-->
ತೀರ್ಪುಗಾರರ ಅನಿಸಿಕೆಗಳು : ಮಕ್ಕಳ ಜಗಲಿ ರಾಜ್ಯಮಟ್ಟದ ಕವನ ಮತ್ತು ಕಥಾ ಸ್ಪರ್ಧೆ - 2024

ತೀರ್ಪುಗಾರರ ಅನಿಸಿಕೆಗಳು : ಮಕ್ಕಳ ಜಗಲಿ ರಾಜ್ಯಮಟ್ಟದ ಕವನ ಮತ್ತು ಕಥಾ ಸ್ಪರ್ಧೆ - 2024

ತೀರ್ಪುಗಾರರ ಅನಿಸಿಕೆಗಳು - 2024
ಮಕ್ಕಳ ಜಗಲಿ ರಾಜ್ಯಮಟ್ಟದ ಕವನ ಮತ್ತು ಕಥಾ ಸ್ಪರ್ಧೆ - 2024
ಮಕ್ಕಳ ಜಗಲಿ ಕವನ ಸಿರಿ ಪ್ರಶಸ್ತಿ - 2024
ಮತ್ತು 
ಮಕ್ಕಳ ಜಗಲಿ ಕಥಾ ಸಿರಿ ಪ್ರಶಸ್ತಿ - 2024


