-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 65

ನಿಷ್ಪಾಪಿ ಸಸ್ಯಗಳು : ಸಂಚಿಕೆ - 65

ನಿಷ್ಪಾಪಿ ಸಸ್ಯಗಳು : ಸಂಚಿಕೆ - 65
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
     

ಪ್ರೀತಿಯ ಮಕ್ಕಳೇ... ಹೇಗಿದ್ದೀರಿ?
       ನೀವು ಶಾಲೆಗೆ ಹೋಗಿ ಬಂದ ಮೇಲೆ ಮನೆಯ ಅಥವಾ ದನಕರುಗಳ ಯಾವುದಾದರೂ ಕೆಲಸಗಳಲ್ಲಿ ಭಾಗಿಯಾಗುತ್ತೀರಾ? ಖಂಡಿತ ಕೆಲವು ಕೆಲಸಗಳನ್ನು ನಿಮ್ಮ ವೇಳಾಪಟ್ಟಿಗೆ ಜೋಡಿಸಿರುತ್ತೀರಿ ಅಲ್ಲವೇ? ಬಾಲ್ಯದಲ್ಲಿ ನಮಗೂ ಕೆಲಸಗಳಿದ್ದುವು. ಬೆಳಗ್ಗೆ ಹಿರಿಯರ ಜೊತೆ ಹಟ್ಟಿಗೆ ಸೊಪ್ಪು ತರುವುದು, ಸಂಜೆ ಶಾಲೆಯಿಂದ ಬಂದು ದನಕರುಗಳನ್ನು ಮೇಯಿಸುವ ಜೊತೆಗೆ ಅವುಗಳಿಗೆ ಬೇಯಿಸಿ ನೀಡಬಹುದಾದ ಸೊಪ್ಪುಗಳನ್ನು ಸಂಗ್ರಹಿಸುವುದು. 
         ದನಗಳಿಗೆ ಬೇಯಿಸಿ ಕೊಡಬಹುದಾದ ಹಲವಾರು ಸೊಪ್ಪುಗಳು ಇದ್ದವು. ಮರಗಳ ಕೈಗೆಟುಕುವ ಗೆಲ್ಲುಗಳನ್ನು ಹುಡುಕುತ್ತಾ ಪೊದರುಗಳಲ್ಲಿ ಎಳೆಯ ಸೊಪ್ಪುಗಳನ್ನು ಗಮನಿಸುತ್ತಾ ಹೋಗುವಾಗ ಒಮ್ಮೆ ಕಾಲಿನಡಿಯಲ್ಲಿ ತುಂಬಾ ದಪ್ಪಗಿದ್ದ ಕನ್ನಡಿ ಹಾವು ನಿಧಾನಕ್ಕೆ ಸಾಗುತ್ತಿತ್ತು. ಸೊಪ್ಪುಗಳ ಕಡೆಗೇ ಗಮನವಿದ್ದ ನಾನು ಒಮ್ಮಲೇ ಹೌಹಾರಿದ್ದೆ. ಗುಡ್ಡದ ಬದಿಗಳ ಕೆಲವು ಜಾಗಗಳಲ್ಲಿ ನೆಲವನ್ನು ಅಪ್ಪಿ ಹಿಡಿದಂತಹ ಒಂದು ಗಿಡವಿತ್ತು. ಅದು ಸಿಕ್ಕಿದರೆ ಅಂದಿನ ಸೊಪ್ಪು ಹುಡುಕುವ ಕೆಲಸ ಬೇಗನೇ ಮುಗಿಯಿತೆಂದು ಖುಷಿ ಪಡುತ್ತಿದ್ದೆ. ಏಕೆಂದರೆ ಆ ಗಿಡ ಹಿಂಡು ಹಿಂಡಾಗಿ ಇರುತ್ತಿತ್ತು. ಮಣ್ಣಿಗೆ ತಾಗಿಕೊಂಡೇ ಅದರ ಎಲೆಗಳು ಹರಡಿಕೊಂಡಿರುವುದರಿಂದ ಅವುಗಳನ್ನು ಅವುಗಳ ತಂತುಬೇರು ಸಮೇತ ಕೀಳಬೇಕಿತ್ತು. ಬುಟ್ಟಿ ತುಂಬಾ ಈ ಸಸ್ಯವನ್ನು ಕಿತ್ತು ನೀರಿನಲ್ಲಿ ತೊಳೆದು ಭತ್ತದ ತೌಡಿನ ಜೊತೆ ಬೇಯಿಸಿ ಬೆಳಗ್ಗೆ ದನಗಳಿಗೆ ತಿನ್ನಲು ಇಟ್ಟು ಹಾಲು ಕರೆಯಲಾರಂಭಿಸುತ್ತಿದ್ದರು. ದನಗಳು ತನ್ಮಯತೆಯಿಂದ ಈ 'ಪುರ್ಗ' ತಿನ್ನುವಾಗ ನೋಡುವುದೇ ಪರಮಾನಂದವೆನಿಸುತ್ತಿತ್ತು. 'ಎಷ್ಟು ರುಚಿಯಾಗಿರಬೇಕಲ್ಲ !' ಅಂತ ಅನಿಸುತ್ತಿತ್ತು. ಈ ಸಸ್ಯವನ್ನು ತುಳುವಿನಲ್ಲಿ ನೆಲಮುಚ್ಚಿರ್ ಎನ್ನುತ್ತಿದ್ದರು. ಕನ್ನಡದಲ್ಲಿ ಹಕ್ಕರಿಕೆ, ನೆಲಮುಚ್ಚಿಲು, ನೆಲ ಮುಚ್ಚಳಿಕೆ, ಹಸ್ತಿಪಾದ, ಆನೆ ಕಾಲು ಗಿಡ, ನಾಯಿ ನಾಲಿಗೆ ಗಿಡ ಎಂದೆಲ್ಲ ಹೆಸರಿದೆ. ಸಂಸ್ಕೃತ ದಲ್ಲಿ ಪ್ರಸ್ತಾರಿಣಿ, ಸರಪರ್ಣಿನಿ, ಮಯೂರ ಶಿಖ ಎನ್ನುವರು. ಸಾಮಾನ್ಯವಾಗಿ Elephant Foot, Bull's Tongue ಎನ್ನುವರು.
      ಈ ನೆಲಮುಚ್ಚಿಲು ಗಿಡದ ಸಸ್ಯ ಶಾಸ್ತ್ರೀಯ ಹೆಸರು ಎಲಿಫೆಂಟೋಪಸ್ ಸ್ಕೇಬರ್ (Elephantopus Scaber) ಹಾಗೂ ಇದು ಅಸ್ಟರೇಸಿ (Asteraceae) ಕುಟುಂಬಕ್ಕೆ ಸೇರಿದೆ. ಇದು ನೆಲವನ್ನು ಸಂಪೂರ್ಣ ಮುಚ್ಚುತ್ತಾ, ನೆಲಕ್ಕೆ ಹಾಸು ಹಾಕಿದಂತೆ ಬೆಳೆಯುವುದರಿಂದ ನೆಲ ಮುಚ್ಚಿಲು ಅನ್ನುವ ಹೆಸರು ಸಾರ್ಥಕತೆ ಪಡೆದರೆ ನವಿಲಿನ ಜುಟ್ಟನ್ನೇ ಹೋಲುವ ಹೂ ವಾಗುವುದರಿಂದ ಮಯೂರ ಶಿಖಾ ಎನಿಸಿಕೊಂಡಿದೆ. ಆನೆ ಪಾದದಂತೆ ವೃತ್ತಾಕಾರದಲ್ಲಿ ಹಸಿರು ಚಿತ್ತಾರ ಭೂಮಿಯಲ್ಲಿ ಕಾಣುವಾಗ ಹಸ್ತಿಪಾದವೇ ಸರಿ!. ನಮ್ಮ ಹಿರಿಯರು ಗಿಡಗಳಿಗೆ ಹೆಸರು ಇಡುವಾಗಲೇ ಅವುಗಳ ರಚನೆಯನ್ನು ಎಷ್ಟೊಂದು ಗಮನಿಸುತ್ತಿದ್ದರಲ್ಲವೇ? ನೆಲಮುಚ್ಚಿಲು ಹೂ ಬಿಡುವ ಸಸ್ಯದ ಉಷ್ಣವಲಯದ ಜಾತಿ. ಉಷ್ಣವಲಯದ ಆಫ್ರಿಕಾ, ಪೂರ್ವ ಏಷ್ಯಾ, ಭಾರತೀಯ ಉಪಖಂಡ, ಯುರೋಪ್, ಆಸ್ಟ್ರೇಲಿಯಾ, ಮಲೇಶಿಯಾಗಳಲ್ಲಿ ಕಾಣಬಹುದು. ಭಾರತದ ಎಲ್ಲಾ ಕಡೆ ಈ ಸಸ್ಯವಿಲ್ಲ ಗೊತ್ತಾ? ಭಾರತದಲ್ಲಿ ತಮಿಳುನಾಡು