ಪಯಣ : ಸಂಚಿಕೆ - 16 (ಬನ್ನಿ ಪ್ರವಾಸ ಹೋಗೋಣ)
Thursday, November 7, 2024
Edit
ಪಯಣ : ಸಂಚಿಕೆ - 16 (ಬನ್ನಿ ಪ್ರವಾಸ ಹೋಗೋಣ)
ಲೇಖನ : ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದು ಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ
ಈ ವಾರದ ಪಯಣದಲ್ಲಿ ಹೊಯ್ಸಳರ ರಾಜಧಾನಿ ಹಳೇಬೀಡಿನ ಪ್ರವಾಸಕ್ಕೆ ಹೋಗೋಣ ಬನ್ನಿ....
ಹೊಯ್ಸಳರ ಪ್ರಾರಂಭದ ರಾಜಧಾನಿ ಸೊಸೆಯೂರು, ನಂತರ ಕೆಲವು ಕಾಲ ಬೇಲೂರು ರಾಜಧಾನಿಯಾಯಿತು. ಹೊಯ್ಸಳ ರಾಜ್ಯ ವಿಸ್ತರಿಸಿದಾಗ ಆ ರಾಜಧಾನಿ ಹಳೇಬೀಡಿಗೆ ಬದಲಾಯಿಸಲ್ಪಟ್ಟಿತು. ಅದೇ ದ್ವಾರಸಮುದ್ರ, ದ್ವಾರಾವತಿ ಎಂತಲೂ ಕರೆದಿರುವರು. ದ್ವಾರಸಮುದ್ರವೆಂದರೆ ಬಾಗಿಲುಗಳ ಸಮುದ್ರ, ಹನ್ನೆರಡು ಬಾಗಿಲುಗಳು ನಗರಕ್ಕೆ ಇದ್ದವೆಂದು ಆ ಹೆಸರು.
ಈ ಸ್ಥಳವು ಹೊಯ್ಸಳ ಸಾಮ್ರಾಜ್ಯದ ರಾಜಧಾನಿಯಾಗಿ ಮೆರೆದಿದ್ದು, ಹನ್ನೊಂದರಿಂದ ಹದಿನಾಲ್ಕನೆಯ ಶತಮಾನಗಳವರೆಗೆ ಅದು ಆಗ ಭವ್ಯವಾಗಿದ್ದು, ಅರಮನೆ, ಕೋಟೆ, ಟಂಕಸಾಲೆ, ಕೊತ್ತಲುಗಳಿಂದ ಕೂಡಿತ್ತು. ಕ್ರಿ.ಶ.1120ರಲ್ಲಿ ನಿರ್ಮಾಣಗೊಂಡು ಹೊಯ್ಸಳ ರಾಜಧಾನಿಯಾಗಿ ಮೆರೆದದ್ದು ಚರಿತ್ರೆಯ ಪುಟಗಳಲ್ಲಿ ಕಾಣಬರುತ್ತದೆ. ಇದರ ರಕ್ಷಣೆಯ ಸಲುವಾಗಿ ದೊಡ್ಡ ಕೋಟೆಯು ನಿರ್ಮಾಣವಾಗಿತ್ತು. (8 - 9 ಕಿ.ಮೀ.) ಕೋಟೆಯ ಉದ್ದಕ್ಕೂ ಬತೇರಿಗಳಿದ್ದುವು. ನಾಲ್ಕು ದ್ವಾರಗಳು ಈ ಕೋಟೆಗೆ ಇದ್ದವೆಂದು ಪುರಾತತ್ವ ಇಲಾಖೆ ಸಂಶೋಧನೆಯಿಂದ ಹೇಳಿದೆ.