                           ಹಿಮ್ಮಾಹಿತಿ
ನಮಸ್ತೆ.... ಮಕ್ಕಳ ಜಗಲಿ ವೇದಿಕೆಯ ರಾಜ್ಯಮಟ್ಟದ ‘ಕವನ ಸಿರಿ’ ಹಾಗೂ ‘ಕಥಾ ಸಿರಿ’ ಸ್ಪರ್ಧೆಗಳಿಗೆ (ಎರಡು ವಯೋಮಾನ ವಿಭಾಗದ ನಾಲ್ಕು ಸ್ಪರ್ಧೆಗಳು) ಓರ್ವ ತೀರ್ಪುಗಾರನಾಗಿ ಭಾಗವಹಿಸುವ ಅ‍ವಕಾಶ ಸಿಕ್ಕಿತು. ರಾಜ್ಯದ ವಿವಿಧೆಡೆಗಳಿಂದ ಅತ್ಯುತ್ಸಾಹದಿಂದ ಮಕ್ಕಳು ಪಾಲ್ಗೊಂಡ ರೀತಿ (ಸಂಖ್ಯೆ) ಕಂಡು ಅಚ್ಚರಿಯಾಯಿತು. ಮಕ್ಕಳು ಮೊಬೈಲ್‌ ದಾಸರಾಗುತ್ತಿದ್ದಾರೆ ಎಂಬ ಆರೋಪದ ನಡುವೆಯೂ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಮಕ್ಕಳು ಕತೆ, ಕವನ ಬರೆಯಲು ಉತ್ಸುಕರಾಗಿರುವುದು ಅಶಾದಾಯಕ ಬೆಳವಣಿಗೆಯೇ ಸರಿ. ಇಷ್ಟೊಂದು ಬರೆಯುತ್ತಾರೆ ಅಂತಾದರೆ ಅವರು ಅಷ್ಟೊಂದು ಓದುತ್ತಾರೆ ಎಂದೇ ಅರ್ಥ. ಓದದವ ಬರೆಯಲಾರ. ಹಾಗಾಗಿ ಓದು ಮತ್ತು ಬರಹದ ಅಭಿರುಚಿ ಉಳಿದಿರುವುದು ಸಮಾಧಾನಕರ ಅಂಶ.
       ಕತೆ ಮತ್ತು ಕವನಗಳನ್ನು ಹೋಲಿಸಿದರೆ, ಕವನಗಳ ಗುಣಮಟ್ಟವೇ ಹೆಚ್ಚು ತೂಕದ್ದು ಅನ್ನಿಸಿತು. ಪರಿಸರ, ನದಿ, ಅಪ್ಪ, ಅಮ್ಮ ಮತ್ತಿತರ ಸಹಜವಾದ ವಿಷಯಗಳ ಜೊತೆಗೆ ಅಂತರಿಕ್ಷ, ಡೆಂಗ್ಯೂ ಜಾಗೃತಿ, ಬಾಹ್ಯಾಕಾಶ, ಸೂರ್ಯ-ಚಂದಿರ, ಮೌಲ್ಯಗಳು ಮತ್ತಿತರ ಗಂಭೀರ ವಿಚಾರಗಳನ್ನೂ ಆರಿಸಿದ್ದು ಖುಷಿ ಕೊಟ್ಟಿತು. ಕವನದಲ್ಲಿ ಶೇ.90ಕ್ಕೂ ಅಧಿಕ ಪ್ರಮಾಣದಲ್ಲಿ ಭಾಷೆ ಶುದ್ಧವೇ ಆಗಿತ್ತು ಎಂಬುದೂ ಖುಷಿ ಕೊಟ್ಟ ಸಂಗತಿ. 5,6,7,8ರ ವಿಭಾಗಕ್ಕೆ ಹೋಲಿಸಿದರೆ 9,10,11,12ರ ವಿಭಾಗದ ಕತೆಗಳಲ್ಲಿ ಬಳಸಿದ (ಕೆಲವು ಮಾತ್ರ) ಭಾಷಾ ಶುದ್ಧತೆ ತುಸು ನಿರಾಸೆ ಮೂಡಿತು. ಹದಿಹರೆಯಕ್ಕೆ ಕಾಲಿಡುತ್ತಿರುವ ಈ ಪ್ರಾಯದ ಮಕ್ಕಳು ಭಾಷೆಯ ಶುದ್ಧ ಬಳಕೆ ಕುರಿತು ದಯವಿಟ್ಟು ಹೆಚ್ಚಿನ ಗಮನ ಹರಿಸಬೇಕು. ‘ಹಾಗೆನೇ’ ಮತ್ತಿತರ ಟಿ.