-->
ಜಗಲಿ ಕಟ್ಟೆ : ಸಂಚಿಕೆ - 60

ಜಗಲಿ ಕಟ್ಟೆ : ಸಂಚಿಕೆ - 60

ಜಗಲಿ ಕಟ್ಟೆ : ಸಂಚಿಕೆ - 60
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 


ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ


ಭೀಕರ ಮಳೆಯ ಕಾರಣದಿಂದಾಗಿ ಕೆಲವು ಕಡೆ ಶಾಲಾ ಮಕ್ಕಳಿಗೆ ವಾರಾನುಗಟ್ಟಲೆ ರಜೆ ಸಿಕ್ಕಿತ್ತು. ಮನೆಯಿಂದ ಹೊರಗಡೆ ಹೋಗಲಾರದಷ್ಟು ಮಳೆಯು ಅವಾಂತರ ಸೃಷ್ಟಿಸಿತ್ತು. ರಜೆ ಅಂದ ಕೂಡಲೇ ಮನೆಯಲ್ಲಿ ಸುಮ್ಮನೆ ಕೂರುವುದು ಒಂದು ರೀತಿಯ ಸಜೆ. ಟಿವಿ, ಕಂಪ್ಯೂಟರ್, ಮೊಬೈಲ್ ಆಟ ಅದರ ಸಹವಾಸ ಇನ್ನೂ ಕಷ್ಟ. ಆದರೆ ಮಕ್ಕಳಲ್ಲಿ ಸದಭಿರುಚಿಯ ಹವ್ಯಾಸವನ್ನು ಎಲ್ಲರೂ ಇಷ್ಟಪಡುತ್ತಾರೆ. ಅದೇ ಕಾರಣಕ್ಕೆ ರಜೆಯನ್ನು ಏನಾದರೂ ಒಂದು ಚಟುವಟಿಕೆಯ ಮೂಲಕ ಸದುಪಯೋಗಪಡಿಸಿಕೊಳ್ಳಲಿ ಎಂದು ಮಕ್ಕಳ ಜಗಲಿಯಲ್ಲಿ ಮಳೆಯ ಬಗ್ಗೆನೇ ಟಾಸ್ಕ್ ನೀಡಿದ್ದೆವು. "ಮಳೆಯ ಫಜೀತಿ ಪ್ರಸಂಗ" ಎನ್ನುವುದು ವಿಷಯವಾಗಿತ್ತು. ಮಕ್ಕಳು ಮಳೆಯ ಕಾರಣದಿಂದ ಅನುಭವಿಸಿದ ಯಾವುದಾದರೂ ಒಂದು ಘಟನೆಯನ್ನು ಕುರಿತು ಬರೆಯುವುದಾಗಿತ್ತು. ಆದರೆ ಬರೆದು ವಾಟ್ಸಪ್ ಮೂಲಕ ಕಳಿಸುವ ಅವಧಿ ಬಹಳ ಕಡಿಮೆ ಇತ್ತು. ಲೇಖನವನ್ನು ಅಂದೇ ರಾತ್ರಿಯೊಳಗಡೆ ಕಳುಹಿಸಿಕೊಡಬೇಕೆಂದು ಸೂಚಿಸಿದ್ದೆವು.
       
ಮಕ್ಕಳ ಆಸಕ್ತಿದಾಯಕವಾದ ಭಾಗವಹಿಸುವಿಕೆ ನಮಗೆ ನಿಜವಾಗಲೂ ಖುಷಿ ಅನಿಸಿತು. ತುಂಬಾ ಸಂಖ್ಯೆಯಲ್ಲಿ ಮಕ್ಕಳು ಭಾಗವಹಿಸಿದರು. ಮಕ್ಕಳು ತಮಗೆ ಅನುಭವವಾದ ಸಂಗತಿಗಳನ್ನು ತಮ್ಮ ಸಾಮರ್ಥ್ಯಕ್ಕನುಗುಣವಾಗಿ ಬರಹದ ಮೂಲಕ ಕಳುಹಿಸಿದರು. ಇನ್ನು ಕೆಲವರು ಮಳೆಯ ಸಾಧಕ- ಬಾಧಕಗಳನ್ನು ಗಳನ್ನು ಕವಿತೆ ಮೂಲಕ ವ್ಯಕ್ತಪಡಿಸಿದರು. ಬರಹ ಅಥವಾ ಕವಿತೆಗಳನ್ನು ವಿಮರ್ಶಿಸುವುದಕ್ಕಿಂತಲೂ ಅವರು ಬರೆದ ಮುಗ್ಧ ಬರಹಗಳನ್ನು ಆನಂದಿಸುವುದೇ ಒಂದು ಚೆಂದ.