ಇಲ್ಲಿಯ ಮಹೋನ್ನತ ದೇವಾಲಯ ಹೊಯ್ಸಳೇಶ್ವರ. ಇದೊಂದು ದ್ವಿಕೂಟ ದೇವಾಲಯ. ನಕ್ಷತ್ರಾಕಾರದ ತಳವಿನ್ಯಾಸದ ಮೇಲೆ ಐದಡಿ ಎತ್ತರದ ಜಗತಿಯ ಮೇಲೆ ಪೂರ್ವಕ್ಕೆ ಮುಖಮಾಡಿ ದೇವಾಲಯ ನಿಂತಿದೆ. ಈ ದೇವಾಲಯದ ಹೊರಭಾಗದ ವಿಸ್ತೀರ್ಣ ಸುಮಾರು 214ಅಡಿ X 203 ಅಡಿಗಳು. ಈ ವಿಸ್ತಾರವಾದ ಅಂಗಳದಲ್ಲಿ ಎರಡು ಮಂಟಪಗಳಿವೆ. ಈ ಎರಡು ಮಂಟಪಗಳಲ್ಲೂ ನಂದಿ ಪ್ರತಿಮೆಗಳಿವೆ. ಒಂದು ದೊಡ್ಡದು ಮತ್ತೊಂದು ಚಿಕ್ಕದು. ಸಣ್ಣ ನಂದಿ 10 ಅಡಿ ಉದ್ದ 5 ಅಡಿ ಅಗಲ ಮತ್ತು 7.5 ಅಡಿ ಎತ್ತರವಿದೆ. ದೊಡ್ಡ ಪ್ರಮಾಣದ ನಂದಿ 13 ಅಡಿ ಉದ್ದ 7 ಅಡಿ ಅಗಲ ಮತ್ತು 9 ಅಡಿ ಎತ್ತರವಾಗಿದೆ. ಈ ಮಂಟಪವು 19 ಕಂಬಗಳ ಆಸರೆ ಪಡೆದಿದೆ.
ಈ ದೇವಾಲಯವು ಬೇಲೂರಿನಂತೆ ಒಂದೇ ಅಲ್ಲ. ಇದು ಎರಡು ದೇವಸ್ಥಾನಗಳ ಸಂಗಮ. ಆದರೆ ಅದು ಒಂದೇ ಜಗತಿಯ ಮೇಲೆ ನಿಂತಿದೆ. ಪ್ರತಿಯೊಂದು ಭಾಗವೂ ಇದಕ್ಕಿದ್ದು, ಇದು ನವರಂಗದಿಂದ ಸೇರಿಸಲ್ಪಟ್ಟಿದೆ. ಒಂದು ದೇವಾಲಯವು ಹೊಯ್ಸಳೇಶ್ವರವಾದರೆ ಇನ್ನೊಂದು ಶಾಂತಲೇಶ್ವರ. ಇಲ್ಲಿರುವ ಹೊರಗೋಡೆಗಳಲ್ಲಿ ಅಸಂಖ್ಯಾತ ಸೂಕ್ಷ್ಮಸಂವೇದಿ ಕೆತ್ತನೆಗಳು, ರಾಮಾಯಣ, ಮಹಾಭಾರತದ ಕಾವ್ಯ ಪಾತ್ರಗಳು ರೂಪುಗೊಂಡಿವೆ. ತಳದಿಂದ ತುದಿಯವರೆಗೆ ಎಂಟುಸಾಲು ಒಂದರ ಮೇಲೊಂದು ಚಿತ್ರಪಟ್ಟಿಕೆಗಳಿವೆ. ಆನೆಗಳ ಸಾಲು, ಸಿಂಹಗಳ ಸಾಲು, ಲತಾವಿನ್ಯಾಸಗಳು, ಅಶ್ವಸಾಲು, ನಡುನಡುವೆ ಒಂಟೆಗಳು, ಬಳ್ಳಿ ಕೆತ್ತನೆ, ಅನಂತರ ರಾಮಾಯಣ, ಮಹಾಭಾರತ, ಭಾಗವತ, ಬಲಿ, ಪ್ರಹ್ಲಾದ, ಸಮುದ್ರ ಮಥನ, ಶೈವ ಪುರಾಣಕಥೆಗಳ ಚಿತ್ರಣ, ಮಕರ, ಹಂಸಗಳ ಸಾಲುಗಳು ದೇವಾಲಯವನ್ನು