-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 64

ನಿಷ್ಪಾಪಿ ಸಸ್ಯಗಳು : ಸಂಚಿಕೆ - 64

ನಿಷ್ಪಾಪಿ ಸಸ್ಯಗಳು : ಸಂಚಿಕೆ - 64
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
   

ಪ್ರೀತಿಯ ಮಕ್ಕಳೇ.... ಹೇಗಿದ್ದೀರಿ? ಪ್ರತಿಭಾ ಕಾರಂಜಿಯ ಸಂಭ್ರಮದಲ್ಲಿ ಈ ದಿನಗಳು ಸರಿಯುತ್ತಿವೆ ಅಲ್ಲವೇ?
       ಸರಿ ಮಕ್ಕಳೇ. ಈ ನಡುವೆ ನಾನು ನಿಮಗೊಂದು ಹುಲ್ಲಿನ ಪರಿಚಯ ಮಾಡಿಸುತ್ತಿದ್ದೇನೆ. ಹುಲ್ಲು ಯಾರಿಗೊತ್ತಿಲ್ಲ ಹೇಳಿ.. ಅದೇನ್ ಮಹಾ! ಅಂತೀರಾ? ಅದು ಮಹತ್ ಅಂತಾನೇ ನಿಮಗೆ ಪರಿಚಯಿಸ್ತಿದ್ದೇನೆ ಗೊತ್ತಾ? ನಮ್ಮ ಹಿರಿಯರು ಈ ಹುಲ್ಲಿನ ಬೇರನ್ನು ಚೆನ್ನಾಗಿ ತೊಳೆದು ಒಣಗಿಸಿ ತಮ್ಮ ಮನೆಗಳಲ್ಲಿ ಮರದ ಕಲೆಂಬಿ (ದೊಡ್ಡ ಪೆಟ್ಟಿಗೆ) ಯಲ್ಲಿದ್ದ ಅಕ್ಕಿ, ದಿಂಬು, ಹೊದಿಕೆ, ಬಟ್ಟೆಗಳ ನಡುವೆ ಮಾತ್ರವಲ್ಲದೆ ಅಜ್ಜಿ, ಅಮ್ಮ ಕಬ್ಬಿಣದ ಪೆಟ್ಟಿಗೆಯೊಳಗಿಟ್ಟ ತಮ್ಮ ಸೀರೆಗಳ ನಡುವೆ ಜೋಪಾನವಾಗಿ ಜೋಡಿಸಿಡುತ್ತಿದ್ದರು. ಸೊಳ್ಳೆ, ಕೀಟ, ತಿಗಣೆ, ಜಿರಳೆಗಳ ನಿವಾರಣೆಗೆ ಈ ಬೇರು ಉಪಯುಕ್ತವಾಗಿತ್ತು.
     ಮಣ್ಣಿನ ಪಾತ್ರೆಯಲ್ಲಿ ಕುಡಿಯಲೆಂದು ಇರಿಸಿದ್ದ ನೀರಿಗೆ, ತಲೆಗೆ ಹಾಕಲೆಂದು ಇಟ್ಟ ಎಣ್ಣೆಗೆ, ಮನೆಯ ಕಿಟಕಿಗಳಿಗೆ ಜಾಲರಿಯಂತೆ ಈ ಬೇರನ್ನು ಬಳಸುತ್ತಿದ್ದರು. ಕುಡಿಯುವ ನೀರು ಶುದ್ಧವಾಗುವ ಜೊತೆ ತಂಪಾಗಿ ಸುವಾಸನೆ ಹೊಂದಿದರೆ ಎಣ್ಣೆಯು ತಲೆಗೆ ತಂಪು ನೀಡುತ್ತಿತ್ತು. ಕಿಟಕಿಯಿಂದ ಬರುವ ಗಾಳಿ ಹಿತವಾಗಿರುತ್ತಿತ್ತು. ಹಾಗಾದರೆ ಈ ಬೇರನ್ನು ನೀಡುವ ಸಸ್ಯ ಯಾವುದೆಂಬ ಅಚ್ಚರಿಯೆ? 
