ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 49
Tuesday, October 8, 2024
Edit
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 49
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
ಪ್ರೀತಿಯ ಮಕ್ಕಳೇ.... ಕಳೆದ ಸಂಚಿಕೆಯಲ್ಲಿ ಹಾರ್ಮೋನುಗಳ ಪ್ರಮುಖ ಕಾರ್ಯಗಳನ್ನು ತಿಳಿದೆವು. ಈ ಹಾರ್ಮೋನುಗಳು ಬಹುಮುಖಿ ಕಾರ್ಯ ನಿರ್ವಹಿಸುತ್ತವೆ ಎಂಬುದನ್ನು ತಿಳಿದೆವು. ಈ ಹಾರ್ಮೋನುಗಳ ಬಗೆಗೆ ನಮಗೆ ಇರುವ ತಿಳುವಳಿಕೆಯನ್ನು ಈಗ ಕೃಷಿಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿದೆ. ಇದು ಕೃಷಿಕರಿಗೆ ಕೃಷಿಯನ್ನು ಲಾಭದ ಕಡೆಗೆ ತಿರುಗಿಸಿಕೊಳ್ಳುವ ದಾರಿಯನ್ನು ತೋರಿದೆ.
ಈಗ ಕೃಷಿ ಕಾರ್ಮಿಕರ ಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಿದೆ. ಕೃಷಿ ಕೂಲಿ ಗಗನಮುಖಿಯಾಗುತ್ತಿದೆ ಎಂಬುದು ಎಲ್ಲ ಕೃಷಿಕರ ಅಳಲು. ಆದ್ದರಿಂದ ಕೃಷಿಕರು ಯಾಂತ್ರೀಕರಣಕ್ಕೆ ಮನಸ್ಸು ಮಾಡಿದ್ದಾರೆ ಮಾತ್ರವಲ್ಲ ರಾಸಾಯನಿಕೀಕರಣದ ಕಡೆಗೂ ಹೊರಳಿದ್ದಾರೆ. ಕೃಷಿಕನ ಮೊದಲ ಶತ್ರು ಕಳೆ. ಬೆಳೆಗಳೊಂದಿಗೆ ಅವು ಆಹಾರ, ನೀರು, ಬೆಳಕು, ಸ್ಥಳ ಎಲ್ಲದಕ್ಕೂ ಸ್ಪರ್ಧಿಸುತ್ತಾ ಇಳುವರಿಯಲ್ಲಿ ಗಣನೀಯ ನಷ್ಟವನ್ನುಂಟುಮಾಡುತ್ತವೆ. ಇದನ್ನು ಕೈಯಿಂದ ಕಿತ್ತು ತೆಗೆಯೋಣ ಎಂದರೆ ಕೂಲಿಯಾಳುಗಳ ಸಮಸ್ಯೆ. ಯಂತ್ರದ ಸಹಾಯ ಪಡೆಯೋಣ ಎಂದರೆ ಗಿಡಕ್ಕೆ ಹಾನಿ ಮಾಡುತ್ತವೆ. ಆದ್ದರಿಂದ ಕೃಷಿಕ ಈಗ ರಾಸಾಯನಿಕಗಳ ಮೊರೆ ಹೋಗಿದ್ದಾನೆ. ಈ ರಾಸಾಯನಿಕಗಳು ಭಯಂಕರ ವಿಷಗಳು. ಪರಿಸರವನ್ನು ನಾಶಮಾಡುತ್ತವೆ. ಮಾನವನಿಗೆ ಹಾನಿಕಾರಕವಾಗಿವೆ ಎಂದು ಹುಯಿಲೆಬ್ಬಿಸಲಾಗುತ್ತಿದೆ. ನಿರ್ಧರಿತ ಡೋಸೇಜ್ ಪ್ರಕಾರ ಬಳಸಿದರೆ ಅವು ಅಪಾಯಕಾರಿಗಳಲ್ಲ. ಏಕೆ ಎಂದು ಕೇಳುತ್ತೀರಾ? ಈ ಕಳೆ ನಾಶಕಗಳು ಕೀಟ ನಾಶಕಗಳಂತಲ್ಲ. ಇವು ಒಂದೋ ಸಸ್ಯ ಹಾರ್ಮೋನುಗಳು ಅಥವಾ ಅಂತಹುದೇ ರಾಸಾಯನಿಕಗಳು. ರೈತ ಸಾಮಾನ್ಯವಾಗಿ ಬಳಸುವ ಒಂದು ಕಳೆನಾಶಕವಿದೆ. ಅದು 2,4-Dichlorophenoxyacetic acid (2,4-D). ಇದೊಂದು ಆಕ್ಸಿನ್. ಇದು ಅಗಲೆಲೆಯ ಗಿಡಗಳು ವಿಪರೀತವಾಗಿ ಬೆಳೆಯುವಂತೆ ಮಾಡಿ ಕೊಲ್ಲುತ್ತವೆ. ಭತ್ತದ ಗದ್ದೆಗಳಲ್ಲಿ ನಾಟಿ ಮಾಡಿದ 48 ಗಂಟೆಗಳಲ್ಲಿ ಇದನ್ನು ಬಳಸುತ್ತೀರಿ. ಬೀಜಗಳು ಮೊಳಕೆಯೊಡೆಯುವಾಗ ಬೀಜ ಮತ್ತು ಬೇರಿನ ನಡುವೆ ಒಂದು U ಆಕಾರದ ಹೈಪೋಕೊಟೈಲ್ ಇದೆ. ನಿಮ್ಮ 2,4-D ಅದನ್ನು ಒಣಗಿಸಿಬಿಡುತ್ತದೆ (desiccates). ಹೀಗಾಗಿ ಕಳೆ ಸತ್ತು ಹೋಗುತ್ತದೆ. ಸಸ್ಯಗಳಲ್ಲಿ ಅನೇಕ ರೀತಿಯ ರಾಸಾಯನಿಕ ಕ್ರಿಯೆಗಳು ನಡೆಯುತ್ತವೆ. ಈ ಕ್ರಿಯೆಗಳ ಸಾಗು ಹಾದಿಯನ್ನು systemic pathway ಎಂದು ಕರೆಯುತ್ತೇವೆ. ಈ ಹಾರ್ಮೋನುಗಳು ಈ ಕ್ರಿಯೆಗಳ ಸಾಗು ಹಾದಿಯನ್ನು ಹಾದಿ ತಪ್ಪಿಸುವ ಮೂಲಕ ಸಸ್ಯ ಸಾಯುವಂತೆ ಮಾಡುತ್ತವೆ. ಇವು ಮನುಷ್ಯನಿಗಾಗಲೀ ಇತರ ಪ್ರಾಣಿಗಳಿಗಾಗಿಯಾಗಲೀ ಸಾಮಾನ್ಯವಾಗಿ ಹಾನಿಕಾರಿಗಳಲ್ಲ. ಮತ್ತು ಇವುಗಳು ಸುದೀರ್ಘ ಅವಧಿಯ ವರೆಗೆ ಉಳಿದುಕೊಳ್ಳುವುದಿಲ್ಲ. ಅವುಗಳು ತಾವಾಗಿ ಕಡಿಮೆಯಾಗುತ್ತಾ ಹೋಗುತ್ತವೆ. ಒಂದು ವಸ್ತುವು ಒಂದಷ್ಟು ಸಮಯದ ನಂತರ ಅದರ ಅರ್ಧದಷ್ಟು ಪ್ರಮಾಣಕ್ಕೆ ಇಳಿಯುತ್ತದೆ. ಈ ಅವಧಿಯೇ ಅದರ ಅರ್ಧಾಯಷ್ಯ (half life period). ಈ ಎಲ್ಲಾ ಕೃತಕ ಹಾರ್ಮೋನುಗಳಿಗೆ ಅವುಗಳದ್ದೇ ಆದ ಅರ್ಧಾಯುಷ್ಯ ಇದೆ. ನಿಮಗೆ ಒಂದು ವಿಷಯ ತಿಳಿದಿಲ್ಲ. ಈ ರಫ್ತು ಗುಣಮಟ್ಟದ ದಾಳಿಂಬೆಗಳಿವೆಯಲ್ಲ ಅವುಗಳನ್ನು ಕೀಟನಾಶಕಗಳನ್ನು ಬಳಸದೇ ಬೆಳೆಯುವುದು ಸಾಧ್ಯವಿಲ್ಲ. ಆದರೆ ಈ ಕೀಟನಾಶಕಗಳ ಅರ್ಧಾಯಷ್ಯ ಮೂರ್ನಾಲ್ಕು ದಿನಗಳು. ಅಂದರೆ ಕೊಯ್ಯುವ ಮೊದಲೇ ಅವುಗಳ ಪ್ರಮಾಣ ಇಳಿದು ಹೋಗಿರುತ್ತದೆ. ಅಂದರೆ ಆ ಕೀಟನಾಶಕ ಸಿಂಪಡಿಸಿರುವುದನ್ನು ಯಾವ ಪರೀಕ್ಷೆಗಳ ಮೂಲಕವೂ ಕಂಡು ಹಿಡಿಯಲಾಗುವುದಿಲ್ಲ. ಹಾಗೆಯೇ ಈ ಕಳೆನಾಶಕಗಳು ಕೂಡಾ ಹಾಗೆಯೇ ಕಣ್ಮರೆಯಾಗಿಬಿಡುತ್ತವೆ.