ವಿ. ಮಾದರಿ ಭಾಷೆಯ ಬಳಕೆ, ಜೊತೆಗೆ ಸರಳ ಕನ್ನಡ ಪದಗಳು ಇದ್ದಾಗ್ಯೂ ಇಂಗ್ಲಿಷ್‌ ಪದಗಳನ್ನು ಇಂಗ್ಲಿಷ್‌ ಲಿಪಿಯಲ್ಲೇ ಬರೆದದ್ದು ಉದಯೋನ್ಮುಖ ಬರಹಗಾರರ ಬೆಳವಣಿಗೆ ದೃಷ್ಟಿಯಿಂದ ಅಷ್ಟೊಂದು ಸೂಕ್ತ ಅಲ್ಲ ಅಂತ ನನ್ನ ಅನಿಸಿಕೆ. ಆದಷ್ಟು ಮಟ್ಟಿಗೆ ಶುದ್ಧ ಕನ್ನಡವನ್ನೇ ಬಳಸಿದರೆ ವೈಯಕ್ತಿಕವಾಗಿ ನಮ್ಮ ಕನ್ನಡವೂ ಬೆಳೆಯುತ್ತದೆ, ಭಾಷೆಯೂ ಇದ್ದ ಸ್ಥಿತಿಯಲ್ಲೇ ಬೆಳೆಯುತ್ತದೆ. ಕಥಾ ಹಂತರದಲ್ಲೂ ಹಿರಿಯರ ವಿಭಾಗಕ್ಕಿಂತಲೂ ಕಿರಿಯರ ವಿಭಾಗದಲ್ಲೇ ಹೆಚ್ಚಿನ ಪ್ರೌಢಿಮೆ ಕಾಣಿಸಿತು.
     ಇನ್ನು ಕೈಬರಹವಂತೂ ಬಹುತೇಕರದ್ದು ತುಂಬ ಚಂದ ಇದೆ ಅನ್ನಿಸಿತು. ಎಲ್ಲೋ ಬೆರಳೆಣಿಕೆಯ ಬರಹಗಳು ಕೈಬರಹ ತುಸು ಕಠಿಣವಾಗಿದ್ದವು. ಚಂದದ ಕೈಬರಹ ಸುಲಭ ಓದಿಗೆ ಸಹಕಾರಿ. ಇನ್ನೂ ಕೆಲವು ಮಂದಿ ಬರಹಕ್ಕೆ ಚಿತ್ರ ಸಹಿತ, ರಕ್ಷಾ ಪುಟ ಸಹಿತ ಅಲಂಕರಿಸಿದ್ದರು. ಇದು ಸ್ವಾಗತಾರ್ಹ ಹೌದು, ಆದರೆ ಅಲಂಕಾರದಷ್ಟು ಬರಹದ ತೂಕ ಇರಲಿಲ್ಲ. ಮಕ್ಕಳು ಏನು ಗಮನಿಸಬೇಕು ಎಂದರೆ, ಬರಹಕ್ಕೆ ಆರಿಸಿದ ವಿಷಯ ಮತ್ತು ಪ್ರಸ್ತುತಿ ಸಹ ಅದನ್ನು ಒಪ್ಪಿಸುವಲ್ಲಿನ ವೈಭವದಷ್ಟೇ ಶ್ರೀಮಂತವಾಗಿರಬೇಕು. ಆಗ ಬರಹದ ತೂಕ ಹೆಚ್ಚುತ್ತದೆ. ಪ್ರಶಸ್ತಿಗೆ ಬರಹಗಳನ್ನೂ ಆರಿಸುವಾಗ ಆರಿಸಿದ ಶೀರ್ಷಿಕೆ, ಭಾಷಾ ಶುದ್ಧತೆ ಹಾಗೂ ವಿಚಾರದಲ್ಲಿನ ಪ್ರೌಢಿಮೆ ಮೂರು ಅಂಶಗಳನ್ನು ಪರಿಗಣಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಕೆಲವರಿಗಷ್ಟೇ ಬಹುಮಾನ ಸಿಕ್ಕಿರಬಹುದು. ಆದರೆ ಭಾಗವಹಿಸಿದ ಪ್ರತಿಯೊಬ್ಬರೂ ಪರೋಕ್ಷವಾಗಿ ವಿಜೇತರೇ. ಸ್ಪರ್ಧೆಯಲ್ಲಿ ಭಾಗವಹಿಸುವ ನಿಮ್ಮ ಉತ್ಸಾಹವೇ ನಿಮ್ಮ ಮುಂದಿನ ಬರಹದ ಬದುಕಿಗೆ ಮುನ್ನುಡಿ ಆಗಬಲ್ಲುದು. ಗುರುಹಿರಿಯರ ಮಾರ್ಗದರ್ಶನ ಪಡೆದು ಓದುವ, ಬರೆಯುವ ಹವ್ಯಾಸ ಮುಂದುವರಿಸಿ, ಶುಭವಾಗಲಿ... ಅವಕಾಶ ಒದಗಿಸಿದ ಮಕ್ಕಳ ಜಗಲಿ ವೇದಿಕೆಯ ಸರ್ವರಿಗೂ ವಂದನೆಗಳು.
.............................. ಕೃಷ್ಣಮೋಹನ ತಲೆಂಗಳ
ಉಪ ಸುದ್ದಿ ಸಂಪಾದಕ - ಕನ್ನಡಪ್ರಭ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob : +91 94819 76969
******************************************



