೆನ್ನುವ ಒತ್ತಡ ಅಪ್ಪ - ಅಮ್ಮನಿಗೆ ತುಸು ಜಾಸ್ತಿಯೇ ಇರುತ್ತದೆ. 
       ಮಗ ಓದಲು ಕೇಳುತ್ತಿಲ್ಲ. ಹಠ ಮಾಡುತ್ತಿದ್ದಾನೆ, ಮಗಳು ಸ್ವಲ್ಪ ಕಲಿಕೆಯಲ್ಲಿ ಹಿಂದೆ ಬಿದ್ದಿದ್ದಾಳೆ, ಮನೆಯಲ್ಲಿ ಮಕ್ಕಳು ಕೇಳುವುದೇ ಇಲ್ಲ... ಹೀಗೆ ಹಲವಾರು ದೂರುಗಳ ವಿನಿಮಯ ಸರ್ವೇಸಾಮಾನ್ಯ...!! ಅಂತೂ ಒತ್ತಡದ ದಿನಗಳು ಮಕ್ಕಳ ಮುಂದೆ ಕಾದು ನಿಂತಂತಿದೆ...!!
        ಎಲ್ಲಾ ಒತ್ತಡಗಳನ್ನು ನಿವಾರಿಸಬೇಕಾದರೆ ಪರೀಕ್ಷೆಯನ್ನು ಸಂಭ್ರಮಿಸಬೇಕು. ವರ್ಷಕ್ಕೊಮ್ಮೆ ಬರುವ ವಾರ್ಷಿಕ ಪರೀಕ್ಷೆಯನ್ನು ಸಂಭ್ರಮದಿಂದ ಎದುರುಗೊಳ್ಳಬೇಕು. ಪರೀಕ್ಷೆಗೆ ಬರುವ ಎಲ್ಲಾ ವಿಷಯಗಳಲ್ಲಿ ಸರ್ವಸಿದ್ಧತೆಗಳನ್ನು ನಡೆಸಿ ಉತ್ತಮ ಫಲಿತಾಂಶವನ್ನು ಗಳಿಸಬೇಕೆನ್ನುವ ಮಹದಾಸೆಯನ್ನು ಕಟ್ಟಿಕೊಳ್ಳಬೇಕು. ಕೊನೆಯ ಕಾಲಕ್ಕೆ ಎಚ್ಚೆತ್ತುಕೊಳ್ಳುವುದಕ್ಕಿಂತ ನಿತ್ಯ ಓದು ತನ್ನ ಹವ್ಯಾಸದ ಭಾಗವಾಗಬೇಕು. ನಿರಂತರ ಓದು ಕೇವಲ ಅಂಕ ಗಳಿಸುವುದಕ್ಕಾಗಿ ಮಾತ್ರವಾಗದೆ ತನ್ನ ಜ್ಞಾನದಾಹವನ್ನು ಪೂರೈಸುವುದಕ್ಕಾಗಿ ನಡೆದರೆ ಕಲಿಕೆ ಎನ್ನುವುದು ಸಂಭ್ರಮವಾಗಬಹುದು... 
    ಶಾಲಾ ಪರೀಕ್ಷೆ ಎನ್ನುವುದು ಒತ್ತಡವಲ್ಲ... ಒಂದು ವರ್ಷದ ಶೈಕ್ಷಣಿಕ ಅವಧಿಯಲ್ಲಿ ತಾನು ಗಳಿಸಿಕೊಂಡ ಜ್ಞಾನವನ್ನು ಮತ್ತೆ ಗಟ್ಟಿಗೊಳಿಸುವ ಪ್ರಕ್ರಿಯೆ. ಮುಂದಿನ ಹಂತದ ಹೆಚ್ಚಿನ ಜ್ಞಾನವನ್ನು ಪಡೆದುಕೊಳ್ಳಲು ಅರ್ಹವಿರುವುದಕ್ಕೊಂದು ವೇದಿಕೆ... ಪರೀಕ್ಷೆಯೆನ್ನುವುದು ಎಲ್ಲಾ ಮಕ್ಕಳಿಗೂ ಗೆಲುವಾಗಲಿ. ಎಲ್ಲಾ ವಿದ್ಯಾರ್ಥಿಗಳಿಗೆ ಶುಭವಾಗಲಿ...  
