ಜೀವನ ಸಂಭ್ರಮ : ಸಂಚಿಕೆ - 178
Monday, February 24, 2025
Edit
ಜೀವನ ಸಂಭ್ರಮ : ಸಂಚಿಕೆ - 178
ಲೇಖಕರು : ಎಂ.ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ, ಇಂದು ಬಯಕೆ ಎಂದರೇನು? ಬಯಕೆ ಹೇಗಿದ್ದರೆ ಜೀವನ ಸುಂದರ ? ಇದರ ಬಗ್ಗೆ ತಿಳಿದುಕೊಳ್ಳೋಣ. ಈ ಜಗತ್ತಿನಲ್ಲಿ ಅಸಂಖ್ಯಾ ವಸ್ತುಗಳಿವೆ. ಆ ವಸ್ತುಗಳ ಜ್ಞಾನ ಮಾಡಿಕೊಳ್ಳುತ್ತೇವೆ. ಅವುಗಳಲ್ಲಿ ಕೆಲವು ನಮಗೆ ಹಿಡಿಸುತ್ತದೆ, ಹಿತ ಉಂಟು ಮಾಡುತ್ತವೆ. ಯಾವುದು ನಮಗೆ ಹಿಡಿಸಿತು?. ಹಿತವುಂಟು ಮಾಡಿತು? ಆ ವಸ್ತುವನ್ನು ಮನಸ್ಸು ಬೇಕು ಎನಿಸುತ್ತದೆ. ಇದಕ್ಕೆ ಬಯಕೆ ಎನ್ನುವರು. ಬಯಸಿದ ವಸ್ತು ಹಾಗೆ ದೊರಕುವುದಿಲ್ಲ. ಆ ವಸ್ತುಗಳನ್ನು ಪಡೆಯಲು ಶ್ರಮ ಪಡಬೇಕಾಗುತ್ತದೆ. ದುಡಿಯಬೇಕಾಗುತ್ತದೆ, ಪ್ರಯತ್ನ ಮಾಡಬೇಕಾಗುತ್ತದೆ. ವಸ್ತುವಿನ ಜ್ಞಾನ ಆಗಿ, ಅದು ನಮಗೆ ಹಿತವಾಯಿತು ಅಂದಾಗ, ಬಯಕೆಯಾಗುತ್ತದೆ. ಅದು ದೊರೆತಾಗ ನಾವು ಸುಖಿಯಾದೋ ಎನಿಸುತ್ತದೆ. ಆದರೆ ನಮ್ಮ ಎಲ್ಲಾ ಪ್ರಯತ್ನ ಸಫಲವಾಗಬಹುದು ಅಥವಾ ವಿಫಲ ಆಗಬಹುದು. ಸಫಲವೇ ಆಗಲಿ, ವಿಫಲವೇ ಆಗಲಿ ಬಯಕೆ ಹಾಗೆ ಉಳಿಯುತ್ತದೆ. ಬಯಕೆ ಹಾಗೆ ಉಳಿಯಿತು ಅಂದರೆ ನಮಗೆ ಹತಾಶೆಯಾಗುತ್ತದೆ. ಅಂದರೆ ಬದುಕಿನ ವೈಭವ ಕಳೆದುಕೊಂಡಂತೆ ಆಗುತ್ತದೆ. ಯಾವ ಮನುಷ್ಯ ಸಣ್ಣಪುಟ್ಟ ವಸ್ತುಗಳನ್ನು ಬಯಸುತ್ತಾನೋ?. ಆತನಿಗೆ ಆ ವಸ್ತುವಿನ ಜ್ಞಾನ ಆಗುತ್ತದೆ. ಆ ವಸ್ತು ಸುಲಭವಾಗಿ ಪಡೆಯುತ್ತಾನೆ. ಸುಖವಾಗಿ ಇರುತ್ತಾನೆ. ಸಮಾಧಾನವಾಗಿರುತ್ತಾನೆ. ಏಕೆಂದರೆ ಬಯಕೆ ಸರಳ ಮತ್ತು ಚಿಕ್ಕದಾಗಿರುತ್ತದೆ.
