ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 65
Tuesday, January 28, 2025
Edit
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 65
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
ಪ್ರೀತಿಯ ಮಕ್ಕಳೇ... ಕಳೆದವಾರ ಅಲ್ಯೂಮಿನಿಯಂ ಹಾಳೆಯೂ ಹೇಗೆ ಪಾರದರ್ಶಕವಾಗಿರುತ್ತದೆ ಎಂಬ ಬಗ್ಗೆ ಚರ್ಚಿಸಿದ್ದೆವು. ಈಗ ಒಂದೇ ವಸ್ತುವಿನ ಇಬ್ಬಗೆಯ ನೀತಿಯ ಬಗ್ಗೆ ತಿಳಿಯೋಣ. ಬಿಸಿಲಿನಲ್ಲಿರುವ ಕಾರನ್ನು ತೆಗದುಕೊಳ್ಳಿ. ಅದರ ಗಾಜಿನ ಮೂಲಕ ಬೆಳಕು ಒಳ ಹೋಗುತ್ತದೆ. ಈ ಬೆಳಕಿನ ಒಂದು ಭಾಗ ಪ್ರತಿಫಲನ ಹೊಂದಿ ಗಾಜಿನಿಂದ ಹೊರ ಹೋಗುತ್ತದೆ. ಏಕೆಂದರೆ ಗಾಜು ಬೆಳಕಿಗೆ ಪಾರದರ್ಶಕ ವಸ್ತು. ಒಳ ಹೋದ ಬೆಳಕಿನ ಒಂದಷ್ಟು ಭಾಗ ಒಳಗಿನ ವಸ್ತುಗಳನ್ನು ಉದ್ದೀಪನಗೊಳಿಸುತ್ತದೆ. ಮತ್ತು ಉದ್ದೀಪನಗೊಂಡ ವಸ್ತುಗಳ ಶಾಖವನ್ನು ಹೊರ ಹಾಕುತ್ತವೆ. ಈ ಶಾಖ ಬೆಳಕಿನ ಹಾಗೆ ಹೊರಬರಲು ಹವಣಿಸುತ್ತದೆ. ಆದರೆ ಶಾಖದ ವಿಷಯದಲ್ಲಿ ಗಾಜು ಓನಕೆ ಓಬವ್ವಳ ಹಾಗೆ. ಒಳಬಂದ ಹೈದರನ ಸೈನಿಕರು ಹೊರ ಹೋಗದಂತೆ ಹೊಡೆದು ಎಳೆದು ಹಾಕುತ್ತದೆ. ಬೆಳಕಿಗೆ ಪಾರದರ್ಶಕವಾದ ಗಾಜು ಶಾಖ ವಿಕಿರಣಕ್ಕೆ ಅಪಾರದರ್ಶಕವಾಗಿ ಬಿಡುತ್ತದೆ. ಹೀಗೆ ಬಂಧಿಯಾದ ಬಿಸಿ ಒಳಗೆ ಮತ್ತಷ್ಟು ಬಿಸಿಯನ್ನು ಹೆಚ್ಚಿಸುತ್ತದೆ. ಹೀಗೆ ಗಾಜಿನ ಮನೆಯ ಉಷ್ಣತೆಯು ಹೊರಗಿನ ಉಷ್ಣತೆಗಿಂತ ಹೆಚ್ಚಾಗುತ್ತದೆ. ಇದನ್ನು ಹಸಿರುಮನೆಯ ಪರಿಣಾಮ ಅಥವಾ ಗಾಜಿನ ಮನೆಯ ಪರಿಣಾಮ (green house effect) ಎನ್ನುವುದು. ವಾತಾವರಣ ಬೆಳಕು ಮತ್ತು ಶಾಖ ಎರಡಕ್ಕೂ ಪಾರದರ್ಶಕವಾಗಿರುವುದರಿಂದ ಹಗಲಿಗೆ ಕಾಯಿಸಲ್ಪಟ್ಟ ಭೂಮಿ ಬೆಳಗಿನ ಹೊತ್ತಿಗೆ ಮಾಮೂಲಿಯಾಗಿ ಬಿಡುತ್ತದೆ. ಆದ್ದರಿಂದ ಲಕ್ಷಾಂತರ ವರ್ಷಗಳ ನಂತರವೂ ಭೂಮಿಯ ಉಷ್ಣತೆ ಹಾಗೆಯೇ ಇದೆ.