       ಮಕ್ಕಳೇ, ಅದೊಂದು ಬರಿಯ ಹುಲ್ಲು ! ಈ ನಿಷ್ಪಾಪಿ ಸಸ್ಯ ಅಥವಾ ಹುಲ್ಲಿನ ಹೆಸರೇ ಲಾವಂಚ. ಕನ್ನಡದಲ್ಲಿ ಲಾವಂಚ, ಕಾಡುದಪ್ಪ, ಕರಿಸಜ್ಜೆ ಹುಲ್ಲು, ಮಡಿವಾಳ ಗಿಡ ಎಂದೆಲ್ಲ ಕರೆಸಿಕೊಳ್ಳುವ ಇದನ್ನು ತುಳುವಿನಲ್ಲಿ ಮಲ್ಲಿವಾಳ್, ಮುಡ್ಯಲ, ರಾಮಂಚ ವೆನ್ನುವರು. ಸಂಸೃತದಲ್ಲಿ ಉಶಿರಾ. ವೆಟಿವೇರಿಯ ಜಿಜನಿಯೋಡೆಸ್ ಎಂಬ ಸಸ್ಯ ಶಾಸ್ತ್ರೀಯ ಹೆಸರಿದ್ದು ಪೋಯೇಸೀ (Poaceae ) ಕುಟುಂಬಕ್ಕೆ ಸೇರಿದೆ. ಬಹುವಾರ್ಷಿಕ ಸಸ್ಯವಾಗಿ ಮರಳು ಮಣ್ಣು ಹೊರತು ಪಡಿಸಿ ಬೇರೆಲ್ಲೂ ಬೆಳೆಯಬಲ್ಲದು. ಒಂದು ಒಂದೂವರೆ ಅಡಿಯಷ್ಟು ಎತ್ತರ ಬೆಳೆಯುವ ಹುಲ್ಲು ಯಾವುದೇ ತೇವಾಂಶಕ್ಕೂ ಸೈ ಎನ್ನುತ್ತದೆ. ಮೈದಾನ, ಗುಡ್ಡದ ತಪ್ಪಲು, ನದೀ ದಡಗಳಲ್ಲಿ ಸಹಜವಾಗಿ ಬೆಳೆಯುವ ಲಾವಂಚಕ್ಕೆ ತೆಳ್ಳನೆಯ ಒಂದು ಒಂದೂವರೆ ಮೀಟರ್ ಉದ್ದನೆಯ ತಿಳಿ ಹಸಿರು ವರ್ಣದ ಎಲೆಗಳಿರುತ್ತವೆ. ಎರಡು ಮೂರು ಅಡಿ ಬೆಳೆಯುವ ಬೇರು ಮೃದುವಾಗಿದ್ದು ಸುವಾಸನೆಯಿಂದ ಕೂಡಿರುತ್ತದೆ. ತಿಳಿ ಹಳದಿ, ಹಳದಿ, ಕಂದು, ತಿಳಿಗೆಂಪು ಬಣ್ಣದ 15ರಿಂದ 40 ಸೆಂ.ಮೀ. ಉದ್ದನೆಯ ಕಿರು ಹೂಗಳ ತೆನೆಯಾಗುತ್ತದೆ. ಭತ್ತದ ಸಸಿಯಂತೆ ಲಾವಂಚವನ್ನು ಬೇರು ಸಮೇತ ನೆಟ್ಟು ಹತ್ತು ತಿಂಗಳಲ್ಲಿ ಕೊಯ್ಲಿಗೆ ಬರುತ್ತದೆ. ಈ ಸಸ್ಯ ತನ್ನ ಸುತ್ತಲಿನ ಪ್ರದೇಶವನ್ನು ತಂಪಾಗಿಸುತ್ತದೆ.