ಉದಾಹರಣೆಗೆ ಒಂದು ಪಕ್ಷಿ ಸಣ್ಣ ಮರಿಯಾಗಿ ಬೆಳೆಯುತ್ತಿತ್ತು. ಅಂದರೆ ಅದಕ್ಕೆ ರೆಕ್ಕೆ ಬಲಿತೂ ಅಂದರೆ ಹಾರುತ್ತದೆ, ಎಲ್ಲಾ ಕಡೆ ನೋಡುತ್ತದೆ. ಅದು ಎಲ್ಲಾ ಇಚ್ಚಿಸುವುದಿಲ್ಲ. ನನಗೇನು ಹಿಡಿಸುತ್ತದೆ ಅಲ್ಲಿಗೆ ಹಾರುತ್ತದೆ. ಅದು ಸಿಕ್ಕಿತು, ತಿಂದು ಸಂತೋಷಪಡುತ್ತದೆ. ಸಿಗಲಿಲ್ಲ ಅದನ್ನು ಮರೆತು ಬೇರೆ ಕಡೆ ಎಲ್ಲಿ ಸುಲಭವಾಗಿ ದೊರಕುತ್ತೋ ಅಲ್ಲಿಗೆ ಹಾರುತ್ತದೆ. ಇದು ಸುಖ ಅಥವಾ ದುಃಖದ ಸೂತ್ರ. ಮೊದಲು ವಸ್ತುವಿನ ಜ್ಞಾನ, ಜ್ಞಾನದ ನಂತರ ಇಚ್ಛೆ, ಇಚ್ಛೆಯ ನಂತರ ನಡೆಯುವ ಪ್ರಯತ್ನದ ಸಫಲತೆ ಅಥವಾ ವಿಫಲತೆ. ಇದು ಶ್ರೀಮಂತರೇ ಇರಲಿ ಬಡವರಿರಲಿ ಎಲ್ಲರಿಗೂ ಅಷ್ಟೇ. ಉದಾಹರಣೆಗೆ ಒಬ್ಬ ಭಿಕ್ಷುಕ ಇದ್ದಾನೆ ಎಂದು ಭಾವಿಸಿ. ಆತನ ಇಚ್ಛೆ ಏನು ಅಂದರೆ, ಆತನ ಭಿಕ್ಷಾ ಪಾತ್ರೆ ತುಂಬಬೇಕು. ಅಷ್ಟು ತುಂಬಿತು ಅಂದರೆ ಮುಂದೆ ಹೋಗುವುದಿಲ್ಲ. ಒಂದು ಮರದ ಕೆಳಗೆ ಕುಳಿತು ಊಟ ಮಾಡುತ್ತಾನೆ. ಉಳಿದದ್ದನ್ನು ಹೊರಗೆ ಚೆಲ್ಲುತ್ತಾನೆ. ಅದನ್ನು ಪಕ್ಷಿಗಳು ತಿಂದು ಆನಂದ ಪಡುತ್ತವೆ. ಈತ ಮರದ ಕೆಳಗೆ ಆನಂದವಾಗಿ ವಿಶ್ರಮಿಸುತ್ತಾನೆ. ಇದು ಭಿಕ್ಷುಕನ ಬಯಕೆ. ಅದೇ ರೀತಿ ಒಬ್ಬ ದೊಡ್ಡ ಮನುಷ್ಯ ಒಂದು ಸುಂದರ ವಾಹನ ನೋಡಿದ, ಇಚ್ಚೆ ಪಟ್ಟ, ಬಯಕೆ ಶುರುವಾಯಿತು. ಅದನ್ನು ಪಡೆದುಕೊಳ್ಳಲು ಪ್ರಯತ್ನ ಶುರು ಮಾಡುತ್ತಾನೆ. ಅದು ಸಿಗಲಿಲ್ಲ ಹತಾಶೆ ಹೊಂದುತ್ತಾನೆ. ಅಂದರೆ ಬಯಕೆ ನಮಗೆ ಎಟುಗುವಷ್ಟು ಇದ್ದರೆ, ಅದನ್ನು ಸುಲಭವಾಗಿ ಪೂರೈಸಿಕೊಳ್ಳಬಹುದು. ಒಬ್ಬ ಮನುಷ್ಯ ಹೊರಬೇಕೆಂದರೆ ಬಹಳ ತ್ರಾಸ ಆಗದಂತೆ ಹೊರಬೇಕು. ಅಂದರೆ ಆಗ ಆತ ಸಫಲ. ಹೊರಲಾರದಷ್ಟನ್ನು ಹೊತ್ತರೆ, ಬಾರವಾಗಿ ಅಲ್ಲೇ ಬಿಡುತ್ತಾನೆ, ಹತಾಶೆ ಹೊಂದುತ್ತಾನೆ. ಇದು ಮನುಷ್ಯರು ಹತಾಶೆ ಹೊಂದಲು ಕಾರಣ. ಪ್ರಯತ್ನ ಇಲ್ಲ ಅಂತ ಅಲ್ಲ. ಪ್ರಯತ್ನ ಇದೆ. ಆದರೆ ಬಯಕೆ ನಮಗೆ ನಿಲುಕಲಾರದಷ್ಟು ಇದೆ. ಅದು ನಿಲುಕುವುದಿಲ್ಲ ಎಂದಾಗ, ಅದನ್ನು ಹೇಗಾದರೂ ಮಾಡಿ ಪಡೆಯಬೇಕೆಂದು ನಿರ್ಧರಿಸಿದರೆ, ಆತ ಅದನ್ನು ಪಡೆಯಲು ಅಡ್ಡದಾರಿ ಹಿಡಿಯುತ್ತಾನೆ. ಹೀಗೆಲ್ಲ ನೋಡುತ್ತಾ ಇದ್ದೀವಲ್ಲ ರಾಜಕೀಯ, ಭ್ರಷ್ಟಾಚಾರ, ಲಂಚ ಇದೆಲ್ಲ ಯಾಕೆ ಅಂದರೆ ಬಯಕೆ ಹೆಚ್ಚು, ನಮ್ಮ ಸಾಮರ್ಥ್ಯ ಮೀರಿದ್ದು. ಅದನ್ನು ಪಡೆದೆ ತೀರಬೇಕೆಂಬ ಹಟ. ಇದರಿಂದ ಅಪ್ರಾಮಾಣಿಕನಾಗುತ್ತಾನೆ. ಸರಿ ತಪ್ಪು ಯೋಚಿಸುವುದಿಲ್ಲ. ಇದರಿಂದ ಕೈ ಕೆಡಿಸಿಕೊಳ್ಳುತ್ತಾನೆ, ಮನಸ್ಸು ಕೆಡಿಸಿಕೊಳ್ಳುತ್ತಾನೆ, ಸಂಬಂಧ ಕಳೆದುಕೊಳ್ಳುತ್ತಾನೆ, ಗೌರವ ಕಳೆದುಕೊಳ್ಳುತ್ತಾನೆ. ಆದ್ದರಿಂದ ಎಲ್ಲಾ ಬಯಕೆ ಕೆಟ್ಟದ್ದಲ್ಲ. ಯಾವುದು ನಮ್ಮ ಸಾಮರ್ಥ್ಯ, ಆರ್ಥಿಕ ಸ್ಥಿತಿಗೆ ಎಟುಕುವಂತಿದೆ ಅದು ಕೆಟ್ಟದ್ದಲ್ಲ. ಅದು ಎಟುಕದಂತಿದ್ದರೆ ಕೆಟ್ಟದ್ದು. ಅದಕ್ಕಾಗಿ ನಾವು ಬಯಕೆ ನಿಯಂತ್ರಿಸಬೇಕು. ಬಯಸಿದ್ದು ಪಡೆಯೋದು ಬಹಳ ಕಷ್ಟ. ಸುಖದ ಸೂತ್ರ ಬಯಕೆಯ ನಿಯಂತ್ರಣ. ವಸ್ತುಗಳು ಇರುವುದು ತಿಳಿದುಕೊಳ್ಳುವುದಕ್ಕೆ, ಅನುಭವಿಸುವುದಕ್ಕೆ (ಸಂತೋಷ ಪಡುವುದಕ್ಕೆ) ವಿನಹ, ಬಯಸಲು ಅಲ್ಲ. ಜಗತ್ತಿನ ಎಲ್ಲಾ ವಸ್ತು ಪಡೆಯಲು ಸಾಧ್ಯವಿಲ್ಲ. ದುಡಿದು ಸ್ವಲ್ಪ ಸ್ವಲ್ಪ ಪಡೆಯಬಹುದು. ಎಲ್ಲಾ ಇಚ್ಛೆ ಪೂರೈಸುವುದಲ್ಲ. ಸ್ವಲ್ಪ ಇಚ್ಚೆ ಪೂರೈಸಿ ಕೊಳ್ಳಬಹುದು. ಜ್ಞಾನದಲ್ಲಿ, ಅನುಭವದಲ್ಲಿ ನಿಯಂತ್ರಣ ಅಲ್ಲ. ಬಯಕೆಯಲ್ಲಿ ನಿಯಂತ್ರಣ. ಏನು ಬೇಕು ?. ವಿಚಾರ ಮಾಡಬೇಕೆ ವಿನಹ. ಬಯಸಿದ ಬಳಿಕ ಹೇಗೆ ಪಡೆಯಬೇಕು ಅಂತ ಅಲ್ಲ. ಅದು ನನ್ನ ಬುದ್ಧಿ ಸಾಮರ್ಥ್ಯ, ಹಣದ ಸ್ಥಿತಿ ಎಷ್ಟು?. ಇದು ನಿಲುಕುವಂತೆ ಇರಬೇಕು. ಜಗತ್ತನೆಲ್ಲಿ ತಿಳಿಯಬೇಕು. ಉದಾಹರಣೆಗೆ, ಈ ಭೂಮಿ ಎಷ್ಟು ಫಲವತ್ತತೆ ಇದೆ ?. ಏನು ಹಾಕಬಹುದು?. ಏನು ಬೆಳೆಯಬಹುದು?. ಬೆಳೆಯುತ್ತದೆ ತಿಳಿದುಕೊಳ್ಳಬಹುದು. ಅದೇ ರೀತಿ ಸಾಗರದಲ್ಲಿ ನೀರೆಷ್ಟಿದೆ?. ತಿಳಿದುಕೊಳ್ಳಬಹುದು. ಹೊಳೆ ಹರಿಯುತ್ತಾ ಇದ್ದರೆ, ಎಷ್ಟು ಹರಿಯುತ್ತಿದೆ?. ತಿಳಿದುಕೊಳ್ಳಬಹುದು. ಎಲ್ಲಾ ಕುಡಿದು ಬಿಡಬೇಕು ಅಂತ ಬಯಸಬಾರದು. ಜಗತ್ತು , ವಸ್ತುಗಳು ತಿಳಿದುಕೊಳ್ಳುವುದಕ್ಕೆ ಮತ್ತು ತಿಳಿದು ಆನಂದ ಪಡುವುದಕ್ಕೆ ಅಂತ ತಿಳಿಯಬೇಕು. ಎಲ್ಲಾ ವಸ್ತುಗಳು ಸ್ಥಾನ ಬಂಧಿತ, ಕಾಲಬಂಧಿತ. ಪ್ರತಿಯೊಂದು ವಸ್ತುವಿಗೂ ವಿರೋಧಿ ಮುಖಗಳು ಇರುತ್ತವೆ. ಒಂದು ಮುಖ ಕಂಡರೆ, ಇನ್ನೊಂದು ಮುಖ ಕಾಣುವುದಿಲ್ಲ.
