-->
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 55

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 55

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 55
ಲೇಖಕರು : ಹಸೀನ ಮಲ್ನಾಡ್
ವಿಜ್ಞಾನ ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ ಸುರಿಬೈಲು (RMSA)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
      

        "ಈ ತಟ್ಟೆಯನ್ನು ಹೀಗೆ ಮುದ್ದೆ ಮಾಡಿದವರು ಯಾರು? ನಿಮ್ಮಲ್ಲೇ ಯಾರಾದ್ರೂ ಒಬ್ಬರು ಆಗಿರಲೇಬೇಕು. ಬೇಗ ಹೇಳಿ. ನಿಮ್ಮ ತಪ್ಪನ್ನು ಒಪ್ಪಿಕೊಳ್ಳಿ. ಊಟ ಮಾಡುವ ತಟ್ಟೆ ಇದು. ನಿಮ್ಮ ಈ ಕೆಲಸವನ್ನು ದೇವರೂ ಮೆಚ್ಚುವುದಿಲ್ಲ. ಆದರೂ ನೀವು ಮಾಡಿದ ತಪ್ಪು ಒಪ್ಪಿಕೊಳ್ಳಲು ಇದೊಂದು ಅವಕಾಶ ಮಕ್ಕಳೇ. ಬೇಗ ಹೇಳಿ ಯಾರು ಈ ಕೆಲಸ ಮಾಡಿದ್ದು?."
ಬೆಳಗಿನ ಅಸೆಂಬ್ಲಿಯಲ್ಲಿ ಮಡಚಿಕೊಂಡಿದ್ದ ಸ್ಟೀಲ್ ತಟ್ಟೆಯನ್ನು ಹಿಡಿದುಕೊಂಡು ಅದರ ಸ್ಥಿತಿಗೆ ಕಾರಣರಾದವರನ್ನು ಹುಡುಕುವ ವ್ಯರ್ಥ ಪ್ರಯತ್ನದಲ್ಲಿ ನಾವಿದ್ದೆವು. ಆದರೇನು? ನಾವು ಕಾದದ್ದೇ ಬಂತು. ವಿದ್ಯಾರ್ಥಿಗಳು 'ಮೌನ ಮಾತ್ರ ನಮ್ಮ ಉತ್ತರ' ಎಂಬಂತೆ ಸುಮ್ಮನೆ ನಿಂತಿದ್ದರು. 

"ಇಂತಹ ತಪ್ಪು ಮಾಡಿ ಶಿಕ್ಷಕರ ಕಣ್ಣು ತಪ್ಪಿಸಬಹುದೇ ಹೊರತು ದೇವರ ಕಣ್ಣು ತಪ್ಪಿಸಲು ಸಾಧ್ಯವಿಲ್ಲ. ಈ ಕೆಲಸ ಮಾಡಿದವರು ಯಾರೇ ಆಗಿದ್ದರೂ ಇಂದು ಸಂಜೆಯೊಳಗೆ ಬಂದು ತಿಳಿಸಿ" ಎಂಬ ಕೊನೆಯ ಮಾತನ್ನು ಹೇಳಿ ಅಂದಿನ ಅಸೆಂಬ್ಲಿಯನ್ನು ವಿಸರ್ಜಿಸಲಾಯಿತು. 

ಸಂಜೆಯೂ ಆಯಿತು. ದಿನವೂ ಕಳೆಯಿತು. ಮಕ್ಕಳು ವಿಷಯ ಮರೆತರು ಅಷ್ಟೇ. ಆದರೆ ನನಗೆ ಈ ದುಷ್ಕೃತ್ಯ ಮಾಡಿದವರನ್ನು ಕಂಡು ಹಿಡಿಯದೆ ಸಮಾಧಾನವೇ ಇರಲಿಲ್ಲ. ಆದರೂ ಮಕ್ಕಳ ಬಾಯಿಂದ ಸತ್ಯ ಹೊರತರಿಸುವ ಕೆಲಸದಷ್ಟು ಜಟಿಲ ಕೆಲಸ ಬೇರೆ ಯಾವುದೂ ಇಲ್ಲ ಎಂಬುದು 1098 ಕಾಲದ ಶಿಕ್ಷಕರಾದ ನಾವು ಒಪ್ಪಿಕೊಳ್ಳಬೇಕಾದ ಸತ್ಯವಾಗಿತ್ತು.

