-->
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 64

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 64

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 64
ಲೇಖಕರು : ರಮ್ಯಾ ಆರ್ ಭಟ್
ಸಹ ಶಿಕ್ಷಕಿ. 
ಸರಸ್ವತಿ ವಿದ್ಯಾಲಯ ಸಿದ್ದಾಪುರ
ಕುಂದಾಪುರ, ಉಡುಪಿ ಜಿಲ್ಲೆ
Mob: +91 96634 64621             
          
ಮಕ್ಕಳ ಜಗಲಿಯ ಪ್ರಿಯ ಓದುಗರಿಗೆಲ್ಲ ನನ್ನ ನಮಸ್ಕಾರಗಳು.. ಕಳೆದ ವಾರದ ನನ್ನ ಲೇಖನದ ಬಗ್ಗೆ ಸಕಾರತ್ಮಕ ಅಭಿಪ್ರಾಯಗಳನ್ನು ನೀಡಿ, ಇನ್ನಷ್ಟು ಇಂತಹ ಬರಹಕ್ಕೆ ಪ್ರೇರಣೆ ನೀಡುತ್ತಿರುವ ಜಗಲಿ ಕಟ್ಟೆಯ ಹಿರಿಯ ಗುರುಗಳಿಗೆಲ್ಲರಿಗೂ ನನ್ನ ವಂದನೆಗಳು.. ನಿಮ್ಮ ಪ್ರೋತ್ಸಾಹ ಹೀಗೆ ನನಗಿರಲಿ ಎಂದು ಬಯಸುತ್ತೇನೆ.
                  

ಸಂವಿಧಾನವನ್ನು ದೇವರಂತೆ ಪೂಜಿಸುವ ದೇಶ ನಮ್ಮದು. ಬಡವನೆ ಇರಲಿ, ಶ್ರೀಮಂತನೆ ಆಗಿರಲಿ ತನ್ನ ಹಕ್ಕನ್ನು ತಾನು ಚಲಾಯಿಸುವ ಸ್ವತಂತ್ರ ಇರುವ ಸಮಾಜ ನಮ್ಮದಾಗಿದೆ. ಹೀಗಿರುವಾಗ ಇದೆ ವಿಚಾರಕ್ಕೆ ಸಂಬಂಧ ಪಡುವಂತಹ ಘಟನೆ ಒಂದು ತರಗತಿಯಲ್ಲಿ ನಡೆಯಿತು. 

