ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 66
Saturday, December 28, 2024
Edit
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 66
ಲೇಖಕರು : ರಮ್ಯಾ ಆರ್ ಭಟ್
ಸಹ ಶಿಕ್ಷಕಿ.
ಸರಸ್ವತಿ ವಿದ್ಯಾಲಯ ಸಿದ್ದಾಪುರ
ಕುಂದಾಪುರ, ಉಡುಪಿ ಜಿಲ್ಲೆ
Mob: +91 96634 64621
ಎಲ್ಲರಿಗೂ ನನ್ನ ನಮಸ್ಕಾರಗಳು. ಕ್ಯಾಲೆಂಡರ್ ನ ಬದಲಾವಣೆಯಂತೆ ಹಳೆಯ ವರ್ಷಕ್ಕೆ ವಿದಾಯ ಹೇಳಿ ಹೊಸ ವರ್ಷವನ್ನು ಸ್ವಾಗತಿಸಲು ಸಂತೋಷದಿಂದ ಕಾಯುತ್ತಿರುವ ನಮ್ಮೆಲ್ಲರಿಗೂ ಹೊಸ ವರ್ಷ, ಹೊಸ ವಿಚಾರಗಳನ್ನು, ಸಂತಸಗಳನ್ನು, ಹೊಸತನವನ್ನು ತರಲಿ ಎಂದಿಚ್ಛಿಸುತ್ತಾ ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು.
ಚಿಂತನೆ ಎಂಬುವುದು ಮನುಷ್ಯನಿಗೆ ಅತೀ ಅವಶ್ಯ, ಪ್ರತಿಯೊಬ್ಬ ಮನುಷ್ಯನ ಮನಸ್ಸಿನಲ್ಲೂ, ಅವರವರ ವಯಸ್ಸಿಗೆ, ವಾತಾವರಣಕ್ಕೆ, ಸಂಸ್ಕೃತಿಗೆ, ಆಚಾರ ವಿಚಾರಗಳಿಗೆ, ಅವರವರ ಬುದ್ಧಿಶಕ್ತಿಗೆ ತಕ್ಕಂತಹ ಚಿಂತನೆಗಳಿರುತ್ತವೆ. ಚಿಂತನೆಗಳಿಲ್ಲದ ಬದುಕ ಶೂನ್ಯ ಎಂದೆ ನಮ್ಮ ಮಹಾತ್ಮರು ನಮಗೆ ತಿಳಿಸಿಕೊಟ್ಟಿದ್ದಾರೆ. ಹಾಗೆಯೇ ಎಲ್ಲಾ ರೀತಿಯ ಸಕಾರಾತ್ಮಕ ಚಿಂತನೆಗಳಿಗೆ ಅದರದ್ದೇ ಆದ ಬೆಲೆಯೂ ಇರುತ್ತದೆ ಎಂದರೆ ತಪ್ಪಾಗಲಾರದು. ಹೀಗೆ ತರಗತಿಯಲ್ಲಿ ಊಟದ ನಂತರ ಎಲ್ಲ ಮಕ್ಕಳಿಗೂ ವಿಶ್ರಮಿಸಿಕೊಳ್ಳಿ ಎಂದು ಹೇಳಿ, ನಾನು ಊಟ ಮಾಡುವಾಗ ಕೆಲವು ಮಕ್ಕಳ, ಮಾತು, ಪ್ರಶ್ನೆಗಳು, ಅನುಮಾನಗಳ ಸುರಿಮಳೆ ನನ್ನನ್ನು ಸುತ್ತುವರಿದಿರುತ್ತದೆ. ಸಮಯ ಇದ್ದಾಗ ಅದಕ್ಕೆ ಉತ್ತರಿಸಿ, ಸಮಯ ಇಲ್ಲದಿದ್ದಾಗ ಅವರನ್ನು ಸುಮ್ಮನಿರಲು ಹೇಳುತ್ತೇನೆ. ಆದರೂ ಕೆಲವರು ಸುಮ್ಮನಿರಲು ತಯಾರೇ ಇರುವುದಿಲ್ಲ. ಅದಕ್ಕೆ ನಾನು ಒಂದು ದಾರಿ ಹುಡುಕಿದೆ. ನಾನು ಊಟ ಮಾಡುತ್ತಿದ್ದಾಗ ನನ್ನ ಬಳಿ ನಿಂತು ಯಾವಾಗಲು ಮಾತನಾಡುವವಳನ್ನು ಒಂದು ದಿನ, "ಮಗು ಎಲ್ಲರೂ ತುಂಬಾ ಗಲಾಟೆ ಮಾಡುತ್ತಿದ್ದಾರೆ ನೀನು ಅವರನ್ನೆಲ್ಲ ಸುಮ್ಮನಿರಿಸು ನೋಡುವ, ಬೋರ್ಡ್ ಮೇಲೆ ಅವರ ಹೆಸರು ಬರೀ ನೋಡುವ" ಎಂದು ಹೇಳಿದ ನನ್ನ ಪ್ರಯೋಗ ಫಲಿಸಿತು. ಹೀಗೆ ಕೆಲವು ದಿನಗಳ ನಂತರ, ನಿಧಾನವಾಗಿ ನನ್ನ ಬಳಿ ಬಂದು ಮತ್ತೊಬ್ಬಳ ಪ್ರಶ್ನೆ, "ನೀವು ಯಾವಾಗಲೂ ಅವಳನ್ನೇ ಲೀಡರ್ ಮಾಡುವುದು ಏಕೆ? ನನಗೂ ಅವಕಾಶ ಕೊಡಿ, ನಾನು ಆ ಕೆಲಸ ಮಾಡುತ್ತೇನೆ" ಎಂದಳು. ಆಗ ಅವಳಿಗೆ ಬೇಜಾರಾಗದಂತೆ ಉತ್ತರಿಸುವ ಜವಾಬ್ದಾರಿ ನನ್ನದಾಗಿತ್ತು. ಅದಕ್ಕೆ ಅವಳ ಕಿವಿಯಲ್ಲಿ ಹೇಳಿದೆ "ಪುಟ್ಟ ಅವಳು ಯಾವಾಗಲು ನನ್ನ ಬಳಿಯೇ ನಿಂತು ಮಾತನಾಡಿ ತಲೆ ತಿನ್ನುತ್ತಾಳೆ, ಅದಕ್ಕೆ ನಾನು ಇದನ್ನು ಶಿಕ್ಷೆಯಾಗಿ ಅವಳಿಗೆ ನೀಡಿದ್ದೇನೆ ಅಷ್ಟೇ.. ಅದರಲ್ಲೇನು ಭೇದ ಇಲ್ಲ" ಎಂದು, ಸಮಾಧಾನಿಸಿ ಕಳುಹಿಸಿದೆ. ಕೆಲವು ದಿನಗಳ ನಂತರ ಒಂದು ದಿನ, ಆ ಪ್ರಶ್ನೆ ಮಾಡಿದ ಮಗುವನ್ನು ತರಗತಿ ನಿರ್ವಹಣೆ ಮಾಡು ಬಾ ಎಂದು ಕರೆದೆ. ಆಗ ಅವಳು ನಿರಾಕರಿಸಿದಳು. ನೀನೆ ಬಯಸಿದ ಕೆಲಸ ಅಲ್ಲವೇ? ಈಗ ನಿನಗೆ ಕೊಟ್ಟಿರುವೆ ನಿಭಾಯಿಸು ಬಾ ಎಂದು ಕರೆದಾಗ, ನಿರುತ್ಸಾಹದ ಮನಸ್ಸಿನಿಂದ ಅವಳು ಬಂದು ಹೇಳಿದ ವಿಚಾರ ಹೇಗಿತ್ತು