ಮಕ್ಕಳ ಜಗಲಿಯ ಕವನ ಮತ್ತು ಕಥಾ ಸ್ಪರ್ಧೆ ಎಂದರೆ ಪ್ರತೀ ವರ್ಷ ಮಕ್ಕಳ ಪಾಲಿಗೆ ಇದೊಂದು ಸಾಹಿತ್ಯ ಸಂಭ್ರಮ. ಸಾಹಿತ್ಯದ ಓದು ಮತ್ತು ಬರೆಯುವ ಹವ್ಯಾಸದಿಂದ ವಿಮುಖವಾಗುತ್ತಿರುವ ಮಕ್ಕಳು ಮತ್ತೆ ಇದರತ್ತ ಆಸಕ್ತರಾಗಲು ಜಗಲಿ ಕಾರಣವಾಗುತ್ತಿರುವುದು ಖುಷಿ ನೀಡಿದೆ. ಸ್ಪರ್ಧೆಗೆ ಬಂದಿರುವ ಹೆಚ್ಚಿನ ಕಥೆ, ಕವನಗಳಲ್ಲಿ ನೀತಿ ಬೋಧೆ, ಪರಿಸರ ಪ್ರೇಮ, ದೇಶ ಭಕ್ತಿಯಂತಹ ವಸ್ತುಗಳು ಪುನರಾವರ್ತಿತವಾಗಿದ್ದು ಕೆಲವೊಂದರಲ್ಲಿ ಹೊಸತನದ ನಿರೂಪಣೆ ಕಂಡುಬಂತು. ಮಕ್ಕಳ ಸ್ವಭಾವ, ಉತ್ಸಾಹ, ಉಲ್ಲಾಸಗಳು ಕಥೆಗಳಿಗಿಂತ ಕವನಗಳಲ್ಲೇ ಹೆಚ್ಚು ಚಿತ್ರಿತವಾಗಿರುವುದು ವಿಶೇಷ.  
     ಹೆಚ್ಚಿನ ಸಾಹಿತ್ಯದ ಓದು ಬರವಣಿಗೆಯ ಪಕ್ವತೆಗೆ ದಾರಿದೀಪವಾಗುತ್ತದೆ ಎಂಬುದನ್ನು ಮಕ್ಕಳು ನೆನಪಿನಲ್ಲಿಡಬೇಕು. ಸ್ಪರ್ಧೆಗಳಲ್ಲಿ ಭಾಗವಹಿಸಿರುವ ಮಕ್ಕಳಿಗೆ, ಅವರಿಗೆ ಪ್ರೋತ್ಸಾಹ ನೀಡಿರುವ ಶಿಕ್ಷಕರು ಹಾಗೂ ಪೋಷಕರಿಗೆ ಅಭಿನಂದನೆಗಳು.    
.............................. ಚಂದ್ರಶೇಖರ ಪಾತೂರು ಬರಹಗಾರರು ಹಾಗೂ ಸ್ಥಾಪಕ ಸಂಚಾಲಕರು ಚಿತ್ತಾರ (ಕಲೆ, ಸಾಹಿತ್ಯ ಮತ್ತು ಸಮಾಜ ಸೇವಾಸಕ್ತರ ಬಳಗ) 
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob : +91 99641 05598
******************************************