ನೀವು ದೊಡ್ಡ ಪ್ರಮಾಣದಲ್ಲಿ ಅನಾನಸು ಬೆಳೆಯುತ್ತೀರೆಂದು ಇಟ್ಟುಕೊಳ್ಳೋಣ. ಆ ಅನಾನಸು ಬೆಳೆ ಬಂದರೆ ಮಾತ್ರ ಸಾಲದು ಬದಲಾಗಿ ಎಲ್ಲ ಗಿಡಗಳೂ ಒಟ್ಟಿಗೇ ಹೂ ಬಿಟ್ಟು ಒಮ್ಮೆಲೆ ಹಣ್ಣಾದರೆ ಮಾತ್ರ ಒಮ್ಮೆಲೇ ಮಾರುಕಟ್ಟೆಗೆ ಸಾಗಿಸುವ ಮೂಲಕ ಲಾಭ ಮಾಡಬಹುದು. ಅನಾನಸಿನಲ್ಲಿ ಹೂ ಬಿಡುವಂತೆ ಮಾಡುವ ಹಾರ್ಮೋನು ಇಥಿಲೀನ್. ಇದು ಅನಿಲ ರೂಪದ ಹಾರ್ಮೋನು ಎಂದು ಮೊನ್ನೆ ಓದಿದ್ದೀರಲ್ಲ. ಎಲ್ಲ ಗಿಡಗಳಿಗೂ ಕ್ಯಾಲ್ಸಿಯಂ ಕಾರ್ಬೈಡ್ ಅನ್ನು ನೀರಿನಲ್ಲಿ ಬೆರೆಸಿ ಅದನ್ನು ಸಸ್ಯದ ತುದಿ ಮೊಗ್ಗಿನ ಮೇಲೆ ಹಾಕಲಾಗುತ್ತದೆ. ಆಗ ಇಡೀ ತೋಟದಲ್ಲಿ ಹೂ ಅರಳಿ ಹೀಚು ಗಟ್ಟುತ್ತವೆ.
ಮಾವಿನ ಕಾಯಿಗಳನ್ನು, ಬಾಳೆಯಗೊನೆಗಳನ್ನು ಕೊಯ್ಯುತ್ತೀರಿ. ಒಂದೊಂದೆ ಹಣ್ಣಾಗುತ್ತಿದ್ದರೆ ಮಾರುಕಟ್ಟೆಗೆ ಸಾಗಿಸುವುದಾದರೂ ಹೇಗೆ. ಆಗಲೂ ರೈತ/ಮಾರಾಟಗಾರ ಎಥಿಲೀನ್ ಅನ್ನು ಬಳಸುತ್ತಾನೆ. ಮತ್ತೆ ಅದೇ ಕಪ್ಪು ಹುಡಿ. ನೀರು ಹಾಕಿದರೆ ಹಣ್ಣಾಗುವ ಅನಿಲ ಬಿಡುಗಡೆ ಮಾಡುತ್ತದೆ. ಈ ಕ್ಯಾಲ್ಸಿಯಂ ಕಾರ್ಬೈಡ್ ನೀರಿನೊಂದಿಗೆ ವರ್ತಿಸಿ ಸುಣ್ಣ (calcium hydroxide) ಉತ್ಪತ್ತಿಯಾಗುತ್ತದೆ. ಅದನ್ನು ಒಂದು ಗಿಡದ ಮೇಲೆ ಹಾಕಿದರೆ ಆ ಗಿಡ ಸಾಯದೇ ಇರುತ್ತದೆಯೇ? ಇದನ್ನು ಹೇಳಿ ಆ ಪುಡಿಯಿಂದ ಸಸ್ಯಗಳೂ ಸಾಯುತ್ತವೆ ಎಂದು ನಿಮ್ಮನ್ನು ಹೆದರಿಸಲಾಗುತ್ತದೆ.