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************



ಕಳೆದ ಸಂಚಿಕೆಯ ಜಗಲಿಕಟ್ಟೆ - 69 ಅಂಕಣದಲ್ಲಿ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ, ಚಂದ್ರಶೇಖರ ಗಟ್ಟಿ ಅಂದಾಡಿ ನಿವೃತ್ತ ಹಿರಿಯ ಆರೋಗ್ಯ ನಿರೀಕ್ಷಕ, ಕವಿತಾ ಶ್ರೀನಿವಾಸ ದೈಪಲ, ವಿದ್ಯಾ ಕಾರ್ಕಳ ಸಹಶಿಕ್ಷಕಿ.... ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಕಳೆದ ವಾರಗಳಿಂದ ಪ್ರಕಟವಾದ ಜಗಲಿಯ ಬರಹಗಳ ಕುರಿತಾದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....


ಮಕ್ಕಳ ಜಗಲಿಯಲ್ಲಿ ಪ್ರಕಟವಾದ ಎಂ.ಪಿ ಜ್ಞಾನೇಶ್ ರವರ ಜೀವನ ಸಂಭ್ರಮ -175 'ಆದರ್ಶ ಅಧಿಕಾರಿ'..ತುಂಬಾ ಚೆನ್ನಾಗಿ ಬಂದಿದೆ. ಒಬ್ಬರ ವ್ಯಕ್ತಿತ್ವದ ಉತ್ತಮ ಗುಣಗಳನ್ನು ಮಕ್ಕಳು ಹೇಗೆ ಅಳವಡಿಸಿಕೊಳ್ಳಬಹುದು ಎಂದು ಪ್ರೇರಣೆ ಪೂರ್ವಕವಾಗಿ ಬರೆದಿದ್ದಾರೆ. ಇನ್ನಷ್ಟು ಲೇಖನಗಳು ಹೀಗೆಯೇ ಬರಲಿ. ಧನ್ಯವಾದಗಳು ಸರ್...
................................................ ವಿದ್ಯಾಶ್ರೀ
ಶ್ರೀನಿಕೇತನ, ಬೆಂದೂರ್
ಕಂಕನಾಡಿ, ಮಂಗಳೂರು
*******************************************



ನಮಸ್ತೇ,
     ಸಂತರ ಬದುಕಿಗೂ ಸಾಮಾನ್ಯ ವ್ಯಕ್ತಿಯ ಬದುಕಿಗಿರುವ ವ್ಯತ್ಯಾಸಗಳನ್ನು ಉದಾಹರಣೆಗಳ ಮೂಲಕ ಸುಂದರವಾಗಿ ನಿರೂಪಿಸಿದ್ದಾರೆ ಶಿಕ್ಷಣಾಧಿಕಾರಿಯವರಾದ ಶ್ರೀ ಜ್ಞಾನೇಶ್ ಸರ್ ರವರು.
     ಉಚಿತ ಹಾಗೂ ದರ ಕಡಿತದ ಮಾರಾಟದಿಂದ ಆಗುವಂತಹ ತೊಂದರೆ ಹಾಗೂ ನಷ್ಟದ ಕುರಿತಾಗಿ ತಮ್ಮ ಸ್ವ ಅನುಭವದೊಂದಿಗಿನ ಲೇಖನ ಉತ್ತಮವಾಗಿತ್ತು. ಉಚಿತಕ್ಕೆ ಹಾತೊರೆಯುವವರಿಗೆ ಕಿವಿ ಮಾತಿನಂತಿತ್ತು.
       ಹೊಸ ವರ್ಷದ ಸಂದರ್ಭದಲ್ಲಿ ಅಡುಗೆ ಸಿಬ್ಬಂದಿಯವರು ತಯಾರಿಸಿದ ಸಾಂಬಾರ್ ಹೆಚ್ಚು ರುಚಿಯಾಗಲು ಕಾರಣವನ್ನು ವಿದ್ಯಾ ಮೇಡಂರವರು ನಮ್ಮೂರ ಶಾಲೆಯ ಸುದ್ದಿ ಸಂಚಿಕೆಯಲ್ಲಿ ತುಂಬಾ ಸೊಗಸಾಗಿ ತಿಳಿಸಿದ್ದಾರೆ.
     ಪಾರದರ್ಶಕ ವಸ್ತುಗಳ ಕುರಿತಾಗಿ ಸವಿವರ ಮಾಹಿತಿ ನೀಡಿದ ಲೇಖನ ವೈಜ್ಞಾನಿಕ ಸಂಚಿಕೆಯಲ್ಲಿ ದಿವಾಕರ ಸರ್ ರವರಿಂದ.
      ನೆಲ ಸಂರಕ್ಷಣೆಯ ಮೂಲಕ ಪರಿಸರದ ಸಂರಕ್ಷಣೆ ಮಾಡುವ ನೆಲ ಸೇವಂತಿಗೆ ಗಿಡದ ಸಂರಕ್ಷಣೆ ನಮ್ಮ ಹೊಣೆಯಲ್ಲವೇ? ನೆಲ ಸೇವಂತಿಗೆ ಗಿಡದ ಸೊಗಸಾದ ಪರಿಚಯ ಸಂಭಾಷಣೆಯೊಂದಿಗೆ ವಿಜಯಾ ಮೇಡಂರವರಿಂದ.
      ವೀರ ರಾಣಿ ಕಿತ್ತೂರು ಚೆನ್ನಮ್ಮನವರ ಊರಿನ ಇತಿಹಾಸದ ಕುರಿತಾದ ಸುಂದರ ಪರಿಚಯ ರಮೇಶ್ ರವರಿಂದ ಚೆನ್ನಾಗಿ ಮೂಡಿಬಂದಿದೆ.
      ವಾಣಿಯಕ್ಕನವರ 'ಅಕ್ಕಾ ಅಕ್ಕಾ ಗುಡು ಗುಡು ಸದ್ದು ಬರುವುದೆಲ್ಲಿಂದ' ಪುಸ್ತಕದ ಪರಿಚಯ ಸೊಗಸಾಗಿತ್ತು.
    ಮಕ್ಕಳ ಜಗಲಿಯಿಂದ ಆಯೋಜಿಸಲ್ಪಟ್ಟ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ನನ್ನ ವೈಯಕ್ತಿಕ ಅಭಿನಂದನೆಗಳು. ಭಾಗವಹಿಸಿದ ಮಕ್ಕಳಿಗೆ ಧನ್ಯವಾದಗಳು.
    ರಮೇಶ ಉಪ್ಪುಂದರವರ ಪದದಂಗಳ ಸಂಚಿಕೆ ಸೊಗಸಾಗಿ ಮೂಡಿ ಬಂದಿದೆ.
      ಕೊನೆಯದಾಗಿ ಎಲ್ಲರಿಗೂ ನನ್ನ ಮನದಾಳದ ನಮನಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************





ನಮಸ್ತೇ,
     ಗಣರಾಜ್ಯೋತ್ಸವದ ಅಂಗವಾಗಿ ಭಾರತದ ಸಂವಿಧಾನದ ಕುರಿತಾಗಿ ವಿವರವಾದ ಮಾಹಿತಿಯನ್ನು ಒಳಗೊಂಡಿರುವ ಸುಂದರ ಲೇಖನ ಶಿಕ್ಷಣಾಧಿಕಾರಿಗಳಾದ ಶ್ರೀ ಜ್ಞಾನೇಶ್ ಸರ್ ಅವರಿಂದ.
     ಹಿಂದೆಯೂ ಕೂಡ ಈ ಉಚಿತದ ಭಾಗ್ಯಗಳಿಂದ ಹೇಗೆ ಜನ ಹೇಗೆ ಮೋಸ ಹೋದರು ಎನ್ನುವುದರ ಕುರಿತಾಗಿ ಚಂದದ ಬರಹ ರಮೇಶ್ ಬಾಯಾರ್ ರವರಿಂದ.
