ಪಯಣ : ಸಂಚಿಕೆ - 32 (ಬನ್ನಿ ಪ್ರವಾಸ ಹೋಗೋಣ)
Friday, February 28, 2025
Edit
ಲೇಖನ : ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದು ಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ
ಇಂದಿನ ಪ್ರವಾಸದಲ್ಲಿ ಶಿವನ ಆಲಯ ಮುರ್ಡೇಶ್ವರಕ್ಕೆ ಪಯಣ ಮಾಡೋಣ ಬನ್ನಿ.....
ಸಮುದ್ರದ ಅಂಚಿಗೇ ಇರುವ ಕಂದುಕಗಿರಿಯಲ್ಲಿ ತಪೋಭಂಗಿಯ ಶಿವನ ಮೂರ್ತಿಯು ಇಡೀ ವಿಶ್ವದಲ್ಲಿಯೇ ದೊಡ್ಡ ಮೂರ್ತಿ ಎಂಬ ಹೆಗ್ಗಳಿಕೆಯನ್ನು ಹಲವು ದಶಕದ ಹಿಂದೆಯೇ ಪಡೆದುಕೊಂಡಿದೆ. 123 ಅಡಿ ಎತ್ತರದ ಚತುರ್ಭುಜ ಶಿವನಿವ, ಮಂದಹಾಸದ ಈ ಮೂರ್ತಿಯ ಸೌಂದರ್ಯ ಅನುಪಮ. ಈ ಮೂರ್ತಿಯ ಪೀಠದ ಕೆಳಗಡೆ ಪಂಚಕ್ಷೇತ್ರದ ಆತ್ಮಲಿಂಗದ ದರ್ಶನವನ್ನು ತೋರಿಸುವ ವಿಗ್ರಹಗಳಿವೆ. ಶಿವನ ಎದುರುಗಡೆ 24 ಅಡಿಯ ನಂದಿ ವಿಗ್ರಹ ಸ್ಥಾಪಿಸಲಾಗಿದ್ದು, ಪೀಠದ ಕೆಳಗಡೆ ಶಿವಲಿಂಗ ಸ್ಥಾಪಿಸುವ ಮೂಲಕ ಮುರ್ಡೇಶ್ವರಕ್ಕೆ ಇನ್ನಷ್ಟು ಕಳೆಮೂಡಿಸಲಾಗಿದೆ. 
ಇಲ್ಲಿರುವ ದೇವಸ್ಥಾನ ಹಾಗೂ ಶಿವನ ಮೂರ್ತಿಗೆ ಕಳಸವಿಟ್ಟಂತೆ ಈ ರಾಜಗೋಪುರ ನಿರ್ಮಾಣವಾಗಿದೆ. ವಿಶ್ವದಲ್ಲಿಯೇ ಅತೀ ಎತ್ತರದ ಗೋಪುರ ನಿರ್ಮಿಸುವ ಮೂಲಕ ಉದ್ಯಮಿ ಆರ್.ಎನ್.ಶೆಟ್ಟಿ, ಮುರ್ಡೇಶ್ವರಕ್ಕೆ ಪ್ರವಾಸಿಗರನ್ನು ಕರೆಯಲು ತಮ್ಮ ಶ್ರದ್ಧೆ, ಶ್ರಮ ಹಾಗೂ ಸಂಪತ್ತು ವ್ಯಯಿಸಿರುವುದು ಎದ್ದು ಕಾಣುತ್ತಿದೆ. ಈ ರಾಜಗೋಪುರ ಕಂದುಕಗಿರಿಯ ಕೆಳಗಡೆಯೇ ಇದೆ. 1963ರಲ್ಲಿ ಶ್ರೀ ಕ್ಷೇತ್ರದ ದರ್ಶನಕ್ಕೆ ಬಂದಿದ್ದ ಶ್ರೀಧರ ಸ್ವಾಮಿಗಳು ಇಲ್ಲಿಯೇ ತಪಸ್ಸು ಮಾಡಿದ್ದರು. ಆ ಸಂದರ್ಭವೇ ದತ್ತ ಮಂದಿರ ನಿರ್ಮಾಣಕ್ಕೆ ನಾಂದಿಯಾಯಿತು. ಆನಂತರ ಈ ಕ್ಷೇತ್ರ ಅನಪಮ ದೈವಶಕ್ತಿಯ ತಾಣವಾಗಿ ರೂಪುಗೊಂಡು ರಾಜಗೋಪುರದಿಂದ ಕಂಗೊಳಿಸುತ್ತಿದೆ. 