ಸ್ಥಾನ ಬಂಧಿತ ಅಂದರೆ ಒಂದು ವಸ್ತು ಏಕಕಾಲದಲ್ಲಿ ಎರಡು ಕಡೆ ಇರುವುದಿಲ್ಲ. ಈಗ ಯಾರ ಹತ್ತಿರ ಒಂದು ವಸ್ತು ಇದೆ ಅಂದರೆ, ಅದೇ ವಸ್ತು ನನ್ನ ಬಳಿ ಇರುವುದಿಲ್ಲ. ಅದನ್ನು ನಾನು ಪಡೆದರೆ ಆತನಲ್ಲಿ ಅದು ಖಾಲಿಯಾಗುತ್ತದೆ. ಅಂದರೆ ನೋಡೋದಕ್ಕೆ ಎಲ್ಲರಿಗೂ ಸಿಗುತ್ತದೆ. ಪಡೆಯುವುದಕ್ಕೆ ಆಗುವುದಿಲ್ಲ. ನೋಡೋದಿಕ್ಕೆ ನನ್ನ ಕೈಯಲ್ಲೇ ಇರಬೇಕು ಅಂತ ಎಲ್ಲಿದೆ ?. ಹೂವು ಎಲ್ಲಾದರೂ ಇರಲಿ , ನೋಡಿ ಸಂತೋಷ ಪಡುತ್ತೀನಿ ಅಂದರೆ ನಮಗೆ ಸಮಸ್ಯೆ ಇಲ್ಲ. ನನ್ನ ಕೈಯಾಗೆ ಇದ್ದರೆ ಏನು?. ನಿಮ್ಮ ಕೈಯಾಗೆ ಇದ್ದರೇನು ? ಕೈಯಲ್ಲಿ ಹಿಡಿದವನಿಗೆ ತ್ರಾಸ. ಅದನ್ನು ಹಿಡಿಯಬೇಕು. ನೋಡುವವನಿಗೆ ತ್ರಾಸ ಇಲ್ಲ. ಒಬ್ಬ ಮನೆ ಕಟ್ಟುತ್ತಾನೆ ಬಹಳ ತ್ರಾಸ ಆಗಿರುತ್ತದೆ. ಗೃಹ ಶಾಂತಿ ಅಂತ ಮಾಡಿ, ಬಂಧು ಬಳಗ ಎಲ್ಲರನ್ನು ಕರೆದು ತೋರಿಸುತ್ತಾನೆ. ಬಂದವರೆಲ್ಲ ನೋಡಿ ಒಳ್ಳೆಯ ಮಾತು ಹೇಳಿದರೆ ಕಟ್ಟಿಸಿದಾಗ ಇದ್ದ ತ್ರಾಸ ಕಡಿಮೆಯಾಗುತ್ತದೆ. ಗೃಹಶಾಂತಿ ಅಲ್ಲ ಮನಶಾಂತಿಯಾಗುತ್ತದೆ. ನೋಡೋಕೆ ಹೋದವರು ಎಲ್ಲಾ ನೋಡುವುದು. ಎಷ್ಟು ಅದ್ಭುತ ?.