-->
ಜೀವನ ಸಂಭ್ರಮ : ಸಂಚಿಕೆ - 166

ಜೀವನ ಸಂಭ್ರಮ : ಸಂಚಿಕೆ - 166

ಜೀವನ ಸಂಭ್ರಮ : ಸಂಚಿಕೆ - 166
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
        

ಮಕ್ಕಳೇ, ಪತಂಜಲ ಯೋಗ ಸೂತ್ರದಲ್ಲಿ ಮೂರನೇ ಪಾದ 16, 17, 18 ನೇ ಸೂತ್ರದಲ್ಲಿ ಇದು ಬರುತ್ತದೆ. ನಮ್ಮ ಜೀವನ ಸುಂದರವಾಗಬೇಕಾದರೆ ಕ್ರಮದ ಜ್ಞಾನವಾಗಬೇಕು. ನಾವು ಅಶಕ್ತರಾಗಿ ಬಾಳಬಾರದು. ಅಜ್ಞಾನದಲ್ಲಿ ಉಳಿಯಬಾರದು. ಅಸಮಾಧಾನಿಯಾಗಿರಬಾರದು. ನಮ್ಮ ಬದುಕು ಕಾರ್ಯಕ್ಷಮವಾಗಿರಬೇಕು. ನಮ್ಮ ಭಾವ ಮಧುರವು, ಸಂತೋಷದಾಯಕವೂ ಆಗಿರಬೇಕು. ನಮ್ಮ ಮತಿ ಸತ್ಯವನ್ನು ಗ್ರಹಿಸುವ ಸಾಮರ್ಥ್ಯ ಪಡೆದಿರಬೇಕು. ಆಗ ಬದುಕು ಸಾರ್ಥಕ. ಪತಂಜಲ ಮಹರ್ಷಿ ಹೇಗೆ ಬದುಕಬೇಕು ಎಂಬುದನ್ನು ಹೇಳುತ್ತಿದ್ದಾನೆ. ನಮ್ಮಲ್ಲಿ ಶಕ್ತಿಗಳು ಇವೆ. ಅವುಗಳನ್ನು ವಿಕಸಿತಗೊಳಿಸಿ, ಬಳಸಿದಾಗ ಬದುಕು ಸಮೃದ್ಧವಾಗುತ್ತದೆ. ಆತ್ಮ ಸಾಕ್ಷಾತ್ಕಾರ ಮಾತ್ರವಲ್ಲ, ಬದುಕಿನ ಸಾಕ್ಷಾತ್ಕಾರವಾಗಬೇಕು. ಯಾವುದನ್ನು ಉಪೇಕ್ಷೆ ಮಾಡಬಾರದು ಎಂದು ಪತಂಜಲ ಮಹರ್ಷಿ ಹೇಳುತ್ತಾನೆ. ಆತ ಯಾವುದನ್ನು ಉಪೇಕ್ಷೆ ಮಾಡುವುದಿಲ್ಲ. ಹಾಗೆ ಯಾವುದಕ್ಕೂ ಬಹಳ ಮಹತ್ವ ಕೊಡುವುದಿಲ್ಲ. ಈ ಜಗತ್ತು ಸುಂದರವೇ. ಈ ಜಗತ್ತು ನಮಗಾಗಿ ಅನ್ನುವುದನ್ನು ಮರೆಯಬಾರದು. ಜಗತ್ತು ಎಷ್ಟು ಶ್ರೀಮಂತವಿದೆಯೋ, ಅಷ್ಟು ನಮ್ಮ ಮನಸ್ಸು ಶ್ರೀಮಂತವಾದರೆ, ನಮ್ಮ ಬದುಕು ಶ್ರೀಮಂತವಾಗುತ್ತದೆ. ಹಾಗೆ ನಮ್ಮ ಜೀವಿತಾವಧಿಯಲ್ಲಿ ಭೌತಿಕವಾಗಿ, ಮಾನಸಿಕವಾಗಿ, ದೈಹಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ವೈಜ್ಞಾನಿಕವಾಗಿ, ವಿಕಸಿತವಾಗಿ ಬೆಳೆಯಬೇಕು. ಜಗತ್ತು ಹೇಗಿದೆ?. ನಮ್ಮ ದೇಹ ಮನಸ್ಸು ಹೇಗಿದೆ? ಇದನ್ನು ತಿಳಿದುಕೊಳ್ಳದೆ ಸಾಧನೆ ಮಾಡಲು ಆಗುವುದಿಲ್ಲ. 

ಒಂದು ಬೀಜದಲ್ಲಿ ಒಂದು ಮರವೇ ಅಡಗಿದೆ, ಅರಣ್ಯವೇ ಅಡಗಿದೆ ಅನ್ನುವುದು ಗೊತ್ತಾಗಬೇಕು. ನಮ್ಮೊಳಗೆ ದಿವ್ಯತೆ ಇದೆ ಅಂತ ಗೊತ್ತಾಗಬೇಕು. ನಮಗೆ ಯಾವುದು ತಿಳಿಯದೆ ಅನುಭವಿಸಲು ಆಗುವುದಿಲ್ಲ. ಮೊದಲು ಗೊತ್ತು ಮಾಡಿಕೊಳ್ಳಬೇಕು ಅಂದರೆ ತಿಳಿದುಕೊಳ್ಳಬೇಕು. ಜ್ಞಾನ ಬಹಳ ಮಹತ್ವದ್ದು. ಶಕ್ತಿ ಎಷ್ಟೇ ಇರಬಹುದು, ಸಂಪತ್ತು ಎಷ್ಟೇ ಇರಬಹುದು, ತಿಳುವಳಿಕೆ ಇಲ್ಲದೆ ಇದ್ದರೆ ಅಥವಾ ತಿಳುವಳಿಕೆ ಸರಿಯಾಗಿ ಇಲ್ಲದಿದ್ದರೆ ಬದುಕನ್ನು ಶೃಂಗರಿಸುವುದು ಹೇಗೆ ಸಾಧ್ಯ? ನಮ್ಮಲ್ಲಿ ಸಾವಿರ ಸಾವಿರ ಹೂವಿರಬಹುದು. ಆದರೆ ಅದನ್ನು ಬಳಸಿ ಹೂಮಾಲೆ ಕಟ್ಟಲು ಬಾರದಿದ್ದರೆ, ಆ ಹೂವನ್ನು ಶೃಂಗರಿಸುವುದು ಹೇಗೆ?. ಎಷ್ಟು ಇದ್ದರೆ ಜೀವನ ಸುಂದರವಾಗುತ್ತದೆ?. ಅದು ಮಹತ್ವದಲ್ಲ. ಎಷ್ಟು ಇದೆ ಅಷ್ಟರಲ್ಲಿ, ಸಿಂಗರಿಸುವ ಕಲೆ ಇದ್ದರೆ, ಬದುಕು ಶ್ರೀಮಂತವಾಗುತ್ತದೆ. ನಮ್ಮಲ್ಲಿ ನಾಲ್ಕು ಇಂಚು ಕೂದಲು ಇದ್ದರೆ, ಅಷ್ಟನ್ನೇ ಸರಿಯಾಗಿ ಬಾಚಿ, ಹೊಂದಿಸಿ ಇಟ್ಟುಕೊಳ್ಳಬೇಕು. ಅದು ಬಿಟ್ಟು ಬೇರೆಯವರಲ್ಲಿ ಜಾಸ್ತಿ ಇದೆ ಎಂದು ಭಾವಿಸುವುದಲ್ಲ. ಎಷ್ಟಿದೆ ಅಷ್ಟರಲ್ಲಿ, ಎಷ್ಟು ಚೆನ್ನಾಗಿರಬಹುದು ಇದ್ದದ್ದನ್ನು ಶೃಂಗಾರ ಮಾಡಿಕೊಂಡು ಬದುಕಬೇಕು. ಇರೋದು ಎರಡೇ ಕಣ್ಣು, ಜಗತ್ತಿನಲ್ಲಿ ಸುಂದರವಾಗಿರುವುದನ್ನು ನೋಡುತ್ತಾ ಇದ್ದರೆ ಕಣ್ಣು ಶ್ರೀಮಂತವಾಗುತ್ತದೆ. ಎರಡೇ ಕಿವಿ ಜಗತ್ತಿನ ಶಬ್ದ ಸಿರಿಯನ್ನು ಗ್ರಹಿಸುವ ಅನುಭವಿಸುವ ಸಾಮರ್ಥ್ಯ ಇದೆ. ಇಂದ್ರಿಯಗಳಲ್ಲಿ ಎಂತಹ ಅದ್ಭುತ ಸಾಮರ್ಥ್ಯ ಇದೆ. ದೇಹದಲ್ಲೂ ಅದ್ಭುತ ಸಾಮರ್ಥ್ಯವಿದೆ. ಹೃದಯ, ಶ್ವಾಸಕೋಶ ನೂರು ವರ್ಷ ಕೆಲಸ ಮಾಡುತ್ತವೆ. ದೇಹದೊಳಗೆ ನೋಡುತ್ತಿದ್ದರೆ ಅಷ್ಟು ಅದ್ಭುತ ಕಾರ್ಯ ಮಾಡುತ್ತದೆ. ನಾವು ಮಾಡಿರುವ ವಸ್ತು ದುರಸ್ತಿಗೆ ಬರುತ್ತದೆ. ಅದಕ್ಕೆ ಹಣ ವೆಚ್ಚ ಮಾಡಬೇಕು. ಆದರೆ ನಮ್ಮ ದೇಹಕ್ಕೆ ಒಂದು ಗಾಯವಾದರೆ, 10 ನಿಮಿಷದಲ್ಲಿ ರಕ್ತ ನಿಲ್ಲಿಸಿ, ಆ ಗಾಯ ವಾಸಿಯಾಗಲು ತನಗೆ ತಾನೆ ಕಾರ್ಯೋನ್ಮುಖವಾಗುತ್ತದೆ. ಸೂಜಿ ಇಲ್ಲ. ದಾರ ಇಲ್ಲ. ಆದರೂ ಹೊಲಿಯುತ್ತದೆ. ಇದೇ ಅದ್ಭುತ.

ನಮ್ಮ ಸಣ್ಣ ತಲೆಯಲ್ಲಿರುವ ಬುದ್ದಿ ಏನೇನು ತಿಳಿದುಕೊಳ್ಳುತ್ತದೆ? ಅಷ್ಟು ಸಾಮರ್ಥ್ಯ ಬುದ್ದಿಗೆ. ಇಷ್ಟೆಲ್ಲ ಸಾಮರ್ಥ್ಯ ಇರುವ ದೇಹದ ಬಗ್ಗೆ ತಿಳಿದುಕೊಳ್ಳದೆ ಬಡವನಾಗಿ ಬದುಕುತ್ತಿಯಲ್ಲ ಏಕೆ? ಮನುಷ್ಯ ಮೊದಲು ಶ್ರೀಮಂತನಾಗಬೇಕು. ದೈಹಿಕವಾಗಿ, ಬೌದ್ಧಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ ಸಾಂಸ್ಕೃತಿಕವಾಗಿ, ವೈಜ್ಞಾನಿಕವಾಗಿ ಶ್ರೀಮಂತರಾಗಬೇಕು. ಈ ಜಗತ್ತಿನಲ್ಲಿ ಯಾವುದೇ ಘಟನೆಯಾಗಲು ಅದಕ್ಕೊಂದು ಕ್ರಮ ಇದೆ. ಒಂದು ಹೂವು ಅರಳಲು ಒಂದು ಕ್ರಮ ಇದೆ. ಒಂದು ಬೀಜ ಮೊಳೆತು ಗಿಡವಾಗಿ ಹೂ ಹಣ್ಣು ಬಿಡಲು ಒಂದು ಕ್ರಮ ಅನುಸರಿಸುತ್ತದೆ. ಒಂದು ಗಿಡ ಅಷ್ಟೇ ಕಾಲಕ್ಕೆ ಅದು ಹಣ್ಣು ಬಿಡುವುದು. ಒಂದು ಭತ್ತದ ತಳಿ ಮೂರು ತಿಂಗಳಿಗೆ ಫಲ ಕೊಟ್ಟರೆ, ಮತ್ತೊಂದು ತಳಿ 4 ತಿಂಗಳು, ಇನ್ನೊಂದು ಆರು ತಿಂಗಳು, ಅದರ ಕ್ರಮದಲ್ಲೇ ಅದು ಫಲ ನೀಡುತ್ತದೆ. ಇಂದೆ ನೆಟ್ಟು ಇಂದೇ ಫಲ ನಿಸರ್ಗದಲ್ಲಿ ಇಲ್ಲ. ಮನುಷ್ಯನ ಆಸೆಯಲ್ಲಿದೆ. ಆದರೆ ನಿಸರ್ಗದಲ್ಲಿ ಇಲ್ಲ. ನಮ್ಮ ಆಸೆ ತೀವ್ರವಾಗಿರುವುದರಿಂದ ಶೀಘ್ರವಾಗಿ ದೊರಕಲಿ ಎಂದು ನಿರೀಕ್ಷೆ ಮಾಡುತ್ತೇವೆ. ಅಲ್ಲೇ ನಾವು ತಪ್ಪುವುದು‌. ಪ್ರತಿಯೊಂದು ಕ್ರಮವಾಗಿ ನಡೆಯುತ್ತದೆ. ಕಾಲ, ಕ್ರಮವನ್ನು ನಿಯಂತ್ರಿಸುತ್ತದೆ. ಕ್ರಮ, ಕಾಲವನ್ನು ಅನುಸರಿಸುತ್ತದೆ. ಆದ್ದರಿಂದ ಜಗತ್ತು ಸುಂದರವಾಗಿದೆ. ಕ್ರಮ ಪಾಲಿಸದಿದ್ದರೆ ಅಂದ ಕೆಡುತ್ತದೆ. ಕ್ರಮ ನಮಗೆ ಗೊತ್ತಿರುವುದರಿಂದ ಅದರ ಫಲ ಪಡೆಯಲು ಸಾಧ್ಯ. 

ಒಂದು ಮಗು 6 ವರ್ಷ 10 ತಿಂಗಳು ಕಳೆದ ಮೇಲೆ ಶಾಲೆಗೆ ಹೋಗಬೇಕು. ಅದು ಕ್ರಮ. ದೈಹಿಕ, ಬೌದ್ಧಿಕ ಸಾಮರ್ಥ್ಯ ಒಂದು ಹಂತಕ್ಕೆ ಬಂದಾಗ, ಗ್ರಹಣ ಸಾಮರ್ಥ್ಯ ಹೆಚ್ಚುತ್ತದೆ. ಶಿಕ್ಷಣ, ತರಗತಿಯ ಕ್ರಮವಾಗಿ ಸಾಗಿ ಹೋಗುತ್ತದೆ. ಮಗು ಚೆನ್ನಾಗಿದೆ ಎಂದು ಹುಟ್ಟಿದ ಕೂಡಲೇ ಲಗ್ನ ಮಾಡಿದರೆ ಗತಿಯೇನು? ಈ ಕ್ರಮ ನಾವು ಮಾಡಿದ್ದಲ್ಲ. ನಿಸರ್ಗ ಮಾಡಿದ್ದು. ಜೀವನಕ್ಕೆ ಒಂದು ಕ್ರಮ. ಜಗತ್ತಿಗೂ ಒಂದು ಕ್ರಮ ಇದೆ. ಪ್ರತಿ ಘಟನೆಗೂ ಒಂದು ಕ್ರಮ ಇದೆ. ಸೂರ್ಯ ಹುಟ್ಟುವುದು, ಮುಳುಗುವುದು ಒಂದು ಕ್ರಮ. ಅದೇ ಸಮಯಕ್ಕೆ ಸರಿಯಾಗಿ ಆಗುತ್ತದೆ. ಆ ಕ್ರಮವನ್ನು ನಾವು ತಿಳಿದುಕೊಂಡು ಹೇಳುತ್ತೇವೆ. ಯಾವಾಗಲೋ ಸೂರ್ಯೋದಯ, ಯಾವಾಗಲೋ ಸೂರ್ಯಸ್ತ ಇದೆ ಏನು? ಒಂದೊಂದು ಕ್ರಮ ಭಿನ್ನ-ಭಿನ್ನವಾಗಿರುತ್ತದೆ. ಅದರಿಂದ ಪರಿಣಾಮಗಳು ಭಿನ್ನವಾಗಿರುತ್ತದೆ. ಅದರಿಂದ ಕ್ರಮವನ್ನು ತಿಳಿದುಕೊಳ್ಳಬೇಕು. ಒಂದೊಂದು ಗಿಡದ ಬೆಳವಣಿಗೆಯ ಕ್ರಮ ಭಿನ್ನ-ಭಿನ್ನವಾಗಿರುತ್ತೆ. ಅದರಿಂದ ಪರಿಣಾಮ ಭಿನ್ನವಾಗಿರುತ್ತದೆ. ಪರಿಣಾಮಕ್ಕೆ ಕ್ರಮಕ್ಕೆ ಸಂಬಂಧವಿದೆ. ಉದಾಹರಣೆಗೆ ಇಟ್ಟಿಗೆಗಳು ಇವೆ ಎಂದು ಭಾವಿಸಿ. ಅವುಗಳನ್ನು ಒಂದು ರೀತಿ ಜೋಡಿಸಿದರೆ ತ್ರಿಕೋನ. ಮತ್ತೊಂದು ರೀತಿ ಜೋಡಿಸಿದರೆ ಚೌಕ. ವೃತ್ತಾಕಾರದಲ್ಲಿ ಜೋಡಿಸಿದರೆ ವೃತ್ತ ಮನೆಯಾಗುತ್ತದೆ. ಜೋಡಣೆ ಹೇಗೋ ಹಾಗೆ ಪರಿಣಾಮ. ಅಂದರೆ ಆಕೃತಿ, ಇಟ್ಟಿಗೆ ಅವೇ ಆದರೂ ಕ್ರಮ ಬೇರೆ. ಇದೇ ಇಟ್ಟಿಗೆ ಮಹಲನ್ನು, ಗುಡಿಯನ್ನು, ಗುಡಿಸಲನ್ನು ನಿರ್ಮಿಸಬಹುದು. ಇಟ್ಟಿಗೆ ಅವೆ, ಜೋಡಿಸುವ ಕ್ರಮ ಬೇರೆ. ಅದರಂತೆ ಆಕಾರ ಬೇರೆ ಬೇರೆ, ವಸ್ತುಗಳು ಒಂದೇ ಇರುತ್ತವೆ. ಆ ವಸ್ತುವಿನ ಕ್ರಮ ಬೇರೆ ಬೇರೆ ಯಾದರೆ ಪರಿಣಾಮ ಬೇರೆಯಾಗುತ್ತದೆ. ಕ್ರಮಗಳನ್ನು ತಿಳಿದುಕೊಳ್ಳಬೇಕು. ಯಾವ ಕ್ರಮದಿಂದ ಯಾವ ಪರಿಣಾಮವಾಗುತ್ತದೆ ತಿಳಿದರೆ ನಾವು ಜ್ಞಾನಿಗಳಾಗುತ್ತೇವೆ. ಕ್ರಮದಲ್ಲಿ ಭಿನ್ನತೆ ಇದ್ದರೆ ಪರಿಣಾಮವೂ ಬಿನ್ನ. ಇಬ್ಬರೂ ವ್ಯಕ್ತಿಗಳು ಒಂದೇ ಸಂಸ್ಥೆಯಲ್ಲಿ, ಒಂದೇ ವೇತನ ಪಡೆದರು. ಅವರು ಆ ಹಣವನ್ನು ಬಳಸುವ ಕ್ರಮ ಬೇರೆ ಬೇರೆಯಾಗಿರುವುದರಿಂದ, ಒಬ್ಬನಲ್ಲಿ ಹಣ ಇರುವುದಿಲ್ಲ, ಇನ್ನೊಬ್ಬರಲ್ಲಿ ಹೆಚ್ಚು