ಮಕ್ಕಳ ಕಥೆಗಳು - ಸಂಚಿಕೆ : 12
Saturday, February 15, 2025
Edit
ಮಕ್ಕಳ ಕಥೆಗಳು - ಸಂಚಿಕೆ : 12
ಸ್ವರಚಿತ ಕಥೆ : ಮಕ್ಕಳ ಜಗಲಿಯ ವಿದ್ಯಾರ್ಥಿಗಳು :
◾ ಸಾನಿಧ್ಯ , ಪ್ರಥಮ ಪಿ. ಯು. ಸಿ
◾ ತೇಜಸ್ವಿನಿ, 7ನೇ ತರಗತಿ
◾ ಭರತ್ ಬ ಮಜ್ಜಿಗುಡ್ಡ, 7ನೇ ತರಗತಿ
◾ ಸುಧನ್ವ ಜಿ ಭಟ್, 4ನೇ ತರಗತಿ
◾ ಕಿಂಜಲ್, 7ನೇ ತರಗತಿ
◾ ಪ್ರಾರ್ಥನಾ ಗೌಡ ಹೆಚ್ ಡಿ, 9ನೇ ತರಗತಿ
ಒಂದು ಊರಿನಲ್ಲಿ ರಾಘು ತನ್ನ ಮಗ ಆದಿತ್ಯನ ಜೊತೆ ವಾಸವಾಗಿದ್ದರು. ಅದೇ ಊರಿನಲ್ಲಿ ರಾಮ ತನ್ನ ಮಗ ರಾಜುವಿನ ಜೊತೆ ವಾಸವಾಗಿದ್ದರು. ರಾಘು ಬಡತನದ ಮನೆಯವನು. ರಾಮ ಶ್ರೀಮಂತನಾಗಿದ್ದನು. ಆದಿತ್ಯ ಮತ್ತು ರಾಜು ಊರಿನಲ್ಲಿರುವ ಒಂದೇ ಶಾಲೆಗೆ ಹೋಗುತ್ತಿದ್ದರು. ಆದಿತ್ಯ ಬಡವನಾಗಿದ್ದ ಕಾರಣ ಶಾಲೆಗೆ ನಡೆದುಕೊಂಡು ಹೋಗುತ್ತಿದ್ದ. ರಾಮ ಸೈಕಲ್ ನಲ್ಲಿ ಹೋಗುತ್ತಿದ್ದ. ರಾಜುವಿನ ಗೆಳೆಯರು ಆದಿತ್ಯನಿಗೆ ತಮಾಷೆ ಮಾಡಿದರು. ಏ... ತಮ್ಮ ನಿನ್ನಂತ ಬಡವರು ಈ ಶಾಲೆಗೆ ಬರುವುದಿಲ್ಲ. ಎಂದು ತಮಾಷೆ ಮಾಡಿದರು. ಆದಿತ್ಯ ತಲೆತಗ್ಗಿಸಿ ತನ್ನ ತರಗತಿ ಕೊಠಡಿಗೆ ಹೋಗಿ ಶಿಕ್ಷಣದ ಕಡೆಗೆ ಗಮನ ಕೊಟ್ಟನು. ಸಂಜೆ ಆದಿತ್ಯ ತನ್ನ ಮನೆಗೆ ಹೋಗಿ ಅಪ್ಪನ ಬಳಿ ಹೇಳಿದ. ನನಗೆ ಶಾಲೆಯಲ್ಲಿ ಗೆಳೆಯರು ತಮಾಷೆ ಮಾಡುತ್ತಾರೆ. ನನಗೆ ಸೈಕಲ್ ಬೇಕು. ಎಂದು ಹಠ ಹಿಡಿದ. ಆಗ ಅವನ ಅಮ್ಮ ಅಲ್ಲಿಗೆ ಬಂದರು. ಮಗನೇ ನಾವು ಬಡವರು ಅವರು ಶ್ರೀಮಂತರು. ನಮ್ಮಲ್ಲಿ ಅಷ್ಟು ಹಣ ಇಲ್ಲ ಎಂದಳು. ಅವನು ಅಪ್ಪ-ಅಮ್ಮನ ಮಾತು ಕೇಳಲಿಲ್ಲ. ಆದಿತ್ಯ ನನಗೆ ಸೈಕಲ್ ತೆಗೆದು ಕೊಳ್ಳದಿದ್ದರೆ ನಾನು ನಾಳೆಯಿಂದ ಶಾಲೆಗೆ ಹೋಗುವುದಿಲ್ಲ. ನನಗೆ ಸೈಕಲ್ ತೆಗೆದುಕೊಟ್ಟರೆ ಮಾತ್ರ ನಾನು ಶಾಲೆಗೆ ಹೋಗುತ್ತೇನೆ. ಎಂದು ಹೇಳಿ ಹೊರಟುಹೋದನು.
ಅಪ್ಪ-ಅಮ್ಮ ಒಂದು ತೀರ್ಮಾನಕ್ಕೆ ಬಂದರು .
ಇರುವುದು ಒಬ್ಬನೇ ಮಗ ಅವನು ಕೇಳಿದನ್ನು ಕೊಡದಿದ್ದರೆ ನಾವು ಏಕೆ ಬದುಕಬೇಕು ಎಂದರು. ಆಯ್ತು ತೆಗೆದುಕೊಡೋಣ. ಹಣ ಇಲ್ಲದ ಕಾರಣ ನನ್ನ ಬಳಿ ಇರುವ ಈ ಎರಡು ಬಳೆಯನ್ನು ಕೊಡುತ್ತೇನೆ. ಅದನ್ನು ಮಾರಿ ಬಂದ ಹಣ ದಿಂದ ಸೈಕಲ್ ತೆಗೆದು ಕೊಡಿ. ಈ ಮಾತನ್ನು ಕೇಳಿದ ತನ್ನ ಮಗ ಆದಿತ್ಯ ಕಣ್ಣೀರು ಸುರಿಸುತ್ತ ತನ್ನ ಅಪ್ಪ ಅಮ್ಮನ ಕಾಲಿಗೆ ಬಿದ್ದು ಕ್ಷಮೆ ಕೇಳಿದ. ಅಪ್ಪ ನಾವು ಇಷ್ಟು ಬಡವರು ಎಂದು ಗೊತ್ತಿರಲಿಲ್ಲ. ಇನ್ನು ಮುಂದೆ ಎಂದಿಗೂ ಸೈಕಲ್ ಕೇಳುವುದಿಲ್ಲ ಎಂದನು. ಅಪ್ಪನಿಗೆ ತುಂಬಾ ಖುಷಿಯಾಯಿತು. ಮಗನೇ ನಿನಗೆ ವಿದ್ಯಾಭ್ಯಾಸಕ್ಕೆ ಬೇಕಾದ್ದನ್ನೆಲ್ಲಾ ತಪ್ಪದೆ ತೆಗೆದುಕೊಡುತ್ತೇನೆ. ನೀನು ವಿದ್ಯಾಭ್ಯಾಸದ ಕಡೆ ಗಮನ ಕೊಡು. ನೀನು ಕಲಿತು ದೊಡ್ಡವನಾಗಿ ನಿನ್ನ ಕಾಲ ಮೇಲೆ ನಿಂತು ಕೊಳ್ಳಬೇಕು. "ಆಯ್ತು ಅಪ್ಪ ನೀವು ಹಾಕಿದ ಗೆರೆ ಎಂದಿಗೂ ತಪ್ಪಲಾರೆ." ಎಂದನು.
