ನಿಷ್ಪಾಪಿ ಸಸ್ಯಗಳು : ಸಂಚಿಕೆ - 73
Wednesday, October 23, 2024
Edit
ನಿಷ್ಪಾಪಿ ಸಸ್ಯಗಳು : ಸಂಚಿಕೆ - 73
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ.... ಹೇಗಿದ್ದೀರಿ? ಅತ್ತ ದೀಪಾವಳಿ ಇತ್ತ ದಸರಾ ಹಬ್ಬಗಳ ನಡುವೆ ಸಂತಸದಿಂದ ಶಾಲಾರಂಭವಾಗಿದೆಯಲ್ಲವೆ? ಸರಿ ಮಕ್ಕಳೇ. ಇಂದು ನಾವು ವಿಶಿಷ್ಠವಾದ ಸಸ್ಯವೊಂದರ ಪರಿಚಯವನ್ನು ಮಾಡಿಕೊಳ್ಳೋಣ. ಇದು ಒಮ್ಮೆ ನಿಮಗೆ ಕಾಣ ಸಿಕ್ಕರೆ, ನೀವದನ್ನು ಮುಟ್ಡಿದಿರೆಂದಾದರೆ ಖಂಡಿತ ಮರೆಯಲಾರಿರಿ! ತನ್ನ ಪರಿಚಯವನ್ನು ಸ್ವತ: ಮಾಡಿಕೊಂಡು ಮಾತಿಗಿಳಿಯುವ ವಾಚಾಳಿಯಂತೆ ಈ ಸಸ್ಯದ ಎಲೆಗಳನ್ನು ಸೋಕಿದರೆ ಸಾಕು... ತುರಿಕೆ ಉರಿಯ ಅನುಭವ ಇಡೀ ದಿನವನ್ನೇ ಹಾಳುಮಾಡಬಲ್ಲದು.
ನಾನೊಮ್ಮೆ ಮಾರ್ಗದ ಬದಿಯಿದ್ದ ಉರ್ಕಿ ಎಂಬ ಗಿಡದ ಎಲೆಗಳು ಚಂದ ಕಂಡವೆಂದು ಒಂದೆರಡು ಎಲೆಗಳನ್ನೂ ಕೀಳಲು ಕೈ ಹಾಕಿದ್ದೇ ತಡ, ಒಮ್ಮೆಲೆ ಚೇಳು ಕುಟುಕಿದಂತಾಗಿತ್ತು. ಹಸಿರು ಎಲೆಗಳ ನಡುವೆ ಏನೂ ಕಾಣಿಸಲಿಲ್ಲ. ಕಂಬಳಿಹುಳವೇನಾದರೂ ಇದೆಯೇ ಎಂದು ಮತ್ತೆ ಪರೀಕ್ಷಿಸಲೆಂದು ಎಲೆಗಳನ್ನು ಪರೀಕ್ಷಿಸಿಸಿದೆ. ಪುನ: ಕೈ ಬೆರಳಗಳ ಮೇಲ್ಬಾಗ ತೀಕ್ಷ್ಣ ವಾಗಿ ಉರಿಯತೊಡಗಿ ತುರಿಸತೊಡಗಿತು. ನನಗಾಗಲೇ ನಾನು ತುರಿಕೆ ಬಳ್ಳಿಯ ಸ್ನೇಹ ಮಾಡಿದೆನೆಂಬ ಅರಿವಾಯಿತು. ನೋಡಿದರೆ ಅದೊಂದು ತೆಳ್ಳನೆಯ ಬಳ್ಳಿ. ಚಂದದ ಹೊಳೆಯುವ ಹಸಿರು ಎಲೆಗಳು. ಕುಟುಕುವ ಕೂದಲಿನೊಂದಿಗೆ 