ಹಲವರ ಬರಹಗಳಲ್ಲಿ ತಮ್ಮ ಗ್ರಾಮೀಣ ಭಾಗದ ಸೊಗಡು ಕಂಡುಬಂದಿತ್ತು. ತಮ್ಮ ಹಳ್ಳಿಯ ಪ್ರದೇಶಗಳಲ್ಲಿ ಮಳೆಯ ಕಾರಣದಿಂದಾಗುವ ತೊಂದರೆಗಳು ಹಾಗೂ ಅದನ್ನು ಮೀರಿ ಬದುಕುವ ಅಥವಾ ಧನಾತ್ಮಕವಾಗಿ ಸ್ವೀಕರಿಸುವ ಮನೋಭಾವ ಬೆಳ್ತಂಗಡಿಯ ವಿದ್ಯಾರ್ಥಿನಿ ಪೂರ್ತಿ ಅವರ ಬರಹದಲ್ಲಿ ಮೂಡಿದೆ. ಶಾಲಾ ಕಾಲೇಜಿಗೆ ಹೋಗುವ ಗಡಿಬಿಡಿ ಯಲ್ಲಿ ಆಕಸ್ಮಿಕವಾಗಿ ಸಿಗುವ ಮಳೆಯ ಕಾರಣದ ರಜೆಗಳು ನಿರಾಶ ಭಾವವನ್ನು ಮೂಡಿಸಿದರೆ ಇವತ್ತು ರಜೆ ಇರಬಹುದೇನೋ ಎನ್ನುವ ಕಾತುರದ ಮನೋಭಾವಗಳು ಕೂಡ ಮಕ್ಕಳ ಮುಗ್ಧ ಮನಸ್ಸನ್ನು ಪ್ರತಿಬಿಂಬಿಸುವ ಬರಹಗಳು ಪ್ರಣಮ್ಯ ಜಿ ಇವರ ಲೇಖನದಲ್ಲಿ ಮೂಡಿಬಂದಿತ್ತು. ದೂರ ದೃಷ್ಟಿ ಇಲ್ಲದ ಕಾಮಗಾರಿಗಳು ಹಾಗೂ ಅವುಗಳಿಂದಾಗುವ ತೊಂದರೆಗಳನ್ನು ವಿಮರ್ಶಿಸುತ್ತಾ ಹೀಗೂ ಮಾಡಬಹುದಿತ್ತಲ್ಲ ಎನ್ನುವ ಯೋಚನೆ ಮಾಡುವ ಬರಹ ಸಾತ್ವಿಕ್ ಗಣೇಶ್ ಇವರಿಂದ.. ಮಳೆಯಿಂದ ಆಟವಾಡಲು ತೊಂದರೆ ಪಡುವ ಮಕ್ಕಳ ಮನಸ್ಸನ್ನು ಬಹಳ ಚಂದವಾಗಿ ವ್ಯಕ್ತಪಡಿಸಿದ ಅಭಿನವರಾಜ್ ಪಟ್ಟೆ ಹಾಗೂ ಅಭಿನವರಾಜ್ ಪಿ ಎನ್, ಮಳೆಯನ್ನು ವೈವಿಧ್ಯ ಪ್ರಕಾರದಲ್ಲಿ ಅನುಭವಿಸಿದ ದಿಯಾ, ಕಿಂಜಲ್, ಕಾರ್ತಿಕ್, ಹಿಮಾನಿ ಎನ್ ಶೆಟ್ಟಿ, ಕಾರ್ತಿಕ್ ಕೇಶವ ಹೆಗಡೆ, ಅಭಿರಾಮ. ಕೆ , ಅಪೂರ್ವ , ಶ್ರುತರಾಜ್ ಕೆ ಆರ್, ಪಾರ್ಥ ವಿ ರೈ, ಹಾರ್ಧಿಕ್ ಆರ್ , ಭವಿಕ್ ಎಸ್. ಪಿ , ಅಕ್ಷರ ಪಟವಾಲ್, ಜನನಿ ಪಿ, ಫಾತಿಮತ್ ಶಿಫಾನ, ಧನ್ವಿ ರೈ ಕೋಟೆ, ಶ್ರುತಿಕಾ, ಚೈತನ್ಯ ಬಿ ಎನ್, ಶ್ರಾವ್ಯ, ಸಾಕ್ಷಿ, ಅಖ್ಯಾತ್. ರೈ, ಲಕ್ಷಣ್ಯ ಜಿ ಕೆ, ಆಶಿತಾ ರೈ, ಇನ್ನು ಹಲವಾರು ವಿದ್ಯಾರ್ಥಿಗಳು ಕಾವ್ಯಶ್ರೀ, ದಿವ್ಯಶ್ರೀ, ಆತ್ಮಿಕಾ ರೈ, ಶೋಭಿತ್, ಪಯಸ್ವಿನಿ, ಅಂಕಿತ, ಫಾತಿಮತ್ ಲಾಮಿಅಃ, ಸುಧನ್ವ ಎಸ್ ಹೊಳ್ಳ, ವೀಕ್ಷಿತಾ, ರಿಧಿ, ಹೀಗೆ ಕವನದ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಮತ್ತು ಪ್ರೋತ್ಸಾಹ ಕೊಟ್ಟ ಶಿಕ್ಷಕರಿಗೆ ಹಾಗೂ ಪೋಷಕರಿಗೆ ಮಕ್ಕಳ ಜಗಲಿಯ ಪರವಾಗಿ ವಿಶೇಷವಾದ ಧನ್ಯವಾದಗಳು.

