ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 44
Tuesday, September 3, 2024
Edit
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 44
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
ಪ್ರೀತಿಯ ಮಕ್ಕಳೇ.... ನಾವು ನಿತ್ಯ ಜೀವನದಲ್ಲಿ ಒಂದಷ್ಟು ವಸ್ತುಗಳನ್ನು ಬಳಸಲೇ ಬೇಕಾಗುತ್ತದೆ. ಆದರೆ ಬಳಸುವ ವಸ್ತುಗಳ ಪೂರ್ಣ ಬಳಕೆ ಆಗುವುದಿಲ್ಲ. ತರಕಾರಿಯಾದರೆ ಅದರ ಸಿಪ್ಪೆ, ಬಾಧಿತವಾದ ಎಲೆಗಳು, ಮೀನಾದರೆ ರೆಕ್ಕೆ, ಹುರುಪೆ ಕರುಳು, ಒಂದು ಪ್ಯಾಕೆಟ್ ಬಿಸ್ಕಿಟ್ ತಂದರೆ ಅದರ ಹೊರ ಕವಚ ಹೀಗೆ. ಆದರೆ ಬಳಕೆಯ ನಂತರ ತ್ಯಾಜ್ಯ ಅನಿವಾರ್ಯ. ಹಾಗಾದರೆ ಜೀವಿಗಳ ಜೀವಕೋಶಗಳ ಒಳಗೆ ನಡೆಯುವ ಚಯಾಪಚಯ ಕ್ರಿಯೆಗಳನ್ನು ತೆಗೆದುಕೊಳ್ಳೋಣ. ಮುಖ್ಯವಾಗಿ ನಡೆಯುವ ಕ್ರಿಯೆಗಳೆಂದರೆ ಉಸಿರಾಟ ಮತ್ತು ಪ್ರೋಟೀನ್ ತಯಾರಿಕೆ. ಜೀವಕೋಶದಲ್ಲಿ ನಡೆಯುವ ಎಲ್ಲಾ ಚಟುವಟಿಗಳಿಗೆ ಶಕ್ತಿ ಬೇಕು. ನಾವು ಸೌದೆ ಅಥವಾ ಅನಿಲವನ್ನು ಉರಿಸಿ ಶಕ್ತಿಯನ್ನು ಪಡೆದರೆ ಜೀವಕೋಶಗಳು ಗ್ಲುಕೋಸ್ ಅನ್ನು ಉರಿಸಿ ಶಕ್ತಿಯನ್ನು ಪಡೆಯುತ್ತವೆ. ಈ ಕ್ರಿಯೆಯಲ್ಲಿ ಬಿಡುಗಡೆಯಾಗುವ ಇಂಗಾಲದ ಡೈಆಕ್ಸೈಡ್ ದೇಹಕ್ಕೆ ಕೋಶಕ್ಕೆ ಅಗತ್ಯವಿಲ್ಲ. ಆದ್ದರಿಂದ ಅದು ಒಂದು ತ್ಯಾಜ್ಯ. ಇದನ್ನು ಹೊರಹಾಕಬೇಕು. ಅದು ಹೇಗೆ ಎನ್ನುವುದನ್ನು ಉಸಿರಾಟ ಮತ್ತು ರಕ್ತ ಪರಿಚಲನೆಯನ್ನು ಅಭ್ಯಸಿಸುವಾಗ ತಿಳಿದುಕೊಂಡಿದ್ದೇವೆ. ಏಕ ಕೋಶಿಕ ಜೀವಿಗಳು ಸರಳವಾದ ವಿಸರಣದ (diffusion) ಮೂಲಕ ಮಾಡಿದರೆ ಬಹುಕೋಶೀಯ ಜೀವಿಗಳು ಚರ್ಮ, ಕಿವಿರು ಅಥವಾ ಶ್ವಾಸಕೋಶಗಳ ಮೂಲಕ ಇಂಗಾಲದ ಡೈಆಕ್ಸೈಡ್ ಅನ್ನು ದೇಹದಿಂದ ಹೊರ ಹಾಕುತ್ತವೆ.