ಹಾಗೂ ಕೇರಳದಲ್ಲಿ ಮಾತ್ರ ಎಲ್ಲೆಡೆ ಕಾಣಸಿಗುತ್ತದೆ. ಉಳಿದಂತೆ ಆಂದ್ರಪ್ರದೇಶ, ಕರ್ನಾಟಕ, ಒಡಿಶಾದ ಕೆಲ ಭಾಗಗಳಲ್ಲಿ ಬೆಳೆಯುತ್ತದೆ. ತೇವಾಂಶವುಳ್ಳ ಪತನಶೀಲ ಕಾಡು, ತೇವಾಂಶವುಳ್ಳ ಸ್ಥಳಗಳ ಸಮೀಪದ ಬಯಲು ಪ್ರದೇಶ, ಹುಲ್ಲುಗಾವಲು, ಕೃಷಿ ಮಾಡಲಾದ ಜಾಗ, ರಸ್ತೆ ಬದಿ, ಹೊಲಗಳ ಬದುಗಳಲ್ಲಿ, ಅರಣ್ದದ ಅಂಚುಗಳಲ್ಲಿ ಬೆಳೆಯುತ್ತದೆ. ನೆರಳನ್ನು ಇಷ್ಟ ಪಡುವ ಈ ಸಸ್ಯ ಗುಂಪುಗುಂಪಾಗಿ ಬೆಳೆಯುತ್ತದೆ. ಕಿತ್ತು ತೆಗೆಯುತ್ತಿದ್ದರೂ ವರ್ಷ ವರ್ಷ ಅಲ್ಲಿ ಗಿಡಗಳಿದ್ದೇ ಇರುತ್ತವೆ. ನೆಲಕ್ಕೆ ಅಂಟಿದಂತೆ ಮೊದಲ ಸುತ್ತಿನೆಲೆಗಳು ಹರಡಿಕೊಂಡು ಬೆಳೆದರೂ ಕಾಂಡದಲ್ಲಿ ಒತ್ತೊತ್ತಾಗಿ ಎಲೆಗಳು ವೃತ್ತಾಕಾರವಾಗಿ ಮೂಡುತ್ತಾ 80 cm ಎತ್ತರದ ವರಗೂ ಬೆಳೆಯಬಲ್ಲದು. ನಾಲ್ಕು ಐದು ಸುತ್ತಿನ ಎಲೆಗಳು ಬೆಳೆದನಂತರ ಮಧ್ಯಭಾಗದಿಂದ ತೆಳ್ಳಗಿನ ಸ್ವಲ್ಪ ಗಟ್ಟಿಯಾದ ಕಡ್ಡಿಯಂತಹ ಗಿಡವೊದು ಮೇಲೇರುತ್ತದೆ. ಅದರಲ್ಲಿ ಕವಲುಗಳೊಡೆದು ಹೃದಯದಾಕಾರದ ಮೂರು ಸಣ್ಣ ಎಲೆಗಳು ಮೂಡಿ ನಡುವೆ ಹಸಿರು ಮುಳ್ಳಿನಂತಹ ರಚನೆ ಬೆಳೆಯುತ್ತದೆ. ಆ ಮುಳ್ಳುಗಳ ನಡುವಿಂದ ನಾಜೂಕಾದ ಪುಟ್ಟ ಎಸಳುಗಳ ಪುಟಾಣಿ ಹೂಗಳು ಅರಳುತ್ತವೆ. ಈ ಹೂಗಳು ಹಸಿರು ಮುಳ್ಳು ಗಳ ನಡುವಿಂದ ನೇರಳೆ ವರ್ಣದಲ್ಲಿ ಅದ್ಭುತ ದಳ ವಿನ್ಯಾಸದ ಪುಷ್ಪವು ಗೊಂಚಲಾಗಿ ನವಿಲ ಜುಟ್ಟಿನಂತೆ ಕಾಣಿಸುತ್ತವೆ. ಸೂಕ್ಷ್ಮವಾಗಿ ಆಘ್ರಾಣಿಸಿದರೆ ಇದಕ್ಕೆ ನವಿರಾದ ಪರಿಮಳವೂ ಇದೆ. ಆಗಸ್ಟ್ ನಿಂದ ಜನವರಿಯವರೆಗೆ ಹೂ, ಕಾಯಿಗಳಾಗುತ್ತವೆ. ಬೀಜಗಳಮೂಲಕ ಪ್ರಸರಣವಾಗುತ್ತವೆ. ಇಲ್ಲಿ ಮುಳ್ಳಿನಂತೆ ಸ್ವಲ್ಪ ಗಡುಸಾದ ರಚನೆ ಇರುವುದರಿಂದ ಮುಳ್ಳು ಎಲೆಗಳ ಆನೆ ಕಾಲು ಎಂಬ ಹೆಸರೂ ಇದೆ.