ಆತ್ಮೀಯರಾದ ಮಕ್ಕಳ ಜಗಲಿಯ ಸಾರಥಿ ತಾರಾನಾಥ ಕೈರಂಗಳರಿಗೆ ಸಪ್ರೇಮ ವಂದನೆಗಳು....
     ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸುವ ಹಾಗೂ ಪ್ರೋತ್ಸಾಹಿಸುವ ನಿಮ್ಮ ಕೈಂಕರ್ಯಕ್ಕೆ ಅಭಿನಂದನೆಗಳು. ಇಂದು ಸಮಾಜದಲ್ಲಿ ಪ್ರಾಮಾಣಿಕತೆ ಹದಗೆಟ್ಟಿದೆ. ಹಾಗಾಗಿ ಬರುತ್ತಿರುವ ಸಾಹಿತ್ಯಗಳಲ್ಲಿ ಮಕ್ಕಳ ಸ್ವಂತಿಕೆಯ ಬದಲು ತಮ್ಮ ಮಗು ಸ್ಪರ್ಧೆಯಲ್ಲಿ ಆಯ್ಕೆ ಆಗಬೇಕೆಂಬ ಕಾಳಜಿಯಿಂದ ಹಿರಿಯರು ತಮ್ಮ ವಿಚಾರಗಳನ್ನು ಮಕ್ಕಳ ಬರಹಗಳ ಮೂಲಕ ತುರುಕಿರುವುದು ಭಾಸವಾಗುತ್ತಿದೆ. ಇದರಿಂದಾಗಿ ಸಂಮ್ಮತಿಕೆಯ ಸ್ವ ಪ್ರಯತ್ನದಿಂದ ಸಾಗುವ ಮಕ್ಕಳಿಗೆ ಅನ್ಯಾಯವಾಗುವ ಅಪಾಯವಿದೆ.
      ಇನ್ನು ಕೆಲವು ಮಕ್ಕಳು ಸ್ವಂತಿಕೆ ಎಂದರೆ ಓದಿದ್ದನ್ನು, ಕೇಳಿದ್ದನ್ನು, ಟಿವಿ ಗಳಲ್ಲಿ ನೋಡಿದ್ದನ್ನು ಬರೆದಾಗ ಎಂದು ಮಿತಿಗೊಂಡದ್ದು ಕಾಣುತ್ತಿದೆ. ಸ್ಪರ್ಧೆಯಲ್ಲಿ ಕೆಲವರು ಖುಷಿ ಪಡುತ್ತಾರೆ. ಉತ್ಸವದಲ್ಲಿ ಭಾಗವಹಿಸಿದ ಎಲ್ಲರೂ ಖುಷಿಪಡುತ್ತಾರೆ. ಪ್ರತಿಭೆಗಳೆಲ್ಲರೂ ಬೆಳೆಯುತ್ತಾ ಸಾಗುತ್ತಾರೆ. ಸೂಕ್ತ ವೇದಿಕೆ ಅವಕಾಶಗಳಿಗೆ ಅನುಸಾರವಾಗಿ ಸ್ವಂತಿಕೆಯನ್ನು ಬೆಳಗುತ್ತಾರೆ.
     ಮುದ್ದು ಮಕ್ಕಳೆ ನಿಮಗಿದು ಆಶೀರ್ವಾದದ ನುಡಿಗಳು. ಈ ನಾಡಿನ ಭವಿಷ್ಯ ನಿಮ್ಮ ಕೈಯಲ್ಲಿದೆ. ನಿಮ್ಮ ಅಭಿರುಚಿ ಕ್ಷೇತ್ರಗಳನ್ನು ನೀವೇ ಆಯ್ಕೆ ಮಾಡಿಕೊಂಡು ಸಾಧನೆ ಮಾಡುತ್ತಾ ಮುಂದುವರಿದರೆ ಅದೊಂದು ದಿನ ಅಗಾಧವಾದದ್ದನ್ನು ಸಾಧಿಸಿದ ಅನುಭವ ಆಗದಿರದು. ಜೀವನ ನಿರ್ವಹಣೆಗೆ ಒಂದು ವೃತ್ತಿ ಅವಲಂಬಿಸಲೇಬೇಕಾಗುತ್ತದೆ. ಮನಸ್ಸಿನ ನೆಮ್ಮದಿಗೆ ಕನಿಷ್ಠ ಒಂದಾದರೂ ಪ್ರವೃತ್ತಿಯನ್ನು ರೂಡಿಸಿಕೊಂಡಿರಬೇಕು. ಎರಡನ್ನು ತಪಸ್ಸಾಗಿ ಪೂಜೆಯಾಗಿ ಅರ್ಪಣಾ ಭಾವದಿಂದ ಹಾಗೂ ನಿರ್ಲಿಪ್ತತೆಯಿಂದ ಸಾಧಿಸುತ್ತಿದ್ದರೆ ಮನಪೂರ್ವಕ ಮುಂದುವರಿದರೆ ಸಿದ್ಧಿ ನಿಶ್ಚಿತ. 
      ಪ್ರತಿಯೊಬ್ಬರಿಗೂ ಮನೋದಾರ್ಢ್ಯ , ಆತ್ಮವಿಶ್ವಾಸ, ಅಂತ ಸಾಕ್ಷಿ , ಆತ್ಮ ತೃಪ್ತಿ ಮುಖ್ಯವಾಗುತ್ತದೆ. ಬರವಣಿಗೆ ಕ್ಷೇತ್ರದಲ್ಲಿ ಮುಂದುವರಿಯುವಾಗ ಅಪಾರವಾದ ಶಬ್ದ ಸಂಗ್ರಹವಿರಬೇಕು. ಸಮಾನಾರ್ಥಕ ಪದಗಳು ವಿವಿಧಾರ್ಥದ ಪದಗಳ ಜ್ಞಾನವಿರಬೇಕು. ತನ್ನಲ್ಲಿರುವ ವಿಚಾರಗಳು ಮನಸ್ಸನ್ನು ಕಾಡುತ್ತಿರುವ ವಿಷಯದಲ್ಲಿ ಕ್ರೋಢೀಕರಣಗೊಂಡು ಬರಹಾಸಕ್ತಿಯ ಕ್ಷೇತ್ರದಲ್ಲಿ ತೆರೆದುಕೊಳ್ಳುತ್ತದೆ. ತನ್ನದೇ ಆದ ಶೈಲಿಯಲ್ಲಿ ಬರಹ ಕಾರ್ಯ ಮುಂದುವರಿಯುತ್ತಿರಬೇಕು. ಸ್ನೇಹಿತರಿಂದ ಹಿರಿಯರಿಂದ ಅನುಭವಿಗಳಿಂದ ವಿಚಾರ ವಿನಿಮಯ ನಡೆಸುವ ಮೂಲಕ ಅನುಭವಗಳ ವಿಸ್ತಾರ ಪಡೆಯಬಹುದು. ಪುಸ್ತಕಗಳು ಅತ್ಯುತ್ತಮ ಸ್ನೇಹಿತರಾಗಿರುತ್ತದೆ. ಪೂಜ್ಯರಾಗಿರುತ್ತಾ ಅವಲಂಬಿಸಿದವರ ಕೈ ಹಿಡಿದು ಮುನ್ನಡೆಸುತ್ತದೆ. ಓದುತ್ತಾ ಬರೆಯುತ್ತಾ ಮಾತನಾಡುತ್ತಾ ತನ್ನ ಸ್ವಂತಿಕೆಯ ಮೂಲಕವೇ ಬೆಳಗುವ ದಿನಗಳು ದಿನಗಳಿಗೆ ಉದಯಿಸುತ್ತಿರಲಿ. ಎಲ್ಲರಿಗೂ ಬೆಳಕಾಗುವ ವ್ಯಕ್ತಿತ್ವವು ನಿಮ್ಮದಾಗಲಿ...... ಶುಭಮುಸ್ತು.
........................................ ಭಾಸ್ಕರ ಅಡ್ವಳ
ಗೌರವ ಸಲಹೆಗಾರರು, ಮಕ್ಕಳ ಕಲಾಲೋಕ
ಕರ್ನಾಟಕ ಸಾಹಿತ್ಯ ಪರಿಷತ್ತು 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob: +91 6366 072 936
******************************************

