ನಿಷ್ಪಾಪಿ ಸಸ್ಯಗಳು : ಸಂಚಿಕೆ - 78
Wednesday, November 27, 2024
Edit
ನಿಷ್ಪಾಪಿ ಸಸ್ಯಗಳು : ಸಂಚಿಕೆ - 78
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ.
ಪ್ರೀತಿಯ ಮಕ್ಕಳೇ.... ಹೇಗಿದ್ದೀರಿ? ನಾವು ಒಂದೆರಡು ವಾರಗಳ ಹಿಂದೆ 'ಗಿಜಿಗಿಜಿ ಕಾಯಿ' ಅಂತ ಒಂದು ಗಿಡದ ಪರಿಚಯ ಮಾಡಿಕೊಂಡದ್ದು ನೆನಪಿದೆಯೆ?
ಇಂದು ಇನ್ನೊಂದು ವಿಧದ ಗಿಜಿಗಿಜಿ ಕಾಯಿ ಗಿಡದ ಜೊತೆ ಸ್ನೇಹ ಮಾಡಿ ಅದರ ಜೊತೆ ಮಾತನಾಡೋಣ.. ಏನಂತೀರಾ?
ನೋಡಿ.. ಓ ಅಲ್ಲಿ ಮಾರ್ಗದ ಇಕ್ಕೆಲಗಳಲ್ಲೂ ಸೊಂಪಾಗಿ ಬೆಳೆದ ಗಿಡಗಳ ಬಳಿಗೆ ಹೋಗೋಣ.. ಮೊದಲೇ ಪರಿಚಯವಿರದಿದ್ದರೂ ಗಿಡಗಳನ್ನು ನೋಡಿ ಮೊದಲಿಗೆ ನಾವೇ ನಗೋಣ ಆಗದೇ..?
ಅಲ್ಲಿ ನೋಡಿ.. ದಟ್ಟವಾದ ಹಸಿರು ಹೊದ್ದ ಗಿಡಗಳಿಗೂ ನಿಮ್ಮನ್ನು ನೋಡಿ ಬಹಳ ಖುಷಿಯಾದಂತಿದೆ... ಒಂದು ಒಂದೂವರೆ ಮೀಟರ್ ಎತ್ತರ ಬೆಳೆದಿರುವ ಈ ಗಿಡಗಳ ಆಕಾರ, ಹೂ, ಕಾಯಿ ನೋಡುವುದೇ ಒಂದು ಸೊಗಸಲ್ವೇ! ನೋಡಿ... ಗಿಡವೇ ಮಾತನಾಡತೊಡಗಿದೆ. ಆಲಿಸುವ ಕಿವಿಗಳು ನಮಗಿರಬೇಕು ಅಷ್ಟೇ ! ಕೇಳಿ...
"ಮಕ್ಕಳೇ, ನಾನು ಒಂದು ನಿಷ್ಪಾಪಿ ಸಸ್ಯ! ನನ್ನನ್ನು ಸಾಮಾನ್ಯವಾಗಿ ಆಡುಮಾತಿನಲ್ಲಿ ''ಈಟಿನ ಗಿಡ' ಅಂದರೆ 'ಗೊಬ್ಬರದ ಗಿಡ' ಎನ್ನುವರು. ಭೂಮಾತೆ ಬಿಸಿಲ ಝಳಕ್ಕೆ ಸಿಕ್ಕಿ ಒಣಗದಂತೆ ಹೊದಿಕೆಯಾಗುತ್ತೇನೆ. ರೈತರು ನನ್ನನ್ನು ಗೊಬ್ಬರವಾಗಿಯೂ ಬಳಸುತ್ತಾರೆ. ಆದರೆ ನನ್ನನ್ನು ಯಾರೂ ರಕ್ಷಿಸುವುದಿಲ್ಲ ಅನ್ನೋದೇ ಬೇಜಾರು ನಂಗೆ. ನಾನು ನನ್ನಷ್ಟಕ್ಕೇ ಜಾಗ ಸಿಕ್ಕಲ್ಲೆಲ್ಲ ಅಂದರೆ ತ್ಯಾಜ್ಯ ನೆಲ, ರಸ್ತೆ ಬದಿ, ನದೀ ದಂಡೆ, ಸರೋವರದ ಅಂಚು, ಹುಲ್ಲುಗಾವಲು ಹೀಗೆ ಎಲ್ಲಿ ಸಾಧ್ಯವೋ ಅಲ್ಲೆಲ್ಲ ನಿರಾಡಂಬರದಿಂದ ಬೆಳೆದುಬಿಡುತ್ತೇನೆ. 