ನಿಷ್ಪಾಪಿ ಸಸ್ಯಗಳು : ಸಂಚಿಕೆ - 79
Wednesday, December 4, 2024
Edit
ನಿಷ್ಪಾಪಿ ಸಸ್ಯಗಳು : ಸಂಚಿಕೆ - 79
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಪ್ರತಿವರ್ಷ ಮಳೆಗಾಲ ಕಾಲಿಡುತ್ತಾ ಭೂದೇವಿ ಸಹಸ್ರಾರು ಹೊಸ ಹೊಸ ಪುಟಾಣಿ ಸಸ್ಯಗಳಿಗೆ ತಾಯಿಯಾಗುತ್ತಾಳೆ. ರಭಸದಿಂದ ಸುರಿವ ಮಳೆಗೆ, ಬೀಸುವ ಗಾಳಿಗೆ ಹೊಸದಾಗಿ ಜನ್ಮ ತಳೆದ ಈ ವಾರ್ಷಿಕ ಸಸ್ಯಗಳು ಅವಸರವಸರದಿಂದ ಬೆಳೆದು ನಿಂತು ಮಳೆಗಾಲ ಕಳೆಯುತ್ತಲೇ ನಳನಳಿಸುತ್ತಾ ಹೂವು ಕಾಯಿ ಹಣ್ಣುಗಳನ್ನು ಪಡೆದು ನಿರ್ಗಮಿಸಲು ತಯಾರಾಗುತ್ತವೆ.
ಅಂತಹಾ ಸಸ್ಯಗಳಲ್ಲಿ ಹಸಿರು ಸೀರೆಗೆ ಬಂಗಾರದ ಅಂಚಿನಂತೆ ಕಂಗೊಳಿಸುವುದು ಉರ್ಕಿ ಗಿಡ. ಇದರ ಮೈಮೇಲೆ ಅರಳಿ ನಿಂತ ಪುಟಾಣಿ ಹೂಗಳ ಸಾಲು! ಬನ್ನಿ ಮಕ್ಕಳೇ, ಉರ್ಕಿ ಗಿಡದ ಬಳಿ ಮಾತನಾಡುತ್ತಾ ಪರಿಚಯ ಮಾಡಿಕೊಳ್ಳೋಣ. ನಮ್ಮ ಊರಿನ ಎಲ್ಲಾ ಕಡೆ ಈ ಗಿಡಗಳು ಕಾಣಿಸುತ್ತವೆ. ನಾವು ಮಾರ್ಗದ ಇಕ್ಕೆಲಗಳಲ್ಲಿ ಹಬ್ಬಿ ನಿಂತ ಗಿಡಗಳ ಬಳಿಗೆ ಹೋಗೋಣ ಆಗದೇ?
"ಹಾಯ್ ಉರ್ಕಿಯಕ್ಕ.. ನಮಸ್ತೆ. ನೀನೆಷ್ಟು ಸುಂದರವಾಗಿ ಹೂ ಬಿಟ್ಟಿರುವೆ! ನಿಷ್ಪಾಪಿ ಸಸ್ಯವಾದ ನೀನು ನಿನ್ನ ಇಡೀ ಮೈಯಲ್ಲಿ ಹಳದಿ ಹೂಗಳ ಮಾಲೆಯನ್ನೇ ಕಟ್ಟಿ ಮುಡಿದುಕೊಂಡಿರುವಂತಿದೆ!. ನಮಗೆ ನಿನ್ನ ಪರಿಚಯ ಮಾಡಿಕೊಡುವೆಯಾ ಪ್ಲೀಸ್..."