ದೇಶದ ಇತಿಹಾಸದಲ್ಲಿಯೇ ದೊಡ್ಡದಾದ ಈ ರಾಜಗೋಪುರ 249 ಅಡಿ ಎತ್ತರವಿದ್ದು, ಲಿಫ್ಟ್ ವ್ಯವಸ್ಥೆ ಹೊಂದಿದೆ. ಹತ್ತು ವರ್ಷಗಳ ಅವಧಿಯಲ್ಲಿ ನಿರ್ಮಾಣವಾಗಿರುವ ಈ ಗೋಪುರ ತಂಜಾವೂರು, ಶ್ರೀರಂಗಂ, ಪುತ್ತೂರು ಹಾಗೂ ಶ್ರೀವಳ್ಳಿ ಸೇರಿದಂತೆ ಚರಿತ್ರೆಗೆ ಸೇರಿರುವ ನೂರಾರು ರಾಜಗೋಪುರಗಳಿಗಿಂತ ದೊಡ್ಡದು. ಈ ಗೋಪುರದಲ್ಲಿ ಮುರ್ಡೇಶ್ವರದ ಇತಿಹಾಸ ಹಾಗೂ ಪುರಾಣದ ಸ್ತಬ್ದ ಚಿತ್ರದ ದೃಶ್ಯಗಳನ್ನು ರೂಪಿಸಲಾಗಿದೆ. ಗೋಪುರ ವೈಭವ ಮಾತ್ರವಲ್ಲದೇ ಗೋಕರ್ಣಕ್ಕೆ ಸವಾಲೊಡ್ಡುವಂತೆ ಶಿವಲಿಂಗ ಪ್ರತಿಷ್ಠಾಪನೆಗೊಂಡಿದ್ದು ಜನತೆಯ ಹರ್ಷವನ್ನು ಇಮ್ಮಡಿಗೊಳಿಸಿದೆ.
ಧಾರ್ಮಿಕ ಕ್ಷೇತ್ರವಾಗಿ ರೂಪುಗೊಂಡಿರುವ ಮುರ್ಡೇಶ್ವರದಲ್ಲಿ ದೇವಸ್ಥಾನ ಮಾತ್ರವಲ್ಲ, ದೇವರ ದರ್ಶನ ಪಡೆದ ನಂತರ ತಿರುಗಾಡಲು ಸಾಕಷ್ಟು ವ್ಯವಸ್ಥೆ ಮಾಡಲಾಗಿದೆ. ದೋಣಿವಿಹಾರ, ಪ್ಯಾರಸೆಲ್ಲಿಂಗ್ ವ್ಯವಸ್ಥೆ ಇದ್ದೇ ಇದೆ. ಉಳಿದುಕೊಳ್ಳಲು ಸಾಕಷ್ಟು ಲಾಡ್ಜ್‌ಗಳು ಹಾಗೂ ಸಮುದ್ರದಲ್ಲಿಯೇ ಹೋಟೆಲ್ ವ್ಯವಸ್ಥೆ ಇದೆ. ಮುರ್ಡೇಶ್ವರದಲ್ಲಿನ ಮೋಹಕ ಸಮುದ್ರ ತೀರ, ಸೂರ್ಯಾಸ್ತದ ನೋಟ ಪ್ರವಾಸಿಗರನ್ನು ಪುಳಕಗೊಳಿಸುತ್ತದೆ. 