ಅವತ್ತಿನಿಂದ ಅವನು ಚೆನ್ನಾಗಿ ಕಲಿತನು. ಅವನಿಗೆ ದೊಡ್ಡ ಕೆಲಸ ಸಿಕ್ಕಿತು. ಅವನು ಸಂಪಾದಿಸಿದ ಹಣದಿಂದ ದೊಡ್ಡಮನೆ ಕಟ್ಟಿಸಿದನು. ಅವನ ಅಪ್ಪ ಅಮ್ಮ ಅವನಿಗೆ ಮದುವೆ ಮಾಡಿದರು. ಮತ್ತೆ ಅಪ್ಪ ಅಮ್ಮ ಮತ್ತು ಹೆಂಡತಿಯ ಜೊತೆ ಖುಷಿಖುಷಿಯಾಗಿ ಜೀವನ ನಡೆಸಿದರು....!
ನೀತಿ : ಬಡವನಾದವನು ಶ್ರಮಪಟ್ಟರೆ ಶ್ರೀಮಂತನಾಗಬಹುದು.
ಪ್ರಥಮ ಪಿ. ಯು. ಸಿ
ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ
ಕಾಲೇಜು ರಾಮಕುಂಜ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ಒಂದು ಕಾಡಿನಲ್ಲಿ ಬಗೆ ಬಗೆಯ ಪ್ರಾಣಿ, ಪಕ್ಷಿಗಳು ಅನ್ಯೋನ್ಯವಾಗಿ ವಾಸಿಸುತ್ತಿದ್ದವು. ಒಂದು ದಿನ ಬೇರೆ ಕಾಡಿನ ಸಿಂಹವೊಂದು ತನ್ನ ಸೈನ್ಯದೊಂದಿಗೆ ಬೇಟೆಗಾಗಿ ಕಾಡಿಗೆ ಬಂದಿತು. ಕಾಡಿನಲ್ಲಿ ಸದ್ದು ಗದ್ದಲ ಕೇಳಿ ಎಲ್ಲಾ ಪ್ರಾಣಿಗಳು ಭಯದಿಂದ ನಡುಗಿದವು. ಆನೆಯೊಂದು ನೀರು ಕುಡಿಯಲು ಹೋಗುತ್ತಿರುವಾಗ ಏನಿದು ಸದ್ದು? ಯಾರು ಬಂದಿರಬಹುದು? ಎಂದೆಲ್ಲಾ ಯೋಚಿಸಿತು. ಆಗ ಸಿಂಹ ಮತ್ತು ಅದರ ಸೈನ್ಯ ಕಣ್ಣಿಗೆ ಬಿದ್ದಿತು. ಇದನ್ನು ಕಂಡು ಅಲ್ಲಿಯೇ ಇದ್ದ ಜಿಂಕೆ ಅಣ್ಣನನ್ನು ಕರೆದು ಜಿಂಕೆ ಅಣ್ಣಾ.. ಜಿಂಕೆ ಅಣ್ಣಾ ಬೇಗ ಓಡಿ ಬಾ ಇಲ್ಲಿ ಎಂದು ಕಿರುಚಿತು. ಆಗ ಜಿಂಕೆಯು ಓಡಿ ಬಂದು ಏನಾಯ್ತು ಆನೆ ಅಣ್ಣಾ? ಎಂದು ಗಾಬರಿಯಿಂದ ಕೇಳಿತು. ಆಗ ಆನೆಯು “ನಮ್ಮ ಕಾಡಿಗೆ ಬೇರೆ ಕಾಡಿನ ಸಿಂಹ ಬಂದಿದ್ದಾನೆ. ಇದರ ಜೊತೆಗೆ ಸಿಂಹದ ದೊಡ್ಡ ಸೈನ್ಯವೂ ಬಂದಿದೆ” ಎಂದಿತು. ಹೌದಾ! ಹಾಗಾದರೆ ಈ ವಿಷಯವನ್ನು ನಮ್ಮ ಸಿಂಹ ರಾಜನಿಗೆ ಹೇಳಬೇಕು, ಎಂದು ಇಬ್ಬರೂ ಓಡತೊಡಗಿದರು. ನಂತರ ಸಿಂಹದ ಗುಹೆಯ ಬಳಿ ತೆರಳಿ ಆನೆಯು “ಮಹಾರಾಜ ನಿನಗೆ ಪ್ರಣಾಮಗಳು, ಇಲ್ಲೊಂದು ಅನಾಹುತವಾಗಿದೆ” ಎಂದಿತು. ಆಗ ಸಿಂಹ ಏನದು ಅನಾಹುತ? ಎಂದಿತು. ಆಗ ಜಿಂಕೆಯು, “ಮಹಾರಾಜ, ನೀನು ನಮ್ಮ ಕಾಡಿನ ರಾಜ, ಆದರೆ ಈಗ ಪಕ್ಕದ ಕಾಡಿನಿಂದ ಇನ್ನೊಂದು ಸಿಂಹ ಮತ್ತು ಅದರ ಸೈನ್ಯ ನಮ್ಮ ಕಾಡಿಗೆ ದಾಳಿ ಇಟ್ಟಿದೆ. ಇನ್ನೇನು ಅಪಾಯವಾಗುವುದೋ ಎಂದು ನಮಗೆ ಭಯವಾಗುತ್ತಿದೆ” ಎಂದಿತು. ಅಷ್ಟರಲ್ಲಿ ಪಕ್ಕದ ಕಾಡಿನ ಸಿಂಹ ಮತ್ತು ಅದರ ಸೈನ್ಯವೂ ಬಂದಿತು. ಇನ್ನೊಂದು ಸಿಂಹವು ನೇರವಾಗಿ ಸಿಂಹದ ಬಳಿ ಬಂದು ಮಹಾರಾಜ” ಯಾವತ್ತಿದ್ದರೂ ನೀನೇ ಈ ಕಾಡಿನ ರಾಜ. ನಮ್ಮ ಕಾಡಿಗೆ ಕಾಳ್ಗಿಚ್ಚು ಹಬ್ಬಿ ಕಾಡಿಗೆ ಕಾಡೇ ನಾಶವಾಗಿ ಹೋಯಿತು. ಈಗ ತಿನ್ನಲು ಆಹಾರವೂ ಇಲ್ಲ, ನೀರೂ ಇಲ್ಲ. ಎಲ್ಲರೂ ಉಪವಾಸದಿಂದ ಸಾಯುತ್ತಿದ್ದಾರೆ. ಹೀಗಾಗಿ ನಮಗೆಲ್ಲರಿಗೂ ನಿಮ್ಮ ಕಾಡಿನಲ್ಲಿ ಆಶ್ರಯ ಕೊಟ್ಟು ಕಾಪಾಡ ಬೇಕು ಎಂದು ಬೇಡಿ ಕೊಂಡಿತು. ಆಗ ಕಾಡಿನ ರಾಜನು ಸರಿ, ಕಾಡು ನಮ್ಮೆಲ್ಲರ ಆಶ್ರಯತಾಣ. ನಾನು, ನೀನು ಎನ್ನುವ ಮೇಲರಿಮೆ ಇಲ್ಲದೆ ಎಲ್ಲರೂ ಸಹಬಾಳ್ವೆಯಿಂದ ಬಾಳೋಣ ಎಂದಿತು. ಅಂದಿನಿಂದ ಎಲ್ಲಾ ಪ್ರಾಣಿಗಳು ಒಗ್ಗಟ್ಟಿನಿಂದ ಬಾಳ್ವೆ ನಡೆಸಿದವು.
ನೀತಿ: ಕೂಡಿ ಬಾಳಿದರೆ ಅದೇ ಸ್ವರ್ಗ
7ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪದ್ಮನೂರು
ಮಂಗಳೂರು ಉತ್ತರ, ದಕ್ಷಿಣ ಕನ್ನಡ ಜಿಲ್ಲೆ
******************************************
ಒಂದು ಊರಲ್ಲಿ ಒಬ್ಬ ತಾಯಿ ಇದ್ದಳು. ಅವಳಿಗೆ ನಾಲ್ಕು ಜನ ಮಕ್ಕಳ್ಳಿದ್ದರು. ಆ ನಾಲ್ಕು ಜನರು ಒಂದೇ ತರ ಇದ್ದರು (ಅವಳಿ ಜವಳಿ) ಆ ತಾಯಿ ತಪಸ್ಸು ಮಾಡಿ ಈ ನಾಲ್ಕು ಮಕ್ಕಳನ್ನು ಪಡೆದಿದ್ದಳು. ಆ ನಾಲ್ಕು ಜನರಿಗೆ ಒಂದೊಂದು ವಿಶೇಷ ಶಕ್ತಿ ಇತ್ತು. ಆ ಶಕ್ತಿ ಏನೆಂದರೆ, ಒಬ್ಬನು ಎಷ್ಟೇ ನೀರಿದ್ದರೂ ಅಷ್ಟು ನೀರನ್ನು 2 ನಿಮಿಷಗಳ ಕಾಲ ಬಾಯೊಳಗೆ ಹಿಡಿದಿಡುತ್ತಿದ್ದನು. ಇನ್ನೊಬ್ಬನು ಎಷ್ಟೇ ಆಳವಾದ ನೀರಿದ್ದರೂ ಅದರಲ್ಲಿ ಮುಳುಗುತ್ತಿರಲಿಲ್ಲ. ಏಕೆಂದರೆ ಅವನ ಕಾಲು ಉದ್ಧವಾಗಿದ್ದವು. ಮೂರನೆಯವನು ಎಷ್ಟೇ ಹೊತ್ತು ಬೆಂಕಿಯಲ್ಲಿ ಇದ್ದರೂ ಅವನಿಗೆ ಏನು ಆಗುತ್ತಿರಲಿಲ್ಲ. ಕೊನೆಯ ಮಗ ಎಷ್ಟೇ ಆಳವಾದ ಭೂಮಿಯೊಳಗೇ ಮುಚ್ಚಿದರು ಅವನು ಸುಮಾರು 1 ಗಂಟೆಯವರೆಗೂ ಉಸಿರನ್ನು ಹಿಡಿದಿಟ್ಟುಕೊಳ್ಳುತ್ತಿದ್ದ.
