ನಿಷ್ಪಾಪಿ ಸಸ್ಯಗಳು : ಸಂಚಿಕೆ - 81
Thursday, December 19, 2024
Edit
ನಿಷ್ಪಾಪಿ ಸಸ್ಯಗಳು : ಸಂಚಿಕೆ - 81
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ.... ಹೇಗಿದ್ದೀರಿ..? ವಾರ್ಷಿಕೋತ್ಸವ, ಪ್ರವಾಸ ಅಂತೆಲ್ಲಾ ಖುಷಿಯ ದಿನಗಳಲ್ಲವೇ? ಜೀವನ ಸಂಭ್ರಮ ಹೆಚ್ಚಿಸುವ ಈ ಕಾರ್ಯ ಕಲಾಪಗಳಲ್ಲಿ ಕುಣಿಯುತ್ತಿರುವಿರಾ? ಸರಿ ಮಕ್ಕಳೇ, ನಿಮ್ಮಂತೆಯೇ ಸದಾ ನಲಿಯುತ್ತಿರುವ ನಿಮ್ಮಷ್ಟೆತ್ತರದ ಸಸ್ಯವೊಂದರ ಪರಿಚಯವನ್ನು ನಾವಿಂದು ಮಾಡಿಕೊಳ್ಳೋಣ, ನನ್ನ ಜೊತೆ ಬನ್ನಿ.
ಇಲ್ಲಿ ಹರಿಯುತ್ತಿರುವ ನೀರಿನ ಪ್ರವಾಹವನ್ನೊಮ್ಮೆ ನೋಡಿರಿ. ಉತ್ತರದಿಂದ ದಕ್ಷಿಣಕ್ಕೆ ಹರಿಯುತ್ತಿರುವ ಇದನ್ನು 'ಕಟ್ಟತ್ತಿಲ ಹೊಳೆ' ಎನ್ನುತ್ತಾರೆ. ಇದು ನಮಗಮ ಜಿಲ್ಲೆಯ ದಕ್ಷಿಣ ದಿಕ್ಕಿನಲ್ಲಿದೆ. ವಿಶೇಷವೇನೆಂದರೆ ಕರ್ನಾಟಕದ ಗಡಿ ದಾಟಿ ಸ್ವಲ್ಪವೇ ದೂರದಲ್ಲಿ ಕೇರಳ ಪ್ರವೇಶಿಸಿ ಪಯಸ್ವಿನಿ ನದಿಯ ಜೊತೆ ಐಕ್ಯಗೊಳ್ಳುತ್ತದೆ. ನದಿಗೆ ಹೋಲಿಸಿದರೆ ಇದೊಂದು ಸಣ್ಣ ನೀರಿನ ಹರಿವು. ಮಳೆಗಾಲದಲ್ಲಿ ಮಾತ್ರ ಭರ್ತಿಯಾಗಿ ಹರಿಯುತ್ತಿರುತ್ತದೆ. ಬೇಸಿಗೆ ಬಂತೆಂದರೆ ಒಣಗಲಾರಂಭಿಸುತ್ತದೆ. ಆದರೆ ಪೂರ್ತಿ ನೀರಿನ ಹರಿವು ನಿಲ್ಲುವ ಮೊದಲೇ ಇದಕ್ಕೆ ಅಲ್ಲಲ್ಲಿ ಮಣ್ಣು ಹಾಗೂ ಹಲಗೆಗಳ ಸಹಾಯದಿಂದ ತಡೆಗಳನ್ನು ನಿರ್ಮಾಣಮಾಡಿ ನೀರು ತುಂಬಿರುವಂತೆ ನೋಡಿಕೊಳ್ಳುತ್ತಾರೆ. ನಿಧಾನಕ್ಕೆ ಈ ನಿಂತ ನೀರು ಆರಿ ಹೋದರೂ ಇಕ್ಕೆಲಗಳಲ್ಲಿ ಹಸಿರು ಹೊದ್ದ ದಡಗಳು ಹಲವಾರು ಮೂಲಿಕೆ ಹಾಗೂ ಪೊದರು ಸಸ್ಯಗಳಿಗೆ ಆವಾಸವನ್ನೊದಗಿಸುತ್ತದೆ.
ಮಕ್ಕಳೇ, ಇಲ್ಲಿ ನೋಡಿ, ಇದು ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸುವ ಪುಟ್ಟ ಸೇತುವೆ. ಇಲ್ಲಿಂದ ಮುಂದೆ. ಈ ಸೇತುವೆಯ ಪೂರ್ವದ ತುದಿಯಲ್ಲಿ ನಿಮಗೊಂದು ವಿಶೇಷ ವಾದ ಸಸ್ಯವೊಂದನ್ನು ಪರಿಚಯಿಸಲಿದ್ದೇನೆ ಬನ್ನಿ..