ಮುರ್ಡೇಶ್ವರ ಕರ್ನಾಟಕದಲ್ಲಿಯೇ ಸುಪ್ರಸಿದ್ಧವಾಗಿರುವ ಪ್ರವಾಸಿ ತಾಣ. ಇದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನಲ್ಲಿದೆ. ಜಿಲ್ಲೆಯಲ್ಲಿರುವ ಪಂಚ ಶಿವಕ್ಷೇತ್ರದಲ್ಲಿ ಮುರ್ಡೇಶ್ವರವು ಒಂದು. ಈ ಕ್ಷೇತ್ರದಲ್ಲಿ ರಾಜಗೋಪುರ, ಸುಂದರವಾದ ಬೀಚ್ ಇದೆ. ಈ ಕ್ಷೇತ್ರ ವೈಭವ ಹೊರಸೂಸಿ ಪ್ರವಾಸಿಗರನ್ನು ಸೆಳೆಯಲು ಈ ಮುಗಿಲೆತ್ತರದ ಶಿವನ ವಿಗ್ರಹ ಸಹಕಾರಿ ಎಂದರೂ ಅತಿಶಯೋಕ್ತಿ ಆಗಲಾರದು. ಶಿವನ ಮೂರ್ತಿ ಇರುವ ಪೀಠದ ಅಡಿಯಲ್ಲಿ ಭೂಕೈಲಾಸ ಪುರಾಣವನ್ನು ನೆನಪಿಸುವ ಆಕರ್ಷಕ ದೃಶ್ಯಗಳನ್ನು ಸಿಮೆಂಟಿನ ವಿಗ್ರಹಗಳ ರೂಪದಲ್ಲಿ ಚಿತ್ರಿಸಲಾಗಿದೆ. ಈ ಮೂಲಕ ಮುರ್ಡೇಶ್ವರ ಕಲಾತ್ಮಕವಾದ ಸಂಸ್ಕೃತಿ, ಪರಂಪರೆಗಳನ್ನು ಪ್ರತಿಬಿಂಬಿಸುವ ತಾಣವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಮುರ್ಡೇಶ್ವರದ ಶಿವನ ವಿಗ್ರಹ ಪೀಠದ ಗುಹೆಯೊಳಗೆ ಶಿವ ಪುರಾಣದ ಅದ್ಭುತವಾದ ಚಿತ್ರ ಕಾವ್ಯದ ಪ್ರಪಂಚವೇ ಇದೆ. ಕುಶಲ ಶಿಲ್ಪಿಯ ಕೈಚಳಕದಲ್ಲಿ ಮೂಡಿ ಬಂದ ಈ ಸಿಮೆಂಟ್ ವಿಗ್ರಹಗಳು ಸಂಪೂರ್ಣ ಶಿವ ಪುರಾಣದ ಕಥೆಯನ್ನು ನೆನಪಿಸುತ್ತವೆ. ರಾವಣನ ಮಾತೃಭಕ್ತಿ, ಶಿವಭಕ್ತಿ, ಜತೆಗೆ ಅವನ ಹುಂಬತನ. ಅವನಿಗೆ ಆತ್ಮಲಿಂಗ ಸಿಗದಂತೆ ದೇವತೆಗಳು ನಡೆಸುವ ಕುಟಿಲತೆ, ಕುತಂತ್ರ ಎಲ್ಲ ಸನ್ನಿವೇಶಗಳು ಇಲ್ಲಿ ಸುಂದರ ಶಿಲ್ಪಗಳ ಮೂಲಕ ಅರ್ಥಗರ್ಭಿತವಾಗಿ ದೃಶ್ಯ ಕಾವ್ಯವಾಗಿ ನೆಲೆ ನಿಂತಿದೆ. ಇಲ್ಲಿ ಚಿತ್ರಿಸಿರುವ ಮೋಹಕ ಚಿತ್ರಗಳು ಕಥೆಗಿಂತಲೂ ಅದ್ಭುತವಾಗಿದೆ! ಪೌರಾಣಿಕವಾದ ಈ ಕಥೆಗೆ ಶಿಲ್ಪ ಮಾಧ್ಯಮದಲ್ಲಿ ಸುಂದರವಾದ ಮೂರ್ತಿರೂಪವನ್ನು ಖ್ಯಾತ ಶಿಲ್ಪಿಗಳಾದ ಶ್ರೀಧರಮೂರ್ತಿ ನೀಡಿದ್ದಾರೆ. ಐವರು ಕಲಾವಿದರು ನಾಲ್ಕು ವರುಷ ನಿರಂತರ ಪ್ರಯತ್ನಿಸಿ ಭೂಕೈಲಾಸದ ಅದ್ಭುತ ದೃಶ್ಯವನ್ನು ಚಿತ್ರಿಸಿದ್ದಾರೆ. ಸುಂದರ ಕಲಾ ದೃಶ್ಯ ವೈಭವ ಈ ಪುಣ್ಯ ಸ್ಥಳದ ಘನತೆ, ಗೌರವಗಳನ್ನು ಹೆಚ್ಚಿಸಲು ನೆರವಾಗಿದೆ.
