-->
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 68

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 68

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 68
ಲೇಖಕರು : ರಮ್ಯಾ ಆರ್ ಭಟ್
ಸಹ ಶಿಕ್ಷಕಿ. 
ಸರಸ್ವತಿ ವಿದ್ಯಾಲಯ ಸಿದ್ದಾಪುರ
ಕುಂದಾಪುರ, ಉಡುಪಿ ಜಿಲ್ಲೆ
Mob: +91 96634 64621


ಮಕ್ಕಳ ಜಗಲಿಯ ಓದುಗರಿಗೆಲ್ಲ ನನ್ನ ನಮಸ್ಕಾರ... ಶೈಕ್ಷಣಿಕ ವರ್ಷದ ಕೊನೆಯ ಹಂತದಲ್ಲಿ ನಾವೀಗ.. ಕೆಲವು ಮಕ್ಕಳಿಗೆ, ನಾನು ತೇರ್ಗಡೆಯಾಗಿ ಮುಂದಿನ ತರಗತಿಗೆ ಹೋಗುವೆ, ಎನ್ನುವ ಸಂಭ್ರಮವಾದರೆ, ಇನ್ನು ಕೆಲವರಿಗೆ ನಾನು ಇನ್ನು ಸ್ವಲ್ಪ ದೊಡ್ಡವರಾದೇವು ಎನ್ನುವ ಖುಷಿ. ಹತ್ತನೇ ತರಗತಿ ಮಕ್ಕಳಲ್ಲಿ ಕೆಲವರಿಗೆ ಪರೀಕ್ಷಾ ತಯಾರಿಯ ಸಡಗರವಾದರೆ, ಇನ್ನು ಕೆಲವರಿಗೆ ಅದೇ ಮಹಾಮಾರಿ. ಆ ಮಕ್ಕಳಿಗೆ ಪರೀಕ್ಷೆಯ ಹೆದರಿಕೆ, ಹೆಚ್ಚು ಅಂಕ ಗಳಿಸೇ ತೀರಬೇಕು ಎನ್ನುವ ಒತ್ತಡವನ್ನು ಪೋಷಕರು ಕೊಡದೆ, ಉತ್ತಮ ರೀತಿಯಲ್ಲಿ ಮಕ್ಕಳು ಪರೀಕ್ಷೆ ಬರೆದು ತೇರ್ಗಡೆ ಹೊಂದಲಿ ಎಂದು ಬಯಸೋಣ.
         

ತರಗತಿಯಲ್ಲಿ ಪಾಠ, ಕಲಿಕೆ, ಆಟ ಎಲ್ಲದರ ನಡುವೆ ಬೇರೆ ಚಟುವಟಿಕೆಗಳಿಗೆ ಹಂಬಲಿಸುವ ಮಕ್ಕಳಿಗೆ ಮನಸ್ಸಿಗೆ ಮುದ ನೀಡುವುದೆಂದರೆ, ಅವರದ್ದೇ ಕಲ್ಪನೆಯ ಕಥೆಗಳು. ಪುಸ್ತಕದ ಕಥೆಗಳನ್ನು ಬಿಟ್ಟು, ನಿಮಗೆ ಗೊತ್ತಿರುವ ಕಥೆಗಳು ಯಾವುದಾದ್ರೂ ಇದ್ದರೆ ಹೇಳಿ ಮಕ್ಕಳೇ, ಎಂದಾಕ್ಷಣ ಒಂದು ಮಗು ಓಡಿ ಬಂದು, ನಾನು ಹೇಳ್ತೇನೆ ಮಾತಾಜಿ ಎಂದಿತು. 

