ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 56
Tuesday, November 26, 2024
Edit
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 56
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
ನಾವು ಸಣ್ಣವರಿರುವಾಗ ಬದುಕು ವೈವಿಧ್ಯಮಯವಾಗಿತ್ತು. ಸಣ್ಣ ಸಣ್ಣ ವಿಷಯಗಳೂ ನಮಗೆ ಖುಷಿ ಕೊಡುತ್ತಿದ್ದವು. ಹಬ್ಬಕ್ಕೆ (ಜಾತ್ರೆ) ಹೋಗಿ ಖರೀದಿ ಮಾಡುವುದಕ್ಕಿಂತ ಅಲ್ಲಿ ಸುತ್ತುವುದೇ ಒಂದು ಖುಷಿ. ಬಲೂನುಗಳು, ಕಿತ್ತಳೆ ಹಣ್ಣು, ಪೀಪಿ ಚುರುಮುರಿ, ಕಲ್ಲಂಗಡಿ ಹಣ್ಣು ಇವುಗಳನ್ನು ನೋಡುವುದು ನಮಗೆ ಮೋಜು. ನಮ್ಮಿಂದ ದೊಡ್ಡವರು ಕಿತ್ತಳೆ ಹಣ್ಣಿನ ಸಿಪ್ಪೆಯ ರಸವನ್ನು ಬಲೂನು ಮಾರಾಟಗಾರರಿಗೆ ಗೊತ್ತಾಗದ ಹಾಗೆ ಬಲೂನಿಗೆ ಹಾರಿಸುವುದು. ಆಗ ಬಲೂನು ಡಬ್ಬ್ ಎಂದು ನಡೆಯುತ್ತಿತ್ತು. ಮಾರಾಟಗಾರ ಒಡೆದವನನ್ನು ಹುಡುಕಿದರೆ ನಮಗೆ ಸಂತಸ ಅನುಭವಿಸುವ ಖುಷಿ ಒಡೆದ ಬಲೂನಿನ ಚೂರು ಹುಡುಕುವ ಧಾವಂತ. ಆ ರಸ ಘಾಟು ವಾಸನೆಯದ್ದು. ಅದನ್ನು ಪಕ್ಕದವನ ಕಣ್ಣಿಗೆ ಹಾರಿಸಿ ಅವನು ಕಣ್ಣುರಿಯಿಂದ ನೋವನ್ನನುಭವಿಸುವಾಗ ನಮಗೆ ಖುಷಿ. ಆ ರಸವನ್ನು ಉರಿಯುವ ದೀಪಕ್ಕೆ ಹಾಕಿದಾಗ ಅದು ಉರಿದು ದೀಪ ಇನ್ನೂ ಜೋರಾಗಿ ಉರಿಯುತ್ತಿತ್ತು. ಹಾಗೆ ನಾವು ಹತ್ತನೆಯ ತಗತಿಯಲ್ಲಿದ್ದಾಗ ನಮ್ಮ ವಿಜ್ಞಾನ ಶಿಕ್ಷಕರಾದ ಶ್ರೀ ಸತ್ಯನಾರಾಯಣ ರಾಯರು ಪರಿಮಳಯುಕ್ತ ಹೊತ್ತಿ ಉರಿಯುವ ಸಾವಯವ ವಸ್ತುಗಳನ್ನು ಅರೋಮ್ಯಾಟಿಕ್ ಸಾವಯವ ಸಂಯುಕ್ತಗಳು ಎಂದು ಹೇಳಿ ನಮ್ಮ ಜ್ಞಾನ ಪರಿಧಿಯನ್ನು ವಿಸ್ತರಿಸುತ್ತಿದ್ದರು. ಲಿಂಬೆ ಕುಟುಂಬದ ಎಲ್ಲ ಹಣ್ಣಿನ ಸಿಪ್ಪೆಯಲ್ಲಿ ಇರುವ ಈ ರಸ ಸಸ್ಯಗಳ ವಿಸರ್ಜಕ ವಸ್ತು. ಇದು ವಿಸರ್ಜನೆಯ ಒಂದು ಮಾರ್ಗ.