ಅಂದ ಹಾಗೆ 2023 ಸಾಲಿನ ಕಥಾಸಿರಿ ಹಾಗೂ ಕವನ ಸಿರಿ ಪ್ರಶಸ್ತಿ ವಿಜೇತರ ಪ್ರಶಸ್ತಿ ಪತ್ರಗಳನ್ನು ಕಳುಹಿಸಿಕೊಡಲಾಗಿದೆ. ಇನ್ನು ಮಕ್ಕಳ ಜಗಲಿ ಕಲಾಪ್ರಶಸ್ತಿ - 2023 ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ಕಳುಹಿಸಿಕೊಡಲು ಬಾಕಿ ಇದೆ. ಸದ್ಯದಲ್ಲೇ ಕಳುಹಿಸಿಕೊಡಲಿದ್ದೇವೆ.. 

2024 ನೇ ಸಾಲಿನ 3ನೇ ವರ್ಷದ ರಾಜ್ಯಮಟ್ಟದ ಕಥಾ ಸಿರಿ ಹಾಗೂ ಕವನ ಸಿರಿ ಸ್ಪರ್ಧೆಗೆ ಸಿದ್ಧತೆ ನಡೆಸ್ತಾ ಇದ್ದೇವೆ. ಮಕ್ಕಳಲ್ಲಿ ಬರೆಯುವ ಆಸಕ್ತಿಯನ್ನು ಇಮ್ಮಡಿಗೊಳಿಸಲು ಈ ತರಹದ ಸ್ಪರ್ಧೆಗಳು ಅನುಕೂಲವಾಗಲೆಂದು ನಮ್ಮ ಉದ್ದೇಶ. ಮೂರನೇ ವರ್ಷದ ಸ್ಪರ್ಧೆಯಲ್ಲಿ ತಾವೆಲ್ಲರೂ ಎಂದಿನಂತೆ ಭಾಗವಹಿಸಿ. ಪೋಷಕರು ಮತ್ತು ಶಿಕ್ಷಕರು ತಮ್ಮ ಮಕ್ಕಳು ಬರೆಯಲು ಅನುಕೂಲ ಒದಗಿಸಿ ಭಾಗವಹಿಸುವಂತೆ ಉತ್ತೇಜನ ನೀಡಲು ನಮ್ಮ ಕೇಳಿಕೆ. ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************


ಕಳೆದ ಸಂಚಿಕೆಯ ಜಗಲಿಕಟ್ಟೆ - 59 ಅಂಕಣದಲ್ಲಿ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ, ಕವಿತಾ ಶ್ರೀನಿವಾಸ ದೈಪಲ....... ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಕಳೆದ ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....



