ಪಯಣ : ಸಂಚಿಕೆ - 08 (ಬನ್ನಿ ಪ್ರವಾಸ ಹೋಗೋಣ)
Thursday, September 12, 2024
Edit
ಪಯಣ : ಸಂಚಿಕೆ - 08 (ಬನ್ನಿ ಪ್ರವಾಸ ಹೋಗೋಣ)
ಲೇಖನ : ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದುಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ
"ಕೈ ಮುಗಿದು ಒಳಗೆ ಬಾ ಯಾತ್ರಿಕನೆ ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು.." ರಾಷ್ಟ್ರಕವಿ ಕುವೆಂಪು ತಮ್ಮ ಭಾವಪೂರ್ಣ ಕವನದ ಒಂದೇ ಒಂದು ಸಾಲಿನಲ್ಲಿ ಕರ್ನಾಟಕದ ಶಿಲ್ಪಕಲೆಗೆ ಸೂಕ್ತ
ಗೌರವ ಮನ್ನಣೆ ನೀಡಿದ್ದಾರೆ. ಕರ್ನಾಟಕ ಕಲೆಗಳ ತವರು, ಶಿಲ್ಪ ಕಲೆಗಳ ಬೀಡು, ಬೇಲೂರು, ಹಳೇಬೀಡು, ಸೋಮನಾಥಪುರ ಗಳನ್ನು ನೋಡಿದಾಗ ಕುವೆಂಪು ಹೇಳಿದಂತೆ ಪ್ರತಿಯೊಬ್ಬ ಪ್ರವಾಸಿಗನು
ಶಿಲ್ಪಿಯ ಕಲಾತ್ಮಕತೆಗೆ ತಲೆ ಬಾಗಿಯೇ ಬಾಗುತ್ತಾನೆ.
ಇಂಥ ಒಂದು ಕಲಾ ಶ್ರೀಮಂತಿಕೆಯ ತಾಣ ಮೈಸೂರಿಗೆ 38 ಕಿ.ಮೀ. ದೂರದಲ್ಲಿರುವ ಸೋಮನಾಥಪುರ. ಪ್ರಶಾಂತ ಪರಿಸರದಲ್ಲಿರುವ ಈ ಶಿಲ್ಪಕಲಾ ವೈಭವದ ದೇಗುಲವನ್ನು ಪ್ರವೇಶಿಸಿದರೆ ಆಗುವ ಸಂತೋಷ ಅಪರಿಮಿತ. ಹುಲ್ಲು ಹಾಸಿನ ನಡುವೆ ಸಾಗಿ ನಾಲ್ಕು ಮೆಟ್ಟಿಲೇರುತ್ತಿದ್ದಂತೆಯೇ ಹೊಸದೊಂದು ಶಿಲ್ಪಕಲಾ ಲೋಕವೇ ತೆರೆದುಕೊಳ್ಳುತ್ತದೆ.
ಜೀವಕಳೆಯಿಂದ ಕಂಗೊಳಿಸುತ್ತಿರುವ
ಶಿಲ್ಪವೈಭವವನ್ನು ಕಂಡಾಗ ರೋಮಾಂಚನವಾಗುತ್ತದೆ. ಶಿಲ್ಪಿಯ ಜಾಣ್ಮೆ , ಚಾಕಚಕ್ಯತೆ ಕೌಶಲಕ್ಕೆ ಶಿರಬಾಗುತ್ತದೆ. 13ನೆಯ ಶತಮಾನದಲ್ಲಿ ಸೋಮನಾಥಪುರ ಒಂದು ಪುಟ್ಟ ಅಗ್ರಹಾರವಾಗಿತ್ತು. ಚತುರ್ವೇದಿಮಂಗಲ ವಿದ್ಯಾನಿಧಿ ಪ್ರಸನ್ನ ಸೋಮನಾಥಪುರ ಎಂಬುದು ಇದರ ಪೂರ್ವ ಹೆಸರು. ಇಲ್ಲಿರುವ 7 ಶಾಸನಗಳು ಈ ಅಪೂರ್ವ ದೇವಾಲಯದ ಬಗ್ಗೆ ಮತ್ತು ಕಲೆಗೆ ಹಾಗೂ ವಿದ್ಯೆಗೆ ಆಗರವಾಗಿದ್ದ ಈ ಊರಿನ ಬಗ್ಗೆ
ಮಹತ್ವದ ಮಾಹಿತಿ ಒದಗಿಸುತ್ತವೆ.
ಹೊಯ್ಸಳರ ದೊರೆ ಮುಮ್ಮಡಿ ನರಸಿಂಹನ ದಂಡನಾಯಕನಾಗಿದ್ದ ಸೋಮನಾಥ 1258ರ ಸುಮಾರಿನಲ್ಲಿ ನಿರ್ಮಿಸಿ, ತನ್ನ ಹೆಸರನ್ನು ಇಟ್ಟು ಸೋಮನಾಥಪುರ ವೆಂದು ಕರೆದ. ಪ್ರಶಾಂತವಾಗಿ ಕಾವೇರಿ ನದಿ ಹರಿಯುವ ಈ ಸ್ಥಳದಲ್ಲಿ ಹಲವು ದೇವಾಲಯಗಳನ್ನು ನಿರ್ಮಿಸಿದ ಎನ್ನುತ್ತದೆ ಇತಿಹಾಸ.
