-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 153

ಸ್ಫೂರ್ತಿಯ ಮಾತುಗಳು : ಸಂಚಿಕೆ - 153

ಸ್ಫೂರ್ತಿಯ ಮಾತುಗಳು : ಸಂಚಿಕೆ - 153
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
                        

ಮಾನವನ ಬದುಕು ಕೊಡು ಕೊಳ್ಳುಗೆಯ ಓಟ. ಪರಾವಲಂಬನೆಯಿಲ್ಲದೆ ಮಾನವನು ಜೀವನದಲ್ಲಿ ಸಫಲನಾಗಲಾರ. ಪ್ರಕೃತಿಯ ಅನುಕೂಲವಿದ್ದರೆ, ಪರರ ಸಹಕಾರ ಒದಗಿದರೆ ಬಾಳು ಬಂಗಾರವಾಗುತ್ತದೆ. ”ಇವರಿರಬೇಕು” ಈ ಲೇಖನ ಮಾಲಿಕೆಯಲ್ಲಿ ಮಾನವನ ಬದುಕಿಗೆ ಯಾರೆಲ್ಲ ಪೂರಕರಾಗುತ್ತಾರೆ, ಅವರೆಲ್ಲರ ನೆರವಿನ ಭುಜ ನಮಗೆ ಹೇಗೆ ಕೂಡಿ ಬರುತ್ತದೆ ಎಂಬದನ್ನು ಚಿಂತನೆ ಮಾಡಲು ಒಂದು ಕಿರು ಪ್ರಯತ್ನ
ಚಾಲಕನೆಂದು ನಾನು ಯಾವುದೋ ಅಗೋಚರ ಶಕ್ತಿಯನ್ನು ಉಲ್ಲೇಖಿಸಿಲ್ಲ. ನಮಗೆ ದೈನಂದಿನ ವ್ಯವಹಾರಗಳಲ್ಲಿ ಸಂಗಾತಿಯಾಗಿರುವ, ನಮ್ಮ ನೆರವಿಗೆ ನಿತ್ಯ ಧಾವಿಸಿ ಬರುವ ಡ್ರೈವರ್‌ ಈ ಲೇಖನದ ಮುಖ್ಯ ವ್ಯಕ್ತಿ.

ಹುಟ್ಟುವುದಕ್ಕೆ ಮುನ್ನವೇ ನಮಗೆ ಡ್ರೈವರ್‌ನ ಸಾಂಗತ್ಯ ಬೇಕಾಗುತ್ತದೆ. ಗರ್ಭಿಣಿ ತಾಯಿಯು ಕಾಯಿಲೆಗೊಳಗಾದರೆ, ಆಕೆಯ ದೇಹ ಸ್ಥಿತಿ ಏರುಪೇರಾದರೆ, ಹೆರಿಗೆ ಬೇನೆ ಕಾಣಿಸಿದರೆ ತತಕ್ಷಣ ಶುಶ್ರೂಷೆ ಬೇಕು. ಶೂಶ್ರೂಷಾ ಕೇಂದ್ರಕ್ಕೆ ಗರ್ಭಿಣಿಯನ್ನು ಒಯ್ಯಲು ಡ್ರೈವರ್‌ ಬೇಕು ತಾನೆ? ಮನೆಯವರೇ ಡ್ರೈವರ್‌ ಕೆಲಸ ಮಾಡಿರಲೂ ಬಹುದು. ವಾಹನ ಚಲಿಸುವಾಗ ಚಾಲಕ ನಿದ್ದೆ ಮಾಡಿದರೆ, ಏಕಾಗ್ರತೆ ಕಳೆದುಕೊಂಡರೆ, ಅಮ್ಮ ಮತ್ತು ಹೊಟ್ಟೆಯೊಳಗಿರುವ ಮಗುವಿನ ಕುರಿತಾದ ಕಾಳಜಿಯಿಂದ ವಾಹನ ಚಾಲನೆ ಮಾಡದಿದ್ದರೆ ಮಗು ಭೂಮಿಯ ಮೇಲೆ ಅವತರಿಸಲು ಅಸಾಧ್ಯವಾಗಲೂ ಬಹುದು. ಚಾಲಕನ ಅಜಾಗರೂಕತೆ ತಾಯಿ ಮತ್ತು ಮಗು ಇಬ್ಬರನ್ನೂ ಬಲಿ ತೆಗೆದುಕೊಳ್ಳಬಹುದು.