ಅಂತ ಹೇಳುವುದು. ನಿನ್ನದರ ತರಹ ಬೇರೆ ಇಲ್ಲ ಅನ್ನೋದು. ಏಕೆಂದರೆ ಅದು ಆತನದೇ ತಾನೆ. ಹಾಗೂ ಆತನಿಗೂ ಸಂತೋಷ. ನಮಗೂ ಸಂತೋಷ. ಅದನ್ನು ಬಿಟ್ಟು. ಅದೇ ತರ ಕಟ್ಟಬೇಕು ಅಂದಾಗ ಯೋಚಿಸಿದರೆ ದುಃಖ. ನೋಡೋದಕ್ಕೆ ಆರಾಮ. ಪಡೆಯಲು ಅಲ್ಲ. ಬಹಳಷ್ಟು ಜಗತ್ತು ಮತ್ತು ವಸ್ತು ನೋಡಿ ಸಂತೋಷ ಪಡುವುದಕ್ಕೆ ಇದೆ. ಬದುಕು ಮಹತ್ವದ್ದು ವಿನಃ, ಸಂಗ್ರಹ ಮಹತ್ವದಲ್ಲ. ನಾನು ಏನು ಬಳಸುತ್ತೇನೆ ಅದು ಮಹತ್ವದ್ದು. ನಾವೆಲ್ಲ ನಿವೃತ್ತಿ ನಂತರ ಆರಾಮವಾಗಿ ಇರಬೇಕು ಅನ್ನುತ್ತೇವೆ. ನಿವೃತ್ತಿ ಯಾವಾಗ ನೀಡುತ್ತಾರೆ. ನಮ್ಮ ಮೇಲೆ ಸಾಮರ್ಥ್ಯ ಇಲ್ಲ ಅಂತ ಭರವಸೆ ಆದಾಗ, ನಿವೃತ್ತಿ ನೀಡುತ್ತಾರೆ. ಆವಾಗ ಆರಾಮವಾಗಿ ಇರೋದಕ್ಕೆ ಆಗುತ್ತಾ. ಆರಾಮ ಇರುವ ಉತ್ಸಾಹ ಇದ್ದಾಗ ಆರಾಮವಾಗಿ ಇರಬೇಕೇ ವಿನಹ, ಉತ್ಸಾಹ ಕಳೆದುಕೊಂಡ ಮೇಲೆ ಅಲ್ಲ. ಯುವಕ, ತರುಣ ಇದ್ದಾಗಲೇ ಆರಾಮ ಇರಬೇಕು, ಜಗತ್ತನ್ನು ಪಡೆದೆ ಅನುಭವಿಸಬೇಕು ಅಂತ ಏಕೆ?. ಪಡೆಯಲಾರದೇ ಬಹಳಷ್ಟು ವಸ್ತುಗಳನ್ನು ಅನುಭವಿಸಬಹುದು. ನೋಡಿ ಸಂತೋಷ ಪಡಬಹುದು. ಬಯಕೆ ಸಣ್ಣದಿದ್ದರೆ ಅದು ಸುಲಭವಾಗಿ ಸಿಗುತ್ತದೆ. ಆಗ ಯಾವ ಮನುಷ್ಯನು ಅಪ್ರಾಮಾಣಿಕ ಆಗುವುದಿಲ್ಲ. ಇದು ಮನುಷ್ಯನ ತಪ್ಪಲ್ಲ , ಬಯಕೆ ತಪ್ಪು. ನಿರ್ಣಯ ಮಾಡುವಾಗ ಬಹಳ ಎಚ್ಚರಿಕೆ ಇರಬೇಕು.
