-->
ಪಯಣ : ಸಂಚಿಕೆ - 29 (ಬನ್ನಿ ಪ್ರವಾಸ ಹೋಗೋಣ)

ಪಯಣ : ಸಂಚಿಕೆ - 29 (ಬನ್ನಿ ಪ್ರವಾಸ ಹೋಗೋಣ)

ಪಯಣ : ಸಂಚಿಕೆ - 29 (ಬನ್ನಿ ಪ್ರವಾಸ ಹೋಗೋಣ) 
ಲೇಖನ : ರಮೇಶ ನಾಯ್ಕ, ಉಪ್ಪುಂದ 
ಕನ್ನಡ ಭಾಷಾ ಶಿಕ್ಷಕರು 
ನೇತಾಜಿ ಸುಭಾಶ್ಚಂದ್ರ ಬೋಸ್ 
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713


      ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದು ಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ

ಇಂದಿನ ಪ್ರವಾಸದಲ್ಲಿ ಹೊಗೆನಕಲ್ ಜಲಪಾತಕ್ಕೆ ಪಯಣ ಮಾಡೋಣ ಬನ್ನಿ.....
                        
        ಭಾರತದ "ನಯಾಗರ ಜಲಪಾತ" ವೆಂದೇ ಸುಪ್ರಸಿದ್ಧವಾಗಿರುವ ಈ ಜಲಪಾತವು, ಬಂಡೆಗಳ ಮೇಲೆ ಅಪ್ಪಳಿಸುವ ನೀರು ಹೊಗೆಯಂತೆ ಹೊರಹೊಮ್ಮುತ್ತದೆ, ಆದ್ದರಿಂದ ಇದಕ್ಕೆ "ಹೊಗೆನಕಲ್" ಎಂದು ನಾಮಕರಣವಾಯಿತು.
         ಹೊಗೆನಕಲ್ ಮೇಲಗಿರಿ ಬೆಟ್ಟದ ಕಾಡು ಪ್ರದೇಶದಲ್ಲಿರುವ ಸ್ಥಳ. ಇಲ್ಲಿ ಕಾವೇರಿ ನದಿಯು ಬೆಟ್ಟಗಳಿಂದ ಇಳಿದು ಮೈದಾನ ಪ್ರವೇಶಿಸುವುದರಿಂದ. ಕಾವೇರಿ ನದಿಯ ನೀರು ರಭಸವಾಗಿ ಬಂಡೆಗೆ ಅಪ್ಪಳಿಸಿ ಎಲ್ಲೆಲ್ಲೂ ಹೊಗೆಯ ನೋಟವನ್ನು ಸೃಷ್ಟಿಸುತ್ತದೆ. ಇದನ್ನು ನೋಡಲು ಅತಿ ರಮಣೀಯವಾಗಿರುತ್ತದೆ.

      ಇಲ್ಲಿ ಪ್ರವಾಸಿಗರಿಗೆ ಅನೇಕ ಮಂದಿ ಮಾರ್ಗದರ್ಶಕರ ಅನುಕೂಲವಿದೆ. ಅವರು ನಿಮ್ಮನ್ನು ಪ್ರಾರಂಭದಲ್ಲಿಯೇ ತೂಗುಸೇತುವೆಯ ಮೇಲೆ ಒಯ್ಯುತ್ತಾರೆ. ಈ ಸೇತುವೆ ನದಿಯ ಎರಡು ದಂಡೆಗಳನ್ನು ಸೇರಿಸಿದೆ. ಈ ಸೇತುವೆಯಿಂದ ಜಲಸಿರಿಯನ್ನು ಅದ್ಭುತವಾಗಿ ವೀಕ್ಷಿಸಬಹುದು. ನಂತರ ಸ್ನಾನದ ತಾಣಕ್ಕೆ ಹೋಗಬೇಕು. ಅಲ್ಲಿ ಸ್ತ್ರೀಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕವಾದ ವ್ಯವಸ್ಥೆ ಇದೆ. ಈ ಸ್ಥಳಕ್ಕೆ ರಕ್ಷಣೆಯ ದೃಷ್ಟಿಯಿಂದ ಕಂಬಿಗಳನ್ನು ಹಾಕಿದ್ದಾರೆ. ಇಲ್ಲಿ ಎಣ್ಣೆ ಮಸಾಜ್ ಪ್ರಖ್ಯಾತಿ. ಇದರ ಅನುಕೂಲವನ್ನೂ ಪಡೆಯಬಹುದು.