"ಒಹ್! ಖಂಡಿತ ಮಕ್ಕಳೇ.. ಅದಕ್ಕೇನಂತೆ. ನಿಮ್ಮ ಹೊಗಳಿಕೆ ಕೇಳಿ ನನಗೆ ಹರ್ಷ ಉಂಟಾಗಿದೆ. ಬನ್ನಿ ಕುಳಿತುಕೊಳ್ಳಿರಿ. ನನ್ನನ್ನು ಎಲ್ಲರೂ ಕಳೆಗಿಡವೆಂದು ಕಡೆಗಣಿಸುತ್ತಾರೆ. ನನ್ನ ಮೇಲೆ ಪ್ರೀತಿ ತೋರಿದ್ದಕ್ಕೆ ವಂದನೆಗಳು. ನಾನು ಮಾಲ್ವೇಸಿ ಎಂಬ ಸಸ್ಯ ಕುಟುಂಬಕ್ಕೆ ಸೇರಿದ್ದೇನೆ. ಟ್ರಯಂಫೆಟ್ಟಾ ಪೆಂಟಂಡ್ರಾ (Triumfetta pentandra) ಎಂಬ ಸುಂದರವಾದ ಹೆಸರಿದೆ. ನಾನೊಂದು ಕವಲೊಡೆವ ವಾರ್ಷಿಕ ಮೂಲಿಕೆ. ಒಂದೂವರೆ ಎರಡು ಮೀಟರ್ ಗಳಷ್ಟು ಎತ್ತರ ಬೆಳಯಬಲ್ಲೆ. ನೀವು ನನ್ನನ್ನು ತ್ರಿಶೂಲದಂತಹ ಎಲೆಗಳ ರಚನೆಯ ಮೂಲಕ ಸುಲಭವಾಗಿ ಗುರುತು ಹಿಡಿಯಬಲ್ಲಿರಿ. ಎಲೆಗಳಿಗೆ ಸುಮಾರು ಐದು ಸೆಂ.ಮೀ. ಉದ್ದನೆಯ ತೊಟ್ಟು ಇರುತ್ತದೆ. ನಾನು ಭಾರತದಲ್ಲಿ ಮಾತ್ರವಲ್ಲ, ಉಷ್ಣವಲಯದ ಆಫ್ರಿಕಾ, ತೈವಾನ್, ಇಥಿಯೋಪಿಯ, ಓಮನ್, ಸೊಮಾಲಿಯಾ, ಯೆಮನ್, ಉಗಾಂಡಾ ಮೊದಲಾದೆಡೆ ಹುಲುಸಾಗಿ ಬೆಳೆಯುತ್ತೇನೆ. ನನಗೆ ಸೂರ್ಯನ ಅತಿಯಾದ ಬಿಸಿಲನ್ನು ಸಹಿಸಿಕೊಳ್ಳುವ ಶಕ್ತಿಯಿಲ್ಲ. ಸ್ವಲ್ಪ ನೆರಳು ಖುಷಿ ನೀಡುತ್ತದೆ. ಅದಕ್ಕೇ ನಾನು ಕಾಡು ಪ್ರದೇಶ, ಹುಲ್ಲುಗಾವಲು, ಜವುಗು ಸ್ಥಳ, ಹಳೆಯ ಕೃಷಿ ಭೂಮಿಗಳನ್ನು ಆವಾಸಸ್ಥಾನ ವಾಗಿ ಮಾಡಿಕೊಳ್ಳುತ್ತೇನೆ. ನನ್ನ ಉಪಸ್ಥಿತಿ ಇದ್ದರೆ ನೀವು ಕೊಳೆತ ಮಣ್ಣಿನ ಸೂಚಕವೆನ್ನಬಹುದು.
ವನ್ಯ ಜೀವಿಗಳಿಗೆ ನಾನಂದ್ರೆ ಇಷ್ಟ ಗೊತ್ತಾ? ಅಭಯಾರಣ್ಯಗಳಲ್ಲಿ ನನ್ನ ಬೆಳವಣಿಗೆಗೆ ಪ್ರೋತ್ಸಾಹ ನೀಡುತ್ತಾರೆ! ಉಷ್ಣವಲಯದಲ್ಲಿ ವ್ಯಾಪಕವಾಗಿ ಹಬ್ಬಿರುವ ನನ್ನನ್ನು 1753 ರಲ್ಲಿ ಕಾರ್ಲ್ ಲಿನ್ನಿಯಸ್ ಎಂಬ ವಿಜ್ಞಾನಿ ಗುರುತಿಸಿ ಹೆಸರಿಟ್ಟನಂತೆ. ನಮ್ಮಲ್ಲಿ 176 ಜಾತಿಗಳಿವೆ ಎನ್ನುತ್ತಾರೆ. ನಾನೊಂದು ಗಟ್ಟಿ ಗಿಡ. ಸುತ್ತಲೂ ಶಾಖೆಗಳನ್ನು ಹರಡಿಸುತ್ತೇನೆ. ಬಲು ತೆಳುವಾದ ಪುಷ್ಪಪಾತ್ರೆಯ ಮೇಲೆ ಐದೆಸಳಿನ ಹೊಳಪಿನ ಹಳದಿ ಪುಷ್ಪಗಳು ಶಾಖೆಗಳ ಉದ್ದಕ್ಕೂ ಅರಳುತ್ತವೆ. ಅದರಲ್ಲಿ ಐದಾರು ಕೇಸರಗಳು ಮುದ್ದು ಮುದ್ದಾಗಿರುತ್ತವೆ. ನಾಜೂಕಾಗಿ ಕೊಯ್ಯದಿದ್ದರೆ ನಿಮಗೆ ಇಡೀ ಹೂವು ದೊರಕದು. ನನ್ನಲ್ಲಿ ಉಂಟಾಗುವ ಕಾಯಿಯೂ ವಿಶಿಷ್ಟ ವಾದುದು. ಪಪ್ಪಾಯಿ ಬೀಜಕ್ಕಿಂತ ಸಣ್ಣ ಬೀಜಕ್ಕೆ ಸುತ್ತಲೂ ಮುಳ್ಳುಗಳ ಕವಚವಿದೆ. ನನ್ನ ಸನಿಹದಲ್ಲಿ ಅತ್ತಿತ್ತ ಹೋಗುವ ಪ್ರಾಣಿಗಳನ್ನು ಅಪ್ಪಿ ಹಿಡಿದು ಎಲ್ಲೆಲ್ಲೋ ದೂರದಲ್ಲಿ ಉದುರಿ ಸಂತಾನ ಅಭಿವೃದ್ಧಿಯಾಗುವಂತೆ ನೋಡಿಕೊಳ್ಳುತ್ತೇನೆ.
