-->
ಹೊರ ಸಂಚಾರ - ಬರಹ : ಜಾಹ್ನವಿ ಹೆಚ್, 3ನೇ ತರಗತಿ

ಹೊರ ಸಂಚಾರ - ಬರಹ : ಜಾಹ್ನವಿ ಹೆಚ್, 3ನೇ ತರಗತಿ

ಪ್ರವಾಸ ಲೇಖನ : ಹೊರ ಸಂಚಾರ
ಬರಹ : ಜಾಹ್ನವಿ ಹೆಚ್
3ನೇ ತರಗತಿ
ಸ.ಹಿ.ಪ್ರಾ.ಶಾಲೆ, ಪೆರ್ಮುಡ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
                

ಪಶ್ಚಿಮ ಘಟ್ಟಗಳ ಸಾಲುಗಳ ನಡುವೆ, ಮಲೆನಾಡಿನ ತಪ್ಪಲಿನಲ್ಲಿರುವ ಮತ್ತು ಫಲ್ಗುಣಿ ನದಿಯು ಸುತ್ತುವರೆದಿರುವ ಊರು ಪೆರ್ಮುಡ. ಈ ಊರಿನಲ್ಲೊಂದು ಚಿಕ್ಕದಾದ ಚೊಕ್ಕದಾದ ನಮ್ಮ ಹೆಮ್ಮೆಯ ಶಾಲೆ, ಅದುವೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪೆರ್ಮುಡ. ಈ ನಮ್ಮ ಶಾಲೆಯ 3ನೇ ತರಗತಿಯ ವಿದ್ಯಾರ್ಥಿನಿಯಾದ ನಾನು ಅಂದರೆ ಜಾಹ್ನವಿಯ ಮೊದಲ ಲೇಖನವಿದು…
                   ನಮ್ಮ ಶಾಲೆಯ ವಿದ್ಯಾರ್ಥಿಗಳಾದ ನಾವು ಹೊರಸಂಚಾರಕ್ಕೆಂದು ದಿನಾಂಕ : 30-12-2024ರ ಸೋಮವಾರದಂದು ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಕಲ್ಲಾಣಿ ಕೊಡಮಣಿತ್ತಾಯ ದೇವಸ್ಥಾನಕ್ಕೆ ಮುಖ್ಯ ಶಿಕ್ಷಕರು, ಸಹ ಶಿಕ್ಷಕರೊಂದಿಗೆ ಭೇಟಿ ಕೊಟ್ಟೆವು. ನಮ್ಮ ಪ್ರಯಾಣ ಪೆರ್ಮುಡ ಶಾಲೆಯಿಂದ ರಿಕ್ಷಾದ ಮೂಲಕ ಆರಂಭವಾಯಿತು. ಹೊರಡುವ ಸಮಯ ನಮಗೆಲ್ಲಾ ಏನೋ ಖುಷಿಯೋ ಖುಷಿ. ನಮ್ಮ ಈ ಹೊರ ಸಂಚಾರಕ್ಕೆ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರು, ಉಪಾಧ್ಯಕ್ಷರು, ಪೋಷಕರು ಹಾಗೂ ಊರಿನವರು ಬಂದಿದ್ದರು.