ಬಯಲಾಟಗಳಲ್ಲಿ ಮಹಿಷಾಸುರ ದೊಂದಿಯೊಂದಿಗೆ ಬರುತ್ತಾನೆ. ಆ ದೊಂದಿಗೆ ಸಹಾಯಕರು ಎಸೆಯುವ ಯಾವುದೋ ಒಂದು ವಸ್ತು ಭಗ್ಗನೆ ಬೆಂಕಿ ಹೊತ್ತುಕೊಂಡು ಉರಿಯತ್ತದೆ. ಘಮ್ಮನೆ ಒಂದು ಪರಿಮಳ ಮೂಗಿಗೆ ಬಡಿಯುತ್ತದೆ. ಅದು ರಾಳ. ಮನೆಯಲ್ಲಿ ಮತ್ತು ದೇವಸ್ಥಾನಗಳಲ್ಲಿ ಹಾಕುವ ಧೂಪಗಳಿಗೆ ಬಳಸುವ ಲೋಬಾನ ಮತ್ತು ರಾಳ ಎರಡೂ ಕೂಡಾ ಉರಿಯುವ ಮತ್ತು ಪರಿಮಳ ಬೀರುವ ಸಸ್ಯಜನ್ಯ ವಿಸರ್ಜಕ ವಸ್ತುಗಳು. ಸಸ್ಯಗಳು ವಿಸರ್ಜಿಸುವ ಇನ್ನೊಂದು ಬಗೆ ಈ ರಾಳಗಳ ರೂಪದಲ್ಲಿ.
ಈಗ ಅಂಟು ಬೇಕೆಂದರೆ ನೀವು ತಾಯಿಗೆ ಬೇಡಿಕೆ ಪಟ್ಟಿ ಕೊಡುತ್ತೀರಿ. ಸಂಜೆ ಮನೆಗೆ ಹೋಗುವಾಗ ಅಮ್ಮ ಫೆವಿಕಾಲ್ ಬಾಟ್ಲಿ ನಿಮ್ಮ ಕೈಗಿಡುತ್ತಾರೆ. ನಮ್ಮ ಬಾಲ್ಯದಲ್ಲಿ ಕಾಲ ಹಾಗಿರಲಿಲ್ಲ. ಫೆವಿಕಾಲ್ ಇನ್ನೂ ಮಾರುಕಟ್ಟೆಗೆ ಬಂದಿರಲಿಲ್ಲ. ಮಾವು, ಗೇರು ಮರಗಳ ಸುತ್ತ ಸುತ್ತುತ್ತಿದ್ದೆವು. ಅವು ಸುರಿಸುವ ಅಂಟನ್ನು ಸಂಗ್ರಹಿಸಿ ನೀರಿನಲ್ಲಿ ಕರಗಿಸಿ ನಮಗೆ ಬೇಕಾದ ಅಂಟು ಸಿದ್ದಪಡಿಸಿಕೊಳ್ಳುತ್ತಿದ್ದೆವು. ಈ ಅಂಟು ಮತ್ತು ಗೋಂದು ಸಸ್ಯಗಳಿಗೆ ವಿಷ ವಸ್ತುಗಳು. ಅವುಗಳನ್ನು ಸಸ್ಯಗಳು ವಿಸರ್ಜಿಸುತ್ತವೆ.
ಅಗಾರ ಮರದ ಕೃಷಿಯ ಬಗ್ಗೆ ಕೇಳಿದ್ದೀರಾ? ಅಗಾರ್ ಮರಗಳನ್ನು ಬೆಳೆಸುತ್ತಾರೆ. ಮರಗಳು ಒಂದು ನಿರ್ದಿಷ್ಟ ದಪ್ಪಕ್ಕೆ ಬೆಳೆದಾಗ ಒಂದಿಂಚು ಗಾತ್ರದ ಕಬ್ಬಿಣದ ಸರಳಲ್ಲಿ ಕಾಂಡವನ್ನು ತೂತು ಮಾಡುತ್ತಾರೆ. ಆ ಅಗಾರ್ ಮರ ಇಂತಹ ನೂರಾರು ತೂತುಗಳನ್ನ ಮಾಡಿಸಿಕೊಳ್ಳಬೇಕು ಪಾಪ. ಕೆಲವರು ರಂಧ್ರ ಕೊರೆಯಲು ವಿದ್ಯುತ್ ಬೈರಿಗೆಯನ್ನು ಬಳಸುತ್ತಾರೆ. ಈ ತೂತಿನ ಮೂಲಕ ಶಿಲೀಂಧ್ರ ಸೋಕು (fungal infection) ಉಂಟು ಮಾಡುತ್ತಾರೆ. ಆಗ ಅಗಾರ್ ಮರ ತನ್ನಲ್ಲುಂಟಾಗುವ ಕೀವನ್ನು ಅರೆ ದ್ರವ ರೂಪದಲ್ಲಿ ವಿಸರ್ಜಿಸುತ್ತದೆ. ಇದು ಪರಿಮಳ ದ್ರವ್ಯ. ಇದು ಬೆಳೆಗಾರರಿಗೆ ಲಕ್ಷ ಲಕ್ಷ ಲಾಭ ತಂದು ಕೊಡುವ ಅಗಾರ್. ಪರಿಮಳ ಬೀರುವ ಈ ಅಗಾರ್ ಕೂಡಾ ಸಸ್ಯ ವಿಸರ್ಜಕ ಅರೋಮ್ಯಾಟಿಕ್ ಹೈಡ್ರೋಕಾರ್ಬನ್.
