-->
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 54

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 54

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 54
ಲೇಖಕರು : ಗೋಪಾಲಕೃಷ್ಣ ಕೆ.
ವಿಶೇಷ (ನಾಟಕ) ಶಿಕ್ಷಕರು 
ಕರ್ನಾಟಕ ಪಬ್ಲಿಕ್ ಸ್ಕೂಲ್
(ಪ್ರೌಢಶಾಲಾ ವಿಭಾಗ) 
ರಾವಂದೂರು , ಮೈಸೂರು ಜಿಲ್ಲೆ.
Mob: +91 94487 01944
      
        
ಮಕ್ಕಳ ನಿಸರ್ಗದತ್ತವಾದ ಬೆಳವಣಿಗೆಯಲ್ಲಿ ಪ್ರಕೃತಿಯ ಅನೇಕ ವಿಚಿತ್ರ ಮತ್ತು ವಿಭಿನ್ನ ವಿದ್ಯಾಮಾನಗಳು ಪರಿಣಾಮ ಬೀರಿರುವುದನ್ನು, ತಮ್ಮ ಕಲಿಕಾವಧಿಯ ಅನೇಕ ಸಂದರ್ಭಗಳಲ್ಲಿ ಅಭಿವ್ಯಕ್ತಗೊಳಿಸುತ್ತಾರೆ. ಅವರು ಪ್ರಕೃತಿಯೊಂದಿಗೆ ತಮ್ಮ ಅಸ್ತಿತ್ವದ ಮೌಲ್ಯವನ್ನು ನೈಜವಾಗಿ ಗುರುತಿಸುತ್ತಾರೆ. ಹರ್ಷನ್ ನ ಜೀವನವು ಈ ರೀತಿಯಲ್ಲಿ ಸಾಗಿ ಬಂದಿತ್ತು.! ಹರ್ಷನ್ ಆಗ 8ನೆಯ ತರಗತಿ. 

    ಹೌದು. ಆ ದಿನ ನಾನು ಶಾಲೆಯನ್ನು ತಲುಪ್ಪುತ್ತಿದ್ದಂತೆ, ಹರ್ಷನ್ ನು ಶಾಲೆಯ ವಿಶಾಲವಾದ ಜಗಲಿಯ ಮೂಲೆಯಲ್ಲಿ ಅಳುತ್ತಾ ಕುಳಿತಿರುವುದನ್ನು ಗಮನಿಸಿದೆ. ನನ್ನನ್ನು ನೋಡುತ್ತಲೇ ನನ್ನೆಡೆಗೆ ಧಾವಿಸಿ ಬಂದು ಇನ್ನೂ ಜೋರಾಗಿ ಅಳುವುದನ್ನು ಮುಂದುವರಿಸಿದನು. 
  "ಯಾಕೆ ಅಳುತ್ತಿದ್ದೀಯಪ್ಪಾ.. ಹರ್ಷನ್ . ಹರ್ಷನ್ " ಎಂದು ಕೇಳಿದೆ.  

ಆದರೆ ಅವನು ಏನೂ ಉತ್ತರಿಸಲಿಲ್ಲ. ನನ್ನನ್ನು ನೇರವಾಗಿ ಅಲ್ಲಿಂದ ಶಾಲಾ ಅಂಗಳಕ್ಕೆ ಕರೆದುಕೊಂಡು ಬಂದು, "ಅಲ್ನೋಡಿ ಸರ್, ನಿಮಗೇನಾದ್ರೂ ಧ್ವನಿ ಕೇಳಿಸುತ್ತಿದೆಯಾ? ಎಂದು ಬೇಸರದಿಂದಲೇ ಪ್ರಶ್ನಿಸಿಸಿದನು. 

ಅಲ್ಲೇ ಎದುರಿಗೆ ಇರುವ ರಸ್ತೆಯ ಬದಿಯಲ್ಲಿ ಧ್ವನಿ ಕೇಳಿಸುತ್ತಿತ್ತು. ಧ್ವನಿ ಕೇಳಿಸುವ ಕಡೆಗೆ ಹೋದೆವು.