6ರಿಂದ 10 cm ಉದ್ದನೆಯ ಅಂಡಾಕಾರದ ಎಲೆಗಳು. ಎಲೆಗಳಲ್ಲಿ ಮಾತ್ರವಲ್ಲದೆ ಮೃದುವಾದ ಕಾಂಡದ ಸುತ್ತಲೂ ಸೂಕ್ಷ್ಮಬಿಳಿ ರೋಮಗಳಿರುತ್ತವೆ. ಇದರ ತುರಿಕೆಗೆ ಸೆಗಣಿ ಹಚ್ಚಿದರೆ ಉಪಶಮನವಾಗುವುದೆನ್ನುತ್ತಾರೆ. ದುಂಡಾದ ಬುಡ, ತುದಿ ಚೂಪು. ಎಲೆಗಳ ಮೇಲ್ಭಾಗ ಹಸಿರಿದ್ದರೆ ಕೆಳಭಾಗ ಮಾಸಲು ಬಿಳಿ. ಎಲೆಗಳ ಅಂಚು ಗರಗಸದ ಹಲ್ಲಿನಂತೆ ಇರುತ್ತದೆ. ಎಲೆಗಳ ಬುಡದಲ್ಲಿ ವಿಶೇಷ ರೀತಿಯ ಪುಷ್ಪಗಳು ಅರಳುತ್ತವೆ. ಇವು ಚರ್ಮರೋಗ, ಸುಟ್ಟಗಾಯ, ಕೂದಲಿನ ಮರುಹುಟ್ಟಿಗೆ ಸಹಾಯಕವಾಗಿವೆ. ಫೆಬ್ರವರಿಯಿಂದ ಜೂನ್ ವರೆಗೂ ಹೂಹಣ್ಣುಗಳಾಗುತ್ತವೆ. ಬೂದು ಮಿಶ್ರಿತ ಕಂದು ಬೀಜ ನಯವಾಗಿದ್ದು 8mm ವ್ಯಾಸ ಹೊಂದಿರುತ್ತದೆ. ಸಂಪೂರ್ಣ ಸಸ್ಯದ ಮೇಲೆ ಕಂಡುಬರುವ ಚೂಪಾದ ಸಿಲಿಸಿಯಸ್ ಬಿಂದುಗಳೊಂದಿಗೆ ಕುಟುಕುವ ಕೂದಲು ಟ್ರೈಕೋಮ್ ಗಳನ್ನು ಒಳಗೊಂಡಿರುತ್ತದೆ. ಇದನ್ನು ಸ್ಪರ್ಶಿಸಿದಾಗ ಪ್ರಚೋದನೆಗೊಂಡು ತುದಿಯೊಡೆದು ಹೈಪೊಡರ್ಮಿಕ್ ಸಿರಿಂಜ್ ಆಗಿ ಕಾರ್ಯನಿರ್ವಹಿಸುತ್ತದೆ. ವಿಷಕಾರಿ ಪೆಪ್ಟೈಡ್ ಗಳನ್ನು ಬಿಡುಗಡೆಗೊಳಿಸುತ್ತದೆ. ಇದು ತೀವ್ರ ತುರಿಕೆ, ಸುಡುವ ನೋವು, ಉರಿಯೂತವನ್ನುಂಟುಮಾಡುತ್ತದೆ. ಇದು ಕೆಲವು ಗಂಟೆಯಿಂದ ಕೆಲವು ದಿನಗಳವರೆಗಿರಬಹುದು. ಈ ಪ್ರೊಟೀನ್ ಗಳು ಇತರ ಪ್ರೊಟೀನ್ ಗಳಂತೆ ಒಣಗಿದ ಬಳಿಕ ಹೆಚ್ಚು ಪರಿಣಾಮಕಾರಿಯಾಗಿ ಉಳಿಯುವುದಿಲ್ಲ. ಈ ತುರಿಕೆ ಬಳ್ಳಿ ಮಾನವನಿಗೆ ವಿಷಕಾರಿ ಸಸ್ಯವಲ್ಲ.