ಎಂದರೆ.... ವಯಸ್ಸಿನಲ್ಲಿ ದೊಡ್ಡವರಾದ ನಾವು ನಮ್ಮನ್ನು ನಾವೇ ಪ್ರಶ್ನೆ ಮಾಡಿಕೊಳ್ಳುವಂತಿತ್ತು. ಅವಳು ಹೇಳಿದಳು "ನೀವು ಶಿಕ್ಷೆಯಾಗಿ ಕೊಡುವ ಈ ಕೆಲಸ ನನಗಂತೂ ಬೇಡಪ್ಪ," ಏಕೆ ಹೀಗೆ ಹೇಳುತ್ತಿರುವೆ ಎಂದು ನಾನು ಕೇಳಿದ್ದಕ್ಕೆ "ಆವತ್ತು ನೀವೇ ಅಲ್ಲವೇ ಹೇಳಿದ್ದು, ಆ ಕೆಲಸವನ್ನು ನಾನು ಅವಳಿಗೆ ಶಿಕ್ಷೆಯಾಗಿ ಕೊಟ್ಟಿದ್ದೇನೆ ಎಂದು? ಅವಳೆನೋ ನಿಮಗೆ ತೊಂದರೆ ಕೊಟ್ಟಳು ನೀವು ಶಿಕ್ಷೆಯಾಗಿ ಅವಳಿಗೆ ಆ ಕೆಲಸ ಕೊಟ್ಟಿರಿ. ಆದರೆ ನಾನು ನಿಮಗೆ ಏನೂ ತೊಂದರೆ ಮಾಡಲಿಲ್ಲ ಆದರೂ ನನಗೂ ಅದೇ ಶಿಕ್ಷೆ ಏಕೆ?."
ಉತ್ತರಿಸಲು ಅಸಾಧ್ಯವಾದ ಅವಳ ಆ ಸವಾಲಿಗೆ, ನಾನೊಮ್ಮೆ ಬಾಯಿ ಮುಚ್ಚಿದೆ. ಬಿಡಿಸಿ ಹೇಳಲು ಅವಳಿಗೆ ಗೊತ್ತಿಲ್ಲದಿದ್ದರೂ, ಶಿಕ್ಷೆಯ ರೂಪದಲ್ಲಿ ಬರುವ ಯಾವುದೇ ಹುದ್ದೆಯಾಗಲಿ, ಜವಾಬ್ದಾರಿಯಾಗಲಿ ನನಗೆ ಬೇಡ ಎನ್ನುವ ಮಂಡನೆ ಅವಳ ಮಾತಿನಲ್ಲಿ ಎದ್ದು ಕಾಣುತಿತ್ತು.. "ಇಲ್ಲ ಪುಟ್ಟ ಅಂದು ಅವಳಿಗೆ ಮಾತ್ರ ನಾನು ಶಿಕ್ಷೆಯಾಗಿ ಆ ಕೆಲಸ ಕೊಟ್ಟಿದ್ದೆ, ಆದರೆ ಇಂದು ಅದು ನಿನಗೆ ಶಿಕ್ಷೆಯಲ್ಲ, ನಿನಗೆ ಜವಾಬ್ದಾರಿ ಎಂದಿದ್ದಕ್ಕೆ. ಅವಳ ಪ್ರಶ್ನೆ ಹೀಗಿತ್ತು. "ಸರಿ ಹಾಗಾದರೆ ತಪ್ಪು ಮಾಡಿದವರಿಗೆ ನೀವು ಶಿಕ್ಷೆಯಾಗಿ ಈ ಒಳ್ಳೆಯ ಕೆಲಸವನ್ನು ಕೊಟ್ಟರೆ, ನಾಳೆ ಆ ನಿಮ್ಮ ಶಿಕ್ಷೆಯನ್ನು ಇಷ್ಟ ಪಟ್ಟು ಪಡೆಯಲೆಂದು ಬೇರೆಯವರು, ಬೇಕಂತಲೇ ಗಲಾಟೆ ಮಾಡುವುದಿಲ್ಲವೇ ಮಾತಾಜಿ? ಶಾಲೆಯಲ್ಲಿ ಗಲಾಟೆ ಮಾಡುವವರಿಗೆ ನೀವು ಬೇರೆ ರೀತಿಯಾದ punishment ಕೊಡಿ ಪ್ಲೀಸ್....." ಎಂದಳು.