ಒಂದು ಕಥೆ ಒಬ್ಬ ಸೂಫಿ ಸಂತನ ಶಿಷ್ಯ. ಆತನಿಗೆ ಒಂದು ಮಗು. ವಯಸ್ಸು ಐದು ವರ್ಷ. ದೀಪಾವಳಿ ಅಂತ ಹಬ್ಬ ಬರುತ್ತದೆ. ಎಲ್ಲರೂ ಮನೆ ಮುಂದೆ ದೀಪ ಹಚ್ಚಿರುತ್ತಾರೆ. ಆ ಮಗುವಿಗೂ ಒಂದು ಆಸೆ. ನಾವು ದೀಪ ಹಚ್ಚಬೇಕು ಅಂತ. ತಂದೆ ಬಳಿ ಹೋಗಿ ಕೇಳುತ್ತದೆ. ಪಾಪ ಆತ ತುಂಬಾ ಬಡವ. ಆ ಮಗುವಿನ ಇಚ್ಛೆ ಪೂರೈಸಲು ಆಗುವುದಿಲ್ಲ. ಆಗ ಆ ಸಂತ ಮಗುವಿಗೆ ಹೇಳುತ್ತಾನೆ "ನೋಡು ಆ ದೀಪ ಆರುತ್ತದೆ, ನಾವು ಆರುವ ದೀಪ ಹಚ್ಚುವುದಲ್ಲ, ಶಾಶ್ವತ ದೀಪ ಹಚ್ಚುವವರು." ಆರುವ ದೀಪ ನೋಡೋದು, ಶಾಶ್ವತ ದೀಪ ಹಚ್ಚೋದು ಅಂದ. ಕೈ ಹಿಡಿದು ಊರಲ್ಲೆಲ್ಲಾ ತಿರುಗಾಡಿ, ಎಲ್ಲಾ ದೀಪ ತೋರಿಸಿದನು. ಹಚ್ಚಿದವ್ರು ಮನೆ ಒಳಗೆ ಇದ್ದರು. ಇವರು ಎಲ್ಲಾ ದೀಪ ನೋಡಿದರು. ನೋಡುವವರು ಇಬ್ಬರು. ನಾಲ್ಕು ದೀಪ ಹಚ್ಚಿ, ಮನೆ ಒಳಗೆ, ಹಚ್ಚಿದವ್ರು ಇದ್ದಾಗ, ಇವರಿಬ್ಬರೂ ಊರಿನ ತುಂಬಾ ದೀಪಗಳನೆಲ್ಲ ನೋಡಿ ಸಂತೋಷಪಟ್ಟರು. ಅವರು ನಮಗಾಗಿ ಹಚ್ಚಿದ್ದಾರೆ. ಅವರು ಹಚ್ಚುವರು. ನಾವು ನೋಡುವವರು. ಹಚ್ಚುವ ಕೆಲಸಗಾರರು ಅವರು. ನೋಡೋ ಮಾಲೀಕರು ನಾವು ಎಂದನು. ಇದು ದೃಷ್ಟಿಕೋನ. ಆನಂದ ಪಡಬೇಕಾದರೆ ನಾವೇ ದೀಪ ಹಚ್ಚಬೇಕು ಅಂತ ಎಲ್ಲಿದೆ ? ಹಚ್ಚಿದವರಿಗಿಂತ ನೋಡಿ ಸಂತೋಷ ಪಟ್ಟವರು ಸಂತ ಮತ್ತು ಮಗ. ಸಂತ ಹೇಳಿದ, "ನೋಡಿ ನೋಡಿ ನಮ್ಮ ಕಣ್ಣು ಶ್ರೀಮಂತ, ಮನಸ್ಸು ಶ್ರೀಮಂತ , ನಾವೇ ಶ್ರೀಮಂತರು" ಎಂದ. ಎಷ್ಟೊಂದು ಜನ ಹಚ್ಚೋರು ಇರುವಾಗ, ನಾವೇಕೆ ಹಚ್ಚಬೇಕು?. ನಾವು ನೋಡುವವರು. ನೋಡುವುದಕ್ಕೆ ಬಂದರೆ ಜಗತ್ತಿನಲ್ಲಿ ನೋಡಿ ಆನಂದ ಪಡಬಹುದು. ನೋಡುವ, ಆನಂದ ಪಡುವ, ಬಯಕೆ ಇರಬೇಕೇ ವಿನಹ, ಪಡೆಯುವ ಬಯಕೆ ಅಲ್ಲ. ಅಲ್ಲವೆ ಮಕ್ಕಳೇ...
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
*******************************************