1070 ಮೀ ಎತ್ತರದ ಮರಳದಿಬ್ಬವಾದರೂ ಸರಿ, ಅದನ್ನೂ ಚಾಲೆಂಜ್ ಎಂದೇ ಸ್ವೀಕರಿಸಿ ಬೆಳೆಯಬಲ್ಲೆ! ಥೈಲ್ಯಾಂಡ್ ನಲ್ಲಿ ಅತ್ಯಂತ ಲವಣಯುಕ್ತ ಪರಿಸ್ಥಿತಿಯಲ್ಲೂ ಬೆಳೆದು ಯಶಸ್ವಿಯಾಗಿದ್ದೇನೆ. ಆದರೆ ಅತ್ಯಲ್ಪ ಕಾಲದಲ್ಲಿ ವೇಗವಾಗಿ ಬೆಳೆದು ಒಂದು ವರ್ಷದೊಳಗೇ ಒಣಗಿ ಬಿಡುತ್ತೇನೆ. ನನಗೆ ಸುಂದರವಾದ ಅಂಡಾಕಾರದ ಮೂರು ಮೂರು ಸಂಯುಕ್ತ ಎಲೆಗಳ ಸೌಂದರ್ಯವಿದೆ. ಹರಡಿರುವ ಎಲ್ಲಾ ಶಾಖೆಗಳ ತುದಿಗಳಲ್ಲಿ ನೇರವಾದ ಹೂಗೊಂಚಲು ಇರುತ್ತದೆ. ಮೂವತ್ತು ನಲವತ್ತು ಹೂಗಳ ಮೊಗ್ಗುಗಳಿದ್ದು ದಿನದಿನವು ಅರಳುತ್ತಾ ಮೇಲೆ ಮೇಲೆ ಸಾಗುತ್ತವೆ. ಒಂದು ಬಾಗಿದ ಕೊಕ್ಕಿನಂತಹ ಹಳದಿ ವರ್ಣದ ಒಂದು ದಳವಿದ್ದು ಅದರ ಕೆಳಭಾಗದಲ್ಲಿ ಸೂಕ್ಷ್ಮವಾದ ಎರಡು ದಳಗಳಿರುತ್ತವೆ. ಅಲ್ಲೇ ಕೇಸರ ಶಲಾಕೆಗಳಿದ್ದು ಕೋಡುಗಳಾಗುವ ರಚನೆಯೂ ಸೇರಿರುತ್ತದೆ. ಹಾಗೆಯೇ ಕೋಡುಗಳೂ ರೂಪುಗೊಳ್ಳ ತೊಡಗುತ್ತವೆ. ಈ ಕೋಡುಗಳಲ್ಲಿ ಒಣಗಿದಾಗ ಹತ್ತಿಪ್ಪತ್ತು ಕಂದು ಬಣ್ಣದ ಬೀಜಗಳಿರುತ್ತವೆ. ಮತ್ತೆ ನನ್ನ ಮಕ್ಕಳಾದ ಈ ಗಿಜಿಗಿಜಿ ಕಾಯಿಗಳು ಒಣಗಿ ಎಲ್ಲೆಡೆ ಕಂದು ಬಣ್ಣದ ಪುಟಾಣಿ ಬೀಜಗಳು ಹರಡಿ ಮಳೆಗಾಲವನ್ನು ಕಾಯತೊಡಗುತ್ತವೆ."
"ಮಕ್ಕಳೇ, ನನ್ನನ್ನು ತೆಂಗು, ರಬ್ಬರ್, ಚಹಾ ತೋಟಗಳಲ್ಲೂ ಬೆಳೆಯುತ್ತಾರೆ. ನನ್ನ ಬೇರುಗಳು ಮಣ್ಣಿನಲ್ಲಿರುವ ಬ್ಯಾಕ್ಟೀರಿಯಾ ಗಳ ಜೊತೆ ಸಹಜೀವನ ನಡೆಸುವುದರಿಂದ ಗಂಟುಗಳು ರೂಪುಗೊಳ್ಳುತ್ತವೆಯಂತೆ! ಇದರಿಂದಾಗಿ ಸಾರಜನಕವೂ ಉತ್ಪತ್ತಿಯಾಗಿ ವಾತಾವರಣದಲ್ಲಿ ಈ ಅನಿಲದ ಮಟ್ಟವೂ ಏರುವುದಂತೆ ಗೊತ್ತಾ!"