      ಚಂದನ್ ಅವರಿಂದ ಚಂದದ ಚಿತ್ರಗಳ ಸಂಚಿಕೆ. ಅಭಿನಂದನೆಗಳು ಚಂದನ್ ರವರಿಗೆ. ತಾಯಿ ಮಮತೆ ತೋರುವ ಸುಂದರ ನಾಟಕವನ್ನು ರಚಿಸಿದ ಗೌತಮಿ ಶೆಟ್ಟಿಗಾರ್ ಅವರಿಗೆ ಅಭಿನಂದನೆಗಳು.   
      ಹಸಿರುಮನೆ ಪರಿಣಾಮ ಹಾಗೂ ಅದಕ್ಕೆ ಕಾರಣವಾದ ಅನಿಲಗಳ ಕುರಿತಾಗಿ ದಿವಾಕರ ಸರ್ ರವರಿಂದ ವಿವರವಾದ ಲೇಖನ.
      ಸಂಭಾಷಣೆ ಶೈಲಿಯಲ್ಲಿ ಮೂಡಿದ ಕೇಶವರ್ಧಿನಿ ಗಿಡದ ಕುರಿತ ಸೊಗಸಾದ ಪರಿಚಯ ವಿಜಯಾ ಮೇಡಂ ರವರಿಂದ. 
     ಪವಿತ್ರ ಕ್ಷೇತ್ರ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದ ಕುರಿತಾದ ವಿವರವಾದ ಮಾಹಿತಿ ರಮೇಶ್ ಸರ್ ರವರಿಂದ ತಮ್ಮ ಪಯಣ ಸಂಚಿಕೆಯಲ್ಲಿ.   
     ವಾಣಿಯಕ್ಕನವರ ಕಿನ್ನರಿಯೋರ್ವಳು ಮನೆಕಟ್ಟುವ ಪರಿಯ ಕುರಿತಾದ 'ಗೀಜಗನ ಹಕ್ಕಿಯ ಗೂಡು' ಪುಸ್ತಕದ ಪರಿಚಯ ಚೆನ್ನಾಗಿ ಮೂಡಿ ಬಂದಿದೆ. 
     ಚಿತ್ರ ಸಂಚಿಕೆಯಲ್ಲಿ ಅಂದವಾದ ಚಿತ್ರ ರಚಿಸಿದ ಎಲ್ಲಾ ಮಕ್ಕಳಿಗೆ ಅಭಿನಂದನೆಗಳು.
      ಪದದಂಗಳ ಸಂಚಿಕೆ ಸೊಗಸಾಗಿ ಮೂಡಿ ಬರುತ್ತಿದೆ ಧನ್ಯವಾದಗಳು ರಮೇಶ್ ರಿಗೆ.
     ಕೊನೆಯದಾಗಿ ಜಗಲಿಯ ಕಟುಂಬದ ಎಲ್ಲರಿಗೂ ಹೃತ್ಪೂರ್ವಕ ವಂದನೆಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************



ಎಲ್ಲರಿಗೂ ನಮಸ್ಕಾರಗಳು,
    ಅಧಿಕಾರಿಗಳು ತಮ್ಮ ಸಂಯಮವನ್ನು ಹೇಗೆ ಕಾಪಾಡಿಕೊಳ್ಳಬೇಕು ಯಾವ ರೀತಿ ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಬೇಕು ಎಂಬುದರ ಕುರಿತಾಗಿ ತಮ್ಮದೇ ಇಲಾಖೆಯ ಅಧಿಕಾರಿಯ ಉದಾಹರಣೆಯೊಂದಿಗೆ ಶಿಕ್ಷಣಾಧಿಕಾರಿಗಳಾದ ಶ್ರೀ ಜ್ಞಾನೇಶ್ ಸರ್ ರವರ ಲೇಖನ ಉತ್ತಮವಾಗಿ ಮೂಡಿ ಬಂದಿದೆ.
