ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 58
Saturday, September 21, 2024
Edit
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 58
ಲೇಖಕರು : ವ.ಉಮೇಶ ಕಾರಂತ
ಗೌರವ ಕನ್ನಡ ಉಪನ್ಯಾಸಕರು
ಸೈಂಟ್ ಅನ್ಸ್ ಡಿ. ಎಡ್ ವಿದ್ಯಾಲಯ.
ಮಂಗಳೂರು - 1
ಸಂಚಾರಿ - 9481963306
ಉತ್ತಮ ಬದುಕಿಗೆ ಉತ್ತಮ ಕಲಿಕೆ ಅಗತ್ಯ. ಕಲಿಕೆ ನಿತ್ಯ ನಿರಂತರವಾದಾಗಲೇ, ಉತ್ತಮ ಮನುಷ್ಯನಾಗಬಹುದು. ಅವನಲ್ಲಿ 'ಉತ್ತಮಿಕೆ' ಒಳ - ಹೊರಗೂ ಸಂತೃಪ್ತ ಭಾವ ತುಂಬಿ, ಒಡ ಮೂಡಿದಾಗಲೇ ಆತ ಒಬ್ಬ ಸಮುದಾಯಕ್ಕೆ ಎಲ್ಲೆಂದರಲ್ಲಿ ಗುರುತಿಸಲ್ಪಡುವವನಾಗುತ್ತಾನೆ. ಅಬಾಲ ವೃದ್ಧರಾದಿಯಾಗಿ, ಸರ್ವರೂ ಅವನನ್ನು/ ಅವಳನ್ನು ನೆಚ್ಚಿಕೊಳ್ಳುತ್ತಾರೆ - ಮೆಚ್ಚಿಕೊಳ್ಳುತ್ತಾರೆ. ಆಗಲೇ ಅವನೊಬ್ಬ ಸಜ್ಜನನೆಂದೆನಿಸಿಕೊಳ್ಳುವವನು. ಇವನು ನಮ್ಮ ನಡುವೆ ಅಗ್ರಗಣ್ಯನೆನಿಸಿಕೊಳ್ಳುತ್ತಾನೆ. ಇದು ಇಂದು ತುರ್ತು ಅಗತ್ಯ. ಅದರಲ್ಲೂ ಸಮುದಾಯದ ಎಲ್ಲ ವೃತ್ತಿಗಳಿಗೂ ಮೂಲಭೂತವಾಗಿ 'ಒಂದಕ್ಷರವನ್ನು' ಕಲಿಸಿದವನು 'ಗುರು' ಎಂಬ ನೆಲೆಯಲ್ಲಿ ಅವನು ಆ ಪದವಿಯನ್ನು ಜೀವನದುದ್ದಕ್ಕೂ ಪಡೆಯುವಲ್ಲಿ ಅವನಿಗೆ ನಿರ್ದಿಷ್ಟ ತರಬೇತಿ ಅಗತ್ಯ. ಅದೇ ಪ್ರಾಥಮಿಕ ಶಾಲಾ ಶಿಕ್ಷಣ ತರಬೇತಿ. ಇದು ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣಗೈಯುವಲ್ಲಿ ಅವನ 2 ವರ್ಷದ ಶ್ರಮವನ್ನು ಬಯಸುತ್ತದೆ - ಎಂದರೆ ತಪ್ಪಾಗದು.
ತರಬೇತಿ ವೇಳೆಯ ಪ್ರತಿಯೊಂದು ಕ್ಷಣ ಕ್ಷಣವೂ ನಾಳೆಯ ಶಿಕ್ಷಕರಾಗಲಿರುವವರಿಗೆ - ಅವರು ಅವರ ಮಕ್ಕಳನ್ನು ವಿದ್ಯಾರ್ಥಿಗಳಾಗುವ ದಿಸೆಯಲ್ಲಿ ಇನ್ನೂ ಮುಂದಕ್ಕೆ ನೋಟ ಹರಿಸಿದರೆ ಅವರು ಶಿಕ್ಷಕರು ಕಲಿಸಿದ ಶಿಕ್ಷಣದೊಂದಿಗೆ ವಿವಿಧ ಕ್ಷೇತ್ರಗಳ ಜ್ಞಾನ ಗಳಿಸಿ, ಮೌಲ್ಯ ಗರ್ಭಿತವಾಗಿ ನಡೆ - ನುಡಿಯೊಂದಿಗೆ ತಮ್ಮ ಕಾಲ ಮೇಲೆ ತಾವು ನಿಂತು, ತಾವು ಪಡೆದ ಜ್ಞಾನ ಭಂಡಾರವನ್ನು 'ಕೆರೆಯ ನೀರನ್ನು ಕೆರೆಗೆ ಚೆಲ್ಲುವಂತೆ' ಸಮುದಾಯದಲ್ಲಿ ತಮ್ಮ ಕಾಲ ಮೇಲೆ ತಾವು ಆರ್ಥಿಕವಾಗಿ ನಿಂತು ಬದುಕು ಕಟ್ಟಿ ಕೊಳ್ಳುವಲ್ಲಿ ಅವರ ಅನುಭವಾತ್ಮಿಕವಾದ 'ಕಲಿಕೆ' ತರಬೇತಿ ಅವಧಿಯಲ್ಲಿ ನುರಿತ ಉಪನ್ಯಾಸಕರಿಂದ ದೊರೆಯುವಲ್ಲಿ ತನ್ನ ಗುರುಗಳ ಅಧೀನದಲ್ಲಿ ತಾನು ನಿಧಾನವಾಗಿ ಗುರು ಪರಂಪರೆಗೊಳಗಾಗುತ್ತಾ , 'ಒಬ್ಬ ಉತ್ತಮ ವಿಧ್ಯಾರ್ಥಿ ಒಬ್ಬ ಉತ್ತಮ ಶಿಕ್ಷಕ' ನೆಂಬ ನೆಲೆಯಲ್ಲಿ - ಪ್ರತ್ಯಕ್ಷವಾಗಿ ಭವಿಷ್ಯಕ್ಕೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ತನ್ನದಾಗಿಸಿಕೊಂಡ ಓರ್ವ ನೇತಾರನಾಗುತ್ತಾನೆ. ಇದು ಒಂದು ಸರಪಣಿ ವ್ಯವಸ್ಥೆ.