''ಅಪರಾಧಿ ನಾನಲ್ಲ' ಎಂಬ ಸೋಗು ಹಾಕಿಕೊಂಡ ವಿದ್ಯಾರ್ಥಿಗಳನ್ನು ಕಂಡಾಗ ಕೆಲವರ ಬಗ್ಗೆ ಅನುಮಾನ ಇದ್ದರೂ "ನೀನೇನಾ ಈ ಕೆಲಸ ಮಾಡಿದ್ದು?" ಎಂದು ಕೇಳುವ ಧೈರ್ಯ ನನಗಂತೂ ಇರಲಿಲ್ಲ. 'ತಲ್ಲಣಿಸದಿರು ಮನವೇ' ಎಂದು ನನ್ನನ್ನೇ ನಾನು ಸಮಾಧಾನಿಸುತ್ತಾ ಆ ವಿಷಯವನ್ನು ಅಲ್ಲಿಗೇ ಬಿಡದೆ ತರಗತಿಯಲ್ಲಿ ವಿದ್ಯಾರ್ಥಿಗಳ ಎದುರು ಸಮಯ ಸಿಕ್ಕಾಗಲೆಲ್ಲ ಪ್ರಸ್ತಾಪಿಸುತ್ತಲೇ ಇದ್ದೆ. 

ಬಹುಷಃ ತಪ್ಪು ಮಾಡಿದವನ ಮನಸ್ಸಿಗೆ ಇದು ನಾಟಿರಬೇಕು. ಅದೊಂದು ದಿನ ನಾವು ಸ್ಟಾಫ್ ರೂಮಲ್ಲಿ ಕುಳಿತಿರುವಾಗ ಒಬ್ಬ ಹುಡುಗ ಬಂದು ಏನೋ ಬರೆದು ಮಡಚಿದ ಕಾಗದ ತಂದುಕೊಟ್ಟು, ಅದು ಬರೆದವನ ಹೆಸರು ಹೇಳಿದ. ನಾನು ಅವನನ್ನು ಕಳಿಸಿ ಆ ಕಾಗದ ಬಿಡಿಸಿ ಓದಿದೆ. "ನನ್ನನ್ನು ಕ್ಷಮಿಸಿ ಟೀಚರ್. ಆ ತಟ್ಟೆಯನ್ನು ಜಜ್ಜಿದವನು ನಾನೇ. ಅದು ಯಾರೂ ಬಳಸದೆ ಇದ್ದ ತಟ್ಟೆ. ನಾವು ಅದರಲ್ಲಿ ಆಡುವಾಗ ಹೀಗಾಯಿತು. ನನಗೆ ಆ ದಿನ ನಿಮ್ಮಲ್ಲಿ ಹೇಳಲು ಆಗಲಿಲ್ಲ. ಇನ್ನು ಮುಂದೆ ಹೀಗೆ ಮಾಡುವುದಿಲ್ಲ. ನನ್ನನ್ನು ಕ್ಷಮಿಸಿ" ಎಂದು ಅವನು ಈ ಹಿಂದೆ ಮಾಡಿದ್ದ ಇನ್ನೂ ಕೆಲವು ಸಣ್ಣ ಪುಟ್ಟ ತಪ್ಪುಗಳನ್ನು ಅದರಲ್ಲಿ ಸೇರಿಸಿ ದೀರ್ಘವಾದ ತಪ್ಪೊಪ್ಪಿಗೆ ಪತ್ರವನ್ನು ಬರೆದಿದ್ದ. 

ಆ ಪತ್ರ ಓದಿ ಅಚ್ಚರಿಯಾಗಿದ್ದಕ್ಕಿಂತ ಹೆಚ್ಚು ಅವನ ಹೆಸರು ನೋಡಿ ನಮಗೆ ಅಚ್ಚರಿಯಾಗಿತ್ತು. ಅವನು ನಮ್ಮ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಯೂ ಮತ್ತು ಉತ್ತಮ ಕ್ರೀಡಾಪಟುವೂ ಆಗಿದ್ದ . "ಏ ಇವನಾ! ಆ ಕೆಲಸ ಮಾಡಿದ್ದು" ಎಂಬುದು ನಮ್ಮೆಲ್ಲರ ಉದ್ಗಾರ ಆಗಿತ್ತು. ಅವನನ್ನು ಕರೆದು ಅವನ ತಪ್ಪು ಒಪ್ಪಿಕೊಂಡಿರುವುದಕ್ಕೆ ಬೆನ್ನು ತಟ್ಟಿ ಮುಂದೆ ಇಂತಹ ತಪ್ಪುಗಳು ಆಗದಂತೆ ಎಚ್ಚರ ವಹಿಸಲು ಸೂಚಿಸಲಾಯಿತು. 
......................................... ಹಸೀನ ಮಲ್ನಾಡ್
ವಿಜ್ಞಾನ ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ ಸುರಿಬೈಲು (RMSA)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob: +91 74114 71248
*******************************************


Ads on article

Advertise in articles 1

advertising articles 2

Advertise under the article