ಜೀವನ ಸಂಭ್ರಮ : ಸಂಚಿಕೆ - 151
Sunday, August 18, 2024
Edit
ಜೀವನ ಸಂಭ್ರಮ : ಸಂಚಿಕೆ - 151
ಲೇಖಕರು : ಎಂ.ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ.... ಇಂದು ಪಾತಂಜಲ ಯೋಗ ಸೂತ್ರದ ಎರಡನೇ ಪಾದ, ಎರಡನೇ ಮೆಟ್ಟಿಲಿನ, ಶೌಚದಲ್ಲಿ ಬರುವ ಮೂರನೇ ಉಪಾಂಗ ತಪಸ್ಸಿನ ಬಗ್ಗೆ ತಿಳಿದುಕೊಳ್ಳೋಣ. ತಪಸ್ಸು ಎಂದರೆ ಪಾತಂಜಲರ ಪ್ರಕಾರ ಸಹಿಸಿಕೊಳ್ಳುವುದು. ಕಷ್ಟ ಸಹಿಷ್ಣುತೆ, ಕಷ್ಟಗಳನ್ನು ಸಹಿಸಿಕೊಳ್ಳುವುದು. ಕಷ್ಟಗಳನ್ನು ತೆಗೆದುಹಾಕುವುದಲ್ಲ, ಕಷ್ಟಗಳು ಬಂದರೆ ಸಹಿಸಿಕೊಳ್ಳುವ ಗುಣ. ಇದು ಬಹಳ ದೊಡ್ಡದು. ಜೀವನದಲ್ಲಿ ಕಷ್ಟಗಳು ಬರುತ್ತದೆ. ಕಷ್ಟಪಡದೆ ಏನು ಸಾಧನೆ ಮಾಡಲು ಸಾಧ್ಯವಿಲ್ಲ. ಕಷ್ಟಗಳನ್ನು ಎದುರಿಸುವುದಲ್ಲ, ಸಹಿಸಿಕೊಳ್ಳುವುದು. ಒಬ್ಬ ಮನುಷ್ಯ ಹೊರೆ ಹೊತ್ತ ಅಂದರೆ ಮನೆಗೆ ಬರುವವರೆಗೆ ಸಹಿಸಿಕೊಳ್ಳಬೇಕು. ಹೇಗೆ ಸಹಿಸಿಕೊಳ್ಳಬೇಕು?. ಅದು ಮಹತ್ವದ್ದು. ಉದಾಹರಣೆಗೆ, ಒಬ್ಬ ಸಣ್ಣ ಬಾಲಕಿ, ಆಕೆಯ ಸೊಂಟದಲ್ಲಿ ಮಗು ಇತ್ತು. ಆಕೆ ಸಣ್ಣವಳು. ಆ ಮಗು ಬಹಳ ದಪ್ಪ ಇತ್ತು. ಅದನ್ನು ಸೊಂಟದಲ್ಲಿ ಎತ್ತಿಕೊಂಡಿದ್ದಳು. ಆ ಮಗು ಸೊಂಟದಿಂದ ಕೆಳಕ್ಕೆ ಜಾರುತ್ತಿತ್ತು. ಆಕೆ ಆ ಮಗುವನ್ನು ಮತ್ತೆ ಮತ್ತೆ ಎತ್ತಿ ಸೊಂಟದ ಮೇಲೆ ಇಡುತ್ತಿದ್ದಳು. ಎದುರಿಗೆ ಒಬ್ಬ ಒಳ್ಳೆಯ ಮನುಷ್ಯ ಬಂದನು. ಆತ ಆ ಬಾಲಕಿಗೆ ಹೀಗೆ ಹೇಳಿದನು. ನೀನು ಇನ್ನು ಸಣ್ಣವಳು. ಆ ಹುಡುಗ ಭಾರ ಆಗಿರಬೇಕಲ್ಲ ಎಂದನು. ಆಗ ಬಾಲಕಿ ಹೇಳುತ್ತಾಳೆ, ಆತ ಹುಡುಗ ಅಲ್ಲ. ನನ್ನ ತಮ್ಮ. ಹುಡುಗ ಆದರೆ ಭಾರ ಆಗ್ತಿದ್ದ, ಆತ ನನ್ನ ತಮ್ಮ ಆಗಿರುವುದರಿಂದ ಬಾರ ಹೇಗಾಗುತ್ತಾನೆ?. ಎಂದಳು. ನೋಡುವ ದೃಷ್ಟಿಕೋನ ಹೇಗಿದೆ?. ನಮ್ಮದಲ್ಲ ಅಂದಾಗ ಭಾರ ಆಗುತ್ತದೆ. ನಮ್ಮದು ಅಂದಾಗ ಅದು ಹೇಗೆ ಭಾರವಾಗುತ್ತದೆ?. ಈಗ ಒಂದು ವಸ್ತು ಎತ್ತಿ ಆ ಕಡೆ ಇಡಿ ಅಂದರೆ ಭಾರ. ಇದನ್ನು ತೆಗೆದುಕೊಂಡು ಮನೆಗೆ ಹೋಗಿ ಅಂದರೆ... ಇದೆಲ್ಲ ಮನಶಾಸ್ತ್ರ. ಕಲಿಯೋದು. ನಮ್ಮದು ಅಂದಾಗ ಮನಸ್ಸು ತಯಾರಾಗುತ್ತದೆ. ದೇವಸ್ಥಾನದ ಮುಂದೆ ಗುಂಡು ಇಟ್ಟಿರುತ್ತಾರೆ. ಆ ಕಲ್ಲಿಗೆ ಕೇಳ್ತೀವಿ, ನನ್ನ ಕೆಲಸ ಆದರೆ ಮೇಲೆ ಬಾ, ಆಗದಿದ್ದರೆ ಭಾರ ಆಗು ಎನ್ನುತ್ತೇವೆ. ಹಾಗಂತ ಹೇಳಿ ತಟ್ಟನೆ ಎತ್ತಿ ಬಿಡುತ್ತೇವೆ. ಆಯ್ತು ಕೆಲಸ, ಸಂತೋಷ. ಕಲ್ಲು ಗುಂಡುಗೆ ತಾನು ಇದ್ದಷ್ಟೇ ತೂಕ. ನೀನು ಚುರುಕು, ಮಂದ ಅಷ್ಟೇ. ಕಲ್ಲು ಏನಾದರೂ ತೂಕ ಕಡಿಮೆ ಆಗುತ್ತದೆ?. ಅದು ಹೆಚ್ಚೂ ಆಗುವುದಿಲ್ಲ. ಕಡಿಮೆಯೂ ಆಗುವುದಿಲ್ಲ. ಅದು ಆತನ ಉತ್ಸಾಹ ಅದರೊಂದಿಗೆ ಅವಲಂಬಿಸಿದೆ. ಆ ಬಾಲಕಿಗೂ ತಮ್ಮ ಅನ್ನುವ ಉತ್ಸಾಹ, ಅದಕ್ಕೆ ಭಾರ ಆಗಲಿಲ್ಲ. ನಾವು ಭಾರವನ್ನು ಹೇಗೆ ಹಗುರ ಮಾಡಿಕೊಳ್ಳಬೇಕು. ಅನ್ನೋದಕ್ಕೆ ಉದಾಹರಣೆ. ಪ್ರಪಂಚವನ್ನು ಹಗುರ ಮಾಡಿಕೊಳ್ಳುವುದಕ್ಕೂ ಬರುತ್ತದೆ. ಉತ್ಸಾಹ ಇದ್ದರೆ ಪ್ರಪಂಚ ಹಗುರವಾಗುತ್ತದೆ. ನಿರುತ್ಸಾಹ ಇದ್ದರೆ ಭಾರವಾಗುತ್ತದೆ. ಉತ್ಸಾಹ ಇಲ್ಲದೆ ಇದ್ರೆ ಎತ್ತುವುದಕ್ಕೆ ಆಗುವುದಿಲ್ಲ. ಮದುವೆಯಾಗೊ ಆಸೆ ಇದ್ದರೆ ತಕ್ಷಣ ಒಪ್ಪಿಗೆ ಕೊಡ್ತಾರೆ. ಉತ್ಸಾಹ ಇಲ್ಲ ಅಂದರೆ ನೆಪ ಹೇಳುತ್ತಾರೆ. ಅದು ಭಾರ ಆಗುತ್ತದೆ. ಪ್ರಪಂಚ ಇದ್ದಹಾಗೆ ಇರುತ್ತದೆ. ಉತ್ಸಾಹ ಇದ್ದರೆ ಪ್ರಪಂಚ ಹಗುರವಾಗುತ್ತದೆ. ನಿರುತ್ಸಾಹ ಇದ್ದರೆ ಪ್ರಪಂಚ ಭಾರವಾಗುತ್ತದೆ. ಪಾತಂಜಲ ಮಹರ್ಷಿ ಹೇಳುತ್ತಾನೆ, ಉತ್ಸಾಹದಿಂದ ಕಷ್ಟಗಳನ್ನು ಎದುರಿಸಿದರೆ, ಕಷ್ಟಗಳು ಹಗುರವಾಗುತ್ತದೆ. ಎಂತಹ ಕಷ್ಟವಾದರೂ ಉತ್ಸಾಹ ಇದ್ದರೆ, ಕಷ್ಟಗಳು ಹಗುರವಾಗುತ್ತದೆ.
