ನಿಷ್ಪಾಪಿ ಸಸ್ಯಗಳು : ಸಂಚಿಕೆ - 76
Thursday, November 14, 2024
Edit
ನಿಷ್ಪಾಪಿ ಸಸ್ಯಗಳು : ಸಂಚಿಕೆ - 76
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ... ಹೇಗಿದ್ದೀರಿ? ಮಳೆಗಾಲ ಆರಂಭವಾಗುತ್ತಲೇ ತಲೆ ಎತ್ತುವ ಹಲವಾರು ಸಣ್ಣ ಪುಟ್ಟ ಸಸ್ಯಗಳು ಮಳೆ ಕಡಿಮೆಯಾಗುತ್ತಲೇ ಮರೆಯಾಗತೊಡಗುತ್ತಿವೆಯಲ್ಲವೇ? ಅವುಗಳು ಅಲ್ಪಾಯುಷಿ ಅಥವಾ ಏಕವಾರ್ಷಿಕ ಸಸ್ಯಗಳಾಗಿವೆ. ಕೆಲವು ಸಸ್ಯಗಳನ್ನು ನಾವು ಬೇಲಿಗೆಂದು ನೆಟ್ಟು ಬೆಳೆಸುತ್ತೇವೆ. ಅವುಗಳನ್ನು ಒಮ್ಮೆ ನೆಟ್ಟೆವೆಂದರೆ ಹತ್ತು ಇಪ್ಪತ್ತು ವರ್ಷವಾದರೂ ಕರ್ತವ್ಯದಲ್ಲೇ ಇರುತ್ತವೆ. ತುಂಬಾ ಎತ್ತರವಾಗದೆ, ದಪ್ಪವೂ ಆಗದೆ ಬೇಲಿಗೆ ಎಷ್ಟು ಬೇಕೋ ಅಷ್ಟೇ ಬೆಳವಣಿಗೆ ಹೊಂದುತ್ತವೆ.
ನಾನೀಗ ನಿಮಗೆ ಕತೆ ಹೇಳಲು ಪೀಠಿಕೆ ಹಾಕುತ್ತಿರುವ ಗಿಡ ಯಾವುದೆಂದು ಗೊತ್ತೇ? ಐದು, ಹತ್ತು ವರ್ಷಗಳ ಹಿಂದೆ ನಮ್ಮೂರಿನ ತೋಟ, ಗದ್ದೆಗಳ ಸುತ್ತಲಿನ ಬೇಲಿಗಳೆಲ್ಲ ಇದೇ ಸಸ್ಯದಿಂದ ಗಟ್ಟಿಯಾಗಿದ್ದವು. ದನ ಕರುಗಳಾಗಲೀ, ಆಡು ಕುರಿಗಳಾಗಲೀ ಇದರ ಸೊಪ್ಪನ್ನು ಮುಟ್ಟದೆ ಹಾಯಾಗಿ ಬೆಳೆಯುತ್ತಿತ್ತು. ಆದರೆ ಇದೀಗ ನಾವು ಕಾಂಕ್ರೀಟ್ ಕಾಡು ಬೆಳಸಲು ಆರಂಭಿಸಿದ ಮೇಲೆ ಈ ಹಸಿರು ಮಾಯವಾಯಿತು. ಆದರೆ ನಾನು ಇದನ್ನು ಹುಡುಕುವ ಅನಿವಾರ್ಯತೆಗೆ ಬಿದ್ದು ನಿಮಗೂ ತಿಳಿಸೋಣವೆಂದು ಹೊರಟಿರುವೆ.
ಇತ್ತೀಚೆಗೆ ಬೆಂಗಳೂರಿನಿಂದ ಒಬ್ಬರು ಒಂದು ಗಿಡದ ಚಿತ್ರ ಕಳಿಸಿ ಇದರ ಹೆಸರು ಗೊತ್ತಾ? ಎಂದರು. ಬಳಿಕ ನನಗದು ಮದ್ದಿಗೆ ಬೇಕಿತ್ತು.... ಕಳಿಸಬಹುದಾ...? ಎಂದು ವಿಳಾಸ ನೀಡಿದ್ದರು. ನನಗದು ಒಂದು ಕಾಲದಲ್ಲಿ ಚಿರಪರಿಚಿತ ಸಸ್ಯವಾಗಿದ್ದರೂ ಇಂದು ಹುಡುಕಲು ತ್ರಾಸ ಪಡುವಂತಾಗಿದೆ. ಅಷ್ಟು ಬೇಡಿಕೆಯ ಸಸ್ಯದ ಬಗ್ಗೆ ನಿಮಗೂ ಕುತೂಹಲವಾಗಿರಬಹುದು. ಅದೇ ಆಡು ಮಾತಿನಲ್ಲಿ ಸುದೆ ಮದ್ರೆಂಗಿ! ಕನ್ನಡದಲ್ಲಿ ವಿಷಮಧಾರಿ, ವಿಶಂಧರಿ, ನಾಯಿತಕ್ಕಲಿ, ಕುಂಡಲಿ, ವಾಸನೇ ಗಿಡ, ವಿಷಮದು ಎಂದೆಲ್ಲಾ ಕರೆಸಿಕೊಳ್ಳುವ ಅಪರೂಪವಾಗುತ್ತಿರುವ ಸಸ್ಯ. ಇದರ ಶಾಸ್ತ್ರೀಯ ಹೆಸರು ಕ್ಲೆರೊಡೆಂಡ್ರಮ್ ಇನರ್ಮೆ (Clerodendrum Inerme), Lamiaceae ಕುಟುಂಬ. ಈ ಸಸ್ಯ ಕುಟುಂಬದಲ್ಲಿ ಅಂದಾಜು 350000 ಪ್ರಭೇದಗಳಿವೆಯಂತೆ!