      ಭಾರತದಲ್ಲೇ ಅಲ್ಲದೆ ಆಸ್ಟ್ರೇಲಿಯಾ, ಚೀನಾ, ಥೈಲ್ಯಾಂಡ್, ವಿಯೆಟ್ನಾಂ ಮೊದಲಾದೆಡೆ ಬೆಳೆಯುವುದೇ ಅಲ್ಲದೆ ಇದರಿಂದ ನಾನಾ ರೀತಿಯ ಪ್ರಯೋಜನಗಳನ್ನು ಪಡೆಯುತ್ತಾರೆ. ಲಾವಂಚದ ಬೇರು ಹಲವು ಆಯುರ್ವೇದ ಔಷಧಿಗಳಲ್ಲಿ ಬಳಸಲ್ಪಡುತ್ತದೆ. ಮೈಕೈ ನೋವು, ವಾತ, ಹೊಟ್ಟೆ ನೋವು, ಜಂತುಹುಳದ ಸಮಸ್ಯೆ, ಮಲಬದ್ಧತೆ, ತಲೆನೋವು, ನರಮಂಡಲದ ಶಾಂತತೆ, ಒತ್ತಡ ನಿವಾರಣೆ, ರಕ್ತ ಪರಿಚಲನೆಯ ಸುಧಾರಣೆ, ಜೀರ್ಣಾಂಗ ವ್ಯವಸ್ಥೆ ಸರಿಪಡಿಸಲು, ಉರಿಮೂತ್ರ, ಕೈಕಾಲು ನೋವು, ನರಗಳ ನಿಶ್ಯಕ್ತಿ, ಮೊಡವೆ, ಸಂಧಿವಾತ, ನಂಜು ನಿವಾರಕ, ಜ್ವರ, ಬೆನ್ನು ನೋವು ಇತ್ಯಾದಿಗಳಿಗೆ ಔಷಧಿಯಾಗಿದೆ. ಬೇಸಿಗೆಯಲ್ಲಿ ಬಿಸಿಲಬೇಗೆಯಿಂದ ಉಂಟಾಗುವ ಕಾಯಿಲೆಗೆ ರಕ್ಷಣೆ ಲಾವಂಚದ ಬೇರು ಹಾಕಿರಿಸಿದ ನೀರು. ತೈಲವು ಚರ್ಮ ರಕ್ಷಣೆಗೆ ಪ್ರಮುಖವಾಗಿರುವುದರಿಂದ ಕ್ರೀಮ್, ಸಾಬೂನುಗಳಲ್ಲಿ ಬಳಸುತ್ತಾರೆ.
     ಶ್ರೀಗಂಧ, ರೆಂಜೆ(ಬಕುಳ) ಹೂ, ಸೊರಗಿ ಹೂ ನಮ್ಮ ಪರಂಪರಾಗತ ಸುಗಂಧ ದ್ರವ್ಯವಾಗಿದ್ದು ಲಾವಂಚವೂ ಇದೇ ವರ್ಗಕ್ಕೆ ಸೇರುತ್ತದೆ. ಲಾವಂಚವನ್ನು ಈಗೀಗ ರೈತರು ಸ್ವತಂತ್ರ ವಾಗಿ ಅಥವಾ ಕಾಫಿ, ಕೋಕೋ, ಚಹಾ ತೋಟದಲ್ಲಿಯೂ ಬೆಳೆಯಲಾರಂಭಿಸಿದ್ದಾರೆ. ಹೂ ಬಿಟ್ಟರೂ ಬೀಜದ ಮೂಲಕ ಸಸಿಗಳು ಹರಡದ ಕಾರಣ ಕಳೆ ಸಸ್ಯವಾಗಿ ಹರಡುವ ಭೀತಿಯಿಲ್ಲ. ನಾಟಿಗೆ ಮಳೆಗಾಲವೇ ಸೂಕ್ತ. ಬೆಳೆಗೆ ನೀರು ಗೊಬ್ಬರ ಬೇಕಾಗಿಲ್ಲ. ಬೇರುಗಳಿಗೆ ನೇರ ಮಾರುಕಟ್ಟೆ ಇಲ್ಲದ ಕಾರಣ ನೆರಳಿಗೆ ಒಣಗಿಸಿ ಶುಚಿಗೊಳಿಸಿ ಭಟ್ಟಿ ಇಳಿಸುವಿಕೆಯ ಮೂಲಕ, ಬಾಷ್ಪೀಕರಣ ಮಾಡಿ ತೈಲವನ್ನು ಪಡೆಯುತ್ತಾರೆ. ಭಾಷ್ಪೀಕರಣದಿಂದ ತೈಲ ಪಡೆಯಲು ಕನಿಷ್ಟ14 ತಾಸುಗಳು ಬೇಕಾಗುವುದೇ ಅಲ್ಲದೆ ಕೆಲವೆಡೆ ಮೂರು ದಿನಗಳ ಶ್ರಮವನ್ನೂ ಬೇಡುವುದುಂಟು. ಹೀಗೆ ತೆಗೆದ ತೈಲದಲ್ಲಿ ಸುವಾಸನೆ, ಬಣ್ಣ ಬರಲು ಆರು ತಿಂಗಳು ಭದ್ರವಾಗಿ ಭರಣಿಯಲ್ಲಿ ಮುಚ್ಚಿಡಲಾಗುತ್ತದೆ. ಹೆಕ್ಟೇರಿಗೆ ಗರಿಷ್ಟ ನಾಲ್ಕು ಟನ್ ಬೇರು ದೊರೆಯುವುದಾದರೂ ಕೇಂದ್ರೀಯ ಔಷಧ ಮತ್ತು ಸುಗಂಧ ದ್ರವ್ಯ ಮಂಡಳಿ ಸುಧಾರಿತ ತಳಿ ರೂಪಿಸಿದ್ದು ಹೆಕ್ಟೇರಿಗೆ 21 ಟನ್ ಇಳುವರಿ ನೀಡಿ 14% ತೈಲ ಕೊಡಬಲ್ಲದೆಂದರೆ ನಂಬಲೇ ಬೇಕು. ಬೆಂಗಳೂರಿನ ಯಲಹಂಕ ದ CIMAP ಭೇಟಿ ನೀಡಿದರೆ ಧರಣಿ, ಗುಲಾಬಿ, ಕೇಸರಿ, ವೃದ್ಧಿ, KS1_2, ಖಸ್ 15 ಮೊದಲಾದ ತಳಿಯ ಒಂದೊಂದು ಸಸಿಯು ಎರಡು ರೂ, ಐದು ರೂ ಗಳಿಗೆ ದೊರಕುತ್ತದೆ.