ಒಂದು ದಿನ ದೊಡ್ಡವನು ತನ್ನ ಗೆಳೆಯರ ಜೊತೆ ಮೀನು ಹಿಡಿಯಲು ಹೋಗಿದ್ದನು. ಅವನ ವಿಶೇಷ ಶಕ್ತಿಯ ಬಗ್ಗೆ ಅವನ ಗೆಳೆಯರಿಗೆ ತಿಳಿಸುತ್ತಾನೆ. ಆಗ ಅವನು ಅವನ ಗೆಳೆಯರಿಗೆ ಹೀಗೆಂದು ಹೇಳುತ್ತಾನೆ. "ನಾನು ಸಮುದ್ರದ ನೀರನ್ನು ಎರಡು ನಿಮಿಷಗಳ ಕಾಲ ಹಿಡಿದಿಟ್ಟುಕೊಳ್ಳುತ್ತೇನೆ ಆದರೆ ಮೀನುಗಳನ್ನು ನೆಲದಲ್ಲಿ ಬಿಡುತ್ತೇನೆ" ಎಂದು ಹೇಳುತ್ತಾನೆ. ಅವನ ಗೆಳೆಯರು ಮೀನುಗಳನ್ನು ಹಿಡಿಯುತ್ತಾ ಮುಂದಕ್ಕೆ ಹೋದರು ಆಗ ಬಾಯಿ ಒಳಗೆ ಇದ್ದ ನೀರಿನ ಪ್ರಮಾಣವನ್ನು ತಡೆದುಕೊಳ್ಳಲಾರದೆ ಅವನು ನೀರನ್ನು ಹೊರಬಿಡುತ್ತಾನೆ. ಆಗ ಅವನು ಗೆಳೆಯರು ನೀರಿನಲ್ಲಿ ಬಿದ್ದು ಸತ್ತು ಹೋದರು. ಈ ವಿಷಯ ತಿಳಿದ ಆ ಊರಿನ ಪಟೇಲರು ಅವನನ್ನು ಅದೇ ರೀತಿ ಸಾಯಿಸಬೇಕೆಂದು ಹೇಳಿದರು. ಆ ವಿಷಯ ತಿಳಿದ ತನ್ನ ತಾಯಿ ತನ್ನ ಎರಡನೇ ಮಗನನ್ನು ಕಳಿಸಲು ತೀರ್ಮಾನಿಸಿದಳು. ಮಾರನೆಯ ದಿನ ತನ್ನ ಎರಡನೆಯ ಮಗನನ್ನು ಕಳಿಸಿದಳು. ಆಗ ಪಟೇಲರು ಅವನನ್ನು ಸಮುದ್ರದಲ್ಲಿ ಬೀಳಿಸಲು ತನ್ನ ಆಳುಗಳಿಗೆ ತಿಳಿಸಿದನು. ಅದರಂತೆ ಆಳುಗಳು ಅವನನ್ನು ಬೀಳಿಸಿದರು, ಆಗ ಅವನು ತನ್ನ ವಿಶೇಷ ಶಕ್ತಿಯಿಂದ ಉಪಯೋಗಿಸಿ ಊರಿಗೆ ಹೋದನು. ಈ ವಿಷಯ ತಿಳಿದ ಪಟೇಲರು ಅವನನ್ನು ಬೆಂಕಿಯಲ್ಲಿ ಸುಡಬೇಕೆಂದು ತಿಳಿಸಿದರು. ಈ ವಿಷಯ ತಿಳಿದ ತಾಯಿ ತನ್ನ ಮೂರನೇ ಮಗನನ್ನು ಕಳುಹಿಸಿದಳು. ಅದರಂತೆ ಅವನು ಬೆಂಕಿ ಒಳಗೆ ಬಿಟ್ಟು ಸ್ವಲ್ಪ ಹೊತ್ತು ನಿಂತು ಹೋದರು ಮತ್ತೆ ಅವನು ಸುರಕ್ಷಿತವಾಗಿ ತನ್ನ ತಾಯಿಯ ಬಳಿಗೆ ಹೋದನು. ಈ ವಿಷಯ ತಿಳಿದ ಪಟೇಲರು ಈ ಕೊನೆಗೆ ಇವನನ್ನು ಮಣ್ಣಿನೊಳಗೆ ಮುಚ್ಚಬೇಕೆಂದು ತೀರ್ಮಾನಿಸಿದರು. ಅದರಂತೆಯೇ ಮಣ್ಣಿನಲ್ಲಿ ಅವನನ್ನು ಮುಚ್ಚಿ ಅರ್ಧ ಗಂಟೆ ಅಲ್ಲಿ ನಿಂತು ಆನಂತರ ಅವರು ಊರಿಗೆ ಹೋದರು. ಅವನು ಅವನ ಶಕ್ತಿಯನ್ನು ಬಳಸಿ ಒಂದು ಗಂಟೆಗಳ ನಂತರ ಮಣ್ಣನ್ನು ತೆಗೆದು ಹಾಕಿ ಅವನು ಮತ್ತೆ ಅವನ ತಾಯಿ ಬಳಿ ಹೋದನು. ಇಷ್ಟೆಲ್ಲಾ ಆದ ನಂತರ ಅವಳ ತಾಯಿ ಈ ಊರನ್ನು ಬಿಟ್ಟು ನಾವು ಬೇರೆ ಕಡೆ ಹೋಗೋಣ ಎಂದು ತೀರ್ಮಾನಿಸಿದಳು.
7ನೇ ತರಗತಿ
ಸರ್ಕಾರಿ ಮಾದರಿ ಹಿರಿಯ
ಪ್ರಾಥಮಿಕ ಶಾಲೆ ಅಂತೂರು, ಬೆಂತೂರು
ಗದಗ್ ತಾಲೂಕು ಮತ್ತು ಜಿಲ್ಲೆ