ಸುತ್ತುವರೆದಿದೆ. ಇದರ ಒಟ್ಟು ಉದ್ದವೇ 710 ಅಡಿಗಳು. ಆನೆ ಸಾಲಿನಲ್ಲಿ 2000 ಆನೆಗಳಿವೆಯಂತೆ. ದೇವಾಲಯದ ಹಿಂಭಾಗದ ಗೋಡೆಗಳಲ್ಲಿ 166 ಸ್ತ್ರೀ ವಿಗ್ರಹಗಳು, 114 ಪುರುಷ ವಿಗ್ರಹಗಳು ಇದೆ. ಇಲ್ಲಿ ಶಿವನ ಅವತಾರಗಳು, ಗಣೇಶ, ಸುಬ್ರಹ್ಮಣ್ಯ, ಉಮಾಮಹೇಶ್ವರ, ನರಸಿಂಹ, ದುರ್ಗಿ, ಸರಸ್ವತಿ, ಹರಿಹರ, ವಾಮನ, ತ್ರಿವಿಕ್ರಮ, ಇಂದ್ರ, ಬ್ರಹ್ಮ, ರಾವಣ, ಅರ್ಜುನ, ಗರುಡ, ಮುಂತಾದ ನೂರಾರು ವಿಗ್ರಹಗಳ ಕೆತ್ತನೆ ಇದೆ. ಶಿಲ್ಪಗಳ ಉಡುಗೆ ತೊಡುಗೆ, ಕೇಶಾಲಂಕಾರ, ಸವಾರರ ಉದ್ದವಾದ ಬೂಟು, ರಥಗಳ ಚಕ್ರಗಳಿಗೆ ಸ್ಪಿಂಗ್ ಇವುಗಳಲ್ಲಿ ಆಧುನಿಕತೆಯ ವಿಶೇಷತೆ ಇದೆ.
ದೇವಸ್ಥಾನಕ್ಕೆ ನಾಲ್ಕು ಪ್ರವೇಶದ್ವಾರಗಳಿವೆ. ಇವುಗಳೆಲ್ಲಾ ತುಂಬಾ ಅಲಂಕಾರಿಕವಾಗಿವೆ. ದಕ್ಷಿಣ ದ್ವಾರ ಈ ದೇವಸ್ಥಾನಕ್ಕೆ ಮುಖ್ಯ ಪ್ರವೇಶದ್ವಾರ. ಇದರ ಎರಡು ಬದಿಯಲ್ಲಿ ದ್ವಾರಪಾಲಕರಿದ್ದಾರೆ.
ದೇವಸ್ಥಾನದೊಳಗೆ ಪ್ರವೇಶಿಸಿದರೆ ಅದು ನಮ್ಮನ್ನು ದೊಡ್ಡ ಸುಂದರವಾದ ಪಡಸಾಲೆಗೆ ಒಯ್ಯುವುದು. ಅಲ್ಲಿ ಅಲಂಕಾರಿಕ ಕಂಬಗಳಿವೆ. ಅದರ ಮೇಲೆ ಮದನಿಕೆ ವಿಗ್ರಹಗಳು 84 ಸಂಖ್ಯೆಯಲ್ಲಿ ಇದ್ದವೆಂದು ಹೇಳುವರು. ಈಗ ಅಲ್ಲಿ 14 ಮಾತ್ರ ಉಳಿದಿವೆ. (ಒಳಗೆ 11 ಹೊರಗೆ 3) ಈ ದೇವಸ್ಥಾನಕ್ಕೆ ಎರಡು ಗರ್ಭಗೃಹಗಳಿವೆ. ಅವುಗಳಲ್ಲಿ ಹೊಯಸಳೇಶ್ವರ, ಶಾಂತಳೇಶ್ವರರಿದ್ದಾರೆ. ಇದಲ್ಲದೆ ಇಲ್ಲಿದ್ದ ಪ್ರಸಿದ್ಧ ದೇವಾಲಯ ಕೇದಾರೇಶ್ವರನದ್ದು. ಇದನ್ನು ಇಮ್ಮಡಿ ವೀರಬಲ್ಲಾಳ ಮತ್ತು ಅವನ ಕಿರಿಯ ರಾಣಿ ಕೇತಲಾದೇವಿ ನಿರ್ಮಿಸಿದರಂತೆ. (1219) ದೇವಸ್ಥಾನ ಈಗ ಸಂಪೂರ್ಣ ಭಗ್ನವಾಗಿದೆ.