ಜೀವಿಗಳ ಜೀವ ಚಟುವಟಿಕೆಗೆ (ಜೈವಿಕ ಕ್ರಿಯೆಗಳಿಗೆ) ಮತ್ತು ಬೆಳವಣಿಗೆಗೆ ಅತ್ಯಂತ ಅಗತ್ಯವಾದ ವಸ್ತು ಪ್ರೋಟೀನ್‌ಗಳು. ಎಲ್ಲ ಜೈವಿಕ ಕ್ರಿಯೆಗಳನ್ನುಂಟುಮಾಡುವ ಕಿಣ್ವಗಳು (enzymes) ಪ್ರೋಟೀನ್‌ಗಳೇ. ಇವುಗಳ ಚಯಾಪಚಯ ಕ್ರಿಯೆ (metabolism) ಜೀವಿಗಳಲ್ಲಿ ಒಂದು ಪ್ರಮುಖ ಕ್ರಿಯೆ. ಪ್ರೋಟೀನ್‌ಗಳು ಜೀರ್ಣವಾಗುವ ಮೊದಲು ಪಾಲಿಪೆಪ್ಟೈಡ್ಗಳಾಗಿ, ಟ್ರೈ ಪೆಪ್ಟೈಡ್ ಗಳಾಗಿ, ಡೈ ಪೆಪ್ಟೈಡ್ ಗಳಾಗಿ ಕೊನೆಗೆ ಅಮೈನೋ ಆಮ್ಲಗಳಾಗಿ ಒಡೆಯಲ್ಪಡುತ್ತವೆ. ಈ ಅಮೈನೋ ಆಮ್ಲಗಳು ಪುನಃ ಪ್ರೋಟೀನ್‌ಗಳಾಗುತ್ತವೆ. ಈ ಒಡೆಯಲಾಗದ ಕೆಲವೊಂದು ಅಮೈನೋ ಆಮ್ಲಗಳು ಅಮೋನಿಯವಾಗಿ ಪರಿವರ್ತನೆಯಾಗುತ್ತವೆ. ಈ ಅಮೋನಿಯಾ ವಿಷಕಾರಿ ವಸ್ತು. ಅದನ್ನು ತಕ್ಷಣದಿಂದ ಕೋಶಗಳಿಂದ ಹೊರ ಹಾಕಬೇಕು. ಇದಕ್ಕೆ ಮೂರು ಮಾರ್ಗಗಳಿವೆ. ಒಂದು ನೇರವಾಗಿ ಅಮೋನಿಯದ ರೂಪದಲ್ಲಿಯೇ ದೇಹದಿಂದ ಹೊರ ಹಾಕುವುದು. ಇದಕ್ಕೆ ಅಪಾರ ಪ್ರಮಾಣದ ನೀರು ಬೇಕು. ಇದನ್ನು ನೀರಿನಲ್ಲಿ ಕರಗಿಸಿದಾಗ ಉಂಟಾಗುವ ಅಮೋನಿಯಂ ಹೈಡ್ರಾಕ್ಸೈಡ್ ಕೂಡಾ ವಿಷವಸ್ತುವೇ. ಆದ್ದರಿಂದ ಇದನ್ನು ದೇಹದೊಳಗೆ ನೀರಿನಲ್ಲಿ ಕರಗಿಸಿ ಕೂಡಾ ಸಾಗಿಸುವಂತಿಲ್ಲ. ಅಂದರೆ ಕೋಶದ ಸುತ್ತಲೂ ನೀರಿರಬೇಕು. ಅಂದರೆ ಅದೊಂದು ಜಲಚರ ಏಕ ಕೋಶಿಯಾಗಿರಬೇಕು. ಅಮೋನಿಯಾ ರೂಪದಲ್ಲಿ ವಿಸರ್ಜನೆ ನಡೆಸುವ ಜೀವಿಗಳು ಅಮಿನೋಟಿಲಿಕ್ (aminotelic) ಜೀವಿಗಳು. ಈ ಅಮೋನಿಯಾದ ದ್ರಾವಣ ಅಪಾಯಕಾರಿಯಾದುದರಿಂದ ಬಹು ಕೋಶೀಯ ಜೀವಿಗಳು ಇದನ್ನು ಅಪಾಯಕಾರಿಯಲ್ಲದ ಯೂರಿಯಾ ಅಥವಾ ಯೂರಿಕ್ ಆಮ್ಲವಾಗಿ ಪರಿವರ್ತಿಸುತ್ತವೆ.