ಕಳೆಗಿಡವೆಂದು ನನ್ನನ್ನು ತಾತ್ಸಾರ ಮಾಡುವ ನಿಮ್ಮಂತಹ ಮಾನವರು ನನ್ನಿಂದ ಬಹಳಷ್ಟು ಪ್ರಯೋಜನಗಳನ್ನು ಪಡೆಯುತ್ತಾರೆಂದು ನಿಮಗೆ ತಿಳಿದಿದೆಯೆ? ಭಾರತದಲ್ಲಿ ರಾಗಿಯ ಜೊತೆ ಅಂತರಬೆಳೆಯಾಗಿ ಬೆಳೆಯುವರು. ಆಫ್ರಿಕಾದಲ್ಲಿ ನಾರು ಮತ್ತು ನನ್ನ ಚರ್ಮದಲ್ಲಿರುವ ಲೋಳೆಗಾಗಿ ಕೃಷಿಯನ್ನೇ ನಡೆಸುತ್ತಾರೆ ಮಾತ್ರವಲ್ಲ ಸ್ಥಳೀಯ ಮಾರುಕಟ್ಟೆಯಲ್ಲಿ ಕಟ್ಟು ಕಟ್ಟಿ ಮಾರುತ್ತಾರೆಂದರೆ ನೀವು ನಂಬಲೇಬೇಕು. 75 _ 100 c.m ಉದ್ದ ಇದ್ದಾಗಲೇ ಕಟಾವು ಮಾಡಿ ನೆರಳಲ್ಲಿ ಒಣಗಿಸುತ್ತಾರೆ. ನೇರವಾದ ಕಾಂಡಗಳ ಹೊರತಾದ ಶಾಖೆಗಳನ್ನು ಉರುವಲಾಗಿಯೂ ಬಳಸುವರು.
ಟೊಮೆಟೊ ದಂತಹ ರುಚಿಯಿದೆಯೆಂದು ನನ್ನ ಎಲೆಗಳನ್ನು ತರಕಾರಿಯಾಗಿ ಬೇಯಿಸಿ ಬಳಸುವರು. ಹಸಿರು ಚಿಗುರುಗಳ ತೊಗಟೆಯು ಜಿಗುಟಾದ ಸೂಪ್ ಮತ್ತು ಸಾಸ್ ಗಳನ್ನು ತಯಾರಿಸಲು ಬಳಸಲಾಗುವ ಲೋಳೆಯ ಮೂಲವಾಗಿದೆ. ಮಾನವರು ಈ ಲೋಳೆಯನ್ನು ಹೆಚ್ಚಾಗಿ ಎಳೆ ಶಿಶುಗಳ ಆಹಾರವನ್ನಾಗಿ ಬಳಸುವರು. ನನ್ನ ಮೈ ಪದರದ ಲೋಳೆಯಲ್ಲಿ ಹೆಚ್ಚಿನ ಶಕ್ತಿಯಿದೆಯೆಂದು ಸೂಪ್ ನ್ನು ಬಾಣಂತಿಗೆ ಮೊದಲ ಆಹಾರವಾಗಿ ನೀಡುವರು. ಹಣ್ಣು ಮತ್ತು ಬೇರು ಹೆರಿಗೆಯನ್ನು ಉತ್ತೇಜಿಸುವ ಗುಣ ಹೊಂದಿದೆ ಎಂದೂ ಹೇಳುವರು. ನನ್ನ ತೊಗಟೆಯ ರಸವನ್ನು ಸಂಗ್ರಹಿಸಿಟ್ಟೂ ಅಗತ್ಯ ಬಂದಾಗ ಬಳಸುವರು. ಬರಗಾಲದ ಆಹಾರವೆಂಬ ಹೆಗ್ಗಳಿಕೆಯೂ ನನಗಿದೆ. ನನ್ನಲ್ಲಿರುವ ಕರಗುವ ಘಟಕಗಳು ಆಹಾರದ ನಂತರದ ರಕ್ತದಲ್ಲಿ ಗ್ಲೂಕೋಸ್ ಮಟ್ಟವನ್ನು ತಗ್ಗಿಸುತ್ತವೆ. ಮಧುಮೇಹ ಹಾಗೂ ಸ್ಥೂಲಕಾಯದ ವ್ಯಕ್ತಿಗಳಿಗೆ ಸಾಮಾನ್ಯವಾಗಿ ಸಕ್ಕರೆಯ ಹಂಬಲವನ್ನು ತೋರುವುದನ್ನು ಗಮನಿಸಿರುವಿರಾ? ಆ ಹಂಬಲವನ್ನೂ ನಾನು ತಗ್ಗಿಸಬಲ್ಲೆ .