"ನನ್ನನ್ನು ಸಸ್ಯಶಾಸ್ತ್ರೀಯ ವಾಗಿ ಫ್ಯಾಬೇಸಿಯೆ (Fabaceae) ಕುಟುಂಬದಲ್ಲಿ ಗುರುತಿಸುತ್ತಾರೆ. ನನಗೊಂದು ಸುಂದರವಾದ ಹೆಸರೂ ಇದೆ. ಅದು ಸುಮ್ಮನೇ ಇಟ್ಟ ಹೆಸರಲ್ಲ. ನನ್ನ ಕುಲ ಹಾಗೂ ಜಾತಿಯನ್ನು ಈ ಹೆಸರು ಪ್ತಸ್ತುತಪಡಿಸುತ್ತದೆ! ಕ್ರೊಟಲೇರಿಯಾ (Crotolarea) ನನ್ನ ಕುಲ ವಾದರೆ ಪಲ್ಲಿಡಾ (Pallida) ಜಾತಿಯಾಗಿದೆ. ಗಾಳಿ ಬೀಸುವಾಗ ನನ್ನ ಶಾಖೆಗಳ ತುದಿಗಳಲ್ಲಿ ಬೀಜಗಳ ಗೊಂಚಲು ಗಿಜಿಗಿಜಿ ಶಬ್ಧ ಮಾಡುತ್ತವೆ. ಕೆಲವೊಮ್ಮೆ ಮಕ್ಕಳು ಈ ಗೊಂಚಲುಗಳನ್ನು ಕತ್ತರಿಸಿ ಗಿಜಿಗಿಜಿ ಶಬ್ಧ ಮಾಡುತ್ತಾ ಆಟವಾಡುವುದೂ ಉಂಟು. ಅದಕ್ಕೇ ನನ್ನನ್ನು ತುಳು ಕನ್ನಡದಲ್ಲಿ ಗಿಜಿಗಿಜಿ ಗಿಡವೆನ್ನುತ್ತಾರೆ. ಬೆಂಗಾಲಿಯಲ್ಲಿ ಝನಝನಾ, ಮಲಯಾಳದಲ್ಲಿ ಕಿಲಿಕಿಲುಕಿ, ಮರಾಠಿಯಲ್ಲಿ ಖಳಖಳ, ಸಂಸ್ಕತದಲ್ಲಿ ಕಟುಟಿಕ್ ಕಟುಟಿಕ್, ತೆಲುಗಿನಲ್ಲಿ ಗಿಲಗಿಚ್ಚ ಗಿಲಗಿಚ್ಚ ಎಂದೆಲ್ಲ ಕರೆಯುವರು. ಈ ಹೆಸರುಗಳನ್ನು ಗಮನಿಸಿ... ನನ್ನ ಗುಣ ನೋಡಿಯೇ ಹೆಸರಿಸಿದ್ದಾರೆ ಎಂದೆನಿಸುವುದಿಲ್ಲವೇ?! ಅದೇ ನನ್ನ ಶ್ರೇಷ್ಠತೆ ಅಲ್ಲವೇನು!"
"ನಾನು ಶ್ರೀಲಂಕಾ, ಏಷ್ಯಾ, ಆಫ್ರಿಕಾ, ತೈವಾನ್, ಮಧ್ಯ ಅಮೇರಿಕಾ ಇಲ್ಲೆಲ್ಲ ಸಂಚರಿಸಿದ್ದೇನೆ. ಕೆಲವೆಡೆ ನನ್ನನ್ನು ಕಂಡು "ಆಕ್ರಮಣಕಾರಿ" ಎಂದು ಕಿತ್ತು ಬಿಸಾಡುವುದೂ ಇದೆ. ನನಗಾಗ ನಮ್ಮ ಬದುಕುವ ಹಕ್ಕಿನ ಬಗ್ಗೆ ಕೇಳಬೇಕೆನಿಸುತ್ತದೆ. ನಮ್ಮ ಮಾತನ್ನು ಕೇಳುವವರೇ ಇಲ್ಲವೆಂದು ಸುಮ್ಮನಾಗುತ್ತೇನೆ."