ಏಷ್ಯಾ, ಆಸ್ಟ್ರೇಲಿಯಾ, ಆಫ್ರಿಕಾ, ಮಲೇಷ್ಯಾ, ಫೆಸಿಫಿಕ್ ಸಾಗರ ದ್ವೀಪಗಳಲ್ಲಿ ಕುರುಚಲು ಕಾಡು, ಬಂಜರು ಭೂಮಿ, ಸಮುದ್ರ ತೀರ, ಜವುಗು ಪ್ರದೇಶ. ಮ್ಯಾಂಗ್ರೋವ್ ಕಾಡಿನ ನಡುವೆ, ಉಬ್ಬರವಿಳಿತದ ನದಿ ತೀರದಲ್ಲಿ ವ್ಯಾಪಕವಾಗಿ ಕಾಣಸಿಗುತ್ತದೆ.
ಇದರ ಅಂಡಾಕಾರದ ಎಲೆಗಳು ಒಂದಕ್ಕೊಂದು ವಿರುದ್ಧವಾಗಿವೆ. ನೆರಳಿನ ಗಿಡವಾದರೆ ಎಲ್ಲ ಎಲೆಗಳೂ ಸೂರ್ಯನ ಕಡೆಗೇ ಮುಖಮಾಡಿಕೊಂಡು ಸಸ್ಯವೇ ಓರೆಯಾಗಿ ಚಾಚಿರುತ್ತದೆ. ಎಲೆಗಳ ಮೇಲ್ಮೈ ಹೊಳಪುಳ್ಳ ಹಸಿರಾದರೆ ಅಡಿಭಾಗ ತಿಳಿಹಸಿರು. ಎಲೆ ರಸ ಕಟು ಕಹಿ. ಇದು ಹೆಚ್ಚು ಕವಲೊಡೆದು ಅಡ್ಡಾದಿಡ್ಡಿ ಬೆಳೆವ ನಿತ್ಯಹರಿದ್ವರ್ಣದ ಪೊದೆ ಸಸ್ಯವಾಗಿದೆ. ತೊಗಟೆಯು ಗಾಢ ಕಂದು ಬಣ್ಣದಲ್ಲಿದ್ದು ಮೃದುವಾಗಿರುತ್ತದೆ. ಅಕ್ಷಾ ಕಂಕುಳಿನ ಪುಷ್ಪಮಂಜರಿಯಲ್ಲಿ ಬಿಳಿಯ ಹೂಗಳು ಆಕರ್ಷಕವಾಗಿರುತ್ತವೆ. ಕಡು ಹಸಿರು ಎಲೆಗಳ ನಡುವೆ ಸಣ್ಣ ಅಂಗನವಾಡಿ ಮಕ್ಕಳಂತೆ ಕಾಣಿಸುವ ಅಚ್ಚ ಬಿಳಿ ವರ್ಣದ ಹೂಗಳ ಲಾಸ್ಯ ಒಂದು ಸುಂದರ ಕುಟುಂಬದಂತೆ ಕಾಣಿಸುತ್ತದೆ. ಕೊಳವೆಯಾಕಾರದ ದಂಡಿನ ತುದಿಗೆ ಐದೆಸಳಿನ ಕಿರೀಟ, ಅದರಿಂದ ಹೊರಚಾಚಿದ ನೇರಳೆ ವರ್ಣದ ಶಲಾಕೆಗಳು..! ಮಾರ್ಚ್ ನಿಂದ ಜೂನ್ ನಡುವೆ ಹೂ, ಹಣ್ಣುಗಳ ಕಾಲ.
