-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 59

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 59

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 59
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203

ಪ್ರೀತಿಯ ಮಕ್ಕಳೇ.... ಬಣ್ಣದ ಬಗ್ಗೆ ಮಾತನಾಡುತ್ತಿದ್ದವರು ಬೆಳಕಿನ ಬಗ್ಗೆ ಹುಡುಕತೊಡಗಿದ್ದೆವು. ಬೆಳಕು ವಿದ್ಯುತ್ಕಾಂತೀಯ ತರಂಗಗಳು ಎಂದು ತಿಳಿದಿದ್ದೇವೆ. ಈ ವಿದ್ಯುತ್ಕಾಂತೀಯ ತರಂಗಗಳದ್ದು ಒಂದು ಕುಟುಂಬ. ಇಲ್ಲಿ ಹಲವು ಸದಸ್ಯರಿದ್ದಾರೆ. ಕೆಲವರು ಬಲಶಾಲಿಗಳಾದರೆ ಹಲವರು ದುರ್ಬಲರು. ಹೆಚ್ಚು ಕಂಪನಾಂಕ ಹೊಂದಿರುವರು ಪ್ರಬಲರಾದರೆ ಕಡಿಮೆ ಕಂಪನಾಂಕ ಹೊಂದಿರುವವರು ದುರ್ಬಲರು. ಕಡಿಮೆ ಕಂಪನಾಂಕ ಹೊಂದಿರುವವರ ತರಂಗಾಂತರ ಹೆಚ್ಚು. ಹೆಚ್ಚು ಕಂಪನಾಂಕವಿದ್ದರೆ ತರಂಗಾಂತರ ಕಡಿಮೆ. ಕಂಪನಾಂಕ ಮತ್ತು ತರಂಗಾಂತರಗಳನ್ನು ಗುಣಿಸಿದಾಗ ಅವುಗಳ ವೇಗ ದೊರೆಯುತ್ತದೆ. ಎಲ್ಲಾ ವಿದ್ಯುತ್ಕಾಂತೀಯ ವಿಕಿರಣಗಳ ವೇಗ ಒಂದೇ. ಇದು ನಿರ್ವಾತದಲ್ಲಿ ಒಂದು ಸೆಕೆಂಡಿಗೆ ಸುಮಾರು 3 ಲಕ್ಷ ಕಿಲೋಮೀಟರುಗಳು. ಈಗ ಈ ಕುಟುಂಬದ ಸದಸ್ಯರ ಬಗ್ಗೆ ತಿಳಿಯೋಣ.

ವಿದ್ಯುತ್ಕಾಂತೀಯ ವಿಕಿರಣಗಳ ಕುಟುಂಬದ ಭೀಮಸೇನ ಗಾಮಾ ಕಿರಣ (gamma rays). ಇದು ಹಲವು ಅಡಿಗಳಷ್ಟು ದಪ್ಪದ ಕಾಂಕ್ರೀಟ್ ಮತ್ತು ಹಲವು ಸೆಂಟಿಮೀಟರ್ ದಪ್ಪದ ಸೀಸದ (lead) ಹಲಗೆಯನ್ನು ತೂರಿಕೊಂಡು ಸಾಗುತ್ತದೆ. ಮನುಷ್ಯನ ದೇಹದ ಮೂಲಕ ಹಾದುಹೋಗುವಾಗ ಜೈವಿಕ ವಸ್ತುವಾದ (genetic material) DNA ಯನ್ನು ಬದಲಾಯಿಸಬಲ್ಲುದು. ಒಂದು ಪರಮಾಣುವಿನಿಂದ ಎಲೆಕ್ಟ್ರಾನ್ ಗಳನ್ನು ಸೆಳೆಯುವ ಸಾಮರ್ಥ್ಯ ಇದಕ್ಕಿರುವುದರಿಂದ ತಾನು ಹಾದು ಹೋಗುವ ಮಾರ್ಗದಲ್ಲಿ ಅಯಾನೀಕರಣವನ್ನುಂಟು (ionisation) ಮಾಡುತ್ತದೆ. ಹಿರೋಷಿಮಾ ಮತ್ತು ನಾಗಸಾಕಿಗಳ ಮೇಲೆ ಹಾಕಿದ ಪರಮಾಣು ಬಾಂಬ್ ನಲ್ಲಿ ಅಧಿಕ ಹಾನಿಯನ್ನುಂಟು ಮಾಡಿ ಹಲವು ತಲೆಮಾರಿನ ವರೆಗೆ ಅದರ ಪರಿಣಾಮವನ್ನು ಉಳಿಸಿ ಹೋಗಿರುವುದು ಇದೇ ಪುಣ್ಯಾತ್ಮ. ಈ ವಿಕಿರಣ ತಡೆಗೆ ಪ್ರಮುಖವಾಗಿ ಬಳಸುವುದು ಕಾಂಕ್ರೀಟ್ ಮತ್ತು ಸೀಸವನ್ನು. ವಿಕಿರಣವನ್ನು ಅರ್ಧದಷ್ಟಕ್ಕೆ ಇಳಿಸಲು ಬೇಕಾದ ವಸ್ತುವಿನ ದಪ್ಪವನ್ನು ಆವರಣದ ಅರ್ಧ ಮೌಲ್ಯ (Half Value Layer HVL) ಎನ್ನುತ್ತೇವೆ. ಒಂದು ಸೆಂಟಿಮೀಟರ್ ದಪ್ಪದ ಸೀಸ ಮತ್ತು ಆರು ಸೆಂಟಿಮೀಟರ್ ದಪ್ಪದ ಕಾಂಕ್ರೀಟ್ ಈ ಕೆಲಸವನ್ನು ಮಾಡಬಲ್ಲವು. ಅಂದರೆ 12 ಸೆಂಟಿಮೀಟರ್ ದಪ್ಪದ ಕಾಂಕ್ರೀಟ್ ಗೋಡೆ ಮೂಲಕ 25% ವಿಕಿರಣ ಹಾಗು 24 ಸೆಂಟಿಮೀಟರ್ ದಪ್ಪದ ಗೋಡೆಯ ಮೂಲಕ 6.25% ವಿಕಿರಣ ಹಾದುಹೋಗುತ್ತದೆ. ಇದಲ್ಲದೇ ಬಳಸಲ್ಪಟ್ಟ ಯುರೇನಿಯಂ, ಭಾರ ನೀರು (heavy watr) ಮತ್ತು ಉಕ್ಕಿನ ಹಲಗೆ ಕೂಡಾ ಈ ಕೆಲಸ ಮಾಡುತ್ತವೆ. ಆದರೆ ಅವುಗಳ HVL ಕಡಿಮೆ. ಈಗ ತಿಳಿಯಿತೇ ಅಣು ರಿಯಾಕ್ಟರ್ ಕೇಂದ್ರಗಳ ಗೋಡೆ ಯಾಕೆ ಅಷ್ಟೊಂದು ದಪ್ಪವಾಗಿರುತ್ತವೆ ತಿಳಿಯಿತೇ? ಆದ್ದರಿಂದಲೇ ವಿಕಿರಣ ಸೋರಿಕೆ ಸಾಧ್ಯತೆ ಶೂನ್ಯವಾಗಿರುತ್ತದೆ. ಈ ಗಾಮಾ ಕಿರಣಗಳನ್ನು ಕ್ಯಾನ್ಸರ್ ಚಿಕಿತ್ಸೆಯಲ್ಲಿ, ಔಷಧ ಕೈಗಾರಿಕೆಯಲ್ಲಿ ಕ್ರಿಮಿ ಶುದ್ಧಗೊಳಿಸಲು (sterilisation) ಮತ್ತು ಖಗೋಳ ಸಂಶೋಧನೆಗಳಲ್ಲಿ ಬಳಸಲಾಗುತ್ತದೆ.