ಎಲ್ಲರಿಗೂ ನನ್ನ ನಮಸ್ಕಾರ. ಕವಿತಾ ಶ್ರೀನಿವಾಸ ದೈಪಲ ಅವರು ತಿಳಿಸಿಕೊಟ್ಟಿರುವ ವಿಶೇಷ ಹಬ್ಬಗಳ ಪರಿಚಯದ ಲೇಖನ ತುಂಬಾ ಅದ್ಭುತವಾಗಿದೆ... ಕೆಲವರಿಗೆ ಈ ಹಬ್ಬಗಳ ಪರಿಚಯವೇ ಇರುವುದಿಲ್ಲ.. ಈ ಲೇಖನದ ಮೂಲಕ ಸ್ವರೂಪ ಶಿಕ್ಷಣದ ಆರಂಭೋತ್ಸವದ ಕಲಿಕಾ ಹಬ್ಬಗಳನ್ನು ಒಂದೊಂದಾಗಿ ವಿಸ್ತರಿಸಿರುವ ಪರಿ ಅಮೋಘವಾಗಿದೆ.. ಚಿತ್ರಣಗಳನ್ನು ಕಂಡರೆ ನಾವು ಒಮ್ಮೆ ಭೇಟಿ ನೀಡಬೇಕು ಎನ್ನುವ ಆಸೆ ಬಾರದೆ ಇರದು. ಪಾಯಸ ಉಂಡು ಬಾಯಿ ಸಿಹಿ ಮಾಡಿಕೊಳ್ಳುವ ಹಬ್ಬಗಳಷ್ಟೇ ಖುಷಿ, ಓದುವ ಹಬ್ಬ, ಗೀಚುವ ಹಬ್ಬ, ಪುಸ್ತಕ ಹುಡುಕುವ ಹಬ್ಬಗಳಿಂದ ಮನಸ್ಸಿಗೂ ಸಿಹಿ ಉಂಟು ಮಾಡುತ್ತದೆ ಎಂದು ತಮ್ಮ ಲೇಖನದ ಮೂಲಕ ತಿಳಿಸಿದ್ದೀರಿ.. ಧನ್ಯವಾದಗಳು 
...................................... ರಮ್ಯಾ ಆರ್ ಭಟ್
ಸಹ ಶಿಕ್ಷಕಿ. 
ಸರಸ್ವತಿ ವಿದ್ಯಾಲಯ ಸಿದ್ದಾಪುರ
ಕುಂದಾಪುರ, ಉಡುಪಿ ಜಿಲ್ಲೆ
*******************************************



ಶಿಕ್ಷಕರ ಡೈರಿಯಲ್ಲಿ ಪ್ರಕಟವಾದ "ಮಕ್ಕಳಿಂದ ಕಲಿತ ಪಾಠ" ರಮ್ಯಾ ಆರ್ ಭಟ್ ಬರೆದ ಲೇಖನ ತುಂಬಾ ಚೆನ್ನಾಗಿದೆ ಸರ್. ಶಿಕ್ಷಕರಾದವರು ಓದಲೇಬೇಕಾದ ಒಂದು ಲೇಖನ. ಮಕ್ಕಳ ಮನಸ್ಸನ್ನು ಅರಿತರೆ ಮಾತ್ರ ಅವರನ್ನು ಓದಿನ ಕಡೆಗೆ ಸೆಳೆಯಬಹುದು ಎಂಬದಾಗಿ ತುಂಬಾ ಚೆನ್ನಾಗಿ ಹೇಳಿದ್ದಾರೆ ರಮ್ಯಾರವರು..
...................................... ಶ್ವೇತಾ ಹಳದೀಪುರ
ಗಣಿತ ಶಿಕ್ಷಕಿ
ಸ.ಪ. ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ
ಕಾಟಿಪಳ್ಳ 7ನೇ ವಿಭಾಗ
ಮಂಗಳೂರು ಉತ್ತರ ವಲಯ
ದಕ್ಷಿಣ ಕನ್ನಡ ಜಿಲ್ಲೆ
*******************************************
  