ಸುದೆ ಮದ್ರೆಂಗಿ ಅಥವಾ ವಿಷಮಧಾರಿ ಎಂಬ ನಿಷ್ಪಾಪಿ ಸಸ್ಯವು ಮಾನವರಿಗೆ ಮಾತ್ರವಲ್ಲದೆ ಜಾನುವಾರುಗಳಿಗೂ ಬಹು ಉಪಕಾರಿ ಸಸ್ಯವಾಗಿದೆ. ಹಸುಗಳನ್ನು ಸಾಮಾನ್ಯವಾಗಿ ಕಾಡುವ ಕೆಚ್ಚಲು ಬಾವು ಕಾಯಿಲೆಗೆ ಇದು ಬಹಳ ಸಹಕಾರಿಯಾಗಿದೆ. ಸಾಕು ಪ್ರಾಣಿಗಳ ಮೇಲಿರುವ ಪರಾವಲಂಬಿ ಕೀಟಗಳ ನಿವಾರಣೆಗೆ ಇದರ ರಸ ಉಪಯುಕ್ತವಾಗಿದೆ. ಈ ಗಿಡವಿದ್ದರೆ ಅದರ ವಾಸನೆಗೆ ಸೊಳ್ಳೆಯೂ ಬರುವುದಿಲ್ಲವೆನ್ನುತ್ತಾರೆ. ಕೋಳಿ ಸಾಕುವವರು ಕೋಳಿ ಹೇನಿನಿಂದ ಪಾರಾಗಲು ಕೂಡ ಇದನ್ನೆ ಬಳಸುವರು. ಮನುಷ್ಯರನ್ನು ಅತಿಯಾಗಿ ಕಾಡುವ ಸಕ್ಕರೆ ಕಾಯಿಲೆ, ರಕ್ತದ ಏರು ಒತ್ತಡಗಳಿಗೆ ಬಹಳಷ್ಟು ಬಳಕೆಯಿದೆ. ಎಲೆ ರಸ ಮಹಾರಾಷ್ಟ್ರ ದಲ್ಲಿ ಜನಪ್ರಿಯ ಜ್ವರ ನಿವಾರಕ. ಆಗಾಗ ಮರುಕಳಿಸುವ ಜ್ವರಕ್ಕೆ, ಗ್ರಂಥಿಗಳ ಊತ, ಎಸ್ಜಿಮಾ, ಲ್ಯುಕೋರಿಯಾ, ಸ್ಕೇಬಿಸ್ ಚಿಕಿತ್ಸೆಗೆ ಬಳಸುತ್ತಾರೆ. ಚರ್ಮರೋಗ, ಗುಪ್ತರೋಗ, ಅಸ್ತಮಾ, ಚೇಳು ಹಾಗೂ ಕೀಟಗಳ ಕಡಿತಕ್ಕೆ ಪರಿಹಾರ ನೀಡುತ್ತದೆ. ಕರುಳು, ಜಠರದ ಸಮಸ್ಯೆ ಇರುವವರು, ಮಕ್ಕಳು, ಗರ್ಭಿಣಿಯರು ಸೇವಿಸುವುದು ಸೂಕ್ತವಲ್ಲವೆನ್ನಲಾಗುತ್ತದೆ. ಇದರ ಎಲೆ ಬೇರನ್ನು ಒಣಗಿಸಿಟ್ಟುಕೊಂಡೂ ಬಳಸಬಹುದು. ಇದು ಆಂಟಿ ವೈರಲ್, ಆಂಟಿ ಬ್ಯಾಕ್ಟೀರಿಯಲ್ ಗುಣ ಹೊಂದಿದೆ.
ಮಕ್ಕಳೇ, ಒಂದೊಂದು ಸಸ್ಯದ ಹಿಂದೆ ಒಂದೊಂದು ಕತೆ ಇದೆ ಅಲ್ಲವೇ? ಅದಕ್ಕೆ ಅದರದೇ ಆದ ಕುಟುಂಬ, ಹೆಸರು, ಸಾಮರ್ಥ್ಯಗಳಿವೆ. ಆದ್ದರಿಂದ ಮಾನವನಿಗಿದ್ದಷ್ಟೇ ಬದುಕುವ ಹಕ್ಕು ಸಣ್ಣ ಸಸ್ಯಕ್ಕೂ ಇದೆ ಎಂದಾಯಿತು. ನಾವು ನಮ್ಮ ಸ್ವಾರ್ಥ ದಿಂದ ಇಂತಹ ಸಸ್ಯವರ್ಗವನ್ನೇ ನಾಶಮಾಡುತ್ತಾ ಸಾಗುತ್ತಿರುವುದು ಉತ್ತಮ ನಡೆಯಲ್ಲವೆಂದು ಅರ್ಥ ಮಾಡಿಕೊಳ್ಳಲೇ ಬೇಕು ಅಲ್ಲವೇ?
ಸರಿ ಮಕ್ಕಳೇ, ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗುತ್ತೇನೆ.. ನಮಸ್ಕಾರ.
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************