      ಉಚಿತಗಳ ಅವಾಂತರಗಳ ಮುಂದುವರಿದ ಮೂರನೇ ಭಾಗದಲ್ಲಿ ಲೇಖಕರು ಶ್ರೀಮಂತರೊಬ್ಬರಿಂದ ಸಿನಿಮಾ ತೋರಿಸುವ ಸೋಗಿನಲ್ಲಿ ಸಿನಿಮೀಯವಾಗಿ ಮನೆಯ ಸಂಪತ್ತನ್ನು ದೋಚಿದ್ದನ್ನು ರಮೇಶ್ ಸರ್ ರವರು ಸುಂದರವಾಗಿ ವಿವರಿಸಿದ್ದಾರೆ. ಸರ್, ತಮ್ಮ 150ನೇ ಸಂಚಿಕೆಗೆ ನನ್ನ ವೈಯಕ್ತಿಕ ಅಭಿನಂದನೆಗಳು. ಇನ್ನಷ್ಟು ಸಂಚಿಕೆಗಳು ಮಕ್ಕಳ ಜಗಲಿಯಲ್ಲಿ ಮೂಡಿ ಬರಲಿ ಎಂಬ ಆಶಯದೊಂದಿಗೆ ಧನ್ಯವಾದಗಳು ಸರ್..
     ಮಗಳನ್ನು ಅತ್ಯಂತ ಪ್ರೀತಿಯಿಂದ ಕಾಣುತ್ತಿದ್ದ ತಂದೆ ಕುಡಿತದ ದಾಸನಾದಾಗ ಅವನ ಮಗಳ ಮೇಲೆ ಆದ ದುಷ್ಕೃತ್ಯಕ್ಕೆ ಕುಡಿತದ ಚಟ ಹೇಗೆ ಕಾರಣವಾಯಿತು ಎಂಬುದನ್ನು ವಿವರಿಸಿದ ಸಮಯೋಚಿತ ಲೇಖನ ಗಿರೀಶ್ ಸರ್ ರವರಿಂದ.
     ಮೈಕ್ರೋವೇವ್ ಗಳ ಸಂಶೋಧನೆ ಹಾಗೂ ಅವುಗಳ ಉಪಯೋಗವನ್ನು ದಿವಾಕರ್ ಸರ್ ಅವರು ತಮ್ಮ ವೈಜ್ಞಾನಿಕ ಸಂಖ್ಯೆಯಲ್ಲಿ ಸುಂದರವಾಗಿ ವಿವರಿಸಿದ್ದಾರೆ.
      ಕಳೆ ಗಿಡಗಳೆಂದು ಭಾವಿಸುವ ಅನೇಕ ಸಸ್ಯಗಳನ್ನು ಉಪಯುಕ್ತ ಸಸ್ಯಗಳೆಂದು
ಪರಿಚಯಿಸುವ ಕೆಲಸದ ಜೊತೆಗೆ ಅವುಗಳನ್ನು ಉಳಿಸುವ ಕಳಕಳಿಯ ತಮ್ಮ ಸಂಚಿಕೆಗಳು ಬಹಳ ಅದ್ಭುತವಾಗಿ ಮೂಡಿ ಬರುತ್ತಿವೆ. ಈ ಸಲದ ಸಂಚಿಕೆಯಲ್ಲಿ ಕಾಡು ಉತ್ತರಾಣಿ ಗಿಡದ ಪರಿಚಯ ಸೊಗಸಾಗಿ ಮೂಡಿ ಬಂದಿದೆ. ಧನ್ಯವಾದಗಳು ಮೇಡಂ.
     ಹೊಗೆನಕಲ್ ಜಲಪಾತದ ಕುರಿತಾದ ಸುಂದರ ಪರಿಚಯ ಹಾಗೂ ಜಲಪಾತಕ್ಕೆ ಆ ಹೆಸರು ಬರಲು ಕಾರಣವನ್ನು ಸುಂದರವಾದ ವರ್ಣ ಚಿತ್ರಗಳೊಂದಿಗೆ ರಮೇಶ್ ಉಪ್ಪುಂದ ಸರ್ ರವರು ತಮ್ಮ ಪಯಣ ಸಂಚಿಕೆಯಲ್ಲಿ ಸೊಗಸಾಗಿ ವಿವರಿಸಿದ್ದಾರೆ.
     ಪರಿಸರ ಪ್ರೀತಿಯನ್ನು ತೋರುವ 'ನೋಡಿ ನಡೆ' ಎನ್ನುವ ಪುಸ್ತಕದ ಸೊಗಸಾದ ಪರಿಚಯ ವಾಣಿಯಕ್ಕ ನವರಿಂದ.