ಎರಡು ನಾಯಿ ಮರಿಗಳು ಅಳುತ್ತಿದ್ದವು. ಅವುಗಳು ಎರಡು ದಿನಗಳ ಹಿಂದೆ ಯಾರೋ ಶಾಲೆಯ ಬಳಿ ಬಿಟ್ಟು ಹೋಗಿದ್ದರು. ಇನ್ನೂ ನಡೆಯಲು ಆರಂಭಿಸಿರದ ಆ ಮರಿಗಳು, ತ್ರಾಣ ಮತ್ತು ಶಕ್ತಿಯನ್ನು ಕಳೆದುಕೊಂಡಿದ್ದವು. ಹಾಗಿದ್ದರೂ ಎರಡು ದಿನಗಳಲ್ಲಿ ಆಹಾರ ಸಿಗದೆ ಅವುಗಳ ದೇಹ ಕೃಶವಾಗಬೇಕಿತ್ತು. ಆದರೆ ಹಾಗಾಗಿರಲಿಲ್ಲ.! ಹರ್ಷನ್ ನು ಅವುಗಳಿಗೆ ಹಿಂದಿನ ದಿನಗಳಲ್ಲಿ ಆಹಾರ ನೀಡಿದ್ದನು.! (ಈ ರೀತಿಯಲ್ಲಿ ನಾಯಿಮರಿ ಬೆಕ್ಕಿನಮರಿಗಳನ್ನು ರಸ್ತೆ ಬದಿಯಲ್ಲಿ ತಂದು ಬಿಡುವುದರಿಂದ ಅವುಗಳಿಗೆ ಆಹಾರ ಸಿಗದೆ ತಮ್ಮ ಜೀವನವನ್ನು ಅಲ್ಲೇ ಅಂತ್ಯಗೊಳಿಸಿದ ಅನೇಕ ಸನ್ನಿವೇಶಗಳನ್ನು ಗಮನಿಸಿದ್ದನು ಮತ್ತು ಆತಂಕ ಹೊಂದಿದ್ದನು!)
ಅವುಗಳನ್ನು ನೋಡುವುದೇ ತಡ ಆತನ ಅಳು ನಿಂತು ಹೋಯ್ತು. 

                   * * * * * *
ಈ ದಿನ ಹರ್ಷನ್ ನು ಶಾಲೆಗೆ ಬೇಗನೆ ಬಂದು ಶಾಲೆಯ ಆವರಣದ ಒಂದು ಮೂಲೆಯಲ್ಲಿ ಆ ಪುಟ್ಟ ನಾಯಿ ಮರಿಗಳಿಗೆ ಸಣ್ಣದಾದ ಒಂದು ಗೂಡು ರಚಿಸಿದ್ದನು. ನೀರು ಮತ್ತು ಬಿಸ್ಕತ್ ಕೂಡ ಜತೆಗಿರಿಸಿದ್ದನು. ಅದನ್ನು ಗಮನಿಸಿದ ಯಾರೋ ಒಬ್ಬರು (ತುಂಬಾ ಶಿಕ್ಷಣ ಪಡೆದವರು!!) ಅವನಿಗೆ ಗದರಿಸಿದ್ದರು.! ಆದರೂ ಅವರ ಮಾತಿಗೆ ಕಿವಿಗೊಡದೆ ನಾಯಿಮರಿಗಳಿಗೆ ಗೂಡು ನಿರ್ಮಿಸುವುದನ್ನು ಮುಂದುವರಿಸಿದ್ದನು. ಅವರ ಜತೆ ವಾಸ್ತವವನ್ನು ತಿಳಿಸಿದರೂ ಅವರು ಅರ್ಥಮಾಡಿಕೊಳ್ಳಲಿಲ್ಲ! ಅವನಿಗೆ ಅದೊಂದು ಮುಕ್ತ ಮನಸ್ಸಿನ ಕಲಿಕಾ ಚಟುವಟಿಕೆ! ಅದೊಂದು ಜವಾಬ್ದಾರಿಯುತ ನಡೆಯೂ ಆಗಿತ್ತು. 

"ಇಂತಹ ಕೆಲಸ ನೀನು ಮಾಡುವುದಲ್ಲ.. ಅವುಗಳು ಎಲ್ಲಾದರೂ ಬದುಕಿ ಕೊಳ್ಳುತ್ತವೆ. ಯೋಚಿಸು.. ನಿನ್ನ ಮನೆಯೇನು? ಮನೆತನವೇನು? ಯಾರಾದರೂ ನೋಡಿದರೆ. ಛೆ.. ಹೋಗು.. ತರಗತಿಗೆ.. ಅವುಗಳನ್ನು ಸಾಕಲು ಬೇರೆ ಜನರಿದ್ದಾರೆ" ಎನ್ನುತ್ತಾ ಆ ದಾರಿಯಲ್ಲಿ ಬಂದ ಒಬ್ಬರ ಸಹಾಯದಿಂದ ನಾಯಿಮರಿಗಳನ್ನು ರಸ್ತೆಯಿಂದಾಚೆ ಕಳುಹಿಸಿಯೇ ಬಿಟ್ಟರು. 

".. ಬೇಡ. ಬೇಡ . ದಯವಿಟ್ಟು.. ಅವುಗಳು ಅಲ್ಲಿದ್ದರೆ.. ಓಡಾಡುವ ವಾಹನಗಳಿಗೆ...." ಎನ್ನುತ್ತಾ ಜೋರಾಗಿ ಅಳುತ್ತಾ, ಅವುಗಳನ್ನೇ ನೋಡುತ್ತಾ ಶಾಲೆಯ ಕಡೆಗೆ ತೆರಳಿದನು. ರಸ್ತೆಯಲ್ಲಿ ಬಿಡುವಿಲ್ಲದೇ ಓಡಾಡುವ ವಾಹನಗಳು. ನಾಯಿಮರಿಗಳು, ಇನ್ನೂ ಶಕ್ತಿಯಿಲ್ಲ.. ತಂದಿರುವ ಆಹಾರವನ್ನು ಸರಿಯಾಗಿ ತಿನ್ನುತ್ತಿರುವ ಸಂದರ್ಭದಲ್ಲೇ ಆ ಮರಿಗಳನ್ನು ಕಳುಹಿಸಿಬಿಟ್ಟರಲ್ವಾ.. ಅವರೆಂಥಾ ಮನುಷ್ಯರಿರಬೇಕು? ಎಂದು ಅಳುತ್ತಾ ಕುಳಿತಿದ್ದಾಗಲೇ ನಾನು ಅವನನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದ್ದು!

 ಹರ್ಷನ್ ತುಂಬಾ ಸಂವೇದನಾಶೀಲಾ ವಿದ್ಯಾರ್ಥಿ. ಅವನಿಗೆ ಪ್ರಾಣಿ ಪಕ್ಷಿಗಳೆಂದರೆ ಅಷ್ಟೇ ಪ್ರೀತಿ. ಅವುಗಳಿಗೆ ನೀರು ಆಹಾರ ಒದಗಿಸುವುದು ಅವನ ಮಹತ್ವದ ಹವ್ಯಾಸವಾಗಿತ್ತು. 
 
ಶಾಲೆಯ ಬಳಿ ಯಾರೋ ಬಿಟ್ಟಿರುವ ಈ ನಾಯಿಮರಿಗಳನ್ನು ಅವನು ಗಮನಿಸಿದ ತಕ್ಷಣ ಅವುಗಳಿಗೆ ನೀರು ಆಹಾರ ನೀಡಿದ್ದಾನೆ. ಹಿಂದಿನ ದಿನ ಸಾಯಂಕಾಲ ಮನೆಗೆ ಹೋದವನು ಪುನ: ಬಂದು ಅವುಗಳಿಗೆ ಆಹಾರ ನೀಡಿ, ರಕ್ಷಣೆಯ ವ್ಯವಸ್ಥೆ ಮಾಡಿದ್ದನು. ಅವುಗಳೂ ಜೀವಿಗಳಲ್ಲವೇ? ಅವುಗಳಿಗೂ ನಮ್ಮಂತಯೇ ಬದುಕುವ ಹಕ್ಕುಗಳು ಇದೆಯಲ್ಲವೇ.. ಎನ್ನುವ ಚಿಂತೆಯಿಂದ ಮರುದಿನ ಅವುಗಳನ್ನು ನೋಡಲು ಬೆಳಗ್ಗೆ ಬೇಗನೇ ಬಂದಿದ್ದನು. 