ಕುರುಚಲು ಕಾಡು, ಪಾಳು ಭೂಮಿ, ಕಲ್ಲುಬಂಡೆಗಳಿಂದ ಕೂಡಿದ ಗುಡ್ಡಗಾಡು, ರೈಲ್ವೆ ರಸ್ತೆ ಪಕ್ಕದ ಜಲ್ಲಿಕಲ್ಲುಗಳ ಸನಿಹ ಇದರ ಆವಾಸಸ್ಥಾನ. ಭಾರತ, ಚೀನಾ, ಮ್ಯಾನ್ಮಾರ್, ನೇಪಾಳ, ಬಾಂಗ್ಲಾ, ಶ್ರೀಲಂಕಾ ಗಳಲ್ಲಿ ವಿತರಣೆಯಾಗಿರುವ ಈ ನಿಷ್ಪಾಪಿ ಸಸ್ಯ ಶಾಸ್ತ್ರೀಯವಾಗಿ ಟ್ರಾಜಿಯಾ ಇನ್ವೊಲುಕ್ರಾಟಾ (Tragia involvucrata) ಎಂಬ ಹೆಸರು ಪಡೆದಿದ್ದು ಯುಪೋರ್ಬಿಯೇಸಿ (Euphorbiaceae) ಕುಟುಂಬಕ್ಕೆ ಸೇರಿದೆ. ಕನ್ನಡದಲ್ಲಿ ತುರಿಕೆ ಬಳ್ಳಿ, ಉರಿಚಟ್ಲೆ, ಉಸರ್ಣಿಕೆ, ಚೊಣ್ಕಿ, ತೀಟೆಗೆರಸಿ, ಸಂಸ್ಕೃತದಲ್ಲಿ ದು:ಸ್ಪರ್ಶ, ತುಳುವಿನಲ್ಲಿ ಪಚ್ಚರೆಂಗಿ, ಆಕಿರೆ ಎಂದೆಲ್ಲ ತನ್ನ ಬುದ್ದಿಗೆ ಸರಿಯಾದ ಹೆಸರುಗಳನ್ನು ಪಡೆದುಕೊಂಡಿದೆ. ಶ್ರೀಲಂಕಾದಲ್ಲಿ ಶತಶತಮಾನಗಳಿಂದ ಸಾಂಪ್ರದಾಯಿಕ ಔಷಧೀಯ ಸಸ್ಯವಾಗಿದೆ. ಸಸ್ಯ ಸಾಮಗ್ರಿಗಳಿಂದ ಮಾಡಿದ ಸೂತ್ರೀಕರಣಗಳನ್ನು ಸಾಂಪ್ರದಾಯಿಕ, ಪೂರಕ, ಪರ್ಯಾಯ ಔಷಧಿಯಲ್ಲಿ ಬಳಕೆಯಿದೆ. ಅಭಿವೃದ್ಧಿ ಹೊಂದಿರುವ ದೇಶಗಳಲ್ಲಿ ರಾಸಾಯನಿಕ ಔಷಧಗಳ ಪ್ರತಿಕೂಲ ಪರಿಣಾಮಗಳಿಂದಾಗಿ ಪೂರಕ ಪರ್ಯಾಯ ಔಷಧಿಗಳು ಜನಪ್ರಿಯವಾಗಿವೆ. ಈ ಸಸ್ಯವು ಕಠಿಣ ಹವಾ ಪರಿಸ್ಥಿತಿಯಲ್ಲೂ ಬದುಕಿ ಉಳಿಯುತ್ತದೆ.
ಇದೊಂದು ಕಳೆ ಸಸ್ಯವೆಂದು ಪರಿಗಣಿಸಲ್ಪಟ್ಟಿರುವುದರಿಂದ ಔಷಧೀಯ ಮೌಲ್ಯವನ್ನು ಜನ ಕಾಣುತ್ತಿಲ್ಲವೆಂಬುದು ವಿಷಾದಕರ ವಿಚಾರವಾಗಿದೆ. ರಕ್ತಸಿಕ್ತ ಭೇದಿ, ಮೂಲವ್ಯಾಧಿ, ಅಸ್ತಮಾ, ಕೆಮ್ಮು, ಉಸಿರಾಟದ ಸಮಸ್ಯೆ, ಅಲರ್ಜಿ, ಗಾಯ ಗುಣಪಡಿಸುವಿಕೆ ಗಳಲ್ಲದೇ ಇಲಿ ಹೆಗ್ಗಣಗಳ ಬಿಲದೊಳಗೆ ಹಾಕಿದರೆ ಅವುಗಳು ಆ ಪ್ರದೇಶವನ್ನೇ ಬಿಟ್ಟುಬಿಡುತ್ತವೆ!