     ಈ ವಾರ ಜಗಲಿಯಲ್ಲಿ ಮಕ್ಕಳ ಲೇಖನದಲ್ಲಿ ಜಾಹ್ನವಿ ರವರ ಪ್ರವಾಸ ಕಥನ ಚೆನ್ನಾಗಿ ಮೂಡಿ ಬಂದಿದೆ. ಅಭಿನಂದನೆಗಳು ಜಾಹ್ನವಿ. ಹಾಗೆ ಮಕ್ಕಳ ಚಿತ್ರಗಳ ಎರಡು ಸಂಚಿಕೆಗಳು ಪ್ರಕಟವಾಗಿದ್ದು ಚಿತ್ರಗಳು ಸೊಗಸಾಗಿವೆ. ಚಿತ್ರ ಬಿಡಿಸಿದ ಮಕ್ಕಳಿಗೆ ಅಭಿನಂದನೆಗಳು.
     ರಮೇಶ ಉಪ್ಪುಂದರವರ ಪದದಂಗಳ ಸಂಚಿಕೆ ಚೆನ್ನಾಗಿತ್ತು.
     ಎಲ್ಲರಿಗೂ ವಂದನೆಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************



ಎಲ್ಲರಿಗೂ ನಮಸ್ಕಾರಗಳು,
     ಧಾರಣ, ಧ್ಯಾನ ಹಾಗೂ ಸಮಾಧಿಯ ಮೂಲಕ ಸಂಯಮವನ್ನು ಹೇಗೆ ಪಡೆಯಬಹುದು ಎನ್ನುವುದರ ಕುರಿತಾಗಿ ಸುಂದರವಾದ ವಿಶ್ಲೇಷಣೆ ಶಿಕ್ಷಣಾಧಿಕಾರಿಗಳಾದ ಶ್ರೀ ಜ್ಞಾನೇಶ್ ಸರ್ ಅವರಿಂದ.
     ರಮೇಶ್ ಸರ್ ರವರಿಂದ ಮಂಚಿ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾದ ಶಿಕ್ಷಕರಾದ ಜಯರಾಮ ಪಡ್ರೆಯವರ ಕವನ ಸಂಕಲನ 'ನಿವೇದನೆ' ಯ ವಿಮರ್ಶಾತ್ಮಕ ಲೇಖನ ಬಹಳ ಸೊಗಸಾಗಿ ಮೂಡಿ ಬಂದಿದೆ.
     ಸಂಪರ್ಕ ಮಾಧ್ಯಮದಲ್ಲಿ ಕ್ರಾಂತಿಯನ್ನುಂಟು ಮಾಡಿದ ರೇಡಿಯೊ ಅಲೆಗಳ ಶಂಶೋಧನೆ ಹಾಗೂ ಉಪಯೋಗಗಳ ಕುರಿತ ಉಪಯುಕ್ತ ಮಾಹಿತಿ ದಿವಾಕರ ಸರ್ ರವರಿಂದ ತಮ್ಮ ವೈಜ್ಞಾನಿಕ ಸಂಚಿಕೆಯಲ್ಲಿ.
      ಈ ಸಲದ ವಿಜಯಾ ಮೇಡಂ ರವರ ನಿಷ್ಟಾಪಿ ಸಸ್ಯಗಳ ಸಂಚಿಕೆಯಲ್ಲಿ ಮಾರ್ನಿಂಗ್ ಗ್ಲೋರಿಯಾ ಗಿಡದ ಪರಿಚಯ ಸರಳವಾಗಿ ಅರ್ಥವಾಗುವ ರೀತಿಯಲ್ಲಿ ಸೊಗಸಾಗಿ ಮೂಡಿ ಬಂದಿದೆ.
      ಗೌತಮಿಯವರ ನಾಟಕದ 2 ನೇ ಸಂಚಿಕೆ ಪರಿಸರ ಕಾಳಜಿಯ ಕುರಿತು ಅದ್ಭುತವಾಗಿ ಮೂಡಿಬಂದಿದೆ. ಅಭಿನಂದನೆಗಳೊಂದಿಗೆ ಧನ್ಯವಾದಗಳು ಗೌತಮಿಯವರಿಗೆ.