ಮಕ್ಕಳ ಜಗಲಿ ರಾಜ್ಯಮಟ್ಟದ ಕವನ ಮತ್ತು ಕಥಾ ಸ್ಪರ್ಧೆ- 2024 ರಲ್ಲಿ ಭಾಗವಹಿಸಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿರುವ ಪೋಷಕರಿಗೆ ಹಾಗೂ ಶಿಕ್ಷಕರಿಗೆ ಪ್ರೀತಿಪೂರ್ವಕ ಧನ್ಯವಾದಗಳು... ಈ ಬಾರಿಯ ಕಥೆ ಮತ್ತು ಕವನ ಸ್ಪರ್ಧೆಯಲ್ಲಿ ರಾಜ್ಯದ ಎಲ್ಲಾ ಭಾಗಗಳಿಂದ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಮೂರನೇ ವರ್ಷದ ರಾಜ್ಯಮಟ್ಟದ ಕಥೆ ಮತ್ತು ಕವನ ಸ್ಪರ್ಧೆಯನ್ನು ಬಹಳ ಯಶಸ್ವಿಯಾಗಿ ಚಂದಗಾಣಿಸಿ ಕೊಟ್ಟಿದ್ದೀರಿ. ನವೆಂಬರ್ 14 ಸಾಯಂಕಾಲ ಆರು ಗಂಟೆಗೆ ಫಲಿತಾಂಶ ಪ್ರಕಟಗೊಳ್ಳಲಿದೆ.

