-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 57

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 57

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 57
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203


ಪ್ರೀತಿಯ ಮಕ್ಕಳೇ... ನನ್ನ ಲೇಖನಗಳನ್ನು ನಿಗದಿತವಾಗಿ ಓದುತ್ತೀರಿ. ನನ್ನ ಲೇಖನಗಳ ಉದ್ದೇಶ ಕೇವಲ ನಿಮ್ಮನ್ನು ವಿಷಯ ಸಂಪನ್ನಗೊಳಿಸುವುದು ಮಾತ್ರವಲ್ಲ ಬದಲು ನಿಮ್ಮನ್ನು ಹೊಸತನ್ನು ಹುಡುಕಲು ಹಚ್ಚುವುದು. ವೈಜ್ಞಾನಿಕ ಮನೋಧರ್ಮ ಎಂದರೆ ಹೊಸತನವನ್ನು ತೆರೆದ ಮನದಿಂದ ಸ್ವೀಕರಿಸುವುದು. ಅನುಮಾನಗಳನ್ನು ಒರೆಗೆ ಹಚ್ಚಿ ಹೊಸ ಅಧ್ಯಯನದಿಂದ ಪರಿಹರಿಸಿಕೊಳ್ಳುವುದೇ ಆಗಿದೆ. ಆದ್ದರಿಂದ ಅಂತಹ ವಿಷಯಗಳಿಗೆ ಆದ್ಯತೆ ನೀಡುತ್ತೇನೆ. 

ಇಲ್ಲಿಯವರೆಗೆ ರಾತ್ರಿ ಹೊತ್ತು ಹುಲ್ಲಿನ ಮೇಲೆ ಇಬ್ಬನಿ ಬಿದ್ದಿರುವುದನ್ನು ನೋಡಿರುವ ನಮಗೆ ಅದು ವಾತಾವರಣದ ನೀರು ಸಂಗ್ರಹವಾಗಿದೆ ಎಂದು ನಾವು ಭಾವಿಸಿದ್ದೆವು. ಆದರೆ ಇದು ಮಾವಿನ ಎಲೆಗಳ ಮೇಲೆ ಸಂಗ್ರಹವಾಗುತ್ತಿಲ್ಲ  ಏಕೆ ಎಂದು ನಾವು ಕೇಳಿಕೊಂಡೇ ಇರಲಿಲ್ಲ. ಅದು ಇಬ್ಬನಿ ಅಲ್ಲ ಎನ್ನುವುದನ್ನು ಕಳೆದ ಒಂದು ಸಂಚಿಕೆಯಲ್ಲಿ ತಿಳಿಸಿದ್ದೆ. ಆಗ ಹಲವರು ಕರೆ ಮಾಡಿ ವಿವರಣೆ ಕೇಳಿದ್ದರು. ಇನ್ನು ಹಲವರು ಜ್ಞಾನದ ಸೆಲೆಯನ್ನು ಹುಡುಕಿಕೊಂಡು ಹೋಗಿರಬೇಕು. ವಿಜ್ಞಾನ ಶಿಕ್ಷಕ ನಿರೀಕ್ಷಿಸುವುದು ಅದನ್ನೇ ಅಲ್ಲವೇ? ಇವತ್ತು ನಾನು ಇನ್ನೊಂದು ವಿಷಯದೊಂದಿಗೆ ಬಂದಿದ್ದೇನೆ.