      ನೆಲಮುಚ್ಚಿಲು ಸಸ್ಯದ ಎಲೆಗಳು ಸಾಮಾನ್ಯವಾಗಿ 15cm ಉದ್ದವಿದ್ದು ಮಧ್ಯಭಾಗದಲ್ಲಿ 5cm ಅಗಲವಿರುತ್ತವೆ. ಎಲೆಗಳು ಗಾಢ ಹಸಿರಾಗಿ, ಸ್ವಲ್ಪ ದಪ್ಪಗೆ, ಒರಟಾಗಿದ್ದು ಅಡಿಭಾಗದಲ್ಲಿ ಚುಚ್ಚುವಂತಹ ರೋಮ ಹೊಂದಿದೆ. ತುದಿಭಾಗ ಅಂಡಾಕಾರವಾಗಿದ್ದು ತೊಟ್ಟಿನ ಬಳಿ ಕಿರಿದಾಗಿದೆ.
       ಮಣ್ಣಿನ ರಕ್ಷಕನಾಗಿ ಬದುಕು ಸವೆಸುವ ಈ ನೆಲಮುಚ್ಚಿಲೆಂಬ ನಿಷ್ಪಾಪಿ ಸಸ್ಯದ ಎಲೆ ಮತ್ತು ಬೇರುಗಳನ್ನು ಹಲವಾರು ದೇಶಗಳಲ್ಲಿ ಸಾಂಪ್ರದಾಯಿಕ ಔಷಧಿಯಾಗಿ ಬಳಸುತ್ತಾರೆ. ಎಲೆಗಳನ್ನೂ ಕೆಲವೆಡೆ ಆಹಾರವಾಗಿ ಬಳಸುವರಂತೆ. ಆಫ್ರಿಕಾದಲ್ಲಿ ಕಾಡಿನಿಂದ ಸಂಗ್ರಹಿಸಲ್ಪಡುವ ಈ ಗಿಡ ಜನಪ್ರಿಯ ಔಷಧೀಯ ಸಸ್ಯವಾಗಿದೆ. ಅಸ್ತಮಾ, ಕೆಮ್ಮು, ಶ್ವಾಸಕೋಶದ ಕಾಯಿಲೆ, ಅತಿಸಾರ, ಭೇದಿ, ಮೂತ್ರನಾಳದ ಸಮಸ್ಯೆ, ಚರ್ಮರೋಗ ಇತ್ಯಾದಿಗಳಿಗೆ ಶಮನಕಾರಿಯಾಗಿದೆ.
      ನೋಡಿದಿರಾ ಮಕ್ಕಳೇ.... ವಾಮನರೂಪಿ ಸಸ್ಯವೊಂದು ನಮ್ಮ ಪರಿಸರದ ಭಾಗವಾಗಿ ಹೇಗೆ ಸಹಕರಿಸುತ್ತಿದೆ ಎಂದು ತಿಳಿದರೆ ನಾವೆಷ್ಟು ಅಧಮರಾಗಿ ಮಣ್ಣನ್ನು ನಾಶಮಾಡುತ್ತಿದ್ದೇವೆ..? ಪರಿಸರ ನಾಶ ಮಾಡುತ್ತಿದ್ದೇವೆಂದು ಅನಿಸುವುದಿಲ್ಲವೇ...? ಇದರ ಬಗ್ಗೆ ನಾವು ಕಾಳಜಿ ವಹಿಸದಿದ್ದರೆ ಮುಂದೆ ನಮಗೆ ಆಪತ್ತು ಕಟ್ಟಿಟ್ಟ ಬುತ್ತಿ. ಹಾಗಾಗಿ ನಮ್ಮಿಂದ ಪ್ರಕೃತಿಗೆ ಅನ್ಯಾಯವಾಗದಂತೆ ಬಾಳೋಣ.
     ಸರಿ ಮಕ್ಕಳೇ, ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗುತ್ತೇನೆ.. ನಮಸ್ಕಾರ.
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*********************************************


Ads on article

Advertise in articles 1

advertising articles 2

Advertise under the article