-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 51

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 51

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 51
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203      

     ಪ್ರೀತಿಯ ಮಕ್ಕಳೇ... ನಾವು ಈಗ 51ನೆಯ ಸಂಚಿಕೆಯಲ್ಲಿದ್ದೇವೆ. 44ನೆಯ ಸಂಚಿಕೆಯ ವರೆಗೆ ನಾವು ಜೀವ ಕ್ರಿಯೆಗಳ (life processes) ಬಗ್ಗೆ ಮಾತನಾಡುತ್ತಿದ್ದೆವು. ಆದರೆ ಲವ್ ಗ್ರಾಸ್ ಬಗ್ಗೆ ಓದಿದ ಮೇಲೆ ನಮ್ಮ ನಡಿಗೆಯ ಹಾದಿ ಬದಲಾಯಿತು. ಏಕೆ ಸಸ್ಯಗಳ ಬೆಳವಣಿಗೆ ವಿಲಕ್ಷಣವಾಗುತ್ತಿದೆ ಎಂದು ಚರ್ಚಿಸುತ್ತಾ 6 ಸಂಚಿಕೆಗಳು ಕಳೆದು ಹೋದುದು ತಿಳಿಯಲೇ ಇಲ್ಲ. ಮತ್ತೆ ಹಿಂದೆ ಹೋಗಿ ಏನು ಮಾತನಾಡುತ್ತಿದ್ದೇವು ಎಂದು ನಾನು ಇದೀಗ ಮತ್ತೊಮ್ಮೆ ನೆನಪು ಮಾಡಬೇಕಾಗಬಹುದು. ಹೌದು, ಪ್ರಾಣಿಗಳು ಚಯಾಪಚಯ ತ್ಯಾಜ್ಯಗಳನ್ನು ಹೇಗೆ ದೇಹದಿಂದ ಹೊರ ಹಾಕುತ್ತವೆ ಎಂಬ ಬಗ್ಗೆ ತಿಳಿದಿದ್ದೇವೆ. ಹಾಗಾದರೆ ಸಸ್ಯಗಳಲ್ಲಿ ಕೂಡಾ ಚಯಾಪಚಯ ಪ್ರಕ್ರಿಯೆ ನಡೆಯುತ್ತಲೇ ಇರುತ್ತವೆ. ಅವುಗಳಲ್ಲಿಯೂ ಕೂಡಾ ಬೇಡವಾದ ವಸ್ತುಗಳು ಉತ್ಪತ್ತಿಯಾಗುತ್ತವಲ್ಲ ಅವುಗಳು ಹೇಗೆ ಹೊರ ಹಾಕಲ್ಪಡುತ್ತವೆ ಎಂದು ಕೇಳಬಹುದು ನೀವು. ಸಸ್ಯಗಳು ಆಹಾರ ತಯಾರಿಸುವಾಗ ಇಂಗಾಲದ ಡೈಆಕ್ಸೈಡ್ ಬಳಸಲ್ಪಟ್ಟು ಆಮ್ಲಜನಕ ಬಿಡುಗಡೆಯಾಗುತ್ತದೆ. ಆದ್ದರಿಂದ ಸಸ್ಯಗಳಿಗೆ ಆಮ್ಲಜನಕದ ಅಗತ್ಯವಿಲ್ಲ ಎಂದು ಅನೇಕರು ಭಾವಿಸುತ್ತಾರೆ. ಆದರೆ ಹಾಗೇನೂ ಇಲ್ಲ. ಆಹಾರ ತಯಾರಿಕೆಯೇ ಬೇರೆ ಉಸಿರಾಟವೇ ಬೇರೆ. ಪ್ರತಿಯೊಂದು ಜೈವಿಕ ಕ್ರಿಯೆಗೆ ಶಕ್ತಿ ಬೇಕು. ಎಲ್ಲಿ ಎಲ್ಲಾ ಶಕ್ತಿಯ ಅಗತ್ಯವಿದೆಯೋ ಅಲ್ಲಿ ಉಸಿರಾಟ ನಡೆಯಲೇಬೇಕು. ಆಗ ಇಂಗಾಲದ ಡೈಆಕ್ಸೈಡ್ ಉತ್ಪತ್ತಿಯಾಗಲೇಬೇಕು. ಸಸ್ಯಗಳು ಉಸಿರಾಟ ನಡೆಸುತ್ತವೆ. ಅದಕ್ಕೆ ಆಮ್ಲಜನಕವನ್ನು ಬಳಸಿಕೊಂಡು ಇಂಗಾಲದ ಡೈಆಕ್ಸೈಡ್ ಅನ್ನು ಬಿಡುಗಡೆ ಮಾಡುತ್ತವೆ. ಹಾಗಾದರೆ ಸಸ್ಯಗಳೂ ಅನಿಲ ವಿನಿಮಯ ಮಾಡಬೇಕು ಎಂದಾಯಿತು. ಹಾಗಾದರೆ ಸಸ್ಯಗಳಿಗೂ ಈ ಅನಿಲ ವಿನಿಮಯ ಅಂಗಗಳು ಯಾವುವು ಎಂಬ ಪ್ರಶ್ನೆ ಈಗ ನಿಮ್ಮದು. 

ಸಸ್ಯಗಳಲ್ಲಿ ಬಿರುಸಾಗಿ ರಾಸಾಯನಿಕ ಕ್ರಿಯೆ ನಡೆಯುವ ಭಾಗಗಳೆಂದರೆ ಎಲೆಗಳು. ಇನ್ನು ನೀರನ್ನು ಹೀರಿಕೊಳ್ಳುವ ಬೇರುಗಳಿಗೂ ಶಕ್ತಿ ಬೇಕು. ಆದರೆ ಕಾಂಡದ ಶಕ್ತಿಯ ಬೇಡಿಕೆ ತೀರಾ ಕಡಿಮೆ. ಏಕೆಂದರೆ ಅಲ್ಲಿ ತೊಗಟೆಯನ್ನು ಹೊರತು ಪಡಿಸಿ ಉಳಿದ ಮರ ಅಥವಾ ತಿರುಳಿನ ಬಹತೇಕ ಭಾಗ ಸತ್ತಿರುತ್ತದೆ. ಆದ್ದರಿಂದ ಹೆಚ್ಚಿನ ಉಸಿರಾಟ ನಡೆಯುವುದು ಎಲೆಯಲ್ಲಿ. ಎಲೆಯಲ್ಲಿ ಆಮ್ಲಜನಕ ತಯಾರಾಗುತ್ತದಲ್ಲ ಮತ್ತೇನು ಅನಿಲ‌ ವಿನಿಮಯ ಎಂದನ್ನಿಸುತ್ತದೆ. ಆದರೆ ಎರಡು ವ್ಯತಿರಿಕ್ತ ಪರಿಸ್ಥಿತಿಗಳಿರುತ್ತವೆ. ಸಸ್ಯಗಳು ಆಹಾರ ತಯಾರಿಸುವುದು ಹಗಲಿನಲ್ಲಿ ಆಗ ಇಂಗಾಲದ ಡೈಆಕ್ಸೈಡ್ ಬಳಸಿ ಆಮ್ಲಜನಕ ಬಿಡುಗಡೆ ಮಾಡುತ್ತದೆ. ಇದೇ ಆಮ್ಲಜನಕ ಬಳಸಿ ಇಂಗಾಲದ ಡೈಆಕ್ಸೈಡ್ ಬಿಡುಗಡೆ ಮಾಡುತ್ತದೆ ಎಂದು ತಿಳಿದರೂ ಕೂಡಾ ಉಸಿರಾಟದಿಂದ ಬಿಡುಗಡೆಯಾಗುವ ಇಂಗಾಲದ ಡೈಆಕ್ಸೈಡ್ ಕಡಿಮೆಯಾಗುತ್ತದೆ. ಆದ್ದರಿಂದ ಇಂಗಾಲದ ಡೈಆಕ್ಸೈಡ್ ಅನ್ನು ವಾತಾವರಣದಿಂದ ಹೀರಿಕೊಳ್ಳಬೇಕಾಗುತ್ತದೆ. ಆಹಾರ ತಯಾರಿಸುವಾಗ ಬಿಡುಗಡೆಯಾಗುವ ಆಮ್ಲಜನಕ ಪೂರ್ತಿಯಾಗಿ ಉಸಿರಾಟಕ್ಕೆ ಅಗತ್ಯ ಇಲ್ಲದೇ ಇರುವುದರಿಂದ ಈ ಆಮ್ಲಜನಕವನ್ನು ವಾತಾವರಣಕ್ಕೆ ಬಿಡುಗಡೆಯಾಗುತ್ತದೆ. ರಾತ್ರಿ ಕಾಲದಲ್ಲಿ ಆಹಾರ ತಯಾರಿಕೆ ಇಲ್ಲ. ಆಮ್ಲಜನಕ ಬಿಡುಗಡೆಯಾಗುವುದಿಲ್ಲ ಮತ್ತು ಇಂಗಾಲದ ಡೈಆಕ್ಸೈಡ್ ಬಳಸಲ್ಪಡುವುದಿಲ್ಲ. ಆದ್ದರಿಂದ ಸಸ್ಯಗಳು ರಾತ್ರಿಯ ಹೊತ್ತು ಆಮ್ಲಜನಕವನ್ನು ಒಳಗೆಳೆದುಕೊಳ್ಳಬೇಕು ಮತ್ತು ಇಂಗಾಲದ ಡೈಆಕ್ಸೈಡ್ ಹೊರ ಹಾಕುತ್ತಾ ಬೇಕಾಗುತ್ತದೆ. ಪ್ರಾಣಿಗಳಲ್ಲಿ ಉಸಿರಾಟ ಏಕ ಪ್ರಕಾರವಾದರೆ ಸಸ್ಯಗಳಲ್ಲಿ ಹಗಲು ಒಂದು ತೆರನಾದರೆ ರಾತ್ರಿ ಇನ್ನೊಂದು ರೀತಿ. 