ನಾನು ಹೇಳಿ ಕೇಳಿ ಹಳ್ಳಿಯಲ್ಲಿ ಹುಟ್ಟಿ ಬೆಳೆದವನು. ನಿವೃತ್ತಿಯ ನಂತರವೂ ಹಳ್ಳಿಗೇ ಹಿಂದಿರುಗಿದೆ. ನಾವು ಬೆಳಗೆದ್ದು ಕಣ್ಣು ತೆರೆದರೆ ನಾವು ಕಾಣುವುದು ಗಿಡಗಳನ್ನೇ. ಗಿಡಗಳೆಂದರೆ ಹಸುರು. ನನಗೆ ಚಿಕ್ಕಂದಿನಿಂದಲೂ ಒಂದು ಪ್ರಶ್ನೆ ಗಿಡಗಳೇಕೆ ಹಸುರು? ಆದರೆ ಕ್ರೋಟನ್ ಎಲೆಗಳಿಗೆ ಬೇರೆ ಬಣ್ಗಗಳಿವೆಯಾದರೂ ಹೆಚ್ಚಾನೆಚ್ಚು ಹಸುರೇ. ನನ್ನ ಶಿಕ್ಷಕರ ಬಳಿ ಇದನ್ನೇ ಕೇಳಿದ್ದೆ. ಅವರು ಮುಂದೆ ನಿನಗೇ ತಿಳಿಯುತ್ತದೆ ಎಂದು ಹೇಳಿದ್ದರು. ನಂತರದ ದಿನದಲ್ಲಿ ಎಲೆಯಲ್ಲಿರುವ ಕ್ಲೋರೊಫಿಲ್ (chlorophill) ಹಸಿರು ಬಣ್ಣದ ವಸ್ತು (pigment) ಹಸಿರು ಬಣ್ಣಕ್ಕೆ ಕಾರಣ ಎಂದು ತಿಳಿಯಿತು. ಎಂಟನೆಯ ತರಗತಿಯಲ್ಲಿ ಕೋಶದ ಬಗ್ಗೆ ತಿಳಸುತ್ತಿದ್ದಾಗ ಎಲೆಗಳ ಹಸಿರು ಬಣ್ಣಕ್ಕೆ ಕಾರಣ ಕ್ಲೋರೋಪ್ಲಾಸ್ಟ್ ಎಂದು ಶಿಕ್ಷಕರು ಹೇಳುತ್ತಿದ್ದರು. ಆದರೆ ಹಿಂದೆ ಹೇಳುತ್ತಿದ್ದುದು ಕ್ಲೋರೊಫಿಲ್ ಈಗ ಕ್ಲೋರೋಪ್ಲಾಸ್ಟ್ ಎಂದು ಹೇಳುತ್ತಿದ್ದೀರಲ್ಲ ಎಂದಿದ್ದೆ. ಆಗ ಅವರು ನೋಡು ಕ್ಲೋರೊಫಿಲ್ ಎಲೆಯಲ್ಲಿರುವ ಹಸಿರು ಬಣ್ಣದ ವಸ್ತು ನಿಜ ಆದರೆ ನಿಜ ಕೋಶಕೇಂದ್ರ ಹೊಂದಿರುವ ಕೋಶಗಳಲ್ಲಿ (eucaryotic cells) ಈ ಕ್ಲೋರೊಫಿಲ್ ಅನ್ನು ಒಂದು ಲಕೋಟೆಯಲ್ಲಿ ಇರಿಸಲಾಗಿದೆ. ಆ ಲಕೋಟೆಯೇ (organelle) ಕ್ಲೋರೋಪ್ಲಾಸ್ಟ್ ಎಂದು ನನಗಿರುವ ಅನುಮಾನ ಪರಿಹರಿಸಿದ್ದರು. ಕ್ಲೋರೋಪ್ಲಾಸ್ಟ್ ನನ್ನ ಪರ್ಸ್ ಆದರೆ ಕ್ಲೋರೊಫಿಲ್ ಅದರೊಳಗಿರುವ ಹಣ ಇದ್ದ ಹಾಗೆ ಎಂದು ಹೋಲಿಕೆಯೊಂದನ್ನು ನೀಡಿದ್ದರು. ನನ್ನ ಅನುಮಾನ ಪರಿಹಾರವಾಗಿತ್ತು. ಆದರೆ ನನಗೆ ಮತ್ತೊಂದು ಸಮಸ್ಯೆ ಉದ್ಭವಿಸಿತ್ತು ಆ ಕ್ಲೋರೊಫಿಲ್ ಯಾಕೆ ಹಸಿರಾಗಿದೆ? ಮತ್ತು ಹಸುರಾಗಿರಬೇಕು? ಎಂಬುದಾಗಿತ್ತು. ನನ್ನ ಜೀವಶಾಸ್ತ್ರದ ಗುರುಗಳ ಬಳಿ ಕೇಳಿದಾಗ ಅವರು ಹೇಳಿದ್ದರು... ಸಸ್ಯ ರಚನೆಯ ಬಗ್ಗೆ ಬೇಕಾದರೆ ನನ್ನ ಬಳಿ ಕೇಳು ಆದರೆ ನೀನು ಕೇಳುತ್ತಿರುವುದು ಬಣ್ಣದ ಬಗ್ಗೆ ಅದನ್ನು ನೀನು ಭೌತಶಾಸ್ತ್ರದ ಅಧ್ಯಾಪಕರ ಬಳಿ ಕೇಳಬೇಕು ಎಂದಿದ್ದರು.

ಇದರ ವಿವರಣೆಯನ್ನು ಅಧ್ಯಾಪಕರ ಬಳಿ ಕೇಳಿ ಹೇಳುತ್ತೇನೆ. ಇನ್ನು ಮುಂದಿನ ವಾರ...
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************** 

Ads on article

Advertise in articles 1

advertising articles 2

Advertise under the article