ಶಾಲೆಗೆ ಬಂದೊಡನೆ ಮಕ್ಕಳು ಹಿಂದಿನ ದಿನ ಮನೆಯಲ್ಲಿ ನಡೆದ ಎಲ್ಲ ವಿಚಾರವನ್ನು ನನ್ನಲ್ಲಿ ಹಂಚಿಕೊಳ್ಳುತ್ತಾ, ತಮಾಷೆ, ಹರಟೆ, ಹೀಗೆ 10 ನಿಮಿಷ ಕಳೆದ ನಂತರ, ಶಾಲಾ ಪ್ರಾರ್ಥನೆ ಶುರುವಾಗುತ್ತದೆ. ಆ ಸಮಯದಲ್ಲಿ ಮಕ್ಕಳಿಗೆ ಕೆಲವು ದೈನಂದಿನ ಶ್ಲೋಕಗಳು, ಅಮೃತ ವಚನಗಳು, ಮಂಕುತಿಮ್ಮನ ಕಗ್ಗ, ಹೀಗೆ ಎಲ್ಲವನ್ನು ಹೇಳಿಕೊಡುವ ಪದ್ಧತಿ. ನಮ್ಮಲ್ಲಿ ಹೇಳುವ ಸಮಯದಲ್ಲಿ ಕೂತು ಹೇಳುವ ಕಾರಣ, ನೆಲದಲ್ಲಿ ಜಮಕಾನೆಗಳನ್ನು ಹಾಸಿ ಅದರ ಮೇಲೆ ಮಕ್ಕಳು ಕೂರುವಂಥದ್ದು. ಹಾಸುವ ಕೆಲಸವನ್ನು ಮಕ್ಕಳೇ ಮಾಡುವುದು, ಹೀಗಿರುವಾಗ ಪ್ರಾರ್ಥನೆ ಮುಗಿದು ಎಲ್ಲವನ್ನು ಪುನಃ ಮಡಿಚಿ ಇಡುವಾಗ, ಮಕ್ಕಳ ಗುಂಪಿನಿಂದ ಜೋರಾದ ಕೂಗು ಕೇಳಿ ಬಂತು, 'ಮಾತಾಜಿ.......' ಎಂದು ಕೂಗುವ ಆ ಸ್ವರದಲ್ಲಿ, ಸಿಟ್ಟು, ಅಸಹಾಯಕತೆ, ನೋವು, ಅನ್ಯಾಯವನ್ನು ನಿಂದಿಸುವ ಎಲ್ಲ ಭಾವನೆಗಳು ಇದ್ದವು.. ನಾನು "ಏನಾಯಿತು? ಏಕೆ ಹೀಗೆ ಕೂಗುತ್ತಿರುವೆ, ಕಣ್ಣಲ್ಲಿ ಏಕೆ ನೀರು?" ಎಂದು ಕೇಳಿದೆ, ಆಗ ಅವನು ಹೇಳಿದ, "ಮಾತಾಜಿ ಇವರು ಜಮಕಾನೆ ಮಡಿಚಲು ಬಿಡುವುದೇ ಇಲ್ಲ, ಪ್ರತಿ ದಿನವು ಹೀಗೆ ಮಾಡುತ್ತಾರೆ. ಎಂದು ಅಳಲು ಆರಂಭಿಸಿದ. ಆಗ ನಾ ಹೇಳಿದೆ "ಅಷ್ಟೇನಾ? ಅದಕ್ಕೆಲ್ಲ ಅಳುವುದು ಏಕೆ ಪುಟ್ಟ" ಸಮಾಧಾನ ಮಾಡಿದೆ. ಆದರೂ ಅವನು ಅಳುತ್ತಲೇ ಇದ್ದ. ಆಗ ಮತ್ತೆ ಕರೆದು ಕೇಳಿದೆ. ಆಗ ಅವನು ಹೇಳಿದ ರೀತಿ, ವಿಚಾರ, ವಾದ, ಎಲ್ಲವೂ ನ್ಯಾಯಯುತವಾಗಿತ್ತು.

 "ಅಲ್ಲ ಮಾತಾಜಿ, ಇಲ್ಲಿ ಇರುವ ಎಲ್ಲ ವಿದ್ಯಾರ್ಥಿಗಳು ಕಳೆದ ವರ್ಷವೂ ಇಲ್ಲೇ ಓದಿದ್ದಾರೆ ಅಲ್ಲವೇ? ನಾವು ಕೆಲವು ಜನ ಈ ವರ್ಷ ಹೊಸದಾಗಿ ಬಂದಿದ್ದೇವೆ. ಇಲ್ಲಿದ್ದವರೆಲ್ಲ ಕಳೆದ ವರ್ಷವೂ ಜಮಕಾನೆ ಹಾಸುವ ಕೆಲಸವನ್ನು ಮಾಡಿಯೇ ಬಂದಿದ್ದಾರೆ. ಹಾಗಿದ್ದಲ್ಲಿ ಈ ವರ್ಷ ಹೊಸದಾಗಿ ಬಂದವರಿಗೆ ಅವಕಾಶ ಕೊಡಬೇಕಲ್ಲವೇ? ಬರೀ ಇವರೇ ಎಲ್ಲ ಕೆಲಸ ಮಾಡಿದರೆ, ನಾನು ಮಾಡುವುದು ಯಾವಾಗ? ನಾನು ಕಲಿಯುವುದು ಯಾವಾಗ?" ಎಂದು ಕಣ್ಣಲ್ಲಿ ನೀರು ತುಂಬಿಕೊಂಡು, ಗಂಟಲಲ್ಲಿ ಉಸಿರು ಬಿಗಿ ಹಿಡಿದು, ಹೇಳತೊಡಗಿದ. ನನಗೆ ನಗು ತಡೆಯಲಾಗದೆ, ಮನಸ್ಸಿನಲ್ಲೇ ನಕ್ಕು, "ಆಯಿತು ಮಾರಾಯ ಅಷ್ಟೇ ಅಲ್ಲವೇ" ನಾಳೆಯಿಂದ ದಿನಕ್ಕೆ ಒಬ್ಬೊಬ್ಬರಿಗೆ ಜಮಕಾನೆ ಹಾಸುವ ಕೆಲಸ ಕೊಡುತ್ತೇನೆ. ಅದರಲ್ಲಿ ಮೊದಲ ಡ್ಯೂಟಿ ಹೊಸಬರಿಗೆ ಕೊಡುತ್ತೇನೆ. ಈಗ ಅಳಬೇಡ ಹೋಗು" ಎಂದು ಹೇಳಿ, ಬೇರೆ ಮಕ್ಕಳಿಗೆಲ್ಲ ತಿಳಿಸಿ ಹೇಳಿದೆ. "ನೀವು ಕಲಿತಿರುವ ಇಲ್ಲಿನ ಎಲ್ಲ ನಿಯಮಗಳನ್ನು ಬಂದ ಹೊಸ ಮಕ್ಕಳಿಗೂ ಹೇಳಿಕೊಡಬೇಕು. ಮಕ್ಕಳೇ, ಅವರನ್ನು ನಿಮ್ಮ ಜೊತೆ ಕೆಲಸಕ್ಕೆ ಸೇರಿಸಿಕೊಂಡು ಸ್ನೇಹದಿಂದ ಇರಬೇಕು." ಎಂದೆಲ್ಲ ಹೇಳಿದೆ.. ಎಲ್ಲರೂ "ಸರಿ ಮಾತಾಜಿ" ಎಂದು ಹೇಳಿದ ನಂತರ ಅವನ ಮುಖದಲ್ಲಿ ನಗು ಮೂಡಿತು.