ಈ ತುರಿಕೆಬಳ್ಳಿಯಲ್ಲಿ ಧಾರಾಳ ಮೆಗ್ನೀಸಿಯಂ, ಐರನ್, ಕ್ಯಾಲ್ಸಿಯಂ ಇದ್ದು ಮಂಡಿ ಸವಕಳಿ, ಮಂಡಿ ನೋವಿಗೆ ಉತ್ತಮ. ಹಿಮೋಗ್ಲೋಬಿನ್ ಹೆಚ್ಚಾಗುವುದು. ಬಿಸಿನೀರಿನಲ್ಲಿ 15 ನಿಮಿಷ ನೆನೆಸಿದರೆ ತುರಿಕೆ ಇರುವುದಿಲ್ಲ. ಇದರ ಪಲ್ಯವನ್ನೂ ಮಾಡಬಹುದು. ಈ ಸಸ್ಯಗಳಿದ್ದಲ್ಲಿ ಸಾರಜನಕ ಅಂಶ ಹೆಚ್ಚಿರುತ್ತದೆ ಎಂಬುದಕ್ಕೆ ಸಾಕ್ಷಿ ! ಇದೊಂದು ಬ್ಯಾಕ್ಟೀರಿಯಾ ವಿರೋಧಿ ಸಸ್ಯ. ಈ ಸಸ್ಯದ ಬಗ್ಗೆ ಬಹಳ ಸಂಶೋಧನೆಗಳಾಗಿವೆ. ಇಲಿಗಳ ಮೇಲೆ ಪ್ರಯೋಗ ಮಾಡಿ ಉತ್ತಮ ಫಲಿತಾಂಶಗಳನ್ನು ಪಡೆಯಲಾಗುತ್ತಿದೆ. ಇದು ಉರಿಯೂತದ ವಿರೋಧಿ, ಬ್ಯಾಕ್ಟೀರಿಯಾ ವಿರೋಧಿ. ಮಧುಮೇಹದ ಕಾರಣದಿಂದಾಗಿ ಉಂಟಾದ ಪಾದದ ಹುಣ್ಣು , ಮೂತ್ರ ಸೋಂಕುಗಳಿಗೆ ಕಾರಣವಾಗುವ ರೋಗಕಾರಕಗಳ ಬಗ್ಗೆ ಪ್ರಖರ ಪರಿಣಾಮ ಬೀರುತ್ತದೆ. ಉತ್ಕರ್ಷಣ ನಿರೋಧಕ, ನೋವು ನಿವಾರಕ, ಸೊಳ್ಳೆಗಳ ನಿಯಂತ್ರಕ, ಮೂತ್ರವರ್ಧಕ, ಪ್ರಬಲವಾದ ಆಂಟಿಟ್ಯೂಮರ್, ಕ್ಯಾನ್ಸರ್ ವಿರೋಧಿ ಗೊತ್ತಾ?
ಸರಿ ಮಕ್ಕಳೇ, ನಿಮಗೂ ಈ ಬಳ್ಳಿ ಸಿಕ್ಕರೆ ಗಮನಿಸುತ್ತಿರಿ... ಮುಟ್ಟದಿರಿ, ಆದರೆ ವೈರಿಯಂತೆ ಕಡಿದು ಬಿಸಾಡದಿರಿ. ಸಸ್ಯವು ಸಸ್ಯವಾಗಿ ತನ್ನಷ್ಟಕ್ಕೇ ಬದುಕು ಕಟ್ಟಿಕೊಳ್ಳುವ ಅವಕಾಶ ಕಲ್ಪಿಸೋಣ. ಏನಂತೀರಿ? ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗುತ್ತೇನೆ.. ನಮಸ್ಕಾರ.
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************