ಈ ಕುಟುಂಬದ ಇನ್ನೊಬ್ಬ ಬಲಾಡ್ಯನೆಂದರೆ ಕ್ಷ ಕಿರಣ (X-ray). ಇದನ್ನು ಕಂಡುಹಿಡಿದ ರಾಂಟ್ ಜೆನ್‌ ಇದರ ಪರಿಚಯವೇ ಇಲ್ಲದ್ದರಿಂದ X ಎಂದು ಕರೆದ. ಹೆಸರು ಗೊತ್ತಿಲ್ಲದ ದಪ್ಪದ ಹುಡುಗನನ್ನು ಏ ಟೊಣಪ ಎಂದು ಕರೆಯುತ್ತೇವಲ್ಲ ಹಾಗೆ. ಮತ್ತೆ ಆ ಹೆಸರೇ ಶಾಶ್ವತವಾಯಿತು. ಇದಕ್ಕೆ ಗಾಮಾ ಕಿರಣದ ಹಾಗೆ ಕಾಂಕ್ರೀಟ್ ಅಥವಾ ಸೀಸವನ್ನು ಭೇದಿಸುವ ಶಕ್ತಿ ಇಲ್ಲ. ಆದರೆ ನಮ್ಮ ಮಾಂಸಖಂಡಗಳನ್ನು ಭೇದಿಸಿಕೊಂಡು ಹೋಗಬಲ್ಲದು. ಆದರೆ ಭಾರ ಲೋಹಗಳ ಲವಣಗಳನ್ನು ಭೇದಿಸುವ ಶಕ್ತಿ ಇಲ್ಲ. ಆದ್ದರಿಂದ ಕ್ಷ ಕಿರಣವನ್ನು ಮೂಳೆ ಮುರಿತವನ್ನು ಗುರುತಿಸಲು ಬಳಸುತ್ತಾರೆ. ಕ್ಷ ಕಿರಣಕ್ಕೂ HVL ಇದೆ. ಇದನ್ನು ರೋಗಿಗೆ ನೀಡಬೇಕಾದ ಪ್ರಮಾಣ (dosage) ನಿರ್ಣಯಕ್ಕೆ ಬಳಸಲಾಗುವುದು. ಈ ಕ್ಷ ಕಿರಣಗಳನ್ನು ರೋಗ ಪತ್ತೆಯಲ್ಲಿ, ಕ್ಯಾನ್ಸರ್ ಚಿಕಿತ್ಸೆಗೆ, ಹೃದಯಕ್ಕೆ ಸ್ಟಂಟ್ ಹಾಕುವುದು ಇತ್ಯಾದಿ ರೋಗ ಚಿಕಿತ್ಸೆಗೆ (therapeutic use), ಸುರಕ್ಷತೆಗಾಗಿ ಲಗೇಜ್ ಸ್ಕ್ಯಾನ್ ಮಾಡಲು, ಲೋಹ ಉದ್ದಿಮೆಯಲ್ಲಿ ದೋಷಗಳನ್ನು ಕಂಡುಹಿಡಿಯಲು ಬಳಸಲಾಗುತ್ತದೆ. 
ಮುಂದಿನ ಸಂಚಿಕೆಗೆ.......