     ಸ್ಪರ್ಧೆಯ ಬಗ್ಗೆ ಯಾವುದೇ ಮಾಹಿತಿಗಳನ್ನು ನೀಡುವ ಕಾರ್ಯದಲ್ಲಿ ಗೋಪಾಲಕೃಷ್ಣ ನೇರಳಕಟ್ಟೆ, ರಮೇಶ್ ನಾಯ್ಕ ಉಪ್ಪುಂದ, ಶಿವಕುಮಾರ್ ಎಂ.ಜಿ., ಅರವಿಂದ ಕುಡ್ಲ, ಅಕ್ಬರ್ ಅಲಿ, ವಿಜಯಾ ಶೆಟ್ಟಿ ಸಾಲೆತ್ತೂರು, ತೇಜಸ್ವಿ ಅಂಬೆಕಲ್ಲು, ತುಳಸಿ ಕೈರಂಗಳ, ವಿದ್ಯಾಕಾರ್ಕಳ ಇವರ ಸೇವೆ ಅಭಿನಂದನೀಯ. 
         ಇಲ್ಲಿ ಬಂದಿರುವ ಎಲ್ಲಾ ಕಥೆ ಕವನಗಳನ್ನು ವಿಂಗಡಿಸುವ ಕಾರ್ಯದಲ್ಲಿ ನಿನಾದ, ನಿಧಿ, ತುಳಸಿ ಕೈರಂಗಳ ಮತ್ತು  ಶಾಲಾ ವಿದ್ಯಾರ್ಥಿಗಳು ಪ್ರೀತಿಯ ಸಹಕಾರ ನೀಡಿದ್ದಾರೆ. ಡಿಜಿಟಲ್ ಪ್ರಮಾಣ ಪತ್ರವನ್ನು ಕಳುಹಿಸಲು ನೆರವಾದ ನವ್ಯಶ್ರೀ... ಹೀಗೆ ಪ್ರತಿಯೊಬ್ಬರೂ ಇಲ್ಲಿ ಸ್ಮರಣೀಯರು.