      ರಮೇಶ್ ಸರ್ ರವರಿಂದ ಆಂಧ್ರ ಪ್ರದೇಶದ ಕರ್ನೂಲಿನ ಪ್ರಸಿದ್ಧ ಯಾತ್ರಾಸ್ಥಳ ಶ್ರೀ ಶೈಲದ ಮಾಹಿತಿ ಇಂದಿನ ಪಯಣ ಸಂಚಿಕೆಯಲ್ಲಿ ಚೆನ್ನಾಗಿ ಮೂಡಿಬಂದಿದೆ.
     ಹೆಣ್ಣು ಮಗುವೊಂದು ಸೈಕಲ್ ಕಲಿಯುವ ಕುರಿತಾದ ರುಕ್ಕುವಿನ ಸೈಕಲ್ ಎನ್ನುವ ಪುಸ್ತಕದ ಪರಿಚಯ ಸೊಗಸಾಗಿತ್ತು. 150ನೇ ಸಂಚಿಕೆಗೆ ಪುಸ್ತಕ ಪರಿಚಯ ತಲುಪಿದೆ. ಧನ್ಯವಾದಗಳು ವಾಣಿಯಕ್ಕನವರಿಗೆ. ಸಂಚಿಕೆ ನಿರಂತರ ಮುಂದುವರಿಯಲಿ ಎನ್ನುವ ಆಶಯದೊಂದಿಗೆ ಅಭಿನಂದನೆಗಳು ಮೇಡಂ.
     ಈ ವಾರ ಜಗಲಿಯಲ್ಲಿ ಮಕ್ಕಳ ಕತೆಗಳು ಹಾಗು ಚಿತ್ರ ಸಂಚಿಕೆ ಪ್ರಕಟಗೊಂಡಿವೆ. ಮಕ್ಕಳು ಬರೆದಿರುವ ಕಥೆಗಳು ಹಾಗೂ ಅದ್ವೇಶ್ ಮೊಹಂತಿ ರಚಿಸಿರುವ ಚಿತ್ರಗಳು ಚೆನ್ನಾಗಿ ಮೂಡಿ ಬಂದಿವೆ. ಅಭಿನಂದನೆಗಳು ಎಲ್ಲಾ ಮಕ್ಕಳಿಗೆ.
     ಪದದಂಗಳ ಸಂಚಿಕೆ ಚೆನ್ನಾಗಿ ಮೂಡಿಬರುತ್ತಿದೆ. ಧನ್ಯವಾದಗಳು ರಮೇಶ್ ಸರ್.
      ಓದಿದ ಪುಸ್ತಕದ ಕುರಿತಾದ ವಿಮರ್ಶಾತ್ಮಕ ಲೇಖನ ಸರಣಿ ಈ ಸಲದ ಹೊಸ ಸಂಚಿಕೆ. ಡಾ| ವಿರೂಪಾಕ್ಷ ದೇವರ ಮನೆ ಇವರು ಬರೆದಿರುವ ನೀನು ಒಂಟಿಯಲ್ಲ ಎನ್ನುವ ಪುಸ್ತಕವನ್ನು ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ಪೋಷಕರು ಅಗತ್ಯವಾಗಿ ಯಾಕಾಗಿ ಓದಬೇಕು ಅನ್ನೋದನ್ನ ಸುಂದರವಾಗಿ ವಿಮರ್ಶಿಸಿದ್ದಾರೆ ಶಿಕ್ಷಕಿಯಾದ ಪ್ರಜ್ವಲಾ ಶೆಣೈ ರವರು. ಧನ್ಯವಾದಗಳು ಮೇಡಂ.
     ಎಲ್ಲರಿಗೂ ವಂದನೆಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************


ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು, ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ, ವಿದ್ಯಾಶ್ರೀ ಮಂಗಳೂರು .... ಇವರಿಗೆ ಧನ್ಯವಾದಗಳು. 
       ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************



Ads on article

Advertise in articles 1

advertising articles 2

Advertise under the article