ಪಾರ್ವತಿ ದೇವಿ ತನ್ನ ಮಗ ಗಣಪತಿಯನ್ನು ಸೃಷ್ಟಿಸಿದ್ದು, ಅವನನ್ನು ಕಾವಲು ಕಾದಿರಿಸಿದ್ದು, ಶಿವನ, ಗಣಪತಿಯ ಸಂವಾದ, ನಂತರ ಗಣಪನಿಗೆ ಆನೆಯ ಮುಖ ಬಂದ ರೀತಿ ಎಲ್ಲವನ್ನು ಅಚ್ಚುಕಟ್ಟಾಗಿ ವಿವರಿಸಿ ಮನರಂಜಿಸಿದ ಮಗು, ನಾನು ದೊಡ್ಡ ಕಥೆ ಹೇಳಿದೆ ಎಂದು ಬೀಗುತ್ತಾ ಹೋಗಿ ಕುಳಿತು, ಸ್ವಲ್ಪ ಸಮಯದ ನಂತರ ನನ್ನ ಬಳಿ ಬಂದು, ನನಗೆ ಒಂದು ಪ್ರಶ್ನೆ ಇದೆ ಮಾತಾಜಿ, ಉತ್ತರ ಕೊಡಿ, ಎಂದಿತು. ಸರಿ ಏನು ನಿನ್ನ ಪ್ರಶ್ನೆ ಎಂದು ಕೇಳಿದೆ. ಆಗ ಅವಳು ಕೇಳಿದಳು " ದೇವರಿಗೆ ಎಲ್ಲ ತಿಳಿದಿರುತ್ತದೆ ಅಲ್ಲವೆ? ಹೌದು. ಅವನು ತುಂಬಾ ಒಳ್ಳೆಯವನು ಅಲ್ಲವೇ? ಹೌದು. ನಾವು ಏನೂ ಹೇಳದೆಯೇ ಅವನಿಗೆ ಎಲ್ಲ ತಿಳಿಯುತ್ತದೆ ಅಲ್ಲವೇ? ಹೌದು.. ಮತ್ತೆ ಹಾಗಿದ್ರೆ ಶಿವ ತನ್ನ ಮಗನ ತಲೆಯನ್ನು ಕತ್ತರಿಸಿದ್ದು ಏಕೆ? ಎಂದಳು. 

ಅಲ್ಲಿಯ ವರೆಗೂ ಆ ಮಗುವಿನ ಎಲ್ಲ ಪ್ರಶ್ನೆಗೂ ಹೌದು ಎಂದು ತಲೆಯಾಡಿಸಿದ ನನಗೆ, ಈ ಪ್ರಶ್ನೆಗೆ ಉತ್ತರ ಇರಲಿಲ್ಲ. ಸ್ವಲ್ಪ ಸಮಯ ಮಗುವಿನ ಮುಖವನ್ನೇ ನೋಡಿದೆ. ಏನು ಹೇಳಬೇಕೋ ತೋಚಲಿಲ್ಲ. ನಂತರ ಮನಸಲ್ಲೇ ಗುಣಿಸಿದೆ. ಕಾರಣ ಇಂತಹ ಕಥೆಗಳನ್ನು ಕೇಳಿದ ಮಕ್ಕಳು ಈ ರೀತಿ ಪ್ರಶ್ನೆ ಮಾಡುವಾಗ, ನಮ್ಮ ಸಮರ್ಥನೆಯ ಉತ್ತರ ಅವರಿಗೆ ಸಮಾಧಾನ ಪಡಿಸದು. ಸ್ವಲ್ಪ ಎಚ್ಚರಿಕೆಯಿಂದಲೇ ಉತ್ತರಿಸಬೇಕಲ್ಲವೆ. ನಾನು ಹೇಳಿದೆ ಹೌದು ಪುಟ್ಟ, ಶಿವನಿಗೆ ಎಲ್ಲವೂ ತಿಳಿದಿತ್ತು, ಗಣಪತಿ ಯಾರು ಎಂದು ಗೊತ್ತು, ಅವನು ಅಲ್ಲಿಗೆ ಹೇಗೆ ಬಂದ, ಏನು ಮಾಡುತ್ತಿದ್ದಾನೆ ಎಲ್ಲವೂ ತಿಳಿದಿತ್ತು. ಅದಕ್ಕೆ ಅವನು ಆ ಶಿಕ್ಷೆ ಕೊಟ್ಟದ್ದು ಎಂದೆ. ಆ ರೀತಿಯ ಶಿಕ್ಷೆ ಏಕೆ? ಎಂಬುದು ಮಗುವಿನ ಸವಾಲು. 