ಚಾಲಕ ಬೇರೆಲ್ಲೋ ಇದ್ದಾನೆ. ಚಿಕಿತ್ಸೆಗೆ ಆಸ್ಪತ್ರೆಗೆ ತುರ್ತು ಹೋಗಬೇಕು. ಡ್ರೈವರ್‌ಗೆ ಕರೆ ಮಾಡಿದಾಗ ಆತ ಈಗ ಬಂದೆ ಎಂದು ನಂಬಿಸಿ ನಮ್ಮನ್ನು ಕಾಯಿಸಿದರೆ, ತಡವಾಗಿ ಬಂದರೆ ಸಕಾಲದಲ್ಲಿ ಚಿಕಿತ್ಸೆ ಪಡೆಯಲಾಗದೆ ರೋಗಿಯ ಕಾಯಿಲೆ ಉಲ್ಬಣಗೊಂಡು ಸಾಯಲೂ ಬಹುದು. ಚಾಲಕನು ಪ್ರಾಮಾಣಿಕತೆ ಮರೆದರೆ ರೋಗಿ ಸಾಯುತ್ತಿರಲಿಲ್ಲ ಎಂದು ಗೊಣಗುವ ಸಂದರ್ಭವೂ ಒದಗಬಹುದು. ಪ್ರಾಮಾಣಿಕ ಚಾಲಕರಾದವರು ನಮಗೆ ಜೀವ ಉಳಿಸುವ ಭಗವಂತನೇ ಆಗುತ್ತಾರೆ.

ಗರ್ಭೀಣಿಯರು, ವೃದ್ಧರು, ಮತ್ತು ಕಾಯಿಲೆಗೊಳಗಾದವರಿಗೆ ಆಸ್ಪತ್ರೆಯ ಅಗತ್ಯವುಂಟಾಗುವ ಸಮಯ ನಿರ್ದಿಷ್ಟವಾಗಿರದು. ಮಧ್ಯರಾತ್ರಿಯೂ ಆಸ್ಪತ್ರೆಗೆ ಹೋಗಬೇಕಾದ ಅನಿವಾರ್ಯತೆ ಎದುರಾಗಬಹುದು. ಅಪಘಾತಗಳು, ಆರೋಗ್ಯದ ಏರು ಪೇರು ಆಕಸ್ಮಿಕವೇ ಇರುತ್ತವೆ. ಅಕಾಲದಲ್ಲಿಯೂ ಚಾಲಕರು ಸೇವೆಗೆ ಸಿದ್ಧರಾಗುತ್ತಾರೆ. ಆಸ್ಪತ್ರಗೆ ಒಯ್ದು ವೈದ್ಯರ ಭೇಟಿಯ ವ್ಯವಸ್ಥೆಯಲ್ಲೂ ಸಹಕರಿಸುತ್ತಾರೆ. ಯಾವುದೇ ಸಮಯದಲ್ಲೂ ಚಾಲಕರು ಕಷ್ಟದಲ್ಲಿರುವವರನ್ನು ಕಾಪಾಡುವ ಸೇವಾ ಮನೋಭಾವ ಹೊಂದಿದವರಾಗಿರುತ್ತಾರೆ. ಸೇವೆಯಲ್ಲಿ ಯಾವುದೇ ತಾರತಮ್ಯ ತೋರಿಸದೆ, ನೆರವಿಗೆ ಸದಾ ಅಣಿಯಾಗಿರುವ ಚಾಲಕರ ಸೇವೆ ಮೌಲ್ಯಾತೀತ.

ನಾವು ಬಸ್ಸುಗಳಲ್ಲಿ ಪ್ರಯಾಣ ಮಾಡುತ್ತೇವೆ. ಊರಿಂದೂರಿಗೆ ಓಡಾಡುತ್ತೇವೆ. ನಮ್ಮನ್ನು ವಾಹನ ನಿಬಿಡ ರಸ್ತೆಯಲ್ಲಿ ಯಾವುದೇ ಒತ್ತಡಗಳಿದ್ದರೂ ಅವುಗಳನ್ನು ಬದಿಗಿರಿಸಿ ಉತ್ತಮವಾಗಿ ಗಾಡಿ ಓಡಿಸುತ್ತಾರೆ. ನಿಗದಿತ ಸ್ಥಳಕ್ಕೆ ಸಮಯಕ್ಕೆ ಸರಿಯಾಗಿ ತಲುಪಿಸುತ್ತಾರೆ. ನಾವು ಬಸ್‌ ಇಳಿಯುತ್ತೇವೆ. ನಮ್ಮನ್ನು ಆ ಊರಿಗೆ ತಲುಪಿಸಿದ ಚಾಲಕರನ್ನು ನಾವು ನೋಡಿಯೇ ಇರುವುದಿಲ್ಲ. ಚಾಲಕರೂ ನಮ್ಮನ್ನು ನೋಡಿರುವುದಿಲ್ಲ. ಹೀಗೆ ಪರಸ್ಪರ ನೋಡಿರಲಾರದ ಸಂದರ್ಭಗಳೇ ಅಧಿಕ. ಥ್ಯಾಂಕ್ಸ್‌ ಎಂಬುದನ್ನೂ ಹೇಳದ ನಮ್ಮನ್ನು ಬೇರೆ ಬೇರೆ ಊರಿಗೆ ತಲುಪಿಸುವ ಚಾಲಕರ ಸೇವೆ ಅನನ್ಯವಾದುದು, ನಿಸ್ವಾರ್ಥದಿಂದ ಕೂಡಿದುದು. ಆದುದರಿಂದ ಚಾಲಕ ವೃತ್ತಿಯು ಅತ್ಯಂತ ಪವಿತ್ರ. ನಾವು ಅವರನ್ನು ಗೌರವಿಸಬೇಕು.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** 


Ads on article

Advertise in articles 1

advertising articles 2

Advertise under the article