 ಬರೀ 'ಪಾಠ' ಮಾತ್ರ ಮಾಡೋದು.... ಮಕ್ಕಳು ಅವರ ಪಾಡಿಗಿರಲಿ ಎಂಬ ಮನಸ್ಥಿತಿ ಇರುವ ಶಿಕ್ಷಕರು ಆದಷ್ಟು ಬೇಗ ಶಿಕ್ಷಕ ವೃತ್ತಿ ಬಿಟ್ಟು ಬೇರೆ ಕೆಲಸಕ್ಕೆ ಹೋದ್ರೆ ಒಂದಷ್ಟು ಮಕ್ಕಳಿಗೆ ಶಾಲೆ, ಶಿಕ್ಷಕರು ಅಂದ್ರೆ ನಿಜವಾದ ಕಲ್ಪನೆ ಬಂದೀತು. ಇಷ್ಟು ತರಬೇತಿ ಕೊಟ್ಟರೂ ಇನ್ನೂ ಮಕ್ಕಳನ್ನು ಅರಿಯಲು, ಮಕ್ಕಳ ಜೊತೆ ಮಾತಾಡುವ ಮನಸ್ಸು ಮಾಡದ ಶಿಕ್ಷಕರು ಇದ್ದಾರೆ ಅಂದರೆ ದುರಂತವೇ ಸರಿ. ಶಿಕ್ಷಕರ ಡೈರಿಯಲ್ಲಿ ಪ್ರಕಟವಾದ "ಮಕ್ಕಳಿಂದ ಕಲಿತ ಪಾಠ" ರಮ್ಯಾ ಆರ್ ಭಟ್ ಬರೆದ ಲೇಖನ ಅವರ ಅಭಿಪ್ರಾಯಕ್ಕೆ ನನ್ನ ಸಹಮತವಿದೆ. 
...................................... ಹಸೀನಾ ಮಲ್ನಾಡ್
ವಿಜ್ಞಾನ ಶಿಕ್ಷಕಿ
ಸರಕಾರಿ ಪ್ರೌಢಶಾಲೆ ಸುರಿಬೈಲು
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
*******************************************



ನಮಸ್ತೇ,
     ತುಂಬಿದಂತೆ ಬದುಕುವುದೇ ಅಪರಿಗ್ರಹ. ಇದ್ದುದರಲ್ಲಿ ತೃಪ್ತಿಪಟ್ಟುಕೊಂಡು ಅನುಭವಿಸಿ ಜೀವನ ಸಾಗಿಸುವಾಗ ನಮ್ಮಲ್ಲಿ ಎಲ್ಲವೂ ಇದೆ ಎನ್ನುವ ಭಾವನೆಯಿಂದ ಬದುಕಿದಾಗ ಜೀವನ ಸುಂದರ. ಪಾತಂಜಲ ಮಹರ್ಷಿಯ ಯಮ - ಅಪರಿಗ್ರಹ ಕುರಿತು ಸೊಗಸಾದ ಲೇಖನ. ಶಿಕ್ಷಣಾಧಿಕಾರಿ ಜ್ಞಾನೇಶ್ ಸರ್ ರವರಿಂದ. ಧನ್ಯವಾದಗಳು ಸರ್.
     ಗುರುಪೂರ್ಣಿಮೆಯ ಕುರಿತಾದ, ಗುರುಗಳ ಮಹತ್ವವನ್ನು ಸಾರುವ ಸುಂದರ ಲೇಖನ ರಮೇಶ್ ಸರ್ ರವರಿಂದ.
     ಐಚ್ಚಿಕ ಸ್ನಾಯುಗಳು, ಅನೈಚ್ಛಿಕ ಸ್ನಾಯುಗಳು ಹಾಗೂ ಹೃದಯದ ಸ್ನಾಯು ಗಳ ಕುರಿತಾಗಿ ವಿವರಣಾತ್ಮಕ ಲೇಖನದ ಮೂಲಕ ಹೃದಯದ ನಿರಂತರ ದಣಿವರಿಯದ ಕೆಲಸಕ್ಕೆ ಕಾರಣವನ್ನು ದಿವಾಕರ ಸರ್ ರವರು ಸೊಗಸಾಗಿ ತಿಳಿಸಿದ್ದಾರೆ.
     ಕೇಪಳ ಹೂವಿನ ಗಿಡದ ಕುರಿತಾಗಿ ವಿವರಣಾತ್ಮಕ ಮಾಹಿತಿ ವಿಜಯಾ ಮೇಡಂ ರವರ ಈ ಸಲದ ಸಂಚಿಕೆಯಲ್ಲಿ.
     'ಯಾಣ' ಕುರಿತಾದ ಪೌರಾಣಿಕ ಹಾಗೂ ಐತಿಹಾಸಿಕ ಮಾಹಿತಿ ಸುಂದರ ಛಾಯಾಚಿತ್ರಗಳೊಂದಿಗೆ ಈ ಸಲ ರಮೇಶ್ ಉಪ್ಪುಂದರವರಿಂದ ಸೊಗಸಾಗಿ ಮೂಡಿ ಬಂದಿದೆ.
      ಸ್ವರೂಪ ಶಿಕ್ಷಣ ಸಂಸ್ಥೆಯ ಕಲಿಕಾ ಹಬ್ಬದ ಕುರಿತಾದ ಅನುಭವ ಲೇಖನ ಕವಿತಾ ಶ್ರೀನಿವಾಸ್ ರವರಿಂದ ಬಹಳ ಸೊಗಸಾಗಿ ಮೂಡಿಬಂದಿದೆ.
      ಈ ಸಲದ ಆರ್ಟ್ ಗ್ಯಾಲರಿಯಲ್ಲಿ ಎಸ್. ಕೆ. ಪತ್ತಾರ್ ರವರ ಕುರಿತಾದ ಪರಿಚಯದ ಜೊತೆಗೆ ಅವರ ಸುಂದರ ಕಲಾಕೃತಿಗಳನ್ನು ನೋಡುವಂತಾಯಿತು.
      'ಪಪ್ಲೂ ತಲೆಯಲ್ಲಿ ನೂರು ಪ್ರಶ್ನೆಗಳು' ಪುಸ್ತಕದ ಪರಿಚಯ ಸೊಗಸಾಗಿತ್ತು. ಧನ್ಯವಾದಗಳು ಮೇಡಂ.
     ರಮೇಶ್ ಉಪ್ಪುಂದರವರ ಪದದಂಗಳ ಸಂಚಿಕೆ ಕುತೂಹಲಕರವಾಗಿದ್ದು ಪದಗಳ ಜೋಡಿಸುವಿಕೆಗೆ ಕಾರಣವಾಗುತ್ತಿದೆ. ಧನ್ಯವಾದಗಳು ಸರ್.
      ಮಕ್ಕಳಿಂದ ಕಲಿತ ಪಾಠ - ರಮ್ಯಾ ಮೇಡಂರವರು ತಮ್ಮ ಅನುಭವವನ್ನು ಸೊಗಸಾಗಿ ಶಿಕ್ಷಕರ ಡೈರಿ ಸಂಚಿಕೆಯಲ್ಲಿ ಹಂಚಿಕೊಂಡಿದ್ದಾರೆ.
      ಈ ವಾರದ ಜಗಲಿಯಲ್ಲಿ ಬಹಳಷ್ಟು ಮಕ್ಕಳು ತೊಡಗಿಸಿಕೊಂಡದ್ದು ತುಂಬಾ ಖುಷಿಯಾಯಿತು. ಮಕ್ಕಳ 2 ಚಿತ್ರ ಸಂಚಿಕೆಗಳಲ್ಲಿ ಚಿತ್ರಗಳು ತುಂಬಾ ಸೊಗಸಾಗಿ ಮೂಡಿಬಂದಿವೆ. 'ಮಳೆ ಪಜೀತಿ' ಕುರಿತಾಗಿ ಬಹಳಷ್ಟು ಮಕ್ಕಳು ಕವನಗಳಲ್ಲಿ ಹಾಗೂ ಲೇಖನಗಳಲ್ಲಿ ತಮ್ಮ ಅನುಭವವನ್ನು ಸುಂದರವಾಗಿ ಹಂಚಿಕೊಂಡಿದ್ದಾರೆ. ಈ ವಾರದ ಜಗಲಿಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ನನ್ನ ವೈಯಕ್ತಿಕ ಅಭಿನಂದನೆಗಳು. 
      ಕೊನೆಯದಾಗಿ ಜಗಲಿಯ ಎಲ್ಲರಿಗೂ ನನ್ನ ನಮನಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************


ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು, ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ, ರಮ್ಯಾ ಆರ್ ಭಟ್, ಸಹ ಶಿಕ್ಷಕಿ, ಹಸೀನಾ ಮಲ್ನಾಡ್ ವಿಜ್ಞಾನ ಶಿಕ್ಷಕಿ , ಶ್ವೇತಾ ಹಳದೀಪುರ ಗಣಿತ ಶಿಕ್ಷಕಿ ಇವರಿಗೆ ಧನ್ಯವಾದಗಳು. 
       ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************

 








Ads on article

Advertise in articles 1

advertising articles 2

Advertise under the article