ನಾನೊಂದು ಉಪಾಯ ಹುಡುಕಿದೆ. "ಸರಿ ಪುಟ್ಟ ಈಗ ಮನೆಯಲ್ಲಿ ಅಪ್ಪ ಅಮ್ಮ ಇಬ್ಬರೂ ನಿನ್ನನ್ನ ಮುದ್ದಿಸ್ತಾರೆ, ನೀ ಕೇಳಿದ್ದೆಲ್ಲವನ್ನು ಕೊಡಿಸ್ತಾರೆ, ನಿನಗೆ ಗೊತ್ತಿಲ್ಲದೇ ತಪ್ಪು ಮಾಡಿದಾಗ sorry ಅಂದ್ರೆ ಸುಮ್ನೆ ಆಗ್ತಾರೆ, ಆದ್ರೆ ಬೇಕಂತಲೇ ನೀ ಏನಾದ್ರು ತಪ್ಪು ಮಾಡಿದ್ರೆ, ಹಾಗೆ ದೊಡ್ಡೋರಿಗೆ respect ಕೊಡದೆ ಇದ್ರೆ ಏನ್ ಮಾಡ್ತಾರೆ? ಎಂದೆ. ಆಗ ಅವಳು ಹೇಳಿದಳು ಅವರು ನನಗೆ punish ಮಾಡ್ತಾರೆ ಎಂದಳು. ನೀನು ಅವರ ಮುದ್ದಿನ ಮಗು ಅಲ್ವಾ? ಯಾಕೆ ಶಿಕ್ಷೆ ಕೊಡ್ತಾರೆ? ಕೇಳಿದೆ. ಅದಕ್ಕೆ ಮಗು ಹೇಳಿತು "ಬೇಕಂತಲೇ ತಪ್ಪು ಮಾಡಿದ್ರೆ ಶಿಕ್ಷೆ ಕೊಡಲೇ ಬೇಕಲ್ವಾ ಮಾತಾಜಿ ಅದ್ಕೆ" ಎಂದಳು.. ಆಗ "ಹಾ ನೋಡು ಪುಟ್ಟ ಗಣಪತಿಯ ವಿಚಾರದಲ್ಲಿ ಆಗಿದ್ದು ಅದೇ, ಅವನು ಎಷ್ಟೇ ಒಳ್ಳೆಯ ಮಾತಿನಲ್ಲಿ ಹೇಳಿದರೂ ಗಣಪತಿ ಒಪ್ಪುವುದಿಲ್ಲ ಅದಕ್ಕೆ ಅವನಿಗೆ ಬುದ್ಧಿ ಕಲಿಸಲು ಶಿವನು ಅವನಿಗೆ ಒಂದು ಶಿಕ್ಷೆಯನ್ನು ನೀಡಿ ನಂತರ ಎಲ್ಲವನ್ನು ಸರಿಪಡಿಸುತ್ತಾನೆ" ಎಂದು ಹೇಳಿದ ಮೇಲೆ.. ಓ..... ಹಾಗ? ಹಾಗಾದ್ರೆ ತಪ್ಪು ದೇವರೇ ಮಾಡಿದ್ರು ಸಹ ಅವರಿಗೆ ಶಿಕ್ಷೆ ಆಗ್ತದ ಮಾತಾಜಿ? ಎಂದು ಕೇಳಿ ನನ್ನ ಸಮರ್ಥನೆಯನ್ನು ಸಮಾಧಾನದಿಂದ ಒಪ್ಪಿತು ಮಗು..

 ಮಕ್ಕಳ ಪ್ರಶ್ನೆಗಳಿಗೆ ಉತ್ತರ ನೀಡುವುದು ಕೆಲವೊಮ್ಮೆ ತುಂಬಾ ಅಸಾಧ್ಯ.. ಕೆಲವೊಮ್ಮೆ ನಾವು ಕೊಟ್ಟ ಉತ್ತರ, ಅಥವಾ ಸಮರ್ಥನೆ, ನಾವು ಹೇಳಿದ ಅರ್ಥದಲ್ಲೇ ಅವರ ಮನಸ್ಸಿಗೆ ನಾಟಬೇಕೆಂದಿಲ್ಲ. ನಮ್ಮ ಉತ್ತರವನ್ನು ಅವರು ಅವರ ಕಲ್ಪನೆಯ ರೀತಿಯಲ್ಲೇ ತೆಗೆದುಕೊಳ್ಳುತ್ತಾರೆ. ಹಾಗಾಗಿ ಮಕ್ಕಳ ಪ್ರಶ್ನೆಗೆ ಉತ್ತರ ನೀಡುವಾಗಲೇ ಆಗಲಿ ಅವರ ಎದಿರು ಬೇರೆ ವಿಚಾರಗಳನ್ನು ಮಾತನಾಡುವಾಗಲು ಸಹ ನಮ್ಮ ಎಚ್ಚರಿಕೆ ನಮಗಿರುವುದು ಒಳಿತು.. ಧನ್ಯವಾದಗಳು.
...................................... ರಮ್ಯಾ ಆರ್ ಭಟ್
ಸಹ ಶಿಕ್ಷಕಿ. 
ಸರಸ್ವತಿ ವಿದ್ಯಾಲಯ ಸಿದ್ದಾಪುರ
ಕುಂದಾಪುರ, ಉಡುಪಿ ಜಿಲ್ಲೆ
Mob: +91 96634 64621
*******************************************


Ads on article

Advertise in articles 1

advertising articles 2

Advertise under the article