ತಾಯಿ ಗಿಡದ ಗುಣದ ಸಸಿಗಳನ್ನು ಪಡೆಯಲು ಅಂಗಾಂಶ ಕೃಷಿ (tissue culture) ಮಾಡುವುದನ್ನು ಕೇಳಿದ್ದೀರಿ. ಈ ವಿಧಾನದ ಸಸಿಗಳನ್ನು ತಂದು ನೆಟ್ಟು ನಿಮ್ಮ ತಂದೆ ಬಾಳೆಯ ತೋಟ ಮಾಡಿದ್ದನ್ನೂ ನೋಡಿದ್ದೀರಿ. ಈ ವಿಧಾನದಲ್ಲಿ ಬಾಳೆಯ ಗಿಡದ ಒಂದು ಚೂರನ್ನು ತೆಗೆದುಕೊಂಡು ಪೋಷಕ ದ್ರವಗಳಲ್ಲಿ ಬೆಳೆಸಲಾಗುತ್ತದೆ. ಆಗ ಜೀವಕೋಶ ವಿಭಜನೆ ಹೊಂದಿ ಕೋಶಗಳ ಒಂದು ಮುದ್ದೆ ಸಿಗುತ್ತದೆ. ಇದನ್ನು ಮಾಡುವುದೂ ಸೈಟೊಕೈನಿನ್ ಎಂಬ ಹಾರ್ಮೋನು. ಈ ಕೋಶಗಳ ಮುದ್ದೆಯೇ ಕ್ಯಾಲಸ್ (callus). ಈ ಕ್ಯಾಲಸ್ ಗೆ ಗರಿಷ್ಠ ಅನುಪಾತದ ಆಕ್ಸಿನ್ ಮತ್ತು ಸೈಟೊಕೈನಿನ್ ಹಾಕಿದರೆ ಬೇರು ಕಾಣಿಸಿಕೊಳ್ಳುತ್ತದೆ. ಅದೇ ಕ್ಯಾಲಸ್ ಗೆ ಕಡಿಮೆ ಪ್ರಮಾಣದ ಆಕ್ಸಿನ್ ಮತ್ತು ಸೈಟೊಕೈನಿನ್ ಗಳ ಮಿಶ್ರಣವನ್ನು ಹಾಕಿದರೆ ತುದಿ ಮೊಗ್ಗು ಕಾಣಿಸಿಕೊಳ್ಳುತ್ತದೆ. ಹೀಗೆ ಯಾವ ಸಮಯ, ಯಾವ ಪ್ರಮಾಣ ಎಂದು ನಿರ್ಧರಿಸುವ ಮೂಲಕ ಹೊಸ ಸಸಿಗಳನ್ನು ಪಡೆಯುತ್ತಾರೆ.
ಒಂದು ವಸ್ತುವಿನ ಬಗ್ಗೆ ಇರುವ ತಿಳುವಳಿಕೆ ಜ್ಞಾನವಾದರೆ ಅದನ್ನು ಬಳಸಿ ಉತ್ಪಾದಿಸಿದರೆ ಅದು ತಂತ್ರಜ್ಞಾನವಾಗುತ್ತದೆ. ಈ ಹಾರ್ಮೋನುಗಳನ್ನು ಬಳಸಿ ಕೃಷ್ಯುತ್ಪಾದನೆ ಹೆಚ್ಚಿಸುವುದು ಕೃಷಿ ತಂತ್ರಜ್ಞಾನದ ಒಂದು ಭಾಗ.
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
********************************************