ಬೇಸಿಗೆಯಲ್ಲಿ ಮೋಡವಾದಾಗ ವಾತಾವರಣದ ಉಷ್ಣತೆ ಹೆಚ್ಚುವುದನ್ನು ವಿಪರೀತ ಸೆಖೆಯಾಗುವುದನ್ನು ಅನುಭವಿಸಿದ್ದೀರಲ್ಲವೇ? ಈ ನೀರಾವಿ ವಾತಾವರಣವನ್ನು ಗಾಜಿನ ಮನೆಯನ್ನಾಗಿ ಪರಿವರ್ತಿಸುತ್ತವೆ. ನಿಮ್ಮ ವಾತಾವರಣವೂ ಗಾಜಿನ ಮನೆಯಾಗಿ ಭೂಮಿಯ ಉಷ್ಣತೆ ಏರುತ್ತದೆ. ವಾತಾವರಣವನ್ನು ಹಸಿರು ಮನೆಯಾಗಿ ಪರಿವರ್ತಿಸುವ ಇಂತಹ ಅನಿಲಗಳು ಹಸಿರು ಮನೆ ಅನಿಲಗಳು (green house gasses). ಇಂಗಾಲದ ಡೈಆಕ್ಸೈಡ್, ಮಿಥೇನ್, ನೈಟ್ರಸ್ ಆಕ್ಸೈಡ್, ಮತ್ತಿತರ ಕೆಲವು ಸಂಶ್ಲೇಷಿತ ರಾಸಾಯನಿಕಗಳು (synthetic chemicals) ವಾತಾವರಣವನ್ನು ಅಪಾರಕವಾಗಿ ಮಾಡುವುದರಿಂದ ಅವುಗಳೂ ಹಸಿರು ಮನೆ ಅನಿಲಗಳೇ. ನೀರಾವಿ ಹಸಿರು ಮನೆಯ ಅನಿಲವಾದರೂ ಅದರ ಪರಿಣಾಮ ತಾತ್ಕಾಲಿಕ. ಏಕೆಂದರೆ ಯಾವಾಗ ಅದು ಹನಿಯಾಗುತ್ತದೋ (precipitation) ಅದು ತನ್ನ ಪ್ರಭಾವ ಕಳೆದುಕೊಳ್ಳುತ್ತವೆ. ಆದರೆ ಉಳಿದವರು ಅದರಲ್ಲಿಯೂ ಇಂಗಾಲದ ಡೈಆಕ್ಸೈಡ್ ಇದೆಯಲ್ಲ ಅದು ದೀರ್ಘಕಾಲೀನ ಪರಿಣಾಮ ಉಂಟಾಗುತ್ತದೆ. ವಾತಾವರಣದಲ್ಲಿ ಇಂಗಾಲದ ಡೈಆಕ್ಸೈಡ್ ನ ಮಾಮೂಲಿ ಪ್ರಮಾಣ ಕೇವಲ 0.03%. ಈಗ ಅದು 0.04% ಕ್ಕೆ ಏರಿದೆ. ಆದ್ದರಿಂದ ಈಗ ಮಾರನೆಯ ದಿನ ಭೂಮಿ ತಣ್ಣಗಾಗುತ್ತಿಲ್ಲ. ನಿಧಾನವಾಗಿ ಭೂ ಗ್ರಹದ ಉಷ್ಣಾಂಶ ಏರುತ್ತಿದೆ. ಇದೇ ಭೂಗೋಳದ ಉಷ್ಣತೆಯ ಏರಿಕೆ (global warming). ಅದಕ್ಕೆ 12 ನೆಯ ಶತಮಾನದ ಶಿವ ಶರಣರು ಒಲೆ ಹೊತ್ತಿ ಉರಿದಾಗ ನಿಲಬಹುದಲ್ಲದೇ ಧರೆ ಹೊತ್ತಿ ಉರಿದರೆ ನಿಲಲ್ಗದು ಎಂದಿದ್ದು. ಈಗ ಧರೆ ಹೊತ್ತಿ ಉರಿಯುತ್ತಿದೆ.
ಈ ಇಂಗಾಲದ ಡೈಆಕ್ಸೈಡ್ ನ ಏರಿಕೆಗೆ ಹಲವು ಕಾರಣಗಳು. ಕೈಗಾರಿಕೀರಣ, ಅತಿಯಾದ ಪಳೆಯುಳಿಕೆ ಇಂಧನಗಳ ಬಳಕೆ, ಮರ ಕಡಿಯುವುದು ಇತ್ಯಾದಿ. ಇಂಗಾಲದ ಡೈಆಕ್ಸೈಡ್ ನ ಅತಿದೊಡ್ಡ ಮೂಲ ಸಿಮೆಂಟ್ ಉದ್ದಿಮೆ. ಇದು ಅಪಾರ ಪ್ರಮಾಣದಲ್ಲಿ ಇಂಗಾಲದ ಡೈಆಕ್ಸೈಡ್ ಅನ್ನು ಹೊರ ಹಾಕುತ್ತದೆ. ಹಾಗಾದರೆ ಸಿಮೆಂಟ್ ಉತ್ಪಾದನೆ ನಿಲ್ಲಿಸಿ ಬಿಡೋಣ ಎಂಬ ತೀರ್ಮಾನಕ್ಕೆ ಬರಲು ಸಾಧ್ಯವೇ? ಸಿಮೆಂಟ್ ಉದ್ದಿಮೆ ಮುಚ್ಚಿಹೋದರೆ ಅಭಿವೃದ್ಧಿ ನಿಂತು ಹೋದ ಹಾಗೆ ತಾನೆ? ಇಲ್ಲಿ ಪರಿಹಾರ ಸರಳವಾಗಿದ್ದರೂ ಅದು ಕಾರ್ಯ ಸಾಧುವಲ್ಲ. ಹಾಗಾದರೆ ಏನು ಮಾಡುವುದು?
ಮಕ್ಕಳೇ ಇದೀಗ ಜವಾಬ್ಧಾರಿ ನಿಮ್ಮ ಮೇಲಿದೆ. ಮೂಲ ವಿಜ್ಞಾನವನ್ನು ಅಭ್ಯಾಸ ಮಾಡಿ. ಸಿಮೆಂಟ್ ನಂತೆ ನಿರ್ಮಾಣ ಕಾಮಗಾರಿಗಳಲ್ಲಿ ಬಳಸಬಹುದಾದ ಆದರೆ ಉತ್ಪಾದನೆಯ ವೇಳೆ ಇಂಗಾಲದ ಡೈಆಕ್ಸೈಡ್ ಹೀರಿಕೊಳ್ಳುವ ವಸ್ತುವೊಂದನ್ನು ತಯಾರಿಸಿ. ಮುಂದಿನ ಪೀಳಿಗೆಯನ್ನು ಈ ಉಷ್ಣತೆಯ ಏರಿಕೆಯಿಂದ ರಕ್ಷಿಸಿ.
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
********************************************