ಅದೇ ರೀತಿ ಕಥೆ ಕವನಗಳನ್ನು ಪರಿಶೀಲಿಸುವ ಹಾಗೂ ತೀರ್ಪುಗಾರರ ಹಂತಕ್ಕೆ ಆಯ್ಕೆ ಮಾಡುವ ಕಾರ್ಯದಲ್ಲಿ ಶ್ರೀಮತಿ ವಿಜಯಾ ಶೆಟ್ಟಿ,  

ದಿವಿತ್ ಕೋಟ್ಯಾನ್

ರೂಪಾ ಮೋಂತಿಮಾರು 

ಕೃತಿಕಾ ಆಳಾಬೆ 

ತಮ್ಮ ಅಮೂಲ್ಯ ಸಮಯವನ್ನು ನೀಡಿರುವುದು ಪ್ರತಿಯೊಂದು ಬರಹಗಳನ್ನು ಗಮನಿಸಲು ಸಾಧ್ಯವಾಯಿತು.


     ಮಕ್ಕಳ ಜಗಲಿಯಲ್ಲಿ ನಡೆಸಿದ ಕವಿತಾ ಸ್ಪರ್ಧೆಯಲ್ಲಿ ಪಾಲ್ಗೊಂಡ ಮಕ್ಕಳ ಸಂಖ್ಯೆಯನ್ನು ಕಂಡು ನನಗೆ ಮಹದಾನಂದವಾಯ್ತು. ಎಷ್ಟೊಂದು ಹೂ ಮನಸುಗಳು ಅಕ್ಷರಗಳನ್ನು ಪೋಣಿಸುವ ಸಾಹಸಕ್ಕೆ ಕೈಹಾಕಿದ್ದಾರೆಂದು ಅಚ್ಚರಿಯಾಯ್ತು!. ಅದೂ ಎಂತೆಂತಹ ವಿಷಯಗಳನ್ನು ಎದುರಿಗಿಟ್ಟುಕೊಂಡು ಬರೆದಿದ್ದರೆಂದರೆ 'ಈ ಪ್ರಾಯದಲ್ಲಿ ಹೀಗೆಲ್ಲ ಯೋಚಿಸಲು ಸಾಧ್ಯಾನಾ?' ಅಂತ ಅಚ್ಚರಿಗೊಳುವಂತಿತ್ತು.
      ಬಾಲ್ಯದ ಬರಹಗಳು ಸಹಜವೆಂಬಂತೆ ಅಮ್ಮನ ಸುತ್ತಲೇ ಹೆಣೆದುದು ಹೆಚ್ಚೆನ್ನಬಹುದು. ಅಪ್ಪನ ಬಗ್ಗೆಯೂ ಕೆಲವರು ಬಹು ಆಪ್ತವಾಗಿ, ಗೌರವದಿಂದ, ಕೃತಜ್ಞತೆ ಯಿಂದ ಕವಿತೆಗಾಗಿ ಆಯ್ಕೆ ಮಾಡಿಕೊಂಡಿದ್ದರು. ಅದು ಬಿಟ್ಟರೆ ಪ್ರಕೃತಿಯ ಬಗೆಗಿನ ಕವಿತೆಗಳು ಪಾಲು ಪಡೆದಿದ್ದವು. ಕೆಲವರ ಕವಿತೆಗಳು ಗೇಯತೆಯನ್ನು ಪಡೆದಿದ್ದರೆ ಕೆಲವರ ಕವಿತೆಗಳು ಹಿರಿಯರನ್ನು ಪ್ರಶ್ನಿಸಿದಂತೆ, ಕೆಲವರು ನಿಸರ್ಗದ ಬಗ್ಗೆ ಚಕಿತರಾಗಿಯೂ ಬರೆದಿದ್ದಾರೆ. ನಾನೊಂದು ಮರ, ಸೈನಿಕ, ಮರೆತು ಹೋದ ಆ ಒಂದು ಗೊಂಬೆ, ಮಮತೆಯ ಜೋಕಾಲಿ, ದೀಪಾವಳಿಯ ಸಂಭ್ರಮ ಮೊದಲಾದ ಕವಿತೆಗಳು ಪುಟ್ಟ ಮಕ್ಕಳ ಭವಿಷ್ಯದ ಹೊಂಗಿರಣಗಳಾಗಿವೆ. ದೇವರು ಮತ್ತು ಚಮ್ಮಾರ, ರವಿ ಕಂಡಿತು, ಒಲವಿನ ಹಣತೆ, ಅಂತರಾಳ, ಬಾಲ್ಯ ಜೀವನ ಮೊದಲಾದ ಕವಿತೆಗಳು ಪ್ರೌಢತೆಯನು ಸಾರುತ್ತವೆ. ಬದುಕಿನ ನಾನಾರ್ಥಗಳ ಬಗ್ಗೆ ಚಿಂತನೆಗಳನ್ನು ಹಂಚಿಕೊಂಡ ಕವಿತೆಗಳನ್ನೋದುವಾಗ ಮನ ತಣಿಯಿತು. ಮಕ್ಕಳ ಜಗಲಿಯಲ್ಲಿ ಮಿಣುಕು ಹುಳಗಳ ಬೆಳಕು ತೇಜೋಪುಂಜಗಳಾಗಿ ಬೆಳಗುವ ದಿನಗಳು ನಾಳೆಗಳನ್ನು ತುಂಬಲಿವೆ. ಗೆಲುವೆಂಬುದು ಗೆಲುವಲ್ಲ... ಗುರಿಯೆಂಬುವುದೂ ಗೆಲುವಲ್ಲ. ತಾನೇ ತಾನಾಗಿ ಹಾಯಾಗಿ ಬೆಳೆಯುವುದೇ ನಿಜವಾದ ಗೆಲುವು. ಬಹುಮಾನ ಕೇವಲ ಸಾಂಕೇತಿಕ ಅಷ್ಟೇ. ಅದುವೇ ಕೊನೆಯ ಗುರಿಯಾಗದಿರಲೆಂಬ ಕಿವಿಮಾತಿನೊಂದಿಗೆ ಭಾಗವಹಿಸಿದ ಎಲ್ಲ ಪುಟಾಣಿಗಳಿಗೆ ಹಾರ್ದಿಕ ಅಭಿನಂದನೆಗಳು.
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************


Ads on article

Advertise in articles 1

advertising articles 2

Advertise under the article