ಪಯಣ : ಸಂಚಿಕೆ - 15 (ಬನ್ನಿ ಪ್ರವಾಸ ಹೋಗೋಣ)
Thursday, October 31, 2024
Edit
ಪಯಣ : ಸಂಚಿಕೆ - 15 (ಬನ್ನಿ ಪ್ರವಾಸ ಹೋಗೋಣ)
ಓ ಕವಿಶೈಲ...
ಮಲೆನಾಡಿನ ಪರ್ವತಗಳಲ್ಲಿ ಅಂತಹ ಸ್ಥಾನಗಳು ಅಪೂರ್ವ. ಎಲ್ಲಿ ನೋಡಿದರೂ ಮಹಾರಣ್ಯಗಳೆ ತುಂಬಿರುವುದರಿಂದ ಶಿಖರಗಳಲ್ಲಿ ಬಂಡೆಗಳಿದ್ದು ಬಯಲಾಗಿರುವುದೇ ಕಷ್ಟ ! ಅದರಲ್ಲಿಯೂ ನಮ್ಮ ಮನೆಯಲ್ಲಿರುವಂತೆ ಐದು ಹತ್ತು ನಿಮಿಷಗಳಲ್ಲಿಯೆ ಶಿಖರವನ್ನು ಸೇರುವಷ್ಟು ಸಮೀಪದಲ್ಲಿ ಅಂತಹ ಶೈಲಸ್ಥಾನಗಳು ಮತ್ತೆಲ್ಲಿಯೂ ಇಲ್ಲವೆಂದೇ ಹೇಳಬೇಕು. ನಾನಂತೂ ನೋಡಿಲ್ಲ. ಆ ಸ್ಥಳಕ್ಕೆ ‘ಕವಿಶೈಲ’ ಎಂದು ನಾಮಕರಣವಾದುದು ಇತ್ತೀಚಿನ ಸಂಗತಿ !’
ಲೇಖನ : ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದು ಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ
ಎಲ್ಲರಿಗೂ ನಮಸ್ಕಾರ ....
ಸರ್ವರಿಗೂ ದೀಪಾವಳಿ ಹಬ್ಬದೊಂದಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯ ಕೋರುತ್ತಾ, ಇಂದಿನ ಪಯಣದಲ್ಲಿ ಕನ್ನಡದ ಶ್ರೇಷ್ಠ ಕವಿಯಾದ ರಸಋಷಿ ಕುವೆಂಪು ಇವರ ಕವಿಶೈಲದ ಪರಿಚಯ ಮಾಡಿಕೊಳೋಣವೇ...
ನಿನ್ನ ಸಂಪದವನೆನಿತು ಬಣ್ಣಿಸಲಳವು ಕವನದಲಿ
ಬೆಳಗಿನಲಿ ಬೈಗಿನಲಿ ಮಾಗಿಯಲಿ ಚೈತ್ರದಲಿ
ಮಳೆಯಲ್ಲಿ ಮಂಜಿನಲಿ ಹಗಲಿನಲಿ ರಾತ್ರಿಯಲಿ
ದೃಶ್ಯ ವೈವಿಧ್ಯಮಂ ರಚಿನೆ ನೀಂ ಭುವನದಲಿ
ಸ್ವರ್ಗವಾಗಿ ನನಗೆ !
ಎಂದು ಕುವೆಂಪು ‘ಕವಿಶೈಲ’ ವನ್ನು ಸ್ತುತಿಸುತ್ತ 6 ಸಾನೆಟ್‍ಗಳನ್ನು ರಚಿಸಿದ್ದಾರೆ.
ಆ ಪ್ರದೇಶವು ಅವರು ‘ಕವಿಶೈಲ’ ಎಂದು ಕರೆಯುವ ಮೊದಲು ಅಲ್ಲಿಯ ಅತಿ ಸಹಜ ಪ್ರಾಕೃತಿಕ ಉತ್ಸವದಂತಹ ಉಲ್ಲಾಸಕ್ಕೆ ಅವರ ಪೂರ್ವಿಕರು ‘ದಿಬ್ಬಣಗಲ್ಲು’ ಎಂದು ಕರೆಯುತ್ತಿದ್ದರಂತೆ. ಓಹ್ ಎಷ್ಟು ಅರ್ಥಪೂರ್ಣ ದೇಸಿ ಬೆಡಗು!
ಕುವೆಂಪು ಅವರು ‘ಮಲೆನಾಡಿನ ಚಿತ್ರಗಳು’ ಗದ್ಯ ಚಿತ್ರಗಳ ಸಂಕಲನದ ಮುನ್ನುಡಿಯಲ್ಲಿ ಆ ಸ್ಥಳವನ್ನು ಕುರಿತು ಹೀಗೆ ವಿವರಣೆ ನೀಡಿದ್ದಾರೆ. "ಮನೆಯ ತೆಂಕಣ ದಿಕ್ಕಿಗೆ ಮನೆಗೆ ಮುಟ್ಟಿಕೊಂಡೇ ಏರಿ ಏರಿ ಹೋಗುವ ಬೆಟ್ಟದೋರೆಯಿದೆ. ಐದು ಹತ್ತು ನಿಮಿಷಗಳಲ್ಲಿಯೆ ಅದರ ನೆತ್ತಿಗೆ ಹೋಗಬಹುದು. ನೆತ್ತಿಯಲ್ಲಿ ವಿಶಾಲವಾದ ಬಂಡೆಗಳಿದ್ದು ಸುತ್ತಲೂ ಸ್ವಲ್ಪ ಬಯಲಾಗಿ ದೂರದ ದೃಶ್ಯಗಳನ್ನು ನೋಡಲು ಅನುಕೂಲವಾಗಿದೆ."