ಒಬ್ಬ ಮನುಷ್ಯ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಬೆಳಗ್ಗೆ 5:00 ಗಂಟೆಗೆ ಎದ್ದು ಮನೆಗೆ ಏನೇನು ಬೇಕು ಒದಗಿಸಿ ಕಚೇರಿಗೆ ಬರುತ್ತಿದ್ದಾನೆ. ಕಚೇರಿ ಕೆಲಸ ಆತನಿಗೆ ಉತ್ಸಾಹ ಇರಲಿಲ್ಲ. ಅದು ಆತನಿಗೆ ಭಾರ ಆಗುತ್ತಿತ್ತು. ತನ್ನ ಮನೆ ಕೆಲಸದಲ್ಲಿ ಕಠಿಣ ಕೆಲಸ ಮಾಡುತ್ತಿದ್ದರು ಏಕೆ? ಅದು ತನ್ನದು ಅನ್ನುವ ಉತ್ಸಾಹ ಕೆಲಸ ಹಗುರ ಮಾಡುತ್ತದೆ. ಮನೆ ಕೆಲಸಕ್ಕೆ ಬೆಳಿಗ್ಗೆ 5:00 ಗಂಟೆಗೆ ಹೋಗುತ್ತಿದ್ದನು. ಕಚೇರಿಗೆ 10 ಗಂಟೆಗೆ ಹೋಗಬೇಕು ಆದರೆ ಹತ್ತು ಮೂವತ್ತಕ್ಕೆ ಹೋಗುತ್ತಿದ್ದಾನೆ. ಕಷ್ಟಗಳು ಹಗುರ ಆಗೋದು ಉತ್ಸಾಹದಿಂದ. ನಾವು ಬಾಲಕರಿದ್ದಾಗ ವ್ಯವಸಾಯ ಮಾಡುತ್ತಿದ್ದೆವು. ನಮ್ಮಲ್ಲಿಗೆ ಒಬ್ಬ ಕೆಲಸಕ್ಕೆ ಬರುತ್ತಿದ್ದನು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಒಂದು ಕುಂಟೆ ಉಳುಮೆ ಮಾಡುತ್ತಿದ್ದನು. ಅದೇ ತನ್ನ ಕೆಲಸ ಮಾಡುವಾಗ ಐದು ಕುಂಟೆ ಉಳುಮೆ ಮಾಡುತ್ತಿದ್ದನು. ನನ್ನದು ಅಂದಾಗ ಉತ್ಸಾಹ ಹೆಚ್ಚು ಇರುತ್ತದೆ. ಬೇರೆಯವರದು ಅಂದಾಗ ಉತ್ಸಾಹ ಕಡಿಮೆ. ನಮ್ಮ ಕೆಲಸ ಮಾಡುವಾಗ ಮನಸ್ಸು ಒಂದು ತರಹ ಇರುತ್ತದೆ. ಬೇರೆಯವರ ಕೆಲಸ ಮಾಡುವಾಗ ಮನಸ್ಸು ಬದಲಾಗುತ್ತದೆ.
ಪಾತಂಜಲ ಮಹರ್ಷಿ ಹೇಳುವುದು ಮನಸಾರೆ ಕಾರ್ಯ ಮಾಡಿದರೆ ಕಷ್ಟ ಕಡಿಮೆಯಾಗುತ್ತದೆ. ಮನಸ್ಸು ಇಲ್ಲದೆ ಮಾಡಿದರೆ, ಇಲ್ಲದ ಕಷ್ಟಗಳು ಬರುತ್ತವೆ, ಭಾರ ಆಗುತ್ತದೆ. ಆದ್ದರಿಂದ ಕಷ್ಟಗಳನ್ನು ಉತ್ಸಾಹದಿಂದ ಕಡಿಮೆ ಮಾಡಬಹುದು. ತಪಸ್ಸು ಅಂದರೆ ಭಾರಿ ಕೆಲಸ ಮಾಡುವುದು. ಕಷ್ಟಗಳನ್ನು ತಡೆದುಕೊಳ್ಳುವುದು, ಉತ್ಸಾಹ ತುಂಬಿಕೊಂಡಿರುವುದು. ಇದರಿಂದ ಯೋಗವಾಗುತ್ತದೆ. ಕೆಲವರು ಹೇಳುತ್ತಾರೆ 50 ವರ್ಷ ತಪಸ್ಸು ಮಾಡಿದೆ, ಅದಕ್ಕೆ ಈ ಮನೆ ಕಟ್ಟಿಸಿದೆ. ವಿದ್ಯೆ ಗಳಿಸಿದೆ, ಅಧಿಕಾರ ಪಡೆದೆ ಎಂದು, ಕಷ್ಟಗಳನ್ನು ವಿವರಿಸಿದ. ಹಿಂದೆ ಮುಂದೆ ನೋಡಲಿಲ್ಲ , ಈಗ ಸುಖ ಸಿಗುತ್ತಾ ಇದೆ ಎನ್ನುತ್ತಾರೆ. ಮೊದಲು ಏನೂ ಇರಲಿಲ್ಲ, ಈಗ ಎಲ್ಲಾಇದೆ.. ತಪಸ್ಸು ಅಲ್ಲವೇ ಮಕ್ಕಳೇ...?
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
*******************************************