              ಪ್ರಕೃತಿ ಸೌಂದರ್ಯದಿಂದ ಕೂಡಿದ ಕಲ್ಲಾಣಿ ಪರಿಸರ, ಹಸಿರು ಹಸಿರಾದ ಮರಗಿಡಗಳು ಹಕ್ಕಿಗಳ ಕೂಗು ನಮ್ಮನ್ನು ಸಂತೋಷ ಪಡಿಸಿತು. ಕ್ಷೇತ್ರದಲ್ಲಿ ಶಿಕ್ಷಕರೊಂದಿಗೆ ನಾವೂ ಪ್ರಾರ್ಥನೆ ಸಲ್ಲಿಸಿ, ಸುತ್ತಲಿನ ಪ್ರದೇಶಗಳನ್ನು ನೋಡಿದೆವು. ಸುತ್ತಲೂ ಬಂಡಕಲ್ಲುಗಳ ರಾಶಿ, ವೇಣೂರು ಗೊಮ್ಮಟೇಶ್ವರ ವಿಗ್ರಹವನ್ನು ಕೆತ್ತಿದ ಜಾಗ, ಕೋಣದ ಹೆಜ್ಜೆಗಳು, ಕೆಲವೊಂದು ಯಾರಿಗೂ ಗೊತ್ತಿಲ್ಲದ ವಿಸ್ಮಯ ಕೆತ್ತನೆಗಳು ನಮಗೆ ಗೋಚರಿಸಿತು. ಇಲ್ಲಿನ ಸ್ಥಳೀಯವರಾದ ಅಚ್ಚುರವರು, ನಾವು ಇವರನ್ನು ಪ್ರೀತಿಯಿಂದ 'ಅಜ್ಜಿ' ಎನ್ನುತ್ತಿದ್ದೆವು. ಇವರು ನಮಗೆ ಅಲ್ಲಿದ್ದ ಕೆಲವು ಗುಂಡಿಗಳ ಪರಿಚಯ ಮಾಡಿದರು, ನೆಗರು ಗುಂಡಿ, ಬಾಲಗುಂಡಿ, ಪಂಜುರ್ಲಿಗುಂಡಿ, ರಕ್ತೇಶ್ವರಿ ಗುಂಡಿಗಳಯ ಇತ್ಯಾದಿ. ಇವುಗಳನ್ನು ನೋಡಲು ನಮಗೆ ಬಿಡಲಿಲ್ಲ, ಏಕೆಂದರೆ ಆ ಗುಂಡಿಗಳು ಅಪಾಯದ ಗುಂಡಿಗಳು ಎಂದು ನಮಗೆ ತಿಳಿಸಿದರು. ಮಕ್ಕಳು, ಶಿಕ್ಷಕರು, ಪೋಷಕರು ಸೇರಿ ಅಲ್ಲಲ್ಲಿ ಪೋಟೋ ತೆಗೆಯಲು ಮರೆಯಲಿಲ್ಲ. ಜೊತೆಗೆ ಅಲ್ಲಿದ್ದ ತುಂಬಾ ಹುಳಿ-ಸಿಹಿ ರುಚಿಯಾದ ಚೀರು ಮುಳ್ಳಿನ ಕಾಯಿ ತಿಂದದ್ದು ಬಹಳ ಖುಷಿಯಾಯ್ತು. 
       ನಮ್ಮ ಈ ಪಯಣದಲ್ಲಿ ಮಕ್ಕಳೇ ಎಚ್ಚರ, ಜಾಗೃತಿಯಾಗಿ ನಡೆಯಿರಿ ಎಂದು ಪದೇ ಪದೇ ನಮ್ಮ ಶಿಕ್ಷಕರು ನಮ್ಮನ್ನು ಎಚ್ಚರಿಸುತ್ತಿದ್ದರು. ಯಾವುದೇ ಮೋಟಾರು ಚಲಾವಣೆ ಇಲ್ಲದೇ ಶ್ರೀ ಕ್ಷೇತ್ರಕ್ಕೆ ಕೆಳಗಿನಿಂದ ಅಂತರ್ಜಲದ ನೀರು ಮೇಲೆ ಬರುವುದನ್ನು ನೋಡಿ ನಮಗೆಲ್ಲಾ ವಿಸ್ಮಯ ಎನಿಸಿತು. ನಾವು ಕೂಡ ಆ ನೀರನ್ನು ಉಪಯೋಗಿಸಿದೆವು. ಈ ನೀರಿನ ಜಾಗ ನಾಗ ಸಾನಿಧ್ಯ ತೀರ್ಥಸ್ಥಳ ಎಂದು ಕರೆಯತ್ತಾರೆ. ಈ ವಿಸ್ಮಯವನ್ನು ನೋಡಿ ಬರುವಾಗ ಮುಳ್ಳು ಪೊದರೆಗಳು ನಮ್ಮ ಬಟ್ಟೆಯನ್ನು ಎಳೆಯುತ್ತಿತ್ತು, ಆದರೂ ಅದರಿಂದ ನಮ್ಮ ಬಟ್ಟೆಯನ್ನು ಜೋಪಾನವಾಗಿ ಬಿಡಿಸಿಕೊಂಡು ಮುಂದೆ ಸಾಗಿದೆವು. ಹುಲಿ ನಿಲ್ಲುವ ಸ್ಥಳ, ಕಾರ್ಕಕಳದ ಅರಸರು ಹಿಂದಿನ ಕಾಲದಲ್ಲಿ ವಿಶ್ರಾಂತಿ ಮಾಡುತ್ತಿದ್ದ ಸ್ಥಳಗಳನ್ನು ಸ್ಥಳೀಯ ಹಿರಿಯರ ಸಹಾಯದಿಂದ ತಿಳಿದುಕೊಂಡೆವು. ಇಷ್ಟು ಪಯಣಿಸಿದರೂ ನಮಗೆ ಸುಸ್ತು ಆಗಲಿಲ್ಲ, ಆಗ ಅಲ್ಲಿದ್ದ ಸ್ಥಳೀಯರು ಇದು ಈ ಜಾಗದ ಮಹಿಮೆ ಎಂದು ಹೇಳಿದ್ದು, ನಮ್ಮಲ್ಲಿ ಭಕ್ತಿಯ ಭಾವ ಮೂಡಲು ಸಾಧ್ಯವಾಯಿತು. 