******************************************
ಒಂದು ದೊಡ್ಡ ಕಾಡು, ಆ ಕಾಡಿನಲ್ಲಿ ಒಂದು ಮಂಗನ ತಂಡವಿತ್ತು. ಆ ತಂಡದಲಿ ಹಿರಿಯ ಮಂಗವಿತ್ತು. ಆ ಹಿರಿಯ ಮಂಗ ಹೇಳಿದಂತೆ ತಂಡದ ಎಲ್ಲಾ ಮಂಗಗಳು ಕೇಳುತ್ತಿದರು. ಯಾವ ಕಾಲದಲ್ಲಿ ಯಾವ ದಿಕ್ಕಿನಲ್ಲಿ ಆಹಾರ ಸಿಗುತ್ತದೆ ಮಳೆಗಾಲಾದಲ್ಲಿ ಅನುಕೂಲವಾದ ಸ್ಥಳ ಯಾವುದು? ಬೇಸಿಗೆ ಕಾಲದಲ್ಲಿ ಆಹಾರ ಹೇಗೆ ಹುಡುಕುವುದು? ಎಲ್ಲವೂ ಅದಕ್ಕೆ ತಿಳಿದಿತ್ತು. ಕೆಲವು ಹೆಣ್ಣು ಮಂಗಗಳು ನಡು ಕಾಡಿನಲ್ಲಿ ಮರಿಯನ್ನು ಬೆಳೆಸುವ ಕಾರ್ಯದಲ್ಲಿ ಇರುತ್ತಿದ್ದವು, ಅವುಗಳಿಗಾಗಿ ಬೇರೆ ಮಂಗಗಳು ಹತ್ತಿರದಲ್ಲಿರುವ ಆಹಾರವನ್ನು ಬಿಟ್ಟು ಕಾಡಿಗೆ ಆಹಾರ ಹುಡುಕಲು ಉಳಿದವು ಹೋಗುತ್ತಿದ್ದವು. ಹೀಗೆ ಒಂದು ದಿನ ಹಿರಿಯ ಮಂಗ ಸತ್ತುಹೊಯಿತು. ಆಗ ಎಲ್ಲಾ ಮಂಗಗಳು ಕಂಗಾಲಾದವು. ಚಿಕ್ಕ ಮಂಗಗಳಿಗೆ ಯುವಕ ಮಂಗಗಳು ಹೊಡೆಯುವುದು ತೊಂದರೆ ಕೊಡುವುದು ಹೀಗೆ ಹಿಂಸೆ ಶುರುವಾಯಿತು. ದೂರ ಆಹಾರ ಹುಡುಕದೇ ಹತ್ತಿರವಿರುವ ಆಹಾರವನ್ನು ತಿಂದು ಮುಗಿಸಿದವು, ಈಗ ಹೆಣ್ಣು ಹಾಗೂ ಮರಿ ಮಂಗಗಳಿಗೆ ಆಹಾರ ದೊರೆಯದಂತಾಯಿತು. ಈಗ ಹೆಣ್ಣು ಮಂಗಗಳು ಮರಿಗಳನ್ನು ಹೊತ್ತುಕೊಂಡು ದೂರ ಪ್ರಯಾಣ ಪ್ರಾರಂಬಿಸಿದವು. ಯುವಕ ಮಂಗಗಳು ಗುಂಪು ಕಟ್ಟಿ ಹೊಡೆದಾಡಲು ಪ್ರಾರಂಬಿಸಿದವು. ಕೆಲವು ಮಂಗ ಹೊಡೆದಾಟದಲ್ಲಿ ಸತ್ತು ಹೋದವು. ಕೆಲವು ಮಂಗಗಳು ಕೈ ಕಾಲುಗಳನ್ನು ಕಳೆದುಕೊಂಡವು. ಸೋಮಾರಿತನದಿಂದ ಆಹಾರ ಹುಡುಕದೇ ಹಸಿವಾದಾಗ ಸಿಕ್ಕಿದ್ದನ್ನು ತಿಂದು ರೋಗ ಪೀಡಿತರಾದವು. ಗುಂಪು ಚದುರಿ ಬೇರೆ ಪ್ರಾಣಿಗಳು ಪಕ್ಷಿಗಳು ಸಿಕ್ಕ ಸಿಕ್ಕ ಮಂಗಗಳನ್ನು ಬೇಟೆಯಾಡಿ ತಿಂದು ಮುಗಿಸಿದವು. ಕೊನೆಯಲ್ಲಿ ಕೆಲವು ಮಂಗಗಳು ಮಾತ್ರ ಉಳಿದುಕೊಂಡವು. ಈಗ ಯೊಚಿಸಿದವು. ನಮ್ಮ ಅಜ್ಜ ಇದ್ದಾಗ ಎಷ್ಟು ಚೆನ್ನಾಗಿತ್ತು. ಈಗ ನಮಗೆ ಹಿರಿಯರ ಮಾರ್ಗದರ್ಶನವಿಲ್ಲ, ನಾಯಕನಿಲ್ಲ, ಗುಂಪಿಗೆ ಯಜಮಾನನಿಲ್ಲ. ತಪ್ಪಿದರೆ ತಿದ್ದೋರಿಲ್ಲ, ದೈರ್ಯ ಹೇಳೋರಿಲ್ಲ. ಹಾಗಾಗಿ ನಮ್ಮ ಸಂತತಿ ವಿನಾಶದಂಚಿನಲ್ಲಿದೆ. ಇನ್ನು ನಮ್ಮಲ್ಲಿ ಯಾರಾದರೂ ಒಬ್ಬ ನಾಯಕ ಬೇಕು ಎಂದು ಚರ್ಚಿಸಿದವು. ಆಗ ಹಿರಿಯ ಮಂಗನ ಮೊಮ್ಮಗ ಯಾವಾಗಲೂ ಚುರುಕಿದ್ದಾತ, ನ್ಯಾಯಾನೀತಿ ಅಜ್ದನಿಂದಲೇ ಬಂದಿರಬೇಕು ಎಂಬಂತಿದ್ದ ಮಂಗವೊಂದಿತ್ತು. ಅವನನ್ನು ಎಲ್ಲಾ ಮಂಗಗಳು ಸೇರಿ ಆಯ್ಕೆಮಾಡಿದವು. ಅದನ್ನು ನಾಯಕನನ್ನಾಗಿ ಮಾಡಿದವು.
ನಂತರ ಆ ಮಂಗಗಳ ಗುಂಪು ಒಟ್ಟಾಗಿ ಸೇರಿ ಸಂತೋಷವಾದ ಜೀವನ ನಡೆಸಿದವು.
4ನೇ ತರಗತಿ
ಶ್ರೀ ಗುರುದೇವ ವಿದ್ಯಾಪೀಠ ಆಂಗ್ಲ
ಮಾದ್ಯಮ ಶಾಲೆ ಒಡಿಯೂರು,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ಎಲ್ಲರಿಗೂ ಕನಸು ಬೀಳುವುದು ಸಹಜ. ಆದರೆ ಕೆಲವು ಕನಸುಗಳು ಜೀವನಪೂರ್ತಿ ನೆನಪಿರುತ್ತದೆ. ಅದೂ ಕೆಲವು ಕೆಟ್ಟದ್ದಾಗಿದ್ದರೆ ಕೆಲವು ತುಂಬ ನ ಖುಷಿಯದಾಗಿರುತ್ತದೆ. ಈ ಕಥೆಯೂ ಒಂದು ಕನಸಿನ ಬಗ್ಗೆ. ಆಶಾಳ ಕನಸು.