ಆ ನಾಯಿಮರಿಗಳನ್ನು ಕಂಡ ಕೂಡಲೇ 
ಅವುಗಳ ಬದುಕಿನ ಬಗ್ಗೆ ಅನೇಕ ಸಲ ಚರ್ಚೆ ಮಾಡಿದ್ದಾನೆ. ಪರಿಸರದೊಂದಿಗೆ ಅವುಗಳ ಬದುಕು ಮತ್ತು ಮನುಷ್ಯನ ಉಪಟಳಗಳನ್ನು ಸರಿಯಾಗಿಯೇ ಅರ್ಥಮಾಡಿಕೊಂಡಿದ್ದನು. ತರಗತಿಯಲ್ಲಿ ನಾಟಕ ಆಡುವ ಸಂದರ್ಭಗಳಲ್ಲಿ ಅವನಿಗಾಗಿ ಪ್ರಾಣಿ ಪಕ್ಷಿಗಳ ಪಾತ್ರಗಳನ್ನು ಸೃಷ್ಟಿ ಮಾಡಲಾಗಿತ್ತು. 

ಈ ಘಟನೆಯಿಂದ ಹರ್ಷನ್ ಹೊರಬರಲು ಸಾಧ್ಯವೇ ಇಲ್ಲದುದರಿಂದ ಅವನಿಗೆ ಕೆಲವು ಸಹಜ ಪ್ರಶ್ನೆಗಳು ಹುಟ್ಟಿದುವು.. 

ಇಷ್ಟೇ....
ಜೀವ ಸಂಕುಲಗಳನ್ನು ನಾವು ರಕ್ಷಿಸದೆ ಇನ್ಯಾರು ರಕ್ಷಿಸುವರು? 

ಪ್ರಾಣಿಗಳು ಇದ್ದರೆ ಮಾತ್ರ ಮನುಷ್ಯರ ಬದುಕು. ಅದಕ್ಕಾಗಿ ಅವುಗಳಿಗೂ ಬದುಕಲು ಅವಕಾಶ ನೀಡಬೇಕಲ್ಲವೇ? 

ಒಂದು ವೇಳೆ ಪ್ರಾಣಿಗಳಿಗೆ ಮಾತು ಬರುತ್ತಿದ್ದರೆ ತಮ್ಮ ಸಮಸ್ಯೆಗಳನ್ನು, ನಮ್ಮಲ್ಲಿ ತಿಳಿಸುತ್ತಿದ್ದವೇ?

ಮನುಷ್ಯರಾಗಿ ನಾವು ಅವುಗಳ ಭಾವನೆಗಳಿಗೆ ಸಂವೇದಾನಶೀಲರಾಗಿರಬೇಕಾದುದು ನಮ್ಮ ಕರ್ತವ್ಯವಲ್ಲವೇ?

ಪದವಿಗಳು ಮನುಷ್ಯತ್ವವನ್ನು ನೀಡಲಾರವು! 

ಮಾನವೀಯತೆ ಮೆರೆಯಲು ನಮ್ಮ ಮನೆತನ, ಅಂತಸ್ತು, ಐಶ್ವರ್ಯಗಳು ಹೇಗೆ 
ತೊಡಕಾಗುತ್ತವೆ? 