ಹಣ ಇರುತ್ತದೆ. ಕ್ರಮದ ಪ್ರಕಾರ ಪರಿಣಾಮವಾಗುತ್ತದೆ. ಜಗತ್ತಿನಲ್ಲಿ ಇಷ್ಟೊಂದು ವೈವಿಧ್ಯತೆ ಏಕೆಂದರೆ ಕ್ರಮ ಪರಿಣಾಮಕ್ಕೆ ಕಾರಣವಾಗುತ್ತದೆ. ಒಂದು ಕ್ರಮದಿಂದ ಒಂದು ಪರಿಣಾಮ. ಎರಡನೇ ಕ್ರಮದಿಂದ ಎರಡನೇ ಪರಿಣಾಮ. ಒಂದನೇ ಕ್ರಮದಿಂದ ಎರಡನೇ ಪರಿಣಾಮವಿಲ್ಲ. ಅದೇ ರೀತಿ ಎರಡನೇ ಕ್ರಮದಿಂದ ಒಂದನೇ ಪರಿಣಾಮವಿಲ್ಲ. ಉದಾಹರಣೆಗೆ ಗಣಿತದಲ್ಲಿ ಸಂಖ್ಯೆಗಳು 0 ಮತ್ತು 9 ಇರುವ, 9 ಅಂಕೆಗಳನ್ನು ಬೇರೆ ಬೇರೆ ಜೋಡಿಸಿದರೆ ಬೇರೆ ಬೇರೆ ಸಂಖ್ಯೆಯಾಗುತ್ತದೆ.1 ಪಕ್ಕ 1 ಇಟ್ಟರೆ 11, 1 ಪಕ್ಕ 2 ಇಟ್ಟರೆ 12, 9 ರ ಪಕ್ಕ1 ಇಟ್ಟರೆ 91, ಹೀಗೆ ಕ್ರಮಕ್ಕೆ ಅನುಗುಣವಾಗಿ ಪರಿಣಾಮ ಇರುತ್ತದೆ. 9ರ ಪಕ್ಕ 9 ಅದರ ಪಕ್ಕ 9 ಇಟ್ಟರೆ 999. ಹೀಗೆ ಅಂಕಿಗಳ ಜೋಡಣೆಯಿಂದ ಎಷ್ಟು ಸಂಖ್ಯೆಗಳನ್ನಾದರೂ ಮಾಡಬಹುದು. ಜಗತ್ತಿನಲ್ಲಿ ಎಣಿಸಲಾರದಷ್ಟು ಸಂಖ್ಯೆಯಾಗುತ್ತದೆ. 20ರ ಪಕ್ಕ 1 ಇಟ್ಟರೆ 21, ಈಗ 120 ಮತ್ತು 1020 ಬಹಳ ವ್ಯತ್ಯಾಸ. ಅಂಕೆಗಳು ಜೋಡಿಸಿರುವುದು 1,2 ಮತ್ತು 0. ಕ್ರಮ ಬದಲಾದಂತೆ ಪರಿಣಾಮ ಬದಲಾಗುತ್ತದೆ. ಪರಿಣಾಮ ಬದಲಾಗಬೇಕಾದರೆ ಕ್ರಮ ಬದಲಾಗುತ್ತೆ. ಆ ಇಂದ ಳ ವರೆಗಿನ ಅಕ್ಷರಗಳನ್ನು, ಅವುಗಳ ಜೋಡಣೆಯಿಂದ ಬೇಕಾದಷ್ಟು ಪದಗಳನ್ನು ಮಾಡಬಹುದು. ಅಕ್ಷರ ಅವುಗಳ ಕಾಗುಣಿತಗಳನ್ನು ವೈವಿಧ್ಯವಾಗಿ ಬಳಸುವುದರಿಂದ ಭಾಷಾ ಸಂಪತ್ತು ಬೆಳೆಯುತ್ತದೆ. ಶಬ್ದಕ್ಕೆ ಅರ್ಥ ಇದೆ. ಅಕ್ಷರಕ್ಕೆ ಅರ್ಥ ಇಲ್ಲ. ಮೂಲ ವಸ್ತು ಸ್ವಲ್ಪ ಇದ್ದರೂ, ಅವುಗಳ ಜೋಡಣೆಯಿಂದ ಅನೇಕ ವಸ್ತುಗಳಾಗುತ್ತದೆ. ಒಂದೇ ರೀತಿ ಸಾಮಾನುಗಳನ್ನು ಇಬ್ಬರಿಗೆ ನೀಡಿದರು, ಆಹಾರದ ರುಚಿ ಬೇರೆ ಬೇರೆ ಆಗಿರುತ್ತದೆ. ಕಾರಣ ಮಾಡುವ ಕ್ರಮ ಒಂದೇ ರೀತಿಯಲ್ಲಿ ಇರುವುದಿಲ್ಲ. ಪದಗಳನ್ನು ಇಬ್ಬರೂ ಮಾತನಾಡಿದರು, ಬಳಸುವ ರೀತಿ, ಹೇಳುವ ರೀತಿಯಿಂದ ಬಿನ್ನವಾಗುತ್ತದೆ. ಬಳಸುವ ರೀತಿ, ಹೇಳುವ ರೀತಿ ವ್ಯತ್ಯಾಸವಾದರೆ ಪರಿಣಾಮ ಬದಲಾಗುತ್ತದೆ. ಒಂದೊಂದು ಪರಿಣಾಮವಾಗುತ್ತದೆ. ಉದ್ದೇಶ, ಭಾವ ಬದಲಾದಂತೆ, ಪರಿಣಾಮ ಬದಲಾಗುತ್ತದೆ. ನಮ್ಮ ಜೀವನ ಏಕೆ ಹಾಳಾಗುತ್ತದೆ ಎಂದರೆ, ಹೇಗೆ ಬಳಸಬೇಕು ಎನ್ನುವ ಕ್ರಮ ಗೊತ್ತಿಲ್ಲ. ಆದ್ದರಿಂದ ಇರುವುದು ಆರು ರಸ. ಅವುಗಳ ಹೊಂದಾಣಿಕೆಯಿಂದ ಬೇರೆ ಬೇರೆ ರಸವಾಗುತ್ತದೆ. ನಮ್ಮ ಬದುಕಿನ ವೈಭವ ಹಾಳಾಗುವುದು, ಹೊಂದಿಸುವುದು ಅಂದರೆ ಕ್ರಮ ಗೊತ್ತಿಲ್ಲದೆ ಇರುವುದು. ಜಗತ್ತೆಲ್ಲ ಒಂದು ಕ್ರಮವಾಗಿ ಸಾಗುವುದರಿಂದ, ಆ ಕ್ರಮ ತಿಳಿದುಕೊಳ್ಳಬೇಕು. ಯಾವ ಕ್ರಮ ಅನುಸರಿಸಿದರೆ ಏನು ಪರಿಣಾಮ ಆಗುತ್ತದೆ ತಿಳಿದರೆ, ಬದುಕು ಅರಳುವಂತಹ ಕ್ರಮ ಅನುಸರಿಸಬಹುದು ಅಲ್ಲವೇ ಮಕ್ಕಳೇ.
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
*******************************************

Ads on article

Advertise in articles 1

advertising articles 2

Advertise under the article