ಒಂದೆಡೆ ಅರಬ್ಬಿ ಸಮುದ್ರ ಇನ್ನೊಂದೆಡೆ ಹಸಿರು ತುಂಬಿದ ಪಶ್ಚಿಮ ಘಟ್ಟಗಳ ಸಾಲು - ಇವರೆಡರ ಮಧ್ಯೆ ನೆಲೆಗೊಂಡ ಯಾತ್ರಾ ಕ್ಷೇತ್ರವೇ ಮುರುಡೇಶ್ವರ ಉತ್ತರ ಕನ್ನಡ ಜಿಲ್ಲೆಯಲ್ಲಿದೆ. ಕಡಲದಂಡೆಯ ಕಂದುಕಗಿರಿ ಎಂಬ ಪುಟ್ಟ ಬೆಟ್ಟದ ಮೇಲಿರುವ ಶಿವಾಲಯ ಮೂರು ವಾಸ್ತು ಶೈಲಿಗಳನ್ನು ಒಳಗೊಂಡಿದೆ. ಇಲ್ಲಿರುವ ಶಿಲ್ಪಗಳು ಕದಂಬ ಹಾಗೂ ಚಾಲುಕ್ಯ ಶೈಲಿಯಲ್ಲಿದ್ದರೆ ಆಲಯ ದ್ರಾವಿಡ ಶೈಲಿಯಲ್ಲಿ ನಿರ್ಮಾಣವಾಗಿದೆ. 
ಮುರ್ಡೇಶ್ವರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 66 ರ ಸಮೀಪ ಇದೆ. ಇಲ್ಲಿಗೆ ಅನೇಕ ಬಸ್ಸುಗಳ ಹಾಗೂ ರೈಲಿನ ವ್ಯವಸ್ಥೆ ಬಹಳ ಚೆನ್ನಾಗಿದೆ. ಉಡುಪಿಯಿಂದ 104 ಕಿ.ಮೀ, ಬೆಂಗಳೂರಿನಿಂದ 520 ಕಿ.ಮೀ. ಮಂಗಳೂರಿನಿಂದ 160 ಕಿ.ಮೀ. ಹಾಗೂ ಕೊಲ್ಲೂರಿನಿಂದ 53 ಕಿ.ಮೀ. ಗೋಕರ್ಣಕ್ಕೆ ಇಲ್ಲಿಂದ 78 ಕಿ. ಮಿ. ದೂರದಲ್ಲಿದೆ.
"ಶಿವನ ಬೃಹತ್ ಧ್ಯಾನ ವಿಗ್ರಹ, ಗುಡ್ಡದ ಬದಿಯಲ್ಲಿಯೇ ಕಡಲ ದಂಡೆ ಇರುವ ಸುಂದರ ತಾಣ, ಕಡಲಿನ ವಿಹಂಗಮ ನೋಟದಡಿಯಲ್ಲಿ ಸಂಚಾರದೊಂದಿಗೆ ಸಂಚರಿಸುತ್ತಾ, ಧಾರ್ಮಿಕತೆಯೊಂದಿಗೆ ಪ್ರಾಕೃತಿಕ ಸೌಂದರ್ಯವನ್ನು ಸಮುದ್ರದ ನೀರಿನ ಆಟದೊಂದಿಗೆ ಮನವನ್ನು ತಣಿಸುವ ಅದ್ಭುತ ಸ್ಥಳ ಇದಾಗಿದೆ.
"ಬನ್ನಿ ಒಮ್ಮೆ ಪ್ರವಾಸಕ್ಕೆ ..... "
ಮತ್ತೆ ಮುಂದಿನ 'ಪಯಣ' ಸಂಚಿಕೆಯಲ್ಲಿ ಸಿಗೋಣವೇ, ನಮಸ್ಕಾರ.
(ಚಿತ್ರಗಳು : ಅಂತರ್ಜಾಲ ಕೃಪೆ)
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
********************************************