-->
ಜಗಲಿ ಕಟ್ಟೆ : ಸಂಚಿಕೆ - 61

ಜಗಲಿ ಕಟ್ಟೆ : ಸಂಚಿಕೆ - 61

ಜಗಲಿ ಕಟ್ಟೆ : ಸಂಚಿಕೆ - 61
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 


ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ


ಬರದಿಹುದರೆಣಿನಿಕೆಯಲಿ 
ಬಂದಿಹುದ ಮರೆಯದಿರು ।
ಗುರುತಿಸೊಳಿತಿರುವುದನು 
ಕೇಡುಗಳ ನಡುವೆ ।।
ಇರುವ ಭಾಗ್ಯವ ನೆನೆದು 
ಬಾರೆನೆಂಬುದನು ಬಿಡು ।
ಹರುಷಕದೆ ದಾರಿಯೆಲೊ – ಮಂಕುತಿಮ್ಮ ।।
    ಕೈಗೆ ಸಿಗದೇ ಇರುವುದರ ನಿರೀಕ್ಷೆಯಲ್ಲಿ ಕೈ 
ಯಲ್ಲಿರುವುದನ್ನು ಮರೆಯದಿರು. ನಮಗೆ ಗೋಚರಿಸುವ ಬಹಳಷ್ಟು ಕೇಡುಗಳ ಮದ್ಯೆ ಒಳ್ಳೆಯದನ್ನು ಗುರುತಿಸು. ಕೈಗೆ ಸಿಗುವುದಿಲ್ಲ ಎನ್ನುವ ಚಿಂತೆಯನ್ನು ಬಿಟ್ಟು ಕೈಯಲ್ಲೇ ಇರುವ ಭಾಗ್ಯವನ್ನು ತೃಪ್ತಿಯಿಂದ ಅನುಭವಿಸು. ಆನಂದಕ್ಕೆ, ಸಂತೋಷಕ್ಕೆ ಇದುವೇ ದಾರಿ ಎಂದು ಮಾನ್ಯ ಡಿ. ವಿ. ಜಿಯವರು ಹೇಳಿರುವ ಸಾಲು ನೆನಪಾಗಲು ಒಂದು ಕಾರಣ ಇದೆ. 
       ಕೆಲ ವರ್ಷಗಳ ಹಿಂದೆ ಮಕ್ಕಳ ಶಿಬಿರದಲ್ಲಿ ಸಿಕ್ಕಿದ್ದ ಹುಡುಗನೊಬ್ಬ ಕೆಲ ದಿನಗಳ ಹಿಂದೆ ಮತ್ತೆ ಒಂದು ಕಡೆ ಸಿಕ್ಕಿ ಮಾತನಾಡಲು ಶುರು ಮಾಡಿದ. ಬಹಳ ಗಂಭೀರ ಧ್ವನಿಯಲ್ಲಿ.... "ಸರ್ ದಾರಿಯಲ್ಲಿ ಹೋಗೋ ಕೆಲವು ಮಕ್ಕಳು, ನನ್ನನ್ನು ದಡ್ಡ, ಪೆದ್ದ ಅಂತಾರೆ... ಏನು ತೊಂದರೆ ಮಾಡದೆ ನನ್ನಷ್ಟಕ್ಕೇ ಹೋಗ್ತಿರುವಾಗ ಈ ರೀತಿ ಕೀಳು ಮಾಡುವುದು ಯಾಕೆ..? ಮನೆಯಲ್ಲಿ ಯಾಕೆ ಅವರಿಗೆ ಸಂಸ್ಕಾರ ಕಲಿಸಿಕೊಡಲ್ಲ... ? ಶಾಲೆಯಲ್ಲಿ ಯಾಕೆ ಅವರಿಗೆ ಬುದ್ಧಿ ಹೇಳಲ್ಲ...?" ಬಹಳ ಸಿಟ್ಟಿನಿಂದ ಮಾತು ಮುಂದುವರಿಸಿದ. "ಅಲ್ಲ ನನಗೆ ಅವರ ಮೇಲೆ ಕಂಪ್ಲೇಂಟ್ ಕೊಡೋಣ ಅನ್ನಿಸ್ತಿದೆ... ವಿಡಿಯೋ ಮಾಡಿ ದಾಖಲೆ ಇಟ್ಟು ಬೇರೆಯವರಿಗೆ ತಿಳಿಸಬೇಕು ಅಂತ ಅನಿಸ್ತಿದೆ..." ಹೀಗೆಲ್ಲ ತನ್ನ ವೇದನೆಯನ್ನು ಅಂತರಾಳದಿಂದ ಹೊರಹಾಕಿ ತನ್ನ ಅಸಹಾಯಕತೆಯನ್ನು ತೋರಿಸಿದ.