ಇದಕ್ಕೆ ತರಬೇತಿ ಅವಧಿಯಲ್ಲಿ ವಿದ್ಯಾಲಯದಲ್ಲಿ ನೀಡಿದ ಒಂದು ಉದಾಹರಣೆ - ಗೌರವ ಸೂಚಕ ಶಬ್ದ ನಮಸ್ಕಾರ. ಅದರೊಂದಿಗೆ ಕೈ ಜೋಡಿಸಿ ಬಾಗಿ ವಂದಿಸುವ ಕ್ರಮ. 20- 25 ವರ್ಷಗಳ ಹಿಂದೆ ವಿದ್ಯಾರ್ಥಿನಿಯರು ಒಂದು ಕೊಠಡಿಯಿಂದ (ಹಿಂದಿನ ಅವಧಿಯ) ಇನ್ನೊಂದಕ್ಕೆ, ನನ್ನ ಬೋಧನಾ ಅವಧಿಗೆ ಹೋಗಬೇಕಿತ್ತು. ಮೊದ ಮೊದಲ ದಿನಗಳಲ್ಲಿ ಈ ನಮಸ್ಕಾರ ಶಬ್ದ ಅವರಲ್ಲಿಲ್ಲ. ಬಳಿಕ ಒಂದು ದಿನ ನಾನು ಅವರನ್ನು ಎದುರುಗೊಂಡ ಕ್ಷಣದಲ್ಲಿ ಅವರಲ್ಲಿ ಮೊದಲಿನವರಿಗೆ ವಂದಿಸಿದೆ. ಹಾಗೆ ವಂದನೆಯ ಪ್ರತಿಕ್ರಿಯೆಗೆ ಒತ್ತಡ ತಂದೆ. ಹಾಗೆ ಉಳಿದವರಿಗೂ - ಕೊನೆಗೂ ನನ್ನ ತರಗತಿಗೆ.... ಅಡಿ ಇಡುವಲ್ಲಿ ಎಲ್ಲರಿಂದಲೂ ' ನಮಸ್ಕಾರ' ಸ್ವೀಕರಿಸಿದೆ. ಬಳಿಕವೂ ತರಗತಿಗೆ ಬಂದು ವಂದನೆಯ ಮಹತ್ವ - ತಮಗೂ, ನನಗೂ ಸಲ್ಲುತ್ತದೆ, ಮಾತ್ರವಲ್ಲ ಭಾವಿ ಶಿಕ್ಷಕಿಯಾಗಲಿರುವ ಅವರಿಗೂ ಇದು ತುರ್ತು ಅಗತ್ಯವೆಂದು - ಮಕ್ಕಳಿಂದಲೂ - ಸಮುದಾಯದಿಂದಲೂ ಶಿಕ್ಷಕರು ಪ್ರಾಮಾಣಿಕವಾಗಿ ಬಯಸುವ ಒಂದೇ ಒಂದು ಶಬ್ದದ ಬಗ್ಗೆ ಮನವರಿಕೆ ಮಾಡಿದೆ. ಈಗಲೂ ಆ ವಿದ್ಯಾರ್ಥಿಗಳಿರಲಿ - ವಿದ್ಯಾಲಯದಲ್ಲಿ ಕಲಿತ ಯಾವುದೇ ವಿದ್ಯಾರ್ಥಿಯಿರಲಿ ನನಗೆ ರಸ್ತೆಯಲ್ಲಿ, ವಿದ್ಯಾಲಯದ ಹೊರ ಒಳಗಿನ ಪರಿಸರದಲ್ಲಿ, ಯಾವುದೇ ಊರು - ಕೇರಿಯಲ್ಲಿ ಸಿಕ್ಕಾಗಲೂ ತರಬೇತಿ ಸಂದರ್ಭವನ್ನು ನೆನಪಿಸಿಕೊಂಡು (ಈಗ ಅವರೆಲ್ಲ ಅನುಭವಿ ಶಿಕ್ಷಕಿಯರಾಗಿದ್ದಾರೆ) ವಂದಿಸುತ್ತಾರೆ. ಈ 'ನಮಸ್ಕಾರ' ಶಿಕ್ಷಕ ವರ್ಗಕ್ಕೆ ಒಂದು ಆಸ್ತಿ ಇದ್ದಂತೆ ಅಲ್ಲವೇ?. ಅದಕ್ಕಾಗಿ ಈ 'ನಮಸ್ಕಾರ' ಕ್ಕಿರುವ ಅದ್ಬುತ ಶಕ್ತಿಯನ್ನು ವರ್ಣಿಸಲು - ವಿವರಿಸಲು ಸಾಧ್ಯವೇ?.
ಗೌರವ ಕನ್ನಡ ಉಪನ್ಯಾಸಕರು
ಸೈಂಟ್ ಅನ್ಸ್ ಡಿ. ಎಡ್ ವಿದ್ಯಾಲಯ.
ಮಂಗಳೂರು - 1
ಸಂಚಾರಿ - 9481963306
*******************************************