ಸಸ್ಯಗಳ ಎಲೆಗಳಲ್ಲಿರುವ ಪತ್ರ ಸೂಕ್ಷ್ಮ ರಂಧ್ರಗಳು (stomata) ನಮ್ಮ ಮೂಗಿನ ಹಾಗೆ ಆಮ್ಲಜನಕ ಮತ್ತು ಇಂಗಾಲದ ಡೈಆಕ್ಸೈಡ್ ಹೊರಗೆ ಮತ್ತು ಒಳಗೆ ಹೋಗಲು ಇರುವ ದ್ವಾರಗಳು. ಇವುಗಳು ನೀರಾವಿಯನ್ನು ಹೊರ ಹಾಕುವ ಕೆಲಸವನ್ನೂ ಮಾಡುತ್ತವೆ. ಕಾಂಡ ಮತ್ತು ಬೇರುಗಳಲ್ಲಿ ಈ ಅನಿಲ ವಿನಿಮಯದ ರಂಧ್ರಗಳನ್ನು ಲೆಂಟಿಸೆಲ್ ಗಳು ಎನ್ನುತ್ತೇವೆ.

ಈ ವಾರ ಅನಿಲ ವಿನಿಮಯ ಮಾತ್ರ ತಿಳಿದೆವು. ಇನ್ನು ಬೇರೆ ವಸ್ತುಗಳ ವಿಸರ್ಜನೆ ಹೇಗೆ ಎಂಬುದನ್ನು ಮುಂದಿನ ವಾರ ನೋಡೋಣ.
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************** 


Ads on article

Advertise in articles 1

advertising articles 2

Advertise under the article