ಆಶಾ 7ನೇ ತರಗತಿ ವಿದ್ಯಾರ್ಥಿನಿ. ಹೀಗೆ ಒಂದು ರಾತ್ರಿ ಅವಳು, ಅವಳ ಅಮ್ಮ, ಅಪ್ಪ ಹಾಗೂ ತಮ್ಮ ರಾಜ ರಾಣಿ ಕಳ್ಳ ಪೊಲೀಸ್ ಆಟ ಆಡಿ ದೀರ್ಘ ನಿದ್ರೆಯಲ್ಲಿ ಮಲಗಿದಳು. ಅವಳು ದೀರ್ಘ ನಿದ್ರೆಯಲ್ಲಿ "ಕನಸಿನ ಲೋಕ" ಕ್ಕೆ ಹೋದಳು. ಕನಸಿನಲ್ಲಿ ಅವಳು ಒಂದು ರಾಜ್ಯದ ರಾಣಿ ಆಗಿದ್ದಳು. ಆ ರಾಜ್ಯದಲ್ಲಿ ತುಂಬಾ ದೂರುಗಳು ಬರುತ್ತಿದ್ದವು. ಅವಳು ಎಲ್ಲಾ ದೂರುಗಳಿಗೆ ಪರಿಹಾರವನ್ನು ನೀಡಿದಳು. ಒಂದು ದಿನ ರಾಜ್ಯದ ಎಲ್ಲಾ ಜನರು ಒಂದು ದೂರನ್ನು ಹೇಳಿದರು "ಮಹಾರಾಣಿಯವರೇ ನಮಗೆ ಒಂದು ರಾಜ್ಯದ ರಾಜ ನಮಗೆ ತುಂಬ ತೊಂದರೆ ಕೊಡುತ್ತಾನೆ" ಎಂದು ಹೇಳಿದರು. ಇದೆಲ್ಲ ಕೇಳಿದ ಆಶಾ ಆ ರಾಜನ ಬಳಿಗೆ ಮಂತ್ರಿಯ ಸಹಕಾರದಿಂದ ಆ ರಾಜನಿಗೆ ಸಂದೇಶವನ್ನು ಕಳುಹಿಸಿದಳು. ನಾಲ್ಕು- ಐದು ಗಂಟೆಗಳ ನಂತರ ರಾಣಿಗೆ ಉತ್ತರವಾಗಿ ಸಂದೇಶ ಬಂದಿತು. ಅದರಲ್ಲಿ "ನಾನು ನಿಮ್ಮ ಪಕ್ಕದ ರಾಜ್ಯದ ರಾಜ. ನನಗೆ ಯಾರಿಗಾದರೂ ತೊಂದರೆ ಕೊಡುವುದು ತುಂಬಾ ಇಷ್ಟ. ನಮ್ಮ ರಾಜ್ಯದವರಿಗೆ ತೊಂದರೆ ಕೊಡಲು ಆಗುವುದಿಲ್ಲ ಹಾಗಾಗಿ ನಿಮ್ಮ ರಾಜ್ಯದಲ್ಲಿ ತೊಂದರೆ ಕೊಡುತ್ತಿದ್ದೇನೆ. ನಿಮಗೆ ಈ ವಿಷಯದಿಂದಾಗಿ ತೊಂದರೆಯಾದರೆ ನನ್ನ ಬಳಿ ಯುದ್ದ ಮಾಡಬೇಕು. ನಾನು ಸೋತರೆ, ನಿಮಗೆ ತೊಂದರೆ ಕೊಡುವುದಿಲ್ಲ. ನೀವು ಸೋತರೆ, ನಾನು ತೊಂದರೆ ಕೊಡುವುದನ್ನು ನಿಲ್ಲಿಸುವುದಿಲ್ಲ.
ನಾಳೆ : ಮರು ಭೂಮಿಯಲ್ಲಿ ಯುದ್ಧ'' ಎಂದು ಬರೆದಿತ್ತು.
ಇದನ್ನು ಓದಿದ ಆಶಾ ನಾಳೆ ಯುದ್ಧಕ್ಕೆ ಹೋದಳು. ಅಲ್ಲಿ ಯುದ್ಧ ಮಾಡಿ ಯುದ್ಧದಲ್ಲಿ ಗೆದ್ದಳು. ಗೆದ್ದು ನಂತರ ಪುನಃ ರಾಜ್ಯಕ್ಕೆ ಹಿಂದಿರುಗಿದಳು. ಅಂದಿನಿಂದ ಆ ರಾಜ ಯಾರಿಗೂ ತೊಂದರೆ ಕೊಡಲಿಲ್ಲ. ಎಲ್ಲರಿಗೂ ವಿಷಯ ತಿಳಿದು ಆಸ್ಥಾನಕ್ಕೆ ಹೋಗಿ "ಆಶಾ ರಾಣಿ ಗೆ ಜಯವಾಗಲಿ" ಎಂದು ಅವರು ಜಯಕಾರ ಮಾಡಿದರು.
ಅಷ್ಟರಲ್ಲಿ "ಆಶಾ ಮಗ ಎದ್ದೇಳು " ಎಂದು ಅಮ್ಮ ಆಶಾಳನ್ನು ಎಬ್ಬಿಸಿದಳು. ಆಶಾ "ಇದು ಕನಸೇ" ಎಂದು ಎದ್ದು ಕುಳಿತಳು. ಅವಳ ಅಮ್ಮ ಕೇಳಿದರು "ಏನಾಯ್ತು" ಆಗ ಇಡೀ ಕಥೆಯನ್ನು ಅಮ್ಮನಿಗೆ ವಿವರವಾಗಿ ಹೇಳಿದಳು. ಅಮ್ಮ "ನಿನ್ನೆ ನಾವು ರಾಜ ರಾಣಿ ಕಳ್ಳ ಪೋಲಿಸ್ ಆಟ ಆಡಿ ಮಲಗಿದ್ವಿ ಅಲ್ಲವೇ, ಅದರಲ್ಲಿಯೂ ನಿನಗೆ ರಾಣಿ ಎಂದು ಬರೆದ ಚೀಟಿ ಸಿಕ್ಕಿದ್ದಲ್ಲವೇ" ಎಂದು ಹೇಳಿ ಶಾಲೆಗೆ ತಯಾರಾಗಲು ಹೇಳಿದರು. ಆಶಾ ಶಾಲೆಗೆ ಹೋಗಿ ತನ್ನ ಗೆಳೆಯ ಗೆಳತಿಯರಿಗೆ ಕಥೆಯನ್ನು ಹೇಳಿ ತುಂಬಾ ನಕ್ಕಳು. ಕಥೆ ಕೇಳಿದ ಮಕ್ಕಳಿಗೂ ಸಂತೋಷವಾಯಿತು.