ಚರಿತ್ರಕಾರರು ಹೇಳುವಂತೆ ಇದು ಅತ್ಯಂತ ಸುಂದರ ದೇವಾಲಯವಾಗಿತ್ತು. ಆದರೆ ಈಗ ದೇವಸ್ಥಾನದ ಕೆಲವು ಭಾಗಗಳಿದ್ದು, ಶಿಖರನಾಶವಾಗಿದೆ. ಇಲ್ಲಿ ಮೊಸಳೆ, ಪುಷ್ಪಗಳ ಕೆತ್ತನೆ ಸುಂದರವಾಗಿದೆಯೆಂದು ಹೇಳುತ್ತಾರೆ. ಇತರ ನೋಟದ ಸ್ಥಳಗಳೆಂದರೆ ವೀರಭದ್ರ ದೇವಾಲಯ, 800 ವರ್ಷಗಳಿಂದ ಅಸ್ತಿತ್ವಕ್ಕೆ ಉಳಿಸಿಕೊಂಡಿರುವ ಕೆರೆ (ದೋರ ಸಮುದ್ರ) ಮ್ಯೂಜಿಯಂ ಮತ್ತು ಕೆಲವು ಜೈನಬಸದಿಗಳು (ಬಸ್ತಿಹಳ್ಳಿ)
ಸೇರುವ ಬಗೆ :
ವಿಮಾನ ಸೌಕರ್ಯ : ಹತ್ತಿರದ ವಿಮಾನ ನಿಲ್ದಾಣ : ಬೆಂಗಳೂರು ಇಲ್ಲವೇ
ಮಂಗಳೂರು.
ರೈಲು ಸೌಕರ್ಯ : ಹಾಸನ ಹತ್ತಿರದ ರೈಲ್ವೆ ನಿಲ್ದಾಣ, 27 ಕಿ.ಮೀ. (ಮೈಸೂರು - ಅರಸೀಕೆರೆ ಮಾರ್ಗ) ಬಾಣಾವರ ಹತ್ತಿರದ ರೈಲ್ವೆ ನಿಲ್ದಾಣ 32 ಕಿ.ಮೀ. (ಅರಸೀಕೆರೆ - ಮುಂಬಯಿ ಮಾರ್ಗ)
ರಸ್ತೆ ಸೌಕರ್ಯ : ಬೇಲೂರು 10 ಕಿಮೀ, ಮೈಸೂರು 150 ಕಿ.ಮೀ.
ಬೆಂಗಳೂರು 214 ಕಿ.ಮೀ.
ಇದೆ.
ಉತ್ತಮ ಪ್ರವಾಸ ಕಾಲ : ಅಕ್ಟೋಬರ್ ನಿಂದ - ಫೆಬ್ರವರಿ.
ಇಲ್ಲಿನ ಶಿಲ್ಪ ಕಲೆಗಳು : ಲತೆಯಂತೆ, ಹೂವಿನ ಬಳ್ಳಿಯಂತೆ, ನದಿಯ ನೀರಿನಂತೆ, ಸೂರ್ಯನ ಕಿರಣದಂತೆ, ಚಿತ್ತಾರಗಳ ಚಿತ್ರಗಳಂತೆ ಆಕರ್ಷಕವಾಗಿದೆ. ಹೊಯ್ಸಳರ ಈ ಅಮೂಲ್ಯ ಕೊಡುಗೆ ಕನ್ನಡ ನಾಡಿನ ಹೆಮ್ಮೆಯಾಗಿದೆ. ಹಳೇಬೀಡಲ್ಲ - ಇದು ಸದಾ ವಿಸ್ಮಯ ಲೋಕದ ಅದ್ಭುತವಾಗಿದೆ. ಹಳೇಬೀಡಿಗೆ ಬನ್ನಿ ಪ್ರವಾಸ ಹೋಗೋಣ .....
ಮತ್ತೆ ಮುಂದಿನ 'ಪಯಣ' ಸಂಚಿಕೆಯಲ್ಲಿ ಸಿಗೋಣವೇ, ನಮಸ್ಕಾರ.
(ಚಿತ್ರಗಳು : ಅಂತರ್ಜಾಲ ಕೃಪೆ)
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
********************************************