       "ಹೌದು ನಾನು ಸಣ್ಣ ತರಗತಿಯಲ್ಲಿರುವಾಗ ತುಂಬಾ ಕಲಿತಿದ್ದೆ.. ತುಂಬಾ ಕಲಿತಿದ್ದುದೇ ತಪ್ಪು ಅನ್ನಿಸಿತು.. ಇನ್ನೂ ಓದು, ಮಾರ್ಕು ಇನ್ನೂ ಜಾಸ್ತಿ ಬರ್ಲಿ ಅಂದು ಆಟಕ್ಕೂ ಕಳಿಸದೆ, ಚಿತ್ರಕ್ಕೂ ಸೇರಿಸದೆ ಒಂದೇ ಸವನೆ ಪಾಠ ಪಾಠ ಎಂದು ಬಂಧಿಸಿಬಿಟ್ರು... ಪಂಜರದೊಳಗಿನ ಪಕ್ಷಿಯಾದೆ... ಮನಸೆಲ್ಲಾ ಕೀಳರಿಮೆಯೇ ತುಂಬ್ಕೊಂಡಿತು. ಆಲೋಚನೆಗಳೆಲ್ಲ ಋಣಾತ್ಮಕವೇ ಆಯಿತು. ಭಾವನೆಗಳೇ ಸತ್ತುಹೋದ ಹಾಗೆ... ಕಲಿಯುವ ಆಸಕ್ತಿ ಅಷ್ಟಕ್ಕಷ್ಟೇ... ಗಣಿತ ಕಬ್ಬಿಣದ ಕಡಲೆಯಾಯಿತು. ಶಾಲಾ ಶಿಕ್ಷಕರಿಂದ "ನೀನು ಎಲ್ಲಿ ಹೋದ್ರೂ ಉದ್ಧಾರ ಆಗಲ್ಲ ಅನ್ನುವ ಹಣೆಪಟ್ಟಿ. ಹೀಗೆಲ್ಲಾದರೂ ಸಹಿಸಿಕೊಂಡು ಮುಂದುವರಿಯುತ್ತಿದ್ದೇನೆ. ಕೆಲವೊಮ್ಮೆ ಸತ್ತು ಬಿಡೋಣ ಅನಿಸಿದ್ದೂ ಇದೆ....!!" ಹೀಗೆ ಆ ಬಾಲಕ ಹೇಳೋ ಭಾವನಾತ್ಮಕವಾದ ಮಾತುಗಳು ಒಂದು ಕ್ಷಣ ನನ್ನನ್ನು ಸ್ತಬ್ಧಗೊಳಿಸಿ ಮರುಕ ಹುಟ್ಟಿಸಿತು.
       ಆತನ ತಂದೆ ಡಾಕ್ಟರ್... ತಾಯಿ ಗೃಹಿಣಿ ಇಬ್ಬರೂ ಸರ್ಟಿಫಿಕೇಟ್ ವಿದ್ಯಾವಂತರು. ಮಗನ ಸಹಜ ನಡೆಗೆ ಸ್ಪಂದಿಸದೆ ತಮ್ಮ ಮೂಗಿನ ನೇರಕ್ಕೆ ಮಗುವನ್ನು ಬೆಳೆಸಲು ಹೊರಟವರು. ತಂದೆಯಂತೆ ಮಗ ಡಾಕ್ಟರ್ ಆಗಬೇಕು ಅನ್ನುವ ಕನಸು ಕಂಡು, ದೊಡ್ಡ ದೊಡ್ಡ ಕಲ್ಪನೆಗಳನ್ನು ಕಟ್ಟಿ ಮಗನನ್ನು ತಮ್ಮದೇ ದೃಷ್ಟಿ ಕೋನದಲ್ಲಿ ಕಾಣಲು ಬಯಸಿದರು.. 
     ಆದರೆ ಮಗನ ನಿಲುವುಗಳೇ ಭಿನ್ನ. ಅಪ್ಪ ಅಮ್ಮ ಎಣಿಸಿದ ವೇಗಕ್ಕೆ ಸಾಗುವ ಧೈರ್ಯ ಸಾಲದೆ ಕುಬ್ಜನಾಗಿ ನಿಲ್ಲುವಂತಾಗಿದ್ದು ದುರಾದೃಷ್ಟಕರ. ಮಕ್ಕಳು ತನ್ನ ಹೆತ್ತವರನ್ನು ಪೂರ್ಣ ಅರ್ಥೈಸಿಕೊಳ್ಳುತ್ತಾರೆ. ಅಪ್ಪ ಅಮ್ಮನ ನಿರೀಕ್ಷೆಗೆ ತಕ್ಕುದಾದ ಮಗ ನಾನು ಅಲ್ಲ ಅನ್ನುವ ಪ್ರಜ್ಞೆಗೆ ತಂದೆ ತಾಯಿ ನೇರ ಹೊಣೆಯಾಗುತ್ತಿರುವುದನ್ನು ಕಂಡು ದುರಂತವೆನಿಸಿತು..!! 
       ಹೌದು ಆ ಬಾಲಕನ ಪ್ರತಿಯೊಂದು ಮಾತುಗಳ ಹಿಂದೆಯೂ ಆತ್ಮವಿಶ್ವಾಸದ ನಡೆಯಿತ್ತು. ಆ ಮಾತುಗಳಲ್ಲಿ ಪಕ್ವತೆ ಇತ್ತು. ಸಾಗುವ ದಾರಿಗೆ ತಂದೆ ತಾಯಿ ಬೆಂಗಾವಲಾಗಿ ಸದಾ ಇರಬೇಕೆನ್ನುವ ಹಂಬಲ ಬಲವಾಗಿತ್ತು. ಆದುದರಿಂದ ಮಕ್ಕಳ ಸಾಮರ್ಥ್ಯ, ಮಕ್ಕಳ ಅಭಿರುಚಿ, ಮಕ್ಕಳ ಕಾರ್ಯಕ್ಷೇತ್ರಗಳನ್ನು ಗುರುತಿಸಿ ಪ್ರೋತ್ಸಾಹ ಕೊಡುವಂತಹ ತಂದೆ ತಾಯಿಯರಾಗಬೇಕಾಗಿದೆ. ಪ್ರತಿಯೊಂದು ಮನೆಯ ಮಗು ಕೂಡಾ ಭಿನ್ನ ಹಾಗೂ ಶ್ರೇಷ್ಠ ಎಂದು ಬೆಳೆಸುವ ಮೂಲಕ ಮಕ್ಕಳ ನೆಮ್ಮದಿಗೆ ಕಾರಣರಾಗೋಣ.... ನಮಸ್ಕಾರಗಳು
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************