ಪುಸ್ತಕಗಳು ಸಮಾಜವನ್ನು ಅರ್ಥ ಮಾಡಿಕೊಳ್ಳಲು ಕೆಲವು ವಿಷಯಗಳನ್ನು ಪ್ರಸ್ತಾಪಿಸುತ್ತಲೇ ಇರಬಹುದು. ಆದರೆ ಪ್ರಕೃತಿ ಮನುಷ್ಯರ ಮನುಷ್ಯತ್ವ ವನ್ನು ಸಾಬೀತುಪಡಿಸಲು ಅನೇಕ ಸನ್ನಿವೇಶಗಳನ್ನು ಪ್ರಕಟಿಸುತ್ತಲೇ ಇರುತ್ತದೆ. 

    ಪುಸ್ತಕದ ಪ್ರಕಟಿತ ವಿಷಯವು ಬಹುಮಟ್ಟಿಗೆ ನಿಸರ್ಗದ ಗಮನೀಕರಣದ ಕಲಿಕೆಯು ಆತ್ಮವಿಶ್ವಾಸಕ್ಕೆ ಸನಿಹವಾಗಿರಬೇಕಲ್ವೆ? 
ಮಕ್ಕಳಲ್ಲಿ ಕಲಿಕೆಯ ಕುತೂಹಲ, ಯೋಚನಾ ಶಕ್ತಿ, ತರ್ಕಬದ್ಧ ಆಲೋಚನಾ ಕ್ರಮಗಳಿಗೆ ಜ್ಞಾನಾಧಾರಿತ ಸಮಾಜ ಅಥವಾ ಶಿಕ್ಷಣ ವ್ಯವಸ್ಥೆಯು ಮನ್ನಣೆ ನೀಡಲೆಂದು ಮೌಲ್ಯ ಮಾಪನ ಕ್ರಮಗಳಿವೆ. ಮಕ್ಕಳ ಇಂತಹ ಸೃಜನಾತ್ಮಕ ಮತ್ತು ಮೌಲ್ಯಯುಕ್ತ ಕಲಿಕೆ ಮತ್ತು ಬೋಧನಾ ಚಟುವಟಿಕೆಗಳು ಹೆಚ್ಚು ಪರಿಣಾಮ ಬೀರುವುದು ಮತ್ತು ಇತರರಿಗೂ ಸ್ಫೂರ್ತಿಯಾಗುವುದು ಅವುಗಳು ಉನ್ನತ ರೀತಿಯಲ್ಲಿ ಮೌಲ್ಯಮಾಪಾನವಾದಾಗ ಮಾತ್ರ! 

    ನಾನು ಸರಕಾರಿ ಪ್ರೌಢಶಾಲೆ, ಅದ್ಯಪಾಡಿ, ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಈ ಘಟನೆಯು ನಡೆದಿತ್ತು. ಈ ನೈಜ ಘಟನೆಯು ತರಗತಿಯಲ್ಲಿ ವಿಶೇಷವಾಗಿ ಚರ್ಚಿಸಲ್ಪಟ್ಟಿತು. ಮನುಷ್ಯ ಮತ್ತು ಪ್ರಕೃತಿಯ ಸಂಬಂಧಗಳು ರಚನಾತ್ಮಕ ಭರವಸೆಯ ಬದುಕಾಗಬೇಕು. ಈ ವೈಚಾರಿಕ ಮತ್ತು ವೈಜ್ಞಾನಿಕ ಪ್ರಜ್ಞೆಯ ಸನ್ನಿವೇಶವು ಶಾಲೆಯ ಸರ್ವರಿಗೂ ಮಾನವೀಯತೆಯ ಪಠ್ಯವೊಂದನ್ನು ತೆರೆದಿಟ್ಟಿತು. 
...................................... ಗೋಪಾಲಕೃಷ್ಣ ಕೆ.
ವಿಶೇಷ (ನಾಟಕ) ಶಿಕ್ಷಕರು 
ಕರ್ನಾಟಕ ಪಬ್ಲಿಕ್ ಸ್ಕೂಲ್
(ಪ್ರೌಢಶಾಲಾ ವಿಭಾಗ) 
ರಾವಂದೂರು , ಮೈಸೂರು ಜಿಲ್ಲೆ.
Mob: +91 94487 01944
*******************************************


Ads on article

Advertise in articles 1

advertising articles 2

Advertise under the article