7ನೇ ತರಗತಿ
ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ
ಶಾಲೆ ಬಡಗ ಎಕ್ಕಾರು
ಮಂಗಳೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ಒಂದು ಕಾಡು ಅಂಚಿನ ಗ್ರಾಮದಲ್ಲಿ ಬೇಟೆಗಾರರು ವಾಸವಾಗಿದ್ದರು. ಅವ್ರೆಲ್ಲ ಆಹಾರಕ್ಕಾಗಿ ಕಾಡು ಪ್ರಾಣಿಗಳನ್ನು ಬೇಟೆಯಾಡಿಯೇ ಜೀವಿಸುತ್ತಿದ್ದರು. ಹೀಗೆ ಜೀವನ ಮಾಡುತ್ತಿರಲು ಎಂದಿನಂತೆ ತಮ್ಮ ಬೇಟೆ ನಾಯಿಯೊಂದಿಗೆ ಬೇಟೆ ಆಡಲು ಕಾಡಿನ ಕಡೇ ಪ್ರಯಾಣ ಬೆಳೆಸುತ್ತಾರೆ. ಹಲವು ಗಂಟೆಗಳು ಕಾಡಿನಲ್ಲಿ ಅಲೆದಾಡಿದ ನಂತರ, ಒಂದು ಕಾಡುಕುರಿ ಇವರ ಕಣ್ಣಿಗೆ ಬೀಳುತ್ತೆ. ತಕ್ಷಣವೇ ಬೇಟೆಗಾರರು ತಮ್ಮ ನಾಯಿಗಳೊಂದಿಗೆ ಅದರ ಬೆನ್ನಟ್ಟುತ್ತಾರೆ, ಕಾಡುಕುರಿಯು ವೇಗವಾಗಿ ಓಡುತ್ತಾ ಒಂದು ದಟ್ಟ ಕಾಡಿನ ಪೊದೆಯೊಳಗೆ ನುಗ್ಗಿ ಬಿಡುತ್ತೆ. ತಕ್ಷಣವೇ ಬೇಟೆಗಾರರು ಆ ಕಾಡು ಪೊದೆಯನ್ನು ಸುತ್ತುವರಿದು ನೋಡಿದರೆ ಎಲ್ಲಿಯೂ ಕಾಡು ಕುರಿಯು ಕಾಣಿಸುವುದಿಲ್ಲ. ಆಗ ಬೇಟೆಗಾರರು ಆ ಕಾಡು ಪೊದೆಗೆ ಸುತ್ತಲೂ ಬೆಂಕಿ ಹಚ್ಚುತ್ತಾರೆ. ಕೆಲವು ನಿಮಿಷದಲ್ಲಿ ಆ ಪೊದೆ ಸುಟ್ಟು ಹೋಗುತ್ತೆ. ಅಲ್ಲೇ ಬೆಂಕಿಯಲ್ಲಿ ಸುಟ್ಟು ಬಿದ್ದಿದ್ದ ಕಾಡು ಕುರಿಯನ್ನು ಹೊತ್ತುಕೊಂಡು ಊರಿನ ಕಡೆಗೆ ಸಾಗುತ್ತಾರೆ. ಊರು ತಲುಪಿದ ನಂತರ ಮಾಂಸಕ್ಕಾಗಿ ಆ ಕಾಡುಕುರಿಯನ್ನು ಸ್ವಚ್ಛ ಮಾಡಿ, ಹೊಟ್ಟೆಯನ್ನು ಸಿಳುತ್ತಾರೆ. ಆಗ ಅದರ ಹೊಟ್ಟೆ ಯಲ್ಲಿ ಅನ್ನ ಇರುವುದು ಕಂಡು ಬರುತ್ತದೆ ಅವರಿಗೆ ಆಶ್ಚರ್ಯ ಇದೇನಿದು ಕಾಡು ಪ್ರಾಣಿಯಲ್ಲಿ ಅನ್ನವೆ ಎನ್ನುತ್ತಾ ಬೇಟೆಗಾರರು ಒಬ್ಬರಿಗೊಬ್ಬರು ಚರ್ಚೆ ಮಾಡುತ್ತಿರಲು ಆ ಕಡೆಯಿಂದ ಬೇಟೆಗಾರರಲ್ಲಿ ಒಬ್ಬ ಓಡಿ ಇವರತ್ತ ಬಂದು ನಮ್ಮ ನಾಯಿ ಕಾಣುತ್ತಿಲ್ಲ ಎಷ್ಟು ಹುಡುಕಿದರೂ ಸಿಗುತ್ತಿಲ್ಲ ನಾಯಿಯು ಕಾಡಿನಿಂದ ವಾಪಾಸು ಬಂದೆ ಇಲ್ಲ ಎನ್ನುತ್ತಾನೆ. ತಕ್ಷಣವೇ ಇವ್ರಿಗೆ ಎಲ್ಲವು ಅರ್ಥವಾಗಿ ಹೋಗಿತ್ತು. ಇದು ಕಾಡುಕುರಿಯಲ್ಲ ನಮ್ಮದೇ ನಾಯಿ ಆ ಪೊದೆಯಲ್ಲಿ ಸಿಕ್ಕು ಸತ್ತಿದೆ. ನಾವು ಅದನ್ನೇ ಕಾಡು ಕುರಿಯೆಂದು ತಪ್ಪು ತಿಳಿದು ಕೊಂಡಿದ್ದೀವಿ ಎಂದು. ತಮ್ಮ ನೆಚ್ಚಿನ ನಾಯಿ ಕಳೆದು ಕೊಂಡು ಎಲ್ಲಾ ಬೇಟೆಗಾರರು ಬೇಸರ ಮಾಡಿಕೊಳ್ಳುತ್ತಾರೆ.
9ನೇ ತರಗತಿ
ಮುರಾರ್ಜಿ ವಸತಿ ಶಾಲೆ, ಬ್ಯಾಕರವಳ್ಳಿ
ಸಕ್ಲೇಶಪುರ, ಹಾಸನ ಜಿಲ್ಲೆ.