ಮಕ್ಕಳಿಗೆ ನಾನು ಶಿಕ್ಷೆ ಕೊಡುತ್ತೇನೆ ಎನ್ನುವ ಅರಿವು ಅವರಿಗಾಗಿ ಬಾರದೆಂದು, ಅವರ ಮನಸ್ಸಿಗೆ ನೋವಾಗಬಾರದು ಎನ್ನುವ ಭಾವದಿಂದ ಕೊಟ್ಟಿರುವ ಜವಾಬ್ದಾರಿಯನ್ನು ಶಿಕ್ಷೆಯ ರೂಪದಲ್ಲಿ ಕೊಟ್ಟಿದ್ದೇನೆ ಎಂದು ಹೇಳಿ, ನಾನೇ ಬುದ್ದಿವಂತೆ ಎಂದು ಅಂದು ಬೀಗಿದ್ದೆ.. ಆದರೆ ಆ ಮಗುವಿನ ಚಿಂತನೆಯನ್ನು ನೋಡಿ ಅವಳ ಮುಂದೆ ನಾ ಸೋತೆ. ಈಗಿನ ಮಕ್ಕಳು ಕಂಪ್ಯೂಟರ್ ಯುಗದವರು. ನಮ್ಮ ಯೋಚನೆ ಒಂದೇ ಇದ್ದರೆ ಅವರದ್ದು ಹತ್ತಾರು. ನಾವು ಚಾಪೆಯ ಕೆಳಗೆ ನುಸುಳಿದರೆ ಅವರು ರಂಗೋಲಿಯ ಕೆಳಗೆ ನುಸುಳುತ್ತಾರೆ. ಮಕ್ಕಳನ್ನು ಮಂಗಾ ಮಾಡಬಹುದು ಎಂಬುವುದು ನಮ್ಮ ತಪ್ಪು ಕಲ್ಪನೆಯಷ್ಟೇ. ವಯಸ್ಸು ಚಿಕ್ಕದಾದರೂ ಅವರ ಚಿಂತನೆಗಳು ಯೋಚನೆಗೆ ಮೀರಿದಾಗಿರುತ್ತದೆ. ನಂತರ ಅವಳ ಮಾತಿಗೆ ಮೆಚ್ಚಿ, ನೀನು ಹೇಳುವುದು ಸರಿ ಪುಟ್ಟ ಇಂದಿನಿಂದ ಗಲಾಟೆ ಮಾಡಿದವರಿಗೆ ಶಿಕ್ಷೆ ರೂಪದಲ್ಲಿ ಬೇರೆ ಕೆಲಸ ಕೊಡುತ್ತೇನೆ, ಓಕೆ ನ ಎಂದಾಗ ಅವಳ ಮುಖದಲ್ಲಿ ಮಂದಹಾಸ ಬೀರಿತ್ತು.
"ಮಾತನಾಡುವಾಗ ಎಚ್ಚರದಿಂದಿರು, ಯೋಚಿಸುವಾಗ ದೂರದೃಷ್ಟಿಯಿಂದಿರು, ಕಾರ್ಯ ಮಾಡುವಾಗ ದಕ್ಷನಾಗಿರು" ಎಂಬ ನಮ್ಮ ಹಿರಿಯರ ಅಮೃತ ಬಿಂದುವಿನ ಸಾರದಂತೆ, ನಮ್ಮ ಜೀವನದಲ್ಲಿ ಅದನ್ನು ಅಳವಡಿಸಿಕೊಳ್ಳುವ ಪ್ರಯತ್ನ ಮಾಡೋಣ... ಧನ್ಯವಾದಗಳು