ಸಸ್ಯಗಳಲ್ಲಿ ಈಗ ತಾನೇ ಹುಟ್ಟುವ ಕೋಶಗಳು ವರ್ದನ ಅಂಗಾಂಶದ ಕೋಶಗಳು ಎಂದು ನಿಮಗೆ ಗೊತ್ತಿದೆ. ಇವು ತೆಳುವಾದ ಕೋಶಭಿತ್ತಿ (thin cell wall), ಸಾಂದ್ರವಾದ ಕೋಶದ್ರವ್ಯ (dense cytoplasm) ಮತ್ತು ದೊಡ್ಡದಾದ ಕೋಶ ಕೇಂದ್ರವನ್ನು (large nucleus) ಹೊಂದಿರುತ್ತವೆ. ನಂತರ ಇವು ಅಂಗಾಂಶ ರಚನೆಯ ವೇಳೆ (differentiation) ವಿವಿಧ ಕೆಲಸಕ್ಕೆ ನಿಯುಕ್ತಿಗೊಳ್ಳುತ್ತವೆ. ಈ ಕೋಶಗಳು ವಿವಿಧ ಕೆಲಸಗಳನ್ನು ಮಾಡುವಾಗ ಅನೇಕ ವಿಷವಸ್ತುಗಳು ಉತ್ಪತ್ತಿಯಾಗುತ್ತವೆ. ಇವುಗಳನ್ನು ಕೋಶದೊಳಗಿನ ಲಕೋಟೆಯೊಂದರೊಳಗಿರುವ ನೀರಿನಲ್ಲಿ ಕರಗಿದ ರೂಪದಲ್ಲಿ ತುಂಬಿಸುತ್ತವೆ. ವಿಷ ವಸ್ತು ಹೆಚ್ಚುತ್ತಾ ಹೋದ ಹಾಗೆ ಲಕೋಟೆಯೊಳಗೆ ಹೆಚ್ಚು ಹೆಚ್ಚು ನೀರು ತುಂಬುತ್ತದೆ. ಈ ಲಕೋಟೆಯೇ ರಸದಾನಿ (vacuole). ಕೋಶಕ್ಕೆ ವಯಸ್ಸಾಗುತ್ತಿದ್ದ ಹಾಗೆ ರಸದಾನಿ ಬೆಳೆಯುತ್ತಾ ಹೋಗಿ ಕೋಶದ ಉಳಿದ ವಸ್ತುಗಳು ಅಂದರೆ ಕೋಶಕೇಂದ್ರ ಮತ್ತು ಇತರ ಅಂಗಕಣಗಳು (organelles) ಪಕ್ಕಕ್ಕೆ ತಳ್ಳಲ್ಪಡುತ್ತದೆ. ಈ ಎಲ್ಲ ಕೋಶಗಳೂ ವಿಷ ವಸ್ತುಗಳು ತುಂಬಿದಾಗ ಸತ್ತು ಹೋಗುತ್ತವೆ. ಅದು ಮರದ ಕಾಂಡದಲ್ಲಿದ್ದರೆ ಗಟ್ಟಿ ಮೋಪನ್ನು ಕೊಡುತ್ತವೆ. ಸಣ್ಣ ಟೊಂಗೆಗಳು ಸತ್ತು ಉದುರುತ್ತವೆ ಮತ್ತು ನಿಮ್ಮ ಅಡುಗೆ ಬೇಯಿಸುತ್ತವೆ. ಮಾವಿನ ಮರ ಎಲೆಗಳನ್ನು ಉದುರಿಸುವುದು ಕೂಡಾ ವಿಸರ್ಜನೆ. ಈ ವಿಸರ್ಜಿಸಲ್ಪಟ್ಟ ಎಲೆಗಳು ನಿಮ್ಮ ಭೂಮಿಯ ಫಲವತ್ತತೆಯನ್ನು ಹೆಚ್ಚಿಸುತ್ತವೆ.
ಬಿದಿರು ಎಂಬ ಪದ್ಯದಲ್ಲಿ ಮರದ ಹಿರಿಮೆಯನ್ನು ಸಾರಿರುವುದನ್ನು ನೀವು ಓದಿರುತ್ತೀರಿ. ಸಸ್ಯಗಳ ವಿಸರ್ಜನೆಯೂ ಉಪಯುಕ್ತವೇ.
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
********************************************