         ಜಲಪಾತವನ್ನು ವೀಕ್ಷಿಸಲು ತೆಪ್ಪದಲ್ಲಿ ಪ್ರಯಾಣಿಸಬೇಕು. ಎರಡು ಕಡೆ ತೆಪ್ಪದಿಂದ ಕೆಳಗಿಳಿದು ಸ್ವಲ್ಪ ದೂರ ನಡೆಯಬೇಕು. ಶಿಲೆಗಳ ನಡುವೆ ಸ್ವಲ್ಪ ಚಾರಣವಾದ ಮೇಲೆ ಮತ್ತೆ ತೆಪ್ಪದಲ್ಲಿ ಮುಖ್ಯವಾದ ಜಲಪಾತಗಳತ್ತ ಕರೆದೊಯ್ಯುತ್ತಾರೆ. ಬೇಸಿಗೆಯಲ್ಲಿ ಐದಾರು ಜಲಪಾತಗಳು ಮಳೆಗಾಲದಲ್ಲಿ ಇಪ್ಪತ್ತರ ತನಕ ಜಲಪಾತಗಳನ್ನು ವೀಕ್ಷಿಸಬಹುದು. 

        ಇವುಗಳಲ್ಲಿ ಹೆಚ್ಚು ಪಾಲು ಕರ್ನಾಟಕದ ಗಡಿಯಲ್ಲಿರುವುದು ವಿಶೇಷ. ಜಲಪಾತದ ಆಸುಪಾಸಿನಲ್ಲಿ 200 ಅಡಿಗಳವರೆಗೂ ಆಳವಿದೆ. ಆದುದರಿಂದ ಬಲು ಎಚ್ಚರಿಕೆ ಅಗತ್ಯ.

       ಸೇರುವ ಬಗೆ ಹೀಗಿದೆ - ಕರ್ನಾಟಕದ ಕಡೆಯಿಂದ ಮಾರುಗಟ್ಟೆ ಕರ್ನಾಟಕದ ಬಾರ್ಡರ್ ಎಂದು ಪ್ರಸಿದ್ದಿ. ಇದು ಚಾಮರಾಜನಗರದ ಕೊಳ್ಳೇಗಾಲ ತಾಲ್ಲೂಕಿಗೆ ಸೇರಿದ ಹಳ್ಳಿ. ಗೋಪಿನತ್ತಂ ಮೂಲಕ ಹೋಗುವುದಾದರೆ 12 ಕಿ.ಮೀ.ದೂರಯಿದೆ.
    ಧರ್ಮಪುರಿ ಪೆನ್ನಾಗರ ತಾಲ್ಲೂಕು ಅತಿ ಹತ್ತಿರದ ಊರು, ಸೇಲಂ - ಬೆಂಗಳೂರು ರಸ್ತೆಯಿಂದ 45 ಕಿ.ಮೀ.ಇದೆ. ಇಲ್ಲಿಂದ ಅನೇಕ ಬಸ್ಸುಗಳು ಇವೆ.  
ಮೆಟ್ಟೂರು ಮಾರ್ಗವಾಗಿ ಹೋಗುವುದಾದರೆ : 130 ಕಿ.ಮೀ ಗೋಪಿನತ್ತಂನಿಂದ 50 ಕಿ.ಮೀ , ಚೆನ್ನೈಗೆ 350 ಕಿ.ಮೀ. ದೂರವಿದೆ.

    "ಅಗಾಧವಾದ ಜಲರಾಶಿ, ಮನಸೆಳೆಯುವ ವಿಹಂಗಮ ನೋಟ, ಕಾವೇರಿಯ ಹರಿಯುವಿಕೆ ಒಂದು ಸಲ ತಲ್ಲಣಗೊಳಿಸುತ್ತದೆ. ಶಕ್ತಿ ವ್ಯರ್ಥವಾಗುತ್ತಿದೆಯೋ ಎಂಬ ಭಾವನೆ ಮೂಡುವುದು ಸಹಜ. ಸಹಜ ಪ್ರಕೃತಿಯ ನೋಟ ಸದಾ ಅದ್ಭುತವನ್ನು ಸೃಷ್ಟಿಸುತ್ತದೆ ಎಂಬುದಕ್ಕೆ ಈ ಹೊಗೆನಕಲ್ ಜಲಪಾತವೊಂದು ಅದ್ವಿತೀಯ ಉದಾಹರಣೆಯಾಗಿದೆ." 
      "ಬನ್ನಿ ಒಮ್ಮೆ ಪ್ರವಾಸಕ್ಕೆ... ಹೊಗೆನಕಲ್ ನೋಡುವುದಕ್ಕೆ..."
ಮತ್ತೆ ಮುಂದಿನ 'ಪಯಣ' ಸಂಚಿಕೆಯಲ್ಲಿ ಸಿಗೋಣವೇ, ನಮಸ್ಕಾರ.
 (ಚಿತ್ರಗಳು : ಅಂತರ್ಜಾಲ ಕೃಪೆ)
......................... ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು 
ನೇತಾಜಿ ಸುಭಾಶ್ಚಂದ್ರ ಬೋಸ್ 
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
********************************************


Ads on article

Advertise in articles 1

advertising articles 2

Advertise under the article