"ಮಕ್ಕಳೇ, ಕಿಂಚಿತ್ ಕೃತಜ್ಞತೆ ಇಲ್ಲದ ಈ ಮನುಷ್ಯರು ನನ್ನನ್ನು ತಮ್ಮ ಸ್ವಾರ್ಥಕ್ಕಾಗಿ ಹೇಗೆ ಬಳಸಿಕೊಳ್ಳುತ್ತಾರೆ ಬಲ್ಲಿರಾ?ನನ್ನ ಈ ದ್ವಿಲಿಂಗಿಯಾದ ಹಳದಿ ಹೂವುಗಳನ್ನು ಕಾಂಬೋಡಿಯಾದಲ್ಲಿ ತರಕಾರಿಯಂತೆ ಪಲ್ಯ ಮಾಡಿ ತಿನ್ನುವರು. ವಿಯೆಟ್ನಾಂ ದೇಶದಲ್ಲಿ ಬೇರನ್ನು ವೀಳ್ಯದ ಜೊತೆ ಮೆಲ್ಲುವರು. ಬೀಜಗಳನ್ನು ಹುರಿದು ಪಾನೀಯ ಮಾಡಿ ಕುಡಿಯುವರು. ಮೂತ್ರದ ಸಮಸ್ಯೆ, ಜ್ವರ, ಕೀಲುಗಳ ಊತ, ಹೊಟ್ಟೆಯ ಹುಳುಗಳ ಸಮಸ್ಯೆ, ಚರ್ಮದ ತೊಂದರೆಗಳಿಗೆ, ಗಾಯಗಳಿಗೆ ಔಷಧಿಯೆಂದು ಪಾರಂಪರಿಕವಾಗಿ ಬಳಸುತ್ತಿದ್ದಾರೆ. ಶುಶ್ರುತ ಸಂಹಿತೆ ಎಂಬ ಬಹಳ ಹಳೆಯ ಪುಸ್ತಕದಲ್ಲೂ ನನ್ನ ಹೆಸರಿದೆ ಎನ್ನುತ್ತಾರೆ ಗೊತ್ತಾ!."
"ಆದರೆ ನನ್ನ ಎಲೆ, ಬೀಜಗಳಲ್ಲಿ ಅಲ್ಪ ಪ್ರಮಾಣದ ವಿಷವಿದೆ ಎನ್ನುತ್ತಾರೆ. ಹೀಗಾಗಿಯೇ ಕೆಲವು ಲಾರ್ವಾಗಳ ಬೆಳವಣಿಗೆಗೆ ನಾನೇ ಬೇಕು! ವಿಷಕಾರಿ ಆಲ್ಕಲಾಯ್ಡ್ ಗಳು ಪರಭಕ್ಷಕಗಳಿಂದ ಅವುಗಳಿಗೆ ರಕ್ಷಣೆ ನೀಡುತ್ತೇನೆ. ಜೇನು ಇರುವೆಯಂತಹ ಕೀಟಗಳಿಗೆ ನನ್ನನ್ನು ಕಂಡರೆ ಬಲು ಪ್ರೀತಿ. ಪ್ರಾಣಿಗಳು, ಸಸ್ತನಿಗಳು ಎಲೆ, ಬೀಜಗಳನ್ನು ತಿಂದರೆ ಸ್ವಲ್ಪ ಅಪಾಯಕಾರಿಯೂ ಆಗುವುದುಂಟು. ಇದು ನನ್ನ ಪ್ರಭೇದದ ಗುಣಲಕ್ಷಣವೂ ಹೌದು."
ಮಕ್ಕಳೇ, ಕೇಳಿದಿರಾ ಗಿಜಿಗಿಜಿ ಕಾಯಿಯ ಗಿಡಗಳ ಮಾತುಗಳನ್ನ? ಸಂಜೆಯ ಗಾಳಿಗೆ ಒಣ ಕೋಡುಗಳು ಶಬ್ದ ಮಾಡುವಾಗ ನೀವೂ ಗಮನಿಸಿ.. ಆನಂದಿಸಿರಿ.
ಸರಿ ಮಕ್ಕಳೇ, ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗುತ್ತೇನೆ.. ನಮಸ್ಕಾರ.
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************