         ಲಾವಂಚದ ಬೇರುಗಳಿಂದ ಹೆಣೆದ ಬೀಸಣಿಗೆಗೆ ನೀರು ಚಿಮುಕಿಸಿ ಗಾಳಿ ಹಾಕುವ ಕ್ರಮ ಮೊಗಲ್ ದೊರೆಗಳ ಕಾಲದಲ್ಲಿತ್ತು. ಪ್ರಭು ಶ್ರೀರಾಮ ಚಂದ್ರ ಸೀತೆ, ಲಕ್ಷ್ಮಣರ ಜೊತೆ ವನವಾಸದಲ್ಲಿದ್ದಾಗ ಕುಡಿಯುವ ನೀರು ಶುದ್ಧೀಕರಿಸಲು ಲಾವಂಚ ಬಳಸುತ್ತಿದ್ದರೆನ್ನಲಾಗುತ್ತದೆ. ಆದ್ದರಿಂದಲೇ ರಾಮಾಂಚ ಎಂಬ ಹೆಸರು ಬಂದಿದೆ ಎಂಬ ಪ್ರತೀತಿಯಿದೆ. ಹಿರಿಯ ಕಾದಂಬರಿಕಾರ SL ಭೈರಪ್ಪನವರ "ಪರ್ವ" ಕಾದಂಬರಿಯಲ್ಲಿ ದ್ರೌಪದಿ ತನ್ನ ಮಕ್ಕಳಿಗೆ ತಂಪಾಗಲೆಂದು ಬೇಸಿಗೆಯಲ್ಲಿ ಕಿಟಕಿಗಳಿಗೆ ಲಾವಂಚದ ಬೇರಿನ ಹೆಣೆದ ಪರದೆ ಹಾಕಿ ಆಗಾಗ ನೀರು ಚಿಮುಕಿಸುತ್ತಿದ್ದಳೆಂದಿದ್ದಾರೆ. ಗುಬ್ಬಿ ಗೋಸಲ ಚನ್ನ ಬಸವೇಶ್ವರರಿಗೆ ಭೀಮನ ಅಮವಾಸ್ಯೆ ಪ್ರಯುಕ್ತ ಲಾವಂಚದ ಅಲಂಕಾರವನ್ನು ಇದೇ ಆಗಸ್ಟ್ 14 ರಂದು ಮಾಡಿದ್ದರು. ತುಮಕೂರಿನಲ್ಲಿ ಶನಿದೇವರಿಗೂ ಲಾವಂಚದ ಬೇರಿನ ಅಲಂಕಾರ ಮಾಡಿ ಪೂಜಿಸುತ್ತಾರೆ. ಉಡುಪಿ ಜಿಲ್ಲೆಯ ದೇವಸ್ಥಾನ ವೊಂದರಲ್ಲಿ ಲಾವಂಚದ ಬೇರು ಪ್ರಸಾದ ರೂಪದಲ್ಲಿ ದೊರಕುವುದಂತೆ. ಭಟ್ಕಳದ "ಉಶಿರಾ" ಕಂಪನಿ ದಶಕಗಳಿಂದ ಲಾವಂಚದ ಕರಕುಶಲ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.
      ದೇವರ ಕಲಾಕೃತಿ, ಯಕ್ಷಗಾನ ಮುಖವಾಡ, ಹೂದಾನಿ, ಹಾರ, ಚಾಪೆ, ವ್ಯಾನಿಟಿ ಬ್ಯಾಗ್, ಪರ್ಸ್, ಮಕ್ಕಳ ಆಟಿಕೆ, ಕುರ್ಚಿ, ಮಂಚವನ್ನೂ ಲಾವಂಚದ ಬೇರಿನಿಂದ ತಯಾರಿಸುತ್ತಾರೆ. ಇದರ ಬೇರಿನ ಟೊಪ್ಪಿಯಂತೂ ಎಲ್ಲರಿಗೂ ಅಚ್ಚುಮೆಚ್ಚು. ಸ್ವಲ್ಪ ನೀರು ಚಿಮುಕಿಸಿ ತಲೆಗೇರಿಸಿದರೆ ಶೀತಲ ಪೆಟ್ಟಿಗೆ ತಲೆಗಿರಿಸಿಂದತೆಯೇ ಸರಿ. ಶೀತ ಸಮಸ್ಯೆ ಇರುವವರು ಕಿವಿನೋವು, ಅಸ್ತಮಾ ಇರುವವರು ಲಾವಂಚದಿಂದ ದೂರವಿದ್ದರೆ ಒಳಿತು.