ಪಿತ್ತಜನಕಾಂಗದಲ್ಲಿ ತಯಾರಾಗುವ ಒಂದು ಕಿಣ್ವವು ಎರಡು ಅಮೋನಿಯಂ ಅಣುಗಳನ್ನು ಒಂದು ಇಂಗಾಲದ ಡೈಆಕ್ಸೈಡ್ ಅಣುವಿನೊಂದಿಗೆ ಬೆಸೆದು ಯೂರಿಯಾವನ್ನು ಉತ್ಪತ್ತಿ ಮಾಡುತ್ತದೆ. ಮಂಗಳೂರು ಕೆಮಿಕಲ್ಸ್ ಮತ್ತು ಫರ್ಟಿಲೈಸರ್ ಕಾರ್ಖಾನೆಯ ಯೂರಿಯಾ ತಯಾರಿಸುವ ಘಟಕ ನೋಡಿದ್ದೀರಲ್ಲವೇ. ಎಂತಹ ದೊಡ್ಡ ಕಾರ್ಖಾನೆ ಎಷ್ಟೊಂದು ನಿರ್ವಾಹಕರು. ನಿಮ್ಮ ದೇಹದೊಳಗೊಂದು ಯೂರಿಯಾ ಕಾರ್ಖಾನೆ ಇದೆ. ಅದು ಯಾವುದೇ ಕಾರ್ಮಿಕರು, ವಿದ್ಯುತ್ ಇಲ್ಲದೇ ಕೆಲಸ ನಿರ್ವಹಿಸುತ್ತಿದೆ ಎಂದು ಎಂದಾದರೂ ಯೋಚಿಸಿದ್ದೀರಾ? ಈ ಯೂರಿಯಾ ರಕ್ತದಲ್ಲಿ ಕರಗಿದ ರೂಪದಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸಲ್ಪಡುತ್ತದೆ ಮತ್ತು ಮೂತ್ರಜನಕಾಂಗದಿಂದ ಮೂತ್ರದ ರೂಪದಲ್ಲಿ ಹೊರ ಹಾಕಲ್ಪಡುತ್ತದೆ. ಇಂತಹ ಜೀವಿಗಳು uriotelic ಜೀವಿಗಳು. ಇದಕ್ಕೆ ಹೆಚ್ಚು ನೀರು ಬೇಕು. ಮೂತ್ರವನ್ನು ಸಂಗ್ರಹಿಸಲು ಒಂದು ಮೂತ್ರಕೋಶ ಬೇಕು (urinary bladder). ಇದು ದೇಹದ ತೂಕವನ್ನು ಹೆಚ್ಚಿಸುತ್ತವೆ. ನೆಲ ಜೀವಿಗಳಲ್ಲಿ ದೇಹದ ತೂಕ ಒಂದು ಸಮಸ್ಯೆಯಲ್ಲ. ಆದರೆ ಹಾರಾಡುವ ಜೀವಿಗಳಲ್ಲಿ ಹೆಚ್ಚುವರಿ ಅಂಗ ಮತ್ತು ಮೂತ್ರೋತ್ಪಾದನೆಗಾಗಿ ಅಧಿಕ ನೀರನ್ನು ಹೊತ್ತೊಯ್ಯುವುದು ದುಬಾರಿಯಾಗುತ್ತದೆ. ಇದರ ಬದಲು ಇದನ್ನು ಘನ ರೂಪದಲ್ಲಿ ವಿಸರ್ಜಿಸುವಂತಾದರೆ ಎಷ್ಟು ಒಳ್ಳೆಯದಲ್ಲವೇ? ಅದನ್ನೂ ಸಾಧಿಸಿದೆ ಈ ನಿಸರ್ಗ. ಹಾರಾಡುವ ಪ್ರಾಣಿಗಳಾದ ಪಕ್ಷಿಗಳು ಮತ್ತು ಕೀಟಗಳು ಇದನ್ನು ಸಾಧಿಸಿವೆ. ಇವುಗಳಲ್ಲಿ ಅಮೋನಿಯಾ ಯೂರಿಯಾದ ಬದಲಾಗಿ ಯೂರಿಕ್ ಆಮ್ಲವಾಗಿ ಪರಿವರ್ತಿಸಲ್ಪಡುತ್ತದೆ. ಇದರ ಕಾರ್ಖಾನೆಯೂ ಪಿತ್ಥಜನಕಾಂಗವೇ!! ಈ ಯೂರಿಕ್ ಆಮ್ಲ ರಕ್ತದಲ್ಲಿ ಸಾಗಿಸಲ್ಪಟ್ಟು ಮೂತ್ರಜನಕಾಂಗಗಳ ಮೂಲಕ ಘನ ರೂಪದ ಬಿಳಿ ವಸ್ತುವಿನ ರೂಪದಲ್ಲಿ ಮಲದೊಂದಿಗೆ ವಿಸರ್ಜಿಸಲ್ಪಡುತ್ತದೆ. ಕೋಳಿ ಹಲ್ಲಿಗಳ ಹಿಕ್ಕೆಯಲ್ಲಿ ಕಂಡು ಬರುವ ಬಿಳಿ ವಸ್ತು (white dropping) ಯೂರಿಕ್ ಆಮ್ಲ. ಇಂತಹ ಜೀವಿಗಳು uricotelic ಜೀವಿಗಳು. ನೋಡಿ ಪ್ರಕೃತಿ ಹೇಗೆ ನೀರನ್ನು ಮತ್ತು ಒಂದು ಹೆಚ್ಚುವರಿ ಅಂಗವನ್ನು ಉಳಿಸುವ ಕೆಲಸ ಮಾಡಿತು ನೋಡಿದಿರಾ?
ಇದು ಪ್ರಕೃತಿ ಎಂಬ ಜಿಪುಣನ ಕತೆ.
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
********************************************