              ಸುತ್ತಾಡಿಕೊಂಡು ಬಂದು ದೇವಸ್ಥಾನದ ಸಮೀಪ ಕುಳಿತುಕೊಂಡೆವು. ಅಷ್ಟರಲ್ಲಿ ಆ ದೇವಸ್ಥಾನದ ಪ್ರಮುಖರಾದ ಶ್ರೀ ಪ್ರಸನ್ನ ಹೆಬ್ಬಾರ್ ಬಂದು, ಇಲ್ಲಿನ ದೇವರಿಗೆ- ದೈವಗಳಿಗೆ ದೀಪ ಬೆಳಗಿಸಿದರು. ಪ್ರಸಾದ ರೂಪವಾಗಿ ಕೊಟ್ಟ ಗೇರು ಬೀಜ, ದ್ರಾಕ್ಷಿಗಳನ್ನು ಎಲ್ಲರೂ ಸವಿದರು. ಸುತ್ತಲೂ ಕುಳಿತುಕೊಳ್ಳುವಂತೆ ನಮಗೆ ತಿಳಿಸಿದ ಶಿಕ್ಷಕರು ಭಕ್ತಿಗೀತೆಗಳನ್ನು ಹೇಳಲು ಹೇಳಿದರು. ಅದರಂತೆ ನಮ್ಮ ಗೀತೆಗಳು ಎಲ್ಲರ ಕಿವಿಗಳನ್ನು ತಂಪು ಮಾಡಿದವು. ಅಷ್ಟು ಹೊತ್ತಿಗೆ ಮಧ್ಯಾಹ್ನ 12:30pm ಆಗಿತ್ತು, ಹಸಿದ ನಮ್ಮ ಹೊಟ್ಟೆಗೆ ಪೋಷಕರು, ಅಧ್ಯಕ್ಷರು, ಶಿಕ್ಷಕರು ತಂದ ತಂಪು ಪಾನೀಯ, ಬಾಳೆಹಣ್ಣು , ಬನ್ಸ್, ಚಾಕಲೇಟ್ ಕೊಟ್ಟಿದ್ದನ್ನು ಸೇವಿಸಿ, ಕೆಲವೊಂದು ಜೋಕ್ಸ್ , ಹಾಸ್ಯ ಮಾತುಗಳ ಕೇಳಿ ಖುಷಿಪಟ್ಟೆವು. ನಮ್ಮ ಪಯಣ ಮುಗಿಯುವಷ್ಟರಲ್ಲಿ ನಮ್ಮೆಲ್ಲರ ತಲೆಯ ಮೇಲೆ ಅಂದರೆ ಬಾನಿನಲ್ಲಿ ರಾಕೆಟ್ ಬಂದು ನಮಗೆ ಬೀಳ್ಕೊಟ್ಟಿತು. ಮಾರ್ಗದಲ್ಲಿ ಪರಿಸರದ ಘೋಷಣೆಗಳನ್ನು ಕೂಗುತ್ತಾ ಹೋದೆವು.