       ಮಕ್ಕಳೇ, ಇಷ್ಟೆಲ್ಲ ಹೇಳಿದರೂ ಲಾವಂಚದ ಮುಖ್ಯ ಉಪಯೋಗವನ್ನು ನಾನಿನ್ನೂ ಹೇಳಿಯೇ ಇಲ್ಲ ಗೊತ್ತಾ? ನಮ್ಮ ಕಾಲಬುಡವನ್ನೇ ನಾವು ಮೈಸೂರು ಪಾಕ್ ನಂತೆ ಕತ್ತರಿಸುತ್ತಿದ್ದೇವೆ. ಸರಣಿ ಭೂಕುಸಿತ, ಉಕ್ಕಿದ ಪ್ರವಾಹಗಳಿಗೆ ಹಳ್ಳ, ಕೊಳ್ಳ, ನದಿ , ಝರಿಗಳು ದಿಕ್ಕು ಬದಲಿಸುತ್ತಿವೆ. ಅಂತರ್ಜಲ ಪಾತಾಳ ಸೇರಿದೆ. ಮಣ್ಣಿನ ಸವೆತ ಯಾರ ಜಾಗವನ್ನು ಇನ್ನಾರಿಗೋ ತೋರಿಸುತ್ತಿದೆ. ಇವೆಲ್ಲದರ ರಕ್ಷಣೆಯನ್ನು ಈ ಲಾವಂಚವೇ ಮಾಡಬಲ್ಲದು ಗೊತ್ತಾ? ಅದು ಹೇಗೆಂದರೆ ಲಾವಂಚದ ಬೇರುಗಳು ಮಣ್ಣನ್ನು ಹಿಡಿದಿಟ್ಟುಕೊಳ್ಳುವ ಗುಣ ಹೊಂದಿದೆ. ಮಣ್ಣಿನ ಸವಕಳಿ ತಡೆಯುವ ಬಹೂಪಯೋಗಿ ಸಸ್ಯ ಲಾವಂಚ. ಅಂತರ್ಜಲ ಮರು ಪೂರಣವನ್ನೂ ಮಾಡುತ್ತದೆ. ಹುಲ್ಲಿನಲ್ಲಿ ಪ್ರೊಟೀನ್ ಮತ್ತು ಕೊಬ್ಬು ಇರುವುದರಿಂದ ದನಕರುಗಳಿಗೆ ಉತ್ತಮ ಮೇವನ್ನೂ ನೀಡುತ್ತದೆ. ಒಣಗಿಸಿ ದಾಸ್ತಾನು ಮಾಡಿಕೊಳ್ಳಬಹುದು. ಕಡಿಮೆ ವೆಚ್ಚ, ಪರಿಣಾಮ ಹೆಚ್ಚು. ಗದ್ದೆಯ ಬದುಗಳಿಗೆ, ನೀರ ಹರಿವಿನ ಅಂಚುಗಳಿಗೆ ಎಲ್ಲಿ ಬೇಕೆಂದಲ್ಲಿ ಈ ಲಾವಂಚ ನೆಟ್ಟು ಪ್ರಯೋಜನ ಪಡೆಯಬಹುದು. ಒಮ್ಮೆ ನೆಟ್ಟರೆ ಸಾಕು. ಕೆಲವೇ ತಿಂಗಳಲ್ಲಿ ಬೆಳೆದು ಪೊದೆಯಾಗಿ ಹಬ್ಬಿ ರಕ್ಷಣೆ ನೀಡುತ್ತದೆ. ಬೇರುಗಳು ಖನಿಜಗಳಿಂದ ಸಮೃದ್ಧವಾಗಿರುತ್ತವೆ. ಔಷಧಿಗಾಗಿ, ಸುಗಂಧ ದ್ರವ್ಯಕ್ಕಾಗಿ, ಸೌಂದರ್ಯವರ್ಧಕವಾಗಿ ಬಳಕೆಗೆ ಅಲ್ಲವಾದರೂ ಹಿತ್ತಲಲ್ಲಿ ಒಂದು ಲಾವಂಚದ ಸಸಿ ಇರಲಿ.. ಏನಂತೀರಾ?
    ಸರಿ ಮಕ್ಕಳೇ, ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗುತ್ತೇನೆ.. ನಮಸ್ಕಾರ.
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************


Ads on article

Advertise in articles 1

advertising articles 2

Advertise under the article