ವಿದೇಶದಲ್ಲಿ ಜಠರದ ಹುಣ್ಣಿಗೆ ಜನಪದರು ಪರಿಹಾರವನ್ನು ನನ್ನಲ್ಲಿ ಕಾಣುವರು. ನನ್ನ ಬೇರಿನ ಕಷಾಯವನ್ನು ಆಂತರಿಕ ಹುಣ್ಣು ನಿವಾರಕವಾಗಿ ಹಾಗೂ ಎಲೆಗಳನ್ನು ಮೂತ್ರವರ್ಧಕವಾಗಿ, ಅತಿಸಾರ, ಭೇದಿ, ಆಂತರಿಕ ರಕ್ತಸ್ರಾವದಲ್ಲಿ, ಗೊನೊರಿಯಾ ಚಿಕಿತ್ಸೆಯಲ್ಲೂ ಬಳಸುವರು. ಎಲೆ ಮತ್ತು ಹೂಗಳನ್ನು ತೀವ್ರವಾದ ನೆಗಡಿಗೆ, ಕುಷ್ಠರೋಗದ ನಿವಾರಣೆಗೆ ಬಳಸುವರು. ತಾಜಾ ಬೇರುಗಳನ್ನು ತುರಿಕೆ, ಹುಣ್ಣು, ಸಣ್ಣ ಗಾಯ ಗುಣಪಡಿಸಲು ಬಳಸಿದರೆ ಪುಡಿ ಮಾಡಿದ ಎಲೆಯನ್ನು ಗಾಯ್ ಟರ್, ವಿರೂಪಗಳ ಚಿಕಿತ್ಸೆಗೆ ಡ್ರೆಸ್ಸಿಂಗ್ ನಲ್ಲಿ ಬಳಸುವರು.
ಪಶು ವೈದ್ಯಕೀಯ ಔಷಧಿಯಲ್ಲಿಯೂ ನನ್ನ ಬಳಕೆಯಿದೆ. ನನ್ನ ತೊಗಟೆಯ ಫೈಬರ್ ನಿಂದ ದಾರ, ಮೀನುಗಾರಿಕಾ ಮಾರ್ಗ ತಯಾರಿಗೆ ಬಳಸುವರು. ಗುಣಮಟ್ಟದಲ್ಲಿ ನನ್ನನ್ನು ಸೆಣಬಿನ ಹತ್ತಿರವಿದೆ ಎನ್ನುವರು! ಮಕ್ಕಳೇ, ಇನ್ನಾದರೂ ನನ್ನನ್ನು ಗೌರವಿಸಲು ಕಲಿಯುವಿರಲ್ಲವೇ? ಸರಿ ಮಕ್ಕಳೇ, ಹೋಗಿಬನ್ನಿ."
ನೋಡಿದಿರಾ ಮಕ್ಕಳೇ, ಈ ಉರ್ಕಿ ಗಿಡ ಇಷ್ಟೇ ಸಣ್ಣದಾಗಿದ್ದರೂ ಅದರ ಉಪಯೋಗ ಎಷ್ಟಿದೆಯಲ್ವಾ? ಪ್ರಕೃತಿಯಲ್ಲಿ ನಾವು ಯಾವುದನ್ನೂ ಉಪೇಕ್ಷೆ ಮಾಡುವಂತಿಲ್ಲ. ಇಷ್ಟು ಪುಟ್ಟ ಗಿಡದ ತೊಗಟೆಯಿಂದ ಮೃದುವಾದ ಹೊಳಪು ನಾರು ಸಿಗುತ್ತದೆಯೆಂದು ನಿಮಗೆ ತಿಳಿದಿತ್ತೆ? ನಾವು ಸಸ್ಯದ ಪರಿಚಯ ಮಾಡಿಕೊಂಡಾಗಲೇ ವಿಚಾರ ತಿಳಿಯುವುದು ಅಲ್ಲವೇ?
ಸರಿ ಮಕ್ಕಳೇ, ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗುತ್ತೇನೆ.. ನಮಸ್ಕಾರ.
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************