ವಿಶಾಲವಾದ ಸ್ಥಳದಲ್ಲಿ ನಕ್ಷತ್ರಾಕಾರದ ಜಗತಿಯ ಮೇಲೆ
ನಿರ್ಮಿಸಲಾಗಿರುವ ಈ ದೇಗುಲ ಪೂರ್ವಾಭಿಮುಖವಾಗಿದ್ದು, ಜಗತಿಯ ಸುತ್ತಲೂ ಇಡೀ ದೇವಾಲಯವನ್ನೇ ಆನೆಗಳು ಹೊತ್ತಿವೆಯೇನೋ ಎಂದು ಭಾಸವಾಗುವಂತೆ ಸುಂದರ ಗಜಶಿಲ್ಪಗಳನ್ನು ಕೆತ್ತಲಾಗಿದೆ. ದೇವಾಲಯದ ಆವರಣ ಭಿತ್ತಿಗಳ ಏಳಂಗುಲದ ಪಟ್ಟಿಕೆಗಳು ರಾಮಾಯಣ, ಭಾಗವತ, ಮಹಾಭಾರತದ ಕಥೆಯನ್ನು ವರ್ಣಿಸುವ ಶಿಲ್ಪಗಳಿಂದ ತುಂಬಿದೆ. ಆನೆ, ಅಶ್ವರೋಹಿಗಳು, ಲತೆ, ಮಕರ, ಹಂಸಗಳಿವೆ. ಗರ್ಭಗುಡಿಯ ಸುತ್ತಲೂ ಹೊರಭಾಗದಲ್ಲಿ ನರಸಿಂಹ,
ಮನ್ಮಥ, ಇಂದ್ರ, ಸರಸ್ವತಿ, ಮಹಿಷಾಸುರ ಮರ್ದಿನಿ ಮೊದಲಾದ ಸುಂದರವಾದ 194 ದೊಡ್ಡ ಶಿಲ್ಪಗಳಿವೆ. ಈ ವಿಗ್ರಹಗಳ ಪೀಠದ ಮೇಲೆ ಮಲ್ಲಿತಮ್ಮ, ಚೌಡಯ್ಯ, ಬಾಲಯ್ಯ, ಮಸಣಿತಮ್ಮ, ಲೋಹಿತ ಮೊದಲಾದ ಹೆಸರುಗಳಿದ್ದು, ಇವರೆ ಇವನ್ನು ಕೆತ್ತಿದ್ದು ಎಂದು ಸೂಚಿಸಲಾಗಿದೆ.
ಸೋಮನಾಥಪುರದ ದೇವಾಲಯದ ಸೌಂದರ್ಯಕ್ಕೆ ಶಿಖರಪ್ರಾಯವಾಗಿರುವುದು ಮೂರು ಶಿಖರಗಳೇ. ಹೀಗಾಗೇ ಇದನ್ನು ತ್ರಿಕುಟಾಚಲವೆನ್ನುತ್ತಾರೆ. ಹದಿನಾರು ಕೋಣೆಗಳ ನಕ್ಷತ್ರಾಕಾರದ ವಿನ್ಯಾಸದ ಮೇಲೆ ರಚಿತವಾಗಿರುವ ಶಿಖರಗಳು ದೇವಾಲಯ ರಮ್ಯತೆಯನ್ನು ನೂರ್ಮಡಿಗೊಳಿಸಿವೆ. ಎಲ್ಲ
ಹೊಯ್ಸಳ ದೇವಾಲಯದಲ್ಲಿರುವಂತೆ ಮುಖಮಂಟಪ, ನವರಂಗ, ಗರ್ಭಗೃಹ, ಸುಖನಾಸಿಗಳು ಇಲ್ಲೂ ಇವೆ. ಮಧ್ಯದ ಭುನವೇಶ್ವರಿಯಲ್ಲಿ ಅಷ್ಟದಿಕ್ಪಾಲಕರು, ಅದರ
ಈ ದೇವಾಲಯದಲ್ಲಿ ಮೂರು ಗರ್ಭಗೃಹಗಳಿದ್ದು, ಉತ್ತರ ಗರ್ಭಗೃಹದಲ್ಲಿ ಜನಾರ್ಧನ ದಕ್ಷಿಣ ಗರ್ಭಗೃಹದಲ್ಲಿ ತ್ರಿಭಂಗಿಯಲ್ಲಿ ನಿಂತ ವೇಣುಗೋಪಾಲ ವಿಗ್ರಹ ಇದೆ. ಮಧ್ಯದ ಗರ್ಭಗೃಹದಲ್ಲಿ ಯಾವ ವಿಗ್ರಹವೂ ಇಲ್ಲ. ಹಿಂದೆ ಇಲ್ಲಿ ವಿಗ್ರಹ ಇತ್ತೆಂದು ಹೇಳಲಾಗುತ್ತದೆ.
"ಅದ್ಭುತ, ರಮಣೀಯ ಹಾಗೂ ಆಕರ್ಷಕ ಶಿಲ್ಪಕಲೆಗಳ ವೈವಿಧ್ಯತೆ ಇಲ್ಲಿ ಮನಮೋಹಕವಾಗಿದೆ. ಇಂಥ ಶಿಲ್ಪ ಕಲೆಗಳ ಬೀಡು ನಮ್ಮಲ್ಲಿವೆ ಎಂಬುವುದೇ ಒಂದು ಹೆಮ್ಮೆ" ಬನ್ನಿ ಪ್ರವಾಸಕ್ಕೆ - ಕಣ್ತುಂಬ ನೋಡಿ, ನೀವೇ ವಿಸ್ಮಯಗೊಳ್ಳುತ್ತೀರಿ.
ಮುಂದಿನ 'ಪಯಣ' ಸಂಚಿಕೆಯಲ್ಲಿ ಮತ್ತೆ ಸಿಗೋಣವೇ, ನಮಸ್ಕಾರ.
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
********************************************