******************************************
ಇದೊಂದು ಮರದ ಕಥೆ. ಈ ಹೆಸರಿನ ಮರ ನಾನಂತು ಮೊದಲು ಕೇಳಿದ್ದು. ಮನೆಯಲ್ಲಿ ಹಿರಿಯರು ಹೇಳುತ್ತಿದ್ದರು. ಅಚಾಂಗಿ ಮರದ ಹತ್ತಿರ ಹೋಗ ಬಾರದು ಅಲ್ಲಿ ದೆವ್ವಗಳು ಇರುತ್ತವೆ ಎಂದು. ನಾನಂತು ಆ ಮರ ನೋಡಿರಲಿಲ್ಲ. ಹೇಗಿರುತ್ತೆ ಎಂಬ ಕಲ್ಪನೆಯು ಇರಲಿಲ್ಲ. ಒಮ್ಮೆ ಊರಿನ ತೋಟಕ್ಕೆ ಹೋದಾಗ ಅದನ್ನು ನೋಡಲೇ ಬೇಕೆಂದು ನಾನು ಹಠ ಹಿಡಿದಾಗ ನಮ್ಮ ಅಪ್ಪ ಮನಸಿಲ್ಲದ ಮನಸಿಂದ ಆ ಮರ ತೋರಿಸಲು ಒಪ್ಪಿಗೆ ನೀಡಿದರು. ಆಚಾಂಗಿ ಮರ ನಮ್ಮೂರಲ್ಲಿ ಇರೋದೇ ಒಂದು ಮರ. ಅದು ಬಿಟ್ಟರೆ ಇನ್ನೆಲ್ಲಿಯೂ ಆ ಮರವನ್ನು ನಮ್ಮ ಅಪ್ಪನವರು ನೋಡಿಲ್ಲ ವಂತೆ. ಮದ್ಯಾಹ್ನದ ಬಿಸಿಲಿನ ಸಮಯದಲ್ಲಿ ಹಿಂದಿನ ಕಾಲದಿಂದಲೂ ಆ ಮರದ ಬಳಿಗೆ ಯಾರು ಹೋಗುತ್ತಿರಲಿಲ್ಲವಂತೆ. ಇನ್ನು ರಾತ್ರಿಯಂತೂ ಕನಸಿನ ಮಾತು. ಈಗಲೂ ನಾವು ಅಲ್ಲಿಗೆ ಹೋಗುವುದು ಮನೆಯವರಿಗೆ ಗೊತ್ತಿದ್ದರೆ ಬೈಗುಳ ಗ್ಯಾರಂಟಿ ಅನ್ನಿ. ಅಂದು ಮದ್ಯಾಹ್ನ ಆಗಿತ್ತು. ನಮ್ಮ ತೋಟದಿಂದ ಸೀದಾ ಆಚಾಂಗಿ ಮರದ ಕಡೆಗೆ ನಮ್ಮ ಪ್ರಯಾಣ. ಒಂದು ಅರ್ಧ ಗಂಟೆ ದಾರಿ ನಮ್ಮ ತೋಟದಿಂದ. ನನಗು ಸಲ್ಪ ಭಯವಿತ್ತು. ಆದರೂ ಕುತೂಹಲ ಬೇರೆ. ಹೀಗೆ ಅಪ್ಪನೊಂದಿಗೆ ಮಾತಾಡುತ್ತಾ ದಾರಿ ಸಾಗಿದ್ದೆ ಗೊತ್ತಾಗಲಿಲ್ಲ. ಕೊನೆಗೂ ಮರ ಇರುವ ಜಾಗ ತಲುಪಿ ಆಯ್ತು. ಕಾಫಿ-ತೋಟಗಳ ಮದ್ಯೆ ಮಣ್ಣಿನ ರಸ್ತೆ. ರಸ್ತೆ ಪಕ್ಕದ ತೋಟದ ಬೇಲಿಯಲ್ಲಿ ಮರವಿತ್ತು. ನಾನಂತು ಮರವನ್ನೇ ನೋಡುತ್ತಾ ನಿಂತು ಬಿಟ್ಟೆ. ಅದಕ್ಕೆ ಕಾರಣವು ಇತ್ತುಬಿಡಿ. ಆ ಮರ ಇರೋದೇ ಹಾಗೆ ಆಚಾಂಗಿ ಮರದ ಎಲೆ ಮಾವಿನ ಮರದ ಎಲೆ ಅಷ್ಟೇ ಅಗಲ ಉದ್ದ. ಎರಡ ರಿಂದ ಮೂರು ಆಡಿ ಉದ್ದ ಆ ಮರದ ಚಿಗುರು ಎಲೆ ನೋಡೋದೇ ಬಹಳ ಸುಂದರ. ನೀಲಿ, ಬಿಳಿ ಹಸಿರು ಮೂರು ಬಣ್ಣ ಮಿಸ್ರೀತಿ ನೋಡಲು ನವಿಲು ಒಂದು ಗರಿ ಬಿಚ್ಚಿ ದಂತೆ ತೋರುತ್ತಿತ್ತು. ಇನ್ನು ಹೂ ಕಡುಕೆಂಪು ಬಣ್ಣದ ದೊಡ್ಡ, ದೊಡ್ಡ ಗೊಂಚಲು ಅಂತಾ ಹೂವು ನಾನೆಲ್ಲೂ ನೋಡಿಲ್ಲ. ಅಲ್ಲಿ ಯಾವ ದೆವ್ವಾನು ಇರಲಿಲ್ಇರಲಿಲ್ಲ. ಅಷ್ಟರಲ್ಲಿ ಅಪ್ಪ ಹೋಗೋಣ ಎಂದಾಗ ನನಗೆ ಒಮ್ಮೆಲೇ ಎಚ್ಚರ ಆದಂತಾಗಿ ಹಮ್ ಎಂದು ವಾಪಾಸ್ ಬಂದ ದಾರಿ ಹಿಡಿದೆವು. ಬರುವ ದಾರಿಯಲ್ಲಿ ಇಷ್ಟು ಸುಂದರ ಮರದ ಬಳಿಗೆ ಯಾರು ಯಾಕೆ ಹೋಗಲ್ಲ ಎಂಬ ಯೋಚನೆಯಲ್ಲಿ ತೊಡಗಿದೆ. ಅಂತು ಮನಸಿನಲ್ಲಿ ನಾ ಕಂಡುಕೊಂಡ ಉತ್ತರ ಇದೆಲ್ಲಾ ಮೂಢನಂಬಿಕೆ....!!
9ನೇ ತರಗತಿ
ಮುರಾರ್ಜಿ ವಸತಿ ಶಾಲೆ, ಬ್ಯಾಕರವಳ್ಳಿ
ಸಕ್ಲೇಶಪುರ, ಹಾಸನ ಜಿಲ್ಲೆ.
******************************************