ಮಾರನೇ ದಿನದಿಂದ ಎಲ್ಲರೂ ಕೂಡಿಕೊಂಡೆ ಆ ಕೆಲಸಗಳನ್ನು ಹಂಚಿಕೊಂಡು ಮಾಡತೊಡಗಿದರು. ವಿಚಾರ ಕೇಳಲು ಸಾಮಾನ್ಯವಾಗಿದೆ. ಆ ವಿಚಾರದಲ್ಲಿ ಆ ಮಗುವಿನ, ಧೋರಣೆ, ತನ್ನ ಕೆಲಸದ ಹಕ್ಕು ತನಗೂ ಇದೆ ಎನ್ನುವ ತರ್ಕ, ಸಿಗದಿದ್ದನ್ನು ಛಲದಿಂದಾದರೂ ಪಡೆಯಬೇಕೆನ್ನುವ ಆ ಮನಸ್ಥಿತಿ ಎಲ್ಲವೂ ಸಕಾರತ್ಮಕ ಬೆಳವಣಿಗೆಯ ಲಕ್ಷಣಗಳು. ಅವನ ಆ ಬುದ್ಧಿ ಎಲ್ಲ ವಿಚಾರದಲ್ಲೂ ಹಾಗೆ ಕಲಿಕೆಯಲ್ಲೂ ಇರಲಿ ಎಂದು ಆಶಿಸುತ್ತೇನೆ. 

ಇಂತಹ ಆಲೋಚನೆಗಳೊಂದಿಗೆ ಮಕ್ಕಳು ಬೆಳೆದಾಗ ಮಾತ್ರ ಅವರ ಸರ್ವತೋಮುಖ ವಿಕಾಸವಾಗುವುದು ಎನ್ನುವುದು ನನ್ನ ಭಾವನೆ. ಬರೀ ಓದು ಬರಹ ಮಾತ್ರವಲ್ಲ, ಇಂತಹ ವಿಚಾರಗಳಲ್ಲೂ ಕಲಿಯಬೇಕಾದದ್ದು ಇದೆ. ಇಂತಹ ಬೆಳವಣಿಗೆಗೆ ಸಹಕರಿಸಿ, ಇಂತಹ ಚಿಗುರುಗಳಿಗೆ ನೀರೇರೆಯುವವರೇ ಶಿಕ್ಷಕರು ಎಂದರೆ ತಪ್ಪಾಗಲಾರದು.. ಧನ್ಯವಾದಗಳು 
...................................... ರಮ್ಯಾ ಆರ್ ಭಟ್
ಸಹ ಶಿಕ್ಷಕಿ. 
ಸರಸ್ವತಿ ವಿದ್ಯಾಲಯ ಸಿದ್ದಾಪುರ
ಕುಂದಾಪುರ, ಉಡುಪಿ ಜಿಲ್ಲೆ
Mob: +91 96634 64621
*******************************************


Ads on article

Advertise in articles 1

advertising articles 2

Advertise under the article